ಟಾಟಾ ಮೋಟರ್ಸ್ ತನ್ನ ಜನಪ್ರಿಯ ಕಾಂಪ್ಯಾಕ್ಟ್ ಎಸ್‌ಯುವಿ ನೆಕ್ಸಾನ್‌ನ ಸೀಮಿತ ಅವತರಣಿಕೆ ಕ್ರೇಜ್ ಅನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. 1 ಲಕ್ಷ ನೆಕ್ಸಾನ್ ಸಿಎಸ್‌ಯುವಿಗಳು ಮಾರಾಟವಾದ ಸಂಭ್ರಮದಲ್ಲಿ ಈ ಲಿಮಿಟೆಡ್ ಎಡಿಷನ್ ಕ್ರೇಜ್ ಮಾರುಕಟ್ಟೆಗೆ ಬಂದಿದೆ.
ಸಾಮಾನ್ಯ ಕ್ರೇಜ್‌ಗಿಂತಲೂ ಹತ್ತು ಹೊಸ ಬದಲಾವಣೆಗಳನ್ನು ಲಿಮಿಟೆಡ್ ಎಡಿಷನ್ ಕ್ರೇಜ್ ಒಳಗೊಂಡಿದೆ. ಅತ್ಯಾಕರ್ಷಕ ಬಣ್ಣಗಳ ನೆಕ್ಸಾನ್ ಕ್ರೇಜ್‌ನಲ್ಲಿ ತೀರಾ ಹೊಳಪಿನ ‘ಹೈಲೈಟ್ಸ್’ಗಳನ್ನು ಸೇರಿಸಲಾಗಿದೆ. ಇದು ಲಿಮಿಟೆಡ್ ಕ್ರೇಜ್‌ನ ಆಕರ್ಷಣೆಯನ್ನು ಮತ್ತಷ್ಟು ಹೆಚ್ಚಿಸಿದೆ.
ಹೊಸ ಟ್ರೋಮ್ಸೊ ಬ್ಲ್ಯಾಕ್ ಬಣ್ಣವನ್ನು ಲಿಮಿಟೆಡ್ ಎಡಿಷನ್ ಕ್ರೇಜ್‌ಗೆ ನಿಡಲಾಗಿದೆ. ಈ ಬಣ್ಣದ ನೆಕ್ಸಾನ್‌ನ ರೂಫ್‌ಗೆ ಸೋನಿಕ್ ಸಿಲ್ವರ್ ಬಣ್ಣ ನೀಡಲಾಗಿದೆ. ಮಿರರ್ ಮತ್ತು ಹನೀಬೀ ಕಾಂಬಿ ಗ್ರಿಲ್‌ನ ಇನ್ಸರ್ಟ್‌ಗಳಿಗೆ ಹೊಳಪಿನ ಕೇಸರಿ ಬಣ್ಣ ನೀಡಲಾಗಿದೆ. ಕಾರಿನ ದೇಹದ ನಾಲ್ಕೂ ಕಡೆ ಕ್ರೇಜ್ ಬ್ಯಾಡ್ಜ್ ನೀಡಲಾಗಿದೆ.
ಕೇಸರಿ ಬಣ್ಣದ ಇನ್ಸರ್ಟ್ಸ್ ಇರುವ ಸೀಟ್ ಫ್ಯಾಬ್ರಿಕ್, ಸೀಟಿನ ಹೊಲಿಗೆಗೆ ಕೇಸರಿ ದಾರ, ಡ್ಯಾಶ್‌ಬೋರ್ಡ್‌ನ ಎಸಿ ವೆಂಟ್‌ಗಳಿಗೆ ಕೇಸರಿ ಬಣ್ಣದ ಇನ್ಸರ್ಟ್ಸ್, ಪಿಯಾನೊ ಬ್ಲ್ಯಾಕ್ ಸ್ಟೀರಿಂಗ್ ಅಸೆಂಟ್ಸ್ ಲಿಮಿಟೆಡ್ ಎಡಿಷನ್ ಕ್ರೇಜ್‌ನ ಹೈಲೈಟ್‌ಗಳು.
ನೆಕ್ಸಾನ್ ಲಿಮಿಟೆಡ್ ಎಡಿಷನ್ ಕ್ರೇಜ್ ಮ್ಯಾನ್ಯುಯಲ್ ಮತ್ತು ಎಎಂಟಿ ಅವತರಣಿಕೆಗಳಲ್ಲಿ ಲಭ್ಯವಿದೆ. ದೆಹಲಿಯಲ್ಲಿ ಇದರ ಎಕ್ಸ್‌ಷೋರೂಂ ಬೆಲೆ ಕ್ರಮವಾಗಿ ₹ 7.57 ಲಕ್ಷ ಮತ್ತು ₹ 8.17 ಲಕ್ಷದಿಂದ ಆರಂಭವಾಗುತ್ತದೆ.
1.5 ಲೀಟರ್ ಟರ್ಬೊ ಡೀಸೆಲ್ ಮತ್ತು 1.2 ಲೀಟರ್ ಟರ್ಬೊ ಪೆಟ್ರೋಲ್ ಎಂಜಿನ್‌ಗಳಲ್ಲಿ ಲಭ್ಯವಿರುವ ನೆಕ್ಸಾನ್‌ನ ಈ ಎರಡೂ ಎಂಜಿನ್‌ಗಳು 110 ಬಿಎಚ್‌ಪಿ ಶಕ್ತಿ ಉತ್ಪಾದಿಸುತ್ತವೆ. ಮ್ಯಾನುಯಲ್ ಮತ್ತು ಎಎಂಟಿ ಅವತರಣಿಕೆಗಳಲ್ಲಿ 6 ಫಾರ್ವಾರ್ಡ್ ಗಿಯರ್‌ಗಳ ಟ್ರಾನ್ಸ್‌ಮಿಷನ್ ಇದೆ. ಎಲ್ಲಾ ಅವತರಣಿಕೆಯ ನೆಕ್ಸಾನ್‌ನಲ್ಲಿ ಸಿಟಿ, ಎಕೊ ಮತ್ತು ಸ್ಫೋರ್ಟ್ಸ್ ಮೋಡ್ ಆಯ್ಕೆ ಲಭ್ಯವಿದೆ. ಎಲ್ಲಾ ನೆಕ್ಸಾನ್‌ಗಳಲ್ಲಿಎರಡು ಏರ್‌ಬ್ಯಾಗ್ ಮತ್ತು ಇಬಿಡಿ ಜತೆಗೆ ಎಬಿಎಸ್ ಲಭ್ಯವಿದೆ. ನೆಕ್ಸಾನ್ ಗ್ಲೋಬಲ್ ಎನ್‌ಸಿಎಪಿಯಲ್ಲಿ 5 ಸ್ಟಾರ್‌ಗಳ ರೇಟಿಂಗ್ ಹೊಂದಿರುವ ಭಾರತದ ಏಕೈಕ ಕಾರ್ ಎನಿಸಿದೆ.
ವಿದ್ಯುತ್ ಚಾಲಿತ ನೆಕ್ಸಾನ್ ಅನ್ನು ಟಾಟಾ ಮೋಟರ್ಸ್ ಪರೀಕ್ಷಾರ್ಥ ಚಾಲನೆಗೆ ಒಳಪಡಿಸಿದೆ. ಶೀಘ್ರದಲ್ಲೇ ನೆಕ್ಸಾನ್ ಇವಿ ಸಹ ಮಾರುಕಟ್ಟೆಗೆ ಬರುವ ನಿರೀಕ್ಷೆ ಇದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.