ADVERTISEMENT

ಹೋರಾಟಕ್ಕಿಳಿದ ಸ್ತ್ರೀ ಹೆಜ್ಜೆ ಹಿಂದಿಟ್ಟಿದ್ದಿಲ್ಲ: ಲೇಖಕಿ ಗೀತಾ ರಾಮಸ್ವಾಮಿ ಅಭಿಮ

ಲ್ಯಾಂಡ್‌, ಗನ್‌, ಕ್ಯಾಸ್ಟ್‌, ವಿಮೆನ್‌’ ಕೃತಿ ಲೇಖಕಿ ಗೀತಾ ರಾಮಸ್ವಾಮಿ ಅಭಿಮತ

ಸುಕೃತ ಎಸ್.
Published 3 ಡಿಸೆಂಬರ್ 2022, 19:32 IST
Last Updated 3 ಡಿಸೆಂಬರ್ 2022, 19:32 IST
ಗೀತಾ ರಾಮಸ್ವಾಮಿ
ಗೀತಾ ರಾಮಸ್ವಾಮಿ   

ಬೆಂಗಳೂರು: ‘ಪುರುಷರಿಗಿಂತ ಮಹಿಳೆ ಯರು ಹೆಚ್ಚು ಶಾಂತಿಪ್ರಿಯರು ಎಂಬುದರ ಕುರಿತು ನನಗೆ ಅಷ್ಟೊಂದು ನಂಬಿಕೆ ಇಲ್ಲ... ಪಕ್ಷದ ತತ್ವಗಳು ಮುಖ್ಯವಾಗ ಬೇಕು ವಿನಃ ಪಕ್ಷವಲ್ಲ... ಇಂಗ್ಲಿಷ್‌ ಭಾಷೆಯಲ್ಲಿ ಪುಸ್ತಕ ಪ್ರಕಟವಾದರೆ ಒಳ್ಳೆಯ ಹೋಟೆಲ್‌, ವಿದೇಶಗಳಲ್ಲೂ ಅಭಿಮಾನಿಗಳು ದೊರೆಯುತ್ತಾರೆ....’

ಹೀಗೆ ತಮ್ಮ ಪ್ರಖರ ಮಾತಿನ ಮೂಲಕ ವೇದಿಕೆ ಕಾರ್ಯಕ್ರಮದಿಂದದೂರ ಉಳಿದಿದ್ದವರನ್ನೂ ತಮ್ಮತ್ತ
ಸೆಳೆದುಕೊಂಡರು ಹೋರಾಟಗಾರ್ತಿಯೂ ಆಗಿರುವ ಲೇಖಕಿ ಗೀತಾ ರಾಮಸ್ವಾಮಿ. ಇದು ಸಾಧ್ಯವಾಗಿದ್ದು, ನಗರದಲ್ಲಿ ನಡೆಯುತ್ತಿರುವ ‘ಬೆಂಗಳೂರು ಸಾಹಿತ್ಯ ಉತ್ಸವ’ದಲ್ಲಿ. ಗೀತಾ ಅವರು ರಚಿಸಿದ ‘ಲ್ಯಾಂಡ್, ಗನ್‌, ಕ್ಯಾಸ್ಟ್‌, ವಿಮೆನ್‌’ ಪುಸ್ತಕದ ಕುರಿತ ಗೋಷ್ಠಿ ಅದಾಗಿತ್ತು.

ತಮ್ಮ ಮಹಿಳಾ ಹೋರಾಟದ ದಿನಗಳನ್ನು ನೆನಪಿಸಿಕೊಂಡ ಗೀತಾ, ‘ವ್ಯವಸ್ಥೆಯ ವಿರುದ್ಧ ಹೋರಾಟ ಎಂದಾದಮೇಲೆ, ಪೊಲೀಸರು, ಗುಂಡು,ಹೊಡೆತ ಇವೆಲ್ಲವೂ ಸಾಮಾನ್ಯ. ಇಂಥ ಸಂದರ್ಭಗಳಲ್ಲಿ ಗ್ರಾಮೀಣ ಪ್ರದೇಶಗಳಲ್ಲಿ ಪುರುಷರು ಮಹಿಳೆಯರನ್ನು ಮುಂದೆ ಬಿಡುತ್ತಾರೆ. ಪೊಲೀಸರು ಆಗ ಹೊಡೆಯುವುದಿಲ್ಲ, ಬಂಧಿಸುವುದಿಲ್ಲ ಎನ್ನುವ ಕಾರಣಕ್ಕಾಗಿ. ಹೀಗೆ ಹೋರಾಟಗಳಿಗೆ ಧುಮುಕುವ ಮಹಿಳೆಯರು ಮತ್ತೆ ಹಿಂದೆ ಸರಿದದ್ದೇ ಇಲ್ಲ’ ಎಂದರು.

ADVERTISEMENT

‘ಸ್ನೇಹಿತರ ಗುಂಪಿನಲ್ಲಿ ನಾನೇ ಹೆಚ್ಚು ಜೋರು ಇದ್ದವಳು. ಹೋರಾಟದ ವಿಷಯದಲ್ಲಿ ಮಹಿಳೆಯರು ಜೋರಾಗಿಯೇ ಇರುತ್ತಾರೆ. ಖಾರದ ಪುಡಿಯನ್ನು ತಮ್ಮೊಂದಿಗೆ ಸದಾ ಇಟ್ಟುಕೊಳ್ಳುತ್ತಿದ್ದ ಮಹಿಳೆಯರು ಯಾವ ರೀತಿಯ ಸಂದರ್ಭವನ್ನೂ ಧೈರ್ಯದಿಂದ ಎದುರಿಸುತ್ತಿದ್ದರು. ಇದು ನಮ್ಮ ಹೋರಾಟಕ್ಕೆ ಬಹಳ ಸಹಕಾರಿಯಾಗಿತ್ತು. ಯಾರಿಗಾದರೂ ಹೊಡೆಯಬೇಕು ಎಂದಾದರೆ, ಹೊಡೆದ ಮೇಲಿನ ಪರಿಣಾಮವನ್ನು ಲೆಕ್ಕಿಸದೇ ಮಹಿಳೆಯರು ಹೊಡೆದೇಬಿಡುತ್ತಾರೆ’ ಎಂದರು.

‘ಎಡ ಚಿಂತನೆಯ ಹೋರಾಟಗಳಲ್ಲಿ ಭಾಗವಹಿಸುವುದನ್ನು ನಾನು 1976ರ ಹೊತ್ತಿಗೆ ಬಿಟ್ಟುಬಿಟ್ಟೆ. ಕಮ್ಯುನಿಸ್ಟ್‌ ಪಕ್ಷದೊಂದಿಗಿನ ಸಂಬಂಧವನ್ನೂ ಕಡಿದುಕೊಂಡೆ. ಹೋರಾಟ ಕಟ್ಟುವ ವಿಚಾರದಲ್ಲಿ ಹೋರಾಟ ಮಾತ್ರ ಮುಖ್ಯವಾಗಬೇಕು. ಪಕ್ಷದ ತತ್ವಗಳು ಮುಖ್ಯವಾಗಬೇಕು; ಪಕ್ಷವಲ್ಲ’ ಎಂದರು.

‘ಹೋರಾಟಗಾರರು, ಇಂಥ ಚಿಂತನೆಗಳನ್ನು ಇಟ್ಟುಕೊಂಡವರು, ಮನೆಯ ಒಳಗೂ ಹೊರಗೂ ಒಂದೇ ರೀತಿ ಇರಬೇಕು. ಮನೆಯಲ್ಲಿ ಹೆಂಡತಿಯ ಮುಂದೆ ಯಜಮಾನಿಕೆ ತೋರಿಸುವುದು. ಅದನ್ನು ಸಂಭ್ರಮಿಸುವುದು. ಆದರೆ, ಹೊರಗಡೆ ಸಮಾನತೆಯ ಭಾಷಣ. ಇಂಥ ವೈರುಧ್ಯದಿಂದ ಬೇಸತ್ತು ನಾನು ಪಕ್ಷ ಬಿಟ್ಟು ಹೊರಬಂದೆ’ ಎಂದರು.

ಸಿಂಥಿಯಾ ಸ್ಟೀಫನ್‌ ಅವರು ಕಾರ್ಯಕ್ರಮ ನಿರ್ವಹಿಸಿದರು.

‘ಮತೀಯ ಪಂಜರ ಪ್ರವೇಶಿಸುತ್ತಿರುವ ನ್ಯಾಯಾಂಗ’

‘ಪ್ರಗತಿಪರ, ಜಾತ್ಯತೀತವಾದ ನ್ಯಾಯಾಂಗ ವ್ಯವಸ್ಥೆ ಇರುವುದು ಭಾರತದಲ್ಲಿ ಮಾತ್ರ. ಆದರೆ, ಇಂಥ ನ್ಯಾಯಾಂಗ ವ್ಯವಸ್ಥೆ ಮತೀಯ ಪಂಜರವನ್ನು ಪ್ರವೇಶಿಸುತ್ತಿದೆ ಎಂಬ ಆತಂಕ ನನ್ನನ್ನು ಸೇರಿ ಎಲ್ಲರನ್ನೂ ಕಾಡುತ್ತಿದ್ದೆ. ಆದ್ದರಿಂದ ನಮ್ಮ ಭವ್ಯ ನ್ಯಾಯಾಂಗ ವ್ಯವಸ್ಥೆಯನ್ನು ದೇಶದ ಜನರಿಗೆ ಪರಿಚಯಿಸುವುದರ ಮೂಲಕ ನ್ಯಾಯಾಂಗವನ್ನು ಪಂಜರದಿಂದ ಹೊರಗೆ ತರುವ ಪ್ರಯತ್ನವಾಗಬೇಕು. ಈ ಕುರಿತು ನನ್ನ ಪುಸ್ತಕ ಸದ್ಯದಲ್ಲೇ ಹೊರಬರಲಿದೆ’ ಎಂದು ಕಾಂಗ್ರೆಸ್‌ ನಾಯಕ ವೀರಪ್ಪ ಮೊಯಿಲಿ ಹೇಳಿದರು.

‘ನನ್ನ ಬೊಗಸೆಯ ಆಕಾಶ’ ಕಾಂಗ್ರೆಸ್‌ ನಾಯಕ ವೀರಪ್ಪ ಮೊಯಿಲಿ ಅವರ ಆತ್ಮಕಥನ. ಈ ಪುಸ್ತಕಕ್ಕೆ ಸಂಬಂಧಿಸಿ ಆಯೋಜಿಸಲಾಗಿದ್ದ ಗೋಷ್ಠಿಯಲ್ಲಿ ಮಾತನಾಡಿದರು. ಪತ್ರಕರ್ತ ಬಿ.ಎಂ. ಹನೀಫ್‌ ಗೋಷ್ಠಿಯನ್ನು ನಡೆಸಿಕೊಟ್ಟರು.

‘ನನ್ನ ಮತ್ತು ದೇವರಾಜ ಅರಸು ಅವರ ಮಧ್ಯೆ ಕೊನೆ ಕೊನೆಗೆ ಕೆಲವು ತಪ್ಪುಗ್ರಹಿಕೆಗಳು ಉಂಟಾದವು. ಅವರು ಜ್ಯೋತಿಷಿಗಳ ಬಲೆಗೆ ಬಿದ್ದರು. 1978ರಲ್ಲಿ ನನ್ನನ್ನು ಮಂತ್ರಿ ಮಾಡಲಿಲ್ಲ. ಯಾಕೆಂದರೆ, ಅರಸು ಮತ್ತು ಮೊಯಿಲಿ ಜಾತಕ ಕೂಡಿ ಬರುವುದಿಲ್ಲ ಎಂದು ಅರಸು ಅವರಿಗೆ ಯಾರೋ ಹೇಳಿದ್ದರಂತೆ. ಅದಕ್ಕೆ ನನ್ನನ್ನು ಕೈಬಿಟ್ಟರು’ ಎಂದರು.

ಕೊಟ್ಟದ್ದುವೆಂಟಿಲೇಟರ್‌ಗಳ,ಬೈಪಾಪ್‌ ಯಂತ್ರಗಳು

‘ತಾಲ್ಲೂಕು ಮಟ್ಟದ ಆಸ್ಪತ್ರೆಗಳಿಗೂ ಪಿಎಂ ಕೇರ್ಸ್‌ನಿಂದ ವೆಂಟಿಲೇಟರ್‌ಗಳನ್ನು ಖರೀದಿ ಮಾಡಲಾಯಿತು. ಆದರೆ, ಇವು ಬೈಪಾಪ್‌ ಯಂತ್ರಗಳಾಗಿದ್ದವು’ ಎಂದು ಲೇಖಕ ರಾಜಾರಾಂ ತಲ್ಲೂರು ಅವರು ಹೇಳಿದರು.

ತಮ್ಮ ಪುಸ್ತಕ ‘ಕೋವಿಡ್‌ ಕರಿಡಬ್ಬಿ’ ಕುರಿತ ಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಒಂದು ವೆಂಟಿಲೇಟರ್‌ಗೆ ₹40 ಲಕ್ಷದಿಂದ ₹60 ಲಕ್ಷವಾಗುತ್ತದೆ ಎಂದು ಕೋವಿಡ್‌ಗೂ ಮೊದಲು ನಮಗೆಲ್ಲಾ ತಿಳಿದಿತ್ತು. ಆದರೆ, ಕೋವಿಡ್‌ ಕಾಲದಲ್ಲಿ ₹4 ಲಕ್ಷಕ್ಕೆ ವೆಂಟಿಲೇಟರ್‌ಗಳನ್ನು ಕೊಡಲಾಯಿತು. ಇವು, ಕೋವಿಡ್‌ ಚಿಕಿತ್ಸೆಗೆ ಮಾತ್ರ ಬರುವಂಥವಾಗಿದ್ದವು. ಇವೆಲ್ಲವೂ ಬೈಪಾಪ್‌ ಯಂತ್ರಗಳಾಗಿದ್ದವು. ಹಾಗಾದರೆ ಅಷ್ಟೊಂದು ದೊಡ್ಡ ಸಂಖ್ಯೆಯ ವೆಂಟಿಲೇಟರ್‌ಗಳು ಈಗ ಯಾವ ಕೆಲಸ ಮಾಡುತ್ತಿವೆ’ ಎಂದು ಪ್ರಶ್ನಿಸಿದರು.

‘ಆಮ್ಲಜನಕ ಉತ್ಪಾದನಾ ಘಟಕಗಳನ್ನು ಸ್ಥಾಪಿಸಲಾಯಿತು. ತಾಲ್ಲೂಕು ಆಸ್ಪತ್ರೆಯೊಂದಕ್ಕೆ ತಿಂಗಳಿಗೋ, ವಾರಕ್ಕೋ ಬೇಕಾಗುವ ಆಮ್ಲಜನಕವನ್ನು ಈ ಘಟಕಗಳು ಒಂದು ದಿನದಲ್ಲಿ ಉತ್ಪಾದಿಸಿದ್ದವು. ಈಗ ಈ ಘಟಕಗಳಲ್ಲಿ ಉತ್ಪಾದಿಸಲಾಗುತ್ತಿರುವ ಹೆಚ್ಚುವರಿ ಆಮ್ಲಜನಕವನ್ನು ಯಾವುದಕ್ಕೆ ಉಪಯೋಗ ಮಾಡಿ
ಕೊಳ್ಳಲಾಗುತ್ತಿದೆ. ವ್ಯವಸ್ಥೆಯನ್ನು ಅವ್ಯವಸ್ಥೆ ಮಾಡುವ ಯತ್ನವಿದು’ ಎಂದರು.

‘ಹಿಂದೆ ಸಾಂಕ್ರಾಮಿಕ ರೋಗ ಕಾಣಿಸಿಕೊಂಡಾಗ ರೋಗ ನಿಯಂತ್ರಣ ರಾಷ್ಟ್ರೀಯ ಸಂಸ್ಥೆಗೆ ರೋಗ ನಿಯಂತ್ರಣದ ಜಬಾಬ್ದಾರಿಯನ್ನು ಸರ್ಕಾರ ನೀಡುತ್ತಿತ್ತು. ಆದರೆ, ಇದೇ ಮೊದಲ ಬಾರಿಗೆ ಸಂಶೋಧನಾ ಸಂಸ್ಥೆಯಾದ ಐಸಿಎಂಆರ್‌ ಜವಾಬ್ದಾರಿ ನೀಡಲಾಯಿತು. ಈ ಸಂಸ್ಥೆಯು ಇಡೀ ಸಾಂಕ್ರಾಮಿಕವನ್ನು ಪ್ರಯೋಗದ ರೀತಿಯಲ್ಲಿ ನಿರ್ವಹಿಸಿತು’ ಎಂದರು. ಟೀನಾ ಶಶಿಕಾಂತ್ ಅವರು ಗೋಷ್ಠಿ ನಿರ್ವಹಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.