ADVERTISEMENT

ಟ್ರೆಂಡ್ ಹುಟ್ಟುಹಾಕಲಿದೆ ಜೀಪ್ ‘ರ್‍ಯಾಂಗ್ಲರ್’

ನೇಸರ ಕಾಡನಕುಪ್ಪೆ
Published 12 ಆಗಸ್ಟ್ 2019, 5:18 IST
Last Updated 12 ಆಗಸ್ಟ್ 2019, 5:18 IST
   

ಕೆಲವು ಉತ್ಪನ್ನಗಳು ಟ್ರೆಂಡ್ ಸೆಟ್ಟರ್‌ಗಳಾಗಿ ಬಿಡುತ್ತವೆ. ಉದಾಹರಣೆಗೆ ‘ವ್ಯಾಸೆಲೀನ್’. ಪೆಟ್ರೋಲಿಯಂ ಜೆಲ್ಲಿಯ ವಾಣಿಜ್ಯ ಉತ್ಪನ್ನದ ಹೆಸರು ‘ವ್ಯಾಸಲೀನ್’. ಈಗ ಅನೇಕ ಹೊಸ ಹೊಸ ಬ್ರ್ಯಾಂಡ್‌ಗಳು ಪರಿಚಿತಗೊಂಡಿದ್ದರೂ ಅಂಗಡಿಗೆ ಹೋಗಿ ನಾವು ಕೇಳುವುದು ‘ವ್ಯಾಸಲೀನ್’ ಕೊಡಿ ಎಂದೇ. ಅಂತೆಯೇ, ಭಾರತದ ಪ್ರತಿಯೊಬ್ಬರಿಗೂ ಪರಿಚಯವಿರುವ ಇನ್ನೊಂದು ಪರಿಚಿತ ಹೆಸರು ‘ಜೀಪ್’. ಮಹಿಂದ್ರಾ ಅಂಡ್ ಮಹಿಂದ್ರಾ, ಮಾರುತಿ ಸುಜುಕಿ ಸೇರಿದಂತೆ ಹಲವು ಕಂಪನಿಗಳು ಆಫ್ ರೋಡ್ ವೆಹಿಕಲ್‌ಗಳನ್ನು ಪರಿಚಯಿಸಿ ಹಲವು ದಶಕಗಳೇ ಆಗಿದ್ದರೂ, ಆಡು ಮಾತಿನಲ್ಲಿ ನಾವು ಅವಕ್ಕೆ ಕರೆಯುವ ಹೆಸರು ‘ಜೀಪ್’!

ಇದಕ್ಕೆ ಕಾರಣವೇನೆಂದರೆ ‘ಜೀಪ್’ ಎಂಬ ಹೆಸರು ಎಲ್ಲರ ಮನದೊಳಗೆ ದಾಖಲಾಗಿರುವುದು. ಭಾರತದಲ್ಲಿ ವಾಹನಗಳು ಪ್ರವೇಶ ಮಾಡಲು ಶುರುಮಾಡಿದಾಗ ಆಫ್ ರೋಡ್ ವಾಹನಗಳಾಗಿ ಕಾಲಿಟ್ಟಿದ್ದು ಅಮೆರಿಕ ಮೂಲದ ‘ಜೀಪ್’ ಹಾಗೂ ‘ವಿಲ್ಲೀಸ್’. ವಾಸ್ತವದಲ್ಲಿ ‘ಜೀಪ್’ ಎನ್ನುವುದು ವಾಹನದ ಹೆಸರೇ ಅಲ್ಲ. ಅದು ಕಂಪನಿಯ ಹೆಸರು. ಅಮೆರಿಕದಲ್ಲಿ ಶುರುವಾದ ಜೀಪ್ ಕಂಪನಿಯು ವಿಶ್ವದ ಮೊದಲ ಸಾಲಿನ ಆಫ್ ರೋಡ್‌ ವಾಹನಗಳನ್ನು ಉತ್ಪಾದಿಸಲು ಶುರು ಮಾಡಿತ್ತು. ಜೀಪ್‌ನ ಸಾಲಿನಲ್ಲಿ ಬೆನ್ಸ್‌, ವಿಲ್ಲೀಸ್ ಸಹ ಈ ಮಾದರಿಯ ವಾಹನಗಳನ್ನು ಉತ್ಪಾದಿಸುತ್ತಿದ್ದವು. ಈ ಮೂರೂ ಕಂಪನಿಗಳ ಆಫ್‌ ರೋಡ್ ವಾಹನಗಳು ಭಾರತ ಪ್ರವೇಶಿಸಿದ್ದವು. ಭಾರತದ ಸೇನೆಯಲ್ಲಿ ಸೇವೆ ಸಲ್ಲಿಸಲು ಶುರು ಮಾಡಿದ್ದವು. ನಂತರ, ನಾಗರಿಕರು ಕೊಳ್ಳಲೂ ಅವಕಾಶ ಸಿಕ್ಕಿತ್ತು. ನಮ್ಮ ಚಿಕ್ಕಮಗಳೂರು, ಕೊಡಗು ಮಾದರಿಯ ಗುಡ್ಡಗಾಡು ಪ್ರದೇಶಗಳ ಗ್ರಾಹಕರು ಈ ಮಾದರಿಯ ವಾಹನಗಳನ್ನು ಕೊಂಡರು. ಭಾರತ ಸೇನೆಯು ಹಳೆಯ ವಾಹನಗಳನ್ನು ಹರಾಜು ಹಾಕಿದಾಗ ಕೊಂಡು ಓಡಿಸಿದ್ದರು. ಈಗಲೂ ರಸ್ತೆಗಳಲ್ಲಿ ಈ ವಾಹನಗಳು ಕಾಣ ಸಿಗುತ್ತವೆ.

ಮಹಿಂದ್ರಾ ಅಂಡ್ ಮಹಿಂದ್ರಾ ಕಂಪನಿಯು 1948ರಲ್ಲಿ ‘ವಿಲ್ಲೀಸ್ ಜೀಪ್’ ಹೆಸರಿನಲ್ಲಿ ಲೈಸೆನ್ಸ್ ಪಡೆದು, ಹಲವು ಮಾದರಿಯ ಆಫ್ ರೋಡ್ ವಾಹನಗಳನ್ನು ಉತ್ಪಾದಿಸಲು ಶುರು ಮಾಡಿತು. ಅವುಗಳಲ್ಲಿ ಪ್ರಮುಖವಾದವೆಂದರೆ, ಸಿಎಲ್ 550 ಎಂಡಿಐ, ಸಿಜೆ 640 ಡಿಪಿ, ಎಂಎಂ 540. ಆದರೆ, ಜನ ಸಾಮಾನ್ಯರಾರೂ ಈ ಹೆಸರುಗಳಲ್ಲಿ ಈ ವಾಹನಗಳನ್ನು ಕರೆಯಲೇ ಇಲ್ಲ. ‘ಜೀಪ್’ ಎಂದೇ ಇವು ಕರೆಸಿಕೊಂಡಿದ್ದು. ಈ ವಾಹನಗಳನ್ನು ಉತ್ಪಾದಿಸಲು ಮಹಿಂದ್ರಾಗಿದ್ದ ಲೆಸೆನ್ಸ್ ರದ್ದಾದ ಮೇಲೂ ಮಹಿಂದ್ರಾ ತನ್ನದೇ ವಿನ್ಯಾಸದಲ್ಲಿ ಆಫ್‌ ರೋಡ್ ವಾಹನಗಳನ್ನು ಉತ್ಪಾದಿಸುವುದನ್ನು ಮುಂದುವರಿಸಿತು. ಆದರೆ, ಅವುಗಳನ್ನು ಜನ ಕರೆಯುತ್ತಿದ್ದದ್ದು ಮಾತ್ರ ‘ಜೀಪ್’ ಎಂದೇ!

ADVERTISEMENT

ನಿಜವಾದ ‘ಜೀಪ್‌’ನ ಆಗಮನ!: ‘ಜೀಪ್’ ಕಂಪನಿಯು ಭಾರತಕ್ಕೆ ಪರಿಚಿತಗೊಳ್ಳುತ್ತಿದೆ ಎಂಬ ವಿಚಾರ ತಿಳಿದಾಗ ಭಾರತದ ವಾಹನ ಪ್ರಿಯರು ರೋಮಾಂಚಿತರಾಗಿದ್ದರು. ಹಳೆಯ ಜೀಪ್‌ಗಳನ್ನು ನೆನೆದು ಅದೇ ಬಗೆಯ ವಾಹನಗಳು ಬರುತ್ತವೆಂಬ ನಿರೀಕ್ಷೆ ಹೊಂದಿದ್ದರು. ಆದರೆ, 2017ರ ಏಪ್ರಿಲ್ 12ರಂದು ‘ಜೀಪ್‘ ಕಂಪನಿಯ ‘ಕಾಂಪಾಸ್‘ ಪರಿಚಿತಗೊಂಡಾಗ ನಿರೀಕ್ಷೆ ‘ಠುಸ್’ ಆಗಿದ್ದೇ ಹೆಚ್ಚು. ಈ ವಾಹನ ಗುಣಮಟ್ಟದಲ್ಲಿ ಶ್ರೇಷ್ಠವೇ ಆಗಿದ್ದರೂ ವಿನ್ಯಾಸದಲ್ಲಿ ಪರಿಪೂರ್ಣ ಆಫ್‌ ರೋಡ್ ವಾಹನದಂತೆ ಕಾಣುತ್ತಿರಲಿಲ್ಲ. ಬದಲಿಗೆ ಈಗಾಗಲೇ ಭಾರತದಲ್ಲಿ ಮಾರಾಟವಾಗುತ್ತಿದ್ದ ಸಾಮಾನ್ಯ ಎಸ್‌ಯುವಿಗಳಂತೆ ಇತ್ತು. ಹೌದು, ಜೀಪ್ ಕಂಪನಿಯ ಪ್ರಕಾರ ‘ಕಾಂಪಾಸ್’

ಪರಿಪೂರ್ಣ ಆಫ್ ರೋಡ್ ವಾಹನ ಅಲ್ಲ. ಆದರೆ, 4X4 ವ್ಯವಸ್ಥೆ ಇದ್ದುದರಿಂದ ಇದನ್ನು ಎಲ್ಲ ಬಗೆಯ ರಸ್ತೆಗಳಲ್ಲಿ ಓಡಿಸುವ ಸಾಧ್ಯತೆ ಸಿಕ್ಕಿತ್ತು. ಇದೀಗ ‘ಜೀಪ್‘ ಪರಿಚಯಿಸಿರುವ ‘ರ್‍ಯಾಂಗ್ಲರ್’ ಭಾರತದ ಆಫ್ ರೋಡ್ ಪ್ರಿಯರನ್ನು ಸಂತೃಪ್ತಗೊಳಿಸುವ ಎಲ್ಲ ಲಕ್ಷಣ ಹೊಂದಿದೆ. ಅಲ್ಲದೇ, ಜಾಗತಿಕವಾಗಿ ‘ರ್‍ಯಾಂಗ್ಲರ್’ ಈಗಾಗಲೇ ಪ್ರಸಿದ್ಧ ಹೆಸರು. ಆಫ್‌ ರೋಡ್‌ ಕಾರ್ಯಕ್ಷಮತೆಯಲ್ಲಿ ತನ್ನದೇ ಛಾಪನ್ನು ಈಗಾಗಲೇ ಮೂಡಿಸಿದೆ. ಇದೇ ಕಾರಣಕ್ಕಾಗಿ ‘ರ್‍ಯಾಂಗ್ಲರ್’ ಚಾಲನೆಗೆ ಭಾರತೀಯ ವಾಹನ ಪ್ರಿಯರು ತುದಿಗಾಲಲ್ಲಿ ನಿಂತಿದ್ದಾರೆ.

ವಿಶೇಷಗಳೇನು?

ಜೀಪ್ ‘ರ್‍ಯಾಂಗ್ಲರ್’ ಪರಿಪೂರ್ಣ ಆಫ್‌ ರೋಡ್ ವಾಹನ. ಅಲ್ಲದೇ, ಆಫ್‌ ರೋಡ್ ಚಾಲನೆಗೆ ಹೊಸ ಆಯಾಮವನ್ನು ಕೊಟ್ಟಿರುವ ವಾಹನವಿದು. ಆಫ್ ರೋಡ್ ವಾಹನಗಳೆಂದರೆ ಅವು ಸಂಪೂರ್ಣ ಕಚ್ಛಾ ಎಂಬ ಪರಿಕಲ್ಪನೆ ಜಾರಿಯಲ್ಲಿತ್ತು. ಅವುಗಳಲ್ಲಿ ಪವರ್ ಸ್ಟೀರಿಂಗ್ ಇರುತ್ತಿರಲಿಲ್ಲ, ಪವರ್ ವಿಂಡೋಸ್ ಇರುತ್ತಿರಲಿಲ್ಲ. ಹವಾನಿಯಂತ್ರಿತ ವ್ಯವಸ್ಥೆ, ಐಷಾರಾಮಿ ಸೀಟ್‌ಗಳು ಯಾವುವೂ ಇರುತ್ತಿರಲಿಲ್ಲ. ಇದಕ್ಕೆ ಉದಾಹರಣೆ ಮಾರುತಿ ಸುಜುಕಿಯ ‘ಜಿಪ್ಸಿ’. ಜಿಪ್ಸಿಯಲ್ಲಿ 4X4 ಟ್ರಾನ್ಸ್‌ಮಿಷನ್ ಇದೆ ಎನ್ನುವುದನ್ನು ಬಿಟ್ಟರೆ ಬೇರಾವ ಸೌಲಭ್ಯವೂ ಅಕ್ಷರಶಃ ಇಲ್ಲ. ಮಹಿಂದ್ರಾ ಅಂಡ ಮಹಿಂದ್ರಾದ ‘ಥಾರ್’ಕೊಂಚ ವಾಸಿ ಎನ್ನುವುದನ್ನು ಬಿಟ್ಟರೆ ಹೇಳಿಕೊಳ್ಳುವಂತಹ ಸೌಲಭ್ಯಗಳಿಲ್ಲ.

‘ರ್‍ಯಾಂಗ್ಲರ್’ ಸೌಲಭ್ಯಗಳಿಗೆ ಪರ್ಯಾಯನಾಮದಂತಿದೆ. ಅಕ್ಷರಶಃ ಎಲ್ಲ ಆಧುನಿಕ, ಐಷಾರಾಮಿ ಸೌಲಭ್ಯಗಳು ವಾಹನದಲ್ಲಿವೆ. ಮೊದಲನೆಯದಾಗಿ ‘ರ್‍ಯಾಂಗ್ಲರ್’ನ ವಿನ್ಯಾಸ. ಇದು ಪಕ್ಕಾ ಜೀಪ್ ವಿನ್ಯಾಸ. ಹೊರ ವಿನ್ಯಾಸ ಸಂಪೂರ್ಣ ಗಡುಸಾಗಿದೆ. ಆಫ್‌ ರೋಡ್‌ ವಾಹನಕ್ಕೆ ಹೇಳಿ ಮಾಡಿಸಿದಂತಿದೆ. 200 ಮಿಲಿಮೀಟರ್‌ಗೂ ಮೀರಿದ ಗ್ರೌಂಡ್ ಕ್ಲಿಯರೆನ್ಸ್, ವಿಶಾಲವಾದ 18 ಇಂಚಿನ ಚಕ್ರಗಳು ಮೊದಲ ನೋಟಕ್ಕೇ ಸೆಳೆದುಬಿಡುತ್ತವೆ. ಬರೋಬ್ಬರಿ 4,882 ಮಿಲಿಮೀಟರ್ ಉದ್ದದ ದೇಹ ಇದಕ್ಕಿದೆ. ಆದರೆ, ಕೆಲವು ವಿಶೇಷಗಳನ್ನು ಇಲ್ಲಿ ಉಲ್ಲೇಖಿಸಲೇಬೇಕು.

ಮೊದಲನೆಯದಾಗಿ, ‘ರ್‍ಯಾಂಗ್ಲರ್’ನ ರೂಫಿಂಗ್ ಸೌಲಭ್ಯ. ಹಾರ್ಡ್ ಟಾಪ್‌, ಸಾಫ್‌ ಟಾಪ್ ಹಾಗೂ ನೋ ಟಾಪ್ ‘ರ್‍ಯಾಂಗ್ಲರ್’ಗೆ ಇದೆ. ಇಡೀ ರೂಫ್ ಅನ್ನು ಕಳಚಿಡಬಹುದು, ಬೇಕಾದರೆ ಬಟ್ಟೆಯಿಂದ ಮಾಡಿದ ಸಾಫ್ಟ್ ಟಾಪ್ ಅಳವಡಿಸಿಕೊಳ್ಳಬಹುದು, ಇಲ್ಲವಾದರೆ ಫೈಬರ್‌ನಿಂದ ಮಾಡಿದ ಹಾರ್ಡ್ ಟಾಪ್ ಅಳವಡಿಸಿಕೊಳ್ಳಬಹುದು. ಈ ಮೂರೂ ಸೌಲಭ್ಯಗಳಿಗೂ ಅವುಗಳದೇ ಆದ ವಿಶೇಷತೆಗಳಿವೆ. ನೋ ಟಾಪ್‌ನಲ್ಲಿ ವಾಹನ ಅಸ್ಥಿಪಂಜರದಂತೆ ಕಾಣುತ್ತದೆ. ಇದು ವಾಹನಕ್ಕೆ ಗಡಸು ನೋಟ ನೀಡುತ್ತದೆ. ಸಾಫ್ಟ್‌ ಟಾಪ್‌ ಹಾಕಿಕೊಂಡರೆ ಬೇಸಿಗೆಯ ವಾತಾವರಣದಲ್ಲಿ ತಂಪಾಗಿರುತ್ತದೆ. ಮೈಲೇಜ್ ಹೆಚ್ಚುತ್ತದೆ. ಹಾರ್ಡ್ ಟಾಪ್ ಗಟ್ಟಿಮುಟ್ಟಾಗಿರುತ್ತದೆ.

ಅಂತೆಯೇ, ವಾಹನದ ವಿಂಡ್‌ ಶೀಲ್ಡ್‌ ಅನ್ನು ಮಡಚಬಹುದಾದ ವ್ಯವಸ್ಥೆ ಇದೆ. ಬೇಕಾದಾಗ ವಿಂಡ್‌ ಶೀಲ್ಡ್‌ ಅನ್ನು ಕೆಳಕ್ಕೆ ಮಡಚಬಹುದು. ಕಡಿಮೆ ವೇಗದ ಆಫ್‌ ರೋಡ್ ಚಾಲನೆಯಲ್ಲಿ ಇದು ಸಹಕಾರಿ. ಹೆದ್ದಾರಿಗಳಲ್ಲಿ ಸಾಗುವಾಗ ವಿಂಡ್ ಶೀಲ್ಡ್ ಮೇಲೆತ್ತಿಕೊಳ್ಳಬೇಕು. ಇದು ಗಾಳಿಯಿಂದ ರಕ್ಷಿಸುತ್ತದೆ. ಈ ಸೌಲಭ್ಯ ಇಲ್ಲದೇ ಇದ್ದರೆ, ವಿಂಡ್‌ ಶೀಲ್ಡ್ ಮೇಲೇರಿಸಿದ ಸ್ಥಾನದಲ್ಲಿಯೇ ಇರುತ್ತದೆ.

ಎಂಜಿನ್ ಹಾಗೂ ಕಾರ್ಯಕ್ಷಮತೆ:2 ಸಾವಿರ ಕ್ಯೂಬಿಕ್ ಕೆಪಾಸಿಟಿಯ ಪೆಟ್ರೋಲ್‌ ಎಂಜಿನ್ ‘ರ್‍ಯಾಂಗ್ಲರ್’ನಲ್ಲಿದೆ. 268 ಬಿಎಚ್‌ಪಿ ಶಕ್ತಿ ಹಾಗೂ 400 ಎನ್‌ಎಮ್‌ (ನ್ಯೂಟನ್ ಮೀಟರ್) ಟಾರ್ಕ್‌ ಇದೆ. ಎಂತಹ ಕಡಿದಾದ ರಸ್ತೆಗಳಲ್ಲೂ ಇದು ಮುನ್ನುಗುತ್ತದೆ. ಅತಿ ಕಡಿಮೆ ವೇಗದಲ್ಲಿ ಗರಿಷ್ಠ ಶಕ್ತಿ ನೀಡುತ್ತದೆ. ಹಾಗಾಗಿ, ನಿರಾಯಾಸವಾಗಿ ಕಲ್ಲು ಬಂಡೆಗಳುಳ್ಳ ರಸ್ತೆಗಳಲ್ಲೂ ಸಾಗುತ್ತದೆ. ನಯವಾದ ಪೆಟ್ರೋಲ್ ಎಂಜಿನ್ ಇರುವ ಕಾರಣ, ಹೆದ್ದಾರಿಗಳಲ್ಲಿ ಗರಿಷ್ಠ ವೇಗದಲ್ಲಿ ಸಾಗುತ್ತದೆ.

ಇಲ್ಲೇ ಉಲ್ಲೇಖಾರ್ಹ ವಿಚಾರವೆಂದರೆ, ಈ ವಾಹನಕ್ಕೆ ‘ಜೀಪ್‌’ನ ‘ಟ್ರಯಲ್‌ ರೇಟೆಡ್’ ಮುದ್ರೆ ಸಿಕ್ಕಿದೆ. ನಾವು ಆಫ್‌ ರೋಡ್ ಚಾಲನೆಯನ್ನು ಹಲವು ಆಯಾಮಗಳಲ್ಲಿ ಅರ್ಥ ಮಾಡಿಕೊಳ್ಳಬಹುದು. ಇವನ್ನು 5 ವಿಭಾಗಗಳಾಗಿ ವಿಂಗಡಿಸಲಾಗಿದೆ. ಅವೆಂದರೆ, ಟ್ರ್ಯಾಕ್ಷನ್ (ಕಡಿದು ರಸ್ತೆ), ವಾಟರ್ ಫೋರ್ಜಿಂಗ್ (ನೀರು ತುಂಬಿದ ರಸ್ತೆ), ಮ್ಯಾನ್ಯುವೆರಬಿಲಿಟಿ (ಕಡಿದಾದ ತಿರುವುಗಳಲ್ಲಿ ಸ್ಥಿರತೆ), ಆರ್ಟಿಕ್ಯುಲೇಷನ್ (ರಸ್ತೆಯನ್ನು ಬಿಗಿಯಾಗಿ ಹಿಡಿದುಕೊಳ್ಳಬಲ್ಲ ಚಕ್ರಗಳು), ಗ್ರೌಂಡ್ ಕ್ಲಿಯರೆನ್ಸ್ (ನೆಲ‌ಕ್ಕೂ ವಾಹನದ ದೇಹಕ್ಕೂ ಇರುವ ಅಂತರ). ಈ ಕ್ಷೇತ್ರಗಳಲ್ಲಿ ಯಾವ ವಾಹನ ಶ್ರೇಷ್ಠವಾಗಿರುವುದೋ, ಅದು ಅತ್ಯುತ್ತಮ ಆಫ್‌ ರೋಡ್ ವಾಹನವಾಗಬಲ್ಲದು. ಉದಾಹರಣೆಗೆ ಆರ್ಟಿಕ್ಯುಲೇಷನ್‌ ಕ್ಷೇತ್ರಕ್ಕೆ ಬಂದರೆ, ದೊಡ್ಡ ಬಂಡೆಯೊಂದನ್ನು ವಾಹನ ಹತ್ತಬೇಕು ಎಂದುಕೊಳ್ಳೋಣ. ಚಕ್ರವೊಂದು ಬಂಡೆಯ ಮೇಲೆ ಹತ್ತಿ‌ದಾಗ ಅದರ ಪಕ್ಕದ ಚಕ್ರ ನೆಲಕ್ಕೆ ಅಂಟಿಕೊಂಡಿರಲೇಬೇಕು. ಅದು ನೆಲ ಬಿಟ್ಟು ಮೇಲೆದ್ದರೆ ವಾಹನ ಸಮತೋಲನ ಕಳೆದುಕೊಂಡು ಉರುಳುತ್ತದೆ. ‘ರ್‍ಯಾಂಗ್ಲರ್’ ಈ ಸೌಲಭ್ಯ ಸೇರಿದಂತೆ ಮಿಕ್ಕೆಲ್ಲ ವಿಚಾರದಲ್ಲೂ ಅತಿ ಶ್ರೇಷ್ಠ ಗುಣಮಟ್ಟ ಹೊಂದಿದೆ. 8 ಸ್ಪೀಡ್ ಆಟೊಮ್ಯಾಟಿಕ್ ಟ್ರಾನ್ಸ್‌ಮಿಷನ್ ಇದೆ. ಎಲ್ಲ ಚಕ್ರಗಳಿಗೂ ಶಕ್ತಿ ಇರುವ ಆಲ್‌ ವ್ಹೀಲ್ ಡ್ರೈವ್ ಸೌಲಭ್ಯ ಇದಕ್ಕಿದೆ.

ಸುರಕ್ಷೆ ಅತ್ಯುತ್ತಮ: ಆಫ್ ರೋಡ್‌ ವಾಹನಗಳಲ್ಲೂ ಎಲ್ಲ ಸುರಕ್ಷಾ ಸೌಲಭ್ಯ ಇರಬೇಕು ಎನ್ನುವುದನ್ನು ತೋರಿಸಿಕೊಟ್ಟಿದ್ದು ಜಾಗತಿಕ ಕಂಪನಿಗಳೇ. ‘ರ್‍ಯಾಂಗ್ಲರ್’ನಲ್ಲಿ ಆ್ಯಂಟಿ ಲಾಕ್ ಬ್ರೇಕಿಂಗ್ ಸಿಸ್ಟಂ (ಎಬಿಎಸ್), ಎಲೆಕ್ಟ್ರಾನಿಕ್ ಬ್ರೇಕ್ ಡಿಸ್ಟ್ರಿಬ್ಯೂಷನ್ (ಇಬಿಡಿ), ಮಲ್ಟಿಪ‌ಲ್ ಏರ್ ಬ್ಯಾಗ್ ಸೌಲಭ್ಯ ಎಲ್ಲ ಅವತರಣಿಕೆಗಳಲ್ಲೂ ಸಾಮಾನ್ಯವಾಗಿದೆ. ಈ ಸೌಲಭ್ಯಗಳು ಇರಲೇಬೇಕೆಂಬ ನಿಯಮವೂ ಈಗ ಜಾರಿಯಲ್ಲಿದೆ. ಆದರೆ, ‘ರ್‍ಯಾಂಗ್ಲರ್’ನ ವಿಶೇಷ ಇಷ್ಟು ಮಾತ್ರವಲ್ಲ. ಇವೆಲ್ಲ ಸೌಲಭ್ಯಗಳಿದ್ದರೂ ಅಪಘಾತಗಳಾದಾಗ ಜೀವಕ್ಕೆ ರಕ್ಷಣೆ ಸಿಗುತ್ತದೆ ಎಂದು ಹೇಳಲಾಗದು. ಆದರೆ, ಭಾರತದ ಬಹುತೇಕ ವಾಹನಗಳಲ್ಲಿ ಅಪಘಾತದ ಏಟನ್ನು ತಡೆದುಕೊಳ್ಳಬ‌ಲ್ಲ ಗಟ್ಟಿಮುಟ್ಟಾದ ದೇಹ ಇಲ್ಲ. ಅತಿ ವೇಗದಲ್ಲಿ ಅಪಘಾತವಾದಾಗ ವಾಹನದ ದೇಹ ಅಪ್ಪಚ್ಚಿಯಾಗುವುದೇ ಹೆಚ್ಚು. ಏಟನ್ನು ತಡೆದುಕೊಂಡು ಒಳಗಿರುವ ಪ್ರಯಾಣಿಕರಿಗೆ ನೋವಾಗದಂತೆ ರಕ್ಷಿಸಬಲ್ಲ ದೇಹ ವಾಹನಕ್ಕೆ ಇರಬೇಕು. ಅದಕ್ಕಾಗಿ ವಾಹನದ ಅಡಿಕಟ್ಟನ್ನು ವಿಶೇಷವಾಗಿ ರಚಿಸಬೇಕು. ಎಂಜಿನ್‌ ಭಾಗದ ದೇಹ ಅತಿ ಹೆಚ್ಚು ಗಡುಸಾಗಿರಬೇಕು. ಪ್ರಯಾಣಿಕರು ಕೂರುವ ಭಾಗಕ್ಕೆ ಎಲ್ಲ ದಿಕ್ಕುಗಳಿಂದಲೂ ರಕ್ಷಣೆ ಇರಬೇಕು. ಏಟನ್ನು ತಡೆದುಕೊಳ್ಳಬಲ್ಲ ರಚನೆಗಳು ಬಾಗಿಲುಗಳಲ್ಲಿರಬೇಕು. ಎಲ್ಲ ದಿಕ್ಕುಗಳಲ್ಲೂ ರಕ್ಷಣೆ ನೀಡಲು ಏರ್ ಬ್ಯಾಗ್‌ಗಳು ಇರಬೇಕು.

ಇಷ್ಟೆಲ್ಲಾ ಸೌಲಭ್ಯ ನೀಡಬೇಕೆಂದರೆ ಸಹಜವಾಗಿಯೇ ವಾಹನದ ಬೆಲೆ ಹೆಚ್ಚಾಗುತ್ತದೆ. ಹಾಗಾಗಿ, ಭಾರತೀಯ ವಾಹನಗಳಲ್ಲಿ ಈ ಸೌಲಭ್ಯಗಳಿರುವುದಿಲ್ಲ.‘ರ್‍ಯಾಂಗ್ಲರ್’ ಈ ಎಲ್ಲ ವಿಚಾರಗಳನ್ನು ಗಮನದಲ್ಲಿಟ್ಟುಕೊಂಡು ನಿರ್ಮಾಣವಾಗಿದೆ. ವಿಶೇಷವೆಂದರೆ, ಸಾಮಾನ್ಯವಾಗಿ ಸುರಕ್ಷೆಯಲ್ಲಿ ಮುಂದಿರುವ ವಾಹನಗಳಲ್ಲೂ ವಾಹನದ ತಳಭಾಗಕ್ಕೆ ಗಮನ ಕೊಟ್ಟಿರುವುದಿಲ್ಲ. ‘ರ್‍ಯಾಂಗ್ಲರ್’ನ ತಳಭಾಗದಲ್ಲಿ ವಾಹನದ ಎಂಜಿನ್‌ ಸೇರಿದಂತೆ ಇತರ ಸೂಕ್ಷ್ಮ ಭಾಗಗಳನ್ನು ರಕ್ಷಿಸಲು ಗಡುಸಾದ ಕವಚಗಳನ್ನು ಅಳವಡಿಸಲಾಗಿದೆ. ಹಾಗಾಗಿ, ವಾಹನದ ಎಂಜಿನ್‌ಗೂ ಇಲ್ಲಿ ಸುರಕ್ಷೆ ಸಿಕ್ಕಿದೆ.

ಮೈಲೇ‌ಜ್ ಉತ್ತಮ:ಲೀಟರ್ ಪೆಟ್ರೋಲಿಗೆ 8 ರಿಂದ 12 ಕಿಲೋಮೀಟರ್‌ ಮೈಲೇಜ್‌ ‘ರ್‍ಯಾಂಗ್ಲರ್’ ನೀಡುತ್ತದೆ. ಈ ವಾಹನದ ವಿನ್ಯಾಸ, ತೂಕ, ಸೌಲಭ್ಯಗಳಿಗೆ ಇದು ಕಡಿಮೆ ಮೈಲೇಜ್ ಏನಲ್ಲ. ಅದೂ ಅಲ್ಲದೇ, ‘ರ್‍ಯಾಂಗ್ಲರ್’ ಕೊಳ್ಳುವವರು ಮೈಲೇಜ್‌ ಮುಖವನ್ನು ನೋಡುವುದೂ ಇಲ್ಲ.

ಹಣಕ್ಕೆ ತಕ್ಕ ಮೌಲ್ಯ: ಜೀಪ್‌ ‘ರ್‍ಯಾಂಗ್ಲರ್’ಭಾರತದಲ್ಲೀಗ ಬಿಡುಗಡೆಗೊಂಡಿದೆ. ‘ರ್‍ಯಾಂಗ್ಲರ್’ಚಾಲನೆಗೆ ಭಾರತದ ವಾಹನ ಪ್ರಿಯರು ತುದಿಗಾಲಲ್ಲಿ ನಿಂತಿದ್ದಾರೆ. ವಾಹನದ ಬೆಲೆ ಭಾರತದಲ್ಲಿ ₹ 63.94 ಲಕ್ಷದಿಂದ ಶುರುವಾಗುತ್ತದೆ. ಇದು ಹೆಚ್ಚೆಂದು ಭಾವಿಸಬೇಕಿಲ್ಲ. ಏಕೆಂದರೆ, ಈ ವಾಹನವನ್ನು ಕೊಂಡುಕೊಳ್ಳುವ ವರ್ಗ ಇದನ್ನು ಭರಿಸಬಲ್ಲ ಶಕ್ತಿ ಹೊಂದಿರುತ್ತದೆ. ಅಂತೆಯೇ, ಹಣಕ್ಕೆ ತಕ್ಕ ಮೌಲ್ಯ ಈ ವಾಹನಕ್ಕಿದೆ. ಜೀಪ್‌ ‘ರ್‍ಯಾಂಗ್ಲರ್’ನಂತಹ ವಾಹನಗಳು

ಜೀವಮಾನವಿಡೀ ಇಟ್ಟುಕೊಳ್ಳಬಹುದಾದ ಶ್ರೇಷ್ಠತೆಯನ್ನು ಹೊಂದಿರುತ್ತವೆ.

ಧೋನಿ ಅಂಗಳಕ್ಕೆ ಶೆರೋಕೆ

ಕ್ರಿಕೆಟಿಗ ಮಹೇಂದ್ರ ಸಿಂಗ್ ಧೋನಿ ಅವರ‌ ವಾಹನ‌ ಪ್ರೀತಿಯ ಬಗ್ಗೆ ಯಾರಿಗೆ ತಾನೇ ತಿಳಿದಿಲ್ಲ. ಅವರ ಗ್ಯಾರೇಜಿಗೆ ಇದೀಗ ಜೀಪ್ ಗ್ರ್ಯಾಂಡ್ ಶೆರೋಕಿ ಸೇರ್ಪಡೆಯಾಗಿದೆ.

ಭಾರತೀಯ ಸೇನೆ‌ಗೆ ಸೇರಿರುವ‌ ಧೋನಿ‌ ಅತ್ತ ಕಾಶ್ಮೀರದಲ್ಲಿರುವಾಗಲೇ ಪತ್ನಿ ಸಾಕ್ಷಿ ಸಿಂಗ್ ಧೋನಿ,‌ ಇನ್‌ಸ್ಟಾಗ್ರಾಂನಲ್ಲಿಸಂದೇಶ ಹಾಕಿದ್ದಾರೆ. 'ಮನೆಗೆ ರೆಡ್ ಬೀಸ್ಟ್‌ (ಕೆಂಪು ಬಣ್ಣದ ಶೆರೋಕಿ) ಬಂದಿದೆ' ಎಂದು ಚಿತ್ರ ಸಮೇತ ಪೋಸ್ಟ್ ಪ್ರಕಟಿಸಿದ್ದಾರೆ.

ಧೋನಿ ಬಳಿ ಸಾಕಷ್ಟು ಐಷಾರಾಮಿ ಬೈಕ್ ಹಾಗೂ ಕಾರ್ ಇವೆ. ಕಾರುಗಳ ಪೈಕಿ ಫೆರಾರಿ 599 ಜಿಟಿಒ, ಹಮ್ಮರ್‌ ಎಚ್ 2, ಜಿಎಂಸಿ ಸಿಯೆರಾ, ಬೈಕುಗಳ ಪೈಕಿ ಕವಾಸಾಕಿ ನಿಂಜಾ‌ ಎಚ್ 2, ಕಾನ್ ಫೆಡರೇಟ್ ಹೆಲ್‌ಕ್ಯಾಟ್, ಸುಜುಕಿ ಹೊಯಾಬುಸಾ, ನಾರ್ಟನ್ ವಿಂಟೇಜ್ ಇವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.