‘ನೋಡಿ ಸ್ವಾಮಿ. ನಾನು ಇಲ್ಲಿಗೆ ಬರುವ ಮೊದಲೇ ಈ ವಜ್ರದ ಚೀಲದಲ್ಲಿ ಈಗ ಇರುವುದಕ್ಕಿಂತಲೂ ಅತ್ಯಮೂಲ್ಯವಾದ ಎರಡು ವಜ್ರಗಳನ್ನು ಎತ್ತಿಟ್ಟುಕೊಂಡೇ ನಾನು ಇಲ್ಲಿಗೆ ಬಂದೆ. ಉಳಿದ ವಜ್ರಗಳನ್ನು ನಿಮಗೆ ಮರಳಿಸುತ್ತಿದ್ದೇನೆ. ಹಾಗಾಗಿ ನನಗೆ ಮತ್ತಷ್ಟು ವಜ್ರಗಳ ಅವಶ್ಯಕತೆಯಿಲ್ಲ’
ರಾಜಸ್ಥಾನದಲ್ಲಿ ವ್ಯಾಪಾರಿ ರಾಜಾಸಿಂಗ್ ಪ್ರಾಮಾಣಿಕತೆಗೆ ಹೆಸರುವಾಸಿಯಾಗಿದ್ದ. ಅವನಿಗೆ ಸ್ವಂತ ಉಪಯೋಗಕ್ಕೆ ಒಂದು ಒಂಟೆ ಖರೀದಿಸಬೇಕು ಎನ್ನುವ ಆಸೆಯಿತ್ತು. ಅದೊಂದು ದಿನ ತನ್ನ ಪಕ್ಕದ ಊರಿನಲ್ಲಿ ನಡೆಯುತ್ತಿದ್ದ ಒಂಟೆಗಳ ಜಾತ್ರೆಯ ಸುದ್ದಿ ಅವನ ಕಿವಿಗೆ ಬಿದ್ದಿತು. ಅಲ್ಲಿ ಒಂಟೆಗಳನ್ನು ನೋಡಲು ಮತ್ತು ಖರೀದಿಸಲು ಅವಕಾಶವಿತ್ತು. ತಡಮಾಡದೆ, ರಾಜಾಸಿಂಗ್ ಒಂಟೆಗಳ ಜಾತ್ರೆ ನಡೆಯುತ್ತಿದ್ದ ಸ್ಥಳಕ್ಕೆ ಬೆಳ್ಳಂಬೆಳಗ್ಗೆ ಹೋದ.
ಅಲ್ಲಿ ಹತ್ತಾರು ವ್ಯಾಪಾರಿಗಳು ನೂರಾರು ಒಂಟೆಗಳನ್ನು ಬಣ್ಣ ಬಣ್ಣದ ಬಟ್ಟೆಗಳಿಂದ ಸಿಂಗಾರ ಮಾಡಿ ಇಟ್ಟಿದ್ದರು. ಜಾತ್ರೆಯ ಮೂಲೆಯೊಂದರಲ್ಲಿ ಒಂಟೆ ಮಾರುತ್ತಿದ್ದವನ ಬಳಿಯಿದ್ದ ದೊಡ್ಡದೊಂದು ಒಂಟೆ ರಾಜಾಸಿಂಗ್ ಗಮನ ಸೆಳೆಯಿತು. ಅದನ್ನು ಚೆಂದಗೆ ಅಲಂಕರಿಸಿ ಹಳದಿ ಬಣ್ಣದ ದಪ್ಪ ಬಟ್ಟೆಯನ್ನು ಅದರ ಬೆನ್ನ ಮೇಲೆ ಹೊದೆಸಿದ್ದರು. ಒಂಟೆ ನೋಡಿ ಖುಷಿಯಾದ ರಾಜಾಸಿಂಗ್, ಅದನ್ನು ಕೊಳ್ಳಲು ಬಯಸಿ, ಅದರ ಮಾಲಿಕನ ಬಳಿ ಹೋಗಿ ಅದರ ದರ ಕೇಳಿದ. ಮಾಲಿಕ ಹೇಳಿದ ಬೆಲೆ ತುಸು ಹೆಚ್ಚಾಯ್ತು ಎನ್ನಿಸಿ ಅವನೊಂದಿಗೆ ಚೌಕಾಸಿಗಿಳಿದ. ಬಹಳ ಹೊತ್ತಿನವರೆಗೆ ಚೌಕಾಸಿ ನಡೆಯಿತು. ಬಳಿಕ ಒಂದು ಉತ್ತಮ ಬೆಲೆಗೆ ವ್ಯವಹಾರ ಕುದುರಿತು. ರಾಜಾಸಿಂಗ್ ಸಂತೋಷದಿಂದ ಒಂಟೆಯನ್ನು ಖರೀದಿಸಿ ಅದರ ಅಲಂಕಾರದ ಸಮೇತ ಮನೆಗೆ ಕೊಂಡೊಯ್ದ.
ಮನೆಗೆ ಬಂದು, ಒಂಟೆಯನ್ನು ಮನೆಯ ಹೊರಗೆ ಕಟ್ಟಿ ಹೆಂಡತಿಯನ್ನು ಕರೆದು ಒಂಟೆ ಖರೀದಿಸಿದ ಸಂಗತಿಯನ್ನು ಖುಷಿಯಿಂದ ಹೇಳಿದ. ಒಂಟೆಯನ್ನು ಆಕೆಗೆ ತೋರಿಸಿದ. ಇಬ್ಬರೂ ಸೇರಿ ಒಂಟೆಯ ಬೆನ್ನ ಮೇಲೆ ಅಲಂಕಾರಕ್ಕೆಂದು ಹೊದಿಸಿದ್ದ ಬಟ್ಟೆಯನ್ನು ತೆಗೆಯುವಾಗ ಅದರ ಅಡಿಯಲ್ಲಿದ್ದ ಪುಟ್ಟದಾದ ರೇಷ್ಮೆ ಚೀಲವೊಂದು ಕೆಳಗೆ ಬಿತ್ತು. ಕುತೂಹಲಗೊಂಡು ಅದನ್ನು ತೆರೆದು ನೋಡಿದಾಗ ಅದರಲ್ಲಿ ವಜ್ರದ ಸಣ್ಣ ಸಣ್ಣ ಹರಳುಗಳು ಕಾಣಿಸಿದವು. ಅವುಗಳನ್ನು ಮಾರಾಟ ಮಾಡಿದರೆ ಲಕ್ಷಾಂತರ ಹಣ ದೊರೆಯುತಿತ್ತು. ವಜ್ರಗಳನ್ನು ನೋಡಿ ಅಚ್ಚರಿಗೊಂಡ ರಾಜಾಸಿಂಗ್ ತಡಮಾಡದೆ, ‘ಈ ವಸ್ತು ನನ್ನದಲ್ಲ ವಾಪಾಸು ಕೊಟ್ಟು ಬರುತ್ತೇನೆ’ ಎಂದು ಹೆಂಡತಿಯ ಬಳಿ ಹೇಳಿದವನೇ, ಆ ಚೀಲವನ್ನು ಜೋಪಾನವಾಗಿ ತೆಗೆದುಕೊಂಡು, ಒಂಟೆಯ ಜಾತ್ರೆ ನಡೆಯುತ್ತಿದ್ದಲ್ಲಿಗೆ ಪುನಃ ಹೋದ. ಅಲ್ಲಿ ತನಗೆ ಒಂಟೆ ಮಾರಿದ್ದ ವ್ಯಾಪಾರಿಯ ಬಳಿ ನಡೆದ. ವಜ್ರಗಳ ಚೀಲವನ್ನು ವಾಪಸು ನೀಡಿದ.
ವಜ್ರದ ಹರಳುಗಳ ಚೀಲವನ್ನುರಾಜಾಸಿಂಗ್ ಮರಳಿ ತಂದುಕೊಟ್ಟಿದ್ದನ್ನು ನೋಡಿ ಬಹಳ ಖುಷಿಗೊಂಡ ಒಂಟೆಯ ಮಾಲೀಕ ಹೇಳಿದ: ‘ಮಾನ್ಯರೆ, ಇವು ನನ್ನ ಹತ್ತು ವರುಷಗಳ ದುಡಿಮೆಯಲ್ಲಿ ಕೂಡಿಟ್ಟ ಹಣದಿಂದ ಖರೀದಿಸಿದ ವಜ್ರದ ಹರಳುಗಳು. ನನಗೆ ಭವಿಷ್ಯದಲ್ಲಿ ಸಹಾಯಕ್ಕೆ ಬರಲಿ ಎಂದು ಖರೀದಿ ಮಾಡಿದ್ದವು ಇವು. ಸುರಕ್ಷಿತವಾಗಿರಲಿ ಎನ್ನುವ ಕಾರಣಕ್ಕೆ ಯಾರಿಗೂ ತಿಳಿಯದಂತೆ ದೊಡ್ಡ ಒಂಟೆಯ ಮೇಲೆ ಬಟ್ಟೆಯ ಅಡಿಯಲ್ಲಿ ಅಡಗಿಸಿಟ್ಟಿದ್ದೆ. ನನಗೆ ಒಂಟೆ ಮಾರುವಾಗ ಅದರ ನೆನಪು ಬರಲೇ ಇಲ್ಲ. ನೀವು ಅದನ್ನು ನನಗೆ ಮರಳಿಸಿ ಬಹಳ ಉಪಕಾರ ಮಾಡಿದಿರಿ. ನಿಮ್ಮ ಋಣವನ್ನು ನಾನು ಎಂದಿಗೂ ಮರೆಯಲಾರೆ. ನಿಮ್ಮ ಪ್ರಮಾಣಿಕತೆಯನ್ನು ಮೆಚ್ಚಿದೆ. ನನ್ನ ಸಂತೋಷಕ್ಕಾಗಿ ಈ ಎರಡು ವಜ್ರದ ಹರಳುಗಳನ್ನು ಕಾಣಿಕೆಯಾಗಿ ಸ್ವೀಕರಿಸಿ.’ ಹೀಗೆ ಹೇಳಿದ ಆತ, ರಾಜಾಸಿಂಗ್‍ಗೆ ಎರಡು ವಜ್ರದ ಹರಳುಗಳನ್ನು ನೀಡಲು ಮುಂದಾದ.
ಆದರೆ ಅವುಗಳನ್ನು ಸ್ವೀಕರಿಸಲು ಒಪ್ಪದ ರಾಜಾಸಿಂಗ್, ‘ನೋಡಿ ನಾನು ಖರೀದಿಸಿದ್ದು ಒಂಟೆಯನ್ನು ಮಾತ್ರ. ನಾನು ಪಾವತಿಸಿದ ಹಣಕ್ಕೆ ಪ್ರತಿಯಾಗಿ ಉತ್ತಮ ಒಂಟೆಯನ್ನು ನನಗೆ ನೀಡಿದ್ದೀರಿ. ಅದು ಮಾತ್ರ ನನ್ನದು. ಈ ವಜ್ರಕ್ಕೆ ನಾನು ಹಣ ಪಾವತಿಸಿಲ್ಲ. ಆದ್ದರಿಂದ ವಜ್ರ ನಿಮ್ಮದೇ. ನನಗೆ ಅದರಲ್ಲಿ ಯಾವ ಪಾಲೂ ಬೇಡ’ ಎಂದು ಹೇಳಿದ. ಆದರೆ ಒಂಟೆಯ ವ್ಯಾಪಾರಿ ಪಟ್ಟು ಬಿಡಲೇ ಇಲ್ಲ. ‘ನೀವು ಎರಡು ವಜ್ರದ ಹರಳುಗಳನ್ನು ಸ್ವೀಕರಿಸಲೇ ಬೇಕು. ಇಲ್ಲವಾದಲ್ಲಿ ನನಗೆ ಬೇಸರವಾಗುತ್ತದೆ’ ಎಂದು ಮತ್ತೆ ಮತ್ತೆ ಒತ್ತಾಯ ಮಾಡಿದ.
ಆದರೆ ರಾಜಾಸಿಂಗ್ ಅದನ್ನು ಸ್ವೀಕರಿಸಲಿಲ್ಲ. ಕೊನೆಗೆ ರಾಜಾಸಿಂಗ್ ಹೇಳಿದ: ‘ನೋಡಿ ಸ್ವಾಮಿ. ನಾನು ಇಲ್ಲಿಗೆ ಬರುವ ಮೊದಲೇ ಈ ವಜ್ರದ ಚೀಲದಲ್ಲಿ ಈಗ ಇರುವುದಕ್ಕಿಂತಲೂ ಅತ್ಯಮೂಲ್ಯವಾದ ಎರಡು ವಜ್ರಗಳನ್ನು ಎತ್ತಿಟ್ಟುಕೊಂಡೇ ನಾನು ಇಲ್ಲಿಗೆ ಬಂದೆ. ಉಳಿದ ವಜ್ರಗಳನ್ನು ನಿಮಗೆ ಮರಳಿಸುತ್ತಿದ್ದೇನೆ. ಹಾಗಾಗಿ ನನಗೆ ಮತ್ತಷ್ಟು ವಜ್ರಗಳ ಅವಶ್ಯಕತೆಯಿಲ್ಲ’ ಎಂದ.
ಗಲಿಬಿಲಿಗೆ ಒಳಗಾದ ಒಂಟೆಯ ಮಾಲೀಕ, ಚೀಲದಲ್ಲಿದ್ದ ವಜ್ರದ ಹರಳುಗಳನ್ನು ತೆಗೆದು ಎಣಿಸಲು ಆರಂಭಿಸಿದ. ಅವನು ಕೂಡಿಟ್ಟಷ್ಟೇ ವಜ್ರದ ಹರಳುಗಳು ಅದರಲ್ಲಿ ಇದ್ದವು. ಎಲ್ಲಾ ಲೆಕ್ಕ ಸರಿಯಾಗಿತ್ತು. ಮತ್ತಷ್ಟು ಅಚ್ಚರಿಯಿಂದ ರಾಜಾಸಿಂಗ್ ಕಡೆ ನೋಡಿದ ಒಂಟೆಯ ವ್ಯಾಪಾರಿ ‘ಎಲ್ಲವೂ ಇಲ್ಲೇ ಇವೆಯಲ್ಲಾ?! ನೀವೇನು ತೆಗೆದಿಟ್ಟುಕೊಂಡಿರುವಿರಿ’ ಎಂದು ಪ್ರಶ್ನಿಸಿದ. ಅದಕ್ಕೆ ರಾಜಾಸಿಂಗ್ ಮುಗುಳ್ನಗುತ್ತಾ ಹೇಳಿದ: ‘ಎರಡು ಅತ್ಯಮೂಲ್ಯ ವಜ್ರಗಳು ಒಂದು ಪ್ರಾಮಾಣಿಕತೆ ಇನ್ನೊಂದು ಆತ್ಮಗೌರವ. ಎರಡೂ ನನ್ನಲ್ಲಿಯೇ ಇವೆ. ಅದಕ್ಕೆ ಯಾವ ವಜ್ರವೂ ಸಮವಲ್ಲ’ ಎಂದು ವಂದಿಸಿ ಮನೆ ಕಡೆ ನಡೆದ.
ನೀತಿ: ಹಣ ಕ್ಷಣಿಕ ಸಂತೋಷ ತರಬಹುದು. ಮೌಲ್ಯಗಳು ಸದಾ ಸಂತೋಷವನ್ನು ಕೊಡುತ್ತದೆ. (ಆಧಾರ)
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.