ADVERTISEMENT

ಕಥೆ: ನಿನಗಾಗಿಯೇ ಕಾಯುತ್ತಿದ್ದೆ, ಅಂಬಾ...

ಜ್ಯೋತಿ
Published 26 ಡಿಸೆಂಬರ್ 2021, 1:33 IST
Last Updated 26 ಡಿಸೆಂಬರ್ 2021, 1:33 IST
ಕಲೆ: ಎಂ.ಎಸ್‌.ಶ್ರೀಕಂಠಮೂರ್ತಿ
ಕಲೆ: ಎಂ.ಎಸ್‌.ಶ್ರೀಕಂಠಮೂರ್ತಿ   

‘ಏನು ವಿಷಯ, ನನಗೆ ಬರಲು ಹೇಳಿ ಕಳುಹಿಸಿದಿಯಂತೆ. ಶರಶಯನನಾಗಿ ಪ್ರತಿ ಕ್ಷಣವು ನೋವು ಅನುಭವಿಸುತ್ತಿರುವಾಗ, ಮರೆಯಲು ಮಾತಿನ ಸಾಂಗತ್ಯ ಬೇಕೆನಿಸುತ್ತಿದೆಯೇ? ಆದರೆ, ನಿನಗೆ ಈಗ ನನ್ನಲ್ಲಿ ಮಾತನಾಡಲು ಏನು ಉಳಿದಿದೆ? ನೀನು ಇಷ್ಟು ವರ್ಷ ಬಹಳ ಮುತುವರ್ಜಿಯಿಂದ ಸಲಹಿದ ಕುರುವಂಶದ ಸುಪುತ್ರರನ್ನು ಕರೆಸಿಕೊಂಡು ಸಮಯ ಕಳೆಯುವುದು ಉತ್ತಮವಲ್ಲವೇ? ಬಹಳ ಹಿಂದೆ, ನನಗೆ ನಿನ್ನಲ್ಲಿ ಮಾತನಾಡಲು ಸಾಕಷ್ಟು ವಿಷಯವಿತ್ತು, ಕೇಳಲು ಹಲವಾರು ಪ್ರಶ್ನೆಗಳು ಇದ್ದವು. ಆದರೆ, ನಿನಗೆ ನನ್ನ ನೋವು ಅರ್ಥವಾಗಿರಲಿಲ್ಲ. ಕೇಳಿಸಿಕೊಳ್ಳುವ ವ್ಯವಧಾನವೂ ಇರಲಿಲ್ಲ. ಬಿರುಗಾಳಿಯಂತೆ ನೀನು ನನ್ನ ಬದುಕಲ್ಲಿ ಬಂದು, ಒಂದೇ ಕ್ಷಣದಲ್ಲಿ ನನ್ನ ಭವಿಷ್ಯದ ಜೀವನವೆಲ್ಲಾ ಧೂಳಿಪಟ ಮಾಡಿಬಿಟ್ಟೆ. ನಾನು ಯಾವ ಉದ್ದೇಶ ಸಾಧಿಸಲು ಮರುಜನ್ಮ ಪಡೆದೆನೋ, ಅದನ್ನು ಈಗ ಸಾಧಿಸಿದ್ದೇನೆ. ಇನ್ನು ನಾನು ನಿರಾಳವಾಗಿ ಪ್ರಾಣ ಬಿಡುವುದಷ್ಟೇ ಬಾಕಿಯಿದೆ.‌’

ಶರಮಂಚದ ಮೇಲೆ ಮಲಗಿದ್ದ ಭೀಷ್ಮ, ಶಿಖಂಡಿಯತ್ತ ಒಮ್ಮೆ ಕಣ್ಣು ಹಾಯಿಸಿ ವಿಷಾದದಿಂದ ನಕ್ಕ. ಏನೋ ಹೇಳಬೇಕೆಂದುಕೊಂಡು ಬಾಯಿ ತೆರೆದವನು, ಹಾಗೆಯೇ ಉಗುಳು ನುಂಗಿಕೊಂಡು ಮೌನವಾದ. ಶಿಖಂಡಿ ಮುಂದುವರಿಸಿದ.

‘ಆದರೂ ಒಂದು ಮಾತು. ವಿಚಿತ್ರವೆಂದರೆ, ಈಗ ನನಗೆ, ನಿನ್ನ ಮೇಲಿದ್ದ ಜನುಮಗಳ ದ್ವೇಷವೆಲ್ಲಾ ಕರಗಿ ಹೋಗುತ್ತಿರುವಂತೆ ಭಾಸವಾಗುತ್ತಿದೆ. ನಿನ್ನ ಈ ಸ್ಥಿತಿ ನೋಡಿದರೆ, ಅಯ್ಯೋ ಪಾಪವೆನಿಸುತ್ತದೆ. ಎಷ್ಟಾದರೂ ವಯೋ ವೃದ್ಧ ನೀನು. ಇಂತಹ ದಯನೀಯ ಅಂತಿಮ ಕ್ಷಣಗಳು ಯಾರಿಗೂ ಬರಬಾರದು. ಇಷ್ಟೊಂದು ದೀರ್ಘ ಕಾಲ ಕುರುವಂಶದ ಸಿಂಹಾಸನಕ್ಕೆ ರಕ್ಷಕನಾಗಿರುವುದನ್ನೇ ಜೀವನ ಧ್ಯೇಯವಾಗಿಟ್ಟುಕೊಂಡವನು ನೀನು. ವಿಧಿಲಿಖಿತವೆಂದರೆ, ಯಾವುದನ್ನು ನೀನು ಜೋಪಾನವಾಗಿಟ್ಟುಕೊಳ್ಳಲು ಯತ್ನಿಸಿದೆಯೋ, ಅದಿಂದು ನಿನ್ನ ಕಣ್ಣೆದುರೇ ನಾಶವಾಗುತ್ತಿದೆ. ಕೊನೆಗೆ, ನೀನು ಸಾಧಿಸಿದ್ದಾದರೂ ಏನನ್ನು? ಅಂದು, ನಾನು ನಿನ್ನೆದುರು ಕಣ್ಣೀರಿಟ್ಟೆ, ‘ನಿನ್ನಿಂದ ಆದ ತಪ್ಪನ್ನು ಸರಿ ಮಾಡು. ನ್ಯಾಯ ದೊರಕಿಸು,’ ಅಂದೆ. ಆದರೆ, ನಿನಗೆ ಎಂದೋ ಮಾಡಿದ ಪ್ರತಿಜ್ಞೆಯ ವ್ಯಾಮೋಹ ಹಾಗು ಅದರಿಂದ ಸಿಕ್ಕ ಹೆಸರು ಮುಖ್ಯವಾಗಿತ್ತೇ ಹೊರತು, ನಿನ್ನ ದುರಹಂಕಾರದಿಂದ ಛಿದ್ರಗೊಳಿಸಿದ ಒಂದು ಹೆಣ್ಣಿನ ಬದುಕನ್ನು ಸರಿಪಡಿಸುವುದು ನಿನಗೆ ಮುಖ್ಯವಾಗಿರಲಿಲ್ಲ. ಅಂದಿನಿಂದ, ಇಲ್ಲಿಯವರೆಗೂ ನಾನು ಪ್ರತಿದಿನ ಅನುಭವಿಸಿದ ನೋವು, ಅವಮಾನಗಳಿಗೆ ಕೇವಲ ನೀನು ಮಾತ್ರ ಹೊಣೆ.’

ADVERTISEMENT

ಶಿಖಂಡಿ ದೀರ್ಘ ಉಸಿರೆಳೆದುಕೊಂಡ. ಭೀಷ್ಮನ ಕಣ್ಣಿಂದ ನೀರಿನ ಬಿಂದು ಜಾರಿ ಬಿತ್ತು. ನಿಧಾನವಾಗಿ, ಭೀಷ್ಮ ತನ್ನ ಬಲಗೈ ಮೇಲೆತ್ತಿ ಹೇಳಿದ.

‘ದಯವಿಟ್ಟು ಒಮ್ಮೆ ನಿನ್ನ ಆವೇಶ ನಿಲ್ಲಿಸು, ಅಂಬಾ. ನಿನ್ನನ್ನು ಇಲ್ಲಿ ಕರೆಸಿಕೊಂಡಿದ್ದೇ, ಮನಬಿಚ್ಚಿ ಒಮ್ಮೆ ಮಾತಾಡಲಿಕ್ಕೆ. ನನಗೆ ಅರಿವಾಗಿದೆ, ನೀನು ಅಂಬೆಯಾಗಿ ಅನುಭವಿಸಿದ ನೋವು, ಪುನಃ, ಶಿಖಂಡಿಯಾಗಿ ಹುಟ್ಟಿ ಎದುರಿಸಿದ ಅವಮಾನ, ಎಲ್ಲದಕ್ಕೂ ನಾನೇ ಹೊಣೆ. ಅಂದು ಅರಿವಾಗದ ತಪ್ಪು, ಕಳೆದ ಹಲವು ವರ್ಷಗಳಿಂದ ನನ್ನನ್ನು ನಿರಂತರವಾಗಿ ಕಾಡುತ್ತಿದೆ. ನಿನ್ನನ್ನು ಕರೆದು ಮಾತನಾಡಿಸಿ ಮನಸ್ಸು ಹಗುರ ಮಾಡಿಕೊಳ್ಳಬೇಕೆಂದಿದ್ದೆ. ಕಾರಣಾಂತರಗಳಿಂದ ಅದು ಆಗಲಿಲ್ಲ. ಅಂತೂ ಕುರುಕ್ಷೇತ್ರ ಯುದ್ಧ ಒಂಬತ್ತು ದಿನ ದಾಟಿದ ಮೇಲೆ, ಇನ್ನು ನನ್ನಿಂದ ಈ ಕುರುವಂಶ ರಕ್ಷಿಸುವ ಸಾಹಸ ಮುಂದುವರಿಸಲು ಸಾಧ್ಯವಿಲ್ಲವೆನಿಸಿತು. ಅದಕ್ಕಾಗಿ, ಇಹಲೋಕ ತ್ಯಜಿಸಲು ನಿರ್ಧರಿಸಿದೆ. ಇಚ್ಚಾಮರಣಿಯಾದ ನನಗೆ ನನ್ನ ಸಾವು ಹೇಗೆ, ಯಾವಾಗ ಹಾಗು ಯಾರ ಕೈಯಿಂದ ಆಗಬೇಕೆಂಬ ಆಯ್ಕೆ ಸ್ವಾತಂತ್ರ‍್ಯವೂ ಇದೆ. ನನ್ನ ಅಂತ್ಯಗೊಳಿಸಲಿಕ್ಕಾಗಿಯೇ ನೀನು ಮರುಜನ್ಮ ಪಡೆದು ಬಂದೆ, ಆ ಗುರಿ ಸಾಧನೆಗಾಗಿ ನೀನು ಬಹಳ ಸಮಯದಿಂದ ಕಾಯುತ್ತಿರುವೆಯೆಂದು ಯಾವಾಗಲೋ ತಿಳಿದುಹೋಗಿತ್ತು. ಆದ್ದರಿಂದ, ನನ್ನ ಸಾವಿಗೆ ನೀನೆ ಕಾರಣವಾದರೆ, ನಿನಗೆ ನೆಮ್ಮದಿ ಸಿಗಬಹುದು. ಜೊತೆಗೆ, ನಮ್ಮಿಬ್ಬರಿಗೂ ಮುಕ್ತಿ ಸಿಗಬಹುದು. ಅದಕ್ಕಾಗಿ, ನಾನೇ ಯುದಿಷ್ಠಿರನಲ್ಲಿ ಹೇಳಿ ಕಳುಹಿಸಿದೆ- ‘ನಾಳೆ ಅರ್ಜುನನ ರಥದಲ್ಲಿ ಶಿಖಂಡಿಯನ್ನು ಸಾರಥಿಯಾಗಿ ಕಳುಹಿಸು. ಆಗ ನಾನು ಶಸ್ತ್ರ ತ್ಯಾಗ ಮಾಡುತ್ತೇನೆ. ನಿಮಗೆ ಜಯ ಸಿಗುತ್ತದೆ.’ ಇದನ್ನು ಕೂಡ ನಿನ್ನಲ್ಲಿ ಹೇಳುವುದಿತ್ತು. ಹೇಳಿದರೆ, ನಿನಗೆ ಇನ್ನೂ ಏನಾದರೂ ಸಿಟ್ಟು ಉಳಿದಿದ್ದರೆ ಕರಗಿ ಹೋಗಲಿ, ಎಂಬುದೇ ನನ್ನ ಉದ್ದೇಶ.’

ಶಿಖಂಡಿಗೆ ನಂಬಲಾಗಲಿಲ್ಲ.

‘ಏನು, ನೀನು ಸ್ವತಃ ನನ್ನ ಕೈಯಿಂದ ಸಾವು ಬಯಸಿದ್ದೆಯೋ? ಯಾಕೆ? ಸಾಯುತ್ತಿರುವ ಕ್ಷಣದಲ್ಲಿಯೂ, ನನ್ನ ಜನ್ಮಗಳ ಶ್ರಮದ ಪರಿಹಾಸ್ಯವೇ?’

ತಕ್ಷಣ ಭೀಷ್ಮನೆಂದ.

‘ಛೇ, ಇಲ್ಲ, ಇಲ್ಲ. ನನಗೆ ನಿನ್ನ ಬಗ್ಗೆ ಗೌರವ ಯಾವತ್ತೂ ಕಡಿಮೆಯಿರಲಿಲ್ಲ. ನನ್ನ ಬದುಕಿನಲ್ಲಿ ಒಡನಾಡಿಯಾಗಿದ್ದ ಎಲ್ಲ ಹೆಣ್ಣುಮಕ್ಕಳನ್ನು ನಾನು ಗೌರವದಿಂದಲೇ ಕಂಡೆ. ನನ್ನ ಅಮ್ಮ ಗಂಗೆಯ ಕುರಿತು ನನಗೆ ವಿಶೇಷ ಗೌರವ ಇದೆ, ತಾಯಿ ಸತ್ಯವತಿ ಕೂಡ ಅಷ್ಟೇ ಗೌರವಾರ್ಹಳು. ಗಾಂಧಾರಿಗಿದ್ದ ಪತಿ ಪ್ರೇಮ, ಕುಂತಿ ಒಂಟಿಯಾಗಿ ಮಕ್ಕಳನ್ನು ಬೆಳೆಸಿದ ರೀತಿ, ದ್ರೌಪದಿಯ ದಿಟ್ಟತನ, ಹಾಗೆಯೇ ನಿನ್ನ ಬಿಡದ ಛಲ, ಎಲ್ಲವೂ ನನಗೆ ಆಪ್ತವಾದುದು.’

‘ಅದಕ್ಕೇ ಕೇಳಿಕೊಳ್ಳುತ್ತಿರುವುದು, ನನಗೆ ಒಂದು ಅವಕಾಶ ಕೊಡು, ಮನಬಿಚ್ಚಿ ನಿನ್ನಲ್ಲಿ ಮಾತನಾಡಬೇಕಿದೆ. ನಿಜ, ನೀನು ಹೇಳಿದಂತೆ, ಅಂದು ನಾನು ನಿನ್ನಲ್ಲಿ ನಿಷ್ಟುರವಾಗಿ ನಡೆದುಕೊಂಡಾಗ, ನನ್ನ ಪ್ರತಿಜ್ಞೆಯ ಕುರಿತಾಗಿ ವಿಪರೀತ ವ್ಯಾಮೋಹವಿತ್ತು. ಜೊತೆಗೆ, ನಾನು ಅಪ್ಪನಿಗಾಗಿ ಮಾಡಿದ ತ್ಯಾಗವನ್ನು ಜಗತ್ತು ಕೊಂಡಾಡುತ್ತಿರುವಾಗ, ಅದೇನೋ ದೊಡ್ಡ ಸಾಧನೆ ಮಾಡಿದ್ದೇನೆ ಎನ್ನುವ ಭ್ರಮೆ ಕೂಡ ನನ್ನನ್ನು ಆವರಿಸಿತ್ತು. ಅದೇ ಮುಂದೆ ನನ್ನ ಸಂಪೂರ್ಣ ಅಸ್ಮಿತೆಯಾಗಿ, ಜೀವನವನ್ನು ರೂಪಿಸಿತು. ದೇವವ್ರತನಾಗಿದ್ದವನು ಭೀಷ್ಮ ಪಿತಾಮಹನೆನಿಸಿಕೊಂಡೆ. ಆದರೆ, ಇಂದು ಹಿಂತಿರುಗಿ ನೋಡಿದರೆ, ನನ್ನ ಜೀವನದ ಒಟ್ಟು ಸಾಧನೆ ಶೂನ್ಯವೆನಿಸುತ್ತಿದೆ.’

ಶಿಖಂಡಿ ನಕ್ಕ.

‘ಭೀಷ್ಮ, ನೀನು ಹೀಗೆ ಹೇಳಿದರೆ ಹೇಗೆ? ಕುರುಕುಲ ಸಿಂಹಾಸನದ ಕಾವಲು ಕೆಲಸಕ್ಕೆ ನಿಷ್ಠನಾಗಿ, ಅದಕ್ಕಾಗಿ, ನಿನ್ನ ಕಣ್ಮುಂದೆ ನಡೆದ ಎಷ್ಟೋ ಅನಾಚಾರಗಳನ್ನು ನೋಡಿಯೂ ಕಣ್ಮುಚ್ಚಿ ಸಹಿಸಿಕೊಂಡಿರುವುದು ಏನು ಕಡಿಮೆ ಸಾಧನೆಯೇ?’

ಶಿಖಂಡಿಯ ಮಾತಿನ ವ್ಯಂಗ್ಯ ಭೀಷ್ಮ ಗಮನಿಸಿ ವಿಷಾದದಿಂದ ನಕ್ಕ. ಶಿಖಂಡಿ ಮುಂದುವರಿಸಿದ.

‘ಯಾಕೆ ವೃದ್ಯಾಪ್ಯದಲ್ಲಿ ಎಲ್ಲಾ ಮರೆತು ಹೋಯಿತೇ? ನೀನು ಎಲ್ಲರಿಗಿಂತ ಹೆಚ್ಚು ವರ್ಷಗಳ ಕಾಲ ಭೂಮಿಯ ಮೇಲೆ ಬದುಕಿದ್ದವನಲ್ಲವೇ? ಮರೆವು ಸಹಜ. ಮರೆತಿದ್ದರೆ ನೆನಪಿಸುತ್ತೇನೆ. ನೀನು ನನ್ನ ವಿಚಾರದಲ್ಲಂತೂ ಅತ್ಯಂತ ಕ್ರೂರವಾಗಿ ನಡೆದುಕೊಂಡೆ. ಒಂದು ಹೆಣ್ಣಿನ ಜೀವನ ಹಾಳು ಮಾಡಿರುವುದು ಮಾತ್ರವಲ್ಲ, ಕಷ್ಟದಲ್ಲಿರುವ ಒಬ್ಬ ಮನುಷ್ಯನಿಗೆ ಸಾಮಾನ್ಯವಾಗಿ ತೋರಿಸುವಷ್ಟೂ ದಯೆ ಮೂಡದೇ ಹೋಯಿತು ನಿನ್ನ ಮನದಲ್ಲಿ. ಅದೂ, ಒಂದು ಸಾಮ್ರಾಜ್ಯದ ಉಸ್ತುವಾರಿ ನೋಡಿಕೊಳ್ಳುವವನಿಗೆ, ತಾನು ಮಾಡಿದ ತಪ್ಪನ್ನು ತಿದ್ದಿ, ಅದಕ್ಕೆ ಪರಿಹಾರ ಕೊಡಬೇಕಾದ ಜವಾಬ್ದಾರಿ ಇರಲಿಲ್ಲವೇ?’

‘ಆದರೆ, ನೀನು ನನ್ನ ವಿಚಾರದಲ್ಲಿ ಮಾತ್ರವಲ್ಲ, ಜೀವನದುದ್ದಕ್ಕೂ ಇಂತಹ ಹಲವಾರು ಪಾಪಗಳನ್ನು ಮೈಮೇಲೆ ಎಳೆದುಕೊಂಡಿದ್ದಿ. ಲೆಕ್ಕ ಹಿಡಿಯಲು ಒಂದಲ್ಲ, ಎರಡಲ್ಲ. ಧೃತರಾಷ್ಟ್ರನ ಮಕ್ಕಳು ದೊಡ್ಡವರಾದ ಮೇಲೆ, ರಾಜ್ಯಭಾರದ ಎಲ್ಲಾ ಪ್ರಮುಖ ನಿರ್ಧಾರಗಳನ್ನು ಅವರೇ ತೆಗೆದುಕೊಂಡರು. ನೀನು ಲೆಕ್ಕಕ್ಕಿಲ್ಲದ ಮಾರ್ಗದರ್ಶಕನಾದೆ. ನಿನ್ನ ಕಣ್ಮುಂದೆಯೇ, ಧೃತರಾಷ್ಟ್ರ ಸುಯೋಧನನನ್ನು ಪಟ್ಟಕ್ಕೇರಿಸಲು ಪ್ರಯತ್ನಿಸಿದ. ಆಗ ವಿಧುರ ತಡೆದನೇ ಹೊರತು, ನೀನಲ್ಲ. ಇದನ್ನು ಸಹಿಸಿಕೊಳ್ಳದೆ, ಶಕುನಿಯ ಮಾತಿನಂತೆ ಸುಯೋಧನ, ಪಟ್ಟಕ್ಕೇರಿದ ಯುಧಿಷ್ಠಿರನನ್ನು ಕೆಳಗಿಳಿಸಲು, ಅರಗಿನ ಮನೆಗೆ ಬೆಂಕಿಯಿಟ್ಟು, ಕುಂತಿ ಮತ್ತು ಅವಳ ಮಕ್ಕಳನ್ನು ಸಾಯಿಸಲು ಪ್ರಯತ್ನಿಸಿದ. ನೀನು ಅದನ್ನು ನೋಡಿಯೂ ನೋಡದವನಂತೆ ಇದ್ದೆ. ಆಮೇಲೆ, ಯುಧಿಷ್ಠಿರ ಪಗಡೆಯಾಟದಲ್ಲಿ ಹೀನಾಯವಾಗಿ ಸೋತಾಗ, ತುಂಬಿದ ಸಭೆಯಲ್ಲಿ ದುಶ್ಯಾಸನ, ದ್ರೌಪದಿಯ ಸೀರೆಯನ್ನು ಸೆಳೆದಾಡುವಾಗ, ನೀನು ಕೈ, ಬಾಯಿಕಟ್ಟಿ ಕುಳಿತುಕೊಂಡಿದ್ದೆ. ಅಷ್ಟೆಲ್ಲಾ ಮುಗಿದು, ಪಾಂಡವರು ಹದಿಮೂರು ವರ್ಷ ವನವಾಸ ಮುಗಿಸಿ, ತಮ್ಮ ಪಾಲಿನ ಅರ್ಧ ರಾಜ್ಯ ಕೇಳಿದಾಗ, ಅದನ್ನೂ ಕೊಡಿಸಲು ನಿನ್ನಿಂದ ಸಾಧ್ಯವಾಗಲಿಲ್ಲ. ಆಮೇಲೆ, ಕೃಷ್ಣ ಸಂಧಾನಕ್ಕೆ ಬಂದು, ‘ಐದು ಗ್ರಾಮಗಳನ್ನಾದರೂ ಕೊಡಿ’ ಎಂದಾಗಲೂ ಕುರುವಂಶದ ಮಹಾರಕ್ಷಕನಿಗೆ ದಯಪಾಲಿಸಲಾಗಲಿಲ್ಲ. ಕುರುಕ್ಷೇತ್ರ ಯುದ್ಧದಲ್ಲಿ, ನೀನು ಕುರುವಂಶದ ಹಿರಿಯನಾಗಿ ಸೈನ್ಯದ ದಂಡನಾಯಕನಾಗಿ ಮುನ್ನೆಡೆಸಿದ ಒಂಬತ್ತು ದಿನಗಳೂ ಕೂಡ, ದಿನದ ಅಂತ್ಯದಲ್ಲಿ ನಿನಗೆ ಸುಯೋಧನ ಛೇಡಿಸುತ್ತಿದ್ದ-ನೀನು ಗೆಲ್ಲಲು ಸರಿಯಾದ ಪ್ರಯತ್ನ ಪಡುತ್ತಿಲ್ಲವೆಂದು. ಇವುಗಳ ನಡುವೆ, ನಿನ್ನ ಮುದಿ ವಯಸ್ಸಿನಲ್ಲಿ, ಕುರುವಂಶದ ಸುಪುತ್ರ ಸುಯೋಧನನಿಗೆ ಅಧಿಕಾರ ಭದ್ರತೆ ಮಾಡುವ ಸಲುವಾಗಿ, ಕಳೆದ ಹತ್ತು ದಿನಗಳು ಕೂಡ, ಪ್ರತಿದಿನ ಸಾಯಿಸುತ್ತಿದ್ದ ಹತ್ತು ಸಾವಿರ ಸೈನಿಕರು ಮತ್ತು ಧ್ವಂಸಗೊಳಿಸಿದ ನೂರಾರು ರಥಗಳ ಲೆಕ್ಕ, ಪರಿಗಣನೆಗೆ ಬಾರದೆ ಹೋಯಿತು ಆತ್ಮಸಾಕ್ಷಿಯಾಗಿ ಹೇಳು-ನೀನು ನಿಜವಾಗಿ ಸಾಧಿಸಿದ್ದಾದರೂ ಏನನ್ನು? ನನಗಿಂದಿಗೂ ಅರ್ಥವಾಗಿಲ್ಲ.’

ಭೀಷ್ಮ, ಒಮ್ಮೆ ಶಿಖಂಡಿಯತ್ತ ನೋಡಿ, ಬಾಯಿ ತೆರೆದ.

‘ಅದಕ್ಕೆ ನಿನ್ನನ್ನು ಕರೆಸಿಕೊಂಡಿದ್ದು. ನಿನ್ನ ಮನಸ್ಸು ಸ್ವಲ್ಪ ಶಾಂತವಾದ ಮೇಲೆ ತಿಳಿಸು. ಮಾತನಾಡುತ್ತೇನೆ. ನನಗೆ ಗೊತ್ತಿದೆ, ನಾನು ಬಹಳ ತಪ್ಪು ಮಾಡಿದ್ದೇನೆ. ಕರ್ಮಾನುಸಾರ ಸಾಕಷ್ಟು ನೋವು ಕೂಡ ಉಂಡಿದ್ದೇನೆ. ಆದರೆ ಒಂದು ಮಾತು. ನಿನಗೆ ಎಷ್ಟು ಅರ್ಥವಾಗುತ್ತದೆಯೋ ತಿಳಿದಿಲ್ಲ. ಆದರೂ ಹೇಳುತ್ತಿದ್ದೇನೆ. ಪ್ರತಿಯೊಬ್ಬ ಮನುಷ್ಯನು ಆಡುವ ಮಾತು ಹಾಗೂ ಮಾಡುವ ಕೆಲಸದ ಸುತ್ತಲೂ, ಹಲವಾರು ಅಂಶಗಳು ಪ್ರಭಾವ ಬೀರುತ್ತವೆ. ಆದ್ದರಿಂದಲೇ, ನಾವು ಮಾಡುವುದೆಲ್ಲಾ ಸಂಪೂರ್ಣ ಸರಿಯೂ ಆಗಿರುವುದಿಲ್ಲ, ತಪ್ಪೂ ಆಗಿರುವುದಿಲ್ಲ. ಎಲ್ಲವನ್ನು ಕಾಲವೇ ನಿರ್ಣಯಿಸುತ್ತದೆ. ಸಾಮಾನ್ಯವಾಗಿ, ಹೆಚ್ಚಿನ ತೀರ್ಮಾನಗಳನ್ನು ಸಾಂದರ್ಭಿಕ ಪರಿಸ್ಥಿತಿಗಳೇ ನಿರ್ಧರಿಸುತ್ತವೆ.’

‘ನನ್ನ ಮೇಲೆ ಅಷ್ಟೊಂದು ಆರೋಪ ಮಾಡಿದೆಯಲ್ಲಾ. ನೀನು ಏನು ಸಾಧಿಸಿದೆ? ನಿನ್ನ ಒಂದು ಜನ್ಮವಲ್ಲ, ಎರಡೆರಡು ಜನ್ಮಗಳನ್ನು ನನ್ನ ಮೇಲೆ ಸೇಡು ತೀರಿಸಿಕೊಳ್ಳುವ ಗುರಿಯೊಂದನ್ನೇ ಇಟ್ಟುಕೊಂಡು ಕಳೆದೆ, ಎಂಬುವುದನ್ನು ಮರೆಯಬೇಡ. ಕೇವಲ, ಭೀಷ್ಮನನ್ನು ಸಾಯಿಸಿರುವುದಷ್ಟೇ ನಿನ್ನ ಎರಡು ಜನ್ಮಗಳ ಒಟ್ಟು ಸಾಧನೆಯಾಯಿತಲ್ಲ. ಹಿಂದೆ ತಿರುಗಿ ನೋಡಿದರೆ, ನಿನಗೆ ಹೆಮ್ಮೆಯೆನಿಸುತ್ತದೆಯೇ? ವಿಷಾದವೆನಿಸುತ್ತದೆಯೇ? ನನಗಿಂತ ನಿನ್ನ ಜೀವನ ಹೇಗೆ ಭಿನ್ನ? ನಾನು ತೆಗೆದುಕೊಂಡ ಒಂದು ಪ್ರತಿಜ್ಞೆ ನನ್ನ ಒಟ್ಟು ಜೀವನವನ್ನು ರೂಪಿಸಿದರೆ, ನಿನ್ನ ಸೇಡಿನ ಮನೋಭಾವ ಎರಡೆರಡು ಜನ್ಮವನ್ನು ರೂಪಿಸಲಿಲ್ಲವೇ? ಇದನ್ನು ಬಿಟ್ಟು ಇನ್ನೇನು ಸಾಧಿಸಿದೆ? ನಿನ್ನ ಜೀವನವೆಲ್ಲಾ ನನ್ನ ಸುತ್ತಲೇ ಕೇಂದ್ರೀಕೃತವಾಗಿತ್ತು. ಇದನ್ನು ಬಿಟ್ಟಿದ್ದರೆ, ನಿನ್ನ ಜೀವನ ವೃತ್ತಾಂತ ಇನ್ನ್ಯಾವುದೋ ಶ್ರೇಷ್ಠ ಕಾರ್ಯಕ್ಕಾಗಿ ನೆನಪಿಸಿಕೊಳ್ಳುವುದಕ್ಕೆ ಆಗಬಹುದಿತ್ತಲ್ಲವೇ? ಕೇವಲ ಬಾಹ್ಯಶಕ್ತಿಗಳು ನಮ್ಮ ಸಂಪೂರ್ಣ ಬದುಕನ್ನು ರೂಪಿಸುವುದಾದರೆ, ಅಲ್ಲಿ ನಮ್ಮತನ ಎಲ್ಲಿದೆ? ಒಮ್ಮೆ ಆತ್ಮ ವಿಮರ್ಶೆ ಮಾಡಿಕೊ.’

ಶಿಖಂಡಿ ಒಮ್ಮೆ ಬೆವೆತು ಹೋದ. ಅವನೆಂದೂ ಈ ರೀತಿ ಯೋಚಿಸಿರಲಿಲ್ಲ. ಉತ್ತರಿಸಲಿಕ್ಕಾಗದೆ ಮೌನವಾಗಿ ಬಿಟ್ಟ.

ಭೀಷ್ಮ ಮುಂದುವರಿಸಿದ.

‘ಅಂಬೆ, ನಾನು ಅದಕ್ಕೆ ಹೇಳಿದ್ದು. ನಾವು ಸಾಮಾನ್ಯವಾಗಿ ಜೀವನವಿಡೀ ಇನ್ನೊಬ್ಬರು ನಮಗೆ ಮಾಡಿರುವ ಅನ್ಯಾಯಗಳನ್ನಷ್ಟೇ ಲೆಕ್ಕವಿಡುತ್ತಾ ಬರುತ್ತೇವೆ. ದೀಪದ ಬುಡದಲ್ಲಿ ಕತ್ತಲೆಂಬಂತೆ, ನಾವು ಮಾಡುವ ತಪ್ಪುಗಳು ನಮಗೆ ಕಾಣಿಸುವುದಿಲ್ಲ. ಸ್ವವಿಮರ್ಶೆಗೆ ಹಚ್ಚಿಕೊಳ್ಳುವುದು ಕೈಕಾಲು ಸೋತ ಮೇಲೆಯೇ. ಆಗ ನಮ್ಮ ಬಳಿ ಸಾಕಷ್ಟು ಸಮಯವಿರುತ್ತದೆ, ಮಾಡಲು ಕೆಲಸವು ಕಡಿಮೆ. ದೇಹ ಹಾಗೂ ಮನಸ್ಸು ದಣಿದಿರುತ್ತದೆ. ಮನಸ್ಸು ನಿಧಾನವಾಗಿ ಆಲೋಚನೆಗೆ ತೊಡಗುತ್ತದೆ. ಕಳೆದು ಹೋದ ದಿನಗಳ ಪುನರ್ ವಿಮರ್ಶೆಗೆ ನಮ್ಮನ್ನು ಒತ್ತಾಯಿಸುತ್ತದೆ. ನನಗೂ ಇತ್ತೀಚೆಗಿನ ವರ್ಷಗಳಲ್ಲಿ, ಹಾಗೆಯೇ ಅನ್ನಿಸತೊಡಗಿದೆ. ನೆಮ್ಮದಿಯಿಂದ ನಿದ್ರಿಸಲು ಆಗುತ್ತಿಲ್ಲ. ಶೂನ್ಯತೆ ಕಾಡುತ್ತಿದೆ. ವಿಭಿನ್ನವಾಗಿ ಬದುಕಬಹುದಾಗಿದ್ದ ವಿವಿಧ ಆಯಾಮಗಳು ಗೋಚರಿಸುತ್ತಿವೆ. ಒಂದು ಕಾಲದಲ್ಲಿ ನನ್ನಲ್ಲಿ ಎಲ್ಲವೂ ಇತ್ತು. ಅಪ್ಪನ ಮೇಲಿನ ಪ್ರೀತಿಯ ಭರದಲ್ಲಿ, ಪ್ರತಿಜ್ಞೆಯೊಂದನ್ನೇ ನನ್ನ ಜೀವನ ಧ್ಯೇಯವಾಗಿಟ್ಟುಕೊಂಡು, ಹಲವಾರು ತಪ್ಪುಗಳನ್ನು ಮಾಡುತ್ತಲೇ ಬಂದೆ. ಹೀಗೆ ಹಲವಾರು ನಿರಾಶೆ, ಹತಾಶೆ ಹಾಗು ಶೂನ್ಯತೆಯ ನಡುವೆ ಜೀವನವನ್ನು ಅಂತ್ಯಗೊಳಿಸುವ ಸಂದಿಯಲ್ಲಿ, ನಿನ್ನ ಕೈಯಿಂದಲೇ ಸತ್ತು, ನಿನಗೆ ಮುಕ್ತಿ ಕೊಡಿಸಬೇಕೆನ್ನಿಸಿತು. ಅದಕ್ಕಾಗಿಯೇ, ನಿನಗೆ ಇಂದು ಶರಣಾಗಿದ್ದು.’

ಶಿಖಂಡಿ ಬೆಚ್ಚಿ ಬಿದ್ದವನಂತೆ ಭೀಷ್ಮನನ್ನೇ ದಿಟ್ಟಿಸಿದ.

‘ಹೌದು ಅಂಬಾ. ನಿನಗೆ ನಂಬಲಿಕ್ಕೇ ಕಷ್ಟವಾಗಬಹುದು. ನಿನ್ನೆದುರು ಶಸ್ತ್ರ ತ್ಯಜಿಸುವುದು ನನ್ನ ಪೂರ್ವಭಾವಿ ನಿರ್ಧಾರವಾಗಿತ್ತು. ಜೊತೆಗೆ, ಇದರಿಂದ, ಪಾಂಡವರಿಗೂ ಜಯ ಸುಲಭವಾಗುತ್ತದೆ. ಯಾಕೆಂದರೆ, ನಾನು ಮುಂಚೂಣಿಯಲ್ಲಿ ಇರುವವರೆಗೆ, ಯುದ್ಧ ಯಾವ ಕಡೆಗೂ ವಾಲದಂತೆ ನೋಡಿಕೊಂಡಿದ್ದೆ. ನನಗೆ, ಕುರುವಂಶದ ಯಾರು ಸತ್ತರೂ ದುಃಖವೇ. ಈ ಯುದ್ಧ ನನಗೆ ಬೇಕಿರಲಿಲ್ಲ. ಹೇಗಾದರೂ ರಾಜಿಯಾಗಬೇಕಿತ್ತು. ಕುರುವಂಶವನ್ನು ಒಟ್ಟಾಗಿ ಇಡುವುದೇ ನನ್ನ ಜೀವನದ ಅಸ್ಮಿತೆಯಾಗಿತ್ತು. ಹಾಗಾಗಿ, ಈ ಮಕ್ಕಳು ಕಾದಾಡಿ, ಕಾದಾಡಿ ಸುಸ್ತಾಗಿ, ಎಲ್ಲ ಕಳೆದುಕೊಂಡ ಮೇಲಾದರೂ, ಮಾತುಕತೆಗೆ ಒಪ್ಪಿಕೊಳ್ಳುತ್ತಾರೆ ಅಂದುಕೊಂಡಿದ್ದೆ. ಆದರೆ ಹಾಗಾಗಲಿಲ್ಲ, ನಾನು ಕಳೆದ ಹತ್ತು ದಿನಗಳಲ್ಲಿ ಸುಮಾರು ಒಂದು ಲಕ್ಷ ಸೈನಿಕರನ್ನು ಸಾಯಿಸಿದೆ. ಒಂದು ಸಾವಿರ ರಥಗಳನ್ನು ಧ್ವಂಸ ಮಾಡಿದೆ. ಆದರೆ, ಸುಯೋಧನ ನಿನ್ನ ನಿಯತ್ತೆಲ್ಲಾ ಪಾಂಡವರ ಕಡೆಗೆ, ಕೇವಲ ಹೆಸರಿಗೆ ಮಾತ್ರ ನೀನು ನಮ್ಮ ದಂಡನಾಯಕನೆಂದ. ಅಂತೂ, ಎಲ್ಲೂ ಸಲ್ಲದವನಾದೆ. ಮಾಡಿದ್ದೆಲ್ಲಾ ನೀರಿನ ಮೇಲಿನ ಹೋಮದಂತೆ ಆಯಿತು. ಸುತ್ತಲೂ ರಕ್ತದ ಕಾಲುವೆ ಹರಿದಿದೆ. ನನ್ನ ಕೈಗಳಿಗೆ ರಕ್ತ ಅಂಟಿಕೊಂಡಿದೆ. ಕೊಳೆಯುತ್ತಿರುವ ಹೆಣಗಳ ವಾಸನೆಯಲ್ಲಿ ಮೂಗು ಮುಚ್ಚಿಕೊಳ್ಳಬೇಕೆನಿಸುತ್ತಿದೆ. ಆದರೆ, ಯುದ್ಧ ಮಾತ್ರ ನಿಲ್ಲುವ ಹಾಗೆ ಕಾಣಿಸುವುದಿಲ್ಲ. ನಾನು ಅಂತಿಮ ಸೋಲೊಪ್ಪಿಕೊಂಡೆ. ನನಗಿನ್ನೂ ಮಾತನಾಡಲಿಕ್ಕಿದೆ. ಮುಂದುವರಿಸಲೇ?’

ಶಿಖಂಡಿ ಸ್ವಲ್ಪ ಮೃದುವಾದ. ಮೆಲುದನಿಯಲ್ಲಿ ಹೇಳಿದ -‘ಸರಿ, ನಿನ್ನ ಇಷ್ಟದಂತೆ ಆಗಲಿ.’

‘ಅಂಬಾ, ನನ್ನ ಮೇಲೆ ನಿನಗೆ ಎಷ್ಟು ಕೋಪ ಇದೆಯೆಂದು ಗೊತ್ತು. ಆದರೂ, ನನ್ನ ಮಾತು ಕೇಳಲು ಒಪ್ಪಿಕೊಂಡಿರುವುದಕ್ಕೆ ನಿನಗೆ ಧನ್ಯವಾದಗಳು. ನಾನು ನಿನ್ನಲ್ಲಿ ಯಾಕೆ ಹಾಗೆ ಕೆಟ್ಟದಾಗಿ ನಡೆದುಕೊಂಡೆ ಎನ್ನುವುದನ್ನು ವಿಸ್ತೃತವಾಗಿ ಹೇಳಬೇಕಾದರೆ, ನನ್ನ ಬಾಲ್ಯದಿಂದಲೇ ಆರಂಭಿಸಬೇಕಾಗುತ್ತದೆ. ನಾನು, ಗಂಗಾದೇವಿ ಹಾಗು ರಾಜ ಶಂತನುವಿನ ಮಗ. ಅಮ್ಮ, ತಾನು ಹೆತ್ತ ಮಕ್ಕಳನ್ನು ಯಾಕೆ ಸಾಯಿಸುತ್ತಿದ್ದಾಳೆ, ಎನ್ನುವ ವಿಷಯಕ್ಕೆ ಅಪ್ಪ ತೋರಿದ ಕುತೂಹಲಕ್ಕೆ ಕೋಪಿಸಿಕೊಂಡು ಅಮ್ಮ, ನಮ್ಮನ್ನು ಬಿಟ್ಟು ಹೋದಳು. ಆದರೆ, ಅಪ್ಪನ ಆ ಕುತೂಹಲವೇ ನನ್ನ ಜೀವ ಉಳಿಸಿತು. ಹೀಗೆ, ನಾನು, ಅಪ್ಪ ಒಂಟಿಯಾಗಿ ಬೆಳೆಸಿದ ಮಗನಾದೆ. ಇದು ನಮ್ಮಿಬ್ಬರ ನಡುವಿನ ಬಾಂಧವ್ಯ ಹೆಚ್ಚಿಸಿತು. ನನ್ನ ಸಣ್ಣ ಪುಟ್ಟ ದುಃಖಕ್ಕೆ, ಅಪ್ಪ ಕಣ್ಣೀರು ಒರೆಸಿ ಸಂತೈಸುತ್ತಿದ್ದ. ಹಾಗೆಯೇ, ಅಪ್ಪನ ಮಖಚಹರೆ ಬದಲಾದರೆ, ನನಗೆ ಗೊತ್ತಾಗಿ ಬಿಡುತ್ತಿತ್ತು. ನನ್ನ ಅಪ್ಪ ನನಗೆ ಏನೂ ಕಡಿಮೆ ಮಾಡಲಿಲ್ಲ. ನನ್ನನ್ನು ಅತ್ಯುತ್ತಮ ರಾಜನಾಗಿ ನೋಡಬೇಕೆಂಬ ಆಸೆ ಅವನ ಕಣ್ಣಲ್ಲಿತ್ತು. ಅದಕ್ಕಾಗಿ, ಜಗತ್ತಿನ ಶ್ರೇಷ್ಠ ಗುರುಗಳಿಂದ ನನಗೆ ವಿದ್ಯಾರ್ಜನೆ ಮಾಡಿಸಿದ - ಬೃಹಸ್ಪತಿ, ರಾಜ್ಯಶಾಸ್ತ್ರ ಬೋಧಿಸಿದರು; ಶುಕ್ರಾಚಾರ್ಯ, ಅಕ್ಷರಭ್ಯಾಸ ಮಾಡಿದರು; ವಶಿಷ್ಠರು, ವೇದಗಳ ಸಾರ ಹೇಳಿದರು; ಚ್ಯವನರು, ವೇದಾಂಗಗಳ ಅರಿವು ಮೂಡಿಸಿದರು, ಸನತ್ ಕುಮಾರರು, ಅಧ್ಯಾತ್ಮ ವಿಜ್ಞಾನ ಪರಿಚಯಿಸಿದರೆ; ಮಾರ್ಕಂಡೇಯರು, ಮನುಷ್ಯ ಜೀವನದ ಕರ್ತವ್ಯ ದರ್ಶನ ಮಾಡಿಸಿದರು. ಅದಾದ ಮೇಲೆ, ಪರಶುರಾಮರು ಶಸ್ತಾಸ್ತ್ರ ವಿದ್ಯೆಯನ್ನು ಹೇಳಿಕೊಟ್ಟರೆ, ದೇವೇಂದ್ರ ನನಗೆ ಅತಿಂದ್ರೀಯ ಶಕ್ತಿಗಳನ್ನು ಬೋಧಿಸಿದ. ಹೀಗೆ, ನನಗೆ ಜಗತ್ತಿನಲ್ಲಿ ಏನೇನನ್ನು ಕೊಡಿಸಬಹುದೋ, ಅದೆಲ್ಲವನ್ನು ನನ್ನಪ್ಪ ಕೊಡಿಸಿದ.’

‘ನನ್ನನ್ನು ಅತಿ ಮುದ್ದು ಮಾಡಿ ಸಲಹಿದ ಅಪ್ಪನ ಮುಖ, ಒಂದು ದಿನ ಬಹಳ ಸಪ್ಪೆಯಾಗಿತ್ತು. ಕೇಳಿದರೆ ಏನು ಇಲ್ಲವೆಂದ. ಆದರೆ, ದಿನಕಳೆದಂತೆ, ಅವನ ಕೊರಗು ಹೆಚ್ಚಾಯಿತು. ಬಹಳ ಒತ್ತಾಯದ ನಂತರ, ಕಾರಣ ಹೇಳಿದ. ಅಮ್ಮ ಬಿಟ್ಟು ಹೋಗಿ ಬಹಳ ಕಾಲದ ನಂತರ ಅಪ್ಪನಿಗೆ ಪುನಃ ಪ್ರೀತಿ ಹುಟ್ಟಿತ್ತು. ಅದು ಬೆಸ್ತರ ಹುಡುಗಿ ಸತ್ಯವತಿಯ ಮೇಲೆ. ಅಪ್ಪ ಹೇಳಿದಿಷ್ಟು: ‘ಅವಳಲ್ಲಿ ಪ್ರಸ್ತಾಪಿಸಿದರೆ, ಅವಳ ಅಪ್ಪನಲ್ಲಿ ಕೇಳೆಂದಳು. ಅವಳ ಅಪ್ಪ ಮದುವೆ ಮಾಡಿಸಲು ಒಂದು ಷರತ್ತು ಹಾಕಿದ. ಅವಳಿಗೆ ಹುಟ್ಟುವ ಮಕ್ಕಳಿಗೆ ರಾಜ್ಯಭಾರ ಸಿಗಬೇಕು. ಇದು ಅಪ್ಪನಿಗೆ ಇಷ್ಟವಿರಲಿಲ್ಲ.’ ನನ್ನನ್ನು ಅಷ್ಟೊಂದು ಪ್ರೀತಿಸುತ್ತಿದ್ದ ಅಪ್ಪ, ನನಗಾಗಿ ತನ್ನ ಪ್ರೀತಿ ತ್ಯಾಗ ಮಾಡಿ ಅರಮನೆಗೆ ವಾಪಸ್ಸಾಗಿದ್ದ. ಆದರೆ, ಸತ್ಯವತಿಯನ್ನು ಮಾತ್ರ ಮರೆಯಲು ಸಾಧ್ಯವಾಗಿರಲಿಲ್ಲ. ಅಪ್ಪನ ಸ್ಥಿತಿ ನೋಡಿ ನನಗನ್ನಿಸಿತು- ಈಗ ಅಪ್ಪನಿಗೆ ನನ್ನ ಪ್ರೀತಿಯನ್ನು ತೋರಿಸುವ ಸಮಯ. ನಾನು ಅಪ್ಪನಿಗೆ ತಿಳಿಸದೇ, ಸತ್ಯವತಿಯ ಅಪ್ಪನಲ್ಲಿ ಹೋಗಿ- ‘ಸತ್ಯವತಿಯನ್ನು ನನ್ನ ಅಪ್ಪನಿಗೆ ಮದುವೆ ಮಾಡಿಕೊಡಿ, ನಾನು ಅಧಿಕಾರ ತ್ಯಜಿಸುತ್ತೇನೆ’ ಎಂದೆ. ಆದರೆ, ಅವಳಪ್ಪ ಒಪ್ಪಲಿಲ್ಲ-‘ನೀನು ತ್ಯಜಿಸಬಹುದು, ಆದರೆ, ನಾಳೆ ನಿನ್ನ ಮಕ್ಕಳು ಅಧಿಕಾರ ಕೇಳಬಹುದಲ್ಲವೇ?’ ನಾನು ಏನೂ ಯೋಚಿಸದೇ, ತಕ್ಷಣ -‘ನಾನು ಬ್ರಹ್ಮಚಾರಿಯಾಗಿಯೇ ಉಳಿಯುತ್ತೇನೆ’ ಎಂದು ಪ್ರತಿಜ್ಞೆ ಮಾಡಿ, ನನ್ನ ಅಪ್ಪ, ಸತ್ಯವತಿಯನ್ನು ವಿವಾಹವಾಗುವಂತೆ ನೋಡಿಕೊಂಡೆ. ನಾನು ಮಾಡಿದ ಪ್ರತಿಜ್ಞೆ ಅಪ್ಪನಿಗೆ ಬೇಸರ ಹಾಗೂ ಸಂತೋಷ ಒಟ್ಟಿಗೆ ತಂದಿತು. ಒಂದು ಕಡೆ, ಜಗತ್ತಿನ ಶ್ರೇಷ್ಠ ರಾಜನಾಗಬೇಕೆಂದು ಸಿದ್ಧಗೊಳಿಸಿದ ತನ್ನ ಪ್ರೀತಿಯ ಮಗ ರಾಜನಾಗುವ ಯೋಗ ಕಳೆದುಕೊಳ್ಳುತ್ತಿದ್ದರೆ, ಇನ್ನೊಂದೆಡೆ, ತಾನು ಇಷ್ಟಪಟ್ಟ ಹುಡುಗಿ ಪತ್ನಿಯಾಗುತ್ತಿದ್ದಾಳೆ. ಅಪ್ಪನನ್ನು ನಾನು ಸಮಾಧಾನಿಸಿದೆ.’

‘ಅದೊಂದು ನನ್ನ ಜೀವನದ ಅಮೋಘ ಕ್ಷಣ. ಲೋಕ ನನ್ನ ತ್ಯಾಗಕ್ಕೆ ಶಹಬಾಸ್ ಎಂದಿತು. ನಾನು ಈ ಹೊಗಳಿಕೆಯಲ್ಲಿ ಸಂಪೂರ್ಣ ಕಳೆದು ಹೋಗಿ ಬಿಟ್ಟೆ. ಅಂದು ಕಳೆದುಹೋದವನು ಎಚ್ಚರವಾಗಿದ್ದು, ವೃದ್ಯಾಪ್ಯದ ಈ ಹೊತ್ತಿನಲ್ಲಿ. ಅಂದು, ನಾನು ತೆಗೆದುಕೊಂಡ ನಿರ್ಧಾರ ಸರಿಯೋ ತಪ್ಪೋ, ಈಗ ಪ್ರಸ್ತುತವಲ್ಲ. ಆಗಿ ಹೋಗಿರುವುದನ್ನು ಯೋಚಿಸುತ್ತಾ ಕುಳಿತರೆ ಏನು ಪ್ರಯೋಜನವಿಲ್ಲ. ಆದರೆ, ಆ ನಿರ್ಧಾರದಿಂದ ನಾವು ಇನ್ನೊಬ್ಬರಿಗೆ ನೋವು ಕೊಟ್ಟಿದ್ದೇವೆ ಅನ್ನಿಸಿದರೆ, ಸಾಧ್ಯವಾದರೆ, ಅಹಂ ಬಿಟ್ಟು ಅವರನ್ನು ಕರೆದು, ಕ್ಷಮೆಯನ್ನಾದರೂ ಕೇಳಿ, ಮನಸ್ಸು ಹಗುರ ಮಾಡಿಕೊಂಡರೆ ನಿರ್ಗಮನದ ಸಿದ್ಧತೆ ಮಾಡಿಕೊಳ್ಳಬಹುದು. ನಾನೀಗ ಮಾಡುತ್ತಿರುವುದು ಅದನ್ನೇ.’

‘ನಾನಿಂದು, ಈ ಭೂಮಿಯಲ್ಲಿ ಕಳೆದಿರುವ ದಿನಗಳತ್ತ ಹಿಂತಿರುಗಿ ನೋಡಿದರೆ, ನಾನು ಸ್ವತಃ ಮಾಡಿರುವ ತಪ್ಪುಗಳು ಬಹಳ ಕಡಿಮೆಯೆಂದು ಹೇಳಬಹುದು, ನಿನ್ನ ವಿಷಯದಲ್ಲಿ ಹೊರತುಪಡಿಸಿ. ಆದರೆ, ನನ್ನೆದುರು ನಡೆದ ಹಲವಾರು ಅಕ್ಷಮ್ಯ ಅಪರಾಧಗಳಿಗೆ ನಾನು ಮೂಕ ಸಾಕ್ಷಿಯಾದೆ, ಅಧಿಕಾರ ಚಲಾಯಿಸಿ ವಿರೋಧಿಸಲಿಲ್ಲ ಎನ್ನುವ ಪಾಪಪ್ರಜ್ಞೆ ಕೂಡ ಎಡೆಬಿಡದೆ ಕಾಡುತ್ತಿದೆ.’

‘ನಾನು ಮಾಡಿರುವ ಒಳ್ಳೆಯ ಕೆಲಸಗಳನ್ನು ನೆನಪು ಮಾಡಿಕೊಳ್ಳುವುದಾದರೆ, ಅಪ್ಪ ಶಂತನು ಸತ್ತ ನಂತರ, ಸಿಂಹಾಸನದ ಆಪ್ತರಕ್ಷಕನ ಕಾರ್ಯ ವಹಿಸಿಕೊಂಡವನು ಕೊನೆಯವರೆಗೂ ನಿರ್ವಹಿಸುತ್ತಾ ಬಂದೆ. ಸತ್ಯವತಿಯ ಮೇಲೆ ಕೆಟ್ಟ ದೃಷ್ಟಿಯಿಟ್ಟ ಉಗ್ರಾಯುಧ ಪೌರವನಿಗೆ ಗತಿ ಕಾಣಿಸಿದೆ. ವಿಚಿತ್ರವೀರ್ಯನಿಗೆ ಅಂಬಿಕಾ ಮತ್ತು ಅಂಬಾಲಿಕಾರೊಂದಿಗೆ ಮದುವೆ ಮಾಡಿಸಿದೆ. ನಿನ್ನ ವಿಚಾರದಲ್ಲಿ ಮಾತ್ರ ಘೋರ ಅಪರಾಧ ಮಾಡಿದೆ. ಆಮೇಲೆ, ಧೃತರಾಷ್ಟ್ರನಿಗೆ ಗಾಂಧಾರಿಯೊಂದಿಗೆ ಮದುವೆ ಮಾಡಿಸಿದೆ. ಸಾಮ್ರಾಜ್ಯ ಸುಭದ್ರಗೊಳಿಸಲು, ಪಾಂಡುವಿಗೆ ಮಾದ್ರಿಯೊಂದಿಗೆ ಮದುವೆ ಮಾಡಿಸಿದೆ. ಪಾಂಡು ಸತ್ತ ನಂತರ ಕುಂತಿ ಮತ್ತು ಅವಳ ಮಕ್ಕಳನ್ನು ಅರಮನೆಗೆ ಕರೆದು ತಂದು, ಆಚಾರ್ಯ ದ್ರೋಣರಲ್ಲಿ ವಿದ್ಯಾಭ್ಯಾಸ ಮಾಡಿಸಿದೆ. ಧ್ರತರಾಷ್ಟ್ರ ತನ್ನ ಮಗನನ್ನು ಉತ್ತರಾಧಿಕಾರಿ ಮಾಡಲು ಹೊರಟಾಗ, ನಾನು ರಾಜ್ಯವನ್ನು ಅರ್ಧ ಭಾಗ ಮಾಡಿ ಹಂಚುವಂತೆ ನೋಡಿಕೊಂಡೆ. ಆದರೂ ಶಕುನಿಯ ಮಾತು ಕೇಳಿ ಸುಯೋಧನ ಪಗಡೆಯಾಡಲು ಯುಧಿಷ್ಠಿರನನ್ನು ಕರೆಸಿಕೊಂಡು ಪುನಃ ಎಲ್ಲಾ ವಾಪಾಸ್ಸು ಗೆದ್ದುಕೊಂಡ. ಆ ಹೊತ್ತಿಗೆ ಪರಿಸ್ಥಿತಿ ನನ್ನ ನಿಯಂತ್ರಣ ಮೀರಿ ಹೋಗಿತ್ತು. ಒಂದು ರೀತಿಯಲ್ಲಿ, ನಾನು ಸವಕಲು ನಾಣ್ಯವಾಗಿ ಮಾರ್ಪಟ್ಟಿದ್ದೆ.’

‘ಸುಯೋಧನನೇ ಎಲ್ಲ ಕಾರ್ಯಭಾರವನ್ನು ನಿರ್ವಹಿಸುತ್ತಿದ್ದ. ಅವನ ಜೊತೆಗಿದ್ದ ಕರ್ಣ, ಶಕುನಿ, ದುಶ್ಯಾಸನ ಎಲ್ಲಾ ಜೊತೆಗೂಡಿ ಕೆಟ್ಟ ನಿರ್ಧಾರಗಳಿಗೆ ಕುಮ್ಮಕ್ಕು ನೀಡುತ್ತಿದ್ದರು. ಜೊತೆಗೆ, ತನ್ನ ಮಗನ ತಪ್ಪುಗಳಿಗೆ ಕಣ್ಮುಚ್ಚಿ ಬೆಂಬಲ ಕೊಡುತ್ತಿದ್ದ ಧೃತರಾಷ್ಟ್ರನ ಶ್ರೀರಕ್ಷೆ ಇರುವಾಗ ಸುಯೋಧನನಿಗೆ ಕೇಳುವವರೇ ಇರಲಿಲ್ಲ. ತಾನಾಡಿದ್ದೇ ಆಟವಾಯಿತು.’

‘ಈಗ ನನ್ನ ಮುಂದಿರುವ ಕುರು ಪುತ್ರರಿಗೆ, ನಾನು ಐದು ಪೀಳಿಗೆಯ ಹಳಬ. ನಿಜವಾಗಿಯೂ ಪಳಯುಳಿಕೆಯಂತಾದೆ. ಪ್ರತಿಜ್ಞೆ ಮಾಡಿ ಏನೋ ಮಹಾನ್ ಸಾಧನೆ ಮಾಡಿದೆಯೆನ್ನುವ ಭ್ರಮೆಯಲ್ಲಿದ್ದ ನನಗೆ, ಕಾಲಕಳೆದಂತೆ, ನನ್ನ ಮಾರ್ಗದರ್ಶಕನ ಸ್ಥಾನ ಅಪ್ರಸ್ತುತವಾಗುತ್ತಿರುವುದು ಅರಿವಾಗಲೇ ಇಲ್ಲ.’

‘ತುಂಬಿದ ಸಭೆಯಲ್ಲಿ ದ್ರೌಪದಿಯ ಸೀರೆ ಸೆಳೆಯುವಾಗ, ನನ್ನ ಬಾಯಿ ಕಟ್ಟಿ ಹೋಗಿದ್ದುದು ಕ್ಷಮಿಸಲಾರದ ಅಪರಾಧ. ಆದರೆ, ನನ್ನ ಮಾತು, ಕುರುಪುತ್ರರ ಹುಡುಗಾಟದ ಆರ್ಭಟದ ಮಧ್ಯದಲ್ಲಿ ಸಿಲುಕಿ, ತನ್ನ ಶಕ್ತಿ ಕಳೆದುಕೊಂಡಿತ್ತು, ಸಭೆಯಲ್ಲಿ ಪ್ರತಿಧ್ವನಿಸಲಿಲ್ಲ. ಹದಿಮೂರು ವರ್ಷಗಳ ಅನಗತ್ಯ ವನವಾಸ ಮುಗಿಸಿ ಬಂದ ಮೇಲೆ ಐದು ಗ್ರಾಮಗಳನ್ನಾದರೂ ಕೊಡಿಸಿ, ಯುದ್ಧ ಬೇಡವೆಂದು ಯುಧಿಷ್ಠಿರ ಸಂಧಾನಕ್ಕೆ ಕರೆದರೆ, ಅದನ್ನು ಮಾಡಿಸಲು ಕೂಡ ನನ್ನಿಂದ ಆಗಲಿಲ್ಲ. ಹೀಗೆ, ಕುರುವಂಶವನ್ನು ಇಷ್ಟೊಂದು ದೀರ್ಘ ಕಾಲ ಕಾಪಾಡಿದ ನನ್ನ ಕಣ್ಣೆದುರೇ, ಕುರುವಂಶ ಬೆಳಗಬೇಕಾದವರು ಕಾದಾಡಿ ಸಾಯಲು ಹೊರಟಿರುವುದನ್ನು ನೋಡಿಯೂ, ತಡೆಯಲು ನನ್ನಿಂದ ಆಗಲಿಲ್ಲ. ಇದು ನನ್ನ ಜೀವನದ ಅತ್ಯಂತ ಹೀನಾಯ ಸೋಲು, ನನ್ನ ಅಹಂಕಾರಕ್ಕೆ ಬಿದ್ದ ದೊಡ್ಡ ಹೊಡೆತ.’

‘ಒಂದು ಕಾಲದಲ್ಲಿ, ಪಟ್ಟ ಏರಿದವನಿಗಿಂತ ಹೆಚ್ಚಿನ ಸ್ಥಾನ ಮಾನ, ಗೌರವ ನನಗೆ ಸಿಕ್ಕಿತ್ತು. ಅದೇ ಅಹಂಕಾರದಲ್ಲಿ ವಿಚಿತ್ರವೀರ್ಯನಿಗೆ ಹೆಣ್ಣು ಹುಡುಕಲು ಹೊರಟಿದ್ದು. ಅಂದು, ನಿನ್ನ ಅಪ್ಪ, ಕಾಶಿಯಲ್ಲಿ ನೀವು ಮೂವರಿಗೆ ಸ್ವಯಂವರ ಏರ್ಪಡಿಸಿದ್ದಾನೆ ಎಂದು ತಿಳಿದ ಕೂಡಲೇ, ನನ್ನ ಶಕ್ತಿಬಲದಿಂದ ಸ್ವಯಂವರಕ್ಕೆ ನುಗ್ಗಿ, ನಿಮ್ಮ ಇಷ್ಟ ಕೇಳದೆ, ಬಂದಿದ್ದ ರಾಜಕುಮಾರರನ್ನು ಸದೆಬಡಿದು, ನಿಮ್ಮನ್ನೆಲ್ಲಾ ಕರೆದುಕೊಂಡು ಬಂದುದು. ಹಾಗೆ ಬರುವಾಗ ನಿಮ್ಮನ್ನೊಂದು ಮಾತು ಕೇಳಬೇಕೆಂದು ಅನ್ನಿಸಲೇ ಇಲ್ಲ. ಸ್ವಯಂವರದ ನಿಯಮಗಳನ್ನು ಗಾಳಿಗೆ ತೂರಿದೆ. ಅಲ್ಲಿ ಆಯ್ಕೆ ಮಾಡಬೇಕಾದವಳು ಹೆಣ್ಣು, ಅವಳ ಮಾತು ಕೇಳದೆ, ನಾನು ಹಾಗೆ ನಡೆದುಕೊಳ್ಳಬಾರದಿತ್ತು. ಅದೂ ಕೂಡ ಮದುವೆ ಗಂಡಲ್ಲದ ನನಗೆ, ಸ್ವಯಂವರ ಪ್ರವೇಶಿಸುವ ಹಕ್ಕಿರಲಿಲ್ಲ. ಆದರೆ, ದೇಹಶಕ್ತಿಯ ಅಹಂಕಾರ, ಎಲ್ಲವನ್ನು ಕುರುಡಾಗಿಸಿತು. ನಿನ್ನ ಕೋರಿಕೆಯಂತೆ, ನೀನು ಇಷ್ಟಪಟ್ಟಿದ್ದ ಸಾಲ್ವನಲ್ಲಿಗೆ ಕಳುಹಿಸಿದ್ದೇನೋ ನಿಜ. ಆದರೆ, ಸ್ವಾಭಿಮಾನವಿದ್ದ ಯಾವ ಗಂಡಸು ತಾನೇ, ಈ ರೀತಿ ಎದುರಾಳಿ ಕೈಯಲ್ಲಿ ಸೋತು, ನಂತರ ಅವನಿಗೆ ನೀಡಿದ ಭಿಕ್ಷೆಯಂತೆ, ವಾಪಸ್ಸು ಕಳುಹಿಸಿದ ಹೆಣ್ಣನ್ನು ಸ್ವೀಕರಿಸುತ್ತಾನೆ? ಅವನು ಸ್ವೀಕರಿಸದ ಮೇಲೆ, ನಿನಗೊಂದು ಗೌರವದ ಬದುಕಿನ ವ್ಯವಸ್ಥೆ ನಾನು ಮಾಡಬೇಕಿತ್ತು. ಆದರೆ, ಅದು ನನ್ನ ಜವಾಬ್ದಾರಿಯೆಂದು ಆಗ ಅರಿವಾಗಿರಲಿಲ್ಲ. ನೀನು ಎಷ್ಟೆಲ್ಲಾ ಕಷ್ಟ ಒಬ್ಬಳೇ ಅನುಭವಿಸಿದೆ, ನೆನೆಸಿಕೊಂಡರೆ ಈಗ ಪಶ್ಚಾತಾಪವಾಗುತ್ತದೆ - ಒಂದು ಕಡೆ, ಪ್ರೀತಿಸಿದ ಸಾಲ್ವ ನಿನ್ನ ಸ್ವೀಕರಿಸಲಿಲ್ಲ, ನಿನ್ನ ಅಪ್ಪ ಕೂಡ ವಾಪಸ್ಸು ಕರೆಸಿಕೊಳ್ಳಲಿಲ್ಲ. ನನ್ನ ತಮ್ಮ ವಿಚಿತ್ರವೀರ್ಯ ಕೂಡ ನಿನ್ನ ತಿರಸ್ಕರಿಸಿದ. ಇದರಲ್ಲಿ ನಿನ್ನ ತಪ್ಪೇನೂ ಇರಲಿಲ್ಲ. ನೀನು ಮಾಡಿರುವುದು ಸರಿಯೇ. ಆದರೆ ಲೋಕ ಮಾತ್ರ ಹೆಣ್ಣಿನ ಸ್ವನಿರ್ಧಾರದ ಹಕ್ಕನ್ನು ಅರ್ಥಮಾಡಿಕೊಂಡು ಸ್ವೀಕರಿಸುವಷ್ಟು ಇನ್ನೂ ವಿಶಾಲವಾಗಿಲ್ಲ. ನನ್ನನ್ನು ಸೇರಿಸಿಕೊಂಡು ಹೇಳುತ್ತಿದ್ದೇನೆ. ನೀನು, ನಿನ್ನ ಪ್ರೀತಿಗೆ ಬದ್ಧಳಾಗಿದ್ದೆ. ನೀನು, ಒಬ್ಬನನ್ನು ಪ್ರೀತಿಸಿ, ಇನ್ನೊಬ್ಬನನ್ನು ಮದುವೆಯಾಗಲು ಸಾಧ್ಯವಿಲ್ಲ ಎಂದಿದ್ದು, ಕ್ರಾಂತಿಕಾರಕ ಹೇಳಿಕೆಯಾಗಿತ್ತು. ಹೆಣ್ಣೊಬ್ಬಳು ಈ ರೀತಿ ಮನಬಿಚ್ಚಿ ಮಾತನಾಡಿದ್ದು, ಮೊದಲ ಬಾರಿಯಾಗಿತ್ತು. ಹಾಗಾಗಿ, ನಿನ್ನ ಹೃದಯದ ಮಾತು ಸಾರ್ವಜನಿಕಗೊಳಿಸಿ, ಜನರೆದುರು ನೀನು ಹಾಸ್ಯಾಸ್ಪದಳಾದೆ. ನಾನು ಕೂಡ ಆ ವ್ಯವಸ್ಥೆಯ ಪ್ರತಿನಿಧಿಯಾಗಿ, ನನ್ನ ಮೂಗಿನ ನೇರಕ್ಕೆ ನಡೆದುಕೊಂಡಿದ್ದು. ನನ್ನ ತಪ್ಪಿಗೆ ಯಾವುದೇ ಕ್ಷಮೆ ಇಲ್ಲ. ಅದಕ್ಕಾಗಿಯೇ ಯುದಿಷ್ಠಿರನಲ್ಲಿ, ಅರ್ಜುನನ ರಥದ ಸಾರಥಿಯಾಗಿ ನಿನ್ನನ್ನು ಕಳುಹಿಸಲು ಹೇಳಿದ್ದು. ನಿನ್ನಿಂದಾಗಿ ಧರೆಗುರುಳಿದರೇನೇ ನನಗೆ ಮುಕ್ತಿ.’

‘ಹೌದು. ನನ್ನ ಸುಧೀರ್ಘ ಜೀವನದಲ್ಲಿ ಕಂಡಂತಹ ಪ್ರಚಂಡ ಹೆಣ್ಣು ಮಗಳು ನೀನು. ನಿನ್ನ ಇಚ್ಚಾಶಕ್ತಿಗೆ ತಲೆ ಬಾಗುತ್ತೇನೆ. ಸಾಮಾನ್ಯವಾಗಿ ಲೋಕದ ಹೆಚ್ಚಿನ ಹೆಣ್ಣು ಮಕ್ಕಳು ಪುರುಷ ಪ್ರಾಧಾನ್ಯ ಸಮಾಜದ ನಿಯಮಗಳನ್ನು ಪ್ರಶ್ನಿಸುವುದಿಲ್ಲ. ಪಾಲಿಗೆ ಬಂದದ್ದನ್ನು, ಇಷ್ಟವಿದ್ದೋ, ಇಲ್ಲದೆಯೋ, ಸ್ವೀಕರಿಸುವುದನ್ನು ಕಲಿಯುತ್ತಾರೆ ಅಥವಾ ಮನೆಯವರು ಕಲಿಸುತ್ತಾರೆ, ಇಲ್ಲವೇ ಒತ್ತಡ ಹೇರಿ ಒಪ್ಪಿಕೊಳ್ಳುವಂತೆ ಮಾಡುತ್ತಾರೆ. ಒಂದು ವೇಳೆ ಪ್ರತಿಭಟಿಸಿದರೆ, ಈ ಸಮಾಜದಲ್ಲಿ ಬದುಕು ಬಟ್ಟ ಬಯಲಾಗುತ್ತದೆ ಎನ್ನುವ ಭಯದಲ್ಲಿ ಬದುಕು ಸವೆಸುತ್ತಾರೆ. ಆದರೆ, ನೀನು ಇದನ್ನು ಪ್ರತಿಭಟಿಸಿದೆ, ಪ್ರಶ್ನಿಸಿದೆ, ಹಾಗು ಬಾರಿ ಬೆಲೆತೆತ್ತೆ. ಆದರೂ ಬಿಟ್ಟುಕೊಡಲಿಲ್ಲ. ಎಲ್ಲಾ ನೋವು, ಆಕ್ರೋಶ, ಅವಮಾನ, ಒಂಟಿತನವನ್ನು ಸಹಿಸಿಕೊಂಡೆ. ಕೊನೆಯ ತನಕ ಹೋರಾಡಿದೆ. ಅಂತೂ ಗೆದ್ದುಬಿಟ್ಟೆ.’

‘ನೀನು ಹೆಣ್ಣಾಗಿದ್ದವಳು, ದ್ವೇಷ ಸಾಧಿಸಲು ಹೋಗಿ, ನಿಧಾನವಾಗಿ ಗಂಡಾಗಿ ಮಾರ್ಪಡುತ್ತಾ ಹೋದೆ. ಹೀಗೆ ನಿನ್ನತನ ಕಳೆದು ಕೊಂಡುಹೋದೆ. ಇದರ ಅಗತ್ಯವಿರಲಿಲ್ಲ. ಹೆಣ್ಣು, ದೇವರ ಶ್ರೇಷ್ಠ ಸೃಷ್ಟಿ. ಅಪಾರ ಶಕ್ತಿ ಅವಳಲ್ಲಿದೆ. ಆ ಶಕ್ತಿಗೆ ನನ್ನದೊಂದು ದೊಡ್ಡ ಪ್ರಣಾಮಗಳು. ಇಡೀ ಜಗತ್ತು ನಿನ್ನ ವಿರುದ್ಧ ನಿಂತಿದ್ದರೂ, ನೀನು ಧೃತಿಗೆಡದೆ, ಒಬ್ಬಳೇ ಹೋರಾಡಿದೆ. ಊರಿನ ಸಹವಾಸ ಬೇಡವೆಂದು ಕಾಡು ಸೇರಿದರೂ, ನಿನ್ನ ಗಮನವೆಲ್ಲಾ ನನ್ನ ಮೇಲೆ ಕೇಂದ್ರಿತವಾಗಿತ್ತು. ಋಷಿ ಹೋತ್ರವಾಹನರ ಸಲಹೆಯಂತೆ, ನನ್ನ ಗುರು ಪರಶುರಾಮರ ಸಹಾಯ ಕೇಳಿದೆ. ಅವರು ನನ್ನಲ್ಲಿ ಎಷ್ಟು ಕೇಳಿಕೊಂಡರೂ, ‘ನಾನು ನಿನ್ನ ಮದುವೆಯಾಗಲಾರೆ, ಪ್ರತಿಜ್ಞೆ ಮಾಡಿದ್ದೇನೆ’ ಎಂದೆ. ಮಾತುಕೇಳದ ಶಿಷ್ಯನ ಮೇಲೆ ಕೋಪಗೊಂಡ ಗುರು, ನನ್ನೊಂದಿಗೆ ಇಪ್ಪತ್ತಮೂರು ದಿನಗಳ ಕಾದಾಟ ನಡೆಸಿದ. ಕೊನೆಗೆ ನಾರದ ಬಂದು ಗುರುವನ್ನು ತಣಿಸಿದ. ಆದರೆ, ನಿನಗೆ ಸಮಾಧಾನ ಸಿಗಲಿಲ್ಲ. ಹಠವಾದಿ ನೀನು. ಮನುಷ್ಯರಿಂದ ಪ್ರಯೋಜನವಿಲ್ಲವೆಂದು ಶಿವನ ಮೊರೆ ಹೊಕ್ಕೆ. ನಿನ್ನ ತಪಸ್ಸಿಗೆ ಒಲಿದ ಶಿವ, ‘ಮುಂದಿನ ಜನ್ಮದಲ್ಲಿ ನಿನ್ನ ಕೈಯಲ್ಲಿ ನನ್ನ ಸಾವು ಬರೆದಿದೆ’ ಎಂದ ಮೇಲೆ ಅದನ್ನು ಶೀಘ್ರಗೊಳಿಸಲು, ನೀನು ಬೆಂಕಿಗೆ ಹಾರಿ ದೇಹ ತ್ಯಾಗ ಮಾಡಿಬಿಟ್ಟೆ. ಈ ಮೂಲಕ, ನೀನು ಎಷ್ಟು ಜನ್ಮವೆತ್ತಿದರೂ ಗುರಿ ಕೇವಲ ಭೀಷ್ಮನ ಮೇಲೆ ಸೇಡು ತೀರಿಸಿಕೊಳ್ಳುವುದು ಎಂದು ಸಾಬೀತುಗೊಳಿಸಿದೆ. ಈ ಜನ್ಮದಲ್ಲಿ ದ್ರುಪದನಿಗೆ ‘ಶಿಖಂಡಿ’ಯಾಗಿ ಹುಟ್ಟಿದರೂ, ನಿನಗೆ ಏನು ಸಂತೋಷ ದೊರಕಲಿಲ್ಲ. ನಿನ್ನ ಲಿಂಗತ್ವದ ಬಗೆಗೆ ಸಾರ್ವಜನಿಕವಾಗಿ ಹೇಳಿಕೊಳ್ಳಲಾಗದ ಸ್ಥಿತಿ, ನಿನ್ನ ಅಪ್ಪನಿಗೆ. ಹಾಗಾಗಿ, ಗಂಡೆಂದು ಲೋಕಕ್ಕೆ ಬಿಂಬಿಸಿ ನಿನ್ನಪ್ಪ, ರಾಜ ಹಿರಣ್ಯವರ್ಮನ ಮಗಳೊಂದಿಗೆ ನಿನ್ನ ಮದುವೆ ಮಾಡಿಸಿದ. ಮೊದಲ ರಾತ್ರಿ ಸತ್ಯ ಗೊತ್ತಾದ ಮೇಲೆ, ನಿನ್ನ ಮದುವೆ ಮುರಿದು ಹೋಗಿ, ದೊಡ್ಡ ರಾದ್ದಂತವಾಗಿ, ನೀನು ಯಾರೆಂದು ಜಗತ್ತಿಗೆ ಗೊತ್ತಾಯಿತು. ಪ್ರಾಪಂಚಿಕವಾಗಿ ಕುಸಿದು ಹೋದರೂ, ನಿನ್ನ ಗುರಿಯಿಂದ ಮಾತ್ರ ವಿಚಲಿತಳಾಗಲಿಲ್ಲ. ಮನಸ್ಸು, ಹೃದಯ ಎರಡೂ ಗಟ್ಟಿಯಾಗಿ ಹಿಡಿದಿಟ್ಟುಕೊಂಡು ಕಣ್ಮುಚ್ಚಿಕೊಂಡು ದಿನದೂಡುತ್ತಾ ಬಂದೆ. ಅದನ್ನೆಲ್ಲಾ, ನಾನು ದೂರದಿಂದಲೇ ಗಮನಿಸುತ್ತಾ ಬಂದಿದ್ದೇನೆ. ನಿಜ ಹೇಳಬೇಕೆಂದರೆ, ನಿನಗೂ ಇದರಿಂದ ಮುಕ್ತಿ ಬೇಕಿತ್ತು.’

‘ನಾನು ಇಚ್ಚಾಮರಣಿ. ಬದುಕುವ ಆಸೆ ಇದ್ದಿದ್ದರೆ ಇನ್ನೂ ಸಾಕಷ್ಟು ದಿನಗಳನ್ನು ಬದುಕಬಹುದಿತ್ತು. ಆದರೆ, ನನಗೆ ಇನ್ನು ಏನೂ ಆಸೆ ಉಳಿದಿಲ್ಲ. ಅದಕ್ಕಾಗಿ ನಿನ್ನ ಭೇಟಿಯಾಗಲು ಸಿದ್ಧನಾದೆ. ಒಂಬತ್ತು ದಿನಗಳ ಯುದ್ಧ ಎರಡೂ ಕಡೆಗೆ ಜಯ, ಅಪಜಯ ಯಾವುದರ ಸೂಚನೆ ಕೊಡದೆ, ಮುಂದುವರಿದಾಗ, ನಾನು ಸಾಯದೆ ಇದಕ್ಕೊಂದು ಅಂತ್ಯವಾಗದು, ಬದಲಾಗಿ ದಿನವೂ, ಸಾವಿರಾರು ಯೋಧರು, ಆನೆ, ಕುದುರೆಗಳು ಅನಗತ್ಯವಾಗಿ ಸಾಯುತ್ತವೆ ಅನ್ನಿಸಿತು. ಅದಕ್ಕಾಗಿ, ಕೃಷ್ಣನ ಹತ್ತಿರ ಚರ್ಚಿಸಿ, ಯುಧಿಷ್ಠಿರನನ್ನು ಕರೆಸಿಕೊಂಡು ಹೇಳಿದೆ - ‘ನಾಳೆ ಶಿಖಂಡಿಯನ್ನು ಅರ್ಜುನನ ಸಾರಥಿಯಾಗಿ ಕಳುಹಿಸು. ನಾನು ಯುದ್ಧ ನಿಲ್ಲಿಸುತ್ತೇನೆ. ನೀವು, ನನಗೊಂದು ಅಂತ್ಯ ಕಾಣಿಸಬಹುದು.’

‘ಅದರಂತೆ, ಇಂದು ನಿನ್ನ ಕಂಡಾಗ ಬಹಳ ಸಂತೋಷದಿಂದಲೇ ಶರಣಾಗತಿಯಾದೆ. ನಿನ್ನ ಗುರಿ ಸಾಧಿಸಿರುವುದಕ್ಕೆ ಅಭಿನಂದನೆಗಳು. ಬಹುಶಃ, ನಿನಗೆ ಇನ್ನು ಬದುಕುವ ಆಸೆ ಇರಲಿಕ್ಕಿಲ್ಲವೆಂದುಕೊಂಡಿದ್ದೇನೆ. ನಿನ್ನಂತಹ ಅದ್ಬುತ ಹೆಣ್ಣೊಬ್ಬಳನ್ನು ಹತ್ತಿರದಿಂದ ಅರಿಯುವ ಭಾಗ್ಯ ನನಗೆ ಸಿಕ್ಕಿರುವುದಕ್ಕೆ ದೇವರಿಗೆ ಕೃತಜ್ಞತೆ ಹೇಳುತ್ತೇನೆ.’

‘ನಿನ್ನಿಂದ ಸಾಧ್ಯವಾದರೆ, ಕ್ಷಮಿಸು. ನಾವು ಜಗತ್ತಿನಿಂದ ನಿರ್ಗಮಿಸುವಾಗ ಆದಷ್ಟು ಮನಸ್ಸು ಹಾಗೂ ಹೃದಯವನ್ನು ಹಗುರ ಮಾಡಿಕೊಳ್ಳುವುದು ಬಹಳ ಉತ್ತಮ. ಬದುಕಿನ ಹಾದಿಯುದ್ದಕ್ಕೂ ಅರಿತೋ, ಅರಿಯದೆಯೋ, ಪೂರ್ವಗ್ರಹಗಳಿಂದಲೋ, ಭ್ರಮೆಗಳಿಂದಲೋ, ಇನ್ನೊಬ್ಬರ ಮೆಚ್ಚುಗೆಗಳಿಸಲೋ, ಸೇಡು ತೀರಿಸಲೋ ಅಥವಾ ಬಿಸಿ ರಕ್ತದ ಆವೇಶದಲ್ಲಿ ಏನೇನೊ ತಪ್ಪುಗಳನ್ನು ಮಾಡುತ್ತಲೇ ಇರುತ್ತೇವೆ. ಕೆಲಮೊಮ್ಮೆ, ಬಹಳ ತಡವಾಗಿ, ನಾವು ಮಾಡಿರುವುದು ತಪ್ಪೆಂದು ಅರಿವಾಗುತ್ತದೆ. ಆಗ, ತಪ್ಪುಗಳ ಸರಿಪಡಿಸಲು ಕಾಲ ಮೀರಿ ಹೋಗಿರಬಹುದು. ಆದರೆ, ಕ್ಷಮೆಯನ್ನಾದರೂ ಕೇಳುವ ಪ್ರಯತ್ನ ಮಾಡಬಹುದಲ್ಲವೇ? ಇನ್ನು ಕ್ಷಮಿಸುವುದು, ಬಿಡುವುದು ನಿನಗೆ ಬಿಟ್ಟಿದ್ದು.’

ಭೀಷ್ಮ, ಶರಮಂಚದಲ್ಲಿಯೇ, ತನ್ನ ಸುಕ್ಕುಗಟ್ಟಿದ ಎರಡು ಕೈಗಳನ್ನು, ಕಷ್ಟಪಟ್ಟು ನಿಧಾನವಾಗಿ ಜೋಡಿಸಿದ. ಅವನ ಕಣ್ಣಂಚಿನಲ್ಲಿ ನೀರು ತೊಟ್ಟಿಕ್ಕುತ್ತಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.