ಭಾರತದಲ್ಲಿ ಕಾಂಪ್ಯಾಕ್ಟ್ ಸೆಡಾನ್ ವರ್ಗದಲ್ಲಿ ಈಗಲೂ ಪ್ರಬಲ ಪೈಪೋಟಿ ಇದ್ದೇ ಇದೆ. ಮಾರುತಿ ಡಿಸೈರ್, ಹೊಂಡಾ ಅಮೇಜ್ ಮತ್ತು ಫೋರ್ಡ್ ಅಸ್ಪೈರ್‌ಗಳು ತಮ್ಮದೇ ವೈಶಿಷ್ಟ್ಯದಿಂದ ಒಂದಕ್ಕಿಂತ ಒಂದು ಮಿಗಿಲೆನಿಸಿವೆ. ಹೀಗಿದ್ದೂ, ಬಹಳ ವರ್ಷ ಅದೇ ಕಾರನ್ನು ಮಾರುಕಟ್ಟೆಯಲ್ಲಿ ಉಳಿಸಿಕೊಳ್ಳುವುದು ಜಾಣ್ಮೆಯ ನಿರ್ಧಾರವಲ್ಲ. ಹೀಗಾಗಿಯೇ ಮಾರುತಿ ತನ್ನ ಸ್ವಿಫ್ಟ್ ಡಿಸೈರ್ ಅನ್ನು ಸಂಪೂರ್ಣ ಬದಲಿಸಿ ಡಿಸೈರ್ ಅನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿತು. ಹೊಂಡಾ ಸಹ ತಮ್ಮ ಅಮೇಜ್ ಅನ್ನು ಈಗ ಪೂರ್ಣ ಪ್ರಮಾಣದಲ್ಲಿ ಬದಲಿಸಿ ಪೈಪೋಟಿಯನ್ನು ಮತ್ತಷ್ಟು ಹೆಚ್ಚಿಸಿದೆ.
2018ರ ಅಮೇಜ್‌ಗೂ ಈ ಹಿಂದಿನ ಅಮೇಜ್‌ಗೂ ಯಾವುದೇ ಸಂಬಂಧವಿಲ್ಲ ಎಂದೇ ಪರಿಗಣಿಸಬೇಕು. ಅಷ್ಟರಮಟ್ಟಿಗೆ ಅಮೇಜ್ ಬದಲಾಗಿದೆ. ಅದು ಹೊರನೋಟವಿರಲಿ, ಒಳಾಂಗಣವಿರಲಿ, ಸವಲತ್ತುಗಳಿರಲಿ ಮತ್ತು ಎಂಜಿನ್‌ನ ಡ್ರೈವೆಬಿಲಿಟಿ ಎಲ್ಲದರಲ್ಲೂ ಅಮೇಜ್ ಬದಲಾಗಿದೆ.
ಕಂಪನಿಯು ಈಚೆಗೆ ಬೆಂಗಳೂರಿನಲ್ಲಿ ‘ಅಮೇಜ್ ಡ್ರೈವ್’ ಅನ್ನು ಆಯೋಜಿಸಿತ್ತು. ಹೊಸ ತಲೆಮಾರಿನ ಅಮೇಜ್ ಪೆಟ್ರೋಲ್ ಮ್ಯಾನುಯಲ್ ಮತ್ತು ಸಿವಿಟಿ, ಡೀಸೆಲ್ ಮ್ಯಾನುಯಲ್ ಮತ್ತು ಸಿವಿಟಿ ಅವತರಣಿಕೆಗಳಲ್ಲಿ ಲಭ್ಯವಿದೆ. ‘ಪ್ರಜಾವಾಣಿ ಟೆಸ್ಟ್‌ಡ್ರೈವ್’ಗಾಗಿ ಡೀಸೆಲ್ ಮ್ಯಾನುಯಲ್ ಅನ್ನು ಆಯ್ಕೆ ಮಾಡಿಕೊಳ್ಳಲಾಗಿತ್ತು.
ಅಮೇಜ್‌ನಲ್ಲಿ 1.5 ಲೀಟರ್ ಸಾಮರ್ಥ್ಯದ ಟರ್ಬೊ ಚಾರ್ಜ್ಡ್ ಐಡಿಟೆಕ್ ಡೀಸೆಲ್ ಎಂಜಿನ್ ಇದೆ. ಇದು ಈ ವರ್ಗದಲ್ಲೇ ಲಭ್ಯವಿರುವ ಅತ್ಯಂತ ದೊಡ್ಡ ಎಂಜಿನ್. ಈ ಎಂಜಿನ್ 3,600 ಆರ್‌ಪಿಎಂನಲ್ಲಿ ಬರೋಬ್ಬರಿ 100 ಬಿಎಚ್‌ಪಿ ಶಕ್ತಿ ಉತ್ಪಾದಿಸುತ್ತದೆ. 1,500 ಆರ್‌ಪಿಎಂನಿಂದ 3,500 ಆರ್‌ಪಿಎಂ ನಡುವೆ ಬರೋಬ್ಬರಿ 200 ನ್ಯೂಟಾನ್ ಮೀಟರ್ ಟಾರ್ಕ್ ಉತ್ಪಾದಿಸುತ್ತದೆ. ಇದು ಈ ವರ್ಗದ ಕಾರುಗಳಿಗೆ ಹೆಚ್ಚೇ ಎನ್ನಿಸಬಹುದಾದಷ್ಟು ಶಕ್ತಿ. ಜತೆಗೆ ಮ್ಯಾಯಯಲ್ ಟ್ರಾನ್ಸ್‌ಮಿಷನ್‌ನಲ್ಲಿ ಗಿಯರ್‌ಗಳನ್ನು ಉತ್ತಮವಾಗಿ ಸಂಯೋಜಿಸಲಾಗಿದೆ.
ಹೆಚ್ಚು ಶಕ್ತಿ ಇರುವ ಕಾರಣಕ್ಕೆ ಹಳ್ಳ–ಕೊಳ್ಳಗಳಲ್ಲಿ, ರಸ್ತೆ ಉಬ್ಬುಗಳಿದ್ದಲ್ಲಿ, ಬಂಪರ್ ಟು ಬಂಪ್ ಸಂಚಾರ ದಟ್ಟಣೆಯಲ್ಲೂ ಮೊದಲ ಗಿಯರ್‌ನ ಅವಶ್ಯಕತೆ ಬೀಳುವುದೇ ಇಲ್ಲ. ಎರಡನೇ ಗಿಯರ್‌ನಲ್ಲೇ ಯಾವುದೇ ಜರ್ಕಿಂಗ್ ಮತ್ತು ಜಡರಿಂಗ್ ಇಲ್ಲದೆ ಅಮೇಜ್ ಚಲಿಸುತ್ತದೆ. ಎಂಜಿನ್ ತಾಪಮಾನ ಸೂಕ್ತ ಮಟ್ಟವನ್ನು ಮುಟ್ಟಿದ ನಂತರ ನಿಂತಲ್ಲಿದಂಲೇ ಅಮೇಜ್ ಅನ್ನು ಎರಡನೇ ಗಿಯರ್‌ನಲ್ಲೇ ಚಲಾಯಿಸಬಹುದು. ಎಂಜಿನ್ ಶಕ್ತಿ ಮತ್ತು ಗಿಯರ್ ಸಂಯೋಜನೆ ಅಷ್ಟು ಉತ್ತಮವಾಗಿದೆ.
ಮೊದಲ ಮೂರು ಗಿಯರ್‌ಗಳು ಚಿಕ್ಕದಾಗಿದ್ದು, ದಟ್ಟಣೆಯಲ್ಲಿ ಚಾಲನೆಯನ್ನು ಸರಾಗವನ್ನಾಗಿಸುತ್ತವೆ. ನಾಲ್ಕನೇ ಮತ್ತು ಐದನೇ ಗಿಯರ್‌ಗಳು ಟಾಲ್ ಕಾಗ್‌ಗಳಾಗಿದ್ದು, ಎಂಜಿನ್ ಕಡಿಮೆ ಆರ್‌ಪಿಎಂನಲ್ಲಿ ಇದ್ದಾಗಲೂ ಉತ್ತಮ ವೇಗದಲ್ಲಿ ಚಲಾಯಿಸಲು ಅನುಕೂಲಕರವಾಗಿವೆ. ಸರಾಗವಾದ ಮತ್ತು ಸಾವಧಾನದ ಚಾಲನೆಗೆ ಈ ಸಂಯೋಜನೆ ಹೇಳಿ ಮಾಡಿಸಿದಂತಿದೆ. ಹೀಗೆ ಚಲಾಯಿಸಿದರೆ ಡೀಸೆಲ್ ಅಮೇಜ್ ಪ್ರತಿ ಲೀಟರ್ ಡೀಸೆಲ್‌ಗೆ ಗರಿಷ್ಠ 27.4 ಕಿ.ಮೀ. ಚಲಿಸುತ್ತದೆ ಎಂದು ಹೊಂಡಾ ಹೇಳುತ್ತದೆ. ನಾವು ಚಾಲನೆ ಮಾಡಿದ ಅಮೇಜ್‌ನ ವಾಸ್ತವ ಮೈಲೇಜ್ ಪ್ರತಿ ಲೀಟರ್‌ಗೆ 26 ಕಿ.ಮೀ.ನ ಆಸುಪಾಸಿನಲ್ಲಿತ್ತು.
ಇಷ್ಟು ಮೈಲೇಜ್ ಅಮೇಜ್‌ನ ಹೆಗ್ಗಳಿಕೆಗಳಲ್ಲಿ ಒಂದಾಗಿದ್ದು, ತನ್ನ ಪ್ರತಿಸ್ಪರ್ಧಿಗಳಿಗಿಂತ ಹೆಚ್ಚು. ಹೀಗಾಗಿ ಕಾಂಪ್ಯಾಕ್ಟ್ ಸೆಡಾನ್‌ಗಾಗಿ ಮಾರುಕಟ್ಟೆಯಲ್ಲಿರುವವರು ತಮ್ಮ ಅಪೇಕ್ಷೆಗಳೇನು ಎಂಬುದನ್ನು ಸ್ಪಷ್ಟಪಡಿಸಿಕೊಂಡಲ್ಲಿ ಅಮೇಜ್, ಡಿಸೈರ್ ಮತ್ತು ಅಸ್ಪೈರ್‌ಗಳ ಮಧ್ಯೆ ಆಯ್ಕೆ ಸುಲಭವಾಗಲಿದೆ.
ಇದು ಹೆಚ್ಚಿನ ಮೈಲೇಜ್‌ನ ಕಾರ್ ಎಂದ ತಕ್ಷಣ ಸ್ವಲ್ಪ ಸ್ಪೋರ್ಟಿಯಾದ ಚಾಲನೆಗೆ ಒಗ್ಗುವುದಿಲ್ಲ ಎಂದೇನಿಲ್ಲ. ಪೆಟ್ರೋಲ್ ಕಾರ್‌ನಂತೆಯೇ ಡೀಸೆಲ್ ಅಮೇಜ್‌ನ ವೇಗವರ್ಧನೆ ಉತ್ತಮವಾಗಿದೆ. ಹೆಚ್ಚು ಶ್ರಮವಿಲ್ಲದೆ, ಎಂಜಿನ್‌ಗೆ ಒತ್ತಡವಾಗದಂತೆಯೇ ಅಮೇಜ್ ನಿರಾಯಾಸವಾಗಿ ಪ್ರತಿ ಗಂಟೆಗೆ 100 ಕಿ.ಮೀ. ವೇಗ ಮುಟ್ಟುತ್ತದೆ. 100 ಕಿ.ಮೀ. ವೇಗದ ಗಡಿಯಾಚೆಗೂ ವೇಗವರ್ಧನೆ ಉತ್ತಮವಾಗಿದೆ. ಪ್ರತಿ ಗಂಟೆಗೆ 140 ಕಿ.ಮೀ. ವೇಗವನ್ನೂ ಅಮೇಜ್ ಮುಟ್ಟುತ್ತದೆ. ಆನಂತರ ವೇಗವರ್ಧನೆ ಇಲ್ಲ ಎಂದೇ ಹೇಳಬಹುದು. ಆದರೆ ಪ್ರತಿ ಗಂಟೆಗೆ 80 ಕಿ.ಮೀ.–100 ಕಿ.ಮೀ. ವೇಗದ ಚಾಲನೆ ಹೆಚ್ಚು ಖುಷಿ ಕೊಡುತ್ತದೆ ಮತ್ತು ಕಾರಿಗೂ ಯಾವುದೇ ಶ್ರಮವಾಗುವುದಿಲ್ಲ. ಈ ವೇಗದಲ್ಲಿ ಕಾರಿನ ಇಂಧನ ದಕ್ಷತೆ ಗರಿಷ್ಠ ಮಟ್ಟದಲ್ಲಿರುತ್ತದೆ.
ಅಮೇಜ್‌ನ ಸಸ್ಪೆನ್ಷನ್ ಹೆಚ್ಚು ಮೃದುವಾಗಿದೆ. ಹಳ್ಳ–ಕೊಳ್ಳದ ರಸ್ತೆಗೆ ಇದು ಅತ್ಯುತ್ತಮವಾದ ಸಸ್ಪೆನ್ಷನ್. ಹೀಗಾಗಿ ಗುಂಡಿ ತುಂಬಿದ ರಸ್ತೆಗಳಲ್ಲಿ ಅಮೇಜ್ ಹೆಚ್ಚು ಕುಲುಕಾಡುವುದಿಲ್ಲ. ಗುಂಡಿಗೆ ದಿಢೀರ್ ಎಂದು ಇಳಿಸಿದಾಗಲೂ, ಆ ಆಘಾತ ಒಳಗೆ ಕುಳಿತವರಿಗೆ ವರ್ಗವಾಗುವ ಪ್ರಮಾಣ ಕಡಿಮೆ ಇದೆ. ಆದರೆ ಮೃದು ಸಸ್ಪೆನ್ಷನ್ ಕಾರಣದಿಂದ ರಸ್ತೆ ಉಬ್ಬುಗಳನ್ನು (ಎಲ್ಲಾ ಸೀಟುಗಳೂ ಭರ್ತಿಯಾಗಿದ್ದಾಗ) ಸಾವಧಾನವಾಗಿ, ಮೊದಲ ಗಿಯರ್‌ನಲ್ಲೇ ದಾಟುವುದು ಸೂಕ್ತ. ವೇಗ ಸ್ವಲ್ಪ ಹೆಚ್ಚಿದ್ದರೂ ಕಾರಿನ ತಳಭಾಗ ರಸ್ತೆ ಉಬ್ಬಿಗೆ ತಾಗುತ್ತದೆ. ಸಸ್ಪೆನ್ಸನ್ ಮೃದುವಾಗಿರುವ ಕಾರಣಕ್ಕೇ ವೇಗವು ಪ್ರತಿ ಗಂಟೆಗೆ 120 ಕಿ.ಮೀ.ನ ಗಡಿ ದಾಟಿದ ನಂತರ ಕಾರು ಸರಾಗವಾಗಿ ಓಡುತ್ತಿಲ್ಲ ಎಂದೆನಿಸಲು ಆರಂಭವಾಗುತ್ತದೆ. ಅಲ್ಲದೆ ತಿರುವುಗಳಲ್ಲಿ ವೇಗವಾಗಿ ಚಾಲನೆ ಮಾಡಿದರೆ, ಓಲಾಟ ಅನುಭವಕ್ಕೆ ಬರುತ್ತದೆ. ಇದರ ಹೊರತಾಗಿ ಸಾವಧಾನದ ಚಾಲನೆಗೆ ಅಮೇಜ್‌ನ ಸಸ್ಪೆನ್ಷನ್ ಹೇಳಿ ಮಾಡಿಸಿದಂತಿದೆ.
ಎಇಎಸ್ ಮತ್ತು ಇಬಿಡಿ ಇರುವ ಕಾರಣಕ್ಕೆ ಅಮೇಜ್‌ನ ಬ್ರೇಕಿಂಗ್ ಉತ್ತಮವಾಗಿದೆ. ತೀರಾ ಅಗ್ರೆಸ್ಸೀವ್ ಬ್ರೇಕಿಂಗ್ ಅಲ್ಲದಿದ್ದರೂ, ತುರ್ತು ಸಂದರ್ಭದಲ್ಲಿ ದಿಢೀರ್ ಎಂದು ಬ್ರೇಕ್ ಒದೆಯಲು ಭಯ ಪಡಬೇಕಿಲ್ಲ.
ಈ ಹಿಂದಿನ ಅಮೇಜ್ ಹೊಂಡಾದ ಬ್ರಿಯೊ ಹ್ಯಾಚ್‌ಬ್ಯಾಕ್‌ಗೇ ಬೂಟ್ ಅನ್ನು ಸೇರಿಸಿದಂತಿತ್ತು. ಆದರೆ 2018ರ ಅಮೇಜ್ ಹೊಂಡಾದ ಯಾವುದೇ ಕಾರಿಗೂ ಹೋಲಿಕೆಯಾಗುವುದಿಲ್ಲ. ಮತ್ತು ಕಾಂಪ್ಯಾಕ್ಟ್ ಸೆಡಾನ್‌ನಗಳಲ್ಲೇ ತಾಜಾ ಆದ ವಿನ್ಯಾಸವನ್ನು ಹೊಂದಿದೆ. ಮುಂಬದಿ ಮತ್ತು ಹಿಂಬದಿಗಳು ಬಾಕ್ಸಿ ಆದ ವಿನ್ಯಾಸ ಹೊಂದಿದ್ದು, ಅಮೇಜ್‌ಗೆ ಒರಟು ನೋಟ ನೀಡಿವೆ. ಕಾರಿನ ಪಾರ್ಶ್ವ ಸ್ಪೋರ್ಟಿಯಾಗಿದ್ದರೂ ದೊಡ್ಡ ಕಾರಿನಂತೆ ಕಾಣುತ್ತದೆ. ಬಾಕ್ಸಿ ವಿನ್ಯಾಸದ ಕಾರಣ ಕ್ಯಾಬಿನ್‌ನಲ್ಲಿ ಈ ಹಿಂದಿನ ಅಮೇಜ್‌ಗಿಂತ ಹೆಚ್ಚು ಜಾಗವಿದೆ. ಬೂಟ್ ಸಹ ಹಿಂದಿಗಿಂತಲೂ ದೊಡ್ಡದಾಗಿದೆ.
ಈ ವರ್ಗದ ಕೊಳ್ಳುಗರು ಶಕ್ತಿ, ಮೈಲೇಜ್, ಜಾಗ, ವಿನ್ಯಾಸ ಮತ್ತು ಸವಲತ್ತುಗಳನ್ನು ಬಯಸುತ್ತಾರೆ. ಖರೀದಿಯಲ್ಲಿ ಈ ಅಂಶಗಳು ನಿರ್ಣಾಯಕವಾಗುತ್ತವೆ. ಇದೆಲ್ಲವನ್ನೂ ಗಮನದಲ್ಲಿರಿಕೊಂಡೇ ಹೊಂಡಾ ಹೊಸ ಅಮೇಜ್ ಅನ್ನು ರೂಪಿಸಿದೆ. ಈ ಎಲ್ಲಾ ಅಂಶಗಳಲ್ಲೂ ಅಮೇಜ್ ತೃಪ್ತಿ ನೀಡುತ್ತದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.