ಎರಡು ವರ್ಷಗಳ ಹಿಂದೆಯೇ ಯೂರೋಪ್ ಮತ್ತು ಏಷ್ಯಾದ ಕೆಲವೆಡೆ ಮಾರುಕಟ್ಟೆಗೆ ಬಿಡುಗಡೆಯಾಗಿದ್ದ, ಹೋಂಡಾ ಕಂಪನಿಯ ಬಹುನಿರೀಕ್ಷಿತ ‘ಹೋಂಡಾ ಸಿಬಿ300ಆರ್’ ಇತ್ತೀಚೆಗೆ ಭಾರತದ ಮಾರುಕಟ್ಟೆಗೆ ಬಿಡುಗಡೆಯಾಗಿದೆ. ಹೋಂಡಾದ ಸಿಬಿಆರ್ ಸರಣಿಯ ಆರನೆಯ ಬೈಕ್ ಇದಾಗಿದೆ. ಈಗಾಗಲೇ ಸಿಬಿ125ಆರ್, ಸಿಬಿ150ಆರ್, ಸಿಬಿ250ಆರ್, ಸಿಬಿ650ಆರ್ ಮತ್ತು ಸಿಬಿ1000ಆರ್ ಬೈಕ್‌ಗಳು ಭಾರತದ ರಸ್ತೆಗಳಲ್ಲಿ ಸಂಚಲನ ಸೃಷ್ಟಿಸಿವೆ.
300 ಸಿಸಿ ವಿಭಾಗದ ಅತಿ ಕಡಿಮೆ ತೂಕ ಹೊಂದಿರುವ (143 ಕೆ.ಜಿ) ಮೊದಲ ಬೈಕ್ ಎಂಬ ಹೆಗ್ಗಳಿಕೆ ಇದರದು. ಭಾರತದಲ್ಲೇ ಬಿಡಿಭಾಗಗಳನ್ನು ಜೋಡಿಸಲಾಗಿದ್ದರೂ, ‘ಸಿಬಿ300ಆರ್’, ಜಪಾನಿನ ನಿಯೊ ಸ್ಪೋರ್ಟ್ಸ್‌ನಿಂದಪ್ರೇರಣಗೊಂಡು ತಯಾರಾಗಿರುವ ಬೈಕ್ ಆಗಿದೆ. ಹೀಗಾಗಿ ಒಂದು ರೇಸಿಂಗ್ ಬೈಕ್‌ಗೆ ಇರುವ ಎಲ್ಲ ಸಾಮರ್ಥ್ಯ ಇದಕ್ಕಿದೆ.
ಲಿಕ್ವಿಡ್ ಕೂಲ್ಡ್, ಸಿಂಗಲ್ ಸಿಲಿಂಡರ್ ಎಂಜಿನ್, 286 ಸಿಸಿ, 31.4 ಬಿಎಚ್‌ಪಿ ಸಾಮರ್ಥ್ಯದ ಈ ಬೈಕ್ ತನ್ನ ಆಕರ್ಷಕ ಮತ್ತು ಸದೃಢ ವಿನ್ಯಾಸದ ಮೂಲಕವೇ ಗಮನ ಸೆಳೆಯುತ್ತದೆ. ರೆಟ್ರೊ ಮಾದರಿಯನ್ನು ಹೋಲುವ ವೃತ್ತಾಕಾರದ ಎಲ್‌ಇಡಿ ಹೆಡ್‌ಲ್ಯಾಂಪ್, ಎಬಿಎಸ್ ಇದರ ವಿಶೇಷತೆಗಳು.
2015ರಲ್ಲಿ ಮಾರುಕಟ್ಟೆಗೆ ಬಿಡುಗಡೆಯಾದ ‘ಸಿಬಿಆರ್300ಆರ್’ ಮಾದರಿಯೇ ‘ಸಿಬಿ300ಆರ್’ಗೆ ಆಧಾರ. ಆದರೆ, ಇದರ ಸೌಂದರ್ಯ ಸಿಬಿ1000ಆರ್ ಅನ್ನು ಹೋಲುತ್ತದೆ. ಅಂದರೆ ‘ನಿಯೊ–ರೆಟ್ರೊ ಕೆಫೆ ರೇಸರ್’ ಮಾದರಿಯ ನೋಟ ಗಮನ ಸೆಳೆಯುತ್ತದೆ. ಬೈಕ್‌ನ ವೇಗ 100 ಕಿ.ಮೀ ದಾಟಿದಾಗಲೂ ಸಣ್ಣ ನಡುಕವೂ ಉಂಟಾಗದಂತೆ ರಸ್ತೆಯ ಮೇಲೆ ಸಂಪೂರ್ಣ ಹಿಡಿತ ಸಾಧಿಸಲು ಅನುಕೂಲವಾಗುವಂತೆ ಹಿಂಭಾಗದಲ್ಲಿ 296 ಎಂಎಂ ಡಿಸ್ಕ್ ಬ್ರೇಕ್ ಮತ್ತು ಮುಂಭಾಗದಲ್ಲಿ ಎಬಿಎಸ್ 4 ಪಾಟ್ ಕ್ಯಾಲಿಪರ್ ಇದೆ. ಇದರಿಂದ ದಿಢೀರನೆ ಬ್ರೇಕ್ ಹಾಕಬೇಕಾದ ಸಂದರ್ಭ ಬಂದಾಗಲೂ, ಸವಾರನಿಗೆ ಸಂಪೂರ್ಣ ನಿಯಂತ್ರಣ ಕಾಯ್ದುಕೊಳ್ಳಬಹುದು.
2018ರಲ್ಲಿ ಪ್ಯಾರಿಸ್‌ನಲ್ಲಿ ನಡೆದಿದ್ದ ಅಂತರರಾಷ್ಟ್ರೀಯ ವಾಹನ ಪ್ರದರ್ಶನ ಮೇಳದಲ್ಲಿ ಹೋಂಡಾ ಕಂಪನಿ, ನಿಯೊ ಸ್ಪೋರ್ಟ್ಸ್ ಕೆಫೆ ಮಾದರಿಯ ಹೊಸ ವಿನ್ಯಾಸವನ್ನು ಪರಿಚಯಿಸಿತ್ತು. ಸಾಮಾನ್ಯವಾಗಿ ಈ ಮಾದರಿಯ ಬೈಕ್‌ಗಳ ಹಿಂಭಾಗದಲ್ಲಿ ಅಲ್ಟ್ರಾ ಶಾಟ್ ಟೇಲ್, ಡ್ಯುಯೆಲ್ ಮಫ್ಲರ್ ಕಾಣಬಹುದು. ಹೋಂಡಾದ ಸಿಬಿ125ಆರ್, ಸಿಬಿ650ಆರ್ ಮತ್ತು ಸಿಬಿ 1000ಆರ್ ಮಾದರಿಗಳಲ್ಲಿ ನಿಯೊ ಸ್ಪೋರ್ಟ್ಸ್ ಕೆಫೆ ವಿನ್ಯಾಸವನ್ನು ಕಾಣಬಹುದು. ಸಿಬಿ300ಆರ್ ಕೂಡ ಹೆಚ್ಚೂ ಕಡಿಮೆ ಅಥವಾ ಅದಕ್ಕಿಂತಲೂ ತುಸು ಹೆಚ್ಚೇ ಹೊಸ ವಿನ್ಯಾಸವನ್ನು ಬಳಸಿಕೊಂಡಿದೆ.
ಕಾರ್ಯಕ್ಷಮತೆ ಮತ್ತು ಸೌಂದರ್ಯ ಎರಡಕ್ಕೂ ಸಮಾನ ಆದ್ಯತೆ ನೀಡಿ ‘ಸಿಬಿ300ಆರ್’ ವಿನ್ಯಾಸಗೊಳಿಸಲಾಗಿದೆ. ಮುಂಭಾಗದಲ್ಲಿ 110 ಎಂಎಂ ಮತ್ತು ಹಿಂಭಾಗದಲ್ಲಿ 150 ಎಂಎಂ ಅಗಲದ ಚಕ್ರ ಅಳವಡಿಸಲಾಗಿದೆ. 40 ಡಿಗ್ರಿ ಕೋನದಲ್ಲಿ ತಿರುಗಬಹುದಾದ ಹ್ಯಾಂಡಲ್ ಬಾರ್ ಇದರ ಇನ್ನೊಂದು ವಿಶೇಷ. ಅಂದರೆ ಅತಿ ಸಣ್ಣ ಮತ್ತು ದೊಡ್ಡ ತಿರುವುಗಳಲ್ಲಿ ಕೂಡ ಆರಾಮವಾಗಿ ಸವಾರ ಮುನ್ನುಗ್ಗಬಹುದು. ಅಷ್ಟೇ ಅಲ್ಲ, ರಸ್ತೆಯಲ್ಲಿ ವಾಹನ ದಟ್ಟಣೆ ಎಷ್ಟೇ ಇದ್ದರೂ ವಾಹನಗಳ ಮಧ್ಯೆಸರಳವಾಗಿ ಚಾಲನೆ ಮಾಡಬಹುದು. 41 ಎಂಎಂ ಇನ್‌ರ್ವಟೆಡ್ ಫ್ರಂಟ್ ಫ್ರೊಕ್ಸ್‌ನಿಂದಾಗಿ ಸವಾರ ಸಂಪೂರ್ಣ ಹಿಡಿತ ಸಾಧಿಸಬಹುದು.
ಈ ಬೈಕ್‌ನ ಎಕ್ಸ್ ಷೋರೂಂ ಬೆಲೆ ₹2.5 ಲಕ್ಷದ ಒಳಗಿದ್ದು, ಈಗಾಗಲೇ ಬುಕ್ಕಿಂಗ್ ಪ್ರಾರಂಭವಾಗಿದೆ. ಗ್ರಾಹಕರು ದೇಶದಾದ್ಯಂತ ಇರುವ ಹೋಂಡಾ ಷೋರೂಂಗಳಲ್ಲಿ ₹5 ಸಾವಿರ ಪಾವತಿಸಿ ಮುಂಗಡ ಕಾಯ್ದಿರಿಸಿಕೊಳ್ಳಬಹುದು. ಮ್ಯಾಟಿ ಆ್ಯಕ್ಸಿಸ್ ಗ್ರೇ, ಸಿಲ್ವರ್ ಮತ್ತು ಮೆಟ್ಯಾಲಿಕ್ ಆ್ಯಂಡ್ ಕ್ಯಾಂಡಿ ಕ್ರೊಮೊಸ್ಪೇರ್ ರೆಡ್ ಬಣ್ಣಗಳಲ್ಲಿ ಬೈಕ್ ಲಭ್ಯ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.