ಡೈನಿಂಗ್ ಟೇಬಲ್ ಮೇಲಿದ್ದ ಮೊಬೈಲ್ ಫೋನು ಒಂದೆರಡು ಸಲ ವೈಬ್ರೇಟ್ ಆಗಿ, ‘ನಾನಿರುವುದೇ ನಿಮಗಾಗಿ . . .’ ಎಂದು ಹಾಡತೊಡಗಿತು. ರಿಂಗ್ ಟೋನನ್ನು ಮ್ಯೂಟ್ ಮಾಡಿ, ಮೊಬೈಲ್ ಕಡೆ ನೋಡಿದೆ. ಕರೆ ಬಂದದ್ದು ಯಾವುದೋ ಸ್ಥಳೀಯ ಲ್ಯಾಂಡ್‌ಲೈನ್ ನಂಬರಿನಿಂದ. ಎಲ್ಲಿಂದ ಇರಬಹುದು ಅನ್ನುವ ಕುತೂಹಲ ಇಣುಕಿದರೂ, ಅದನ್ನು ಕಡೆಗಣಿಸಿ ಊಟವನ್ನು ಮುಂದುವರೆಸಿದೆ. ಕರೆ ಸ್ತಗಿತಗೊಂಡು, ಅರ್ಧ ನಿಮಿಷದಲ್ಲೇ ಮತ್ತೆ ಮೊಳಗತೊಡಗಿತು. ಅದೇ ಲ್ಯಾಂಡ್‌ಲೈನ್ ನಂಬರ್. ಈಗ ಫೋನ್ ಸ್ವರದೊಂದಿಗೆ ಮಡದಿ ವಾಣಿಯ ಸಿಡಿಮಿಡಿಯೂ ಸೇರಿಕೊಂಡಿತು. ‘ಊಟಕ್ಕೆ ಕೂತಾಗ್ಲಾದ್ರೂ ನಿಮ್ಮ ಫೋನನ್ನ ದೂರ ಇಡಿ ಅಂದ್ರೆ ಕೇಳಲ್ಲ. ವೈಬ್ರೇಟ್ ಅಂಡ್ ರಿಂಗ್ ಮೋಡಲ್ಲಿಡ್ತೀರಾ, ಕಾಲ್ ಬಂದಾಗ ತಕ ಧಿಮೀಂತ ಯಕ್ಷಗಾನದ ಕುಣಿತ ಕುಣಿಯುತ್ತೆ. ‘ನಾನಿರುವುದೇ ನಿಮಗಾಗಿ’ ಹಾಡು ಬೇರೆ! ಅದಿರೋದು ನಿಮಗಾಗಿಯೋ, ಅಲ್ಲಾ ನೀವಿರೋದು ಪರರಿಗಾಗಿಯೋ? ಒಂದೂ ಗೊತ್ತಾಗಲ್ಲ’ ಅವಳಿಗೆ ಅಸಮಾಧಾನವಾಗಿದ್ದುದು ಗೋಚರಿಸುತ್ತಿದ್ದರೂ ವೃತ್ತಿಯನ್ನು ಕಡೆಗಣಿಸುವಂತಿಲ್ಲವಲ್ಲ. ಜತೆಗೆ ತೀರಾ ಎಮರ್ಜೆನ್ಸಿ ಇಲ್ಲದಿದ್ದರೆ ಯಾರೂ ತಕ್ಷಣಕ್ಕೆ ಮತ್ತೊಮ್ಮೆ ಕಾಲ್ ಮಾಡುವುದಿಲ್ಲ. ಸಮಯ ನೋಡಿಕೊಂಡೆ, ರಾತ್ರಿಯ ಎಂಟೂವರೆಯಾಗಿತ್ತು.
ಕರೆ ಸ್ವೀಕರಿಸಿದೆ. ಗಾಬರಿ ಮತ್ತು ದುಃಖ ಸಮ್ಮಿಳಿತಗೊಂಡ ಸ್ವರವೊಂದು ಕಿವಿಗಪ್ಪಳಿಸಿತು. ‘ಸತೀಶಾ, ನಾನ್ ಕಣೋ ರಮೇಶ. ಪ್ಲೀಸ್ . . . ಈಗ್ಲೇ ಸೆಡಾನ್ ಪ್ಲಾಜಾ ಹೋಟೆಲ್ಗೆ ಬಾರೋ. ಗೋಪಿ . . .’ ಎನ್ನುತ್ತಾ ಬಿಕ್ಕಳಿಸಿದ ಆಪ್ತ ಸ್ನೇಹಿತನಾದ ರಮೇಶ. ಗೋಪಿ ನನಗೂ ಮಿತ್ರನೇ. ಭಾವನೆಗಳನ್ನು ನಿಯಂತ್ರಿಸಿಕೊಳ್ಳುತ್ತಾ ‘ಏನಾಯ್ತು ಸರಿಯಾಗಿ ಹೇಳೋ’ ಎಂದು ಕೇಳಿದೆ. ‘ನಿಂಗೆ ನಿನ್ನೆ ಹೇಳಿದ್ನಲ್ಲಾ, ಗೋಪಿ ಬರ್ತಿದಾನೆ. ನಾಳೆ ನಮ್ಮ ಪಾರ್ಟ್ನರ್‌ಶಿಪ್ ಎಂಡ್ ಮಾಡಿ, ಎಲ್ಲಾ ಸೆಟಲ್ ಮಾಡ್ಕೋತೀವಿ ಅಂತ. ಅವನು ಈ ಹೋಟೆಲ್ಲಲ್ಲಿ ಉಳ್ಕೊಂಡಿದ್ದ. ಎಂಟ್ ಗಂಟೆಗೆ ಬರೋಕೆ ಹೇಳಿದ್ದ. ಅವನ ರೂಮಿಗೆ ಹೋಗಿ ನೋಡಿದ್ರೆ ಮಂಚದ ಮೇಲೆ ಬಿದ್ದುಬಿಟ್ಟಿದ್ದ. ಮೈಯೆಲ್ಲಾ ರಕ್ತ. ಸಕ್ಕತ್ ಶಾಕ್ ಆಯ್ತು ಕಣೋ. ಆಚೆಗೆ ಓಡಿ ಬಂದೆ. ಈ ಗಾಬರೀಲಿ ನನ್ನ ಫೋನ್ ಎಲ್ಲಿ ಬಿದ್ದು ಹೋಯ್ತೋ ಗೊತ್ತಾಗ್ಲಿಲ್ಲ, ಅದಕ್ಕೇ ಹೋಟೆಲ್ ರಿಸೆಪ್ಷನ್‌ನಿಂದ ನಿಂಗೆ ಕಾಲ್ ಮಾಡ್ತಿದೀನಿ’ ಒಂದೇ ಉಸಿರಿನಲ್ಲಿ ರಮೇಶ ಬಡಬಡಿಸಿದ. ನನಗೂ ಶಾಕ್ ಆಯಿತು.
ನಾನು ಕೈ ತೊಳೆಯಲು ಧಾವಿಸುತ್ತಾ, ‘ಸರಿ, ಬರ್ತೀನಿ. ಪೋಲೀಸಿಗೆ ತಿಳಿಸ್ದೆ ತಾನೆ?’ ಎಂದು ಕೇಳಿದೆ. ‘ಇಲ್ವೋ ಮೊದ್ಲು ನಿಂಗೆ ಹೇಳಣ ಅಂದ್ಕೊಂಡೆ. ಹೋಟೆಲ್‌ನೋರಿಗೆ ಗೊತ್ತಾಯ್ತು. ಅವ್ರು ಕಾಲ್ ಮಾಡಿರ್ಬೋದು’ ಅಂದ.
ಕರೆ ಸ್ತಗಿತಗೊಳಿಸಿ, ಆ ಏರಿಯಾದ ಇನ್ಸ್‌ಪೆಕ್ಟರ್ ಮೋಹನ್‌ಗೆ ಕರೆ ಮಾಡಿ ವಿಷಯ ತಿಳಿಸಿದೆ. ‘ನೀವು ಬರ್ತೀರಲ್ವಾ ಸಾರ್?’ ಎಂದನಾತ. ‘ಹೊರಡ್ತಾ ಇದೀನಿ’ ಎನ್ನುತ್ತಾ ಕಾಲ್ ಕಟ್ ಮಾಡಿ ವಾಣಿಗೆ ವಿಷಯ ತಿಳಿಸಿದೆ. ರಮೇಶ, ಗೋಪಿ ಇಬ್ಬರೂ ಇವಳಿಗೆ ಗೊತ್ತಿದ್ದವರೇ. ಆತಂಕಭರಿತ ಧ್ವನಿಯಲ್ಲಿ ‘ಬೇಗ ಹೊರಡಿ. ಆದ್ರೆ ಜೋಪಾನ’ ಎಂದಷ್ಟೇ ಹೇಳಿ ಬೀಳ್ಕೊಟ್ಟಳು.
ರಮೇಶ ಮತ್ತು ಗೋಪಿ ಪಾರ್ಟ್ನರ್‌ಶಿಪ್‌ನಲ್ಲಿ ಒಂದು ಫರ್ಮ್ ನಡೆಸುತ್ತಿದ್ದರು. ನಾನು ಸೈಕಾಲಜಿ, ಕ್ರಿಮಿನಾಲಜಿ ಜತೆಗೆ ಲಾ ಓದಿ ಖಾಸಗಿಯಾಗಿ ಪತ್ತೆದಾರಿಕೆಯನ್ನು ಮಾಡಿಕೊಂಡಿದ್ದೆ. ಈ ಹವ್ಯಾಸದ ಅನುಭವಗಳನ್ನು ಕಥೆಯ ರೂಪದಲ್ಲಿ ಹಿಡಿದಿಡುವ ಪ್ರಯತ್ನದಲ್ಲಿ ಸಫಲನಾಗಿ ಸಾಹಿತ್ಯವಲಯದಲ್ಲಿ ಒಬ್ಬ ಪತ್ತೇದಾರಿ ಕಾದಂಬರಿಕಾರನಾಗಿ ಗುರುತಿಸಿಕೊಂಡಿದ್ದೆ. ನಾವು ಮೂವರು ‘ತ್ರಿಮೂರ್ತಿಗಳು’ ಎಂದೇ ಹೆಸರಾದವರು ನಮ್ಮ ಏರಿಯಾದಲ್ಲಿ. ನಮ್ಮ ನಮ್ಮ ಫ್ಯಾಮಿಲಿಗಳೂ ಪರಸ್ಪರ ಒಡನಾಟವಿದ್ದವರೇ.
ಹೋಟೆಲ್ ತಲುಪಿ ರೂಂ ನಂಬರ್ 503ರ ಬಳಿ ನಾನು ಬಂದಾಗ ಕಾರಿಡಾರ್‌ನಲ್ಲಿ ಸಾಕಷ್ಟು ಮಂದಿ ನೆರೆದಿದ್ದರು. ಇನ್ಸ್‌ಪೆಕ್ಟರ್ ಮೋಹನ್ ಒಬ್ಬ ಸಹಾಯಕ ಇನ್ಸ್‌ಪೆಕ್ಟರ್, ಇಬ್ಬರು ಪಿಸಿಗಳು ಮತ್ತು ಫೋರೆನ್ಸಿಕ್ ವಿಭಾಗದ ಇಬ್ಬರ ಜತೆ ಹಾಜರಾಗಿದ್ದ. ಹೋಟೆಲ್ಲಿನ ಮ್ಯಾನೇಜರ್ ಮತ್ತು ಒಂದಿಬ್ಬರು ಸಿಬ್ಬಂದಿಯೂ ಅಲ್ಲಿದ್ದರು. ಬೆದರಿ ನಡುಗುತ್ತ ನಿಂತಿದ್ದ ರಮೇಶನ ಬಳಿ ಹೋಗಿ ಹೆಗಲ ಮೇಲೆ ಕೈಹಾಕಿ ಧೈರ್ಯ ತುಂಬಲು ಪ್ರಯತ್ನಿಸಿದೆ. ಆತ ಬಹಳವಾಗಿಯೇ ಹೆದರಿಬಿಟ್ಟಿದ್ದ. ಸ್ನೇಹಿತನ ಮೇಲೆ ಆಗಿರುವ ಹಠಾತ್ ಆಕ್ರಮಣದಿಂದಾಗಿ ನನಗೂ ಶಾಕ್ ಆಗಿತ್ತಾದರೂ ಇಂತಹ ನೂರಾರು ಕೇಸುಗಳನ್ನು ನೋಡಿದ್ದರಿಂದ ಧೈರ್ಯವಾಗಿದ್ದೆ.
‘ಸತೀಶ್ ಸರ್, ನೀವು ಬರ‍್ಲೀಂತಾನೇ ಕಾಯ್ತಿದ್ದೆ’ ಎನ್ನುತ್ತಾ ಇನ್ಸ್‌ಪೆಕ್ಟರ್ ಮೋಹನ್ ಕೈ ಮುಂದೆ ಚಾಚಿದ. ಅವನ ಕೈ ಕುಲುಕಿ ಮತ್ತೆ ರಮೇಶನ ಬಳಿ ಬಂದೆ. ಇನ್ಸ್‌ಪೆಕ್ಟರ್ ಮೋಹನ್ ಆ ವೇಳೆಗಾಗಲೇ ಪ್ರಾಥಮಿಕ ವಿಚಾರಣೆಯನ್ನು ಮಾಡಿದ್ದನೆನಿಸುತ್ತದೆ. ರಮೇಶ ಇನ್ನಷ್ಟು ಹೆದರಲು ಅದು ಕಾರಣವಾಗಿತ್ತು.
ರೂಮಿನ ಬಾಗಿಲು ತೆರೆಯಲು ಪ್ರಯತ್ನಿಸಿದರೆ ಅದು ಒಳಗಿನಿಂದ ಲಾಕ್ ಆಗಿತ್ತು. ಇನ್ಸ್‌ಪೆಕ್ಟರ್ ಮೋಹನ್ ರಮೇಶನ ಬಳಿ ಬಂದು ಕೇಳಿದ ‘ನೀವು ‘ರೂಮಿನೊಳಗೆ ಹೋಗಿದ್ದೆ, ಅಲ್ಲಿ ಗೋಪಿಯವರು ಹಾಸಿಗೆಯ ಮೇಲೆ ಬಿದ್ದಿದ್ದನ್ನು ನೋಡಿದೆ’ ಅಂತ ಹೇಳಿದಿರಿ. ಆದರೆ ಈಗ ರೂಂ ಲಾಕ್ ಆಗಿದೆಯಲ್ಲಾ....?"
‘ನಾನು ಬಂದಾಗ ಬಾಗಿಲು ಸ್ವಲ್ಪ ಓಪನ್ ಇತ್ತು. ತಳ್ಳಿದರೆ ತೆಕ್ಕೊಂಡ್ತು. ಹೊರಗೆ ಬರೋಕೆ ನೋಡಿದಾಗ ಬಾಗಿಲು ಲಾಕ್ ಆಗಿತ್ತು. ಒಳಗಿನಿಂದ ತೆಕ್ಕೊಂಡು ಆಚೆ ಓಡಿ ಬಂದೆ. ಆಗ ಮತ್ತೆ ಲಾಕ್ ಆಗಿರ್ಬೇಕು’ ರಮೇಶ ಸಮಜಾಯಿಷಿ ಹೇಳಿದ.
ಆಗ ಇನ್ಸ್‌ಪೆಕ್ಟರ್ ಮೋಹನ್‌ನ ದೃಷ್ಟಿ ಹೋಟೆಲ್ಲಿನ ಮ್ಯಾನೇಜರ್‌ನೆಡೆಗೆ ಸರಿಯಿತು.
‘ಸಾರ್, ಸ್ಪ್ರಿಂಗ್ ಡೋರ್ ಆದ್ರಿಂದ ಆಟೋಮ್ಯಾಟಿಕ್ ಆಗಿ ಕ್ಲೋಸ್ ಆಗಿ ಲಾಕ್ ಆಗಿಬಿಡತ್ತೆ. ಒಳಗಿದ್ದವರು ತೆರೆಯಬಹುದು, ನಾವು ಕೊಡುವ ಅಕ್ಸೆಸ್ ಕಾರ್ಡ್ ಯೂಸ್ ಮಾಡಿ ಹೊರಗಿನಿಂದ ಓಪನ್ ಮಾಡಬಹುದು. ವೈಡ್ ಓಪನ್ ಆಗಿದ್ದರೆ ಮಾತ್ರ ಮ್ಯಾಗ್ನೆಟ್ ಮೂಲಕ ಗೋಡೆಗೆ ಅಂಟಿಕೊಂಡಿರತ್ತೆ. ತಳ್ಳಿದರೆ ಬರೋ ತರಹ ಯಾವಾಗ್ಲೂ ಇರಲ್ಲ’ ಮ್ಯಾನೇಜರ್ ವಿವರಿಸಿದ.
‘ಒಂದು ವೇಳೆ ಒಳಗಿನ ಲ್ಯಾಚ್ ಮುಂದೆ ಮಾಡಿದ್ರೆ ಬಾಗಿಲು ಸ್ವಲ್ಪ ತೆಕ್ಕೊಂಡಿರೋ ಸಾಧ್ಯತೆ ಇದೆಯಲ್ವಾ?’ ಇನ್ಸ್‌ಪೆಕ್ಟರ್ ಮೋಹನ್ ಕೇಳಿದ.
ಹೋಟೆಲ್ಲಿನ ಮ್ಯಾನೇಜರ್ ‘ಹೌದು’ ಎನ್ನುವಂತೆ ತಲೆ ಆಡಿಸಿದ.
‘ಆದರೆ ರಮೇಶ ಒಳಗೆ ಹೋಗಿ ಆಚೆ ಬರೋಕೆ ನೋಡಿದಾಗ ಬಾಗಿಲು ಹಾಕಿತ್ತು. ಅಲ್ಲದೆ ಅವನು ಒಳಗಿನಿಂದ ತೆಕ್ಕೊಂಡು ಆಚೆ ಬಂದ ಮೇಲೆ ಮತ್ತೆ ಹಾಕ್ಕೊಂಡಿದೆಯಲ್ಲಾ. ಲ್ಯಾಚ್ ಮುಂದೆ ಮಾಡಿದ್ರೆ ಇದು ಸಾಧ್ಯವಿಲ್ಲ ಅಲ್ವಾ?’ ನಾನು ಮಧ್ಯೆ ಬಾಯಿ ಹಾಕಿದೆ. ಇನ್ಸ್‌ಪೆಕ್ಟರ್ ಮೋಹನ್ ರಮೇಶನ ಕಡೆ ನೋಡಿದ ‘ನೀವು ಇದಕ್ಕೆ ಏನು ಹೇಳ್ತೀರಿ’ ಎನ್ನುವಂತೆ.
ರಮೇಶ ಮತ್ತಷ್ಟು ಗಾಬರಿಯಾದ. ನನ್ನ ಹತ್ತಿರಕ್ಕೆ ಬಂದು ನಿಂತು ‘ಸತೀಶಾ, ನಾನು ನಿಜ ಹೇಳ್ತಿದೀನೋ. ನಾನು ಬಂದಾಗ ಬಾಗಿಲು ಲಾಕ್ ಆಗಿರ್ಲಿಲ್ಲ. ತಳ್ಕೊಂಡು ಒಳಗೆ ಹೋದೆ. ವಾಪಸ್ ಬರೋವಾಗ ಹಾಕ್ಕೊಂಡಿತ್ತು’ ಎಂದ. ‘ಇರ್ಲಿ ತಡಿಯೋ, ಅದೇನೂಂತ ಆಮೇಲೆ ನೋಡಿದ್ರಾಯ್ತು’ ನಾನವನಿಗೆ ಸಮಾಧಾನ ಹೇಳಿ ‘ಮಿ.ಮೋಹನ್, ಸ್ವಲ್ಪ ಕನ್ಫ್ಯೂಷನ್ ಇದ್ದ ಹಾಗಿದೆ. ಅದನ್ನ ಆಮೇಲೆ ನೋಡಬಹುದಲ್ವಾ? ಈಗ ಮೊದಲು ರೂಮೊಳಗೆ ಹೋಗೋಣ. ಗೋಪಿಗೆ ಜೀವ ಇದ್ರೂ ಇರಬಹುದು’ ಎಂದು ಇನ್ಸ್‌ಪೆಕ್ಟರ್‌ಗೆ ಹೇಳಿದೆ.
ಇನ್ಸ್‌ಪೆಕ್ಟರ್ ಮೋಹನ್ ಮ್ಯಾನೇಜರ್‌ಗೆ ರೂಮಿನ ಡ್ಯೂಪ್ಲಿಕೇಟ್ ಆಕ್ಸೆಸ್ ಕಾರ್ಡ್ ತರುವಂತೆ ತಿಳಿಸಿದ. ಆತ ರಿಸೆಪ್ಷನ್‌ಗೆ ಕಾಲ್ ಮಾಡಿ ಕಾರ್ಡ್ ಕಳಿಸಲು ಹೇಳಿದ. ಒಂದೆರಡು ನಿಮಿಷದಲ್ಲಿ ಕಾರ್ಡ್ ಬಂತು. ಅದನ್ನು ಬಳಸಿ ರೂಮಿನ ಬಾಗಿಲನ್ನು ತೆಗೆಯಲಾಯ್ತು.
ಇನ್ಸ್‌ಪೆಕ್ಟರ್ ಮೋಹನ್ ಒಬ್ಬ ಪಿಸಿಯನ್ನು ಹೊರಗೆ ಇರುವಂತೆ ತಿಳಿಸಿ, ಆ ವೇಳೆಗೆ ಅಲ್ಲಿ ನೆರೆದಿದ್ದ ಜನರನ್ನು ದೂರ ಕಳಿಸುವಂತೆ ಹೇಳಿದ. ಇನ್ನುಳಿದ ನಾವು ಒಳಗೆ ಹೋದೆವು. ಗೋಪಿ ಅಂಗಾತನಾಗಿ ಹಾಸಿಗೆಯ ಮೇಲೆ ಬಿದ್ದಿದ್ದ. ಕಾಲುಗಳು ಕೆಳಗೆ ನೇತಾಡುವ ಸ್ಥಿತಿಯಲ್ಲಿದ್ದವು. ಉಸಿರಾಟದ ಯಾವ ಲಕ್ಷಣವೂ ಕಾಣಲಿಲ್ಲ. ಎದೆ ಮತ್ತು ಹೊಟ್ಟೆಯ ಭಾಗದಲ್ಲಿ ಗಾಯವಾಗಿ ರಕ್ತ ಇಳಿದು ಅವನ ಶರ್ಟ್ ಮತ್ತು ಹಾಸಿಗೆಯ ಬಿಳಿಬಣ್ಣದ ಬೆಡ್‌ಸ್ಪ್ರೆಡ್ ತೊಯ್ದಿತ್ತು. ಕಾಲುಗಳನ್ನು ಕೆಳಗೆ ಇಳಿಬಿಟ್ಟು ಮಂಚದ ಮೇಲೆ ಕುಳಿತಿದ್ದಾಗ ಆಕ್ರಮಣ ಮಾಡಿದಂತೆ ಅನ್ನಿಸುತ್ತಿತ್ತು. ಆದರೆ ಅಲ್ಲೆಲ್ಲೂ ಯಾವ ಆಯುಧವೂ ಕಾಣಲಿಲ್ಲವಾದ್ದರಿಂದ, ಸಾವು ಘಟಿಸಿದ ಕಾರಣ ತಿಳಿಯಲು ಶವದ ಪೋಸ್ಟ್‌ಮಾರ್ಟಂಗಾಗಿ ಕಾಯಲೇಬೇಕಿತ್ತು. ‘ಈ ಗಾಯಗಳನ್ನು ನೋಡಿದ್ರೆ ಸೂಸೈಡ್ ಅಂತ ಅನ್ನಿಸಲ್ಲ ಅಲ್ವಾ ಸರ್?’ ಎಂದು ಇನ್ಸ್‌ಪೆಕ್ಟರ್ ಮೋಹನ್ ನನ್ನ ಮನಸ್ಸಿನಲ್ಲಿದ್ದುದನ್ನೇ ಕೇಳಿದ. ‘ಹೌದೆಂದೆ’.
ಫೋರೆನ್ಸಿಕ್‌ನವರ ಪೈಕಿ ಒಬ್ಬಾತ ಅಲ್ಲಿನ ಫೋಟೋಗಳನ್ನು ತೆಗೆದುಕೊಂಡ. ಮತ್ತೊಬ್ಬ ಬೆರಳ ಗುರುತುಗಳಿಗಾಗಿ, ಮತ್ತು ಇನ್ನೇನಾದರೂ ಕ್ಲೂ ಸಿಗಬಹುದೇ ಎಂದು ಹುಡುಕುತ್ತಿದ್ದ. ಗೋಪಿಯ ಬ್ರೀಫ್‌ಕೇಸ್ ಮತ್ತು ಮೊಬೈಲ್ ಫೋನ್ ಹಾಸಿಗೆಯ ಮೇಲೆ ಇದ್ದವು. ಬ್ರೀಫ್‌ಕೇಸ್ ತೆರೆದಿತ್ತು. ಒಳಗಿದ್ದ ಒಂದಷ್ಟು ವಸ್ತುಗಳು ಚೆಲ್ಲಾಪಿಲ್ಲಿಯಾಗಿದ್ದವು. ನಾನೂ ಎಲ್ಲೆಡೆ ಕಣ್ಣಾಡಿಸಿದೆ. ಬಾತ್‌ರೂಮಿನ ಬಾಗಿಲ ಪಕ್ಕ ಗೋಡೆಗೆ ಸಮೀಪವಾಗಿ ಬಿದ್ದಿದ್ದ ಮತ್ತೊಂದು ಮೊಬೈಲ್ ಗೋಚರಿಸಿತು. ರಮೇಶನೂ ಅದನ್ನು ಗಮನಿಸಿದನೇನೋ, ‘ನನ್ನ ಫೋನ್’ ಎನ್ನುತ್ತಾ ತೆಗೆದುಕೊಳ್ಳಲು ಬಾಗಿದವನನ್ನು ತಡೆದು, ಇನ್ಸ್‌ಪೆಕ್ಟರ್ ಮೋಹನ್‌ಗೆ ತೋರಿಸಿದೆ. ಆತ ಅದನ್ನು ಕರವಸ್ತ್ರ ಬಳಸಿ ತೆಗೆದಿಟ್ಟುಕೊಂಡ. ಇದಿಷ್ಟು ಬಿಟ್ಟರೆ ಅಂತಹ ವಿಶೇಷವಾದುದು ಏನೂ ಕಣ್ಣಿಗೆ ಬೀಳಲಿಲ್ಲ. ಶವವನ್ನು ಪೋಸ್ಟ್ ಮಾರ್ಟಮ್ಮಿಗೆ ಕಳಿಸುವಂತೆ ತನ್ನ ಸಹಾಯಕನಿಗೆ ತಿಳಿಸಿದ ಇನ್ಸ್‌ಪೆಕ್ಟರ್ ಮೋಹನ್ ರಮೇಶನನ್ನು ತನ್ನೊಡನೆ ಸ್ಟೇಷನ್ನಿಗೆ ಬರಲು ತಿಳಿಸಿದ. ನಾನೂ ಅವನೊಡನೆ ಹೋದೆ.
ಇನ್ಸ್‌ಪೆಕ್ಟರ್ ಮೋಹನ್ ತನ್ನ ಕುರ್ಚಿಯಲ್ಲಿ ಕುಳಿತ. ಅವನ ಎದುರಿನ ಕುರ್ಚಿಗಳಲ್ಲಿ ನಾವಿಬ್ಬರೂ ಕುಳಿತೆವು. ‘ಒಂದು ನಿಮಿಷ’ ಎನ್ನುತ್ತಾ ವಾಯ್ಸ್ ರೆಕಾರ್ಡರ್ ಒಂದನ್ನು ಆನ್ ಮಾಡಿ ನಮಗೂ ಅವನಿಗೂ ನಡುವೆ ಇದ್ದ ಟೇಬಲ್ ಮೇಲೆ ಇಟ್ಟು ಒಮ್ಮೆ ಚೆಕ್ ಮಾಡಿದ. ಅದು ಸರಿ ಇದೆಯೆಂದು ಖಾತ್ರಿ ಮಾಡಿಕೊಂಡು ‘ಸರ್, ಈಗ ಡಿಟೈಲ್ ಆಗಿ ಹೇಳಿ. ನಿಮಗೂ ಈಗ ಕೊಲೆ ಆದವರಿಗೂ ಏನು ಸಂಬಂಧ? ನೀವು ಆ ಹೋಟೆಲ್ಲಿಗೆ ಯಾಕೆ ಹೋಗಿದ್ರಿ, ಅಲ್ಲಿ ಏನೇನಾಯ್ತು?’ ಇನ್ಸ್‌ಪೆಕ್ಟರ್ ಮೋಹನ್ ರಮೇಶನನ್ನು ಉದ್ದೇಶಿಸಿ ಕೇಳಿದ. ನಾನು ಜತೆಗೆ ಇದ್ದುದರಿಂದ ಅವನ ಧ್ವನಿ ಸ್ವಲ್ಪ ಮೃದುವಾಗಿತ್ತೆನಿಸಿತು. ನಾನು ರಮೇಶನ ಭುಜದ ಮೇಲೆ ಕೈಹಾಕಿ ಹೇಳಿದೆ ‘ರಮೇಶಾ, ನಿಂಗೆ ತಿಳ್ದಿರೋದನ್ನೆಲ್ಲಾ ಹೇಳು. ಏನೂ ಮುಚ್ಚಿಡೊದು, ಸುಳ್ಳು ಹೇಳೋದು ಬೇಡ. ಹಾಗೆ ಮಾಡಿದ್ರೆ ಮುಂದೆ ನೀನೇ ತೊಂದರೆಗೆ ಸಿಕ್ಕಿ ಹಾಕಿಕೊಳ್ತೀಯಾ. ಧೈರ್ಯವಾಗಿರು, ಏನೂ ಆಗಲ್ಲಾ’.
ಟೇಬಲ್ ಮೇಲಿದ್ದ ನೀರಿನ ಬಾಟಲಿನಿಂದ ಸ್ವಲ್ಪ ನೀರು ಕುಡಿದು ಸುಧಾರಿಸಿಕೊಂಡ ರಮೇಶ ಹೇಳತೊಡಗಿದ -
‘ನಾನು ರಮೇಶ್ ಮೆಹ್ತಾ ಅಂತ. ಗಾಂಧಿ ಪೇಟೇಲಿ ‘ಜಿ ಆರ್ ಅಸೋಸಿಯೇಟ್ಸ್’ ಅಂತ ಇದೆಯಲ್ಲಾ ಅದರ ಪಾರ್ಟ್ನರ್. ಈಗ ತೀರ್ಕೊಂಡಿರೋ ಗೋಪಾಲ್ ರಾವ್ ನನ್ನ ಇನ್ನೊಬ್ಬ ಪಾರ್ಟ್ನರ್. ನಾವು ಎಲೆಕ್ಟ್ರಾನಿಕ್ಸ್ ಮತ್ತು ಹೌಸ್ ಹೋಲ್ಡ್ ಐಟಂಗಳ ಹೋಲ್‌ಸೇಲ್ ಸಪ್ಲೈಯರ್ಸ್. ಇಪ್ಪತ್ತೆರಡು ವರ್ಷಗಳಿಂದ ಈ ಫರ್ಮನ್ನ ನಡೆಸ್ತಾ ಇದೀವಿ. ನಾನು, ಸತೀಶ್ಚಂದ್ರ ಮತ್ತು ಗೋಪಿ ಕಾಲೇಜು ದಿನಗಳಿಂದ ಫ್ರೆಂಡ್ಸ್. ಮದುವೆಗಳಾದ ಮೇಲೂ ನಮ್ಮ ಮೂರು ಫ್ಯಾಮಿಲಿಗಳೂ ತುಂಬಾ ಕ್ಲೋಸ್ ಆಗಿದೀವಿ. ಗೋಪಿಗೆ ಶಿವಮೊಗ್ಗದ ಹತ್ರ ತುಂಬಾ ಆಸ್ತಿ ಇದೆ. ಅವನ ತಂದೆಗೆ ವಯಸ್ಸಾಗಿದೆ. ಅದನ್ನ ನೋಡ್ಕಳಕ್ಕೆ ಆಗಲ್ಲ. ಅದಕ್ಕೆ ಹೋದ್ವರ್ಷ ಗೋಪಿ ಶಿವಮೊಗ್ಗಕ್ಕೆ ಫ್ಯಾಮಿಲಿ ಶಿಫ್ಟ್ ಮಾಡಿದ. ಆಗಾಗ್ಗೆ ಬಂದು ಇಲ್ಲಿನ ವ್ಯವಹಾರವನ್ನು ನೋಡ್ಕೊತಿದ್ದ. ಕೊನೆಗೆ ಅದೂ ಸಾಕಾಗಿ ಊರಲ್ಲೇ ಇದ್ದುಬಿಡೋದು ಅಂತ ತೀರ್ಮಾನ ಮಾಡ್ದ. ಪಾರ್ಟ್ನರ್‌ಶಿಪ್ ಕ್ಯಾನ್ಸಲ್ ಮಾಡಕ್ಕೆ ಇಬ್ಬರೂ ಪರಸ್ಪರ ಒಪ್ಪಿಗೆಯಿಂದ ತೀರ್ಮಾನ ಮಾಡಿದ್ವಿ. ಆ ವಿಷಯ ಮಾತಾಡಕ್ಕೆ ಗೋಪಿ ನೆನ್ನೆ ಬಂದು ಹೋಟ್ಳಲ್ಲಿ ಉಳ್ಕೊಂಡಿದ್ದ.
ಅವನು ಶಿವಮೊಗ್ಗದಿಂದ ಡ್ರೈವ್ ಮಾಡ್ಕೊಂಡು ಬಂದಿದ್ದ. ಹಾಗಾಗಿ ‘ಸ್ವಲ್ಪ ರೆಸ್ಟ್ ತಗೋತೀನಿ ಕಣೋ. ರಾತ್ರಿ ಎಂಟಕ್ಕೆ ಬಾ, ಊಟ ಮಾಡ್ತಾ ಮಾತಾಡೋಣ’ ಅಂದಿದ್ದ. ನಾನು ಟ್ರಾಫಿಕ್ಕಲ್ಲಿ ಸಿಗಾಕ್ಕೊಂಡು, ಹೊಟೆಲ್ ತಲುಪೋದು ಕಾಲು ಗಂಟೆ ತಡ ಆಯ್ತು. ಹೊಟೆಲ್‌ಗೆ ತಲುಪಿ ಅವನಿಗೆ ಕಾಲ್ ಮಾಡ್ದೆ. ಅವನು ರಿಸೀವ್ ಮಾಡ್ಲಿಲ್ಲ.
ರೂಮಿನ ಹತ್ರ ಬಂದು ಬೆಲ್ ಮಾಡ್ದೆ. ಉತ್ತರ ಬರ್ಲಿಲ್ಲ. ಬಾಗಿಲು ಸ್ವಲ್ಪ ಓಪನ್ ಇದ್ದ ಹಾಗನ್ನಿಸ್ತು. ತಳ್ಳಿದ್ರೆ ತೆಕ್ಕೊಂಡ್ತು. ಒಳಗೆ ಹೋಗಿ ನೋಡ್ದಾಗ ಗೋಪಿ ಹಾಸಿಗೆ ಮೇಲೆ ಬಿದ್ದಿದ್ದ. ಬಟ್ಟೆಯೆಲ್ಲಾ ರಕ್ತವಾಗಿತ್ತು. ನಂಗೆ ಗಾಬರಿಯಾಗಿ ಗಡ ಗಡ ನಡುಗೋ ಹಾಗಾಯ್ತು. ಹೊರಕ್ಕೆ ಬರೋಣ ಅಂತ ಬಾಗಿಲ ಹತ್ರ ಬಂದೆ. ಬಾಗಿಲು ಹಾಕ್ಕೊಂಡಿತ್ತು. ತೆಕ್ಕೊಂಡು ಹೊರಗೆ ಬಂದೆ. ಸತೀಶಂಗೆ ಫೋನ್ ಮಾಡೋಣ ಅಂತ ನೋಡಿದ್ರೆ ಫೋನ್ ಕೈಯಲ್ಲಿರ್ಲಿಲ್ಲ. ರೂಮೊಳಗೇ ಬಿದ್ದುಹೋಗಿತ್ತು. ಮತ್ತೆ ಅಲ್ಲಿಗೆ ಹೋಗೋಕೆ ಭಯ ಆಯ್ತು. ಕೆಳಗೆ ಬಂದು ಹೋಟೆಲ್ ರಿಸೆಪ್ಷನ್‌ನಿಂದ ಇವನಿಗೆ ಕಾಲ್ ಮಾಡಿ ವಿಷಯ ತಿಳಿಸಿದೆ. ಆಮೇಲೆ ಹೋಟೆಲ್ಲಿನವರಿಗೂ ಹೇಳ್ದೆ. ನೀವು ಬರೋವರ್ಗೂ ಅಲ್ಲೇ ಇದ್ದೆ’
‘ನೀವಿಬ್ರೂ ಪಾರ್ಟ್ನರ್‌ಶಿಪ್‌ನಲ್ಲಿ ನಡೆಸ್ತಾ ಇರೋ ಫರ್ಮ್ ವಿಚಾರದಲ್ಲಿ ಇಬ್ಬರ ಮಧ್ಯೆ ಯಾವಾಗ್ಲಾದ್ರೂ ಜಗಳ, ಮನಸ್ತಾಪ ಆಗಿತ್ತಾ? ಅವರು ಶಿವಮೊಗ್ಗಕ್ಕೆ ಹೋಗಿ ಸೆಟಲ್ ಆಗೋದು ಅಂತಾದ ಮೇಲೆ ಫರ್ಮ್ ಕ್ಲೋಸ್ ಮಾಡೋ ಉದ್ದೇಶ ಏನಾದ್ರೂ ಇತ್ತಾ?’ ಇನ್ಸ್‌ಪೆಕ್ಟರ್ ಮೋಹನ್ ಕೇಳಿದ.
‘ನಮ್ಮ ಸ್ನೇಹ ಮುವ್ವತ್ತು ವರ್ಷಕ್ಕೂ ಹಳೇದು. ಒಂದೇ ಮನೆಯೋರ ಥರಾ ಇದ್ವಿ. ಫರ್ಮ್ ವಿಚಾರದಲ್ಲಾಗ್ಲೀ, ಲಾಭ ನಷ್ಟದ ವಿಚಾರ್ದಲ್ಲಾಗ್ಲೀ ನಮ್ಮ ಮಧ್ಯೆ ಯಾವ ತಕರಾರೂ ಇರ್ಲಿಲ್ಲ. ಇಬ್ರೂ ಒಬ್ಬರನ್ನೊಬ್ರು ಅಷ್ಟು ನಂಬ್ತಿದ್ವಿ. ಅವನು ಶಿವಮೊಗ್ಗಕ್ಕೆ ಹೋಗೋದು ಅನಿವಾರ್ಯ ಆದ್ರಿಂದ ಈ ಬಿಸಿನೆಸ್‌ನಿಂದ ಆಚೆ ಬರೋಕೆ ತೀರ್ಮಾನ ಮಾಡಿದ್ದ. ಅಷ್ಟೇ. ಅವನ ಪಾಲಿಂದು ಹಣ ಕೊಟ್ಟು ಫರ್ಮನ್ನ ಪೂರ್ತಾ ನಾನೇ ವಹಿಸ್ಕೊಳ್ಳೋದು ಅಂತ ಅಭಿಪ್ರಾಯ ಇತ್ತು. ಅದೊಂದು ತೀರ್ಮಾನ ಆಗ್ಬೇಕಿತ್ತು. ಅದಕ್ಕೆ ನನ್ನನ್ನ ಹೋಟೆಲ್ಲಿಗೆ ಬರೋಕೆ ಹೇಳಿದ್ದ. ಸತೀಶಂಗೆ ನಮ್ಮ ವಿಚಾರ ಎಲ್ಲಾ ಗೊತ್ತು. ಕೇಳಿ ಬೇಕಾದ್ರೆ’ ರಮೇಶ ಉತ್ತರಿಸಿದ.
‘ಅಂದ್ರೆ, ನೀವು ಗೋಪಿಯವರಿಗೆ ದೊಡ್ಡ ಮೊತ್ತದ ಹಣ ಕೊಡಬೇಕಾಗ್ತಿತ್ತು ಅಲ್ವಾ? ಅದನ್ನ ಉಳಿಸೋಕೇನಾದ್ರೂ....?’ ಇನ್ಸ್‌ಪೆಕ್ಟರ್ ಮೋಹನ್ ತನ್ನ ಪೋಲೀಸ್ ತರ್ಕ ಮಂಡಿಸಿದ.
‘ಮೋಹನ್ ಅವರೇ, ನಿಜ ಹೇಳ್ಬೇಕಂದ್ರೆ ಇವರ ಮಧ್ಯೆ ಹಣದ ವಿಚಾರ ಮುಖ್ಯವೇ ಆಗಿರ್ಲಿಲ್ಲ. ಏನೂ ಹಣ ತಗೊಳ್ದೆ ಪೂರ್ತಾ ರಮೇಶನ ಹೆಸರಿಗೆ ಈ ಫರ್ಮನ್ನ ಮಾಡೋ ಅಷ್ಟು ಧಾರಾಳಿ ನಮ್ಮ ಗೋಪಿ. ಹಾಗಾಗಿ, ನೀವು ರಮೇಶನಿಗೆ ಮೋಟೀವ್ ಇತ್ತು ಅನ್ನೋ ರೀತಿ ಯೋಚಿಸೋ ಅಗತ್ಯವಿಲ್ಲ’ ನಾನು ಖಡಕ್ಕಾಗಿ ಹೇಳಿದೆ.
‘ಹಾಗಲ್ಲಾ ಸರ್, ಕ್ಯಾಷುವಲ್ ಆಗಿ ಕೇಳ್ದೆ. ವಿಚಾರಣೆ ಮಾಡಿ ಕೇಸನ್ನ ಒಂದು ಗತಿ ಕಾಣಿಸಬೇಕಲ್ಲಾ’ ಇನ್ಸ್‌ಪೆಕ್ಟರ್ ಮೋಹನ್ ಹೇಳಿದ.
‘ಸಾರಿ. ನಿಮ್ಮನ್ನ ಆಕ್ಷೇಪಿಸ್ತಾ ಇಲ್ಲ ನಾನು. ನನ್ನ ಅಭಿಪ್ರಾಯ ಹೇಳ್ದೆ ಅಷ್ಟೇ’ ನಾನು ಅವನಿಗೆ ಸಮಾಧಾನ ಹೇಳಿದೆ.
‘ಸರಿ ಸರ್, ನೀವಿಬ್ರೂ ಹೊರಡಿ. ಈಗಾಗ್ಲೇ ತುಂಬಾ ರಾತ್ರಿಯಾಗಿದೆ. ಪೋಸ್ಟ್‌ಮಾರ್ಟಂ ರಿಪೋರ್ಟ್, ಫೋರೆನ್ಸಿಕ್ ರಿಪೋರ್ಟ್ ಬಂದ ಮೇಲೆ ನಾನು ಕಾಲ್ ಮಾಡ್ತೀನಿ. ಮಿ. ರಮೇಶ್, ನೀವು ನಮಗೆ ತಿಳಿಸದೆ ಊರು ಬಿಟ್ಟು ಹೋಗೋ ಹಾಗಿಲ್ಲ. ನೆನಪಿರಲಿ’ ಎಂದ ಇನ್ಸ್‌ಪೆಕ್ಟರ್ ಮೋಹನ್.
ನನ್ನ ಕಾರಿನಲ್ಲಿ ಸ್ಟೇಷನ್ನಿಗೆ ಹೋಗಿದ್ದೆವು. ರಮೇಶನ ಕಾರು ಹೋಟೆಲ್ಲಲ್ಲೇ ಇತ್ತು. ಈ ಪರಿಸ್ಥಿತಿಯಲ್ಲಿ ಅವನು ಡ್ರೈವ್ ಮಾಡಲಾರ ಎಂದು ನನಗನ್ನಿಸಿತು. ಹಾಗಾಗಿ ‘ರಮೇಶಾ ನಿನ್ನ ಕಾರನ್ನ ನಾಳೆ ತಂದ್ರಾಯ್ತು. ಈಗ ನಾನೇ ನಿನ್ನನ್ನ ಮನೆಗೆ ಬಿಟ್ಟು ಹೋಗ್ತೀನಿ’ ಅಂದೆ. ಅವನ ಮನೆ ತಲುಪಿದಾಗ ಮನೆಯಲ್ಲಿ ಯಾರೂ ಮಲಗೇ ಇರಲಿಲ್ಲ. ನಡೆದದ್ದನ್ನ ತಿಳಿಸಿ, ಬರೋದು ತಡ ಆಗ್ಬಹುದು ಎಂದು ಮೊದಲೇ ಹೇಳಿದ್ದರಿಂದ ಎಲ್ಲರೂ ಆತಂಕದಿಂದ ಕಾಯುತ್ತಿದ್ದರು. ಅವರಿಗೆಲ್ಲ ಸೂಕ್ಷ್ಮವಾಗಿ ವಿಷಯ ತಿಳಿಸಿ, ನಾನು ಮನೆ ತಲುಪಿದಾಗ ಗಂಟೆ ಒಂದೂವರೆಯಾಗಿತ್ತು.
ವಾಣಿಯೂ ನಿದ್ದೆ ಮಾಡದೆ ನನ್ನ ದಾರಿಯನ್ನೇ ನೋಡುತಿದ್ದಳು. ಹೋಟೆಲ್ಲಿನಲ್ಲಿ ಸ್ಟೇಷನ್ನಿನಲ್ಲಿ ನಡೆದ ವಿಷಯಗಳನ್ನೆಲ್ಲಾ ಅವಳಿಗೆ ವಿವರಿಸಿ ಹೇಳಿದಾಗ ‘ಅಯ್ಯೋ ರಮೇಶ್ ಮೇಲೆ ಅನುಮಾನಾನಾ? ಪಾಪ ಅಣ್ಣ ತಮ್ಮಂದಿರ ಹಾಗಿದ್ದರಲ್ರೀ’ ಎಂದು ತನ್ನ ಆತಂಕವನ್ನು ವ್ಯಕ್ತಪಡಿಸಿದಳು. ‘ಈಗ್ಲೇ ಏನೂ ಹೇಳಕ್ಕಾಗಲ್ಲ. ಪೋಲೀಸ್ನೋರು ಕಂಡೋರ ಮೇಲೆಲ್ಲಾ ಅನುಮಾನ ಪಡ್ಲೇ ಬೇಕಾಗುತ್ತೆ. ಒಬ್ಬಬ್ಬರನ್ನೇ ಲಿಸ್ಟಿಂದ ತೆಗೀತಾ ಕೊನೆಗೆ ಉಳಿಯೋ ಅಪರಾಧಿಯ ಮೇಲೆ ಕೇಸ್ ಹಾಕ್ತಾರೆ. ಸಾಕಷ್ಟು ಸಾಕ್ಷಗಳನ್ನು ಕಲೆ ಹಾಕಬೇಕಾಗುತ್ತೆ. ನೋಡೋಣ ಏನಾಗುತ್ತೇಂತ. ಈಗ ಮಲಗೋಣ, ನಡಿ’ ಅಂದೆ.
ಬೆಳಗಿನ ಜಾವ ನಾಲ್ಕು ಗಂಟೆಗೆ ಕಾಲಿಂಗ್ ಬೆಲ್ ಸದ್ದಾಯ್ತು. ಬಾಗಿಲು ತೆರೆದಾಗ ದುಃಖತಪ್ತ ಮುಖ ಹೊತ್ತ ಗೋಪಿಯ ಮನೆಯವರೆಲ್ಲರೂ ಬಂದಿದ್ದರು. ರಾತ್ರಿಯೇ ವಿಷಯ ತಿಳಿಸಿದ್ದರೂ ಶಿವಮೊಗ್ಗದಿಂದ ಹೊರಟು ಬರುವಷ್ಟರಲ್ಲಿ ಇಷ್ಟು ಹೊತ್ತಾಗಿತ್ತು. ಅವರ ದುಃಖ ಎಷ್ಟು ಸಮಾಧಾನ ಹೇಳಿದರೂ ಕಡಿಮೆಯಾಗಲೊಲ್ಲದು. ವಾಣಿ ಅವರನ್ನು ಸಮಾಧಾನ ಪಡಿಸಲು ಇನ್ನಿಲ್ಲದ ಪ್ರಯತ್ನ ಪಡುತ್ತಿದ್ದಳು. ಗಂಡಸರಿಗೆ ದುಃಖವಿದ್ದರೂ ಇದ್ದುದರಲ್ಲಿ ಶಾಂತವಾಗಿದ್ದರು. ‘ನಡೀರಿ ಹೋಗಿ ನೋಡೋಣ’ ಎಂದು ಕಾತರಿಸಿದ ಗೋಪಿಯ ಹೆಂಡತಿಗೆ ‘ಸ್ವಲ್ಪ ಸುಧಾರಿಸಿಕೊಳ್ಳಿ. ಪೋಸ್ಟ್ ಮಾರ್ಟಂ ಆಗಬೇಕು. ಆಮೇಲೆ ನಾನೇ ಫೋನ್ ಮಾಡ್ತೀನಿ ಅಂದಿದಾರೆ ಇನ್ಸ್‌ಪೆಕ್ಟರ್. ಬಹುಷಃ ಹತ್ತು ಗಂಟೆಯಾದರೂ ಆಗುತ್ತೆ. ಅಲ್ಲೀವರೆಗೆ ಕಾಯದೆ ವಿಧಿಯಿಲ್ಲ’ ಅಂದೆ.
ಯಾರಿಗೂ ಮಲಗುವ ಮನಸ್ಸಿಲ್ಲ. ವಾಣಿ ಅವರೆಲ್ಲರಿಗೂ ಕಾಫಿ ಮಾಡಿ ತಂದಳು. ಗೋಪಿಯ ಅಪ್ಪ, ಚಿಕ್ಕಪ್ಪ ಮತ್ತು ನಾನು ಮಾತ್ರ ಕುಡಿದೆವು. ಉಳಿದವರ‍್ಯಾರೂ ತೆಗೆದುಕೊಳ್ಳಲಿಲ್ಲ. ಅವರೆಲ್ಲರ ಸಲುವಾಗಿ ನಡೆದುದನ್ನೆಲ್ಲಾ ವಿವರಿಸಿದೆ. ‘ಯಾಕೆ ಹೀಗಾಯ್ತು? ಅವನಿಗೆ ಯಾರೂ ಶತ್ರುಗಳಿದ್ದ ಹಾಗಿಲ್ಲವಲ್ಲ’ ಅವನ ಚಿಕ್ಕಪ್ಪ ಆಶ್ಚರ್ಯ ವ್ಯಕ್ತಪಡಿಸಿದರು. ನನಗಾಗ ಗೋಪಿಯ ಪಿತ್ರಾರ್ಜಿತ ಆಸ್ತಿಯ ವ್ಯಾಜ್ಯದ ನೆನಪಾಯಿತು. ಇತ್ತೀಚೆಗಷ್ಟೆ ಅದು ಕೋರ್ಟಿನಲ್ಲಿ ತೀರ್ಮಾನವಾಗಿ ಇವರತ್ತ ಆಗಿತ್ತು. ಆಸ್ತಿ ಕೈತಪ್ಪಿ ಹೋಯ್ತೂಂತ ನಿಮ್ಮ ದಾಯಾದಿಗಳೇನಾದ್ರೂ ...?’ ಅನುಮಾನ ವ್ಯಕ್ತಪಡಿಸಿದೆ. ‘ಇದ್ರೂ ಇರಬಹುದು. ಹೇಳಕ್ಕಾಗಲ್ಲ. ಪೋಲೀಸ್ನೋರಿಗೆ ಇದನ್ನ ಹೇಳಿದ್ಯಾ?’ ಎಂದು ಕೇಳಿದರು ಗೋಪಿಯ ಅಪ್ಪ. ‘ಆ ಕ್ಷಣದಲ್ಲಿ ನಂಗೆ ಹೊಳೀಲಿಲ್ಲ. ಅಲ್ದೆ ಇನ್ನೂ ಸಾವು ಹೇಗೆ ಆಯ್ತು ಅಂತಾನೇ ಗೊತ್ತಾಗಿಲ್ಲ, ತನಿಖೆ ಶುರುವಾಗಿಲ್ಲ. ಕ್ರಮೇಣ ವಿಚಾರಣೆಗೆ ಬಂದಾಗ ಹೇಳಿದರಾಯ್ತು. ರಮೇಶನೇ ಮೊದಲು ನೋಡಿದ್ರಿಂದ ಅವನ ಹೇಳಿಕೆ ತಗೊಂಡಿದಾರಷ್ಟೇ’ ಎನ್ನುತ್ತಾ ಸ್ಟೇಷನ್ನಿನಲ್ಲಿ ನಡೆದುದನ್ನು ಹೇಳಿದೆ.
‘ಛೇ. ರಮೇಶನ ಮೇಲೆ ಅನುಮಾನ ಪಡೋದಾ? ನಮ್ ಗೋಪಿ ಹೋಗಿರ‍್ಬೋದು. ಅದಕ್ಕೆ ರಮೇಶನ್ನ ಹೊಣೆ ಮಾಡೋದು ಸಾಧ್ಯಾನೇ ಇಲ್ಲ. ದೇವರಂತಹ ಮನುಷ್ಯ ಅವ’ ಎಂದು ಗೋಪಿಯ ಅಪ್ಪ ಹೇಳಿದರು. ‘ವ್ಯವಹಾರದಲ್ಲಿ ಇರೋದ್ರಿಂದ, ಅದ್ರಲ್ಲೂ ಈಗ ಪಾರ್ಟ್ನರ್‌ಶಿಪ್ ಸೆಟಲ್ ಮಾಡೋ ವಿಷ್ಯ ಇದ್ದುದ್ರಿಂದ ಅನುಮಾನ ಬರೋದು ಸಹಜ. ಆದರೆ ನಮ್ಮ ರಮೇಶ ಅಂಥೋನಲ್ಲಾಂತ ನಾನೂ ಹೇಳಿದೀನಿ. ತನಿಖೆ ಆದರೆ ಎಲ್ಲಾ ಗೊತ್ತಾಗುತ್ತೆ’ ನಾನೆಂದೆ.
‘ನಿಜ ಹೇಳ್ಬೇಕೂಂದ್ರೆ ನಮ್ಮ ಗೋಪಿಗೆ ಅವನ ಬಂಡವಾಳದ ಬಗ್ಗೆ ರಮೇಶನಿಂದ ಹೆಚ್ಚೇನೂ ನಿರೀಕ್ಷೆ ಇರ್ಲಿಲ್ಲ. ಎಲ್ಲಾನೂ ಅವನಿಗೇ ಬಿಟ್ಟುಕೊಡ್ತೀನಿ ಅಂತ ಹೇಳಿಯೇ ಹೊರಟಿದ್ದ. ಕೋಟ್ಯಾಂತರ ಬೆಲೆಬಾಳುವ ಪಿತ್ರಾರ್ಜಿತ ಆಸ್ತಿ ನಮ್ಮ ಕೈಸೇರಿದ್ದು ಕೂಡಾ ಅವನ ಈ ತೀರ್ಮಾನಕ್ಕೆ ಕಾರಣ. ಆದರೆ ಅಷ್ಟರಲ್ಲಿ ಈ ಅನಾಹುತ ನಡೆದುಹೋಯ್ತು’ ಎನ್ನುತ್ತಾ ಗೋಪಿಯ ತಂದೆ ಗದ್ಗದಿತರಾದರು.
ಹನ್ನೊಂದು ಘಂಟೆಯ ಸಮಯಕ್ಕೆ ಇನ್ಸ್‌ಪೆಕ್ಟರ್ ಮೋಹನ್ ಕಾಲ್ ಮಾಡಿ ಹೇಳಿದ ‘ಸಾರ್ ಪೋಸ್ಟ್ ಮಾರ್ಟಂ ಆಗಿದೆ. ಗೌರ್ನಮೆಂಟ್ ಆಸ್ಪತ್ರೆ ಹತ್ರ ಬಂದ್ರೆ ಫಾರ್ಮಾಲಿಟೀಸ್ ಮುಗಿಸಿ ಬಾಡಿ ತಗೊಂಡು ಹೋಗಬಹುದು’.
ಎಲ್ಲರೂ ಹೊರಟು ಆಸ್ಪತ್ರೆಗೆ ಬಂದೆವು. ರಮೇಶನಿಗೂ ಕಾಲ್ ಮಾಡಿ ಹೇಳಿದ್ದೆನಾದ್ದರಿಂದ ಅವನೂ ತನ್ನ ಪತ್ನಿಯ ಸಂಗಡ ಬಂದಿದ್ದ. ಗೋಪಿಯ ಶವವನ್ನು ನೋಡುತ್ತಿದ್ದಂತೆ ಎಲ್ಲರ ಕಣ್ನಲ್ಲೂ ನೀರು. ಮಾತಾಡಲು ಯಾರಿಗೂ ಏನೂ ತೋಚದೆ, ಅಲ್ಲಿ ಮೌನ ಮಡುಗಟ್ಟಿತ್ತು. ದುಃಖದ ಸಾಮ್ರಾಜ್ಯ ನೆಲೆಸಿತ್ತು. ಕಾಗದಗಳಿಗೆ ಸಹಿ ಹಾಕಿ ಆಂಬುಲೆನ್ಸ್‌ನಲ್ಲಿ ಗೋಪಿಯ ಶವವನ್ನು ತೆಗೆದುಕೊಂಡು ಅವರೆಲ್ಲಾ ಹೊರಟಾಗ ಹನ್ನೆರಡು ಘಂಟೆ ಮೀರಿತ್ತು. ಹೇಗೂ ಇವತ್ತು ಅಂತ್ಯಸಂಸ್ಕಾರ ಸಾಧ್ಯವಿಲ್ಲ. ಏನಿದ್ದರೂ ನಾಳೆ ಬೆಳಿಗ್ಗೆಯ ನಂತರವೇ. ರಾತ್ರಿಯ ಟ್ರೈನಿಗೆ ಹೋದರಾಯ್ತು ಎಂದು ನಾನು ರಮೇಶ ತೀರ್ಮಾನಿಸಿದೆವು.
ಮತ್ತೊಮ್ಮೆ ಆ ಹೋಟೆಲ್ ರೂಮನ್ನು ಪರಿಶೀಲಿಸಬೇಕೆನಿಸಿತು ನನಗೆ. ರಮೇಶನ ಕಾರೂ ಅಲ್ಲಿತ್ತು. ಅದನ್ನೂ ತಂದ ಹಾಗಾಗುತ್ತೆ ಎಂದುಕೊಂಡು ಇನ್ಸ್‌ಪೆಕ್ಟರ್ ಮೋಹನ್‌ಗೆ ವಿಷಯ ತಿಳಿಸಿ ‘ಹೋಗಬಹುದೇ? ನಿಮ್ಮ ಅನುಮತಿ ಇದ್ದರೆ . . ?’ ಎಂದು ಕೇಳಿದೆ. ‘ಸರ್, ನೀವು ಹಾಗೆ ನನ್ನ ಪರ್ಮಿಷನ್ ಕೇಳಬೇಕಾದ್ದೇನಿಲ್ಲಾ. ಆದ್ರೂ ರೆಕಾರ್ಡ್ ಸಲುವಾಗಿ ನೋಟ್ ಮಾಡ್ಕೋತೀನಿ. ನಾನೂ ಬರ್ತೀನಿ. ನಡೀರಿ ಹೋಗೋಣ’ ಅಂದ. ನಮ್ಮ ನಮ್ಮ ಪತ್ನಿಯರನ್ನು ಆಟೋದಲ್ಲಿ ಮನೆಗೆ ತೆರಳುವಂತೆ ಹೇಳಿ ನಾವು ಹೋಟೆಲಿನತ್ತ ಹೊರಟೆವು.
‘ಪೋಸ್ಟ್‌ಮಾರ್ಟಂ ರಿಪೋರ್ಟ್ ಏನು ಹೇಳುತ್ತೆ, ಮೋಹನ್?’ ಎಂದು ಕೇಳಿದೆ. ‘ಹತ್ತಿರದಿಂದಲೇ ಗುಂಡು ಹಾರಿಸಿರೋದ್ರಿಂದ ಸಾವು ಸಂಭವಿಸಿದೆ. ಎರಡು ಗುಂಡುಗಳೂ ಸಿಕ್ಕಿವೆ, ಹೊಟ್ಟೆಯಲ್ಲೊಂದು, ಎದೆಯ ಭಾಗದಲ್ಲೊಂದು. ಆರ್ಡಿನರಿ ಪಿಸ್ತೂಲ್ ಅನ್ಸುತ್ತೆ. ಸಂಜೆ ಆರು ಘಂಟೆಯ ಸುಮಾರಿಗೆ ಅಂತಾರೆ ಸರ್’ ಎಂದ ಮೋಹನ್.
‘ಅಷ್ಟು ಹತ್ತಿರದಿಂದ ಅಂದ್ರೆ ಆತ್ಮಹತ್ಯೇನೂ ಇರಬಹುದಲ್ವಾ?’ ರಮೇಶ ಕೇಳಿದ. ಆಗ ತಾನು ಆಪಾದನೆಯಿಂದ ಪಾರಾಗಲು ಸಾಧ್ಯವೆಂದೆನಿಸಿತೇನೋ ಪಾಪ. ಅಲ್ಲವೆಂದು ನನ್ನ ಮನಸ್ಸು ಸಾರಿ ಸಾರಿ ಹೇಳುತ್ತಿತ್ತು. ‘ಇಲ್ಲಾ ಸಾರ್. ಗುಂಡು ಬಿದ್ದಿರೋ ಜಾಗ ನೋಡಿದ್ರೆ ಆತ್ಮಹತ್ಯೆ ಅಲ್ಲಾಂತ ಖಚಿತವಾಗಿ ಹೇಳ್ಬಹುದು. ಆತ್ಮಹತ್ಯೆ ಮಾಡ್ಕೊಳ್ಳೋರು ಸಾಧಾರಣವಾಗಿ ಹಣೆಯ ಪಕ್ಕಕ್ಕೆ ಗುಂಡು ಹಾರಿಸ್ಕೋತಾರೆ. ಅಲ್ಲದೆ ಒಂದು ಗುಂಡೇಟು ಬಿದ್ದ ಮೇಲೆ ಮತ್ತೊಂದು ಗುಂಡು ಹೊಡೆದುಕೊಳ್ಳೋಕೆ ಸಾಧ್ಯವಿಲ್ಲ. ನನಗ್ಯಾಕೋ ಇದು ಒಬ್ಬ ಅಡ್ಡ ಕಸುಬಿಯ ಕೆಲಸ ಅನ್ನಿಸ್ತಿದೆ. ಪ್ರೊಫೆಷನಲ್ ಕಿಲ್ಲರ್ ಕೆಲ್ಸ ಅಲ್ಲ ಇದು’ ಮೋಹನ್ ನನ್ನ ಮನಸ್ಸಿನಲ್ಲಿ ಇದ್ದುದನ್ನೇ ಹೇಳಿದ್ದ.
ಹೋಟೆಲ್ಲಿನ ಆ ರೂಮಿಗೆ ಮತ್ತೆ ಹೋಗಿ ನೋಡಿದೆವು. ಎಲ್ಲಾ ನೆನ್ನೆ ಇದ್ದ ಹಾಗೆಯೇ ಇತ್ತು. ವಾಪಸ್ ಹೊರಡಲು ಬಾಗಿಲ ಬಳಿ ಬಂದಾಗ ನೆಲದ ಮೇಲೆ ಮಡಿಚಿದ ಕಾಗದದ ತುಂಡೊಂದು ಬಿದ್ದಿದ್ದುದನ್ನು ನೋಡಿದೆ. ನಿನ್ನೆ ಅದನ್ನು ಯಾರೂ ಗಮನಿಸಿರಲಿಲ್ಲವೇನೋ. ಅಥವಾ ಗಮನಿಸಿದ್ದರೂ ಮಹತ್ವದ್ದು ಎನಿಸಿರಲಿಲ್ಲವೋ ಏನೋ. ಚಿಕ್ಕ ಕಾಗದವೊಂದನ್ನು ಮಡಿಕೆ ಮಾಡಿದಂತಿತ್ತು. ‘ಮೋಹನ್ ನೋಡಿ, ಇಲ್ಲಿ ಬಿದ್ದಿರೋ ಪೇಪರ್’ ಎಂದು ತೋರಿಸಿದೆ. ಮೋಹನ್ ಅದನ್ನು ಕರ್ಚೀಫಿನಿಂದ ಹಿಡಿದು ಮೇಲೆತ್ತಿ ಬಿಡಿಸಿದ. ‘ರೈಲ್ವೇ ಟಿಕೆಟ್ ಸರ್’ ಎಂದು ಉದಾಸೀನತೆಯಿಂದ ಹೇಳಿ, ಅದನ್ನು ಮತ್ತೆ ಕೆಳಗೆ ಹಾಕಲು ಹೊರಟ ಅವನನ್ನು ನಾನು ತಡೆದೆ.
‘ಮೋಹನ್, ಹಾಗೆ ಅದನ್ನ ನೆಗ್ಲೆಕ್ಟ್ ಮಾಡೋದು ಬೇಡ. ‘ನಾನು ಬಂದಾಗ ಬಾಗಿಲು ಸ್ವಲ್ಪ ತೆರೆದಿತ್ತು’ ಅಂತ ರಮೇಶ್ ಹೇಳಿದ್ರಲ್ಲಾ, ಆ ಮಿಸ್ಟರೀನ ಸಾಲ್ವ್ ಮಾಡತ್ತೆ ಇದು. ರೈಲ್ವೇ ಟಿಕೆಟನ್ನ ಸಣ್ಣಗೆ ಮಡಿಸಿ ಬಾಗಿಲ ಸಂದಿಗೆ ಇಟ್ಟಾಗ ಬಾಗಿಲು ಲಾಕ್ ಆಗಿಲ್ಲ. ರಮೇಶ್ ಬರೋವರೆಗೂ ಹಾಗೇ ಇತ್ತದು. ರಮೇಶ್ ತಳ್ಳಿದಾಗ ಬಾಗಿಲು ತೆಕ್ಕೊಂಡ್ತು. ಆಗ ಈ ಪೇಪರ್ ಕೆಳಗೆ ಬಿದ್ದು ಹೋಯಿತು. ಹಾಗಾಗಿ ಡೋರ್ ಲಾಕ್ ಆಯ್ತು. ರಮೇಶ್ ಒಳಗಿನಿಂದ ತೆಕ್ಕೊಂಡು ಹೊರಬಂದಾಗಲೂ ಯಾವ ತಡೆಯೂ ಇರಲಿಲ್ವಲ್ಲಾ, ಮತ್ತೆ ಲಾಕ್ ಆಯ್ತು’ ನಾನು ವಿವರಿಸಿದೆ.
‘ಸರ್, ಎಕ್ಸಾಕ್ಟ್ಲೀ. ನಾನು ತಪ್ಪು ಮಾಡಿಬಿಡ್ತಿದ್ದೆ. ಸದ್ಯ ನೀವು ಬಚಾವ್ ಮಾಡಿದ್ರಿ. ಥ್ಯಾಂಕ್ಸ್’ ಎಂದ ಮೋಹನ್.
‘ಇದೊಂದು ಬಹು ಮುಖ್ಯವಾದ ಕ್ಲೂ ಆಗುತ್ತೆ, ಕೊಲೆಗಾರನ್ನ ಕಂಡು ಹಿಡಿಯೋಕೆ. ಟಿಕೆಟ್ ಎಲ್ಲಿಂದ ಎಲ್ಲಿಗೆ? ಎಷ್ಟು ಘಂಟೆಯ ಟ್ರೈನು? ನೋಡಿ’ ಎಂದೆ.
‘ನೆನ್ನೆ ಬೆಳಿಗ್ಗೆ ಒಂಭತ್ತೂವರೆಗೆ ಇಶ್ಯೂ ಆಗಿರೋ, ಶಿವಮೊಗ್ಗದಿಂದ ಬೆಂಗಳೂರಿಗೆ ಬರೋ ಟ್ರೈನಿನ ಸೆಕೆಂಡ್ ಕ್ಲಾಸ್ ಟಿಕೆಟ್ ಸರ್ !’ ಎಂದು ಉತ್ತರಿಸಿದ ಮೋಹನ್.
‘ಅಂದ್ರೆ . . . ಟ್ರೈನು ಬೆಂಗಳೂರಿಗೆ ನಾಲ್ಕೂವರೆ ಐದಕ್ಕೆ ಬರುತ್ತೆ. ಇಲ್ಲಿ ಕೊಲೆ ನಡೆದ ಸಮಯ ಸುಮಾರು ಆರು ಘಂಟೆ. ಎಲ್ಲಾ ಒಂದಕ್ಕೊಂದು ಟ್ಯಾಲಿ ಆಗ್ತಾ ಇದೆ ! ಕೊಲೆ ಮಾಡಿರೋ ವ್ಯಕ್ತಿ ಶಿವಮೊಗ್ಗದಿಂದ ಬಂದವನೇ ಇರಬಹುದು’ ಎನ್ನುತ್ತಾ ರೂಮಿನ ಹೊರಬಂದು, ಕಾರಿಡಾರಿನ ಎರಡೂ ಬದಿ ಗಮನಿಸಿದೆ. ಗೋಪಿ ಉಳಿದುಕೊಂಡಿದ್ದ ರೂಮಿನ ಹತ್ತಿರದಲ್ಲೇ ಒಂದು, ಕಾರಿಡಾರಿನ ಕೊನೆಯಲ್ಲಿ ಮತ್ತೊಂದು, ಹೀಗೆ ಎರಡು ಸಿಸಿ ಕ್ಯಾಮೆರಾಗಳಿದ್ದವು.
‘ರೂಮಿನ ಎದುರು ಭಾಗದ ಕಾರಿಡಾರ್‌ನ ಸಿಸಿ ಕ್ಯಾಮೆರಾಗಳ ಐದೂಮುಕ್ಕಾಲಿನಿಂದ ಆರೂಕಾಲಿನವರೆಗೆ ಹಾಗೆಯೇ ಎಂಟೂಕಾಲಿನ ನಂತರ ಎಂಟೂವರೆಯವರೆಗಿನ ದೃಶ್ಯಗಳನ್ನು ತೋರಿಸಿ’ ಎಂದು ಹೋಟೆಲ್ ಮ್ಯಾನೇಜರ್‌ಗೆ ಹೇಳಿದೆ. ಆತ ನಮ್ಮನ್ನು ತನ್ನ ರೂಮಿಗೆ ಕರೆದುಕೊಂಡು ಹೋದ.
ಎಲ್ಲರೂ ಕಂಪ್ಯೂಟರ್ ಪರದೆಯ ಮೇಲೆ ಕಣ್ಣಿಟ್ಟು ಕುಳಿತೆವು. ಐದೂ ಐವತ್ತಕ್ಕೆ ಲಿಫ್ಟಿನಿಂದ ಹೊರಬಂದ ವ್ಯಕ್ತಿಯೊಬ್ಬ, ಆಚೆ ಈಚೆ ನೋಡಿ ನಿಧಾನವಾಗಿ ರೂಂ ನಂಬರ್ 503ರತ್ತ ಬರುತ್ತಾನೆ. ರೂಮಿನ ಹತ್ತಿರ ಬರುವಾಗ ಕ್ಯಾಮೆರಾಕ್ಕೆ ವಿರುದ್ಧವಾಗಿ ಹಿಮ್ಮುಖವಾಗಿ ನಡೆಯುತ್ತಾ ಬಂದು ರೂಮಿನ ಬಾಗಿಲು ತಟ್ಟುತ್ತಾನೆ. ಮರುಕ್ಷಣದಲ್ಲಿಯೇ ಆತ ರೂಮಿನೊಳಗೆ ಹೋಗುವುದು ಕಾಣುತ್ತದೆ. ಆರು ಘಂಟೆ ಎರಡು ನಿಮಿಷಕ್ಕೆ ರೂಮಿನಿಂದ ಹೊರಬಂದ ಆತ, ಬಾಗಿಲ ಬಳಿ ನಿಂತು ಏನೋ ಮಾಡುವುದು ಕಾಣುತ್ತದೆ. ನಂತರ ಆತ ಸರಸರನೇ ಹೋಗಿ ಲಿಫ್ಟ್ ಸೇರಿಕೊಳ್ಳುತ್ತಾನೆ. ಇನ್ನೊಂದು ಕ್ಯಾಮೆರಾ ಕಾರಿಡಾರಿನ ಕೊನೆಯಲ್ಲಿದ್ದುದರಿಂದ ಅದರಲ್ಲಿ ಇದೇ ಘಟನೆಯಿದ್ದರೂ, ಸ್ಪಷ್ಟವಾಗಿ ಚಿತ್ರ ಮೂಡಿರಲಿಲ್ಲ. ಕಾರಿಡಾರಿನಲ್ಲಿ ಮಂದ ಬೆಳಕಿದ್ದ ಕಾರಣ ಚಿತ್ರದ ಕ್ವಾಲಿಟಿ ಕಡಿಮೆಯಿತ್ತು. ಆದರೆ ಅದನ್ನು ಪ್ರೋಸೆಸ್ ಮಾಡಿ ಉತ್ತಮಪಡಿಸಲು ಸಾಧ್ಯವೆಂಬುದನ್ನು ನಾವು ಬಲ್ಲವರಾಗಿದ್ದೆವು. ಎಂಟೂಕಾಲರ ರೆಕಾರ್ಡಿಂಗ್‌ನಲ್ಲಿ ರಮೇಶ್ ಸಾವಕಾಶವಾಗಿ ರೂಮಿನತ್ತ ಬಂದು ಒಳಹೋಗುವುದು, ಮರುಕ್ಷಣದಲ್ಲಿಯೇ ಆಚೆ ಬಂದು ಲಿಫ್ಟ್‌ನತ್ತ ದೌಡಾಯಿಸುವುದು ಕಾಣುತ್ತಿತ್ತು.
ರಿಸೆಪ್ಷನ್ ಏರಿಯಾದ ಸಿಸಿ ಕ್ಯಾಮೆರಾ ನೋಡೋಣವೆಂದೆ. ಅಲ್ಲಿ ಸಾಕಷ್ಟು ಬೆಳಕಿನ ವ್ಯವಸ್ಥೆಯಿದ್ದುದರಿಂದ ಮತ್ತು ಅಲ್ಲಿ ಆ ವ್ಯಕ್ತಿ ಮುಖವನ್ನು ಮರೆಮಾಚಲು ಸಾಧ್ಯವಿಲ್ಲವಾದುದರಿಂದ ಸ್ಪಷ್ಟ ಚಿತ್ರ ಸಿಗಬಹುದೆಂಬುದು ನನ್ನ ಲೆಕ್ಕಾಚಾರವಾಗಿತ್ತು. ಅದರೆ ಅಲ್ಲಿಯೂ ಆ ವ್ಯಕ್ತಿ ಸಾಧ್ಯವಾದಷ್ಟು ಮುಖವನ್ನು ಮುಚ್ಚಿಕೊಂಡ ಸ್ಥಿತಿಯಲ್ಲೇ ಚಿತ್ರಗಳಿದ್ದುವು. ಒಟ್ಟಿನಲ್ಲಿ ಆತ ಜೀನ್ಸ್ ತೊಟ್ಟು, ಹುಡ್ ಇರೋ ಜಾಕೆಟ್ ಹಾಕಿದ್ದಾನೆ. ಕಣ್ಣಿಗೆ ಕೂಲಿಂಗ್ ಗ್ಲಾಸಸ್. ಕೈಗೆ ಬೈಕರ್ಸ್ ಹಾಕುವಂತಹ ಗ್ಲೋವ್ಸ್ ಹಾಕಿದ್ದಾನೆ. ಆದರೆ ಆತ ಸುಮಾರು ಆರು ಅಡಿ ಎತ್ತರವಿರುವ ತೆಳುಕಾಯದ ಯುವಕ ಎನ್ನುವುದನ್ನು ಗುರುತಿಸಬಹುದಿತ್ತು.
ಇದಿಷ್ಟನ್ನೂ ಡಿವಿಡಿಗೆ ಕಾಪಿ ಮಾಡಿಸಿಕೊಂಡ ಇನ್ಸ್‌ಪೆಕ್ಟರ್ ಮೋಹನ್. ನಂತರ ನಾವು ಆತನಿಂದ ಬೀಳ್ಕೊಂಡೆವು. ‘ಮೋಹನ್, ಸಿಸಿ ಕ್ಯಾಮೆರಾ ರೆಕಾರ್ಡಿಂಗ್ಸ್ ಇಂಪ್ರೂವ್ ಮಾಡಿಸಿದ್ರೆ ಸ್ಪಷ್ಟ ಚಿತ್ರ ಸಿಗಬಹುದು. ನಿಮ್ಮ ಫೋರೆನ್ಸಿಕ್ ಮತ್ತು ಬಲ್ಲಾಸ್ಟಿಕ್ ರಿಪೊರ್ಟ್ ಬಂದ ನಂತರ ಎಲ್ಲಾ ಕ್ಲಿಯರ್ ಆಗುತ್ತೇನೋ. ನಾನು, ರಮೇಶ್ ಈಗ ಮನೆಗೆ ಹೋಗಿ ರೆಡಿಯಾಗಿ ರಾತ್ರಿಯ ಟ್ರೈನಿಗೆ ಶಿವಮೊಗ್ಗಕ್ಕೆ ಹೋಗಿ ಗೋಪಿಯ ಅಂತ್ಯಸಂಸ್ಕಾರದಲ್ಲಿ ಭಾಗವಹಿಸಿ, ಮತ್ತೆ ಸಂಜೆಯೇ ಹೊರಟು, ನಾಡಿದ್ದು ಬೆಳಿಗ್ಗೆಯೊಳಗೆ ವಾಪಸ್ಸಾಗ್ತೀವಿ. ಆಮೇಲೆ ಸಿಗೋಣ’ ಎಂದೆ. ‘ಸರಿ ಸರ್’ ಎಂದ ಮೋಹನ್.
‘ರಮೇಶಾ, ಸಿಸಿ ಕ್ಯಾಮೆರಾ ದೃಶ್ಯಗಳಲ್ಲಿ ಸ್ಪಷ್ಟವಾಗಿ ಗೊತ್ತಾಗುತ್ತೆ, ನೀನು ಹೇಳಿದ್ದೆಲ್ಲಾ ಸತ್ಯ. ನಿಂಗೂ ಗೋಪಿಯ ಕೊಲೆಗೂ ಸಂಬಂಧವೇ ಇಲ್ಲಾ ಅನ್ನೋದು. ಸೋ, ತಲೆ ಕೆಡಿಸ್ಕೋಬೇಡ. ರಾತ್ರಿ ಒಂಭತ್ತೂವರೆಗೆ ಮನೆಗೆ ಬರ್ತೀನಿ. ರೆಡಿಯಾಗಿರು. ರೈಲ್ವೇ ಸ್ಟೇಷನ್ನಿಗೆ ಒಟ್ಟಿಗೆ ಹೋಗೋಣ’ ಎಂದೆ. ಗೋಪಿಯ ಸಾವಿನ ದುಃಖದ ಜತೆಗೆ ತನ್ನ ಮೇಲೆಲ್ಲಿ ಆರೋಪ ಬಂದೀತೋ ಎಂದು ಆತ ಬಹಳವಾಗಿಯೇ ಚಿಂತಿತನಾಗಿದ್ದ. ನನ್ನ ಮಾತಿನಿಂದ ಅವನ ಮುಖದಲ್ಲಿ ಸ್ವಲ್ಪ ನಿರಾಳ ಭಾವ ಕಂಡುಬಂತು.
ಶಿವಮೊಗ್ಗ ತಲುಪಿ ಗೋಪಿಯ ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡೆವು. ಅಪಾರ ಬಂಧುಬಳಗ, ಸ್ನೇಹಿತರು ಮತ್ತು ಅಭಿಮಾನಿಗಳು ಬಂದಿದ್ದರು. ಅಷ್ಟೊಂದು ಜನಾನುರಾಗಿಯಾಗಿದ್ದ ಆತ.
ಸಾಯಂಕಾಲ ನಾಲ್ಕೂವರೆಯ ಟ್ರೈನಿಗೆ ವಾಪಸ್ ಹೊರಟೆವು. ರೈಲಿನಲ್ಲಿ ಕುಳಿತ ಕೂಡಲೇ ಇನ್ಸ್‌ಪೆಕ್ಟರ್ ಮೋಹನ್‌ಗೆ ಕಾಲ್ ಮಾಡಿದೆ. ‘ಮೋಹನ್, ಗುಡ್ ನ್ಯೂಸ್. ಗೋಪಿಯ ಕೊಲೆ ಕೇಸಲ್ಲಿ ಒಂದು ಬ್ರೇಕ್ ಥ್ರೂ ಆಗಿದೆ. ನಿಮ್ಮ ಶಿವಮೊಗ್ಗದ ಕೌಂಟರ್‌ಪಾರ್ಟ್‌ಗೆ ಹೇಳಿ ಗೋಪಿಯ ಮಗ ಸುಶಾಂತನ್ನ ಅರೆಸ್ಟ್ ಮಾಡಿ, ಬೆಂಗಳೂರಿಗೆ ಕಳಿಸಲು ಹೇಳಿ. ಹಾಗೆಯೇ ಅವನ ಫ್ರೆಂಡ್ ಚೋಟು ಅಂತ ಒಬ್ಬ ಇದಾನೆ. ಸುಶಾಂತನ ಬಾಯಿ ಬಿಡಿಸಿ, ಚೋಟು ಇರೋ ಅಡ್ರೆಸ್ ತಿಳ್ಕೊಂಡು ನಿಮಗೆ ತಿಳಿಸೋಕೆ ಹೇಳಿ. ಮುಕ್ಕಾಲು ಪಾಲು ನಿಮ್ ರೆಕಾರ್ಡ್ಸಲ್ಲೂ ಇರ್ತಾನೆ ಅವನು. ಅವನನ್ನೂ ಎತ್ತಾಕ್ಕೊಂಡು ಬನ್ನಿ. ಇಬ್ಬರೂ ಬಂದ ಮೇಲೆ ನಂಗೆ ಹೇಳಿ, ಬರ್ತೀನಿ’ ಅಂದೆ.
‘ಸಾರ್, ಹೀಗೆ ಅರ್ಧಂಬರ್ಧ ಹೇಳಿ ನನ್ನ ಕುತೂಹಲ ಕೆರಳಿಸ್ತಿದೀರಾ. ಎಲ್ಲಾ ಹೇಳಿಬಿಡಿ ಸಾರ್, ಪ್ಲೀಸ್’ ಗೋಗರೆದ ಇನ್ಸ್‌ಪೆಕ್ಟರ್ ಮೋಹನ್.
‘ಕೀಪ್ ಆನ್ ಗೆಸ್ಸಿಂಗ್ ಮೈ ಬಾಯ್....’ ಎಂದು ಫೋನಿಟ್ಟೆ. ರಮೇಶನಿಗೂ ‘ಮನೆಗೆ ಹೋಗಿ, ಸ್ವಲ್ಪ ರೆಸ್ಟ್ ತಗೊಂಡು ಸಿದ್ಧವಾಗಿರು, ನಮ್ಮ ಗೋಪಿಯ ಕೊಲೆಗಾರರನ್ನ ತೋರಿಸ್ತೀನಿ’ ಎಂದು ಹೇಳಿದೆ. ರೈಲು ಕಡೂರು ಸಮೀಪ ಬಂದಿತ್ತು. ಗೋಪಿಯ ಅಪ್ಪನಿಂದ ಕಾಲ್ ಬಂತು. ಇನ್ಸ್‌ಪೆಕ್ಟರ್ ಮೋಹನ್ ನಾನು ಹೇಳಿದ ಕೆಲಸ ಮಾಡಿದಾನೆ ಅಂದ್ಕೊಂಡೆ. ‘ಸತೀಶಾ, ಇದೇನೋ, ಪೋಲಿಸ್ನೋರು ಬಂದು ಸುಶಾಂತನ್ನ ಕರ್ಕೊಂಡು ಹೋದ್ರು. ಯಾಕೇಂತ ಕೇಳಿದ್ರೆ ‘ನಮಗೂ ಗೊತ್ತಿಲ್ಲ. ಅರೆಸ್ಟ್ ಮಾಡಿ ಬೆಂಗಳೂರಿಗೆ ಕಳಿಸಿ’ ಅಂತ ಹೇಳಿದಾರೆ ಅಷ್ಟೇ ಅಂತಾರೆ. ಏನೋ ಒಂದೂ ಗೊತ್ತಾಗ್ತಿಲ್ಲಪ್ಪ. ಗೋಪಿ ಹೋಗಿದ್ದಲ್ದೆ ಇವಂದು ಏನು ಕಿತಾಪತಿಯೋ ಏನೋ. ಬೆಂಗ್ಳೂರಲ್ಲಿದ್ದಾಗ್ಲೇ ಪೋಲಿ ಹುಡುಗರ ಸಹವಾಸ ಇವಂಗೆ. ಅದಕ್ಕರ್ಧ ಗೋಪಿ ಬೆಂಗಳೂರು ಬಿಡಕ್ಕೆ ಯೋಚ್ನೆ ಮಾಡಿದ್ದು. ಈ ಹುಡ್ಗ ಯಾವ ತಪ್ಪು ಮಾಡಿದಾನೋ ತಿಳಿವಲ್ದಲ್ಲಾ’ ಎಂದು ಆತಂಕದಿಂದಲೇ ನುಡಿದರು.
ಆಶ್ಚರ್ಯ ನಟಿಸುತ್ತಾ ‘ಓಹ್ ಹೌದಾ? ವಿಚಾರಿಸ್ತೀನಿ ಇರಿ’ ಅಂದೆ. ‘ನೀವೂ ಬೆಂಗಳೂರಿಗೆ ಹೋಗಿ ಅದೇನೂಂತ ನೋಡ್ಕಂಡು ಬನ್ನಿ ಅಂತ ಸೊಸೆ ಕೂತಿದಾಳೆ. ನಾನು ನನ್ ತಮ್ಮ ಹೊರ್ಟು ಬರೋಣ್ವೇ? ಸೊಸೆ ಜತೆಗೆ ಅವಳ ಅಪ್ಪ ಅಮ್ಮ, ಅಣ್ಣಂದಿರು ಎಲ್ಲಾ ಇದಾರೆ’ ಎಂದು ಕೇಳಿದರು. ಆ ಹಿರಿಯರು ಬಂದು ಆಯಾಸ ಪಟ್ಕೋತಾರಲ್ಲ ಅನ್ನಿಸಿದರೂ, ಏನೂ ಮಾಡುವ ಹಾಗಿರಲಿಲ್ಲ. ‘ಸರಿ ನಮ್ಮ ಮನೆಗೇ ಬನ್ನಿ. ನಾನು ಅವರಿಗೆ ಫೋನ್ ಮಾಡಿ ವಿಷಯ ತಿಳ್ಕೊಂಡಿರ್ತೀನಿ. ಒಟ್ಟಿಗೆ ಸ್ಟೇಷನ್ನಿಗೆ ಹೋಗೋಣ’ ಅಂದೆ.
ಮರುದಿನ ಇನ್ಸ್‌ಪೆಕ್ಟರ್ ಮೋಹನ್ ಒಂಭತ್ತು ಗಂಟೆಗೆ ಕಾಲ್ ಮಾಡಿದ. ‘ಸಾರ್ ನೀವು ಹೇಳಿದ ಹಾಗೆ ಗೋಪಾಲ್ ರಾವ್ ಅವರ ಮಗ ಸುಶಾಂತನ್ನ, ಹಾಗೇ ಆ ಚೋಟು ಅನ್ನೋವ್ನನ್ನ ಅರೆಸ್ಟ್ ಮಾಡಿ ತಂದಿದೀವಿ. ನಮ್ಮ ಸಾಹೇಬ್ರೂ ಬರ್ತೀನಿ ಅಂದಿದಾರೆ, ಎಷ್ಟು ಹೊತ್ತಿಗೆ ನಿಮಗೆ ಅನುಕೂಲ ಹೇಳಿದ್ರೆ ಅವರಿಗೂ ಬರೋಕೆ ಹೇಳ್ತೀನಿ’ ಅಂದ. ‘ಹನ್ನೊಂದು ಘಂಟೆಗೆ ಆಗಬಹುದು’ ಎಂದೆ.
ಬೆಳಗಿನ ಜಾವ ಆರು ಘಂಟೆಗೆ ಗೋಪಿಯ ಅಪ್ಪ ಮತ್ತು ಚಿಕ್ಕಪ್ಪ ಬಂದರು. ‘ಕೂಡ್ಲೇ ಹೊರಡಿ ಅಂತ ಸೊಸೇದು ವರಾತ. ಪದೇ ಪದೇ ಅರ್ಧ ರಾತ್ರೀಲಿ ಬಂದು ನಿಮಗೆ ತೊಂದರೆ ಕೊಡೋದು ಯಾಕೇಂತ ಸ್ವಲ್ಪ ಲೇಟ್ ಆಗೇ ಹೊರಟ್ವಿ’ ಅಂದರವರು. ‘ಅಯ್ಯೋ, ಅದಕ್ಕೇನಂತೆ. ನಾನೇನು ಬೇರೆಯವ್ನೇ? ಹಾಗೆಲ್ಲಾ ಅಂದ್ಕೊಳ್ಲೇಬೇಡಿ’ ಎಂದು ಸಮಾಧಾನಿಸಿದೆ. ಹತ್ತೂಕಾಲಿಗೆ ಹೊರಟು ದಾರಿಯಲ್ಲಿ ರಮೇಶನನ್ನೂ ಹತ್ತಿಸಿಕೊಂಡು ಸ್ಟೇಷನ್ ತಲುಪಿದಾಗ ಹನ್ನೊಂದಕ್ಕೆ ಹತ್ತು ನಿಮಿಷವಿತ್ತು. ಇನ್ಸ್‌ಪೆಕ್ಟರ್ ಮೋಹನ್ ಡಿವೈಎಸ್‌ಪಿಯವರಿಗೆ ನನ್ನನ್ನು ಪರಿಚಯಿಸಿದ. ‘ನಿಮ್ಮ ಬಗ್ಗೆ ತುಂಬಾ ಕೇಳಿದ್ದೆ. ನೋಡೋಕೆ ಅವಕಾಶವಾಗಿರಲಿಲ್ಲ. ವೆರಿ ಗ್ಲಾಡ್ ಟು ಮೀಟ್ ಯು’ ಎಂದು ಅವರು ಕೈಕುಲುಕಿ ಸ್ವಾಗತಿಸಿದರು. ‘ಸೇಮ್ ಹಿಯರ್ ಸರ್. ನೀವೂ ಕೂಡ ದಕ್ಷ ಪೋಲೀಸ್ ಅಧಿಕಾರಿಯಾಗಿ ಹೆಸರು ಮಾಡಿದೀರ. ನೈಸ್ ಟು ಮೀಟ್ ಯು’ ಎಂದೆ.
ಇಪ್ಪತ್ತು ಇಪ್ಪತ್ತೊಂದು ವಯಸ್ಸಿನ ಆ ಇಬ್ಬರು ಹುಡುಗರು ಬೆಂಚಿನ ಮೇಲೆ ಕುಳಿತಿದ್ದರು. ನಾವು ಒಳಗೆ ಹೋದಾಗ ನಮ್ಮನ್ನು, ಅದರಲ್ಲೂ ತಾತನನ್ನು ನೋಡಿ ಸುಶಾಂತ ತಲೆ ತಗ್ಗಿಸಿದ.
‘ಸಾರ್, ಇವರಿಬ್ರನ್ನ ಸ್ವಲ್ಪ ಮಟ್ಟಿಗೆ ಇಂಟ್ರಾಗೇಟ್ ಮಾಡ್ದೆ. ಗೋಪಿಯವರ ಕೊಲೆಗೆ ಸಂಬಂಧ ಇದೆ ಅನ್ನೋದು ಗೊತ್ತಾಯ್ತು. ಈ ಚೋಟು ನೀವು ಹೇಳಿದ ಹಾಗೆ, ಡ್ರಗ್ಸ್ ಮಾಫಿಯಾದ ಜತೆ ಲಿಂಕ್ ಇರೋ ಬಗ್ಗೆ ಅನುಮಾನ ಇತ್ತು. ಆದರೆ ಸರಿಯಾದ ಪ್ರೂಫ್ ಸಿಕ್ಕಿರ್ಲಿಲ್ಲ. ಗೋಪಾಲ್ ರಾವ್ ಅವರ ಮಗಂಗೂ ಇವನಿಗೂ ಫ್ರೆಂಡ್‌ಶಿಪ್ ಇದೆ ಅನ್ನೋದು ತಿಳೀತು. ಹೇಳಿ ಸಾರ್, ಈ ಹುಡುಗರ ಬಗ್ಗೆ ನಿಮಗೆ ಹೇಗೆ ಅನುಮಾನ ಬಂತು?’ ಇನ್ಸ್‌ಪೆಕ್ಟರ್ ಮೋಹನ್ ಪೀಠಿಕೆ ಹಾಕಿದ.
‘ಮೊದಲಿಗೆ ನನಗೆ ಅನುಮಾನ ಶುರುವಾಗಿದ್ದು, ಹೋಟೆಲಿನ ರೂಂ ಬಾಗಿಲ ಮಿಸ್ಟರಿಯಿಂದ. ಆಟೋಮ್ಯಾಟಿಕ್ ಆಗಿ ಲಾಕ್ ಆಗಬೇಕಾದ ಆ ಡೋರ್ ಸ್ವಲ್ಪವೇ ತೆರೆದಿರುವಂತೆ ಇರಲು ಸಾಧ್ಯವೇ ಇಲ್ಲಾಂತ ಆ ಹೋಟೆಲ್ಲಿನವರೂ ಹೇಳಿದ್ರಲ್ಲ. ರಾತ್ರಿಯೆಲ್ಲಾ ಅದೇ ನನ್ನ ತಲೆ ತಿಂತು. ನನಗನ್ನಿಸ್ತು, ಏನೋ ಒಂದು ಸಣ್ಣ ಅಡ್ಡಿ ಇದ್ದಿರಲೇ ಬೇಕು ಬಾಗಿಲ ಸಂದಿಯಲ್ಲಿ ಅಂತ. ರಮೇಶ್ ಎಂಟು ಘಂಟೆಗೆ ಆ ರೂಮಿಗೆ ಹೋಗ್ತಾನೆ ಅನ್ನೋ ವಿಷ್ಯ ಕೊಲೆಗಾರನಿಗೆ ಗೊತ್ತಿತ್ತು. ರಮೇಶ್ ಮೇಲೆ ಅನುಮಾನ ಬರುವ ಹಾಗೆ ಮಾಡೋದು ಅವನ ಉದ್ದೇಶ. ಅದು ಈಡೇರಬೇಕಾದರೆ ಬಾಗಿಲು ತೆರೆದಿದ್ದು ರಮೇಶ್ ಒಳಗೆ ಹೋಗುವ ಹಾಗಿರಬೇಕು. ಅದಕ್ಕಾಗಿ ಬಾಗಿಲ ಸಂದಿಗೆ ಏನಾದ್ರೂ ಅಡ್ಡ ಇಡಬೇಕಿತ್ತು. ಗಡಿಬಿಡಿಯಲ್ಲಿ ಏನೂ ಸಿಕ್ಕದೆ ಜೇಬಲ್ಲಿದ್ದ ಟ್ರೈನ್ ಟಿಕೆಟನ್ನೇ ಮಡಿಸಿ ಬಾಗಿಲ ಸಂದಿನಲ್ಲಿ ಇಟ್ಟ. ಬಾಗಿಲು ಲಾಕ್ ಆಗಲಿಲ್ಲ. ರಮೇಶ್ ಬಂದು ತಳ್ಳಿದಾಗ, ತೆಕ್ಕೊಂಡ್ತು. ಆಗ ಆ ಟಿಕೆಟ್ ಕೆಳಗೆ ಬಿತ್ತು. ಈ ಸಣ್ಣ ಕಾಗದದ ತುಂಡು ಅವತ್ತು ಯಾರ ಗಮನಕ್ಕೂ ಬರಲಿಲ್ಲ.
ಆದ್ದರಿಂದಲೇ ಮಾರನೇ ದಿನ ಮತ್ತೆ ಹೋಗೋಣ ಅಂದಿದ್ದು. ಆಗ ಅಲ್ಲಿ ಬಿದಿದ್ದ ಟಿಕೆಟ್ ನಮಗೆ ಸಿಗ್ತು. ಅದು ಶಿವಮೊಗ್ಗದಿಂದ ಬೆಂಗಳೂರಿಗೆ ಸೆಕೆಂಡ್ ಕ್ಲಾಸ್ ಟಿಕೆಟ್. ಉದ್ದೇಶಪೂರ್ವಕವಾಗಿ ಆರ್ಡಿನರಿ ಕ್ಲಾಸಲ್ಲಿ ಬಂದಿದಾನವನು. ರಿಸರ್ವೇಷನ್ ಮಾಡ್ಸಿದ್ರೆ ಹೆಸರು ವಿಳಾಸ ಕೊಡಬೇಕಾಗುತ್ತೆ. ಫಸ್ಟ್ ಕ್ಲಾಸಲ್ಲಿ ಬಂದ್ರೂ ಜನ ಕಡಿಮೆಯಿರೋದ್ರಿಂದ ಗುರುತು ಸಿಗುತ್ತೆ. ಮೋಹನ್ ನೀವೂ ಗಮನಿಸಲಿಲ್ಲ ಅನ್ಸುತ್ತೆ. ಆ ಟಿಕೆಟ್ ಇಬ್ಬರಿಗಾಗಿತ್ತು! ಆಗ ನನ್ನ ಅನುಮಾನ ಗೋಪಿಯ ದಾಯಾದಿಗಳ ಮೇಲೆ ಬಂತು. ಲಕ್ಷಾಂತರ ರೂಪಾಯಿಗಳ ಆಸ್ತಿಯನ್ನು ಕೋರ್ಟ್ ತೀರ್ಪಿನಿಂದಾಗಿ ಕಳೆದುಕೊಂಡಿದ್ದರವರು. ಸಹಜವಾಗಿ ಗೋಪಿಯ ಮೇಲೆ ಅವರಿಗೆ ಸಿಟ್ಟು ಬಂದಿರುತ್ತೆ. ಆದರೆ ಸಿಸಿ ಕ್ಯಾಮೆರಾದ ದೃಶ್ಯಗಳನ್ನು ನೋಡಿದಾಗ ಒಬ್ಬನೇ ವ್ಯಕ್ತಿ ಬಂದು ಹೋಗಿದ್ದು ಗೊತ್ತಾಯ್ತು. ಅವರಿಬ್ಬರನ್ನೂ ನಾನೂ ನೋಡಿದೀನಿ. ಇಬ್ಬರೂ ವಯಸ್ಸಾದವರು. ಆದರೂ ಸುಪಾರಿ ಕೊಟ್ಟು ಯಾಕೆ ಮಾಡಿಸಿರಬಾರದು ಅನ್ನಿಸ್ತು.
ಗೋಪಿಯ ಅಂತ್ಯಕ್ರಿಯೆಗೆ ಶಿವಮೊಗ್ಗಕ್ಕೆ ಹೋದಾಗ ಈ ಚೋಟು ಕೂಡಾ ಅಲ್ಲಿದ್ದ. ಸುಶಾಂತನ ಬಳಿ ತುಂಬಾ ಕ್ಲೋಸ್ ಆಗಿದ್ದ. ಗ್ಲೋವ್ಸ್ ಇರ್ಲಿಲ್ಲ ಅಷ್ಟೇ. ಬಾಕಿ ಎಲ್ಲಾ ಸಿಸಿ ಟಿವಿಯಲ್ಲಿ ಇದ್ದ ಡ್ರೆಸ್ಸನ್ನೇ ಹಾಕಿದ್ದ. ಇವನು ನಡೆಯುವಾಗ ಸ್ವಲ್ಪ ಕುಂಟ್ತಾ ಇದ್ದುದನ್ನು ಗಮನಿಸಿದೆ. ಸಿಸಿ ಕ್ಯಾಮೆರಾದಲ್ಲಿ ನೋಡಿದ್ದಾಗಲೂ ಅದನ್ನು ನಾನು ಅಬ್ಸರ್ವ್ ಮಾಡಿದ್ದೆ. ಇವನೇ ಆ ಹೋಟೆಲ್ಲಿಗೆ ಬಂದು ಹೋದವನು ಅನ್ನೋದು ಗ್ಯಾರಂಟಿಯಾಗಲು ಇದು ಕಾರಣವಾಯ್ತು. ಟ್ರೈನ್ ಟಿಕೆಟ್ ಇಬ್ಬರದ್ದಲ್ಲಾ, ಸೋ ಸುಶಾಂತನೇ ಇವನ ಜತೆ ಬಂದಿರಬೇಕು ಅನ್ನಿಸಿತು. ಅದಕ್ಕೆ ಇನ್ನೂ ಒಂದು ಸಾಕ್ಷಿ ಅಂದರೆ, ಗೋಪಿಯ ಕುಟುಂಬದವರು ಬೆಂಗಳೂರಿಗೆ ಹೊರಟು ಬಂದಾಗ ಸುಶಾಂತ ಅವರ ಜತೆ ಬರಲಿಲ್ಲ. ಮಧ್ಯಾಹ್ನದಿಂದ ಫೋನ್ ಸ್ವಿಚ್ ಆಫ್ ಮಾಡ್ಕೊಂಡಿದ್ದ. ಇವರೆಲ್ಲಾ ಬೆಂಗಳೂರು ತಲುಪುವ ಕೆಲವೇ ಕ್ಷಣಗಳ ಮುಂಚೆ ಫೋನ್ ಮಾಡಿ ‘ನಾನು ಮನೆ ಹತ್ರ ಬಂದಿದೀನಿ, ಯಾರೂ ಇಲ್ವಲ್ಲಾ ಮನೇಲಿ’ ಅಂತ ಕೇಳಿದಾನೆ. ಆಗ ಸುಮಾರು ನಾಲ್ಕು ಘಂಟೆ. ವಿಷಯ ತಿಳಿಸಿ ಬೆಂಗಳೂರಿಗೆ ಬಾಂತ ಇವನ ತಾತ ಹೇಳಿದಾರೆ. ಎಂಟೂವರೆಗೆಲ್ಲ ನಮ್ಮ ಮನೆಗೆ ಬಂದ ಇವನು! ಹೇಗೇ ಬಂದರೂ ನಾಲ್ಕು ಘಂಟೆಗಳ ಕಾಲದಲ್ಲಿ ಶಿವಮೊಗ್ಗದಿಂದ ಇಲ್ಲಿಗೆ ಬರೋದು ಸಾಧ್ಯವಿಲ್ಲ. ಅಂದರೆ ಸುಶಾಂತ ಶಿವಮೊಗ್ಗಕ್ಕೇ ಹೋಗಿಯೇ ಇರಲಿಲ್ಲ. ಮನೇಲಿ ಯಾರೂ ಇರಲ್ಲ, ವಿಷಯ ಗೊತ್ತಾಗಿ ಅವರೆಲ್ಲಾ ಇಲ್ಲಿಗೆ ಬಂದೇ ಬರ್ತಾರೇಂತ ಅವನಿಗೆ ಗೊತ್ತಿತ್ತು.
ಚೋಟು ಹೈಸ್ಕೂಲ್ ಡ್ರಾಪ್ ಔಟ್. ಆಗಿನಿಂದಲೂ ಇವರಿಬ್ರೂ ಸ್ನೇಹಿತರು. ಸುಶಾಂತನ ಕೆಲವು ಚಟುವಟಿಕೆಗಳು ಅನುಮಾನಾಸ್ಪದವಾಗಿ ಇದ್ದುದು ನಮಗೂ ಗೊತ್ತಿತ್ತು. ಗೋಪಿ ಅದನ್ನ ಹೇಳಿ ಬೇಜಾರು ಮಾಡ್ಕೋತಿದ್ದ. ಬೆಂಗಳೂರು ಬಿಟ್ರೆ ಒಳ್ಳೇದು ಅಂತಿದ್ದ. ಅದಕ್ಕೆ ತಕ್ಕ ಹಾಗೆ ಅಪಾರ ಮೊತ್ತದ ಆಸ್ತಿ ಕೋರ್ಟ್ ತೀರ್ಪಿನಿಂದಾಗಿ ಇವರ ಪಾಲಿಗೆ ಬಂತು. ಅದೇ ನೆಪವಾಗಿಟ್ಕೊಂಡು ಶಿವಮೊಗ್ಗಕ್ಕೆ ಶಿಫ್ಟ್ ಮಾಡ್ದ. ಸುಶಾಂತನಿಗೆ ಅದು ತೀರಾ ಇಷ್ಟವಿಲ್ಲದ ವಿಷಯ. ಆದರೆ ಅಷ್ಟಕ್ಕೇ ಅಪ್ಪನನ್ನು ಕೊಲ್ಲುವಂತಹ ಕೆಲಸಕ್ಕೆ ಕೈ ಹಾಕಿರಲಾರ ಅಂತ ನನ್ನ ಭಾವನೆ. ಬೇರೇನಾದರೂ ಕಾರಣವಿರಲೇಬೇಕು. ಇದಿಷ್ಟು ನಾನು ಕಂಡುಕೊಂಡ ವಿಷಯ. ಇನ್ನುಳಿದಿದ್ದನ್ನ ಇವರಿಬ್ಬರೇ ಹೇಳಬೇಕು’ ಎಂದು ನಿಟ್ಟುಸಿರು ಬಿಡುತ್ತಾ ನಿಲ್ಲಿಸಿದೆ.
ಇನ್ಸ್‌ಪೆಕ್ಟರ್ ಮೋಹನ್ ಸುಶಾಂತನತ್ತ ತಿರುಗಿ ‘ನೋಡಪ್ಪಾ, ನಿಮ್ಮ ತಂದೆಯವರ ಕೊಲೆ ಮಾಡ್ದೋನು ನಿನ್ನ ಸ್ನೇಹಿತ, ಅದಕ್ಕೆ ಕುಮ್ಮಕ್ಕು ಕೊಟ್ಟೋನು ನೀನು ಅನ್ನೋದು ಆಲ್ಮೋಸ್ಟ್ ಪ್ರೂವ್ ಆದ ಹಾಗೇನೆ. ಎಷ್ಟೇ ಚಾಲಾಕಿತನ ತೋರ‍್ಸಿದ್ರೂ ಅಪರಾಧಿಗಳು ಒಂದಲ್ಲಾ ಒಂದು ಸಾಕ್ಷಿ ಬಿಟ್ಟೇ ಇರ್ತಾರೆ. ನೀವೀಗ ಯಾವ ರೀತಿಯಲ್ಲೂ ತಪ್ಪಿಸಿಕೊಳ್ಳಕ್ಕೆ ಆಗಲ್ಲ. ಹಾಗಾಗಿ ನೇರವಾಗಿ ಹೇಳಿಬಿಡು, ನಿಮ್ಮ ತಂದೆಯವರ ಕೊಲೆ ಯಾಕೆ ಮಾಡಿಸ್ದೆ? ಇಲ್ಲಾಂದ್ರೆ ಬಾಯಿ ಬಿಡಿಸೋಕೆ ಬರುತ್ತೆ ನಮಗೆ’ ಮೇಲಧಿಕಾರಿಗಳು, ಜತೆಗೆ ನಾನು ಮತ್ತು ಇತರರು ಇದ್ದುದರಿಂದ ಅವನು ಕಠಿಣವಾದ ಭಾಷೆಯನ್ನು ಉಪಯೋಗಿಸಲಿಲ್ಲ. ಅದರ ಅಗತ್ಯವೂ ಇರಲಿಲ್ಲ. ಹುಡುಗ ಹೆದರಿ ಮುದುರಿ ಕುಳಿತಿದ್ದ.
ಸುಶಾಂತ ಚೋಟುವಿನ ಕಡೆಗೊಮ್ಮೆ ದೃಷ್ಟಿ ಹರಿಸಿ, ಸ್ವಲ್ಪ ಭಯದಿಂದಲೇ ಹೇಳತೊಡಗಿದ ‘ಹೈಸ್ಕೂಲಿನಲ್ಲಿದ್ದಾಗಲೇ ಈ ಚೋಟು ನನ್ನ ಕ್ಲಾಸ್ ಮೇಟ್ ಆಗಿದ್ದ. ಆಮೇಲೆ ಸ್ಕೂಲ್ ಬಿಟ್ಟು ಏನೇನೋ ಮಾಡ್ತಿದ್ದ. ಅವನಿಗೆ ಆಗ್ಲೇ ಬಹಳಷ್ಟು ಜನರ ಪರಿಚಯವಿತ್ತು. ನನ್ನನ್ನೂ ಎಲ್ಲೆಲ್ಲಿಗೋ ಕರ್ಕೊಂಡು ಹೋಗ್ತಿದ್ದ . . .’ ತಾತನ ಕಡೆಗೊಮ್ಮೆ ನೋಡಿ ತಲೆತಗ್ಗಿಸಿ ಮುಂದುವರೆಸಿದ ‘. . . ಡ್ರಗ್ಸ್, ಡ್ರಿಂಕ್ಸ್ ನಂಗೆ ರುಚಿ ತೋರ್ಸಿದ್ದ. ಅಪ್ಪ ಮೊದಮೊದಲು ಏನನ್ನೂ ವಿಚಾರಿಸ್ದೆ ಕೇಳ್ದಷ್ಟು ದುಡ್ಡು ಕೊಡ್ತಿದ್ರು. ಕ್ರಮೇಣ ಕಡಿಮೆ ಮಾಡ್ತಾ ಬಂದ್ರು. ಆದ್ರೆ ನಂಗೆ ಚಟ ಹತ್ತಿಬಿಟ್ಟಿತ್ತು. ಇವರುಗಳು ಸಾಲ ಬರ‍್ಕೊಂಡು ಕೊಡ್ತಾನೇ ಇದ್ರು. ಅಷ್ಟ್ರಲ್ಲಿ ಅಪ್ಪ ಶಿವಮೊಗ್ಗಕ್ಕೆ ಶಿಫ್ಟ್ ಆಗಿ ನನ್ನನ್ನೂ ಅಲ್ಲಿ ಕಾಲೇಜಿಗೆ ಸೇರ‍್ಸಿಬಿಟ್ರು. ನಂಗೆ ಅಲ್ಲಿಗೆ ಹೋಗೋಕೆ ಇಷ್ಟ ಇರ್ಲಿಲ್ಲ. ಬೆಂಗಳೂರಲ್ಲೇ ಇರಬೇಕೂಂತಿದ್ದೆ. ಅಪ್ಪ ಪಾರ್ಟ್ನರ್‌ಶಿಪ್ ಕ್ಲೋಸ್ ಮಾಡಿ ರಮೇಶ್ ಅಂಕಲ್‌ಗೆ ಆ ಬಿಸಿನೆಸ್ ಬಿಟ್ಕೊಡ್ತೀನಿ ಅಂದಾಗ್ಲೂ ‘ನಾನೇ ಪಾರ್ಟ್ನರ್ ಆಗಿ ನಡೆಸ್ಕೊಂಡು ಹೋಗ್ತೀನಿ ಬೆಂಗ್ಳೂರಲ್ಲೇ ಇದ್ದು’ ಅಂದೆ. ಅಪ್ಪ ಆಗ ನಂಗೆ ತುಂಬಾ ಅವಮಾನ ಆಗೋ ಥರಾ ಬಾಯಿಗೆ ಬಂದ ಹಾಗೆ ಬೈದ್ರು. ‘ರಮೇಶ್ ಅಂತ ಒಳ್ಳೆ ಮನುಷ್ಯನಿಗೆ ನಿನ್ನಂಥ ಪೋಲೀನ ಪಾರ್ಟ್ನರ್ ಮಾಡಿ ಅವನ ಮನೆ ಹಾಳು ಮಾಡ್ಲಾ?’ ಅಂದ್ರು. ಆಗ್ಲಿಂದ ನಂಗೆ ಅಪ್ಪನ್ನ ಕಂಡ್ರೆ ಸಿಟ್ಟು ಇತ್ತು. ಆದ್ರೆ ಕೊಲ್ಲೋ ಅಷ್ಟು ದ್ವೇಷ ಖಂಡಿತಾ ಇರ್ಲಿಲ್ಲ.
ನಾನು ಶಿವಮೊಗ್ಗಕ್ಕೆ ಹೋದ ಮೇಲೆ ಇವ್ನು ಅಲ್ಲಿಗೂ ಬಂದು ನನ್ನನ್ನು ಪೀಡಿಸೋಕೆ ಶುರು ಮಾಡ್ದ. ನಂಗೆ ಆಗ ಮನೇಲಿ ದುಡ್ಡು ಸಿಗ್ತಾನೇ ಇರ್ಲಿಲ್ಲ. ಎಷ್ಟಾಗಿತ್ತೋ ಯಾರಿಗ್ಗೊತ್ತು? ‘ಸಿಕ್ಕಾಪಟ್ಟೆ ಸಾಲ ಬಾಕಿ ಇದೆ ನಿಂದು’ ಅಂತ ಇವ್ನು ಹೆದರಿಸ್ತಿದ್ದ. ಹೋದ ವಾರ ‘ನಿಮ್ಮ ಅಪ್ಪನ್ನ ಹೆದರ್ಸಿ ದುಡ್ಡು ವಸೂಲಿ ಮಾಡ್ತೀನಿ. ನಿನ್ನ ಹೆಸರೇನೂ ಹೇಳಲ್ಲ, ನಮ್ಮ ದುಡ್ಡು ಬಂದ ಮೇಲೆ ನಿನ್ನುನ್ನ ಮತ್ತೆ ಮೀಟ್ ಮಾಡೋದೇ ಇಲ್ಲಾ’ ಅಂತ ಹೇಳಿದ್ದ. ಮೊನ್ನೆ ನನ್ನನ್ನ ಬೆಂಗಳೂರಿಗೆ ಕರ್ಕಂಡು ಬಂದ. ಅಪ್ಪನ್ನ ಅವ್ನು ಕೊಲ್ತಾನೆ ಅಂತ ನಂಗೆ ನಿಜವಾಗ್ಲೂ ಗೊತ್ತಿರ್ಲಿಲ್ಲ. ಈಗ ಹೀಗೆ ಮಾಡ್ಬಿಟ್ಟ’ ಎಂದು ಕಣ್ಣೀರು ಹಾಕಲು ಶುರುವಿಟ್ಟ"
ಚೋಟು ಸುಶಾಂತನ ಕಡೆಗೊಮ್ಮೆ ಕೆಕ್ಕರಿಸಿ ನೋಡಿದ. ಸುಶಾಂತ ಬೆದರಿ ಇನ್ಸ್‌ಪೆಕ್ಟರ್ ಮೋಹನ್‌ನತ್ತ ನೋಡಿದ, ‘ನನ್ನನ್ನು ಕಾಪಾಡಿ’ ಅನ್ನುವಂತೆ.
ಇನ್ಸ್‌ಪೆಕ್ಟರ್ ಮೋಹನ್ ಈಗ ಚೋಟುವಿನ ಕಡೆ ತಿರುಗಿ ‘ಅವ್ನುನ್ನೇನು ಗುರಾಯ್ಸೋದು? ಇವ್ನು ಹೇಳಿದ್ದೆಲ್ಲಾ ನಿಜ ತಾನೇ? ಯಾಕೆ ಕೊಂದೆ ಇವನ ಅಪ್ಪನ್ನ? ಒಪ್ಕೊಂಡ್ರೆ ಸರಿ, ಇಲ್ಲಾಂದ್ರೆ ಬೆಂಡೆತ್ತಿ ಬಿಡ್ತೀನಿ’ ಅಂದ.
ಚೋಟು, ಬೇರೆ ದಾರಿ ಕಾಣದೆ, ಒಪ್ಪಿಕೊಳ್ಳುತ್ತಾ ‘ಇವರಪ್ಪ ದೊಡ್ಡ ಕುಳ ಅಂತ ನಮಿಗೆ ಗೊತ್ತಿತ್ತು. ಇವ್ನಿಗೆ ಡ್ರಗ್ಸ್, ಡ್ರಿಂಕ್ಸ್ ಚಟ ಹತ್ತಿಸಿದ್ವಿ. ಮೊದ್ಲು ಮೊದ್ಲು ಇವನ ಹತ್ರ ಬೇಕಾದಷ್ಟು ದುಡ್ಡು ಇರ್ತಿತ್ತು, ಕೊಡ್ತಿದ್ದ. ಕಡೆಗೆ ಸಾಲ ಹೇಳೋಕೆ ಸುರು ಮಾಡ್ದ. ಸಾಲ ಕೊಟ್ಟೂ ಕೊಟ್ಟು ಇವನನ್ನ ನಮ್ ಬಿಗೀಲಿ ಇಟ್ಕೊಳೋ ಪ್ಲಾನ್ ಮಾಡಿದ್ವಿ. ಒಂದಲ್ಲ ಒಂದು ದಿನ ಇವನತ್ರ ವಸೂಲು ಮಾಡ್ಬೌದು ಅಂತ. ಆದ್ರೆ ಇವ್ನು ಬೆಂಗ್ಳೂರು ಬಿಟ್ಟು ಹೋಗ್ಬಿಟ್ಟ. ಪಾರ್ಟಿ ಇನ್ನ ನಮ್ ಕೈಗೆ ಸಿಕ್ಕಲ್ಲ ಅಂತ ಗೊತ್ತಾಯ್ತು. ಬೆಂಗ್ಳೂರಿನ್ ಫರ್ಮನ್ನ ಇನ್ನೊಬ್ಬ ಪಾರ್ಟ್ನರ್ ರಮೇಶ್ ಅವರಿಗೆ ಬಿಟ್ಟು ಕೊಡೋ ಸೆಟಲ್‌ಮೆಂಟ್‍ಗೆ ಇವನ ಅಪ್ಪ ಬರ್ತಾರೆ ಅಂತ ಗೊತಾಯ್ತು.
ನಮ್ ಬಾಸ್ ಆಗ ನಂಗೆ ಈ ಉಪಾಯ ಹೇಳ್ಕೊಟ್ರು. ಇವನ ಅಪ್ಪನನ್ನ ಮುಗಿಸಿ ಅದರ ಆರೋಪವನ್ನ ಅವರ ಪಾರ್ಟ್ನರ್ ಮೇಲೆ ಹಾಕಿಬಿಟ್ರೆ, ಪೂರಾ ಆಸ್ತಿ ಈ ಸುಶಾಂತಂಗೆ ಬರತ್ತೆ. ಆಮೇಲೆ ನಾವು ಬೇಕಾದಾಗೆಲ್ಲಾ ಇವ್ನುನ್ನ ಬ್ಲಾಕ್‌ಮೈಲ್ ಮಾಡಿ ದುಡ್ಡು ಕೀಳ್ಬೌದು ಅಂತ. ನಂಗೆ ಯಾರುನ್ನೂ ಕೊಂದು ಗೊತ್ತಿಲ್ಲಾ. ಬೇರೆ ಯಾರುನ್ನಾದ್ರೂ ಕಳ್ಸಿ ಅಂದೆ. ನೀನಾದ್ರೆ ಇನ್ನೂ ಹುಡ್ಗ. ಡೌಟ್ ಬರಾಕಿಲ್ಲ. ನೀನು ಸಿಕ್ಕಿ ಹಾಕ್ಕಳಲ್ಲ, ಯೋಚ್ನೆ ಮಾಡ್ಬೇಡ ಅಂದ್ರು. ಪಿಸ್ತೂಲ್ ಉಪಯೋಗ್ಸೋದು ಹೇಳಿಕೊಟ್ರು. ಎಲ್ಲಾ ಪ್ಲಾನ್ ಪ್ರಕಾರ ಆಯ್ತು, ಆದ್ರೇ ...’ ಎನ್ನುತ್ತಾ ನಿಲ್ಲಿಸಿದ.
‘ಆ ರೈಲ್ವೇ ಟಿಕೆಟನ್ನ ಬಾಗಿಲ ಸಂದಿಗೆ ಇಟ್ಟಿದ್ದು, ನೀನು ಕುಂಟ್ತಾ ನಡೀತಿದ್ದುದ್ದು ಅನುಮಾನಕ್ಕೆ ಕಾರಣ ಆಯ್ತು’ ನಾನೆಂದೆ. ಚೋಟು ಹೌದೆನ್ನುವಂತೆ ತಲೆ ಅಲ್ಲಾಡಿಸಿದ.
‘ಸತೀಶ್ ಸರ್, ಈ ಕೇಸ್ ಸಾಲ್ವ್ ಮಾಡೊಕೆ ತುಂಬಾನೇ ಸಹಾಯ ಆಯ್ತು ನಿಮ್ಮಿಂದ. ಇನ್ನು ಈ ಚೋಟು ಹಿಂದೆ ಇರೋ ಆಸಾಮಿಗಳನ್ನ ಭೇಟೆ ಆಡಿ ಮುಗಿಸ್ತೀನಿ ನಾನು’ ಎಂದ ಇನ್ಸ್‌ಪೆಕ್ಟರ್ ಮೋಹನ್. ಡಿವೈಎಸ್‌ಪಿಯವರೂ ಕೂಡಾ ಅದೇ ಮಾತನ್ನ ಹೇಳಿದರು.
‘ಯಾವುದೇ ಅಪರಾಧ ನಡೆದಾಗ ಪೋಲೀಸ್ ಇಲಾಖೆಗೆ ಸಹಕಾರ ಕೊಡೋದು ಎಲ್ಲಾ ನಾಗರಿಕರ ಕರ್ತವ್ಯ. ಅದ್ರಲ್ಲೂ ನಾನೊಬ್ಬ ಪತ್ತೇದಾರನಾಗಿರೋದ್ರಿಂದ ಅದು ನನ್ನ ಮೊದಲ ಆದ್ಯತೆ ಆಗಿರಬೇಕಲ್ವೇ? ಇದು ನನ್ನ ಆಪ್ತಮಿತ್ರನ ಕೊಲೆ ಕೇಸ್ ಆದ್ರಿಂದ ನನ್ನ ಜವಾಬ್ದಾರಿ ಇನ್ನೂ ಹೆಚ್ಚಿತ್ತು’ ನಾನೆಂದೆ ನಮ್ರನಾಗಿ.
ಅವರೆಲ್ಲರಿಂದ ಬೀಳ್ಕೊಂಡು ಮನೆಯತ್ತ ಹೊರಟೆವು. ಗೋಪಿಯ ಅಪ್ಪ ಕೇಳಿದ್ರು ‘ಸತೀಶಾ, ಅವುನ್ ತಪ್ಪೇನೂ ಇಲ್ಲಾ ಅಲ್ವಾ? ಸುಶಾಂತಂಗೆ ಶಿಕ್ಷೆ ಆಗತ್ತಾ? ಎಷ್ಟ್ ವರ್ಷ ಆಗ್ಬಹುದೋ? ಅಪ್ಪನ್ನ ಬೇರೆ ಕಳ್ಕೊಂಡ. ಪಾಪ ತುಂಬಾ ನೊಂದ್ಕೊಂಡಂಗೆ ಕಾಣ್ಸುತ್ತೆ’ ಎಷ್ಟೇ ಆದ್ರೂ ಮೊಮ್ಮಗ ಅಲ್ವೇ? ಕರುಳು ಕೇಳ್ಬೇಕಲ್ಲ.
‘ಉಪ್ಪು ತಿಂದೋನು ನೀರು ಕುಡೀಲೇಬೇಕಲ್ಲಾ. ಆದರೆ ಇವನು ಮಾಫಿ ಸಾಕ್ಷಿ ಆದ್ರೆ ಶಿಕ್ಷೆ ಕಡ್ಮೆ ಆಗ್ಬಹುದು. ಎಷ್ಟು ಅನ್ನೋದನ್ನ ಕೋರ್ಟ್ ತೀರ್ಮಾನ ಮಾಡುತ್ತೆ. ಒಳ್ಳೇ ಲಾಯರನ್ನಿಟ್ಟು ನೋಡೋಣ’ ನಾನೆಂದೆ.
‘ನಾವಿನ್ನು ಇಲ್ಲಿಂದ್ಲೇ ಹೊರಡ್ತೀವಪ್ಪಾ. ಅಲ್ಲಿಯ ಕೆಲಸಗಳನ್ನೂ ನೋಡ್ಬೇಕಲ್ಲ’ ಗೋಪಿಯ ಚಿಕ್ಕಪ್ಪ ಅಂದರು. ‘ಸರಿ’ ಅನ್ನದೇ ಬೇರೆ ವಿಧಿಯಿಲ್ಲವಾಗಿತ್ತು.
ನಾನು ಮತ್ತು ರಮೇಶ ಅವರ ಕಾರು ಅತ್ತ ಹೋಗುವುದನ್ನೇ ನೋಡುತ್ತಾ ನಿಂತೆವು. ನಮ್ಮಿಬ್ಬರ ಮನಸ್ಸೂ ಭಾರವಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.