ಗ್ರೇಟರ್ ನೋಯ್ಡಾ: ಟಯೋಟಾ ಇನೋವಾ ಕ್ರಿಸ್ಟಾಗೆ ಪ್ರತಿಸ್ಪರ್ಧೆ ಎಂದೇ ಬಿಂಬಿತವಾಗಿರುವ ಕಿಯಾ ಮೋಟಾರ್ಸ್‌ನ ಪ್ರೀಮಿಯಂ ಎಂಪಿವಿ (multi purpose vehicle)'ಕಾರ್ನಿವಾಲ್' ಬುಧವಾರ ಬಿಡುಗಡೆಯಾಗಿದೆ.
'ಆಟೊ ಎಕ್ಸ್‌ಪೊ 2020'ರಲ್ಲಿ ದಕ್ಷಿಣ ಕೊರಿಯಾದ ಕಾರು ತಯಾರಿಕಾ ಸಂಸ್ಥೆ ತನ್ನ ಹೊಸ ಕಾರನ್ನು ಭಾರತೀಯ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಮೂರು ಮಾದರಿಗಳಲ್ಲಿ ಲಭ್ಯವಿರುವ ಕಾರ್ನಿವಾಲ್ ಆರಂಭಿಕ ಬೆಲೆ ₹ 24.95 ಲಕ್ಷ (ಪ್ರೀಮಿಯಂ). ಪ್ರೆಸ್ಟೀಜ್ ಮಾದರಿಗೆ ₹ 28.95 ಲಕ್ಷ ಹಾಗೂ ಲಿಮೌಸಿನ್ (ಲಕ್ಸುರಿ) ಮಾದರಿಗೆ ₹ 33.95 ಲಕ್ಷ ನಿಗದಿಯಾಗಿದೆ.
ಏಳು, ಎಂಟು ಹಾಗೂ ಒಂಬತ್ತು ಸೀಟ್ ಮಾದರಿಗಳಲ್ಲಿ ಲಭ್ಯವಿರಲಿದೆ. ಬಿಡುಗಡೆಗೂ ಮುನ್ನವೇ ಕಾರ್ನಿವಾಲ್‌ಗೆ 3,500ಕ್ಕೂ ಹೆಚ್ಚು ಬುಕ್ಕಿಂಗ್ ಬಂದಿರುವುದಾಗಿ ಕಿಯಾ ಮೋಟಾರ್ಸ್ ಇಂಡಿಯಾ ಹೇಳಿದೆ. ಪ್ರಸ್ತುತ ಕಿಯಾ ಭಾರತದಲ್ಲಿ ಎಸ್‌ಯುವಿ 'ಸೆಲ್ಟೋಸ್' ಮಾರಾಟ ಮಾಡುತ್ತಿದೆ.
ಕಾರ್ನಿವಾಲ್ 2.2 ಲೀಟರ್ ವಿಜಿಟಿ ಬಿಎಸ್6 ಗುಣಮಟ್ಟದ ಡೀಸೆಲ್ ಇಂಜಿನ್ ಹೊಂದಿದೆ. 8–ಸ್ಪೀಡ್ 'ಸ್ಫೋರ್ಟ್ಸ್‌ಮ್ಯಾಟಿಕ್' ಟ್ರಾನ್ಸ್‌ಮಿಷನ್, 204 ಎಚ್‌ಪಿ ಪವರ್ ಮತ್ತು 440 ನ್ಯೂಟನ್ ಮೀಟರ್ ಹೊಮ್ಮಿಸುವ ಸಾಮರ್ಥ್ಯ ಹೊಂದಿದೆ. ಇನೋವಾ ಕ್ರಿಸ್ಟಾ ಪೆಟ್ರೋಲ್ ಮತ್ತು ಡೀಸೆಲ್ ಎರಡೂ ಮಾದರಿಯಲ್ಲಿ ಲಭ್ಯವಿದ್ದು, 2.4 ಲೀಟರ್ ಪೆಟ್ರೋಲ್ ಇಂಜಿನ್147 ಬಿಎಚ್‌ಪಿ ಮತ್ತು 343 ನ್ಯೂಟನ್ ಮೀಟರ್ ಶಕ್ತಿ ಹೊಮ್ಮಿಸುತ್ತದೆ.
ಮಲ್ಟಿ ಪರ್ಪೊಸ್ ವೆಹಿಕಲ್ ಕಾರ್ನಿವಾಲ್‌ನಲ್ಲಿ 360 ಡಿಗ್ರಿ ಕ್ಯಾಮೆರಾ, ಬ್ಲೈಂಡ್ ಸ್ಪಾಟ್ ಕ್ಯಾಮೆರಾ, ಕ್ಲೈಮೇಟ್ ಕಂಟ್ರೋಲ್, ಎಂಟು ಏರ್‌ಬ್ಯಾಗ್‌ಗಳು, ಎಲೆಕ್ಟ್ರಿಕ್ ಸನ್‌ರೂಫ್, ಒನ್–ಟಚ್ ಪವರ್ ಸ್ಲೈಡಿಂಗ್ ಡೋರ್‌ಗಳು, ವೈರ್‌ಲೆಸ್ ಚಾರ್ಜಿಂಗ್, ನಾಪಾ ಲೆದರ್ ಸೀಟ್‌ಗಳು ಹಾಗೂ ಹಿಂಬದಿ ಪ್ರಯಾಣಿಕರಿಗಾಗಿ ಎಂಟರ್‌ಟೈನ್ಮೆಂಟ್ ಸಿಸ್ಟಮ್ ಅಳವಡಿಸಲಾಗಿದೆ.
ಕಾರ್ನಿವಾಲ್ 540 ಲೀಟರ್ ಬೂಟ್ ಸ್ಪೇಸ್ ಹೊಂದಿದ್ದು, ಇನೋವಾ ಕ್ರಿಸ್ಟಾದಲ್ಲಿ 300 ಲೀಟರ್ ಬೂಟ್ ಸ್ಪೇಸ್ ಇದೆ. ಆಂಧ್ರ ಪ್ರದೇಶದ ಅನಂತಪುರದಲ್ಲಿರುವ ಕಿಯಾ ಬ್ರ್ಯಾಂಡ್ ಘಟಕದಲ್ಲಿ ಕಾರ್ನಿವಾಲ್ ತಯಾರಿಸಲಾಗುತ್ತದೆ.
ಕಿಯಾ ಸೊನೆಟ್ ಪರಿಕಲ್ಪನೆಯೊಂದಿಗೆಕಾಂಪ್ಯಾಕ್ಟ್ ಎಸ್‌ಯುವಿ ಕಾರು ಬಿಡುಗಡೆ ಮಾಡಲು ಉದ್ದೇಶಿಸಿದೆ. ಮಾರುತಿ ಸುಜುಕಿ ವಿತಾರಾ ಬ್ರೀಜಾ, ಹ್ಯುಂಡೈ ವೆನ್ಯೂ ಹಾಗೂ ಫೋರ್ಡ್ ಇಕೊಸ್ಫೋರ್ಟ್‌ಗೆ ಪೈಪೋಟಿ ನೀಡಲು ಸಿದ್ಧತೆ ನಡೆಸಿದೆ. ಇದೇ ವರ್ಷ ದ್ವಿತಿಯಾರ್ಧದಲ್ಲಿ ಹೊಸ ಕಾರನ್ನು ಭಾರತದಲ್ಲಿ ಬಿಡುಗಡೆ ಮಾಡಲು ಸಜ್ಜಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.