ADVERTISEMENT

ಸಣ್ಣ ಕಥೆ: ತಿರುವು

ಎಡೆಯೂರು ಪಲ್ಲವಿ
Published 10 ಅಕ್ಟೋಬರ್ 2020, 19:30 IST
Last Updated 10 ಅಕ್ಟೋಬರ್ 2020, 19:30 IST
ಕಲೆ: ಮುರಳೀಧರ ರಾಥೋಡ
ಕಲೆ: ಮುರಳೀಧರ ರಾಥೋಡ   

ಬಾಲ್ಯದಲ್ಲಿ ಕೆಂಪು ಬಸ್ಸನ್ನು ನೋಡಿದಾಗಲೆಲ್ಲ, ಅದರತ್ತ ಕೈಬೀಸಿ ಕಿಸಿಕಿಸಿ ನಗುವಾಗ ಏನೋ ಹರ್ಷ. ನೆನಪಲ್ಲಿ ರಮೀ, ಮಾರ ಸುಳಿದು ಹೋದರು. ಈ ಮಾಯಾನಗರದ ಅಬ್ಬರದಲ್ಲಿ ಸಿಲುಕಿ ಆರೋಗ್ಯ, ದಿನಚರಿ, ಭಾಷೆ ಎಲ್ಲವೂ ಗೊಂದಲಕ್ಕೆ ಸಿಲುಕಿ ಮನಸ್ಸು ರಾಡಿಯಾಗುತ್ತದೆ. ದುಡಿಮೆ ಏನೋ ಇದೆ. ಆದರೆ, ಸಮಯದ್ದೇ ಅಭಾವ. ಈ ಮೂರು ದಿನವಾದ್ರೂ ಹೆಂಡತಿ ಪದ್ಮ ಮತ್ತು ಅವ್ವನೊಂದಿಗೆ ಹಳ್ಳೀಲಿ ಬೆರೆತು ಖುಷಿಯಾಗಿ ಇರಬೇಕು ಅನ್ನಿಸುತ್ತೆ. ಬಸ್ಸು, ಬೆಂಗಳೂರಿನಿಂದ ಸಾಗುವ ಹಾದಿ ಬೀದಿಗಳಲ್ಲಿ ಸಿಗುವ ದೂಳನ್ನು ಬಳಿದು, ಸಾವರಿಸಿಕೊಂಡು ನೆಲಮಂಗಲ ಹಾದು ತುಮಕೂರಿನ ಕಡೆ ಸಾಗುತ್ತಿತ್ತು.

ನನಗಾಗಿ ಅವ್ವ ಕಾಯುತ್ತ, ಪದ್ಮ ನನ್ನನ್ನೇ ನೆನೆಸುತ್ತ ಇರುವರೇನೋ ಅನ್ನಿಸ್ತಿತ್ತು. ಅವ್ವನ ಮುಗ್ಧತೆ, ನವಿರಾದ ಸ್ಪರ್ಶವನ್ನು ನೆನಪಿನಲ್ಲಿ ಸುಳಿದು ಖುಷಿಯಾಗುತ್ತಿತ್ತು. ಹೀಗೆ ಆಲೋಚಿಸುತ್ತಿರುವಾಗ ‘ಯಾಕೆ ಅಂಕಲ್, ನಿದ್ದೇಲಿ ನಗ್ತಿದ್ದೀರಾ?’ ಎಂಬ ಧ್ವನಿ ಕೇಳಿ ನೆನಪುಗಳ ಸರಣಿಯಿಂದ ಕಳಚಿಕೊಂಡು ರೆಪ್ಪೆ ತೆರೆದು ಎರಡೂ ತುಟಿಗಳನ್ನು ಹಿಗ್ಗಿಸಿದೆ. ಮುಖದಲ್ಲಿ ನಗು ಸುಳಿಯಿತು. ‘ಹೀಗೆ ನೆನಪುಗಳು ಪುಟ್ಟ’ ಎಂದೆ. ‘ಓ ಹಗಲುಗನಸಾ?’, ದನಿಯ ಹಿಂದೆ, ‘ಹಳೆಯ ಹುಡುಗಿಯ ಕನವರಿಕೆಯೇ?’ ಎಂಬ ಕಚಗುಳಿಯ ಅಣಕವಿದ್ದಂತಿತ್ತು. ನಾನು ಮತ್ತೆ ನಕ್ಕು ಕಣ್ಣು ಮುಚ್ಚಿದೆ. ಕಾಲೇಜಿನ ಹುಡುಗಿ. ಬಿಳಿಯ ಬೋರ್ಡಿನಂತೆ ನುಣುಪಾಗಿರುವ ಈಕೆಗೆ ಚಂದ್ರಿಯ ಹೋಲಿಕೆ ಇದೆಯಲ್ಲವೆ? ಅಂದುಕೊಂಡೆ. ನನ್ನನ್ನು ಬಹುದಿನ ಕಾಡಿ, ನಿದ್ದೆಗೆಡಿಸಿ, ಹರೆಯದ ಕೌತುಕಗಳಿಗೆ, ಹುಚ್ಚಾಟಕ್ಕೆ ನೆವವಾಗಿದ್ದವಳು ಚಂದ್ರಿ, ಡಾಬರ್ ಚಂದ್ರಿ. ನನ್ನ ಮೂರನೇ ಕ್ರಶ್. ಅದಕ್ಕಿಂತ ಮುಂಚೆ ಇಬ್ಬರು ಇದ್ರು, ಬಾಲ್ಯದ ಬಾಲಿಶತನದ ಹೃದಯಕ್ಕೇನೂ ಅಂಟಿರಲಿಲ್ಲ.

ಚಂದ್ರಿ ನಮ್ಮೂರಿನವಳೆ. ಆದರೂ ಆಕೆಯೊಂದಿಗಿನ ಮಾತು ಅಷ್ಟಕ್ಕಷ್ಟೇ.

ADVERTISEMENT

ಒಳಗೊಳಗೆ ಮೂಲೆಯಲ್ಲಿದ್ದು ಮಳೆಮಾಸ ಬಂದಾಗ ಹೊರಬರುವ ಅಣಬೆಯಂತೆ, ಮಾತು ಬೆಸೆಯಲು ಹೊಂಚುತ್ತಿದ್ದೆ. ಅಂದು ಶಾಲೆಯಲ್ಲಿ ನಮಗೆ ಇಪ್ಪತ್ತು ಪುಟಗಳ ಒಂದೊಂದು ಕಥೆ ಪುಸ್ತಕ ನೀಡಿದರು. ಚಂದ್ರಿಗೆ ‘ಕಚ’ ಪುಸ್ತಕ. ಅದನ್ನೇ ನೆವ ಮಾಡಿಕೊಂಡು, ‘ಕೊಡು ನಾನೋದ್ಕೊಡ್ತೀನಿ’ ಅಂದೆ. ‘ಊಹುಂ. ನಾನ್ ಓದ್ಬೇಕು’ ಹೀಗೆ- ಎಳೆದಾಡುತ್ತ ಅದರ ಹಿಂತುದಿ ಕಿತ್ತು ಹರಿದೋಯಿತು. ಕ್ಲಾಸಿನಲ್ಲಿದ್ದವರು ನಮ್ಮನ್ನೇ ನೋಡುತ್ತಿದ್ದದ್ದು ಆಕೆಗೆ ಇರುಸು ಮುರುಸು ತಂದಿತ್ತು. ಅಲ್ಲಿಗೆ ಬಂದ ಎಂ. ಜಿ. ಮಾಸ್ಟರ್‌ಗೆ ಚಂದ್ರಿ ವಿಷಯ ಹೇಳಿದಳು. ಮೇಷ್ಟ್ರು ಹಲ್ಕಿರಿಯುತ್ತಾ ಉಲ್ಟಾ ಕೈ ಹಿಡಿದು ಅಂಗೈ ಹಿಂಬಂದಿಗೆ ಇಬ್ಬರಿಗೂ ಬಾರಿಸಿದರು. ನಾನೇನೂ ಮಾಡದಿದ್ದರೂ ಮೇಷ್ಟ್ರು ಹೊಡೆದರಲ್ಲ, ಎಂದು ಚಂದ್ರಿ ನನ್ನ ಮೇಲೆ ಕೋಪ ಮಾಡಿಕೊಂಡಳು. ‘ನಿನ್ನಜ್ಜಿ. ನಂಗೆ ಹೊಡುಸ್ತ್ಯಾ’ ಅಂತ ತಲೆ ಮೇಲೆ ಎರಡೇಟು ಕೊಟ್ಟರೂ ಆಕೆಯ ಕೋಪ ಇಂಗಲಿಲ್ಲ.

ಅವಳನ್ನು ಹತ್ತಿರವನ್ನಾಗಿಸಿಕೊಳ್ಳುವ ನನ್ನ ಮೊದಲನೆ ಬಾಣದ ಗುರಿ ಮಕಾಡೆ ಮಲಗುವ ನಿಟ್ಟಿನಲ್ಲಿದ್ದುದರಿಂದ ಶಾಲೆಯ ಗೇಟಾಚೆ ಹೊಂಗೆ ಮರದ ಕೆಳಗೆ ಕುಳಿತು ಬಗೆ ಬಗೆ ಕುರುಕಲು ‌ತಿಂಡಿಗಳನ್ನು ಮಾರುವ ಅಜ್ಜಿಯ ಬಳಿ ಎಂಟಾಣೆಗೆ ಹಾಲ್ಕೋವಾ ತಂದು ಅವಳಿಗೆ ಕೊಟ್ಟು ಸರಿ ಮಾಡಿಕೊಳ್ಳಲು ಮುಂದಾದೆ. ಹೀಗೆ ಎರಡು ಮೂರು ಸಲವಾದ ಮೇಲೆ ಗೆಳೆತನಕ್ಕೆ ಚಿಗುರು ಬಂತು. ಅಂದಿನಿಂದ ಚಂದ್ರಿ ನನ್ನ ಜೊತೆ ಆಟವಾಡಲು ಬರುವುದಕ್ಕೆ ಆರಂಭಿಸಿದಳು. ರಮಿ, ಮಾರನು ಕೂಡ ಜೊತೆಯಾಗೋರು. ಚಂದ್ರಿ, ತುಂಡು ಲಂಗ ಹಾಕಿ, ಎರಡು ಜಡೆ ಹೆಣೆದು ಆಂಜನೇಯನ ಗುಡಿ ಪಕ್ಕದ ಮೈದಾನಕ್ಕೆ ನೀಲಿ-ಹಸಿರು ಪಾಚಿಯ ಹೊಳೆವ ಗೋಲಿಗಳನ್ನು ತಂದು ಆಟವಾಡುತ್ತಿದ್ದಳು. ಗೋಲಿ ಆಟದಲ್ಲಿ ಅವಳೇನಾದ್ರೂ ಒಮ್ಮೆ ಸೋತ್ರೆ ಕುಂಟಾಬಿಲ್ಲೆಗೆ ತಿರುಗಿಸೋಳು. ಇಲ್ಲಿ ಅವಳ ಮುಂದೆ ಅಮರೈಟ್ ಆಡುವುದರಲ್ಲಿ ನಾಲ್ಕೂ ಜನ ಸೋತು ಸುಣ್ಣವಾಗುತ್ತಿದ್ದೆವು. ಆದರೆ, ಗೋಲಿಯಾಟದಲ್ಲಿ, ಎಡಗೈನಲ್ಲಿ ಗೋಲಿಯನ್ನು ಮುಷ್ಟಿಯಿಂದ ಡೀಗುತ್ತಾ, ಕುಳಿ ತುಂಬೋವರೆಗೆ ನಾನು ಆಟ್ದಲ್ಲಿ ಹಿಂದೆ ಸರಿಯೋಲ್ಲ. ಆದರೆ ಮೋಡ ಕಿರಣಗಳಿಗೆ ಅಡ್ಡ ಬಂದಂತೆ ಪ್ರೀತಿ ಅಡ್ಡ ಬಂದು ಅವ್ಳ ಮುಂದೆ ಗೆಲ್ಲಲು ಮಾತ್ರ ಒಂಥರಾ ನಾಚಿಕೆ.

ಈ ಎಲ್ಲಾ ಹಿಂಜರಿತಗಳಿಂದ ನಾನು ಅವಳನ್ನು ನೋಡುತ್ತಿದ್ರೆ ಆ ನಗು ಬೀಸಿ, ಕಣ್ಣಲ್ಲೇ ಮೋಡಿ ಮಾಡಿ ಮನಸ್ಸನ್ನು ಗಟ್ಟಿಕಾಯಿ ಚಟ್ನಿಯಂತೆ ರುಬ್ಬುತ್ತಿದ್ದಳು. ನನ್ನ ಮನಸ್ಸು ಸಹ ಆಗ ಡಿಜೆ ಬ್ಯಾಂಡಿನಂತೆ ಲಂಗು ಲಗಾಮಿಲ್ಲದೆ ಕುಣಿತಿತ್ತು. ಒಂದ್ ಭಾನುವಾರ ದಿನ ನಮ್ಮೂರ ತಿಟ್ಟಲ್ಲಿ ನಾನು ಹಂಚಿಕಟ್ಟಿ ಕೊಯ್ಯುವಾಗ ಅವಳು ಶಿಂಷಾ ನದಿಯ ದಂಡೆಯಲ್ಲಿ ಬಟ್ಟೆ ಸೆಣಿತಾ ಇದ್ದಳು. ನಾನು ಕಣ್ಣಲ್ಲಿ ಅವಳನ್ನೇ ದಿಟ್ಟಿಸುತ್ತಾ ಸುಮ್ಮನೆ ನಿಧಾನಕ್ಕೆ ಹಂಚಿಕಡ್ಡಿ ಕೊಯ್ಯುವ ನಾಟಕವಾಡ್ತಾ ಇದ್ದೆ. ನನ್ನನ್ನು ನೋಡಿದವಳು ಎದ್ದು ಪಕ್ಕದಲ್ಲಿದ್ದ ಟಬ್ಬಿಗೆ ಮತ್ತಷ್ಟು ಟೈಡ್ ಪುಡಿ ಬೆರೆಸಿ ಎಣ್ಣೆಗೆ ಹಾಕಿದ ಪೂರಿಯಂತೆ ನೊರೆ ಎಬ್ಬಿಸಿದಳು. ನೊರೆಯನ್ನು ಅಂಗೈಯಲ್ಲಿ ಹಿಡಿದು ಮೂಗಿನ ಹತ್ತಿರ ತಂದು ಘಮ ಹೀರಿದಳು. ನಂತರ ಎಲ್ಲವಕ್ಕು ಚಕ ಚಕ ವ್ಹೀಲ್ ಸೋಪ್‌ ತಿಕ್ಕಿ, ಕಲ್ಲಿಗೆ ಉಜ್ಜಿ ಸೆಣೆದು, ಜಾಲಿಸಿ ಹಿಂಡಿ ಮಂಕರಿಗೆ ಹಾಕಿಕೊಂಡು ಬಂದ್ಲು. ಅವಳ ಕೈಬೆರಳುಗಳ ಮಧ್ಯೆ ನೀಲಿ ಹಚ್ಚೆ ಮೋಡದ ಹುಬ್ಬಿನಂತೆ ಎದ್ದಂತಿತ್ತು. ಹಾದಿಯಲ್ಲಿ ಸಾಗುವಾಗ ಸೇವಂತಿಗೆ ಹೂವಿನ ಬುಡ ಕಡಿದು ಅವಳಿಗೆ ನೀಡಲು ಅನುವಾದೆ. ನನ್ ಕೈ ಸಣ್ಣದಾಗಿ ನಡುಗ್ತಾ ತುಸು ಹಿಂಜರಿಯಿತು. ಅವಳು ಅದರತ್ತ ನೋಡದೆ ತನ್ನಲ್ಲೇ ತಾನೇನೋ ರಾಗ ಹಾಕುತ್ತಾ ಮುನ್ನಡೆಯುತ್ತಿದ್ದಳು. ‘ನಮ್ ತೋಟ್ದಾಗೆ ಅದೇಟ್ ಗುಬ್ಬಚ್ಚಿ ಹೂ ಬಿಟ್ಟಿದ್ವು ಗೊತ್ತೇನ್ಲಾ. ಮುಟ್ಟಕ್ಕೆ ಸರಿ, ಕಟ್ಟಿ ಮುಡುದ್ರೆ ವೈನ್ಹಾಗಿರ್ತದೆ’ ಅಂದ್ಲು. ಅವಳು ಹೀಗೆ ದೊಡ್ಡೋರ ಹಾಗೆ ಜಗತ್ತನ್ನ ಬೇರೆ ದೃಷ್ಟಿಕೋನದಿಂದ ನೋಡುವ ಹಾಗೆ ಮಾತಿಗೆ ನಿಂತಾಗ ನಗು ಉಕ್ಕಿ ಬರುತ್ತೆ. ‘ಈ ಹೂನ ಕಟ್ದ ಹಾಗೆ ಸಂಬಂಧಗಳ್ನ ಕಟ್ಟಾಕುವಂಗೆ ಇರ್ಬೇಕಿತ್ತು. ಆಗ ನಮ್ಮಪ್ಪ ನಮ್ಮವ್ವನ್ ಬಿಟ್ ಎಲ್ಲೂ ಹೋಗ್ತಿರ್ಲಿಲ್ಲ’ ಎಂದಳು. ‘ಆಗ ಕತ್ತು ಕತ್ತರಿಸಿದಂಗೆ ದಾರ್‍ದಿಂದ ಕಟ್ಟುದ್ರೆ ಉಸಿರು ಕಟ್ಟಲ್ವ’ ಎಂದೆ. ಎರಡು ನಿಮಿಷ ದುರುಟ್ಟಿ ನೋಡಿದಳು.

‘ದ್ರಾಬೆ ನೀನು. ಏನೂವಾ ಅರ್ಥ ಮಾಡ್ಕೊಳಲ್ಲ’

‘ಗ್ರಾಬೆ ನೀನು’

‘ಗೂಬೆ ನೀನು’

‘ಗೂಶ್ಲು ನೀನು’

‘ನೀನ್ ಗೂಬೆ’

‘ನೀನ್ ಗೂಶ್ಲು’

‘ನೀನ್ ಗ್ರಾಬೆ’

‘ನೀನ್ ದ್ರಾಬೆ’... ಹೀಗೆ..

ಆದರೆ ಮನಸ್ಸಲ್ಲಿ ಮಂಡಿಗೆ ಮೇಯುತ್ತಿದ್ದ ನನ್ನ ತಲೆ ಮೇಲೆ ಪಟ್ ಅಂತ ತನ್ನ ಮುಂಗೈ ಬಿಟ್ಟಳು. ‘ಆದ್ರೆ ಬಾಳುವೆ ಮಾಡಕ್ಕೆ ಒಂದ್ ಹೂ ಸಾಕಲ್ಲ’ ಎನ್ನುತ್ತಾ ಅವಳನ್ನು ಓಲೈಸುವ ಸಲುವಾಗಿ ಎಂದು ಸೇವಂತಿಗೆ ಬುಡವನ್ನು ಹೂವಿನೊಂದಿಗೆ ಮುಂದೆ ಹಿಡಿದೆ. ನಮ್ಮೂರ ಬೈರ ಹುಲ್ಲನ್ನು ಹೊತ್ತುಕೊಂಡು ಬರುವುದನ್ನ ಕಂಡು ತಕ್ಷಣ ಮರೆ ಕಾಣಿಸಿದೆ. ‘ನಿಂಗೊಂದು ಚೆಂದದ್ ಆಟ ತೋರುಸ್ಲಾ’ ಅಂದಳು.

‘ಹ್ಹೂಂ’ ಅಂದೆ ಆಸ್ಥೆಯಿಂದ.

ಅವಳ ಆಟಗಳಲ್ಲಿ ಅದೇನೋ ಮಜಬೂತತೆ ಇತ್ತು ನನಗೆ. ಇಲ್ನೋಡು ಎಂದು ಒಂದೊಂದೇ ಎಳೆಯನ್ನು ಬಿಡಿಸುತ್ತಾ ‘ಐದು ಕೋಟೆಯ ಚಿನ್ನದ ಬಾಗಿಲ್ಗಳ ಬಿಡ್ಸುದ್ರೆ, ಐದು ಚಿನ್ನದ ಕಂಬ, ಕಂಬದ್ ಮ್ಯಾಲೆ ಐದು ಮೂಲೆಯ ಕೋಟೆ, ಅದ್ರೊಳ್ಗೆ ಒಂದು ಅಂತಃಪುರ, ಅಂತಃಪುರದ್ ಮಂಚದ್ ಮ್ಯಾಗೆ ರಾಜ ರಾಣಿ ತಬ್ಕಂಡು ಮಲಗವ್ರೆ. ಈಗ ಬೇರೆ ಮಾಡಣ್ವ, ಹಾಗೆ ಇರಲೇನೋ’ ಎಂದಳು, ಎಕ್ಕದ ಹೂ ಪಕಳೆಗಳನ್ನು ನಾಜೂಕಿನಿಂದ ಬಿಡಿಸುತ್ತಾ. ನಾನು ಶತಾವರಿ ನಕ್ಕೆ. ಒಂದು ಹೂವಿನ ವರ್ಣನೆಗೆ ಇಷ್ಟೆಲ್ಲಾ ಚೆಂದದ ಕಥೆ ಕಟ್ಟಬಹುದೇ? ಎಂದು ಆಗಲೇ ತಿಳಿದಿದ್ದು. ಎಷ್ಟೇ ಚೆಂದದ ಕಥೆ ಆದರೂ ಕೇಳುವ ಉಸಾಬರಿ ನನಗಿರಲ್ಲ. ನಾನು ಅವಳ ಮಾತುಗಳ ಕಡೆ ಲಕ್ಷ್ಯ ಕೊಡಲಿಲ್ಲ ಅಂದ್ರೆ, ಕೇಳಲಿಲ್ಲ ಅಂದ್ರೆ, ಅವಳ ಅಭಿರುಚಿಗೆ ನಾನು ತಕ್ಕವನಲ್ಲ ಎಂದು ದೂರವಾಗಿಬಿಟ್ರೆ ಹೀಗೆ ಮನಸ್ಸಿನಲ್ಲಿ ಬೋರ್‍ಅನ್ನಿಸಿದರು ಅವಳು ಹೇಳುತ್ತಿದ್ದ ಎಲ್ಲಾ ಕಥೆಗಳಿಗೂ ಹೂಂಗುಟ್ಟುತಿದ್ದೆ. ನಂತರ ‘ರಾಜ ರಾಣಿ ಒಟ್ಟಿಗೆ ಇದ್ರೆನೆ ಸರಿ’ ಅಂದೆ. ‘ಮತ್ತೆ ನೀ ಒಬ್ನೆ ರಾಣಿಗೆ ರಾಜ ಆಗ್ಬೇಕು’ ಎಂದು ಅವಳು ಹೇಳುತ್ತಿದ್ದಾಳೆ ಎಂದೆನಿಸಿ ‘ಹೂ ನೀ ಒಪ್ತಿಯಾ’ ಎಂದು ಕೆನ್ನೆಗೆ ಮುದ್ದಿಟ್ಟಿದ್ದ ತಕ್ಷಣವೇ ‘ಅಯ್ಯೋ ದ್ರಾಬೆನನ್ ಮಗ್ನೆ’ ಎಂದು ಅಳುತ್ತಾ ನಿಂತು ಬಿಟ್ಟಳು. ನಾನು ‘ಅಮ್ಮೀ ಸಾರಿ ಕಣಮ್ಮಿ’ ಎಂದೆ. ನನಗೆ ಏನೊಂದು ತೋಚದೆ ಭಯಭೀತನಾಗಿ ‘ಸುಮ್ನೆ ಅಂದ್ನೆ ಯಾರ್ಗೂ ಹೇಳ್ಬೇಡ. ತಪ್ಪಾತು. ಪ್ಲೀಸ್ ನೀನಂದ್ರೆ ನಂಗ್ ಇಷ್ಟ ಅದ್ಕೆ ಹಂಗ್ ಮಾಡ್ದೆ’ ಅಂತು ಅವಳ ಕೈ ಕಾಲು ಹಿಡಿದೆ. ‘ಹಾಳ್ ಮಾಡ್ಬಿಟ್ಯಲ್ಲೋ’ ಅಂತ ಮತ್ತಷ್ಟು ರಚ್ಚೆ ಶುರು ಮಾಡಿದಾಗ ನಾನು ಅದೆಂತಹ ಮನೆಹಾಳ್‌ ಕೆಲಸ ಮಾಡಿದೆ ಅಂತ ಗೊತ್ತಾಗದೆ ಇದ್ರು ಅರಿವಿಗೆ ಬಾರದ ಅದಾವುದೋ ದೊಡ್ಡ ಅನಾಹುತ ಮಾಡಿದ್ದೇನೆ ಎಂಬ ಭಯದಿಂದ ಓಟ ಕಿತ್ತೆ. ಅಬ್ಬಾ! ಅವತ್ತಂತೂ ಜೀವ ಕೈಗೆ ಬಂದಿತ್ತು ನನಗೆ. ಇದಾದ ಎರಡು ವಾರ ನಾನ ಅವಳನ್ನ ನೋಡಲಿಲ್ಲ. ನೋಡಿದ್ರು ಮಾತಾಡಿಸ್ತಾ ಇರಲಿಲ್ಲ. ಏಕೆಂದರೆ ನನ್ನೊಳಗಿನ ಮನ್ಮಥ ಭಯಸ್ಥನಾಗಿ ಮೂಲೇಲಿ ಮಲಗಿದ್ದ. ನಂತರದ ದಿನಗಳಲ್ಲಿ ಒಂದೆರಡು ಬಾರಿ ಅವಳನ್ನ ಕಂಡರೂ ಸಹ ಜಾಣ ಕುರುಡನಂತೆ ನಿಂತಿದ್ದೆ. ಯಾರ, ಯಾವ ಗುಮಾನಿಗೂ ನಾನು ಕಾರಣನಾಗಿಲ್ಲದೆ ಇದ್ದದ್ರಿಂದ, ಅವಳು ಹಾಗೆ ಮನೆಯವರಿಗೆ ಹೇಳಿ ಜಗಳ ಮಾಡಿಸಿಲ್ಲ ಅಂದಮೇಲೆ ಚಂದ್ರಿಗೂ ನನ್ನ ಮೇಲೆ ಪ್ರೀತಿ ಇತ್ತು ಎಂದುಕೊಂಡೆ. ಆದರೆ ಮೊದಲ ಮುತ್ತಿನ ಕಚಗುಳಿಯ ಮರೆಯದ ಅನುಭಾವ ತುಂಬಿಸಿದವಳ ಬದುಕಿಗೆ ನಾನೇ ಮುಳ್ಳಾಗುತ್ತೇನೆ ಎಂದು ಊಹಿಸಿಯೂ ಇರಲಿಲ್ಲ.

ನಮ್ಮ ಶಾಲೆಯಲ್ಲಿ ಪ್ರತಿ ಶುಕ್ರವಾರದ ಕೊನೆಯ ಪೀರಿಯಡ್ಅನ್ನು ಅರ್ಧ ಗಂಟೆ ಬೇಗ ಮುಗಿಸಿ ಶಾರದಾ ಪೂಜೆ ಅಂತ ಮಾಡುತ್ತಿದ್ದರು. ಒಂದು ತರಗತಿಯಿಂದ ಮತ್ತೊಂದು ತರಗತಿಯವರು ವೈವಿಧ್ಯಮಯವಾಗಿ ಕಾರ್ಯಕ್ರಮ ನೀಡುವ ಹಂಬಲ, ಹಪಾಹಪಿ ಹೊಂದಿರೋರು. ಶಾಲೆಯಿಂದಲೇ ಬದುಕಿನ ನಾಟಕ ರಂಗಕ್ಕೆ ಹದ್ದು ಮೀರಿದ ಬಣ್ಣಗಳು, ರೇಸಿಸಂಅನ್ನು ಹುಟ್ಟು ಹಾಕುತ್ತವೆ. ಮತ್ತೀ ರೇಸಿಸಂ ಇಲ್ಲವಾದರೆ ಬದುಕು ನೀರಸವಾಗಿ ಬಿಡುತ್ತೆ. ಎರಡು ಮಳೆ ಮರಗಳ ಅಡಿಯಲ್ಲಿ ನಾವು ಪ್ರೇಕ್ಷಕರು. ಮೊದಲು ಪ್ರಾರ್ಥನೆ, ನಂತರ ಸುಳ್ಳು ವಾರ್ತೆಗಳು, ಟೊಮ್ಯಾಟೋ-ಚಿತ್ರನ್ನರ ಮದುವೆ ಕರೆಯೋಲೆ ಓದುವುದು ಮುಗಿದಿತ್ತು.

ಮೊದಲ ಬಾರಿಗೆ ನಮ್ಮ ಇಡೀ ಶಾಲೆಯ ಇತಿಹಾಸದಲ್ಲಿ ಕಾರ್ಯಕ್ರಮ ಮಧ್ಯದಲ್ಲೊಂದು ಪುಟ್ಟ ವಿರಾಮ ಎಂದು ಹೇಳಿದಾಗ, ನಾವೆಲ್ಲ ಈ ವಿಶಿಷ್ಟ ಪ್ರಯೋಗಕ್ಕೆ ನಿಬ್ಬೆರಗಾಗಿದ್ದೆವು. ಬ್ರೇಕ್ ಎಂದು ನ್ಯೂಸ್‌ ಆ್ಯಂಕರ್‌ಗಳು ಹೇಳಿದಂತೆ ಹೇಳಿದಾಗ ಅವಳು ಬಂದು ತನ್ನ ಮೊಳದಷ್ಟಿದ್ದ ಕೇಶರಾಶಿಯ ಮುಂದೆ ತಂದು, ಬಾಚಣಿಗೆ ಹಿಡಿದು ಕೂದಲಿಗೆ ತಾಕಿಸದೆ ಮುಖವನ್ನು ಸಿಂಡರಿಸಿ ‘ಛೆ, ಈ ಕೂದ್ಲು ಅದೆಷ್ಟು ಸಿಕ್ಕು. ಉದ್ರುತಾನೆ ಇರ್ತದೆ. ನಂಗಂತೂ ಸಾಕಾಗಿ ಹೋಗಿದೆ. ಪರಿಹಾರವಿಲ್ವ ಇದಕ್ಕೆ’ ಎಂದು ಚಿಂತಿಸುತ್ತಾ ಪಕ್ಕದ ಕುರ್ಚಿಯಲ್ಲಿ ಕೂತಳು. ಅಲ್ಲಿಗೆ ಬಂದ ಅವಳ ಗೆಳತಿ ಮಂಗಳಮ್ಮ ಅಲಿಯಾಸ್ ಮಂಗಿ ‘ಅದಕ್ಯಾಕೆ ಚಿಂತೆ. ಎಲ್ಲಾ ಕೂದಲಿನ ಸಮಸ್ಯೆಗೂ ಇಲ್ಲಿದೆ ಪರಿಹಾರ’ ಎಂದು ಡಾಬರ್ ಕೇಶ ಕಾಂತಿ ಎಣ್ಣೆ ಬಾಟಲಿಯನ್ನ ಕೊಟ್ಟಳು. ಚಂದ್ರಿ ಅದನ್ನೆತ್ತಿಕೊಂಡು ಹಲವು ವರ್ಷಗಳಿಂದ ಬಯಸಿದ ಕನಸು ಈಗ ಈಡೇರಿದೆ ಎನ್ನುವ ಹಾಗೆ ಹೆಮ್ಮೆಯಲ್ಲಿ ಒಮ್ಮೆ ಕೂದಲನ್ನು ಬಾಚಿ ಕಂಗಳಲ್ಲಿ ಆಶ್ಚರ್ಯ ಕಾಯ್ದುಕೊಂಡು ‘ಅರೆ, ವಾವ್ ನನ್ನ ಕೂದಲೀಗ ರೇಷ್ಮೆಯಷ್ಟೇ ನುಣುಪು. ಸಿಕ್ಕಿಲ್ಲ, ಉದ್ರೋದಿಲ್ಲ. ನೀವು ಉಪಯೋಗಿಸಿ ಡಾಬರ್ ಕೇಶ ಕಾಂತಿ’ ಎಂದ್ಲು. ಹಿಂದಿನಿಂದ ಮಾರ ಎದ್ದು ‘ಬೋಳು ತಲೆಗು ಆಯ್ತದ ಈ ಎಣ್ಣೆ’ ಎಂದ. ಪಿ.ಟಿ ಮೇಷ್ಟ್ರನ್ನ ಬಿಟ್ಟು ಎಲ್ಲರೂ ಗೊಳ್ ಎಂದು ನಕ್ಕಿದ್ರು. ಅಂದಿನಿಂದ ಅವಳ ಹೆಸರು ಡಾಬರ್ ಚಂದ್ರಿ ಎಂತಲೂ ನಾಮಕರಣವಾಯಿತು.

ಇದೆಲ್ಲದರ ಆಚೆಗೂ ಅವಳು ಇನ್ನೂ ಗಾಢವಾಗಿ ನನ್ನ ಮನಕ್ಕಿಳಿದದ್ದು ಕನ್ನಡ ರಾಜ್ಯೋತ್ಸವದ ಹಬ್ಬದಂದು. ಶಾಲೆಯ ಪ್ರೋಗ್ರಾಂಗೆ ಒಂದು ಹಾಡಿಗೆ ಅವಳೂ ನೃತ್ಯ ಮಾಡುತ್ತಿದ್ದಾಳೆ ಅಂತ ಗೊತ್ತಾಗಿತ್ತು. ಆ ಹಾಡಿನ ಬಗ್ಗೆ, ಅವಳ ಬಗ್ಗೆ ಈಗಲೂ ಅಷ್ಟೇ ಅಪರಿಮಿತ ಮೆಚ್ಚುಗೆ ಇದೆ. ಹಳದಿ ಬಣ್ಣದ ಮಾವಿನಕಾಯಿ ಡಿಸೈನಿನ ನೀಲಿಯಂಚಿನ ಟಸರ್ ಸೀರೆಯಲ್ಲಿ ಬೆಳದಿಂಗಳ ರಾಣಿಗೆ ಸಮನಾಗಿ ಕಂಡಿದ್ಲು ಅಂದು. ನೌವ್ರಿ ಶೈಲಿಯ ಉಡುಪಿಗೆ ಅಪ್ಪಟ ಬಯಲ್ಸೀಮೆ ಕಲಾವಿದೆ. ಕನ್ನಡ ಬಾವುಟದ ಹಳದಿ ಕೆಂಪು ಗಾಜಿನ ಬಳೆ, ಕೆಂಪು ಭೆರಣಿಯ ಗೋರಂಟಿ, ತಾಂಡವದ ಹಣೆಬಟ್ಟು, ಮೂರು ಮೊಳದ ಮರಳೆ ಕನಕಾಂಬರ ಹೂ ಅವಳಿಡೀ ಶರೀರಕ್ಕೆ ಘಮಲನ್ನು ಹೆಚ್ಚಿಸಿತ್ತು. ‘ಹೇ... ಹೇ... ಹರಹರ ಗಂಗೆ ಹರಹರ ಗಂಗೆ ಹೇಳು, ಹೇಳು... ವಿಧಿ ಬರೆದಂಗೆ ನಡೆದರೆ ಹೆಂಗೆ ಹೇಳು ಹೇಳು’ ಹಾಡಿನ ರಿದಂಗೆ ತಕ್ಕಂತೆ ಅವಳ ಶಾರೀರ ಕುಣುದ್ರೆ, ನನ್ನೆದೆಯ ಹಾವ ಭಾವವು ಏರುತ್ತಿತ್ತು. ಕೊನೆಯಲ್ಲಿ ಅಷ್ಟು ಫಾಸ್ಟ್ ರಿದಂಗೆ ಇವ್ಳು ಕುಣಿಲಾರದೆ ಕಷ್ಟಪಟ್ಟು ಉಸಿರುಗಟ್ಟಿ ಅಂತೂ ಡಾನ್ಸ್‌ಮುಗಿಸಿದಳು. ಅವತ್ತು ರಾತ್ರಿ ಕಣ್ಣಲ್ಲಿ ಅವಳದೇ ಮುಖ ಬಂದು ನನ್ನ ನಿದ್ದೆ ಕೆಲಸ ಕಳ್ಕೊಂಡಿತ್ತು. ಬೆಳಿಗ್ಗೆ ಎದ್ದು ಅವಳನ್ನೊಮ್ಮೆ ನೋಡುವ ಅಂತ ತಿಪ್ಪೆ ಎಸೆಯೋ ಹಾಗೆ ಅಂಗಳದ ಮುಂದೆ ನಿಧಾನಕ್ಕೆ ಹಜ್ಜೆ ಹಾಕುವ ಆಟವಾಡುತ್ತಿದ್ದೆ. ಪುರ್ನಜನ್ಮದ ಪುಣ್ಯದ ಫಲವಾಗಿ ‘ಒಣಗಿ ಜಗ್ಗಿದ ಹಂಚಿಕಡ್ಡಿ ಕಟ್ಟಿದ ಹಾಗಿದ್ದ ನನ್ನೆ ಮುಡಿದಿದ್ದ ನಾಲ್ಕಡಿ ಹೂವಿನ ಮಾಲೆಯನ್ನು ತಲೆ ಒದರಿ ಎತ್ತಿ ಹಿಂದಕ್ಕೆ ಹಾಕೋದು ಒಂದೆಜ್ಜೆ ಕಸ ಗುಡಿಸೋದು, ಮತ್ತೆ ಬಗ್ಗಿದಾಗ ಮುಂದಕ್ಕೆ ಬರೋ ಹೂ, ಇವ್ಳು ಸ್ಟೈಲಾಗಿ ಅದನ್ನ ಘನವೆತ್ತ ವಸ್ತುವಂತೆ ಹಿಂದಕ್ಕೆ ಎಸೆಯೋದು’. ಇದೇ ಹಿಂದು-ಮುಂದಿನ ಆಟ. ನಾನು ನೋಡುತ್ತಾ ಹುಸಿ ನಗಲು ಆಮೇಲೆ ಅವಳು ನೋಡಿದಳು, ಬೇಕಂತಲೆ ಹುಸಿ ಮುನಿಸಿನ ನಟಿಯಂತೆ ನಟಿಸಿದಳು. ಅವಳು ಮನೆ ಒಳಗಡೆ ಹೋದಾಗ, ಯಾರಿಗೂ ಕಾಣದಂತೆ ಉದುರಿದ್ದ ಎರಡು ಒಣಗಿದ ಹೂ ಎತ್ತಿಕೊಂಡು ಬಂದಿದ್ದೆ, ಯಾಕೆ ಅಂತ ಈಗಲೂ ತಿಳಿದಿಲ್ಲ.

ಈ ಎಲ್ಲಾ ಘಟನಾವಳಿಗಳು ಅವಳ ಮುಂದಿನ ಬದುಕಿಗೆ ಘೋರವಾದ ತಿರುವನ್ನು ನೀಡುತ್ತದೆ ಎಂಬುದನ್ನರಿಯದೆ ನಾನೆ ಹೋಗಿ ಅವಳಿಗೊಂದು ಡೈರಿ ಮಿಲ್ಕ್ ಚಾಕೊಲೇಟ್ ಕೊಟ್ಟೆ. ಅವಳು ಅದನ್ನು ತಿನ್ನದೆ ಲಂಗದ ಜೋಬಿಗೆ ತುರುಕಿದಳು.

ಮರುದಿನ ಬಂದವಳೆ ಕೆಂಪಾದ ಪರಂಗಿ ಹಣ್ಣಿನಷ್ಟು ಕೆಂಡವಾಗಿ ನಖಶಿಖಾಂತ ನಿಂತಳು. ‘ಮರ್‍ವಾದೆ ಇಲ್ವ ಮೂದೇವಿ’ ಅಂದ್ಲು. ಪಿಕ ಪಿಕ ಎನ್ನುತ್ತಿದ್ದ ನನ್ನ ಮನಕ್ಕೆ ಧೈರ್ಯ ತಂದುಕೊಂಡು ‘ಏನಾತು’. ‘ಮಂಗ ನೀನಿಟ್ಟಿದ್ದ ಚೀಟಿ ನನ್ ತಂಗಿ ನೋಡುದ್ಲು. ನಂಗೆ ಕೊಡಬಾರ್ದಿತ್ತ ಕೈಗೆ’. ನಾನು ಚಾಕೊಲೇಟ್ ಸುತ್ತಿರುತ್ತಿದ್ದ ಚಿನ್ನದ ಹಾಳೆ ತೆಗೆದು ಅದರ ಮೇಲೆ ಸೊಟ್ಟಂ ಪಟ್ಟ ಇಂಗ್ಲೀಷ್ನಲ್ಲಿ ಐ ಲವ್ ಯೂ ಬರೆದಿದ್ದೆ. ಅವಳ ಕಣ್ಣಲ್ಲಿ ಮುತ್ತಿನ ನೀರಿತ್ತು. ಅವಳನ್ನ ತಬ್ಬಿಕೊಳ್ಳಬೇಕೆಂಬ ಹಂಬಲವನ್ನ ಸಹಿಸಿಕೊಂಡು, ತಪ್ಪಿಗೆ ಸಿಕ್ಕಿಕೊಂಡವ ಈಗೇನಿದ್ದರು ಸುಮ್ಮನೆ ಬೈಸಿಕೊಳ್ಳುವ ಸರದಿ ನನ್ನದೆನ್ನುವಂತೆ ನಿಂತೆ. ಅಷ್ಟರಲ್ಲಿ ಚಂದ್ರಿಯ ಚಿಕ್ಕಪ್ಪನು ಬಂದು ‘ಏ, ಮುಂಡೆ ಇಲ್ಲೇನೆ ಮಾಡ್ತಿದ್ಯ. ನಿನ್ನಿಂದ್ ಆದ ರಾದ್ದಾಂತ ಒಂದಾ ಎರಡ. ಹೋಗೆ ಒಳಿಕ್ಕೆ’ ಎಂದ. ಅವಳು ಮನೆಯೊಳಗಡೆ ಓಡಿದ್ಲು. ಆದರೆ ಆ ಚಾಕೊಲೇಟ್‌ ಕೊಟ್ಟೋನು ನಾನೇ ಎಂದು ಅವಳ ಚಿಕ್ಕಪ್ಪನಿಗೆ ಗೊತ್ತಿರಲಿಲ್ಲ ಅನ್ನಿಸುತ್ತೆ, ‘ನಿಂದೇನ್ಲ ಮಾತು ಅವ್ಳತ್ರ. ಸ್ಕೂಲಲ್ಲೆ ಇವೆಲ್ಲ ನಿಮ್ದು ಆಡ್ಕಳು’ ಎಂದು ಅವನು ಕೈ ಎತ್ತಲು ನಾನು ಓಡಿದೆ. ಆಗ ಹೊಳಿತು ನಾನಿಟ್ಟ ಚಿನ್ನದ ಪತ್ರ ತಂಗಿಯ ಮುಖಾಂತರ ಚಿಕ್ಕಪ್ಪನವರೆಗೂ ವಿಷಯ ತಲುಪಿತ್ತು ಎಂದು. ಅದು ಚಿಕ್ಕಪ್ಪನಲ್ಲೇ ಮುಗ್ದಿದ್ದರೆ ಚೆಂದವಿರ್ತಿತ್ತೇನೋ. ಇತ್ತ ನಾನೆಷ್ಟು ಹೆದರಿದ್ದೆನೆಂದರೆ ಮತ್ತು ತಿಂಗಳು ಅವಳಿಗೆ ಕಾಣಿಸಿಕೊಳ್ಳಲಿಲ್ಲ. ಏನಾದರೊಂದು ಘಟನೆ ಸಂಭವಿಸಿದಾಗ ಅದಕ್ಕೆ ಮತ್ತೊಂದು ಪೂರಕ ಸನ್ನಿವೇಶ ನಾಜೂಕಾಗಿ ಅರಿವಿಗಿಲ್ಲದೆ ನಡೆಯುತ್ತದೆ. ಆದರೆ ಎರಡನೆಯ ಘಟನೆಗೆ ಪೂರಕವಾಗಿ ಮೊದಲನೆಯದ್ದು ಸಂಬಂಧ ಹೊಂದಿರುತ್ತದೆಂದು ಬಹುತೇಕ ಜನರಿಗೆ ಗೊತ್ತಿರೋದಿಲ್ಲ. ಮೂರು ತಿಂಗಳೊಪ್ಪತ್ತಿನಲ್ಲಿ ತಿಳೀತು ಅವಳಿಗೆ ಮದುವೆ ಫಿಕ್ಸ್ ಆಗಿದೆ, ಅದಕ್ಕವಳ ಒಪ್ಪಿಗೆ ಸಿಕ್ಕಿತೆಂದು. ಮೊದಲನೆ ವಿಷಯಕ್ಕಿಂತ ಎರಡನೇ ವಾಕ್ಯ ನನಗೆ ಇನ್ನಿಲ್ಲದ ಸಿಟ್ಟು ಬಂತು.

‘ಮೋಸಗಾತಿ ಚಿನ್ನಾಲಿ’, ‘ನನ್ನ ಪ್ರೀತ್ಸಿ, ಈಗ ಯಾವನನ್ನೋ ಮದುವೆಯಾಗ್ತಾಳಂತೆ’ ರೋಷದಿಂದ ಕುದ್ದು ಹೋದೆ. ಅಪ್ಪಟ ಸಿನಿಮಾ ಪ್ರೇಮಿಯಂತೆ ಗೋಳಾಡಿದೆ, ಒಂಟಿ ಕೆರೆ ಮುಂದೆ ‘ನೀನಾದ್ರು ನನ್ ಗೋಳ್ ಕೇಳುಸ್ಕೋ’ ಅಂತ ಅತ್ತದ್ದೆ. ಒಂದು ಫಿಲ್ಮಿನಿಂದ ಪ್ರೇರಣೆಯಾಗಿ ಗುಲಾಬಿ ಸಿಗದಿದ್ರಿಂದ ಮೊದ್ಲು ದಾಸವಾಳದಿಂದ ಶುರುವಾಗಿ ಆಟ ಬೇಗ ಮುಗಿತ್ತಿದ್ದು ಕೌತುಕ ಇರದೆ. ನಂತರ ಆ ಆಟವನ್ನು ಬಟಾನ್ಸ್ ಹೂವಿಗೆ ಬದಲಾಯಿಸಿ ಅದರ ಒಂದೊಂದೆ ಪಕಳೆ ಕಿತ್ತು ’ನನ್ ಪ್ರೀತಿ ಸತ್ಯನೇ ಆಗಿದ್ರೆ ನಂಗೆ ಸಿಗ್ತಾಳೆ, ಇಲ್ಲಾಂದ್ರೆ ಸಿಗಲ್ಲ’ ಎಂದು ಆಟವಾಡುತ್ತಿದ್ದೆ. ‘ಸಿಗಲ್ಲ’ ಅಂತ ಕೊನೇ ಪಕಳೆ ಬಂದ್ರೆ ಮತ್ತೊಮ್ಮೆ ಆಟ ಶುರು ಮಾಡುತ್ತಿದ್ದೆ. ಹೀಗೆ 20-25 ಹೂಗಳನ್ನ ಕೀಳುತ್ತಿದ್ದೆ. ಆಗಲೂ ಸಮಾಧಾನ ಆಗ್ಲಿಲ್ಲ ಅಂದ್ರೆ ಸರಾಸರಿ ತೆಗೆಯುತ್ತಿದ್ದೆ. ಏನೇ ಆದರೂ ಅವಳು ಬಂದು ಬಾಯಿಬಿಟ್ಟು ಹೇಳದೆ ನಾನೊಂದು ನಿರ್ಧಾರ ತೆಗೆದುಕೊಳ್ಳುವುದು ಅಸಾಧ್ಯ ಎಂದು ಕಳ್ಳ ಹುಸಿ ಪ್ರೇಮಿ ಗಟ್ಟಿಯಾಗಿ ಹೇಳಿದ್ರೆ, ಮನೆಯವರೊಂದಿಗೆ ಗುದ್ದಾಡುವ ಧೈರ್ಯ ಮಾತ್ರ ಪಿಸುಮಾತಿನ ಸದ್ದು ಇಲ್ಲದೆ ಹಾಯಾಗಿ ಮಲಗಿತ್ತು. ದಿನಗಳುರುಳಿದಂತೆ ‘ಅವ್ಳಂತು ಬಾಯಿ ಬಿಡೋಲೊಲ್ಲಳು’ ಅಂತ ಖಚಿತವಾಯ್ತು ಗಟ್ಟಿ ಮನಸ್ಸಿಗೆ. ಸಕಾರಣ ನಾನೇ ಏನಾದರು ನಿರ್ಧಾರ ಮಾಡಬೇಕು ಎನಿಸಿ, ಮೋಸ ಮಾಡಿದ್ದಕ್ಕೆ ಅವಳಿಗೂ ಬುದ್ಧಿ ಕಲಿಸಬೇಕು, ಮದುವೆನೂ ನಿಲ್ಲಬೇಕು, ನನ್ನ ಸುಳಿವೆಲ್ಲೂ ಸಿಗಬಾರದು ಎಂದು ಆಲೋಚಿಸುತ್ತಿದ್ದೆ. ಆಗ ಬಂದಿತ್ತು ನಾಲಾಯಕ್ ಸೂಪರ್ ಐಡಿಯಾ ಮದುವೆ ನಿಲ್ಲಿಸುವ ಬಗೆ ಮತ್ತು ಚಿಕ್ಕಪ್ಪನಿಂದ ಅವಮಾನವನ್ನು ಮರಳಿ ಪಡೆಯುವ ಬಗೆ. ‘ವಿಷಯ ಗೊತ್ತೇನ್ಲಾ’

‘ಏನ್ಲ’

‘ದೆವ್ವ ಮೆಟ್ಕಂಡೈತಂತೆ’

‘ಹೌದಾ’

‘ಹೂಂ. ಅದ್ಯಾವ್ದೋ ಗಂಡು ದೆವ್ವ. ಅದುಕ್ಕೆ ವಿಷ್ಯ ಗೊತ್ತಾದ್ರೆ ಮದ್ವೆ ಮಾಡ್ಕಲಕ್ಕೆ ಗಂಡು ಸಿಕ್ಕಲ್ಲ ಅಂತ್ಲೆ ಇಷ್ಟ್ ಬೇಗ ಮದ್ವೆ ಫಿಕ್ಸ್ ಮಾಡಿ ಸಾಗಾಕ್ತಿರದು’

‘ಅಂಗಾ, ಅದ್ಕೆ ಮತ್ತೆ ಇಷ್ಟ್ ದಿನ ಎಲ್ಲೂ ಕಾಣಿಸ್ಕತ ಇಲ್ಲ’

ಕಾಕತಾಳೀಯ ಅಂದ್ರೆ ಅವಳು ಬೇಸಿಗೆ ರಜೆಗೆಂದು ಬೇರೆ ಊರಿಗೆ ಹೋಗಿದ್ದಳು. ಇದೆಲ್ಲ ವಿಷಯಾಂತರ ಮಾರ್ಪಾಟಾಗಿ ಊರೆಲ್ಲ ‘ಚಂದ್ರಿಗೆ ದೆವ್ವ ಹಿಡ್ದೈತಂತೆ. ಮದ್ವೆ ಮಾಡುದ್ರೆ ಸರಿಯೋಗ್ತದೆ, ಗಂಡು-ಗಂಡು ದೆವ್ವಕ್ಕೂ ಆಗ್ಬರಲ್ಲ ಅಂತ ಈ ಪ್ಲಾನು ಮಾಡನ್ನೆ ರಂಗಣ್ಣ. ನೋಡ್ದಾ ಎಂತ ನಾಟಕ್ಕಾರ್ ಜನ. ಪಾಪ ನಾಳೆ ದಿನ ಮದ್ವೆ ಆದ್ಮ್ಯಾಗೆ ಹುಡ್ಗಂಗೆ ಮೆಟ್ಕಂಡ್ರೆ ತಡ್ಕಂಡೀತೆ’ ಹೀಗೆ ವಿಷಯಗಳು ತಲುಪಿತ್ತು. ವಿಪರ್ಯಾಸ ಅಂದ್ರೆ ಈ ವಿಷಯ ನಾನು ನಿರೀಕ್ಷಿಸಿದ ಹಂತಕ್ಕೆ ತಲುಪಿ ಮದುವೆ ನಿಲ್ಲಲು ಸೋತಿತ್ತು. ಅವ್ಳ ಮದುವೆ ಸಾಂಗವಾಗಿ ನೆರವೇರಿತು.

ನಂತರ ‘ಇವ್ನಾವನೋ ನನ್ ಹುಡ್ಗೀನ ಮುಟ್ಟಕ್ಕೆ ಎಷ್ಟು ಧೈರ್ಯ. ನನ್ನವ್ಳಾ ಮದ್ವೆ ಆಗಕ್ಕೆ ಅವ್ನಾವನು. ಅವ್ಳ ಪಾತಿವ್ರತ್ಯ ಹಾಳ್ ಮಾಡ್ತಾನೆ ಕಳ್ ಬಡ್ಡಿ ಮಗ. ಈ ನನ್ ಮಗನ್ನ ಸಾಯಿಸ್ಬಿಡನಾ? ಧೈರ್ಯ? ಅವ್ರ ಫಸ್ಟ್ ನೈಟ್ ನಿಲ್ಬೇಕು. ಏನಾರ ಆಗಿ ಅವ್ನು ಸತ್ತು ಇವ್ಳು ಮತ್ತೆ ನನ್ ಹತ್ರ ಮದ್ವೆ ಆಗಂತ ಬರ್ಬೇಕು. ಆಗ ನಾನೇ ಕರುಣೆ ತೋರ್ಸಿ ಮದ್ವೆ ಆಗಂಗೆ ಹಾಗ್ಬೇಕು. ಆಗ ನಮ್ಮ ಪ್ರೇಮ ಏಳೇಳು ಜನುಮ್ದಾಗೆ ಅಮರವಾಗಿ ಬಾಳ್ತೆದೆ’ ಎಂದು ಹಗಲು ಕನವರಿಕೆಗಳು. ಹಾಗಾಗಿ ಸರಿಯಾದ ಸಮಯಕ್ಕೆ ಹೊಂಚು ಹಾಕ್ತಿದ್ದೆ. ಹೀಗೆ ನಿರ್ಬಲದ ಹೊಂಚು ಬೆನ್ನು ಹತ್ತಿದವನಿಗೆ ಹುಡಿ ಧೈರ್ಯದ ಅಸ್ತ್ರದಿಂದ ಅವ್ಳ ಗಂಡನ ಮುಂದೆ ನನ್ನ ಹಗಲುಗನಸು ಯಾವತ್ತು ಮುಖಾಮುಖಿ ಆಗಲಿಲ್ಲ. ಮುನ್ನುಗ್ಗುವ ಯುದ್ಧದ ಧೈರ್ಯವನ್ನು ನಾನು ಹೂಡಲಿಲ್ಲ. ಅವಳ ಸಾವಿಗೆ ಹಂಬಲಿಸುತ್ತಿದ್ದ ನಾನು ನನಗೆ ಗೊತ್ತಿಲ್ಲದಂತೆ ಆ ಪ್ರೇಮವೆಲ್ಲಾ ಕ್ಷೀಣಿಸಿ ಮಾಯವಾಯ್ತು. ಬದುಕು ತರೆಗೆಲೆಗಿನ ಮಜಾ ಅಂದ್ರೆ ನನ್ನ ಮದುವೆಗೆ ಎರಡು ದಿನದ ಮುಂಚೆಯಾಗ್ಲಿ, ತಾಳಿ ಕಟ್ಟುವಾಗ ಆಗಲಿ ಅಥವಾ ತರುವಾಯವೂ ಎಂದೆಂದೂ ‘ಅಮರ ಪ್ರೇಮಿ, ಏಕ ಪ್ರೇಮಿ ವ್ರತಸ್ಥ’ ಎಚ್ಚರಗೊಂಡಿದ್ದೆ ಇಲ್ಲ. ಆದರೂ ಕಾಲನ ತೀರದಲ್ಲಿ ಮುಗ್ಧ ಪ್ರೇಮದ ಚಿಗುರು ನೆನಪು ಪುಳಕದಲ್ಲಿ ಮಿಳಿತವಾಗಿರುತ್ತದೆ. ಪದ್ಮಳು ಈ ಎಲ್ಲಾ ನೆನಪನ್ನು ಬಾಚಿಕೊಂಡರು ಕೆಲಸ-ದುಡಿಮೆಗಳಿಂದ ‘ಹೊಟ್ಟೆ’ ಎರಡಕ್ಷರವನ್ನು ಸಾಕಲು ಬೆಂಗಳೂರಿಗೆ ಬಂದೆ. ಒಮ್ಮೊಮ್ಮೆ ಇದೆಲ್ಲವನ್ನು ಬಿಟ್ಟು ಪದ್ಮಳ ಮಡಿಲಲ್ಲಿ ಹಾಯಾಗಿ ಮಲಗಿ, ಇಲ್ಲೆ ಇದ್ದು ಬಿಡೋಣ ಅನ್ನಿಸುತ್ತೆ.

***
ನಾನು ಮನೆಯಂಗಳದಲ್ಲಿ ಹೆಜ್ಜೆಯಿಟ್ಟಾಗ ಪದ್ಮ, ಅವ್ವ ನನಗಾಗಿ ಕಾಯುತ್ತಿದ್ದರೆಂಬಂತೆ ಬಾಗಿಲ ಬಳಿ ಕುಂತವರಿಗೆ ಪರಿಚಿತ ನಗು ಉದುರಿಸಿ ಲಗೇಜು ಇಳಿಸಿದೆ. ‘ಈಟೊತ್ತಾಯ್ತ ಬರದು’ ಅಂದ್ಲು ಅವ್ವ. ‘ಹೂ, ಚೆನ್ನಾಗಿದ್ಯ. ಸೊಂಟ ನೋವು ಹೆಂಗದೆ’. ಮಧ್ಯದಲ್ಲಿ ಪದ್ದು ನೀರು ತಂದು ‘ಬನ್ನಿ ಉಣ್ಣುವ್ರಂತೆ’ ಎಂದಳು. ‘ಹು. ಹೋಗ್ ಉಣ್ಣು. ಮರಕ್ ಬಳ್ಳಿ ಇದ್ದಂಗೆ ನನ್ನೇ ಸುತ್ಕಂಡೈತೆ ಈ ಬಾವು’ ಅಂದಳು. ನಾನು ರೂಮಿಗೆ ಹೊಕ್ಕು, ಅಂಗಿ ಕಳಚಕ್ಕತ್ತಿದ್ದೆ. ಪದ್ದು ರೂಮಿಗೆ ಬಂದಳು. ಅವಳ ಬಿಸಿಯುಸಿರಿನ ಘಮ ನನ್ನಿಂದ ತಡೆಯಲಾಗಲಿಲ್ಲ. ಗಟ್ಟಿಯಾಗಿ ಬಿಗಿದಪ್ಪಿ ಅವಳ ನಾಚಿದ ಮುಖ ನೋಡಿದೆ. ನಾಚಿದಾಗ ರಂಗೇರುವ ತುಟಿಗಳು, ಕೆನೆಯ ಕೆನ್ನೆಗಳು ಇನ್ನು ನನ್ನೊಳಗೆ ಹಸಿದಿದ್ದ ಮನ್ಮಥ ಪ್ರಭಾವಿಸಿ ಅವಳ ತುಟಿಗೆ ಕಚ್ಚಿದೆ. ವೇಗವನ್ನು ತಡೆಯದ ಅವಳು ನನ್ನೆದೆಗೆ ಒತ್ತುಕೊಂಡು ‘ಥೂ, ನಿಮ್ಮ ಬಂದಿದ್ ತಕ್ಷ್ಣ ಶುರುನಾ?’ ಎಂದಳು. ‘ದಿನಾ ರಾತ್ರಿ ನಿನ್ ಮೈ ಸೋಕ್ದೆ ಎಷ್ಟ್ ಮಕಾಡೆ ಮಲಗಿದ್ದೀನಿ ಗೊತ್ತಾ’. ಅವಳ ಬೆನ್ನ ಹಿಂದೆ ನನ್ನ ಕೈಗಳು ನಡೆದಲ್ಲೆಲ್ಲಾ ತುಟಿಗಳು ಹಿಂಬಾಲಿಸುತ್ತಿದ್ದವು. ನಂತರ ತುಟಿ, ಕತ್ತು, ಸೊಂಟ, ಎದೆ ಹೀಗೆ. ‘ಯಾವಾಗ್ಲೂ ಆತ್ರ ನಿಂಗೆ. ಮೊದ್ಲು ಊಟ ಮಾಡ್ಬಾ’. ‘ನನ್ನೇ ಹೋಗು, ಬಾ ಅಂತ್ಯ’ ಎಂದೆ. ‘ಬಾರ್ಲೆ ಅಂದ್ರೆ ಕೋಪ ಬರಲ್ವಲ್ವಾ’ ನಾನು ನಿಜಕ್ಕೂ ಅವ್ಳ ಯಾವ ಮಾತಿಗೂ ತಲೆಯಾಗದೆ ಅಂತರ್ಗತವಾಗಿ ಅವಳ ಲೋಕದ ವಿಲಾಸಿಯಾಗಿ ವಿಹರಿಸುತ್ತಿದ್ದೆ. ಅವಳೆದೆಗೆ ಕೈಯಾಡಿಸಿದೆ. ‘ಅನ್ನೇ ಅಮ್ಮಿ. ನೀನಲ್ದೆ ಇನ್ಯಾರ್ ಅಂತಾರೆ. ಐಲವ್ಯೂ ಅಮ್ಮಿ’. ನನ್ನ ಈ ಎರಡು ತಿಂಗಳ ಟ್ರಾಫಿಕ್ ಜಾಮ್ ಕಿತ್ತೆಸೆದು ನಿರುಮ್ಮಳತೆಗಾಗಿ ಕಾಯ್ತಿದ್ದನೇನೋ ಅಥವಾ ಬಸ್ಸಿನಲ್ಲಿ ಹರೆಯದ ಪ್ರೇಮದ ಬುತ್ತಿ ಬಿಚ್ಚಿದ ಹಿನ್ನೆಲೆ ಇರಬಹುದು. ಮೈಯಿಗೆ ಮೈ, ಉಸುರಿಗೆ ಉಸಿರು ಸೋಕುದ್ರೆ ಒತ್ತರಿಸಿ ಬೊಬ್ಬಿರಿದು ಬರುವ ಪ್ರವಾಹವನ್ನು ತಡೆಹಿಡಿವವರು ಯಾರು?. ನಗ್ನತೆಯಲ್ಲಿ ಪರವಶನಾಗಿದ್ದವನ ಬೆವರ ಹನಿಯಲ್ಲಿ ಮತ್ತೆ ಹೆಪ್ಪುಗಟ್ಟುವ ಮಂಜು ಕರಗಿತು. ಆಗ ನನಗೆ ಪದ್ಮ ಮತ್ತಷ್ಟು ಸುಂದರಿಯಾಗ್ತಾಳೆ, ಈ ರಸನಿಮಿಷಗಳ ನಂತರವೂ. ಎಲ್ಲಾ ಪ್ರೇಮಿಗಳ ಪ್ರೇಮತನವನ್ನೊಟ್ಟುಗೂಡಿಸಿ ನನ್ನ ಸಂಗಾತಿ ಹಣೆಗೆ ‘ಹೂ ಮುತ್ತನಿಟ್ಟೆ’. ಈ ಭಾವನೆಗಳೆಲ್ಲವೂ ಬದಲಾಗುತ್ತಲೆ ಇರುವುದು ಬದುಕಿನ ವಿಪರ್ಯಾಸ. ಒಮ್ಮೊಮ್ಮೆ ಸಾಮಾನ್ಯಳಾಗಿಯೂ ಕಾಣುವಳು ಪದ್ಮ ನನಗೆ. ತನ್ನ ಬಟ್ಟೆಗಳನ್ನೆಲ್ಲ ಸರಿಯಾಗಿದೆಯಾ ಎಂದು, ತಲೆ ಸವರಿಕೊಂಡು ನನಗೂ ನಾಲ್ಕು ಮುತ್ತಿಟ್ಟು ಹೊರಟಳು. ನನ್ನ ಕಪ್ಪು ಮೈ ಮತ್ತೊಮ್ಮೆ ಅವಳನ್ನು ಬಿಗಿದಪ್ಪಿತು. ಆಯಾಸವಾದರೂ ನಿರುಮ್ಮಳತೆಯಿಂದ ಸ್ವಲ್ಪ ಕೂರೋಣ ಅಂತ ಹಿತ್ತಿಲ ಜಗ್ಲಿ ಹತ್ತಿರ ಬಂದೆ. ಅಮ್ಮನೂ ಅಲ್ಲೇ ಕುಳಿತಿದ್ದಳು. ಆಗ ಚಂದ್ರಿ ಆಚೆಯ ಬದಿಯಲ್ಲಿ ಗುಬ್ಬಚ್ಚಿ ಹೂ, ಕನಕಾಂಬರ ಬಿಡಿಸುತ್ತಿದ್ದಳು. ನೋಡಿದ ತಲ್ಲಣದಲಿ ಮಾತನಾಡಿಸಲು ಹಿಂಜರಿದೆ. ಜೀವಂತಿಕೆಗೆ ಸೋತ ಮುಖ, ಬಾಡಿದ ಕಂಗಳಲ್ಲೂ ಮಿಂಚಿನ ಉತ್ಸಾಹ. ಅಷ್ಟರಲ್ಲಿ ಅವಳ ಮಗ ಬಂದು ‘ಅವ್ವಾ ಬಾ ಉಣ್ಣಕ್ಕಿಕ್ಕು’ ಎಂದ. ಅವಳು ಅವನತ್ತ ತಿರುಗಿ ‘ಹೂಂ, ನಾನಿನ್ನೂ ಹೂ ಕಟ್ಟಿ ಮಾರಕ್ಕೆ ಹೋಗ್ಬೇಕು. ಮುದ್ದೆ ಐತೆ ಬಡಿಸ್ಕಂಡು ಉಣ್ಣು. ನಾ ಆಮೇಲೆ ಬತ್ತೀನಿ’ ಎಂದಳು. ‘ಹೂ ನಿಂದು ಯಾವಾಗ್ಲೂ ಇದೆ’ ಎನ್ನುತ್ತಾ ಮುನಿಸಿಕೊಂಡು ಹೋದ. ಮತ್ತೆ ಮೂರು ನಾಲ್ಕು ನಿಮಿಷದಲ್ಲಿ ಅವಳು ಮಗನನ್ನು ಅನುಸರಿಸಿದಳು. ಅವಳ್ಯಾಕೆ ಗಂಡನೂರನ್ನು ಬಿಟ್ಟು ಇಲ್ಲಿಗೆ ಬಂದಳು. ಹೂ ಮಾರುವಂತಹದ್ದು ಏನಾಗಿದೆ?

‘ಅಮ್ಮ ಚಂದ್ರಿ ಯಾಕ್ ಹಿಂಗಾಗಿದಾಳೆ’ ಎಂದೆ.

‘ಯಾರು ಡಾಬರ್ ಚಂದ್ರಿನಾ’

‘ಹೂಂ’
‘ಅಯ್ಯೋ ಆ ಮಗೀನ್ ಕತೆ ಯಾಕ್ ಕೇಳ್ತ್ಯ. ಪಾಪ ಅವ್ಳ ಗಂಡ ಲಾರಿ ಗುದ್ದಿ ತೀರೋದ. ಈಗ ಆ ಮಗಿಗೆ ಯಾರ್ ದಿಕ್ಕು. ಮಗನ್ನ ಕರ್ಕೊಂಡು ಬಂದ್ ಮನೇಲಿ ಕೂತೈತೆ. ಯಾರ್‌ ಹಂಗೂ ಬೇಡ ಅಂತ ಇಲ್ಲೇ ಒಂದ್ ಪುಟ್‌ ಮನೆ ಮಾಡ್ಕಂಡು ಜೀವ್ನ ಮಾಡ್ತೈತೆ. ಎಷ್ಟ ದಿನ ನಡೀತು ಇದೆಲ್ಲಾ’. ಎಂದಳು ಅವ್ವ. ನನ್ನ ಮೈ ರೋಮಗಳು ನಿಗಿರಿ, ದಿಗ್ಮೂಢನಾಗಿ ಎದೆ ಡವಡವಿಸಿತ್ತು.
‘ಯಾವಾಗ? ಹೆಂಗೆ?’ ಎಂದೆ ತಡವರಿಸುತ್ತಾ.

‘ಅಮಾಸೆ ಹತ್ರದಾಗ, ಆ ನೀಲ್ಗಿರಿ ತೋಪತ್ರ ಕಣ್ಲಾ. ಪಾಪ್ದುಡ್ಗ ಅದು. ಇದಕ್ಕೇನೋ ದೆವ್ವ ಮೆಟ್ಕಂಡಿದ್ನ ಮುಚ್ಚಿಟ್ ಮದ್ವೆ ಮಾಡವ್ರೆ. ಸ್ವಲ್ಪ್ ದಿನ್ ಸುಮ್ನಿದ್ದು ರಕ್ತ ಬೇಕಾಗಿತ್ತೇನೋ ಬಲಿ ತಗಂಡೆದೆ ಅಷ್ಟೆ’

ನಾನೇನ ಹೇಳಬೇಕಿರಲಿಲ್ಲಾ. ನಿಂತ ಭೂಮಿಗಿಂತ ಭಾರವಾಯ್ತು ನನ್ನೆದೆ. ತಲೆಯ ಒಂದೂ ಕ್ರಿಮಿಗಳು ಚಲಿಸದೆ, ಹಣೆ-ಕತ್ತನ್ನ ಹಿಂಡಿ ಎಳೆದ ಅನುಭವ. ಬೆವರು ಮಳೆಯಂತೆ, ಇನ್ನೇನು ಪಿಡ್ಸ್ ಬರುವಷ್ಟು ಅಂಜಿದೆ. ಮುಂದೇನು…..? ಆಗೇನೋ ಪ್ರೀತಿಯ ಅಮಲಿನಲ್ಲಿ ಬಯಸಿದ್ದ ಆಶಯ ಈಗ ನಿಜವಾಗಿ ಅದೆಷ್ಟು ಜನರನ್ನು ಸುಡುತ್ತಿದೆ. ಅವಳ ಮನೆಯತ್ತ ತಿರುಗಲೂ ಆಗಲಿಲ್ಲ. ಪದ್ಮ ಬಂದು ಮಜ್ಜಿಗೆ ಕೊಟ್ಲು. ಯಾವೊಂದು ಇಲ್ಲಿ ನನಗೆ ಸಂಬಂಧಿಸಿದ್ದಿಲ್ಲ ಎಂಬಂತೆ ಊರ ಗುಡಿ ಹಿಂದೆ ಗಂಟೆಗಟ್ಟಲೆ ಕುಳಿತೆ. ಹೀಗೂ ತಿರುವುಗಳುಂಟಾ ಬದುಕಿನಲ್ಲಿ? ಎಂದು ಪ್ರಶ್ನಿಸಿದೆ. ಆ ಪ್ರಶ್ನೆಗಳಲ್ಲಿ ಕತ್ತಲು ಕವಿದದ್ದು ಗಮನಿಸದಷ್ಟು ನಿಜವಾದ ಅಂಧಕಾರನಾಗಿದ್ದೆ. ಯಾವತ್ತೋ ನಾನು ಹಾಕಿದ ಶಾಪ, ಚಂಚಲ ಅಪೇಕ್ಷೆಗಳು ಇವತ್ತು ನಿಜವಾಗಿ ಈ ರೀತಿ ದೈತ್ಯಾಕಾರವಾಗಿ ಸುನಾಮಿಯಂತೆ ಎಗರುತ್ತೆ, ನನ್ನ ಬಾಲಿಶ ಆಶಯವು ಸುರುಳಿಯಾಗಿ ಅವಳ ಬದುಕನ್ನು ಹೀಗೆ ದುರ್ಬರವಾಗಿಸುತ್ತೆ ಎಂದುಕೊಂಡಿರಲಿಲ್ಲ. ಹಿಂದಿರುಗಿ ಪದ್ಮ ಅಥವಾ ಚಂದ್ರಿ ಇಬ್ಬರಲ್ಲೊಬ್ಬರು ಇದ್ದಿದ್ರೆ ಅಥವಾ ಇಬ್ಬರನ್ನೂ ಈಗಲೂ? ಮುಂದೆ ಪ್ರಶ್ನಿಸಿಕೊಳ್ಳುವ ಧೈರ್ಯ ಮಾಡದೆ, ಕತ್ತಲೆಯಲ್ಲಿ ಹಾಗೆ ಕುಳಿತೆ. ಕ್ಷಮೆ ಕೇಳುವ ಅರ್ಹತೆಯೂ ಇಲ್ಲದ ಅಪರಾಧಿ ನನ್ನೊಳಗೆ ಸಣ್ಣಗೆ ಮೊಳಕೆಯೊಡೆಯುತ್ತಿದ್ದ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.