ಟಾಟಾ ಮೋಟರ್ಸ್ ಈಚೆಗಷ್ಟೇ ತನ್ನ ಹೊಸ ಸಬ್ ಕಾಂಪ್ಯಾಕ್ಟ್ ಎಸ್‌ಯುವಿ 'ಪಂಚ್' ಅನ್ನು ಅನಾವರಣಗೊಳಿಸಿದೆ. ಕೋವಿಡೋತ್ತರ ಕಾಲದಲ್ಲಿ ಹೆಚ್ಚು ಕಾತರದಿಂದ ನಿರೀಕ್ಷಿಸಿದ್ದ ಕಾರುಗಳಲ್ಲಿ ಪಂಚ್ ಸಹ ಒಂದು. ಅತ್ಯಾಧುನಿಕ ತಂತ್ರಜ್ಞಾನ, ಆಕರ್ಷಕ ವಿನ್ಯಾಸ ಮತ್ತು ಅತ್ಯಾವಶ್ಯಕ ಸವಲತ್ತುಗಳನ್ನು ಹೊಂದಿರುವ ಪಂಚ್ ಎಲ್ಲಾ ವರ್ಗಗಳ ಗ್ರಾಹಕರನ್ನು ಆಕರ್ಷಿಸಲಿದೆ ಎಂದು ನಿರೀಕ್ಷಿಸಲಾಗಿದೆ. ಟಾಟಾ ಮೋಟರ್ಸ್‌ನ ಆಹ್ವಾನದ ಮೇರೆಗೆ 'ಪ್ರಜಾವಾಣಿ', ಟಾಟಾ ಪಂಚ್‌ನ ಟೆಸ್ಟ್‌ಡ್ರೈವ್ ನಡೆಸಿದೆ. ಪಂಚ್‌ನ ಸಾಮರ್ಥ್ಯ, ವಿನ್ಯಾಸ, ಹೆಗ್ಗಳಿಕೆಗಳ ಕುರಿತ ವಿವರ ಇಲ್ಲಿದೆ
ವಿನ್ಯಾಸ
ಟಾಟಾ ಪಂಚ್‌ನ ವಿನ್ಯಾಸ ಅತ್ಯಾಕರ್ಷಕವಾಗಿದೆ. ಟಾಟಾ ಮೋಟರ್ಸ್‌ನ 2.0 ವಿನ್ಯಾಸ ಕಾರ್ಯಕ್ರಮದ ಅಡಿಯಲ್ಲಿ ಪಂಚ್ ಅನ್ನು ವಿನ್ಯಾಸ ಮಾಡಲಾಗಿದೆ. ಈ ಕಾರ್ಯಕ್ರಮದ ಅಡಿಯಲ್ಲಿ ಬಿಡುಗಡೆ ಮಾಡಲಾದ ನೆಕ್ಸಾನ್, ಆಲ್ಟ್ರೋಜ್, ಹ್ಯಾರಿಯರ್ ಮತ್ತು ಸಫಾರಿಯಂತೆ ಪಂಚ್‌ನ ವಿನ್ಯಾಸ ಸಹ ತಾಜಾ ಎನಿಸುತ್ತದೆ. ಒಮ್ಮೆ ನೋಡಿದರೆ ಮತ್ತೆ ನೋಡಬೇಕು ಎನ್ನುವಷ್ಟು ಆಕರ್ಷಕವಾಗಿದೆ.
ಪಂಚ್‌ನ ಮುಂಭಾಗ ಹ್ಯಾರಿಯರ್‌ನಿಂದ ಸ್ಫೂರ್ತಿ ಪಡೆದಂತಿದೆ. ಹೀಗಾಗಿ ದೊಡ್ಡ ಎಸ್‌ಯುವಿಯ ವಿನ್ಯಾಸವಿದ್ದರೂ, ಗಾತ್ರ ಚಿಕ್ಕದಾಗಿರುವ ಕಾರಣ ಪಂಚ್‌ನ ಮುಂಭಾಗ ಮುದ್ದಾಗಿ ಕಾಣುತ್ತದೆ. ಒಂದೆಡೆ ಎಸ್‌ಯುವಿಯ ಗಡಸುತನ ಮತ್ತು ಮತ್ತೊಂದೆಡೆ ಮೃದುಭಾವ ನೀಡುವ ಎಲಿಮೆಂಟ್‌ಗಳು ಸಮ್ಮಿಳಿತವಾಗಿರುವ ವಿನ್ಯಾಸವಿದು.
ಪಂಚ್‌ನ ಹಿಂಭಾಗವನ್ನು ನೆಕ್ಸಾನ್‌ನಿಂದ ಸ್ಫೂರ್ತಿ ಪಡೆದು ವಿನ್ಯಾಸ ಮಾಡಲಾಗಿದೆ. ಹಿಂಬದಿಯಿಂದ ಪಂಚ್, ಬೇಬಿ ನೆಕ್ಸಾನ್‌ನಂತೆ ಭಾಸವಾಗುತ್ತದೆ. ನೆಕ್ಸಾನ್‌ನ ಹಿಂಭಾಗ ಹೆಚ್ಚು ಬ್ಯುಸಿ ಎನಿಸುವಷ್ಟು ಎಲಿಮೆಂಟ್‌ಗಳಿಂದ ಕೂಡಿದೆ. ಆದರೆ ಪಂಚ್‌ನ ಹಿಂಭಾಗ ಬ್ಯುಸಿ ಎನಿಸುವುದಿಲ್ಲ. ಆದರೆ ಆಕರ್ಷಕವಾಗಿದೆ. ಹಿಂಬದಿಯ ಸಣ್ಣ ವಿಂಡ್‌ಶೀಲ್ಡ್, ದೊಡ್ಡ ಬೂಟ್‌ಲಿಡ್, ಸಣ್ಣ ಬಂಪರ್ ಮತ್ತು ಮೊನಚಾದ ಟ್ರೈಆರೊ ಟೇಲ್‌ಲ್ಯಾಂಪ್‌ಗಳ ಸಂಯೋಜನೆ ಚೆನ್ನಾಗಿದೆ.
ಡೈಮಂಡ್ ಕಟ್ ಅಲ್ಹಾಯ್ ವೀಲ್, ಡ್ಯುಯಲ್ ಟೋನ್, ಬಾಡಿ ಕಾಡ್ಲಿಂಗ್ ಇರುವ ಕಾರಣ ಎಡಬದಿ ಮತ್ತು ಬಲಬದಿಯಿಂದಲೂ ಪಂಚ್ ಚೆನ್ನಾಗಿ ಕಾಣುತ್ತದೆ. ಒಟ್ಟಾರೆ ಪಂಚ್‌ನ ವಿನ್ಯಾಸ ಆಕರ್ಷಕವಾಗಿದೆ. ಯುವಜನರು ಮತ್ತು ಮಧ್ಯವಯಸ್ಕರಿಗೂ ಇಷ್ಟವಾಗುವಂತಿದೆ.
ಇಂಟೀರಿಯರ್
ಪಂಚ್‌ನ ಒಳವಿನ್ಯಾಸ ಆಕರ್ಷಕವಾಗಿಯೇ ಇದೆ. ದೊಡ್ಡ ವಿಂಡ್‌ಶೀಲ್ಡ್, ಅಗಲವಾದ ಮತ್ತು ಎತ್ತರವಾದ ಡ್ಯಾಶ್‌ಬೋರ್ಡ್, ಎಂಐಡಿ, ಫ್ಲೋಟಿಂಗ್ ಇನ್ಫೊಟೈನ್‌ಮೆಂಟ್ ಸ್ಕ್ರೀನ್, ಮೃದು ಪ್ಲಾಸ್ಟಿಕ್‌ನ ಡೋರ್‌ಪ್ಯಾಡ್‌ಗಳು ಚೆನ್ನಾಗಿದೆ. ಕಪ್ಪು, ಬೂದು ಮತ್ತು ಬಿಳಿ ಬಣ್ಣಗಳ ಸಂಯೋಜನೆ ಇರುವ ಕಾರಣ ಇಂಟೀರಿಯರ್ ತಾಜಾ ಎನಿಸುತ್ತದೆ. ದೂರದ ಪ್ರಯಾಣದಲ್ಲಿ ಬೋರ್ ಎನಿಸುವುದಿಲ್ಲ. ಹೆಚ್ಚು ಕಣ್ಣು ಕುಕ್ಕುವಂತೆಯೂ ಇಲ್ಲ. ಹೀಗಾಗಿ ಚಾಲನೆ ವೇಳೆ ಕಿರಿಕಿರಿಯಾಗುವುದಿಲ್ಲ.
ಡೋರ್ ಪ್ಯಾಡ್‌ಗಳಲ್ಲಿ ನೀರಿನ ಬಾಟಲ್, ಕೊಡೆ ಇಡಲು ಜಾಗವಿದೆ. ಸೆಂಟ್ರಲ್ ಕನ್ಸೋಲ್‌ನಲ್ಲಿ ಮೊಬೈಲ್, ಬಿಲ್‌ಗಳು, ನೀರಿನ ಬಾಟಲ್, ಕೀಫ್ಯಾಬ್ ಇಡಲು ಪ್ರತ್ಯೇಕ ಜಾಗಗಳಿವೆ. ಗ್ಲೋಬಾಕ್ಸ್ ಸಹ ಆಕರ್ಷಕವಾಗಿದ್ದು ದಾಖಲೆ ಪತ್ರಗಳು, ನ್ಯಾಪ್‌ಕಿನ್ ಇಡಲು ಪ್ರತ್ಯೇಕ ಜಾಗವಿದೆ.ಫೋನ್ ಚಾರ್ಜಿಂಗ್‌ಗೆ ಪ್ರತ್ಯೇಕ ಪೋರ್ಟ್ ನೀಡಲಾಗಿದೆ. ಹೀಗಾಗಿ ಇಂಟೀರಿಯರ್ ಆಕರ್ಷಕವಾಗಿರುವುದರ ಜತೆಗೆ, ಅತ್ಯಾವಶ್ಯಕ ಸವಲತ್ತುಗಳನ್ನೂ ಹೊಂದಿದೆ.
ಇಂಟೀರಿಯರ್‌ನಲ್ಲಿ ಬಳಸಿರುವ ಪ್ಲಾಸ್ಟಿಕ್‌ನ ಗುಣಮಟ್ಟ ಚೆನ್ನಾಗಿದೆ. ಹೆಚ್ಚು ಬಾಳಿಕೆ ಬರುವಂತೆ ಇದೆ. ಕಾರ್ಪೆಟ್ ಮತ್ತು ಫ್ಲೋರ್ ಮ್ಯಾಟ್ ಅನ್ನು ಚೊಕ್ಕಟವಾಗಿ ಅಳವಡಿಸಲಾಗಿದೆ. ಎಲ್ಲಿಯೂ ಕಬ್ಬಿಣ, ನಟ್, ಸ್ಕ್ರೂಗಳು ಕಾಣಿಸದಂತೆ ಮಾಡಲಾಗಿದೆ. ಹೀಗಾಗಿ ಇಂಟೀರಿಯರ್ ಪ್ರೀಮಿಯಂ ಆದ ಅನುಭವ ನೀಡುತ್ತದೆ.
365 ಲೀಟರ್‌ನ ಬೂಟ್ ನೀಡಲಾಗಿದೆ. ಆದರೆ ಬೂಟ್‌ನ ವಿನ್ಯಾಸ ಅಗಲವಾಗಿದೆ. ಎರಡು-ಮೂರ್ ದೊಡ್ಡ ಟ್ರಾಲಿ ಬ್ಯಾಗ್‌ಗಳನ್ನು ಆರಾಮವಾಗಿ ಇಡಬಹುದು. ದೂರದ ಪ್ರವಾಸಕ್ಕೆ ಬೇಕಾಗುವಷ್ಟು ವಸ್ತುಗಳನ್ನು ಹೊತ್ತೊಯ್ಯುವಷ್ಟು ಜಾಗ ಬೂಟ್‌ನಲ್ಲಿದೆ.
ಎಂಜಿನ್ ಮತ್ತು ಡ್ರೈವಿಂಗ್
ಪಂಚ್‌ನಲ್ಲಿ 1.2 ಲೀಟರ್‌ನ, ಮೂರು ಸಿಲಿಂಡರ್‌ಗಳ ಪೆಟ್ರೋಲ್ ಎಂಜಿನ್ ಇದೆ. ಇದು ಟಾಟಾ ಮೋಟರ್ಸ್‌ನ ಕ್ರಯೋಟೆಕ್ ಕುಟುಂಬಕ್ಕೆ ಸೇರಿದ ಎಂಜಿನ್. ಆದರೆ ಎಂಜಿನ್‌ನ ತಂತ್ರಜ್ಞಾನದಲ್ಲಿ ಸ್ವಲ್ಪ ಬದಲಾವಣೆ ಮಾಡಲಾಗಿದೆ. ಈ ಎಂಜಿನ್ ಗರಿಷ್ಠ 113 ನ್ಯೂಟನ್ ಮೀಟರ್ ಟಾರ್ಕ್ ಉತ್ಪಾದಿಸುತ್ತದೆ ಮತ್ತು ಗರಿಷ್ಠ 83 ಬಿಎಚ್‌ಪಿ ಶಕ್ತಿ ಉತ್ಪಾದಿಸುತ್ತದೆ. ಪಂಚ್ ಸ್ವಲ್ಪ ದೊಡ್ಡದಾದ ವಾಹನವಾಗಿರುವ ಕಾರಣ ಈ ಎಂಜಿನ್ ಮತ್ತು ಅದರ ಸಾಮರ್ಥ್ಯ ಕಡಿಮೆ ಎನಿಸುತ್ತದೆ. ಆದರೆ ನಿಜವಾದ ಚಾಲನಾ ಪರಿಸ್ಥಿತಿಗಳಲ್ಲಿ ಎಂಜಿನ್‌ನ ಸಾಮರ್ಥ್ಯ ಕಡಿಮೆ ಎನಿಸುವುದಿಲ್ಲ.
ಗಿಯರ್‌ಗಳ ರೇಷಿಯೊ ದೊಡ್ಡದಾಗಿರುವ ಕಾರಣ, ಎಂಜಿನ್‌ನ ಶಕ್ತಿ ಕಡಿಮೆ ಇದ್ದರೂ ಚಾಲನೆಯಲ್ಲಿ ಹಾಗೆ ಅನಿಸುವುದಿಲ್ಲ. ಬದಲಿಗೆ ವೇಗವರ್ಧನೆ ಉತ್ತಮವಾಗಿದೆ. ಎಸಿ ಚಾಲನೆಯಲ್ಲಿ ಇದ್ದರೂ, ವೇಗವರ್ಧನೆ ಕುಂಠಿತವಾಗುವುದಿಲ್ಲ. ಒಂದು ಟನ್‌ಗಿಂತಲೂ ಹೆಚ್ಚು ತೂಕವಿರುವ ಪಂಚ್ 0-60 ಕಿ.ಮೀ.ವೇಗವನ್ನು 6.5 ಸೆಕೆಂಡ್‌ಗಳಲ್ಲಿ ಮುಟ್ಟುತ್ತದೆ. 90 ಕಿ.ಮೀ. ವೇಗದವರೆಗೂ ವೇಗವರ್ಧನೆ ಉತ್ತಮವಾಗಿದೆ. 100 ಕಿ.ಮೀ. ವೇಗ ಮುಟ್ಟಲು ಸ್ವಲ್ಪ ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ. 0-100 ಕಿ.ಮೀ. ವೇಗ ಮುಟ್ಟಲು 16 ಸೆಕೆಂಡ್ ತೆಗೆದುಕೊಳ್ಳುತ್ತದೆ. ಆದರೆ ಇನ್ ಗಿಯರ್ ಅಕ್ಸಲರೇಷನ್‌ನಲ್ಲಿ ವೇಗ ವರ್ಧನೆ ಉತ್ತಮವಾಗಿದೆ.
ಪಂಚ್ ಪ್ರತಿಗಂಟೆಗೆ ಗರಿಷ್ಠ 150 ಕಿ.ಮೀ.ನಷ್ಟು ವೇಗವನ್ನು ತಲುಪುವ ಸಾಮರ್ಥ್ಯ ಹೊಂದಿದೆ. ಬಹಳ ದೂರದವರೆಗೂ ಇದೇ ವೇಗವನ್ನು ಕಾಯ್ದುಕೊಳ್ಳಲು ಸಾಧ್ಯವಾಗುತ್ತದೆ. ಆದರೆ 100-120 ಕಿ.ಮೀ. ವೇಗದಲ್ಲಿ ದಿನವಿಡೀ ಅನಾಯಾಸವಾಗಿ ಚಾಲನೆ ಮಾಡುವಷ್ಟು ಸಾಮರ್ಥ್ಯವನ್ನು ಈ ಎಂಜಿನ್ ನೀಡುತ್ತದೆ. ಒಟ್ಟಾರೆ ಟಿಯಾಗೊ, ಟಿಗಾರ್ ಮತ್ತು ಆಲ್ಟ್ರೋಜ್‌ಗಳಲ್ಲಿ ಇರುವುದಕ್ಕಿಂತ ಉತ್ತಮವಾಗಿ ಪಂಚ್‌ನಲ್ಲಿ ಈ ಎಂಜಿನ್ ಅನ್ನು ಟ್ಯೂನ್ ಮಾಡಲಾಗಿದೆ.
ಮ್ಯಾನುಯಲ್ ಟ್ರಾನ್ಸ್‌ಮಿಷನ್‌ನಲ್ಲಿ ಚಾಲನೆ ಹೆಚ್ಚು ಮೋಜಿನಿಂದ ಕೂಡಿರುತ್ತದೆ. ಚಾಲಕ ಕಮಾಂಡ್ ಮಾಡಿದಂತೆ ಪಂಚ್ ವರ್ತಿಸುತ್ತದೆ. ಹೆದ್ದಾರಿ, ಘಟ್ಟದ ರಸ್ತೆಗಳಲ್ಲಿ, ನಗರದ ಮಿತಿಯೊಳಗೂ ಚಾಲನೆ ಸುಲಭವಾಗಿದೆ. ಕ್ಲಚ್ ತುಂಬಾ ಹಗುರವಾಗಿದೆ. ಹೀಗಾಗಿ ಗಿಯರ್ ಬದಲಾವಣೆಯಿಂದ ಮಂಡಿ ನೋವು ಬರುವುದಿಲ್ಲ. ಒಟ್ಟಾರೆ ಡ್ರೈವೆಬಿಲಿಟಿ ಉತ್ತಮವಾಗಿದೆ.
ಆರಾಮದಾಯಕ ಚಾಲನೆ ಬಯಸುವವರಿಗೆ ಆಟೊಮೇಟೆಡ್ ಮ್ಯಾನುಯಲ್ ಟ್ರಾನ್ಸ್‌ಮಿಷನ್ (ಎಎಂಟಿ) ಆಯ್ಕೆ ಇದೆ. ನಗರದೊಳಗಿನ ಚಾಲನೆಯಲ್ಲಿ ಎಎಂಟಿ ಉತ್ತಮವಾಗಿ ಸ್ಪಂದಿಸುತ್ತದೆ. ಹೆದ್ದಾರಿಯಲ್ಲೂ ವೇಗವಾದ ಚಾಲನೆಗೆ ತಕ್ಕನಾಗಿ ವರ್ತಿಸುತ್ತದೆ. ಎಎಂಟಿಯಲ್ಲಿ ಗಿಯರ್ ಅಪ್‌ಶಿಫ್ಟ್ ಉತ್ತಮವಾಗಿದೆ. ಆಗಿದೆ, ತರಾತುರಿಯಲ್ಲಿ ಡೌನ್‌ಶಿಫ್ಟ್ ಆಗುವುದಿಲ್ಲ. ತರಾತುರಿಯ ಚಾಲನೆ ಬೇಕಿಸುವವರು ಎಎಂಟಿಯಲ್ಲೇ ಮ್ಯಾನುಯಲ್ ಮೋಡ್ ಅನ್ನು ಆಯ್ಕೆ ಮಾಡಿಕೊಳ್ಳಬಹುದು. ಒಟ್ಟಾರೆ ಎಎಂಟಿ ಅವತರಣಿಕೆಯ ಚಾಲನೆ ಆರಾಮದಾಯಕವಾಗಿದೆ ಎಂದು ಹೇಳಬಹುದು.
ಮ್ಯಾನುಯಲ್ ಮತ್ತು ಎಎಂಟಿ ಅವತರಣಿಕೆಗಳಲ್ಲಿ ಸಿಟಿ ಮತ್ತು ಎಕೊ ಮೋಡ್ ಆಯ್ಕೆಗಳಿವೆ. ಸಿಟಿ ಮೋಡ್ ಡಿಫಾಲ್ಟ್ ಆಯ್ಕೆಯಾಗಿದ್ದು, ವೇಗವರ್ಧನೆ ಉತ್ತಮವಾಗಿದೆ. ಎಕೊ ಮೋಡ್‌ನಲ್ಲಿ ಇಂಧನ ದಕ್ಷತೆ ಹೆಚ್ಚಿದ್ದು, ವೇಗವರ್ಧನೆ ಮತ್ತು ಗರಿಷ್ಠ ವೇಗ ಕಡಿಮೆ ಇದೆ. ಕ್ರೂಸ್ ಕಂಟ್ರೋಲ್ ಸಹ ಇರುವುದರಿಂದ ಹೆದ್ದಾರಿ ಚಾಲನೆ ಆರಾಮದಾಯಕವಾಗಿದೆ.
ಹ್ಯಾಂಡ್ಲಿಂಗ್ ಮತ್ತು ಡ್ರೈವಿಂಗ್
ಟಾಟಾ ಮೋಟರ್ಸ್ ತನ್ನ ಅತ್ಯಾಧುನಿಕ ಪ್ಲಾಟ್‌ಫಾರಂ ಆಲ್ಫಾ ಅನ್ನು ಬಳಸಿಕೊಂಡು ಪಂಚ್ ಎಸ್‌ಯುವಿಯನ್ನು ವಿನ್ಯಾಸ ಮಾಡಿದೆ. ಇದು ಮೊನೊಕಾಕ್ ವಿನ್ಯಾಸವಾಗಿರುವ ಕಾರಣ, ವೇಗದ ಚಾಲನೆಯಲ್ಲೂ ಪಂಚ್ ಕುಲುಕಾಡುವುದಿಲ್ಲ. ಹೆದ್ದಾರಿ ಚಾಲನೆಯಲ್ಲಿ ವೇಗವನ್ನು ಕಾಯ್ದುಕೊಳ್ಳಲು ಇದು ವಿಶ್ವಾಸ ನೀಡುತ್ತದೆ.
ಪಂಚ್ ಅನ್ನು ಒಂದು ಪರಿಪೂರ್ಣ ಎಸ್‌ಯುವಿಯಂತೆಯೇ ವಿನ್ಯಾಸ ಮಾಡಲಾಗಿದೆ ಎಂದು ಟಾಟಾ ಮೋಟರ್ಸ್ ಹೇಳುತ್ತದೆ. ಚಾಲನೆ ವೇಳೆ ಅದು ಅನುಭವಕ್ಕ ಬರುತ್ತದೆ. ಕ್ರಾಸ್‌ಓವರ್ ಮತ್ತು ಹ್ಯಾಚ್‌ಬ್ಯಾಕ್‌ಗಳಲ್ಲಿ ಸೀಟಿಂಗ್ ಪೊಸಿಷನ್ ಹೆಚ್ಚು ಓರೆಯಾಗಿರುತ್ತದೆ. ಪರಿಪೂರ್ಣ ಎಸ್‌ಯುವಿಗಳಲ್ಲಿ ಎತ್ತರದ ಮತ್ತು ಹೆಚ್ಚು ನೇರವಾದ ಸೀಟಿಂಗ್ ಪೊಸಿಷನ್ ಇರುತ್ತದೆ. ಪಂಚ್‌ನಲ್ಲಿಯೂ ಸೀಟಿಂಗ್ ಪೊಸಿಷನ್ ಅನ್ನು ಇದೇ ರೀತಿ ವಿನ್ಯಾಸ ಮಾಡಲಾಗಿದೆ. ಹೀಗಾಗಿ ಚಾಲನೆ ವೇಳೆ ಬಹಳ ದೂರದವರೆಗೂ ಚಾಲಕ ದೃಷ್ಟಿ ಹಾಯಿಸಲು ಸಾಧ್ಯವಾಗುತ್ತದೆ. ಆರಾಮವನ್ನೂ ನೀಡುತ್ತದೆ.
ಪಂಚ್‌ನ ಗ್ರೌಂಡ್ ಕ್ಲಿಯರೆನ್ಸ್ 185 ಎಂಎಂ. ಇದು ಕೆಲವು ದೊಡ್ಡ ಎಸ್‌ಯುವಿಗಳಿಗಿಂತ ಹೆಚ್ಚು. ಹೀಗಾಗಿ ಹಳ್ಳ-ಗುಂಡಿಗಳಿರುವ ರಸ್ತೆಗಳಲ್ಲಿ ಚಾಲನೆ ವೇಳೆ ಹೆಚ್ಚು ತಲೆ ಕೆಡಿಸಿಕೊಳ್ಳಬೇಕಿಲ್ಲ. ವಾಹನದ ಅಡಿಭಾಗ ಎಲ್ಲಿಯೂ ತಾಗುವುದಿಲ್ಲ.
ಪ್ರಯಾಣಿಕರ ಸೀಟಿಂಗ್ ಪೊಸಿಷನ್ ಸಹ ಉತ್ತಮವಾಗಿದೆ. ಹೆಡ್‌ರೂಂ, ಲೆಗ್‌ರೂಂ, ಶೋಲ್ಡರ್ ರೂಂ ಉತ್ತಮವಾಗಿದೆ. 6 ಅಡಿ ಎತ್ತರದ ವ್ಯಕ್ತಿಗಳೂ ಆರಾಮವಾಗಿ ಕೂರಬಹುದು.
ಸುರಕ್ಷತೆ
ಆಲ್ಫಾ ಪ್ಲಾಟ್‌ಫಾರಂನಲ್ಲಿ ವಿನ್ಯಾಸ ಮಾಡಲಾಗಿರುವ ಆಲ್ಟ್ರೋಜ್ ಜಿಎನ್‌ಸಿಎಪಿ ಕ್ರಾಶ್‌ಟೆಸ್ಟ್‌ನಲ್ಲಿ 5 ಸ್ಟಾರ್‌ಗಳ ರೇಟಿಂಗ್ ಪಡೆದಿದೆ. ಅದೇ ಪ್ಲಾಟ್‌ಫಾರಂನಲ್ಲಿ ವಿನ್ಯಾಸ ಮಾಡಲಾಗಿರುವ ಪಂಚ್ ಸಹ ಹೆಚ್ಚು ರೇಟಿಂಗ್ ಪಡೆಯುತ್ತದೆ ಎಂದು ಕಂಪನಿ ವಿಶ್ವಾಸ ವ್ಯಕ್ತಪಡಿಸಿದೆ.
ಪಂಚ್‌ನಲ್ಲಿ ಸುರಕ್ಷತೆಗೆ ಆದ್ಯತೆ ನೀಡಲಾಗಿದೆ. ಹೊಸ ತಲೆಮಾರಿನ ಎಬಿಎಸ್, ಇಬಿಡಿ, ಕಾರ್ನರ್ ಸ್ಟೆಬಿಲಿಟಿ ಕಂಟ್ರೋಲ್, ಎರಡು ಏರ್‌ಬ್ಯಾಗ್‌ಗಳನ್ನು ಎಲ್ಲಾ ಅವತರಣಿಕೆಗಳಲ್ಲಿ ನೀಡಲಾಗಿದೆ.ಚೈಲ್ಡ್ ಸೀಟ್ ಅಳವಡಿಸಲು ಐಸೋಫಿಕ್ಸ್ ನೀಡಲಾಗಿದೆ.
ಬ್ರೇಕ್ ಸ್ವೇ ಕಂಟ್ರೊಲ್ ಎಂಬ ಹೊಸ ಸವಲತ್ತನ್ನು ಪಂಚ್‌ನಲ್ಲಿ ಅಳವಡಿಸಲಾಗಿದೆ. ದಿಢೀರ್ ಬ್ರೇಕಿಂಗ್‌ನಲ್ಲಿ ಎಬಿಎಸ್ ಕೆಲಸಕ್ಕೆ ಬರುತ್ತದೆ. ಆದರೆ ಸಾಮಾನ್ಯ ಬ್ರೇಕಿಂಗ್ ವೇಳೆ ಎಬಿಎಸ್ ಸಕ್ರಿಯವಾಗುವುದಿಲ್ಲ. ಅಂತಹ ಸಂದರ್ಭದಲ್ಲಿ, ಬ್ರೇಕ್ ಹಾಕಿದಾಗ ವಾಹನ ಅತ್ತಿತ್ತ ಎಳೆದಾಡುವುದನ್ನು ತಪ್ಪಿಸಲು ಬ್ರೇಕ್ ಸ್ವೇ ಕಂಟ್ರೋಲ್ ನೆರವಾಗುತ್ತದೆ.
ಆಫ್‌ರೋಡಿಂಗ್
ಹೆಚ್ಚಿನ ಗ್ರೌಂಡ್ ಕ್ಲಿಯರೆನ್ಸ್ ಇರುವ ಕಾರಣ ಕಚ್ಚಾ ರಸ್ತೆಗಳಲ್ಲೂ ಪಂಚ್ ಅನ್ನು ಆರಾಮವಾಗಿ ಚಾಲನೆ ಮಾಡಬಹುದು. ದೊಡ್ಡ ಟಯರ್‌ಗಳು ಇರುವ ಕಾರಣ ವಾಹನದ ಹಿಡಿತ ಉತ್ತಮವಾಗಿದೆ. ಪಂಚ್‌ನ ಮುಂಭಾಗ ಮತ್ತು ಹಿಂಭಾಗಗಳು ಟಯರ್‌ನಿಂದ ಹೆಚ್ಚು ಮುಂದಕ್ಕೆ ಚಾಚಿಕೊಂಡಿಲ್ಲ. ಹೀಗಾಗಿ ಪಂಚ್‌ನ ಡಿಪಾರ್ಚರ್ ಆಂಗಲ್ ಉತ್ತಮವಾಗಿದೆ. ದಿಬ್ಬಗಳನ್ನು ಹತ್ತಿಳಿಯುವಾಗ ಬಂಪರ್ ನೆಲಕ್ಕೆ ತಾಗುವುದಿಲ್ಲ. ಕೇವಲ ಫೋರ್ ವೀಲ್ ಡ್ರೈವ್ ಸವಲತ್ತು ಇರುವ ಎಸ್‌ಯುವಿಗಳು ಹೋಗಲು ಸಾಧ್ಯವಿರುವ ಕಚ್ಚಾರಸ್ತೆಯಲ್ಲೂ ಪಂಚ್ ಅನ್ನು ಚಲಾಯಿಸಲಾಯಿತು. ಪೂರ್ಣ ಪ್ರಮಾಣದ ಎಸ್‌ಯವಿಯಂತೆ ಚಾಲನೆ ಸಾಧ್ಯವಿಲ್ಲದಿದ್ದರೂ, ಇತರ ಸಿಎಸ್‌ಯುವಿ ಮತ್ತು ಹ್ಯಾಚ್‌ಬ್ಯಾಕ್‌ಗಳಲ್ಲಿ ಸಾಧ್ಯವಿಲ್ಲದೇ ಇರುವುದನ್ನು ಪಂಚ್‌ನಲ್ಲಿ ಮಾಡಲು ಸಾಧ್ಯವಾಯಿತು.
ಎಎಂಟಿ ಅವತರಣಿಕೆಯಲ್ಲಿ ಟ್ರಾಕ್ಷನ್ ಪ್ರೋ ಎಂಬ ತಂತ್ರಜ್ಞಾನ ಅಳವಡಿಸಲಾಗಿದೆ. ಒಂದು ಬದಿಯ ಚಕ್ರ ಕೆಸರಿನಲ್ಲಿ ಸಿಲುಕಿಕೊಂಡರೂ, ಇನ್ನೊಂದು ಚಕ್ರಕ್ಕೆ ಸಂಪೂರ್ಣ ಶಕ್ತಿ ರವಾನಿಸುವ ಮೂಲಕ ಪಂಚ್ ಹೊರಬರುವಂತೆ ಮಾಡುವ ತಂತ್ರಜ್ಞಾನವಿದು. ಇದು ಈ ಸೆಗ್ಮೆಂಟ್‌ನಲ್ಲಿಯೇ ಮೊದಲ ಬಾರಿ ನೀಡಲಾಗತ್ತಿರುವ ತಂತ್ರಜ್ಞಾನ. ಪಂಚ್‌ನ ವಾಟರ್ ವೇಡಿಂಗ್ ಡೆಪ್ಟ್ 370 ಮಿಲಿಮೀಟರ್. ಮಳೆ ನೀರು ತುಂಬಿದ ರಸ್ತೆಗಳಲ್ಲೂ ಪಂಚ್ ಅನ್ನು ನಿರಾಯಾಸವಾಗಿ ಚಾಲನೆ ಮಾಡಬಹುದು.
ಈ ಎಲ್ಲಾ ಹೆಚ್ಚುಗಾರಿಕೆಗಳು ಇರುವ ಕಾರಣ ಪಂಚ್ ಅನ್ನು ಕಚ್ಚಾ ರಸ್ತೆಯಲ್ಲಿಯೂ ಆರಾಮವಾಗಿ ಚಾಲನೆ ಮಾಡಬಹುದು.
ಬೆಲೆ
ಪಂಚ್‌ನ ಬೆಲೆ ಎಷ್ಟು ಎಂಬುದನ್ನು ಟಾಟಾ ಮೋಟರ್ಸ್ ಇನ್ನೂ ಬಹಿರಂಗಪಡಿಸಿಲ್ಲ. ಆದರೆ ಬೇಸ್ ಅವತರಣಿಕೆಯ ಬೆಲೆ 5 ಲಕ್ಷದಿಂದ ಆರಂಭವಾಗಬಹುದು ಎಂದು ನಿರೀಕ್ಷಿಸಲಾಗಿದೆ.
ಒಟ್ಟಾರೆ ಪಂಚ್‌ನ ಪ್ಯಾಕೇಜ್ ಉತ್ತಮವಾಗಿದೆ. ಆಕರ್ಷಕ ವಿನ್ಯಾಸ, ಅತ್ಯಾಧುನಿಕ ತಂತ್ರಜ್ಞಾನಗಳು, ಅತ್ಯುತ್ತಮ ಇನ್ಫೊಟೈನ್‌ಮೆಂಟ್ ಸಿಸ್ಟಂ, ಆರಾಮವಾದ ಚಾಲನೆ, ಹೆಚ್ಚು ಸ್ಥಳಾವಕಾಶ, ದೊಡ್ಡ ಬೂಟ್ ಎಲ್ಲವನ್ನೂ ಪಂಚ್ ಒಳಗೊಂಡಿದೆ. ಸ್ಪರ್ಧಾತ್ಮಕ ಬೆಲೆಗೆ ನೀಡದರೆ, ಪ್ರತಿಸ್ಪರ್ಧಿ ವಾಹನಗಳಿಗೆ ಪಂಚ್ ಅತ್ಯುತ್ತಮ ಪೈಪೋಟಿ ನೀಡುತ್ತದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.