ನನ್ನ ರಗಳೆನೆಲ್ಲಾ ನಿಂತಾವಲ್ದೆ ನಾ ಇನ್ನಾರ‍್ತವ ಹೇಳ್ಳಿ? ಆಸ್ಪತ್ರೆ ಸವಗಾರ‍್ದಾಗೆ ನಿಂಗಿ ಮಲಗವ್ಳೆ. ಅವಳನ್ನು ಕುಯ್ದು ಅದೇನೋ ಪರೀಕ್ಸೆ ಮಾಡಿದ್ಮೇಲೆ ಕೊಡ್ತಾರಂತಪ್ಪ! ಅಲ್ಲಿ ಗಂಟ ಮಣ್ಣು ಮಾಡಂಗಿಲ್ಲಂತೆ ಕಣಪ್ಪಾ. ಮಟಮಟ ಮಧ್ಯಾನ್ದಾಗೆ ಪೊಲೀಸಪ್ಪಗುಳು ಹಳ್ಳೀಲಿಂದ ಸ್ರವಾನ ದಬ್ಬೋಗಾಡಿನಾಗೆ ತಂದು ದೊಡ್ಡಾಸ್ಪತ್ರೆ ಹಿಂದಾಗಡೆ ಇರೋ ಸವಾಗಾರ‍್ದಾಗೆ ಹಾಕವರೆ. ಹೆಣ ಕುಯ್ಯೋ ಡಾಕ್ಟರಪ್ಪನೇ ಈಟು ಹೊತ್ತಾನ ಬಂದಿಲ್ಲ. ‘ಕರೆಸ್ತೀವಿ ಇರಯ್ಯೋ’ ಅಂತ ಗದರಿಕ್ಸಂಡ ಬಿಳಿಬಟ್ಟೆಯೋನು ಅತ್ತಾಕಡೆ ಹೊಂಟೋದನೂವೆ ನಾಪತ್ತೆ. ಸಂಜೆ ಆಯ್ತದೆ ಕತ್ತಲಾದ ಮ್ಯಾಗೆ ಹೆಣ ಕುಯ್ಯೋಲವಂತೆ. ಏನಿದ್ರೂ ನಾಳಿಗೆಯಾ ಅಂತಾನೆ ಸವಾಗಾರ ಕಾಯೋಕಾವಲವ್ನು. ಹಂಗಾರೆ ನಾನು, ಮಕ್ಳು ರಾತ್ರೆಲ್ಲಾ ಸಿಟಿನಾಗೆ ಇರೋದೆಲ್ಲಾಪ್ಪಾ ಸಿವ್ನೆ? ನಿಂಗಿ ಸ್ರವ ಬಿಟ್ಟು ನಾಮರ ಹೆಂಗೆಲ್ಲಾರ ಹೋಗಾದು. ಮಣ್ಣಾರ ಮಾಡಿಬಿಟ್ರೆ ಎದೆ ಮ್ಯಾಲೆ ಚಪ್ಪಡಿ ಎಳ್ಕೊಂಡು ದುಃಖ ತಡ್ಕೊಂಡು ಸುಮ್ಗಾಗಬೋದು. ನಾಳೆನೇ ಕುಯ್ಯೋದು ಅಂದಮ್ಯಾಗೆ ನಿಂಗಿ ಒಬ್ಬಾಕಿನೇ ಬುಟ್ಟುಬುಟ್ಟು ರಾತ್ರೆ ಎಲ್ಲೋ ಹೋಗಿ ಕಳೆಯೋದ್ಕಿಂತ, ಆಕಿ ಪಕ್ಕಾದಗಲದಿದ್ದರೂವೆ ಸವಾಗರ‍್ದ ಆಚೆಕಡೆನಾರ ಇದ್ರು ಜೀವಕ್ಕೆ ಏಟೋ ನೆಮ್ಮದಿ. ಆಸ್ಪತ್ರೆಯೋರ‍್ಗೆ ಇವತ್ತೆ ಮುಗಿಸಿಕೊಡ್ರಪಾ ಅಂತ ಕೈಕಾಲು ಹಿಡ್ದು ಬೇಡ್ಕಂಡ್ರು ಸಾಲಮಡಿ ತಂದ ಸಾವಿರ ರೂಪಾಯಿ ನೋಟೂ ಅವರ ಕೈನಾಗೆ ಇಕ್ದೆ. ಇನ್ನು ನಾಕು ನೋಟು ನಿಂತಾವಿದ್ರೆ ತೆಗಿ. ಎಲ್ಲಾ ಸೆಟಪ್ ಮಾಡ್ತೀವಿ. ಡಾಕ್ಟ್ರೂನೂ ಬತ್ತಾನೆ ಅವರಪ್ಪನೂ ಬತ್ತಾನೆ ಅಂತ ಹಲ್ಲುಗಿಂಜಿ ನಂತಾವೆ ಬೀಡಿ ಇಸ್ಕೊಂಡು’ ಜವಾನ ನನ್ನ ಮಾರಿ ಮ್ಯಾಗೆ ಹೊಗೆ ಬಿಟ್ನಪ್ಪ ಬೇಕಾದಾಗೆಲ್ಲಾ ನೋಟು ಕೈಗೆ ಸಿಗಂಗಿದ್ರೆ ನಿಂಗಿಗಾರ ಯಾಕೀ ಗತಿ ಬರಾದು? ನಿಂಗಿ ಹೆಂಗೆ ಸತ್ಳು ಅಂಬೋದ್ನ ನಿಂತಾವ ಮುಚ್ಚಿಡೋದೇನು, ನಿಂಗೋತ್ತಿಲ್ಲದ್ದೇನು? ಆದ್ರು ಹೇಳ್ತೀವ್ನಿ ಕೇಳಿಸ್ಕಾ ತಂದೆ. ಆಕಿಗೆ ಯಾವ ಜಡ್ಡು ಆಗರ‍್ಲಿಲ್ಲಪ್ಪ. ಅಗ್ದಿ ವಯಸ್ಸಾದಾಕಿನೂ ಅಲ್ಲ. ಮೂರು ಮಕ್ಕಳ ಹೆತ್ತರೂವೆ ದಿವಿನಾಗಿದ್ಲು. ನೊಡ್ದೋರು ಆಸೆ ಪಡಂಗಿದ್ಲು ಅರೆಹೊಟ್ಟೆ ಹರ‍್ಕು ಬಟ್ಟೆನಾಗೂ ನಿಂಗಿ ಕಳಕಳೆಯಾಗಿದ್ಲು.
ನಾನು ತರಾ ಪಗಾರ ಸಾಲ್ದು ಅಂತ್ಲೆ ಸೇರ್ಮನ್ರ ಮನೆಯಾಗೆ ಕಸಮುಸರೆ ಮಾಡಾಕಿ, ಬೇಡಕಣಮ್ಮಿ ಗಂಜಿ ಕುಡ್ಕಂಡು ಇದ್ರೂ ಸರಿಯೆ. ಕಂಡೊರ ಮನೆ ಚಾಕರಿ ನೀನ್ ಮಾಡೋದು ಬ್ಯಾಡಾಂತ ಇನ್ನಿಲ್ಲದಂತೆ ಹೇಳಿದ್ರೂ ಕೇಳವಲ್ಲು. ಅಪ್ಪಾದ್ಯಾವ್ರೆ, ನೀನು ಸುಳ್ಳು ಹೇಳಿದ್ರೂ ಕೇಳ್ತಿಯಾ ದಿಟ ಹೇಳಿದ್ರೂ ಕೇಳಿಯಾ. ಆಕಿಗೆ ಹೆಂಗಾರ ದುಡ್ಡು ಹೊಂಚಾಕಿ ಮಕ್ಕಳ್ನ ದೊಡ್ಡದಾಗಿ ಓದಿಸಬೇಕೊಂಬೋ ಮಾದಾಶಿ. ಹೆಣ್ಣುಮಗಿನೂ ಸಾಲೆಗೆ ಕಳಿಸೋಳು. ಸೇರ್ಮನ್ರ ಮನೆ ಚಾಕರಿಮಾಡಿ ಬಂದ ಮ್ಯಾಲೂ ಸಂಜೆ ದನಕರಗಳ ಹಿಂದಾಗಡೆನೇ ಹೋಗಿ ಅವುಗಳು ಹಾಕೋ ಸಗಣಿ ಎತ್ಕೊಂಬಂದು ಬೆರಣಿ ತಟ್ಟೋಳು. ಭಾನುವಾರದ ದಿನ ಗುಡ್ಡಕ್ಕೆ ಹೋಗಿ ಸೌದೆ ತರೋಳು. ಹಳ್ಳಿನಾಗೆ ಹಿಟ್ಟಿನ ಮಿಸೀನು ಬಂದ್ರೂವೆ ತಾನೆ ಬೀಸೇ ಕಲ್ಲಿನಾಗೆ ರಾಗಿ ಬೀಸೋಳೇ ಹೊರ್ತು ಸುಕಾಸುಮ್ನೆ ಕಾಸು ಖರ್ಚು ಮಾಡೋ ಹೆಂಗ್ಸಲ್ಲಾಕಿ. ಒಂದಿನಾನಾರ ತೊಡ್ಲಿಲ್ಲ ಉಡ್ಲಿಲ್ಲ ಸೇರ್ಮನ್ರ ಹೆಂಡ್ರು ನಾಗವ್ವ ಕೊಡೋ ಸೀರೆ ರವಿಕೆ ತೊಟ್ಕೊಂಡೇ ಜೀವನ ಪೂರ ಕಳ್ದು ಬಿಟ್ಟ ಪಾಪಿ ಕಣಪ್ಪಾ ಆಕಿ. ಆಕಿದೆಂಗಾರಾ ಆಗ್ಲಿ ಸಾಲೆಗೋಗೋ ಮಕ್ಳಿಗೆ ಹರ‍್ಕು ಲಂಗ ಅಂಗಿ ಹಾಕಿ ಕಳಿಸ್ದೋಳಲ್ಲಾಕಿ. ನಾನಾಗಿ ಕೊಡಿಸಿದ್ರೆ ಸೀರಿ, ಬಟ್ಟೆ. ಒಂದಿನನಾರ ಇಂತಾದ್ದು ಬೇಕು ಅಮತ ಮಕಮಾರಿ ಸೊಟ್ಟಮಾಡ್ದ ಜೀವಲ್ಲದು. ಎಲ್ಲಾ ಸರಿನೇ ಆಕಿ. ಸೇರ್ಮನ್ರ ಮನಿಗೆ ಹೋಗೋದ್ಯಾಕೋ ನಂಗೆ ಸರಿಬರವಲ್ದು. ಆವಯ್ಯ ಯಾವತ್ತೂ ನಮ್ಮಂಥೋರ‍್ತಾವ ನಕ್ಕಂಡು ಮಾತಾಡಿದೋನೇ ಅಲ್ಲ. ಅಂತ ಮೇಧಾವಂತ. ಅಂಥೋನು ನಾನೇನಾರ ಹಾದಿನಾಗ ಕಂಡ್ರೆ ಬಾಯಿನಾಗಿರೋ ಹಲ್ಲೆಲ್ಲಾ ತಕ್ಕೊಂಡು ಮಾತಾಡಿಸೋನು. ‘ಏನಾರ ಕಾಸು ಬೇಕೇನ್ಲೆ? ತಾಪತ್ರಯ ಮಾಡ್ಕಬ್ಯಾಡ. ಕೊಡೋನೂ ಅಂಬೋನು ನಿನ್ನ ಹೆಂಡ್ರು ದುಡ್ದು ಹಾಕಿದ್ರೆ ನಿಂದೊಂದು ಬಾಳು. ನಿನ್ನ ಜವಾನ ನೋಕ್ರಿನಾಗೆ ಏನಾದಾತು. ನಿಂಗಿ ಅಂದ್ರೇನೇ ನಿಗಿನಿಗಿ ಕೆಂಡಿದ್ದಂಗೆ. ತುಂಡುಕುಚ್ಚಿಂದಗವ್ಳೆ. ನೀನೋ ಸೀಗಡಿ ಮೀನಿದ್ದಂಗೆ ಅಂತೆಲ್ಲಾ ನಗಸಾರಮಾಡಿ ನನ್ನ ಹೀಯಾಳಿಸೋನು. ನನ್ನ ಮೈಯೆಲ್ಲಾ ಪಾದರಸ ಆಗೋಗೋದು. ಸೇರ್ಮನ್ರೇ ಅಲ್ಲ ನಮ್ಮ ಇಡೀ ಹಟ್ಟಿಗೆ ಹಟ್ಟಿನೇ ಕೊಂಡಾಡೋದಾಕಿನಾ ಇವಂದೇನು ಪೆಸಲ್ಲು ಅಂತ ಸುಮ್ನಾಗೋವೆ. ನಿಂಗಿ ತಾವ ಆವಯ್ಯ ಮಾಡೋ ಅವಳ ತಾರೀಪ್ನ ಹೇಳೋವೆ. ‘ಥೂ ಅದರ ದುಷ್ಟಿನೇ ಸರಿಗಿಲ್ಲ. ಕೆಲಸ ಮಾಡ್ತಾ ಇದ್ದರೆ ಹಿಂದೆಮುಂದೆ ಅಡ್ಡಾಡ್ತಾ ಮೈಕೈ ಮುಟ್ಟುತೇತೆ. ಹಡಬೆನಾಯಿ ಇದ್ದಂಗೆ’ ನಿಂಗಿ ಹಿಂಗಂದ್ರೆ ನಾ ಖುಷಿ ಪಡೋದ್ಕಿಂತ ಭಯ ಪಟ್ಕಂಡಿದ್ದೇ ಹೆಚ್ಚು. ಅಂವಾ ಬೆಂಕಿ ಇದ್ದಂಗೆ. ದೊಡ್ಡಮಂದಿ ಸಾವಾಸವೇ ಬ್ಯಾಡ. ಅವನ ಮನೆ ಚಾಕರಿನೇ ಬ್ಯಾಡ ಅಂತಿದ್ದೆ. ‘ನಾನೇನ್ ಹುಡ್ಗಿನಾ? ಮೂರು ಮಕ್ಳು ತಾಯಿ. ನನ್ನ ತಗೊಂಡೇನ್ ಮಾಡ್ಯಾನು ಸುಮ್ಗಿರು’ ಅನ್ನೋಳು. ಅವನ ಹೆಂಡ್ರು ಅಗ್ದಿ ಬೆಳ್ಳಗೆ ಸುಣ್ಣಗೋಡಿದ್ದಂಗವ್ಳೆ. ಆಕಿ ಗುಣನೂ ಚಲೋ ಐತೆ. ಈಗಿನ ಕಾಲ್ದಾಗೆ ಇಬ್ಬರೂ ದುಡಿದ್ರೆ ಪಾಡಾಗಿರ‍್ಬೋದು. ದಿನಸಿ ರೇಟೆಲ್ಲಾ ಗಗನಕ್ಕೇರವೆ. ದೊಡ್ಡದೊಡ್ಡ ಆಫೀಸರ‍್ಗುಳೇ ಹೆಂಡ್ರನ್ನ ದುಡಿಯೋಕೆ ಕಳಿಸ್ತಾರೆ. ನಿಂದೇನು? ಈಸ್ಕೂಲಿನ ಜವಾನಂದು?’ ಅಂಬೋಳು. ಹಬ್ಬ ಹುಣ್ಣಿಮೆದಾಗ ಸೇರ್ಮನ್ರ ಮನೆಯಾಗೆ ಬಾಳ ಕೆಲ್ಸಾಂತ ಮಗಳು ಗಂಗಿನೂ ಜತೆಯಾಗೆ ಕರ‍್ಕೊಂಡು ಹೋಗೋಳು. ಗಂಗಿಗೂ ಈಗ ಹದಿನಾರಾಗೀದ್ದೀತು. ಮೈಕೈ ತುಂಬ್ಕೊಂಡು ದೊಡ್ಡ ಹೆಂಗಸಂಗೇ ಕಾಂಬೋಳು. ಎಲ್ಲಾ ಅವರವ್ವನಂಗೆ ತಿದ್ದಿದ ಗೊಂಬಿ. ಹೈಸ್ಕೂಲ್ನಾಗೆ ಓದೋಳು. ‘ಅಸ್ರಾ, ನಿಮ್ಮ ಮಗಳು ಶಾರ್ಪಾಗವ್ಳೆ ಕಣ್ಣಾ. ಎಸ್ಸೆಲ್ಸಿಯಾ ಒಂದೇಟ್ಗೆ ಪಾಸ್ ಮಾಡ್ತಾಳ್ ನೋಡು’ ಅಂತ ಆಕಿ ಮೇಷ್ಟ್ರು ಸಾಂಬಸಿವಯ್ಯ ಬೋ ತಾರೀಪು ಮಾಡೋರು. ಹಿಟ್ಟೋ ಸೊಪ್ಪೋ ತಿನ್ಕಂಡು ಚಿಂತಿಲ್ದಂಗೆ ಇದ್ವು. ಇಧಿ ದೇವತೆ ಚಿಂತಿಲ್ದಂಗೆ ಇರೋಕೆ ಬಿಟ್ಟಾರೂ ಬಿಟ್ಯಾಳೆ.
** ** **
ಸೇರ್ಮನ್ರ ಮಗ ಈರಭದ್ರ ನನ್ನ ಮಗಳು ಗಂಗಿ ಹಿಂದೆ ಬಿದ್ದವ್ನೆ ಅಂತಂದು ಬ್ಯಾರ‍್ಯಾರೂ ಅಲ್ಲ, ಗಂಗೀನೇ ಬಂದು ಅತ್ಕಂತ ಹೇಳಿದ್ಲು. ಅವನೂ ಅವಳ್ದೆ ಈಸ್ಕೂಲ್ನಾಗೆ ಓದೋ ಹುಡುಗ. ಮೋಪಾಗಿದ್ದ. ಹಳ್ಳಿನಾಗೆ ಫಸ್ಟೇಟ್ಗೆ ಬೈಕು ತಕ್ಕಂಬಂದು ಓಡಿಸ್ದೋನು ಅವನೆಯಾ, ‘ನೋಡಬೆ, ನಿನ್ನ ಬುದ್ಧಿ ನಿನ್ನ ಕೈನಾಗಿದ್ರೆ ಯಾವಾನೇನ್ ಮಾಡ್ಯಾನು... ಸುಮ್ಗಿರು’ ಅಂತ ಸಮಾಧಾನ ಮಾಡ್ದೆ. ಆದರೆ ನಿಂಗಿ ರಾಂಗಾದ್ಳು... ಅವರಪ್ಪಂತಾವ ಹೇಳ್ತೀನಿ ತಾಳು ಅಂತ ಎಗರಾಡಿದ್ಳು. ಆದ್ರೆ ಗಂಗೀದು ಬ್ಯಾರೇನೆ ವರಸೆ. ‘ನಾ ಓದ್ದು ಸಾಕು, ನಾನ್ ಸಾಲೆಗೆ ಹೋಗಂಗಿಲ್ಲ’ ಅಂತೆ ಜಿದ್ದಿಗೆ ಬಿದ್ಳು. ನಿಂಗಿ ಅಷ್ಟಕ್ಕೆ ಸುಮ್ಗಾದೋಳಾ. ‘ನೀ ಹೋಗಾಕೆಬೇಕು. ಅವನೇನ್ ಮಾಡ್ಯಾನು. ನಡಿ ನಿಮ್ಮ ಮೇಟ್ರುತಾವೆ ಹೇಳ್ತೀನಿ’ ಅಂತಂದು ನಿಂಗಿ ರೋಪ್ ಹೊಡೆದ ಮ್ಯಾಲೆ ಮತ್ತೆ ಹೋಗೋಕೆ ಸುರು ಮಾಡಿದ್ಳು ಗಂಗಿ. ಮೊದ್ಲೆಲ್ಲಾ ಚೆಂದಾಗಿ ಸಿಂಗಾರ ಮಾಡ್ಕೊಂಡು ಹೋಗೋವಾಕಿ, ಈಗ ಹೆಂಗಂದ್ರೆ ಹಂಗೆ ಹೊರಟು ಬಿಡೋಳು. ನನ್ಗೆ ಅವಳೇ ಚಿಂತಿಗಿಟ್ಕಂತು. ಒಂದು ಮಧ್ಯಾನ್ದಾಗೆ ಮೇಷ್ಟ್ರು ಸಾಂಬಸಿವಯ್ಯನರ‍್ನ ಕಂಡು ಈತರಕ್ಕೆ ಈತರಾ ಹಿಂಗಿಂಗೆ ಆಗೇತೇ ಅಂತ ಅಲವತ್ಕೊಂಡೆ. ‘ಇರ‍್ಲಿ ಬುಡಯ್ಯ ವಯಸ್ಸಿನ ಹುಡ್ಗರಲ್ವೆ. ಇದೆಲ್ಲಾ ಕಾಮನ್ನು. ಆದ್ರು ಒಂದು ಕಣ್ಣು ಮಡಗಿರ‍್ತೀನಿ. ಹೋಗಿ ಬಾ’ ಅಂತ ಧೈರ್ಯ ಹೇಳಿದರು. ಒಂದಷ್ಟು ದಿನಾ ಬಿಟ್ಟು ಗಂಗಿನೇ ನಾನು ಕೇಳ್ದೆ. ‘ಈಗ ಹೆಂಗ್ ಅವ್ನು? ಬಾಲ ಮುದುರಿಕೊಂಡು ಅವ್ನಾ’ ‘ಇಲ್ಲಾ’ ಅನ್ನೋ ತರಾ ಅಂತ್ತಿಂದಿತ್ತ ತಲೆ ಅಲ್ಲಾಡಿಸಿದ್ಲು. ಮಾರಿಹಬ್ಬ ಬರೋಗಂಟಾ ಅಂತದ್ದೇನು ನೆಡಿಲಿಲ್ಲ. ಮಾರಿಹಬ್ಬ ಆಗಿ ಎಲ್ಡು ದಿನವಾಗಿತ್ತು. ಸಾಲೆಬಿಟ್ಟು ಏಟು ಹೊತ್ತಾದ್ರು ಗಂಗಿ ಬಂದಿರಲಿಲ್ಲ. ನಿಂಗಿ ಗಾಬರಿಬಿದ್ದು, ಸಾಲೆತಾವ್ಕೆ ಹೋದ್ಳು. ಸಾಲೆನೇ ಕಾಣ್ದೋಟು ಕತ್ತಲಾಗ್ತಾ ಬಂದಿತ್ತು. ಎದೆ ಝಲ್ ಅಂತು. ಅಲ್ಲಿ ಯಾರವರೆ ಕೇಳೋಕಾರ? ಅಲ್ಲಿಂದ ನಿಂಗಿ, ನಾನು ಇಬ್ಬರೂವೆ ಅವಳ ಕ್ಲಾಸ್ ಹುಡ್ಗಿ ಮನೆತಾವೆ ಹೋದ್ವು. ‘ಏನು! ಇನ್ನು ಬಂದಿಲ್ವೆ? ಸ್ಕೂಲ್ ಬಿಟ್ಟ ತಕ್ಷಣ ಹೊಂಟೋದ್ಳಲ್ಲ ಅಸ್ರಣ್ಣ?’ ಅಂತ ನನ್ನೇ ಕೇಳ್ತು. ತೊಳ್ಳೆಗಳು ನಡುಗಿ ಹೋದ್ವು. ಸೀದಾ ಮನೆಗೆ ಬಂದ್ವಿ. ಉಣ್ಣೊ ಹೊತ್ತಾದ್ರೂ ಗಂಗಿ ಬರ‍್ಲಿಲ್ಲ. ರಾತ್ರಿ ಆದಂಗೆಲ್ಲಾ ತಾಯಿ ಜೀವ ಹೊಯ್ದಾಡಾಕೆ ಹತ್ತಿತ್ತು. ಸೇರ್ಮನ್ರ ಮಗ ಏನಾರ ಕಿತಾಪತಿ ಮಾಡಿದ್ನೋ? ಅವರ ಮನೆತಾವಾರ ಹೋಗಿ ಒಂದ್ಮಾತು ಕೇಳಾನಾ ನಡಿ’ ಅಂತಂದ್ಲು ನಿಂಗಿ. ಅಯ್ಯೋ ನಿನ್ನ ಕಟುಕರ‍್ತಾವ ಬಸವಪುರಾಣ ಹೇಳ್ದಂಗೆ ಆತದೆ ಕಣಮ್ಮಿ ಬ್ಯಾಡ ಅಂದ್ರೂ ಕೇಳವಲ್ಲು. ಆ ಹುಡ್ಗಾರ ಮನೆಗವ್ನೋ ಇಲ್ಲವೋ ತಿಳಿದಂಗಾರ ಆತದೆ ಬರ‍್ಲಾ ಮೂಳಾ ಅಂತ ಒಂದೇ ವರಾತಮಾಡಿದ್ಳು ನಿಂಗಿ. ‘ಬೇಡ ಕಣಮ್ಮಿ. ಈ ವಿಸ್ಯ ಸೇರ್ಮನ್ರ ಮನೆ ಆಳುಕಾಳುಗಳಿಗೆಲ್ಲಾ ತಿಳೀತೋ ನಾಳೆ ವತಾರ‍್ಗೆಲ್ಲಾ ಊರು ತುಂಬಾ ಸುದ್ದಿ ಟಾಂಟಾಂ ಆಗೋಯ್ತದೆ ಅಂದ್ರ ಕೇಳ್ಳಿಲ್ಲಾಕಿ. ದುಡುದುಡು ಹೊಂಟೇಬಿಟ್ಲು. ನಾನು ಕಾಲೆಳ್ಕಂಡು ಹೋದೆ.
ಬಾಗಿಲು ತಟ್ಟಿದಾಗ ಈರಭದ್ರನೇ ಬಂದು ಬಾಗಿಲು ತೆಗೆದ. ‘ಏನು ಬಂದ್ರಿ?’ ಅಂದ. ‘ಅಪ್ಪಯ್ಯ’ ಅಂತ ಒಳಾಕ್ ಹೊಂಟೋದ. ನನಗೋ ಗಂಟ್ಲಾಗೆ ನೆಗ್ಗಿಲುಮುಳ್ಳು ಚುಚ್ಚಿಕೊಂಡಂಗಾತಪ್ಪ. ಹಿಂದಾಗಡೆನೇ ಸೇರ್ಮನ್ರು ಈಚೆ ಬಂದರು. ‘ಏನಯ್ಯಾ ಅಸ್ರ, ಹೆಂಡ್ತಿನಾ ಮುಂದಿಟ್ಕಂಡು ಬಂದಿ?’ ಅಂತ ತಮಾಷಿ ಮಾಡಿ ಸಿಗರೇಟ್ ಹೊಗೆ ಮಕದ ಮ್ಯಾಗೆ ಬಿಟ್ಟು ನಕ್ಕ. ಏನು ಮಾತಾಡ್ಬೇಕೋ ತೋಚದಂಗಾಗಿ ‘ಒಂದೈನೂರು ರೂಪಾಯಿ ಬೇಕಿತ್ತು ಕಣ್ರಾ’ ಅಂದು ಬಿಟ್ಟೆ. ಅಯ್ಯೋ ಮಂಗ ನನ್ ಮಗ್ನೆ ನಿಂಗೀನೇ ಕಳಿಸಿದ್ರೆ ಇಲ್ಲ ಅಂತಿದ್ನೇ? ಅದ್ಕೆ ಈಟೊತ್ನಾಗೆ ಇಬ್ಬರು ಬರೋದಾ? ಹುಳ್ಳಗೆನಕ್ಕ. ‘ಬೆಳಿಗ್ಗೆ ನಿಂಗಿ ಕೆಲಸಕ್ಕೆ ಬತ್ತವಳಲ್ಲ ಅವಾಗ ಕೊಡ್ತಿನೇಳು. ಈಗ ಹೋಗಿ’ ಅಂದವನೆ ತಟ್ಟನೆ ಒಳಾಗ್ ಹೊಂಟೋದ. ಒಳ ಬಾಗಿಲ್ದಾಗ ನಾಗವ್ವ ನಿಂತಿದ್ದು ಕಾಣ್ತು. ಕಾಲು ಎಳ್ಕೊಂಡು ಮನೀಗೆ ಬಂದ್ವು. ಅಂಥ ಚಳಿನಾಗೂ ಮೈಯಲ್ಲಾ ಬೆವರು ಕಿತ್ಕೊಂಡಿತ್ತು. ಹಂಗಾರೆ ಗಂಗಿ ಎಲ್ಲಿ ಹೋದ್ಳು ಅಂತ ನಿಂಗಿ ಒಬ್ಬಳೇ ಮಾತಾಡ್ಕೊಂಡು ಅತ್ತಿದ್ದೂ ಅತ್ತಿದ್ದೆ. ರಂಡೆ ನನ್ನ ಕೈಗೆ ಸಿಗೆಬೀಳ್ಳೀ...ಆಗಯ್ತೆ ಮಾರಿಹಬ್ಬ’ ಅಂತ ಕೊತಕೊತ ಕುದ್ದು ಹೋದ್ಲು. ದಾರಿನಾಗೆ ಕಂಡ ಸಾಂಬಸಿವಯ್ಯ ಮೇಟ್ರು ಮನೆ ಬಾಗಿಲು ತಟ್ದೆ. ಅವರಿಗೂ ವಿಸ್ಯಾ ಕಿವಿಗೆ ಹಾಕ್ದೆ. ಅದುವರೆಗು ಎಲ್ಲಿತ್ತೋ ಅಳು ಹಂಗೆ ಕಟ್ಟೆ ಹೊಡ್ಕಂಡು ಬಂತು. ಗೊಳೋ ಅಂತ ಅತ್ತುಬಿಟ್ಟೆ ಕಣಪ್ಪ ಸಿವ್ನೆ. ಆತನೂ ದಿಗಿಲಾದ. ‘ಈಗಿನ ಕಾಲದ ಹುಡ್ರು ಹಿಂಗೆ ಅಮ್ತ ಹೇಳಾಕೆ ಬರಂಗಿಲ್ಲ ಕಣ್ ಅಸ್ರ. ಎಲ್ಲಿಗಾನ ಓಡಿಗೀಡಿ ಹೋದ್ಲೋ ಹೆಂಗೆ?’ ಅಂದ ಅವಯ್ಯ. ಈರಭದ್ರ ಮನೆಯಾಗೇ ಅವ್ನೆ ಕಣಯ್ಯನೋರಾ’ ಅಂತ ನಿಂಗಿ ಮುಸುಮುಸು ಅತ್ಳು. ಈಸ್ಕೂಲ್ನಾಗೇನಾರ ಗಲಾಟೆ, ಗಿಲಾಟೆ ಆತೇನ್ರಾ? ತಡಿಲಾರ್ದೆ ಕೇಳ್ದೆ. ‘ಹಂಗೇನು ನಡಿಲಿಲ್ವೆ... ದೇವರವ್ನೆ ಹೋಗಿ’ ಅಂತಂದು ಅವಯ್ಯ ಬಾಗ್ಲು ಹಾಕ್ಕಂತು. ದೇವ್ರೆ ನೀನೇ ನನ್ನ ಮಗೀನ ಕಾಪಾಡು ಅಂತ ಅತ್ಕಂತ ಮನೀಗೆ ಬಂದು ರಾತ್ರಿ ಕಳೆದ್ವು. ಬೆಳಗಾತು, ಸಾಲೆ ಟೇಮಾತು, ನಿಂಗಿ ಬರಲಿಲ್ಲ. ಅಟ್ರಾಗಾಗ್ಲೆ ಹಳ್ಳೀ ತುಂಬಾ ಗುಸುಗುಸು ಎದಿತ್ತೋ ಸಿವ್ನೆ. ಒಂದಿಬ್ಬರು ಹಾದಿನಾಗೆ ಅಡ್ಡಹಾಕಿ ‘ಎಲ್ಲಯ್ಯ ಗಂಗಿ? ರಾತ್ರೆಲ್ಲಾ ಮನೀಗೆ ಬಂದಿಲ್ವಂತೆ. ಎಲ್ಲಾರ ಓಡಿಗಿಡೋದ್ಲೋ ಹೆಂಗೆ?’ ಮಕ್ಕೆ ಹೊಡ್ದಂಗೆ ಕೇಳಿದ್ರು. ಆವಾಗ್ಲೆ ಗಿಡ್ಡತಿಮ್ಮಯ್ಯನ ಮಗ ಸಣ್ಣೀರ ಬಂದು ಹೇಳಿದ ಮಾತು ಕೇಳಿದಾಗ್ಲಂತು ಕರೆಂಟ್ ಹೊಡ್ದಂಗಾಗೋದ್ವಿ. ‘ಗಂಗೀನ ಸಂಜೆ ಮಲ್ಲಾಪುರದ ಕೆರೇತಾವ ನೊಡಿದ್ವಿಕಣಪ್ಪ. ಸಿಟಿಗಾರ ಹೋಗಿ ಪೊಲೀಸ್‌ನೋರ‍್ಗಾನ ಕಂಪ್ಲೇಂಟ್ ಕೊಡಾಕಿಲ್ಲವಾ’ ಅಂದ ಸಣ್ಣೀರ. ಅದೇ ಸರಿಯೇನೋ ಅಂತ ಹೊಂಟಾಗ್ಲೆ ಅಗಸರ ರುದ್ರವ್ವ ಬಂದು ಹೇಳಿದ ಸುದ್ದಿ ಕೇಳಿ ಎದೆ ಒಡೆದೋತು, ಎದ್ನೋಬಿದ್ನೋ ಅಂತ ನಿಂಗಿ ಜೊತೆ ಕೆರೆತಾವ ಹೊಂಟೆ. ಅಲ್ಲಾಗ್ಲೆ ಊರಮಂದಿ ಸೇರಿತ್ತು. ‘ಅದೇ ಹಸಿರುಲಂಗ, ಚುಕ್ಕೆ ಚುಕ್ಕೆ ಕುಬಸ, ಅವಳ್ದೆಯಾ... ಅವ್ಳೆ. ಅನುಮಾನವೇ ಇಲ್ಲ. ನಿಂಗಿ ಎದೆಎದೆ ಬಡ್ಕೊಂಡು ಚೀರಿದ್ಲು. ‘ಈರಭದ್ರಂದೇ ಈ ಕೆಲ್ಸ. ಸಂಜೆ ನಾನು ಕೆರೆತಾವ ನೋಡಿದಾಗ ಆ ಹಡಬೆ ನನ್ಮಗ ಗಂಗಿ ಜೊತೆ ಕಂಡಿದ್ದ ಕಣಪ್ಪ’ ಅಂತ ಸಣ್ಣೀರ. ಹಲ್ಲು ಕಡೆದ. ಮಕ್ಕಳೂ ಓಡಿ ಬಂದು ಹೌಹಾರಿನಿಂತ್ವು. ನಾನು ಸ್ರವ ತೆಗೆಯೋಕೆ ಹೋದೆ. ಪೊಲೀಸಿನೋರು ಬರೋಗಂಟ ಸ್ರವಾನ ಮುಟ್ಟಂಗಿಲ್ಲ. ನೀರಿಗಿಳಿಯಂಗಿಲ್ಲ ಎಂದು ಬೋದರು. ಮಂದಿ ಸೇರ‍್ತು. ಸುದ್ದಿ ತಿಳಿದ ಸೇರ್ಮನ್ರೂ ಮೋಟರ‍್ನಾಗೆ ಬಂದ. ‘ಸಿವ್ನೆ ಯಾಕಿಂಗೆ ಮಾಡ್ಕೊಂಡ್ಲೋ ಶುಭಲಿಂಗ’ ಅಂತ ಆಕಾಸ ನೋಡ್ದ. ಆಮ್ಯಾಲೆ ನನ್ನ ಕಡೆ ತಿರುಗಿ, ‘ಅಳಬ್ಯಾಡ ಸುಮ್ಗರ‍್ಲಾ. ಅತ್ತು ಬಿಟ್ರೆ ಸತ್ತೋಳು ಎದ್ದು ಬಂದಾಳಾ?’ ಗದರಿಕೊಂಡ. ‘ಅಲ್ಲಾ ಸಾಯೇಬ್ರಾ ತಮ್ಮ ಮಗ ನನ್ನ ಮಗಳ ಸಂಗಡ’ ಅಂತೇನೋ ಹೇಳಾಕೊಂಟ ಗಂಗಿನ ಗಕ್ಕನೆ ಗದರಿಕೊಂಡು ಬಾಯಿ ಮುಚ್ಚಿಸಿದ. ಜೊತೆನಾಗಿದ್ದ ಸ್ಯಾನುಭೋಗ, ಪಟೇಲ ಮುಸಿ ಮುಸಿ ನಕ್ಕರು. ‘ವಯಸ್ಸಿಗೆ ಬಂದ ಹುಡ್ಗೀರು ಯಾಕೆ ಸಾಯಿತಾರೇಳ್ಳಾ ಅಸ್ರಾ? ಯಾವನ್ನಾರ ಪಿರೂತಿ ಮಾಡಿ ಕದ್ದು ಬಸರಾಗಿರ್ತಾರಷ್ಟೆ’. ಸ್ಯಾನುಭೋಗ ಅವನೇ ಪ್ರಶ್ನೆ ಕೇಳಿ ಅವನೇ ಉತ್ತರನೂ ಹೇಳ್ದ. ಎಲ್ಲರೂ ಆಡ್ಕೊಂಡು ನಗೋರೆಯಾ. ನಮ್ಮ ಹಟ್ಟಿ ಮಂದಿನೂ ಅವರ ಜೊತೆನಾಗೇ ಸೇರ‍್ಕೊಂತು. ಸೇರ್ಮನ್ರೇ ನಂತಾವ ಬಂದ. ‘ಆದ್ದಾತು. ಯೋಚ್ನೆ ಮಾಡಬ್ಯಾಡ ಕಣ್ಲಾ ಅಸ್ರ. ಮುಂದೆ ಆಗೋ ಕೆಲಸದ ಕಡೆ ನಿಗಾಕೊಡು. ಅದರ ಭಾರ ನನಗಿರ‍್ಲಿ. ಅಂದಂಗೆ ಚೀಟಿಗೀಟಿ ಏನಾರ ಬರೆದಿಟ್ಟು ಸತ್ತಾಳೇನೋ ನೋಡ್ಲಾ?’ ಅಂದ. ‘ನನ್ನ ಮಗಳು ಅಂತಾಕಿ ಅಲ್ಲ ದೇವ್ರು. ಇದರಾಗೇನು ಮಸಲತ್ತು ಐತೆ’ ಅಂತ ಅಲವತ್ತುಕೊಂಡೆ. ‘ಏನಿರ್ತೆ ತಲೆ ಬೋಸುಡ್ಕೆ? ತಿಕ ಬಾಯಿ ಮುಚ್ಕೊಂಡು ಹೆಣ ಎತ್ತಿ ಮಣ್ಣುಮಾಡು. ಪೊಲೀಸು ಕೇಸು ಅಂತ ಹೋದ್ಯೋ ಎಕ್ಕುಟ್ಟಿ ಹೋಯ್ತಿಮಗ್ನೆ’ ಅಂತ ರೇಕ್ಕೋಂಡ. ‘ಅದೆಂಗಾಯ್ತದೆ? ಹೆಣ ಕುಯ್ದು ಪರೀಕ್ಷೆ ಮಾಡಿದ್ರೆ ಎಲ್ಲಾ ಗೊತ್ತಾಯ್ತದೆ. ಆಮೇಲೆ ಮಣ್ಣುಗಿಣ್ಣು’ ಅಂತ ಒಂದೆಜ್ಜೆ ಮುಂದೆ ಬಂದು ನಿತ್ಕಂಡ ಪಟ್ಟಣದಾಗೆ ಓದಿದ್ದ ಸಣ್ಣೀರ. ‘ಬರ‍್ಲೇಳ್ಳಾ ಪೊಲೀಸ್ರು.. ಕರೆಸಲೇ...’ರೇಕ್ಕಂಡ ಸೇರ್ಮನ್ರು.
** ** **
ಪೊಲೀಸು ಬಂತು, ಮಹಜರ‍್ರೂ ಆತು. ಆಮೇಲೆ ಆಸ್ಪತ್ರೆನೋರು ಹೆಣ ಕುಯ್ದು ಬಟ್ಟೆನಾಗೆ ಮುದುರಿಕೊಟ್ಟರು. ‘ಹಳ್ಳಿನಾಗೆ ತರಂಗಿಲ್ಲ. ಹಳ್ಳಿ ಆಚೆಗಿರೋ ಸ್ಮಶಾನ್ದಾಗೆ ಸುಟ್ಟು ಬಿಡ್ರಲೆ’ ಅಲ್ಡರ್ ಮಾಡ್ದ ಸೇರ್ಮನ್ರು. ‘ಸುಡೊದು ಬ್ಯಾಡ ಕಣಾ, ಹೂತು ಹಾಕೋದು ನಮ್ಮ ರಿವಾಜು’ ಅಂದ ಸಣ್ಣೀರ. ‘ಏಯ್ ಬ್ಯಾವಾರ್ಸಿಗುಳ. ಅದು ಕೊಳ್ತು ನಾರ್ತಾ ಅದೆ. ಸತ್ತ ಮುಕ್ಳಿ ಎತ್‌ಬಿದ್ರೇನು ಸುಡ್ರತ್ತ’ ಹಾರಾಡಿದ ಸೇರ್ಮನ್ನು ತಾನೇ ಮುಂದೆ ನಿಂತು ಸುಡಿಸಿ ಹಾಕ್ದ ಕಣೋ ಸಿವ್ನೇ. ಆಮೇಲೆ ಎಲ್ಲಾ ಮರೆತರೂ ಸಣ್ಣೀರ ಮರಿಲಿಲ್ಲ. ಆಸ್ಪತ್ರೆ, ಟೇಸನ್ನು ಅಂತ ಸುತ್ತಾಡಿ ಸುದ್ದಿ ತಂದ. ಎಲ್ಡು ಮೂರು ಜನ ಬಲತ್ಕಾರ ಮಾಡಿ ಕೆಡಿಸಿ ಆಮ್ಯಾಗೆ ಕೆರೆಗೆ ಎಸೆದವರೆ ಕಣ್ ಅಸ್ರಣ್ಣ. ರಿಪೋಲ್ಟ್‌ನಾಗೆ ರೇಪ್ ಅಂಡ್ ಮರ್ಡರ್ ಅಂತದೆ. ನಡಿ ಟೇಸನ್ನಿಗೆ ಹೋಗುಮಾ ಅಂತ ಎಗರಾಡಿದ ಅವನ ಕಾಟ ತಡಿಲಾರ್ದೆ ಟೇಸನ್ಗೋದ್ನೆ. ‘ನೋಡಯ್ಯ ಆಸ್ರ, ಸೇರ್ಮನ್ರರ ಮಗಂದೇ ಕೆಲಸ ಅಂತ ಹೆಂಗೇಳ್ತಿ? ಹೆಣ ಬ್ಯಾರೆ ಸುಟ್ಟಾಕಿರಾ? ಯಾವ ಎವಿಡೆನ್ಸ್ ಐತೆ ನಿಮ್ತಾವ? ಕೇಸು ಬಿದ್ದೋಯ್ತದೆ. ದೊಡ್ಡಮಂದಿನಾ ಯಾಕೆ ಮೈಮ್ಯಾಗೆ ಹಾಕ್ಕಂಡಿರಾ... ಇನ್ನು ಮುಂದಾರ ಹುಸಾರಾಗಿರಿ’ ಅಂತ ಬುದ್ಧಿವಾದ ಹೇಳ್ದ ಆ ಹೆಡ್ ಪೊಲೀಸಪ್ಪ. ನಿಂಗಿ ತಾವ ಹೇಳ್ಕೋಂಡು ಅತ್ತಿದಷ್ಟೆ ಬಂತು. ಅವಳು ಬುಸುಗುಟ್ಟಿದ್ದೇ ಬಂತು. ಆಮ್ಯಾಲೆ ನಡದದ್ದೇ ಬೇರೆ ಕತೆ.
** ** **
ಎಂದಿನಂಗೆ ಒಂದಿನ ಬಟ್ಟೆ ಗಂಟು ತಕ್ಕೊಂಡು ನಿಂಗಿ ಕೆರೆತಾವ ಹೋಗವಳೆ ಅಲ್ಲಿಗೆ ಈರಭದ್ರನ ಅವನ ಗೆಣಕಾರ‍್ರು ಬಂದು ಬಟ್ಟೆ ತೊಳೆಯಾಕೆ ಬಂದಿದ್ದ ನಾಯಕರ ಮನೆ ಹುಡುಗಿನಾ ಚುಡಾಯಿಸ್ತಾ ಕುಂತವೆ. ಆ ಹುಡ್ಗಿ ಕೇಳತನ ಕೇಳಿ ಕ್ಯಾಕರಿಸಿ ಉಗಿದವಳೆ. ಅಂಗಾರಾದ ಈರಭದ್ರ ಅನಾಮತ್ತು ಅವಳ್ನ ಎತ್ತಿಕೊಂಡು ಕೆರೆದಂಡೆ ಮ್ಯಾಗೆ ಕೆಡವಿಕ್ಯಂಡ್ನಂತೆ ‘ಕಾಪಾಡಿ’ ಅಂತ ಆ ಹುಡ್ಗಿ ಚೀರ‍್ಕೊಂಡೈತೆ. ಜನ ಇದ್ದರೂ ಸೇರ್ಮನ್ನರ ಮಗನ ತಡವಿಕೊಂಬೋ ದಮ್ಮು ಯಾರಿಗಿದ್ದೀತು? ನಿಂಗಿಗೆ ಅದೇನಾತೋ ಏನೋ ಬಟ್ಟೆ ತೊಳೆಯೋದು ಬಿಟ್ಟು ಹೋದೋಳೆ ಹುಡ್ಗಿ ಮೈಮ್ಯಾಲೆ ಬಿದ್ದಿರೋ ಅವನ್ನ ಎಳೆದು ಹಾಕಿ ಕಾಲು ಕಾಲಿಲೆ ಒದ್ದವಳೆ. ಅವನ ಗೆಣಕಾರ‍್ರೂ ಹೆದರಿ ಓಡಿ ಹೋಗವೆ. ಸಂಜೆಗೆಲ್ಲಾ ಹಳ್ಳಿ ತುಂಬಾ ಇದೇ ಸುದ್ದಿ. ನನ್ನ ಕಿವಿಗೆ ಬಿದ್ದಾಗ ನನ್ನ ಜೀವಾನೇ ಆಫ್ ಆತು. ಮನೆಗೆ ಬಂದೆ. ಒಲೆನೂ ಹಚ್ಚದೆ ಗರ ಬಡಿದೋಳಂಗೆ ಕುಂತಿದ್ಳು ನಿಂಗಿ.
ನಾನೇ ಮುದ್ದೆಗೆ ಎಸರಿಟ್ಟೆ. ಕತ್ತಲೆ ಕವ್ಕಂತು. ಸೇರ್ಮನ್ರು ಜನಕ್ಕೆ ಜನ ಹಿಂದಿಟ್ಕಂಡು ಬಂದು ಮನೆಯಾಗೆ ನುಗ್ಗಿ ನಿಂಗಿಯ ಹೊರಗಡೆಗೆ ಎಳ್ಕೊಂಡು ಕಾಲ್ ಕಾಲಿಲೆ ಉರುಳಾಡ್ಸಿ ಒದ್ದರು. ‘ಬೋಸುಡಿ ನನ್ನ ಮಗನ ಮ್ಯಾಲೆ ಕೈ ಮಾಡೋವೋಟು ತಿಮಿರೇನೇ ನಿನ್ಗೆ’ ಅಂತ ಎಲ್ಲಿಗಂದ್ರೆ ಅಲ್ಲಿಗೆ ಜಾಡಿಸಿ ಒದ್ದರು. ‘ಏನೋ ತೆಪ್ಪಾಗೋಗೇತೆ ಇದೊಂದಪ ಮಾಫಿ ಮಾಡಿದೇವು’ ಅಂತ ಕಾಲು ಕಾಲು ಹಿಡ್ಕೊಂಡೆ. ಮಕಮಾರಿ ನೋಡ್ದೆ ನನಗೂ ಇಕ್ಕಿದರು. ಮೂಗು ಬಾಯಿನಾಗೆ ರಕ್ತ ಕಿತ್ಕೊಂತು’ ಇದೊಂದಪ ಮಾಫಿಮಾಡಿ ಅಂತಿಯೇನ್ಲೇ ಬಾಡ್ಕವ್. ನಿನ್ನ ಹೆಣ್ತಿ ಮಾಡಿರೊದು ಹೇಲು ತಿನ್ನೋ ಕೆಲಸಾನ್ಲೆ’ ಎಂದು ಸ್ಯಾನುಭೋಗ, ಪಟೇಲ, ಸೇರ್ಮನ್ರ‍್ನ ವಹಿಸ್ಕೊಂಡು ಬಂದರು. ನೆರೆದ ಜನ ರಿಲೀಸಾದ ಹೊಸ ಸಿಲಿಮಾ ನೋಡ್ದಂಗೆ ನೋಡ್ತಿದ್ದರು. ಅದುವರೆಗೂ ಬಿದ್ದಿದ್ದ ನಿಂಗಿ ರೋಸಾವೇಸದಿಂದ ಎದ್ದು ನಿಂತವಳೆ’ ‘ಹೇಲು ತಿನ್ನೋ ಕೆಲಸ ಮಾಡ್ದೋರು ನೀವು, ದೊಡ್ಡೋರು ಅನ್ನಿಸಿ ಕೊಂಡೋರು’ ಎಂದವರ ಮೇಲೆ ನಾಸವಾಗಿ ಹೋಗಿ ಅಂತ ಮಣ್ಣು ತೂರಿದಳು. ಸೇರ್ಮನ್ರರ ಮೆನಯಾಗ್ಳ ಆಳುಗಳೀಗ ನಿಂಗಿ ಮ್ಯಾಲೆ ಕೈ ಮಾಡ್ಲಿಕ್ಕೆ ಹತ್ತಿದರು. ಅವರಾದರು ಯಾರು? ನಮ್ಮ ಹಟ್ಟಿ ಹುಡುಗರೆಯಾ. ‘ಹೇಲು ತಿನ್ನೋರು ನಾವಲ್ವೆ ಬಸವಿ ನೀನು’ ಅಂತ ಕೂಗುತ್ತಾ ಬಯಲಾಟವಾಡಲಾರಂಭಿಸಿದ ಸೇರ್ಮನ್ರು, ‘ಹೇಲಾಕೆ ಕುಂತಿದ್ದ ಹೈಕಳ್ನ ಓಡಿಸಿ. ಅದ್ನೆ ಎತ್ಕಂಬಂದು ಇವಳ ಬಾಯ್ನಾಗೆ ಇಕ್ಕರಲೇ? ಅಂತ ಆಲ್ಡರ್ ಮಾಡಿದ. ನಾ ಅಡ್ಡ ಶರುಬಿದರೂ ಬಿಡ್ದೆ ನಿಂಗಿ ಬಾಯಿನಾಗೆ ಹೇಲು ತುರುಕಿ ಬಿಟ್ಟರು. ಸೇರ್ಮನ್ರರ ತಮ್ಮ ಬಸವಣ್ಣೆಪ್ಪ ನನ್ನ ಮ್ಯಾಗೆ ನುಗ್ಗಿ ನನ್ನ ಬಾಯಿನಾಗು ತಂದು ತುರುಕಿದ. ನಿಂಗಿ ಮ್ಯಾಲೆ ನುಗ್ಗಿ ಕ್ಷಣ ಮಾತ್ರದಾಗೆ ನಿಂಗಿ ಸೀರೆಯಾ ಸೆಳೆದು ಬಿಸಾಡಿಬಿಟ್ಟ. ಕುಬಸ ಕಿತ್ತು ಹಾಕ್ದ. ಸೇರ್ಮನ್ನು ಮಂದಿ ಮುಂದೆ ಪಂಚೆ ಎತ್ತಿ ನಿಂಗಿ ಬಾಯ್ನಾಗೆ ಉಚ್ಚೆ ಹುಯ್ದ. ಇಬ್ಬರು ಭಗಭಗ ವಾಂತಿ ಮಾಡ್ಕೊಂಡ್ವಿ. ಊರ‍್ನ ದೊಡ್ಡ ಜಾತಿ ಜನರೆಲ್ಲಾ ನಿಂತು ನೋಡಿದ್ರೇ ಹೊರ್ತು ಒಬ್ಬರಾನಾ ಅಯ್ಯೋ ಅನ್ನಲಿಲ್ಲ. ನಮ್ಮ ಹಟ್ಟಿ ಜನ ಯಾವಾಗ್ಲೋ ಗುಡ್ಲು ಸೇರಿಕ್ಯಂಬಿಟ್ಟಿದ್ರು. ಉರುಳಾಡಿಸಿ ಒದ್ದು ಅವರಿಗೇ ಸುಸ್ತಾದ ಮ್ಯಾಲೆ ಹೊಂಟೋದ್ರು ನಿಧಾನವಾಗಿ ಸಾವರಿಸ್ಕೊಂಡು ಎದ್ದು ನಿಂಗಿನಾ ಏಳ್ಸಿ ಮನೆಯಾಗೆ ಕರ‍್ಕೊಂಡು ಬಂದ್ನಿ. ಸೀರೆ ಕುಬುಸ ಕೊಟ್ಟೆ. ಉಟ್ಕಂಬಲಿಲ್ಲ. ಬಲವಂತ ಮಾಡ್ದೆ. ಹುಚ್ಚು ಬಂದೋಳಂಗೆ ನನ್ನೇ ಹಿಡ್ಕೊಂಡು ಒದ್ದಳು. ಮಕ್ಕಳು ಹೆದರ‍್ಕೊಂಡು ಮೂಲೆ ಸರ‍್ಕೊಂಡಿದ್ವು. ಏನಾರ ತಿನ್ನೋಕೆ ಇದ್ದಿತೇನೋ ಅಂತ ಪಾತ್ರೆ ತೆಗೆದೆ. ಒಂದು ಮುದ್ದೆ ಬದನೆಕಾಯಿ ಬಜ್ಜಿ ಕಾಣ್ತು. ಮುರ‍್ದು ಎಲ್ಡು ಮಕ್ಕಳಿಗೂ ಇಕ್ದೆ. ಯಾರೋ ಬಾಗಿಲು ಬಡಿದಂಗಾತು. ನಿಂಗಿ ಮೈತುಂಬಾ ಕಂಬಳಿ ಹೊದ್ದಿಸಿ ಆಚೆ ಕಡೆ ಬಂದೆ. ಸಣ್ಣೀರ ನಿಂತಿದ್ದ. ‘ನಡಿ ಅಸ್ರಣ್ಣ, ಹಿಂಗಿಂಗಾತು ಅಂತ ಪೊಲೀಸಿನೋರ್ಗೆ ಕಂಪ್ಲೇಂಟ್ ಕೊಡೋಣ. ನಮ್ಗೆ ಸರ್ಕಾರದ ರಕ್ಷಣೆ ಐತೆ’ ಅಂದ. ಕಣ್ಣಾರೆ ನೀರು ಬಂದ್ರೂ ಪುಸುಕ್ಕನೆ ನಕ್ಕೆ. ಇದ್ದ ಮಾನ ಮರ್ವಾದೆ ಎಲ್ಲ ಕಿತ್ಕೊಂಡು ಹೋದ ಮ್ಯಾಲೆ ಬಂದೆಲ್ಲಪ್ಪಾ ರಾಜ. ರಕ್ಷಣೆ ಇರೋದು ನಮಗಲ್ಲ. ದೊಡ್ಡೋರಿಗೆ ಸುಮ್ಗೆ ಕಾಡಬ್ಯಾಡ. ರಾತ್ರಿಯಾಗೇತೆ ಹೋಗಿ ಬೆಚ್ಚಗೆ ಮಕ್ಕಾ’ ಅಂದೆ. ಇದೆಲ್ಲಾ ನಡೆದಾಗ ನಾನು ಇರ‍್ಲಿಲ್ಲ. ಸಿಟಿಗೋಗಿದ್ದೆ. ಬಂದ ಮೇಲೆ ಕೇಳ್ದೆ. ಹೇಲು ತಿನ್ನಿಸೋದು ಅಂದ್ರೇನು? ಬೆತ್ಲೆ ಮಾಡೋದೂ ಅಂದ್ರೇನು? ನಾವೇನು ಪ್ರಾಣಿಗುಳಾ? ಕೂಗಾಡಿದ. ಪ್ರಾಣಿಗುಳಾರ ಬೊಗುಳ್ತವೆ, ಕಚ್ಚತವೆ. ನಾವೇನು ಮಾಡ್ಯಾವು? ಆದ್ದಾತು ನಡಿಯಪ್ಪ ತಂದಿ ಅಂದೋನೆ ಬಾಗಿಲು ಮುಚ್ಕೊಂಡು ಒಳಾಕ್ ಬಂದೆ. ಮಕ್ಕಳು ಅವರವ್ವನ ಕಂಬಳಿಯಾಗೆ ಮುದುರಿಕೊಂಡಿದ್ವು. ನಾನೊಂದು ಮೂಲೆ ಹಿಡಿದು ಮಕ್ಕಂಡೆ. ಮೈಕೈಯೆಲ್ಲಾ ನವ್ವು, ಗಬ್ಬುನಾತ, ಎದ್ದು ಬಾಯಿ ತೊಳ್ಕೊಂಬೇಕೂ ಸಗ್ತಿಲ್ಲ ಮನ್ಸೂ ಇಲ್ಲ. ಯಾವಾಗ ನಿದ್ದೆ ಬಂತೋ ತಿಳಿನಿಲ್ಲ.
ಬೆಳಗಾನೆ ಹೊಡ್ದು ಎಚ್ಚರಿಸಿದಂಗಾತು. ಹೊಳ್ಳಿ ನೋಡಿದರೆ ಮಕ್ಕಳು ಕಂಬಳಿಯಾಗಿ ಮುದುರಿಕೊಂಡಿದ್ವು. ನಿಂಗಿನೇ ಕಾಂಬಲಿಲ್ಲ! ನೀರ ಕಡಿಕೆ ಹೋಗಿದ್ದಾಳು ಅನ್ಕೊಂಡು ಬೀಡಿ ಹಚ್ಕೊಂಡೆ. ಹೊಟ್ಟೆನಾಗೆಲ್ಲಾ ಸಂಕ್ಟ. ಒಂದು ಪಾಕೆಟ್ ಸರಾಯಿ ಬಿಟ್ಕಂಡ್ರೆ ಸರಿ ಹೋದಾತು ಅನ್ಕೊಂಡೆ. ಆಚೆ ಕಡೆ ಯಾರೋ ಲಭೋ ಲಭೋ ಬಾಯಿ ಬಡ್ಕೊಂಬೋದು ಕೇಳ್ತು’ ಎಂತ ಕೆಲಸ ಮಾಡ್ಕೊಂಬಿಟ್ಯಲ್ಲೆ ನಿಂಗಿ’ ಅಂತ ಅಳೋದು ಕೇಳಿ ಮತ್ತೇನಾತಪ್ಪ ಅಂತ ಈಚೆ ಕಡೆ ಬಂದೆ. ಬೆಳಗಾನೆ ಜನ ಸೇರವೆ! ‘ಮಕ್ಕಳು ಮರಿ ಬಿಟ್ಟು ಹಿಂಗೆ ಸಾಯೋಕೆ ಮನ್ಸಾರ ಹೆಂಗೆ ಬಂತೆ ನಿಂಗಿ’ ಅಂತ ಕೆಂಪಜ್ಜಿ ಆಕಾಸಭೂಮಿ ಒಂದು ಮಾಡ್ತಿದ್ಳು... ತಲೆ ಎತ್ತಿ ನೋಡ್ತಿನೀ. ಕೇರಿನಾಗಿರೋ ಮರಕ್ಕೆ ನೇಣು ಬಿಕ್ಕಂಡು ನೇತಾಡ್ತಾ ಇರೋ ನಿಂಗಿ ಕಂಡ್ಳು. ಹಿಂಗೆ ಮಾಡಿಕೊಂಡಾಳಂತ ಒಂದೀಟು ಸುಳಿವು ಸಿಕ್ಕದ್ರೂ ನಿದ್ದೆ ಮಾಡ್ದೆ ಕಾಯ್ಕೊಂಡು ಇರ್ತಿದ್ನೆ ಸಿವ್ನೆ ಅಂತ ಕುಸಿದು ಬಿದ್ದೆ. ಬಿಸಿಲು ಏರ್ತಿತ್ತು.
ಆಮೇಲೆ ಮತ್ತದೆ ಪೊಲೀಸು ಜೀಪು ಬಂತು, ಮಹಜರಾತು. ‘ಏನ್ ಮಾಡ್ದೆಲೆ ಚೋದಿಕೆ?’ ಅಂತ ಪೊಲೀಸಿನೋರು ನನಗೆ ಬಾರಿಸೋವಾಗ ಬಿಡಿಸ್ಕೊಂಡ ಸಣ್ಣೀರ. ನಿನ್ನೇ ನಡೆದೆದ್ದೆಲ್ಲಾ ಹೇಳ್ದ. ‘ಹೌದೇನ್ರೋ ಈ ಕಾಲೇಜು ಹುಡ್ಗ ಹೇಳಾದು ದಿಟವೇನ್ರಲಾ?’ ಹಟ್ಟಿ ಜನರ ಮ್ಯಾಲೆ ಪೊಲೀಸಪ್ಪಗಳು ಲಟ್ಟ ಎತ್ತಿದರು. ಹಟ್ಟಿ ಜನ ಅಂಬೋ ಜನವೆಲ್ಲಾ ಮೂಕಪ್ರಾಣಿ ತರಾ ನಿಂತ್ಕಂಡಿದ್ದರು. ಸಣ್ಣೀರ ಮತ್ತೇನೋ ಹೇಳಾಕೊಂಟ. ‘ಷಟಪ್’ ಅಂತ ಗದರಿದರು ಪೊಲೀಸಪ್ಪಗಳು. ‘ಒಂದು ಮಾತು ಆಡಿದ್ರೆ ನಿನ್ನ ಅಸ್ರನ್ನೂ ಇಬ್ರ‍್ನೂ ಒಳಾಗ್ ಹಾಕ್ತೀವಿ ಸುವ್ರ‍್ಗುಳಾ’ ಅಂತ ಅಂಗಾರಾದರು. ಹಳ್ಳಿನಾಗಿರೋ ಯಾರೂವೆ ಎತ್ತಿನ ಬಂಡಿ ಕಟ್ಟಲಿಲ್ಲ. ಸಣ್ಣಿರ‍್ನೆ ತನ್ನ ಮನೆಯಾಗಿರೋ ದಬ್ಬೋಗಾಡಿಕೊಟ್ಟ. ಅದರಾಗೆ ನಿಂಗಿನಾ ಹಾಕ್ಕೊಂಡು ಪೊಲೀಸಿನೋರು ಅದರ ಹಿಂದಾಗಡೆ ನಾನು, ನನ್ನ ಮಕ್ಕಳು ಹೊಂಟ್ವಿ. ನಾಕಾರು ಮೈಲೀಲೆ ತಾಲ್ಲೂಕು ಆಸ್ಪತ್ರೆ ಆಗ್ಲೂ ನಮ್ಮ ಜೋಡಿ ಬಂದೋನು ಸಣ್ಣೀರೊಬ್ಬನೆಯಾ. ಆವಾಗ್ನಿಂದ ಸವಾಗಾರದ ಮುಂದೆ ಕುಂತೇ ಅದೀವಿ ಕಣಪ್ಪ ಭಗವಂತ್ನೆ. ಸ್ರವ ಬೆಚ್ಚಗೆ ಒಳಗೆ ಚಳಿಯಾಗೆ ನಾವು ಹೊರಗೆ. ನಮ್ತಾವ ದುಡ್ಡಿಲ್ಲ ದುಗ್ಗಾಣಿಲ್ಲ. ಅದು ಕೊಡ್ದೆ ಆಸ್ಪತ್ರೆವು ಹೆಣ ಕುಯ್ಯಂಗಿಲ್ಲ. ‘ಇದಕ್ಕೆ ಪರಿಹಾರ ಒಂದೆಯಾ ಬೆಳಗಾಗ್ಲಿ ನಮ್ಮ ದಲಿತ ಸಂಘರ್ಷ ಸಮಿತಿ ಹುಡ್ರನ್ನ ಕರ‍್ಕೊಂಡು ಬರ್ತೀನಿ ಸುಮ್ಗಿರು’ ಅಂತ ಸಣ್ಣಿರ‍್ನೂ ನನ್ನ ಜೊತೆ ಕಣ್ಣೀರ್ ಹಾಕ್ದ. ಈಟು ಹೊತ್ತು ನಾನು ಹೇಳಿದ್ದೆಲ್ಲಾ ನೀ ಕೇಳಿಸ್ಕಂತಿದಿಯಾ ಅಂತ್ಲೆ ಅನ್ಕಂಡಿನಪ್ಪಾ ದ್ಯಾವ್ರೆ ನೀನು ಅದಿಯಾ ಅಂಬೋ ನಂಬ್ಕೆ ಮ್ಯಾಲೆ ಏಟೊಂದು ನಿನ್ಗೆ ಗುಡಿ ಕಟ್ಟಿ ಕೂರಿಸವ್ರೆ ನೋಡು. ನಾನು ನಂಬ್ತೀನಪ್ಪಾ ನೀನು ಅದಿಯಾ ಸಾವಿರಾರು ವರ್ಸದಿಂದ ನಮ್ಮನ್ನ ಊರಾಚೆಗಿಟ್ಟು ಮುಟ್ಟಿಸ್ಕಣದಂಗೆ ದೂರ‍್ದಾಗಿಟ್ಟು. ನಿನ್ನ ಗುಡಿತಾವ ಹೋದ್ರೆ ಹೊಡ್ದು ಜೀವ ತೆಗೆದವರೆ ನಿನ್ನ ಪೂಜೆ ಮಾಡೋ ಮಂದಿ. ಒಂದಿನನಾರ ನಮ್ಮನ್ನ ಕಾಪಾಡೋಕೆ ನೀನು ಬಂದ್ಯಾ? ದ್ರೋಪದಿ ಅಂಬೋಳು ಮಾತ್ರವೆ ತಂಗಿನಾ? ನಮ್ಮ ಹಟ್ಟಿ ಹೆಣ್ಣು ಹೆಂಗಸರು ನಿನಗೇನು ಅಲ್ವಾ? ನಮ್ಮ ಬಾಯ್ನಾಗೆ ಹೇಲು ಉಚ್ಚೆ ಹೊಯ್ದರೂ ನೀನು ಬರ‍್ಲಿಲ್ಲ. ದುಷ್ಟರಿಗೆ ಸಿಕ್ಸೆ ಕೊಡ್ಸಿಲ್ಲ. ಗಾಂಧಿಮಾತ್ಮ ಒಬ್ಬ ನಮಗಾಗಿ ಬಡದಾಡ್ದ ಅಂತಾರೆ. ಅಂಬೇಡ್ಕರ್ ನಮ್ಮನ್ನ ಉಳಿಸೋಕಂತ್ಲೆ ಪುಸ್ತಕ ಬರೆದವನಂತೆ. ನಾವಂತೂ ಓದ್ಲಿಲ್ಲ. ಒದ್ದೋರು ಹಂಗೆ ನಡ್ಕೊಂಡಂತೆ ಕಾಣ್ತಿಲ್ಲ. ನಮ್ಮ ಹೈಕಳು ಇವರ ಮನೆ ಹೊಲ್ದಾಗೆ ಗೇಮೆ ಮಾಡ್ದೆ ಸಾಲೆಗೋದ್ರೆ ಇವ್ಕ ಅಗದಿ ಉರಿ. ನರಿ, ನಾಯಿ, ಬೆಕ್ಕು, ಕುರಿ, ಮ್ಯಾಕೆನೆಲ್ಲಾ ಮನೆಯಾಗೆ ಬಿಟ್ಕಂತಾರೆ, ಮುಟ್ಕಂತಾರೆ. ನಾವಂದ್ರೆ ತಾಚ್ಚಾರ. ಕಷ್ಟಪಟ್ಟು ಕೂಲಿನಾಲಿ ಮಾಡಿದ್ರೂ ನಾವು ಹೊಟ್ಟೆಗಿಲ್ದೆ ಗುಡ್ಲಾಗೆ ಸಾಯ್ತೀವಿ ನಿನಗೆ ಗೊತ್ತಾ? ನಮ್ಮ ಹಸಿವು ಬಡತನ ನನ್ನಾಣೆಗೂ ನಿನಗೆ ಅರ್ಥವಾಗಲ್ಲ ಬುಡು. ನೀನು ಭೂಮಿಗೆ ಬಂದಾಗೆಲ್ಲಾ ರಾಜ ಮಾರಾಜನ ಅವತಾರ ಎತ್ತಿ ಬಂದೋನು. ಹಸಿವು ಬಡತನ ಅನುಭೋಗಿಲ್ಲ. ಅದ್ಕೆನಾ ಏಟು ಹೇಳಿದ್ರೂ ನಿನ್ಗೆ ತಿಳೀವಲ್ದು. ನಮ್ಮ ಹೆಂಗಸರ‍್ನ ನಡು ಬೀದಿನಾಗೆ ಎಲ್ಲರ ಎದರ‍್ನಾಗೆ ಬೆತ್ತಲೆ ಮಾಡ್ತಾವರೆ. ಮಾನಾನೂ ಕಳ್ದವರೆ ಕಣ್ ಸಾಮಿ. ರಾಕ್ಸಸರು ಆಕಾಲ್ದಾಗೆ ಇದ್ದರೂ ಅಂತಂದು ಅವರ ಸಮ್ಮಾರಕ್ಕೆ ಅಂತ್ಲೇ ನಾನಾ ವೇಸ ಹಾಕ್ಕೊಂಡು ಬಂದೆ. ಈ ಕಾಲ್ದಾಗೇನು ಇಲ್ಲ ಅನ್ಕಂಡ್ಯಾ ಸಾಮಿ? ಈಗಂತೂ ನಮ್ಮನ್ನ ಆಳೋ ಸರಕಾರ, ರಾಜಕೀಯದೋರು, ಪೊಲೀಸಿನೋರು, ಸ್ವಾಮ್ಗುಳು ಯರ‍್ನೂ ನಂಬಂಗಿಲ್ಲ. ನಮ್ಮ ಪಾಲಿಗಂತೂ ಯಾರೂ ಇಲ್ಲ. ನಿನ್ಗೂ ತಾಚ್ಚಾರವೇ ನೀನು ಅಷ್ಟೆ ಬುಡು ಮೀನು, ಆಮೆ, ಹಂದಿ, ಸಿಮ್ಮ ಏನೆಲ್ಲಾ ಅವತಾರ ಎತ್ತಿ ಬಂದೆಲ್ಲ. ಒಂದಪನಾರ ದಲಿತನಾಗಿ ಹುಟ್ಟಿ ಬಂದಿದ್ರೆ ಪ್ರಾಣಿಗಿಂತ ಅತತ್ತವಾಗಿ, ಅತಂತ್ರವಾಗಿ ನಾವು ಬುದುಕ್ತಾ ಅದೀವಿ ಅಂಬೋದು ಅರ್ಥವಾಗೋದು. ಬರ್ತಿಯಾ ತಂದೆ? ನಮಗಾಗಿ ಬಂದಿಯಾ ಸ್ವಾಮಿ? ನೋಡು ಆಗ್ಲೆ ಜಾವದ ಕೋಳಿ ಕೂಗ್ತಾ ಐತೆ. ಮೂಡಲ್ನಾಗೆ ಕೆಂಪಾಗ್ತಾ ಐತೆ. ಕತ್ತಲೆ ಕಳೆದು ಬೆಳಗಾಗ್ತಾ ಐತೆ. ಆದರೆ ನಮ್ಗೆ? ನಮ್ಮಂಥೋರ‍್ಗೆ? ನಾಳೆ ಅಂಬೋದು ಐತಾ ಸಿವ್ನೆ?
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.