ಆಧುನಿಕ ತಂತ್ರಜ್ಞಾನ, ಅಧಿಕ ಸಾಮರ್ಥ್ಯ ಹಾಗೂ ಆಕರ್ಷಕ ವಿನ್ಯಾಸದೊಂದಿಗೆ ಔಡಿ ತನ್ನ ಹೊಸ ಕಾರು ಆರ್‌ಎಸ್ ಕ್ಯೂ8 ಹೊರತರುತ್ತಿದ್ದು, ಈಗಾಗಲೇ ಲಾಸ್‌ಏಂಜಲೀಸ್‌ನ ಆಟೊ ಎಕ್ಸ್‌ಪೊದಲ್ಲಿ ಪ್ರದರ್ಶನಗೊಂಡಿದೆ.
ಜರ್ಮನ್ ಮೂಲದ ಔಡಿ 'ಕ್ಯೂ' ಸರಣಿಯ ಹೊಸ ಕಾರು ಬಹುಬೇಗ ಸ್ಪೋರ್ಟ್ಸ್ ಪ್ರಿಯರ ಗಮನ ಸೆಳೆಯುವಂತಿದೆ. ದೂರದ ಪ್ರಯಾಣ, ವೇಗದ ಚಾಲನೆ ನಡೆಸುವ, ಅತ್ಯಾಧುನಿಕ ತಂತ್ರಜ್ಞಾನ ಒಳಗೊಂಡ ಕಾರುಗಳ ಅಪೇಕ್ಷೆಯಲ್ಲಿರುವವರಿಗೆಆರ್‌ಎಸ್ ಕ್ಯೂ8 ಆಪ್ತವೆನಿಸಬಹುದು. 4.0 ಲೀಟರ್ ವಿ8 ಇಂಜಿನ್ ಹೊಂದಿದ್ದು, 600 ಎಚ್‌ಪಿ ಶಕ್ತಿ ಉತ್ಪಾದಿಸುವ ಸಾಮರ್ಥ್ಯವಿದೆ.
ಶೂನ್ಯದಿಂದ ಗಂಟೆಗೆ 100 ಕಿ.ಮೀ ವೇಗವನ್ನು ಕೇವಲ 3.8 ಸೆಕೆಂಡ್‌ಗಳಲ್ಲಿ ಸಾಧಿಸುವ ಮಿಂಚಿನಂತಹ ಶಕ್ತಿ ಹೊಂದಿದೆ. ಗಂಟೆಗೆ 200 ಕಿ.ಮೀ. ವೇಗವನ್ನು ತಲುಪಲು 13.7 ಸೆಕೆಂಡ್‌ಗಳು ಹಿಡಿಯುತ್ತದೆ ಹಾಗೂ ಗಂಟೆಗೆ 250 ಕಿ.ಮೀ. ಗರಿಷ್ಠ ವೇಗದಲ್ಲಿ ಸಾಗಬಹುದಾಗಿದೆ.
ಆಕ್ಟಾಗನಲ್ ಸಿಂಗಲ್‌ಫ್ರೇಮ್ ಹೊರಗಿನ ವಿನ್ಯಾಸ, ಮುಂಭಾಗದಲ್ಲಿ ಆಕರ್ಷಣೀಯ ರೇಡಿಯೇಟರ್ ಗ್ರಿಲ್ ಮತ್ತು ಹನಿಕೂಂಬ್ ಗ್ರಿಲ್ ಇದ್ದು, ಒಂಬತ್ತು ವರ್ಣಗಳಲ್ಲಿ ಕಾರು ಲಭ್ಯವಿರಲಿದೆ. ಲೆದರ್ ಸ್ಪೋರ್ಟ್ ಶೈಲಿಯ ಕಪ್ಪು ಬಣ್ಣದ ಸೀಟುಗಳು, ಉತ್ಪಾದನೆಯಾಗುತ್ತಿರುವ ಟಾರ್ಕ್, ಟೈರ್‌ನಲ್ಲಿನ ಒತ್ತಡ, ಉಷ್ಣಾಂಶ ಸೇರಿದಂತೆ ಕಾರಿನ ಎಲ್ಲ ಮಾಹಿತಿಯನ್ನು ತೋರಿಸುವ ಡಿಸ್‌ಪ್ಲೇ ಚಾಲನೆಗೆ ವಿವಿಧ ಆಯ್ಕೆಗಳನ್ನು ನೀಡುವ ಮಾರ್ಗದರ್ಶಿಯಾಗಿಯೂ ತೋರುತ್ತಿದೆ.
ಸುರಕ್ಷತಾ ಕ್ರಮಗಳಿಗಾಗಿ 30 ರೀತಿಯ ಸಹಕಾರ ವ್ಯವಸ್ಥೆಯನ್ನು ಒಳಗೊಂಡಿದೆ. ಈ ಎಸ್‌ಯುವಿ ಮೈಲ್ಡ್ ಹೈಬ್ರಿಡ್ ವ್ಯವಸ್ಥೆಯನ್ನೂ ಹೊಂದಿದ್ದು, 48 ವೋಲ್ಡ್ ಎಲೆಕ್ಟ್ರಿಕಲ್ ಸಿಸ್ಟಮ್ ಮೂಲಕ 12 ಕಿ.ವ್ಯಾ. ಶಕ್ತಿಯನ್ನು ಹೊಮ್ಮಿಸಲಿದೆ. ಇದು ಇಂಜಿನ್‌ಗೆ ಬೂಸ್ಟರ್ ಆಗಿ ಸಹಕಾರ ನೀಡುತ್ತದೆ.
ಜರ್ಮನಿ ಮತ್ತು ಇತರೆ ಯುರೋಪಿಯನ್ ದೇಶಗಳಲ್ಲಿ 2020ರ ಮೊದಲ ತ್ರೈಮಾಸಿಕದಲ್ಲಿ ಈ ಹೊಸ ಕಾರು ಮಾರುಕಟ್ಟೆ ಪ್ರವೇಶಿಸಲಿದೆ. ಭಾರತ ಸೇರಿದಂತೆ ಇತರೆ ರಾಷ್ಟ್ರಗಳನ್ನು ತಲುಪಲು ಇನ್ನೂ ತಡವಾಗಲಿದ್ದು, ಇದರ ಬೆಲೆ ₹1.1 ಕೋಟಿ(1.27 ಲಕ್ಷ ಯೂರೋ) ಎಂದು ಅಂದಾಜಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.