ADVERTISEMENT

Maruti Invicto | ₹20ಲಕ್ಷ ಬೆಲೆಯ ಕಾರುಗಳ ವಿಭಾಗಕ್ಕೆ ಕಾಲಿಟ್ಟ ಮಾರುತಿ

ಪಿಟಿಐ
Published 5 ಜುಲೈ 2023, 11:08 IST
Last Updated 5 ಜುಲೈ 2023, 11:08 IST
   

ನವದೆಹಲಿ: ‘ಇನ್‌ವಿಕ್ಟೊ‘ ಎಂಬ ಮೂರು ಸಾಲಿನ ಆಸನಗಳುಳ್ಳ ಎಂಪಿವಿ ಕಾರು ಪರಿಚಯಿಸುವ ಮೂಲಕ ಮಾರುತಿ ಸುಜುಕಿ ₹20ಲಕ್ಷ ಮೇಲಿನ ಬೆಲೆಯ ಕಾರುಗಳ ವಿಭಾಗಕ್ಕೆ ಕಾಲಿರಿಸಿದೆ.

ಮೂರು ಸಾಲುಗಳ ಕಾರುಗಳ ವಿಭಾಗದಲ್ಲಿ ಇನ್‌ವಿಕ್ಟೊ ಎಂಬ ಎಂಪಿವಿ ಮಾದರಿಯನ್ನು ಮಾರುತಿ ಪರಿಚಯಿಸಿದ್ದು, ಇದರ ಬೆಲೆ ₹24.8ಲಕ್ಷದಿಂದ ₹28.4ಲಕ್ಷದವರೆಗೆ ಇರಲಿದೆ.

ಟೊಯೊಟಾ ಹಾಗೂ ಮಾರುತಿ ಸುಜುಕಿ ನಡುವಿನ ಜಾಗತಿಕ ಮಟ್ಟದ ಒಡಂಬಡಿಕೆಯ ಭಾಗವಾಗಿ ಈ ಹೈಬ್ರಿಡ್ ಕಾರು ಮಾದರಿಯನ್ನು ಟೊಯೊಟಾ ಕಿರ್ಲೊಸ್ಕರ್ ಮೊಟಾರ್ಸ್‌ನಿಂದ ಮಾರುತಿ ಪಡೆದಿದೆ. ಈಗಾಗಲೇ ಇನ್ನೋವಾ ಹೈಕ್ರಾಸ್‌ ಅನ್ನು ಟೊಯೊಟಾ ಭಾರತೀಯ ಮಾರುಕಟ್ಟೆಯಲ್ಲಿ ಪರಿಚಯಿಸಿದೆ. ಒಂದಷ್ಟು ಬದಲಾವಣೆಗಳೊಂದಿಗೆ ಅದೇ ಮಾದರಿಯನ್ನು ಮಾರುತಿ ಸುಜುಕಿಗೆ ನೀಡಿದ್ದು, ಇನ್‌ವಿಕ್ಟೊ ಹೆಸರಿನಲ್ಲಿ ಕಂಪನಿ ಪರಿಚಯಿಸಿದೆ.

ADVERTISEMENT

ಈ ವಿಷಯ ಕುರಿತು ಮಾಹಿತಿ ನೀಡಿದ ಮಾರುತಿ ಸುಜಿಕಿ ವ್ಯವಸ್ಥಾಪಕ ನಿರ್ದೇಶಕ ಹಾಗೂ ಸಿಇಒ ಹಿಸಾಷಿ ಟಕೇಚಿ, ‘ನೆಕ್ಸಾ ಗ್ರಾಹಕರ ಅಭಿರುಚಿಗೆ ತಕ್ಕಂತೆ ಈ ಮಾದರಿಯನ್ನು ವಿನ್ಯಾಸಗೊಳಿಸಲಾಗಿದೆ. ಉತ್ತಮ ವಿನ್ಯಾಸದ ಮೂರು ಸಾಲುಗಳ ಆಸನವುಳ್ಳ ಪ್ರೀಮಿಯಂ ಕಾರು ಇದಾಗಿದೆ’ ಎಂದಿದ್ದಾರೆ.

‘ಗ್ರ್ಯಾಂಡ್ ವಿಟಾರಾ, ಫ್ರಾಂಕ್ಸ್‌ ಮತ್ತು ಜಿಮ್ನಿ ಕಾರುಗಳ ಮೂಲಕ ಮಾರುತಿ ಸುಜುಕಿ ಎಸ್‌ಯುವಿ ಮಾರುಕಟ್ಟೆ ಮೇಲೆ ತನ್ನ ಹಿಡಿತ ಸಾಧಿಸುತ್ತಿದೆ. ಈ ವಿಭಾಗದಲ್ಲಿ ಕಂಪನಿಯು ಸದ್ಯ ಶೇ 8.5ರಷ್ಟು ಪಾಲುದಾರಿಕೆ ಹೊಂದುವ ಮೂಲಕ ಎರಡನೇ ಸಾಲಿನಲ್ಲಿದೆ. ಇದು ಬರುವ ವರ್ಷದೊಳಗಾಗಿ ಶೇ 20ಕ್ಕೆ ಏರುವ ಸಾಧ್ಯತೆ ಇದೆ’ ಎಂದಿದ್ದಾರೆ.

ಕಂಪನಿಯ ಅಧಿಕಾರಿ ಶ್ರೀವಾಸ್ತ ಅವರು ಪ್ರತಿಕ್ರಿಯಿಸಿ, ‘₹20ಲಕ್ಷಕ್ಕೂ ಹೆಚ್ಚಿನ ಬೆಲೆಯ ಕಾರುಗಳ ವಿಭಾಗದಲ್ಲಿ ಇನ್‌ವಿಕ್ಟೊ ಮೊದಲ ಕಾರು. ಈಗಾಗಲೇ ಆರು ಸಾವಿರ ಕಾರುಗಳಿಗೆ ಬೇಡಿಕೆ ಬಂದಿದೆ. 2 ಲೀಟರ್ ಪೆಟ್ರೋಲ್ ಎಂಜಿನ್‌ ಹೊಂದಿರುವ ಈ ಕಾರು ಹೈಬ್ರಿಡ್ ತಂತ್ರಜ್ಞಾನ ಹೊಂದಿದೆ. ಹೀಗಾಗಿ ಪ್ರತಿ ಲೀಟರ್ ಪೆಟ್ರೋಲ್‌ಗೆ 23.24ಕಿ.ಮೀ.ಯಷ್ಟು ಇಂಧನ ಕ್ಷಮತೆ ಹೊಂದಿದೆ. ಏಳು ಮತ್ತು ಎಂಟು ಆಸನಗಳ ಮಾದರಿಗಳಲ್ಲಿ ಇನ್‌ವಿಕ್ಟೊ ಲಭ್ಯ’ ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.