ನವದೆಹಲಿ: ನಿಸಾನ್ ಇಂಡಿಯಾ ಕಂಪನಿಯು ತನ್ನ ಬಹು ನಿರೀಕ್ಷಿತ ಬಿ–ಎಸ್‌ಯುವಿ ನಿಸಾನ್ ಮ್ಯಾಗ್ನೈಟ್ ಅನಾವರಣಗೊಳಿಸಿದೆ. ನವೆಂಬರ್‌ನಲ್ಲಿ ಇದನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುವ ಯೋಜನೆ ಹೊಂದಿದೆ.
ಭಾರತದ ಮಾರುಕಟ್ಟೆಗೆ ‘ನಿಸಾನ್ ನೆಕ್ಸ್ಟ್’ ಕಾರ್ಯತಂತ್ರದ ಭಾಗವಾಗಿ ಹೊರತಂದಿರುವ ಕಂಪನಿಯ ಮೊದಲ ಉತ್ಪನ್ನ ಇದಾಗಿದೆ. ‘ಭಾರತದಲ್ಲೇ ತಯಾರಿಸಿ, ವಿಶ್ವಕ್ಕಾಗಿ ತಯಾರಿಸಿ’ ತತ್ವದ ಅಡಿ ಇದನ್ನು ಅಭಿವೃದ್ಧಿಪಡಿಸಲಾಗಿದೆ ಎಂದು ಕಂಪನಿ ತಿಳಿಸಿದೆ.
‘ಗ್ರಾಹಕರಿಗೆ ಅತ್ಯುತ್ತಮ ಅನುಭವ ಸಿಗುವಂತೆ ಮಾಡುವುದು ಕಂಪನಿಯ ಆದ್ಯತೆ. ಅದನ್ನು ಈ ಕಾರು ಮತ್ತೊಮ್ಮೆ ಸಾಬೀತು ಮಾಡಿಕೊಡಲಿದೆ. ನಿಸಾನ್ ಭಾರತದಲ್ಲಿ ಪ್ರಾಥಮಿಕ ಬ್ರ್ಯಾಂಡ್ ಆಗಿ ಮುಂದುವರಿಯಲಿದೆ’ ಎಂದು ನಿಸಾನ್ ಮೋಟರ್ ಇಂಡಿಯಾದ ಅಧ್ಯಕ್ಷ ಸಿನನ್ ಒಜೋಕ್ ತಿಳಿಸಿದ್ದಾರೆ.
1 ಲೀಟರ್ ಟರ್ಬೊಪೆಟ್ರೋಲ್ ಎಂಜಿನ್ ಹೊಂದಿದ್ದು, ಕಿಯಾ ಸಾನೆಟ್, ಮಾರುತಿ ವಿತಾರಾ ಬ್ರೆಜಾ, ಹುಂಡೈ ವೆನ್ಯು, ಟಾಟಾ ನೆಕ್ಸಾನ್ ಮತ್ತು ಮಹೀಂದ್ರಾ ಎಕ್ಸ್‌ಯುವಿ 300ಗೆ ಪೈಪೋಟಿ ನೀಡುವ ನಿರೀಕ್ಷೆ ಇದೆ.
‘ದೇಶದಲ್ಲಿ ಬಿ–ಎಸ್‌ಯುವಿ ಜನಪ್ರಿಯತೆ ಹೆಚ್ಚಾಗುತ್ತಿದೆ. ಹೀಗಾಗಿ ಕಾಂಪ್ಯಾಕ್ಟ್ ಎಸ್‌ಯುವಿ ವಿಭಾಗವನ್ನು ಮರುವ್ಯಾಖ್ಯಾನಿಸಲು ಮತ್ತು ಗ್ರಾಹಕರ ನಿರೀಕ್ಷೆಗಳನ್ನು ಮೀರಿ ನಿಲ್ಲಲು ಇದನ್ನು ತಯಾರಿಸಲಾಗಿದೆ’ ಎಂದು ನಿಸಾನ್ ಮೋಟರ್ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕ ರಾಕೇಶ್ ಶ್ರೀವಾಸ್ತವ ತಿಳಿಸಿದ್ದಾರೆ.
60–40 ಸ್ಪ್ಲಿಟ್ ಫೋಲ್ಡಿಂಗ್ ರಿಯರ್ ಸೀಟ್ಸ್, 336 ಲೀಟರ್ ಲಗೇಜ್ ಸ್ಪೇಸ್, ಟೈರ್ ಪ್ರೆಷರ್ ಮಾನಿಟರ್ ಸಿಸ್ಟಂ, 8 ಇಂಚು ಇನ್ಫೊಟೇನ್ಮೆಂಟ್ ಡಿಸ್‌ಪ್ಲೇ ಹಾಗೂ 50ಕ್ಕೂ ಅಧಿಕ ಕನೆಕ್ಟೆಡ್ ಫೀಚರ್ಸ್ ಒಳಗೊಂಡಿದೆ ಈ ಕಾರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.