ಮುಂಬೈ: ಆಟೋಕಾರ್ ಇಂಡಿಯಾ ಮತ್ತು ಮರ್ಸಿಡಿಸ್ ಬೆಂಝ್ ಇಂಡಿಯಾ ಜಂಟಿಯಾಗಿ ಇವಿ ಕಾರುಗಳ ಕ್ಷೇತ್ರದಲ್ಲೊಂದು ಗಿನ್ನೆಸ್ ದಾಖಲೆ ಬರೆದಿದೆ.
ಮರ್ಸಿಡಿಸ್ ಇಕ್ಯೂಎಸ್ 580 ಕಾರನ್ನು ಒಂದು ಬಾರಿ ಚಾರ್ಜ್ ಮಾಡಿ ಬೆಂಗಳೂರಿನಿಂದ ನವೀ ಮುಂಬೈ ನಡುವೆ 949.0 ಕಿ.ಮೀ ದೂರ ಕ್ರಮಿಸುವ ಮೂಲಕ ವಿನೂತನ ದಾಖಲೆ ನಿರ್ಮಿಸಲಾಗಿದೆ. ಈ ಮೂಲಕ ಈ ಹಿಂದೆ ಯುನೈಟೆಡ್ ಕಿಂಗ್‌ಡಮ್‌ನಲ್ಲಿ ಫೋರ್ಡ್ ಮಸ್ಟಂಗ್ ಮ್ಯಾಚ್ ಇ ನಿರ್ಮಿಸಿದ್ದ 916.74 ಕಿಲೋಮೀಟರ್‌ಗಳ ದಾಖಲೆಯನ್ನು ಆಟೊಕಾರ್ ಇಂಡಿಯಾ ಮುರಿದಿದೆ.
ಗಿನ್ನೆಸ್ ದಾಖಲೆ ಸೃಷ್ಟಿಸಿರುವುದು ಆಟೋಕಾರ್ ಪಾಲಿಗೆ ಸಾಧನೆಯಾಗಿದ್ದರೂ, ಚಾಲನೆ ಅವಧಿಯಲ್ಲಿ ಎದುರಿಸಿರುವ ಅಡೆತಡೆಗಳು ಮುಖ್ಯವಾದವು ಎಂದು ಕಂಪನಿ ಹೇಳಿಕೊಂಡಿದೆ. ಬೆಂಗಳೂರಿನಿಂದ ನವೀ ಮುಂಬೈಗೆ ಹೋಗುವ ಮಾರ್ಗದುದ್ದಕ್ಕೂ ಮಳೆ ತೀವ್ರವಾಗಿತ್ತು. ಕಾರು ಸಾಗಿದ ಅನೇಕ ಭಾಗಗಳಲ್ಲಿ ಧಾರಾಕಾರ ಮಳೆಯೂ ಸುರಿದಿತ್ತು. ದಾಖಲೆ ಮುರಿಯುವ ಒತ್ತಡದ ನಡುವೆ ಪ್ರಯಾಣದ ಪರಿಸ್ಥಿತಿಗಳು ಕ್ಲಿಷ್ಟಕರವಾಗಿದ್ದವು. ಅನೇಕ ಕಡೆ ರಸ್ತೆ ಬದಲಾವಣೆ ಅನಿವಾರ್ಯವಾಗಿತ್ತು. ಅಲ್ಲಲ್ಲಿ ನಡೆಯತ್ತಿದ್ದ ರಸ್ತೆ ಕಾಮಗಾರಿಗಳು ಮತ್ತು ದುರಸ್ತಿ ಕೆಲಸಗಳಿಂದಾಗಿ ಹೆಚ್ಚಿನ ತಿರುವುಗಳ ಮೂಲಕ ಕಾರು ಸಂಚರಿಸಬೇಕಾಯಿತು. ಡ್ರೈವ್‌ನ ಕೊನೇ ಹಂತದಲ್ಲಿ ಆಘಾತಕಾರಿ ಎಂಬಂತೆ ಕಾರಿನ ಟಯರ್ ಕೂಡ ಪಂಚರ್ ಆಯಿತು. ಈ ಸಮಸ್ಯೆಯನ್ನು ತ್ವರಿತವಾಗಿ ಪರಿಹರಿಸಿ ಪ್ರಯಾಣ ಮುಂದುವರಿಸಿ ನಿರೀಕ್ಷಿತ ಗುರಿ ಮುಟ್ಟಲಾಯಿತು. ಇವೆಲ್ಲವೂ ಚಾಲನಾ ಸವಾಲನ್ನು ಮತ್ತಷ್ಟು ಹೆಚ್ಚಿಸಿತ್ತು ಎಂದು ಕಂಪನಿ ಹೇಳಿದೆ.
ಗಿನ್ನೆಸ್ ದಾಖಲೆಗೆ ಮೊದಲು ಕಾರಿನ ಆಯ್ಕೆ ನಿರ್ಣಾಯಕವಾಗಿತ್ತು. ಹೀಗಾಗಿ ಮರ್ಸಿಡಿಸ್ ಇಕ್ಯೂಎಸ್ ಸೂಕ್ತ ಆಯ್ಕೆಯಾಗಿತ್ತು. ಏಕೆಂದರೆ 107.8 ಕಿಲೋವ್ಯಾಟ್ ಬ್ಯಾಟರಿ ಪ್ಯಾಕ್ ಹೊಂದಿರುವ ಇಕ್ಯೂಎಸ್ 580, ಮಾರುಕಟ್ಟೆಯಲ್ಲಿ ಅತಿ ಹೆಚ್ಚು ಅಧಿಕೃತ ರೇಂಜ್ ನೀಡುವ ಕಾರಾಗಿದೆ.
ಪ್ರಯಾಣದ ರೇಂಜ್ ಹೆಚ್ಚಿಸುವ ಉದ್ದೇಶದಿಂದ ಹೆದ್ದಾರಿಯಲ್ಲಿ ಸರಾಸರಿ 50ರಿಂದ 60 ಕಿ.ಮೀ ವೇಗ ಕಾಯ್ದುಕೊಳ್ಳಲಾಯಿತು. ಅದೇ ರೀತಿ ಬ್ಯಾಟರಿ ಪ್ಯಾಕ್ ನೆರವಿನಿಂದ ಕೊನೆಯ ಕಿಲೋಮೀಟರ್ ತನಕ ಪ್ರಯಾಣಿಸಲು ಕಾರಿನಲ್ಲಿರುವ ಎಲ್ಲಾ ಮೂರು ಹಂತದ ರೀಜೆನ್ ಅನ್ನು ಬಳಸಲಾಯಿತು. ಈ ಎಲ್ಲ ಯೋಜನೆಗಳು ಗಿನ್ನೆಸ್ ವಿಶ್ವ ದಾಖಲೆಯ ಪ್ರಶಸ್ತಿ ಪಡೆಯಲು ನೆರವಾಯಿತು.
ಗಿನ್ನೆಸ್ ದಾಖಲೆಯ ಹೆಗ್ಗಳಿಕೆಯೊಂದಿಗೆ ನಮ್ಮ 25ನೇ ವಾರ್ಷಿಕೋತ್ಸವವನ್ನು ಆಚರಿಸಲು ನಮಗೆ ಸಂತೋಷವಾಗುತ್ತಿದೆ. ಪ್ರತಿಕೂಲ ಪರಿಸ್ಥಿತಿಗಳಲ್ಲೂ ಒಂದು ಬಾರಿ ಚಾರ್ಜ್ ಮಾಡಿಕೊಂಡು 949.0 ಕಿ.ಮೀ ರೇಂಜ್ ಪಡೆದು ಸೃಷ್ಟಿಸಿದ ದಾಖಲೆಯು ನಾವು ಕೈಗೊಂಡ ಅತ್ಯಂತ ಸವಾಲಿನ ಚಾಲನೆಯಾಗಿದೆ. ಶಿಸ್ತುಬದ್ಧ ಚಾಲನೆಯಿಂದಾಗಿ ಒಂದು ಬಾರಿಯೂ ಪ್ಲಗ್ ಇನ್ ಮಾಡದೆ ಈ ಅದ್ಭುತ ದೂರವನ್ನು ಎಲ್ಲಾ ಅಡೆತಡೆಗಳನ್ನು ಮೀರಿ ಸಾಧಿಸಲು ನಮಗೆ ಸಹಾಯ ಮಾಡಿತು ಎಂದು ಆಟೋಕಾರ್ ಇಂಡಿಯಾದ ಸಂಪಾದಕ ಹಾರ್ಮಾಜ್ಡ್ ಸೊರಾಬ್ಜಿ ಹೇಳಿದರು.
ಬ್ಯಾಟರಿ ಚಾಲಿತ ವಾಹನಗಳನ್ನು ಆಯ್ಕೆಮಾಡಿಕೊಳ್ಳುವ ಮೂಲಕ ಪರಿಸರಕ್ಕೆ ಕೊಡುಗೆ ನೀಡಲು ಮುಂದಾಗಿರುವ ಮತ್ತು ಮರ್ಸಿಡಿಸ್ ಬೆಂಝ್ ಮೇಲಿನ ನಂಬಿಕೆಯಿಂದ ಬ್ಯಾಟರಿ ಚಾಲಿತ ವಾಹನದ ರೂಪದಲ್ಲಿ ಇಕ್ಯೂಎಸ್ ಹೊಂದಿರುವ ಗ್ರಾಹಕರಿಗೆ ನಾನು ಧನ್ಯವಾದಗಳನ್ನು ಅರ್ಪಿಸುತ್ತೇನೆ ಎಂದು ಮರ್ಸಿಡಿಸ್ ಬೆಂಝ್ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಒ ಸಂತೋಷ್ ಅಯ್ಯರ್ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.