ಬೆಂಗಳೂರು: ಸರ್ಕಾರ ಮತ್ತು ಖಾಸಗಿ ವಲಯದ ಪಾಲುದಾರಿಕೆಯಲ್ಲಿ (ಪಿಪಿಪಿ) ವಿದ್ಯುತ್ ಚಾಲಿತ ವಾಹನಗಳ ಮೂಲಸೌಕರ್ಯ ವ್ಯವಸ್ಥೆ ಅಭಿವೃದ್ಧಿಪಡಿಸುವ ಅಗತ್ಯ ಇದೆ ಎನ್ನುವ ಅಭಿಪ್ರಾಯ ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶದ ವಿಚಾರ ಗೋಷ್ಠಿಯೊಂದರಲ್ಲಿ ವ್ಯಕ್ತವಾಯಿತು.
‘ದೇಶದಲ್ಲಿ ವಿದ್ಯುತ್ ಚಾಲಿತ ವಾಹನಗಳ ತಯಾರಿಕೆ ಮತ್ತು ಬಳಕೆ ಹೆಚ್ಚುತ್ತಿರುವ ಈ ಹೊತ್ತಿನಲ್ಲಿ ಮೂರು ಪ್ರಮುಖ ಅಂಶಗಳು ಮುಖ್ಯವಾಗುತ್ತವೆ. ಮೊದಲನೆಯದಾಗಿ, ಆಡಳಿತದಲ್ಲಿರುವವರಿಂದ ಪೂರಕ ವಾತಾವರಣದ ಬೇಕು. ಎರಡನೆಯದು, ಮೂಲಸೌಕರ್ಯ ವ್ಯವಸ್ಥೆ ಪರಿಪೂರ್ಣವಾಗಿರಬೇಕು. ಮೂರನೆಯದು, ಉದ್ಯಮವು ದೇಶಿ ಮಾರುಕಟ್ಟೆಯನ್ನಷ್ಟೇ ಅಲ್ಲದೆ, ಜಾಗತಿಕ ಮಾರುಕಟ್ಟೆಯನ್ನು ತಲುಪುವ ಕಡೆಗೂ ಗಮನ ಹರಿಸಬೇಕು’ ಎಂದು ಬೋಸ್ಟನ್ ಕನ್ಸಲ್ಟಿಂಗ್ ಗ್ರೂಪ್‌ನ ಹಿರಿಯ ಪಾಲುದಾರ ಥಾಮಸ್ ಡೌನರ್ ಸಲಹೆ ನೀಡಿದರು.
ಬೆಂಗಳೂರು ಅರಮನೆಯಲ್ಲಿ ಗುರುವಾರ ನಡೆದ ಜಾಗತಿಕ ಹೂಡಿಕೆದಾರರ ಸಮಾವೇಶದ ‘ಡ್ರೈವಿಂಗ್ ಇಂಡಿಯಾ ಇಂಟು ದಿ ಫ್ಯೂಚರ್: ರೆವಲ್ಯೂಷನ್ ಇನ್ ಇಂಡಿಯಾಸ್ ಮೊಬಿಲಿಟಿ’ ವಿಚಾರಗೋಷ್ಠಿಯ ನಿರೂಪಕರಾಗಿ ಅವರು ಭಾಗವಹಿಸಿದ್ದರು.
‘ವಿದ್ಯುತ್ ಚಾಲಿತ ದ್ವಿಚ್ರಕ, ತ್ರಿಚಕ್ರ ವಾಹನಗಳಲ್ಲದೆ, ಬಸ್‌ಗಳು ಸಹ ಉತ್ತಮ ಮಾರಾಟ ಕಾಣಲಿವೆ. ಸರ್ಕಾರದ ಮಟ್ಟದಲ್ಲಿ ಅಲ್ಲದೆ, ಖಾಸಗಿ ಕಂಪನಿಗಳು ಸಹ ಎಲೆಕ್ಟ್ರಿಕ್ ಬಸ್ ಖರೀದಿಸುತ್ತಿವೆ. ಜನರು ಇ.ವಿ. ಬಳಕೆಗೆ ಹೆಚ್ಚು ಗಮನ ಹರಿಸಲು ಆರಂಭಿಸಿಯಾಗಿದೆ. ಸುರಕ್ಷತೆ ಮತ್ತು ವೆಚ್ಚ ತಗ್ಗಿಸುವ ಕಡೆಗಷ್ಟೇ ನಾವು ಗಮನ ನೀಡಬೇಕಿದೆ’ ಎಂದು ಅಶೋಕ್ ಲೇಲ್ಯಾಂಡ್‌ನ ಅಂಗಸಂಸ್ಥೆ ಸ್ವಿಚ್ ಮೊಬಿಲಿಟಿಯ ಚೀಫ್ ರೆವಿನ್ಯು ಆಫಿಸರ್ ಸಚಿನ್ ನಿಜಾವನ್ ಅಭಿಪ್ರಾಯ ವ್ಯಕ್ತಪಡಿಸಿದರು.
ಸಾರಿಗೆ ವಲಯದಿಂದಲೇ ಹೆಚ್ಚಿನ ಮಾಲಿನ್ಯ ಉಂಟಾಗುತ್ತಿದೆ. ಹೀಗಾಗಿ ಸಾರಿಗೆ ವಲಯದಲ್ಲಿ ಶುದ್ಧ ಇಂಧನ ಬಳಕೆಗೆ ಹೆಚ್ಚಿನ ಗಮನ ನೀಡಬೇಕಿದೆ. ಈ ನಿಟ್ಟಿನಲ್ಲಿ ವಿದ್ಯುತ್ ಚಾಲಿತ ವಾಹನಗಳ ಬಳಕೆ ಹೆಚ್ಚಾಗಬೇಕು. ಎಥೆನಾಲ್ ಮಿಶ್ರಣ ಮಾಡಿರುವ ಪೆಟ್ರೋಲ್ ಬಳಕೆ ಹಾಗೂ ನವೀಕರಿಸಬಹುದಾದ ಇಂಧನ ಉತ್ಪಾದನೆ ಹೆಚ್ಚಳದಂತಹ ಕ್ರಮಗಳು ಅಗತ್ಯ ಎಂದರು.
‘ಸರ್ಕಾರಿ, ಖಾಸಗಿ ಇಲ್ಲವೇ ವೈಯಕ್ತಿಕವಾಗಿ ಚಾರ್ಜಿಂಗ್ ಮೂಲಸೌಕರ್ಯ ಅಳವಡಿಕೆ ಮಾಡಲು ಆಗುವಂತೆ ನೀತಿಯನ್ನು ರೂಪಿಸಬೇಕಿದೆ. ಇದರಿಂದ ಮೆಟ್ರೊ ನಗರಗಳಲ್ಲಿ ಮೂಲಸೌಕರ್ಯದ ಸಮಸ್ಯೆ ನಿವಾರಿಸಬಹುದು. ಎರಡು ಮತ್ತು ಮೂರನೇ ಶ್ರೇಣಿಯ ನಗರಗಳಲ್ಲಿ ಗುಣಮಟ್ಟದ ವಿದ್ಯುತ್ ಕೊರತೆ ಸ್ವಲ್ಪ ಮಟ್ಟಿಗೆ ಸವಾಲಾಗಿದೆ. ಗ್ರಾಮೀಣ ಭಾಗದಲ್ಲಿ ಜಾಗದ ಸಮಸ್ಯೆ ಇಲ್ಲ. ಆದರೆ, ವಿದ್ಯುತ್ ಅಭಾವ ಇದೆ. ಈ ಭಾಗದಲ್ಲಿ ದ್ವಿಚಕ್ರ, ತ್ರಿಚಕ್ರ ವಾಹನ ಚಾರ್ಜ್ ಮಾಡಲು ಸೌರ ವಿದ್ಯುತ್ ಮೂಲಕ ಚಾರ್ಜಿಂಗ್ ಸೌಲಭ್ಯ ಕಲ್ಪಿಸಬಹುದು’ ಎಂದು ಸನ್ ಮೊಬಿಲಿಟಿ ಸಹ ಸ್ಥಾಪಕ ಚೇತನ್ ಮೈನಿ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.