ಬೆಂಗಳೂರು: ಹೋಂಡಾ ಕಾರ್ಸ್ ಇಂಡಿಯಾ ಕಂಪನಿಯು ಗುರುವಾರ ಹೊಸ ‘ಸಿಟಿ ಇ–ಎಚ್‌ಇವಿ’ ಮಾದರಿಯನ್ನು ಅನಾವರಣ ಮಾಡಿದ್ದು, ಮುಂದಿನ ತಿಂಗಳು ಇದು ಮಾರುಕಟ್ಟೆಗೆ ಬಿಡುಗಡೆ ಆಗಲಿದೆ.
ಇ–ಎಚ್‌ಇವಿ ಮೂಲಕ ಕಂಪನಿಯು ದೇಶದ ಹೈಬ್ರಿಡ್ ಎಲೆಕ್ಟ್ರಿಕ್ ವಾಹನ ವಿಭಾಗ ಪ್ರವೇಶಿಸಿದೆ. ಈ ಕಾರು ಸೆಲ್ಫ್ ಚಾರ್ಜಿಂಗ್ ಮತ್ತು ಎರಡು ಮೋಟರ್‌ಗಳ ಇ–ಸಿವಿಟಿ ಹೈಬ್ರಿಡ್ ಸಿಸ್ಟಂ ಹೊಂದಿದೆ. 1.5 ಲೀಟರ್ ಅಟ್ಕಿನ್ಸನ್–ಸೈಕಲ್ ಡಿಒಎಚ್‌ಸಿ ಐ–ವಿಟೆಕ್ ಪೆಟ್ರೋಲ್ ಎಂಜಿನ್, ಸುಧಾರಿತ ಲೀಥಿಯಂ ಅಯಾನ್ ಬ್ಯಾಟರಿ ಮತ್ತು ಎಂಜಿನ್ ಲಿಂಕ್ಡ್ ಡೈರೆಕ್ಟ್ ಕಪ್ಲಿಂಗ್ ಕ್ಲಚ್ ಒಳಗೊಂಡಿದೆ.
ಇವಿ ಡ್ರೈವ್ ಮೋಡ್, ಹೈಬ್ರಿಡ್ ಡ್ರೈವ್ ಮೋಡ್ ಮತ್ತು ಎಂಜಿನ್ ಡ್ರೈವ್ ಮೋಡ್... ಹೀಗೆ ಮೂರು ರೀತಿಯ ಡ್ರೈವಿಂಗ್ ಆಯ್ಕೆಗಳಲ್ಲಿ ಇದು ಲಭ್ಯವಿದೆ. ಇದರ ಬ್ಯಾಟರಿ ಚಾರ್ಜ್ ಮಾಡಲು ಮ್ಯಾನುಯಲ್ ಚಾರ್ಜರ್ ಅಗತ್ಯ ಇಲ್ಲ. ಸ್ವಯಂಚಾಲಿತವಾಗಿ ಚಾರ್ಜ್ ಆಗುತ್ತದೆ. ಪ್ರತಿ ಲೀಟರಿಗೆ 26.5 ಕಿಲೋ ಮೀಟರ್ ಇಂಧನ ದಕ್ಷತೆಯನ್ನು ನೀಡಲಿದೆ.
ರಾಜಸ್ಥಾನದ ತಪುಕರಾ ಘಟಕದಲ್ಲಿ ಇದನ್ನು ತಯಾರಿಸಲಾಗುತ್ತದೆ. ಇದರ ಮುಂಗಡ ಬುಕಿಂಗ್ ಆರಂಭ ಆಗಿದ್ದು, ಹೊಂಡಾ ಡೀಲರ್‌ಶಿಪ್‌ಗಳಲ್ಲಿ ₹ 21 ಸಾವಿರ ಪಾವತಿಸಿ ಬುಕ್ ಮಾಡಬಹುದು. ಹೋಂಡಾ ಕಾರ್ಸ್ ಜಾಲತಾಣದ ಹೋಂಡಾ ಫ್ರಮ್ ಹೋಮ್ ವೇದಿಕೆಯಲ್ಲಿ ₹ 5 ಸಾವಿರ ಪಾವತಿಸಿಯೂ ಬುಕ್ ಮಾಡಬಹುದು.
ಹೋಂಡಾ ಸೆನ್ಸಿಂಗ್: ಚಾಲನೆಯ ವೇಳೆ ಅಪಘಾತ ಆಗುವುದನ್ನು ತಡೆಯಲು ‘ಹೋಂಡಾ ಸೆನ್ಸಿಂಗ್’ ಸುಧಾರಿತ ತಂತ್ರಜ್ಞಾನ ಆಗಿದೆ. ಮುಂದಿನ ಕ್ಯಾಮೆರಾ ಬಳಸಿಕೊಂಡು ರಸ್ತೆ ಅಪಘಾತ ತಡೆಯಲು ಇದು ನೆರವಾಗುತ್ತದೆ.
‘ಸಿಟಿ ಇ–ಎಚ್‌ಇವಿ ಮೂಲಕ ಭಾರತದಲ್ಲಿ ನಮ್ಮ ವಿದ್ಯುತ್ ಚಾಲಿತ ವಾಹನ ಪ್ರಯಾಣ ಆರಂಭಿಸಿದ್ದೇವೆ. ಭಾರತ ಸರ್ಕಾರವು ಭಾರತದಲ್ಲಿಯೇ ತಯಾರಿಸಿ ಅಭಿಯಾನದ ಜೊತೆಗೆ ಸುರಕ್ಷತೆಗೂ ಹೆಚ್ಚು ಒತ್ತು ನೀಡುತ್ತಿದೆ’ ಎಂದು ಹೋಂಡಾ ಕಾರ್ಸ್ ಇಂಡಿಯಾದ ಅಧ್ಯಕ್ಷ ತಕುಯಾ ಸುಮುರಾ ಹೇಳಿದರು.
ಪ್ರಮುಖ ಅಂಶಗಳು
*ಇವಿ ಡ್ರೈವ್ ಮೋಡ್, ಹೈಬ್ರಿಡ್ ಡ್ರೈವ್ ಮೋಡ್ ಮತ್ತು ಎಂಜಿನ್ ಡ್ರೈವ್ ಮೋಡ್ ಆಯ್ಕೆ
*ಅಪಘಾತ ತಡೆಯಲು ಹೋಂಡಾ ಸೆನ್ಸಿಂಗ್
*ಸೆಲ್ಫ್ ಚಾರ್ಜಿಂಗ್ ವ್ಯವಸ್ಥೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.