ನವದೆಹಲಿ: ‘ಕಾರಿನ ಸನ್‌ರೂಫ್, ಸೌಂಡ್ ಸಿಸ್ಟಂ ಹಾಗೂ ಹಿಂಬದಿಯ ಕ್ಯಾಮೆರಾದಲ್ಲಿನ ದೋಷವನ್ನು ದುರಸ್ತಿಗೊಳಿಸುವ ವಿಷಯದಲ್ಲಿ ನಾನು ಮಾನಸಿಕ ಹಿಂಸೆ ಅನುಭವಿಸಿದ್ದು, ಇದಕ್ಕೆ ಪರಿಹಾರ ರೂಪದಲ್ಲಿ ತನಗೆ ₹50 ಕೋಟಿ ಪರಿಹಾರ ನೀಡಬೇಕು‘ ಎಂದು ಬಾಲಿವುಡ್ ನಟಿ ರಿಮಿ ಸೆನ್ ಅವರು ಜಾಗ್ವಾರ್ ಲ್ಯಾಂಡ್‌ರೋವರ್ ಕಂಪನಿಗೆ ನೋಟಿಸ್ ನೀಡಿದ್ದಾರೆ.
2020ರಲ್ಲಿ ಮುಂಬೈನಲ್ಲಿರುವ ಜಾಗ್ವಾರ್ ಲ್ಯಾಂಡ್‌ರೋವರ್‌ನ ಅಧಿಕೃತ ಶೋರೂಮ್‌ನಿಂದ ನಟಿ ರಿಮಿ ಅವರು ₹92 ಲಕ್ಷ ನೀಡಿ ಲ್ಯಾಂಡ್ ರೋವರ್ ಕಾರು ಖರೀದಿಸಿದ್ದರು. ಕಾರಿನ ವಾರೆಂಟ್ 2023ರ ಜನವರಿವರೆಗೆ ಮಾತ್ರ ಇತ್ತು. ಕೋವಿಡ್ ಹಾಗೂ ಲಾಕ್‌ಡೌನ್‌ನಿಂದಾಗಿ ಕಾರು ಅಷ್ಟಾಗಿ ಬಳಕೆಯಾಗಿರಲಿಲ್ಲ. ನಂತರ ಬಳಸಲಾರಂಭಿಸಿದರೂ, ಕಾರಿನಲ್ಲಿ ಕೆಲವೊಂದು ಸಮಸ್ಯೆಗಳು ಎದುರಾದವು. ಈ ಸಂಬಂಧ 2022ರ ಆ. 25ರಂದು ಅವರು ದೂರು ನೀಡಿದ್ದೆ ಎಂದು ರಿಮಿ ಹೇಳಿದ್ದಾರೆ.
ಹಿಂಬದಿಯ ಕ್ಯಾಮೆರಾ ಸರಿಯಾಗಿ ಕೆಲಸ ಮಾಡದ ಕಾರಣ, ಕಾರು ಪಿಲ್ಲರ್‌ಗೆ ಡಿಕ್ಕಿ ಹೊಡೆದಿತ್ತು. ಇವೆಲ್ಲವನ್ನು ವಿತರಕರ ಗಮನಕ್ಕೆ ತಂದರೂ, ಅವರು ವಿಷಯವನ್ನು ಗಂಭೀರವಾಗಿ ಪರಿಗಣಿಸಲಿಲ್ಲ. ಜತೆಗೆ, ಈ ಎಲ್ಲಾ ಸಮಸ್ಯೆಗಳಿಗೂ ಸಾಕ್ಷ್ಯ ಒದಗಿಸಿ ಎಂದಿದ್ದರು. ನಿರಂತರವಾಗಿ ದೂರು ನೀಡಿದ ನಂತರ, ದುರಸ್ತಿ ಕಾರ್ಯ ನಡೆಸಿದರೂ, ಒಂದನ್ನು ಸರಿಪಡಿಸುವಾಗ ಮತ್ತೊಂದು ಸಮಸ್ಯೆ ಹುಟ್ಟುಕೊಂಡಿತು ಎಂದು ನಟಿ ಹೇಳಿದ್ದಾರೆ ಎಂದು ಎನ್‌ಡಿಟಿವಿ ವರದಿ ಮಾಡಿದೆ.
ಈ ಎಲ್ಲದರ ಕುರಿತು ತಮ್ಮ ವಕೀಲರ ಮೂಲಕ ನೋಟಿಸ್ ಜಾರಿಗೊಳಿಸಿರುವ ನಟಿ ರಿಮಿ ಸೇನ್, ‘ತನಗೆ ದೋಷಪೂರಿತ ಕಾರನ್ನು ನೀಡಲಾಗಿದೆ. ಜತೆಗೆ ನಿರ್ವಹಣೆಯನ್ನೂ ಸರಿಯಾಗಿ ಮಾಡಿಲ್ಲ. ಹತ್ತಕ್ಕೂ ಹೆಚ್ಚು ಬಾರಿ ದುರಸ್ತಿಗೆ ಕಳುಹಿಸಿದರೂ ಪರಿಹಾರ ಸಿಕ್ಕಿಲ್ಲ. ಇದು ಮಾನಸಿಕ ಕಿರುಕುಳವಾಗಿದೆ. ಇದಕ್ಕಾಗಿ ₹50 ಕೋಟಿ ಪರಿಹಾರವನ್ನು ನೀಡಬೇಕು. ಕಾನೂನು ಸಂಘರ್ಷಕ್ಕೆ ತಗಲುವ ವೆಚ್ಚವಾಗಿ ₹10 ಲಕ್ಷ ನೀಡಬೇಕು. ತನಗೆ ಹೊಸ ಕಾರನ್ನು ನೀಡಬೇಕು ಎಂದು ತಮ್ಮ ನೋಟಿಸ್‌ನಲ್ಲಿ ಬೇಡಿಕೆ ಇಟ್ಟಿದ್ದಾರೆ.
ಪಶ್ಚಿಮ ಬಂಗಾಳ ಮೂಲದ ನಟಿ ರಿಮಿ ಸೇನ್ ಹಿಂದಿ, ತೆಲುಗು ಸೇರಿದಂತೆ ವಿವಿಧ ಭಾಷೆಗಳ ಚಲನಚಿತ್ರಗಳಲ್ಲಿ ನಟಿಸಿದ್ದಾರೆ. ಹಂಗಾಮಾ, ಪಿರ್ ಹೇರಾಫೇರಿ, ಧೂಮ್ ಸೇರಿದಂತೆ ಹಲವು ಚಿತ್ರಗಳಲ್ಲಿ ನಟಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.