ADVERTISEMENT

ಮರೆಯಲಾರದ ’ಜಾವಾ’ ಬೈಕ್‌; ಹೊಸ ರೂಪದಲ್ಲಿ ಮಾರುಕಟ್ಟೆಗೆ

​ಪ್ರಜಾವಾಣಿ ವಾರ್ತೆ
Published 15 ನವೆಂಬರ್ 2018, 10:42 IST
Last Updated 15 ನವೆಂಬರ್ 2018, 10:42 IST
ನೂತನ ಜಾವಾ ಬೈಕ್‌
ನೂತನ ಜಾವಾ ಬೈಕ್‌   

ಬೆಂಗಳೂರು: ಡಾ.ರಾಜ್‌ಕುಮಾರ್ ಅಭಿನಯದ ’ನಾನಿನ್ನ ಮರೆಯಲಾರೆ’ ಸಿನಿಮಾ ನೋಡಿರುವವರಿಗೆ ಮೋಟಾರ್‌ ಬೈಕ್‌ ರೇಸ್‌ ಹಾಗೂ ಬೈಕ್‌ನಲ್ಲಿ ಮಾಡಬಹುದಾದ ಸಾಹಸಗಳನ್ನು ಯಾವತ್ತಿಗೂ ಮರೆಯಲು ಸಾಧ್ಯವಿಲ್ಲ. ಇದೇ ಸಿನಿಮಾದಿಂದ ಪ್ರೇರಣೆ ಪಡೆದು ಅದೆಷ್ಟೋ ಮಂದಿ ಜಾವಾ ಬೈಕ್‌ಗಳನ್ನು ಕೊಂಡು ಸಾಹಸಿಗಳಿಗೆ ಕೈಹಾಕಿದ್ದು ಈಗ ಇತಿಹಾಸ. ಕ್ಲಾಸಿಕ್‌ ಎಂದು ಸಂಗ್ರಹಗಳಲ್ಲಿದ್ದ ಜಾವಾ ಇದೀಗ ಮರುಜೀವ ಪಡೆದಿದ್ದು, ಹೊಸ ರೂಪದಲ್ಲಿ ಮಾರುಕಟ್ಟೆ ಪ್ರವೇಶಿಸಿದೆ.

ಮಹೀಂದ್ರಾ ಆ್ಯಂಡ್‌ ಮಹೀಂದ್ರಾ ಮೂಲಕ ನೂತನ ವಿನ್ಯಾಸದ ಮೂರು ’ಜಾವಾ’ ಬೈಕ್‌ಗಳು ಗುರುವಾರ ಅನಾವರಣಗೊಂಡಿವೆ. ರಾಯಲ್‌ ಎನ್‌ಫೀಲ್ಡ್‌ನಷ್ಟೇ ದೇಶದಲ್ಲಿ ಬೈಕ್‌ ಪ್ರಿಯರಿಗೆ ಅಚ್ಚುಮೆಚ್ಚಾಗಿದ್ದ ಜಾವಾ ಮೋಟಾರ್‌ಸೈಕಲ್ಸ್‌, ಉತ್ಪಾದನೆ ನಿಲ್ಲಿಸಿ 22 ವರ್ಷಗಳ ನಂತರ ಅಧಿಕೃತವಾಗಿ ಮಾರುಕಟ್ಟೆ ಪ್ರವೇಶಿಸಿದೆ.

ಬಿಡುಗಡೆಯಾಗಿರುವ ಮೂರು ಬೈಕ್‌ಗಳು

ADVERTISEMENT

* ಜಾವಾ– ₹1.64 ಲಕ್ಷ

* ಜಾವಾ 42– ₹1.55 ಲಕ್ಷ

* ಜಾವಾ ಪೆರಾಕ್‌– ₹1.89 ಲಕ್ಷ (ದೆಹಲಿ ಎಕ್ಸ್‌–ಶೋರೂಂ ಬೆಲೆ)

ಹೊಸ ತಲೆಮಾರಿನ ಜಾವಾ ಮೋಟಾರ್‌ಸೈಕಲ್‌ನ ಮೊದಲ ಬೈಕ್‌ಗೆ ’ಜಾವಾ’ ಎಂದೇ ಹೆಸರಿಸಲಾಗಿದೆ. ರೆಟ್ರೋ ವಿನ್ಯಾಸದ ಕ್ರೂಸರ್‌ ಜಾವಾದ ಸಾಮರ್ಥ್ಯ300 ಸಿಸಿ. ಇದು ರಾಯಲ್‌ ಎನ್‌ಫೀಲ್ಡ್‌ನ 350 ಸಿಸಿ ಬೈಕ್‌ಗೆ ನೇರ ಪೈಪೋಟೆ ಎಂದೇ ವಿಶ್ಲೇಷಿಸಲಾಗುತ್ತದೆ. 1970–80ರ ದಶಕದಲ್ಲಿ ಭಾರತದ ರಸ್ತೆಗಳಲ್ಲಿ ಗುಡುಗುಡತ್ತಿದ್ದ ಅದೇ ಹಿಂದಿನ ಜಾವಾ ಬೈಕ್‌ಗೆ ಬಹುವಾಗಿ ಹೋಲುತ್ತದೆ. ಹೊಸ ತಲೆಮಾರಿನ ಇಂಜಿನ್‌ ಮತ್ತು ಮೆಕಾನಿಕಲ್‌ ಭಾಗಗಳನ್ನು ಅಳವಡಿಸಿಕೊಳ್ಳುವ ಮೂಲಕ ಮತ್ತಷ್ಟು ಸಮರ್ಥ ಬೈಕ್‌ ಆಗಿ ಕಾಣುತ್ತಿದೆ. ಗುಂಡಗಿನ ಹೆಡ್‌ಲ್ಯಾಂಪ್‌, ಬಾಗಿದ ಮೊಟ್ಟೆಯಾಕಾರದ ಇಂಧನ ಟ್ಯಾಂಕ್‌ ಹೊಸದಾಗಿದೆ. ಚೇನ್‌ ಗಾರ್ಡ್, ಸೀಟು ಹಳೆಯ ವಿನ್ಯಾಸವನ್ನೇ ಹೋಲುತ್ತವೆ.

ಜಾವಾ ವಿವರ

ಇಂಜಿನ್‌: 293 ಸಿಸಿ ಸಿಂಗಲ್‌ ಸಿಲಿಂಡನ್‌; ಬಿಎಸ್‌ 6 (ಲಿಕ್ವಿಡ್‌ ಕೂಲಿಂಗ್‌)

ಸಾಮರ್ಥ್ಯ: 27 ಬಿಎಚ್‌ಪಿ ಮತ್ತು 28 ಎನ್‌ಎಂ ಟಾರ್ಕ್‌

ಗೇರ್‌ಬಾಕ್ಸ್‌: 6–ಸ್ಪೀಡ್‌

ಬ್ರೇಕ್‌: 280 ಎಂಎಂ ಡಿಸ್ಕ್‌ ಬ್ರೇಕ್‌ ಮುಂಭಾಗ; ಹಿಂಭಾಗದಲ್ಲಿ 153 ಎಂಎಂ ಟ್ರಮ್‌ ಬ್ರೇಕ್‌

ಅಳತೆ: 170 ಕೆ.ಜಿ ತೂಕ; 765 ಎಂಎಂ ಸೀಟು ಎತ್ತರ

ಇಂಧನ ಸಂಗ್ರಹ: 14 ಲೀಟರ್‌

ಜಾವಾ 42ರಲ್ಲಿ ’ಜಾವಾ’ದ ಇಂಜಿನನ್ನೇ ಬಳಸಲಾಗಿದೆ ಹಾಗೂ ಜಾವಾ ಪೆರಾಕ್‌ನಲ್ಲಿ 332 ಸಿಸಿ ಇಂಜಿನ್‌ ಬಳಕೆಯಾಗಿದೆ. ಇದು 30 ಬಿಎಸ್‌ಪಿ ಮತ್ತು 31 ಎನ್‌ಎಂ ಸಾಮರ್ಥ್ಯ ಹೊಂದಿದೆ. ಕಪ್ಪು, ಬೂದು ಹಾಗೂ ಕಂದುಕೆಂಪು ಬಣ್ಣಗಳಲ್ಲಿ ಜಾವಾ ಲಭ್ಯವಿದೆ. ಹೊಳೆಯುವ ನಿಂಬೆ ಬಣ್ಣ, ನೆಬುಲಾ ಬ್ಲೂ, ಕಾಮೆಟ್‌ ರೆಡ್‌ ಸೇರಿದಂತೆ ಒಟ್ಟು ಆರು ವರ್ಣಗಳಲ್ಲಿ ಜಾವಾ 42 ಲಭ್ಯವಿದೆ.ಬಾಬರ್‌ ವಿನ್ಯಾಸದ ಜಾವಾ ಪೆರಾಕ್‌ ಮುಂದಿನ ದಿನಗಳಲ್ಲಿ ಖರೀದಿಗೆ ಸಿಗಲಿದೆ.

ಮಧ್ಯಪ್ರದೇಶದ ಪೀಥಂಪುರದ ಘಟಕದಲ್ಲಿ ಜಾವಾ ಬೈಕ್‌ಗಳನ್ನು ತಯಾರಿಸಲಾಗುತ್ತಿದೆ. ಪ್ರಸ್ತುತ ಜಾವಾ ಮತ್ತು ಜಾವಾ 42 ಬೈಕ್‌ಗಳಿಗೆ ಬುಕ್ಕಿಂಗ್‌ ತೆರೆಯಲಾಗಿದ್ದು, ಹೆಚ್ಚಿನ ಮಾಹಿತಿ ಜಾವಾ ಅಧಿಕೃತ ವೆಬ್‌ಸೈಟ್‌ನಲ್ಲಿ ಲಭ್ಯವಿದೆ.

ಬೈಕ್‌ ಬಿಡುಗಡೆಯಾಗುತ್ತಿದ್ದಂತೆ ಸಾಮಾಜಿಕ ಮಾಧ್ಯಮಗಳಲ್ಲಿ ಜಾವಾ ಪ್ರಿಯರು ಸಾಮಾಜಿಕ ಮಾಧ್ಯಮಗಳಲ್ಲಿ ಫೋಟೊ ವಿವರ ಪ್ರಕಟಿಸಿಕೊಂಡಿದ್ದಾರೆ. ನಟ ಶಾರೂಕ್‌ ಖಾನ್‌, ಇದರ ಮೇಲೆ ಬೆಳೆದವನು ಎಂದು ಟ್ವೀಟಿಸಿದ್ದಾರೆ.

ಇದನ್ನೂ ಓದಿ:ಮತ್ತೆ ಬಂತು ಜಾವಾ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.