ADVERTISEMENT

ಬಜಾಜ್‌ 'ಚೇತಕ್‌' ಎಲೆಕ್ಟ್ರಿಕ್‌ ಸ್ಕೂಟರ್‌ ಬಿಡುಗಡೆ; ಬೆಲೆ ₹ 1 ಲಕ್ಷ  

ಪಿಟಿಐ
Published 14 ಜನವರಿ 2020, 11:09 IST
Last Updated 14 ಜನವರಿ 2020, 11:09 IST
ಬಜಾಜ್‌ ಚೇತಕ್‌ ಎಲೆಕ್ಟ್ರಿಕ್‌ ಸ್ಕೂಟರ್‌
ಬಜಾಜ್‌ ಚೇತಕ್‌ ಎಲೆಕ್ಟ್ರಿಕ್‌ ಸ್ಕೂಟರ್‌    
""

ಮುಂಬೈ:ಸ್ಕೂಟರ್ ಎಂದರೆ 'ಚೇತಕ್‌' ಎನ್ನುವಷ್ಟು ಭಾರತೀಯರಲ್ಲಿ ಮನೆ ಮಾತಾಗಿದ್ದ ಬಜಾಜ್‌ ಆಟೊದ ಸ್ಕೂಟರ್‌ ಈಗ ಎಲೆಕ್ಟ್ರಿಕ್‌ ರೂಪದಲ್ಲಿ ಬಿಡುಗಡೆಯಾಗಿದೆ.ಸಂಕ್ರಾಂತಿ ದಿನದಿಂದ ಬುಕ್ಕಿಂಗ್‌ ಅವಕಾಶ ಕಲ್ಪಿಸಲಾಗಿದೆ.

ವೇಗದ ಬೈಕ್‌ಗಳ ಜಮಾನದಲ್ಲಿ ಮರೆಗೆ ಸರಿದಿದ್ದ 'ಚೇತಕ್‌' ಬ್ರ್ಯಾಂಡ್‌ ಈಗ ವಿದ್ಯುತ್‌ ಚಾಲಿತ ಸ್ಕೂಟರ್ ಆಗಿ ಮಾರುಕಟ್ಟೆ ಪ್ರವೇಶಿಸಿದೆ. ಜನವರಿ 15ರಿಂದ ಸ್ಕೂಟರ್‌ ಬುಕ್ಕಿಂಗ್‌ ಮಾಡಬಹುದಾಗಿದ್ದು, ಆರಂಭಿಕ ಬೆಲೆ ₹ 1 ಲಕ್ಷ ನಿಗದಿಯಾಗಿದೆ.

ಫೆಬ್ರುವರಿ ಅಂತ್ಯಕ್ಕೆ ಗ್ರಾಹಕರಿಗೆ ಹೊಸ ಚೇತಕ್‌ ಸಿಗಲಿದೆ. ಆರಂಭಿಕವಾಗಿ ಬೆಂಗಳೂರು ಮತ್ತು ಪುಣೆಯಲ್ಲಿ ಎಲೆಕ್ಟ್ರಿಕ್‌ ಸ್ಕೂಟರ್‌ ಲಭ್ಯವಿರಲಿದೆ. 'ದ್ವಿಚಕ್ರ ವಾಹನಗಳ ಹೊಸ ಯುಗ ಆರಂಭವಾದಂತಾಗಿದೆ' ಎಂದು ಬಜಾಜ್‌ ಆಟೊದ ಕಾರ್ಯಕಾರಿ ನಿರ್ದೇಶಕ ರಾಕೇಶ್‌ ಶರ್ಮಾ ಹೇಳಿದ್ದಾರೆ.

ADVERTISEMENT

2019ರ ಅಕ್ಟೋಬರ್‌ನಲ್ಲೇ ಬಜಾಜ್‌ ಆಟೊ ಹೊಸ ಚೇತಕ್‌ ಅನಾವರಣಗೊಳಿಸಿತ್ತು. 'ಅರ್ಬೇನ್‌' ಮತ್ತು 'ಪ್ರೀಮಿಯಂ' ಎರಡು ಮಾದರಿಗಳಲ್ಲಿ ಎಲೆಕ್ಟ್ರಿಕ್‌ ಸ್ಕೂಟರ್‌ ಲಭ್ಯವಿರಲಿದೆ. ಸ್ಕೂಟರ್‌ನೊಂದಿಗೆ ಹೋಂ–ಚಾರ್ಜಿಂಗ್‌ (ಮನೆಯಲ್ಲಿಯೇ ಬ್ಯಾಟರಿ ಚಾರ್ಜ್‌ ಮಾಡಬಹುದಾದ) ಸ್ಟೇಷನ್‌ ಸಿಗಲಿದೆ.

ಚೇತಕ್‌ ಅಧಿಕೃತ ವೆಬ್‌ಸೈಟ್‌ನಲ್ಲಿ ಆರಂಭಿಕ ಮೊತ್ತ ₹ 2,000 ನೀಡಿ ಸ್ಕೂಟರ್‌ ಬುಕ್‌ ಮಾಡಬಹುದಾಗಿದೆ. ಡ್ರಮ್‌ ಬ್ರೇಕ್‌ಗಳನ್ನು ಹೊಂದಿರುವಅರ್ಬೇನ್‌ ಮಾದರಿ ಸ್ಕೂಟರ್‌ಗೆ ₹ 1 ಲಕ್ಷ, ಡಿಸ್ಕ್‌ ಬ್ರೇಕ್‌ಗಳು ಹಾಗೂ ಲಕ್ಸುರಿ ಫಿನಿಷ್‌ ಹೊಂದಿರುವ ಚೇತಕ್‌ ಪ್ರೀಮಿಯಂ ಎಡಿಷನ್‌ ಸ್ಕೂಟರ್‌ಗೆ ₹ 1.15 ಲಕ್ಷ (ಎಕ್ಸ್‌ ಷೋರೂಂ) ನಿಗದಿಯಾಗಿದೆ.

ಸ್ಕೂಟರ್‌ ಸಾಮರ್ಥ್ಯ

4 ಕಿ.ವ್ಯಾಟ್‌ ಎಲೆಕ್ಟ್ರಿಕ್‌ ಮೋಟಾರ್‌ ಹೊಂದಿದ್ದು, ಲಿಥಿಯಮ್‌–ಅಯಾನ್‌ ಬ್ಯಾಟರಿ ಒಳಗೊಂಡಿದೆ. ಒಮ್ಮೆ ಪೂರ್ಣ ಚಾರ್ಜ್‌ ಮಾಡಿದರೆ ಇಕೊ ಮೋಡ್‌ನಲ್ಲಿ 95 ಕಿ.ಮೀ ದೂರ ಕ್ರಮಿಸಬಹುದು. ಸ್ಪೋರ್ಟ್‌ ಮೋಡ್‌ನಲ್ಲಿ 85 ಕಿ.ಮೀ. ದೂರ ಸಂಚರಿಸಬಹುದಾಗಿದೆ. 3 ವರ್ಷ ಮತ್ತು 50,000 ಕಿ.ಮೀ. ವರೆಗೂ ಬ್ಯಾಟರಿ ವಾರೆಂಟಿ ನೀಡಲಾಗಿದೆ. ಬ್ಯಾಟರಿ ಶೇ 100ರಷ್ಟು ಚಾರ್ಜ್ ಮಾಡಲು 5 ಗಂಟೆ ಹಾಗೂ 1 ಗಂಟೆಯಲ್ಲಿ ಶೇ 25ರಷ್ಟು ಚಾರ್ಜ್‌ ಆಗುತ್ತದೆ.

ಪಾರ್ಕಿಂಗ್‌ ಮಾಡಿರುವ ಸಂದರ್ಭದಲ್ಲಿ ಸ್ಕೂಟರ್‌ ಹಿಂದೆ ತೆಗೆಯಲು ಪರದಾಡುವುದನ್ನು ತಪ್ಪಿಸಲು ರಿವರ್ಸ್‌ ಗೇರ್‌ ಸಹ ನೀಡಲಾಗಿದೆ. ರಿವರ್ಸ್‌ ಮೋಡ್‌ ಸ್ವಿಚ್‌ ಒತ್ತಿ ಸುಲಭವಾಗಿ ಸ್ಕೂಟರ್‌ ಹಿಂದೆ ಚಲಿಸುವಂತೆ ಮಾಡಬಹುದು. ಅಲಾಯ್‌ ವೀಲ್ಸ್‌ನ ಮತ್ತು ಡಿಸ್ಕ್‌ ಬ್ರೇಕ್‌ ಅಳವಡಿಸಲಾಗಿದೆ. ಇಲ್ಲಿನ ಬ್ರೇಕಿಂಗ್‌ ತಂತ್ರಜ್ಞಾನವು ಕೈನೆಟಿಕ್‌ ಶಕ್ತಿಯನ್ನು ಎಲೆಕ್ಟ್ರಿಕ್‌ ಶಕ್ತಿಯಾಗಿ ಪರಿವರ್ತಿಸುವ ಮೂಲಕ ಸಂಚಾರಕ್ಕೆ ಮತ್ತಷ್ಟು ಇಂಧನ ಪೂರೈಕೆ ಮಾಡುತ್ತದೆ.

ಪೂರ್ಣ ಮೆಟಲ್‌ ಹೊರಭಾಗ, ರಾತ್ರಿ ಸಂಚಾರದಲ್ಲಿ ಸುಲಭವಾಗಲು ಬೆಳಗುವ ಸ್ವಿಚ್‌ಗಳು, ಬೆಳಗ್ಗೆ ಮತ್ತು ರಾತ್ರಿಗೆ ತಕ್ಕಂತೆ ಬೆಳಗುವ ಎಲ್‌ಇಡಿ ಲೈಟ್‌, ವೇಗ, ಇಂಧನ, ಸೈಡ್‌ ಸ್ಟ್ಯಾಂಡ್‌ ಸೇರಿದಂತೆ ಇತರೆ ಮಾಹಿತಿಯನ್ನು ತೋರಿಸುವ ಡಿಜಿಟಲ್‌ ಕಂಸೋಲ್‌ಆಕರ್ಷಿಸುತ್ತದೆ.

ಮೊಬೈಲ್‌ನೊಂದಿಗೆ ಸ್ಕೂಟರ್‌ ಇರುವಿಕೆ ಮಾಹಿತಿಯನ್ನು ಸಂಪರ್ಕಿಸಬಹುದು. ಹೆಲ್ಮೆಟ್‌ ಇಡಲು ಪೂರಕ ಸ್ಥಳಾವಕಾಶ, ಮೊಬೈಲ್‌ ಸುರಕ್ಷಿತವಾಗಿ ಇಟ್ಟು ಚಾರ್ಜ್‌ ಮಾಡಲು ಮುಂಭಾಗಲ್ಲಿಯೇ ಅವಕಾಶವಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.