ಟಾಟಾ ಸಫಾರಿ, ಸಂಪೂರ್ಣವಾಗಿ ದೇಶೀಯವಾಗಿಯೇ ಅಭಿವೃದ್ಧಿಪಡಿಸಿದ್ದ ಭಾರತದ ಮೊದಲ ಎಸ್‌ಯುವಿ. 1988ರಲ್ಲಿ ಮಾರುಕಟ್ಟೆಗೆ ಬಂದನಂತರ ಬರೋಬ್ಬರಿ 21 ವರ್ಷಗಳವರೆಗೆ ಸಫಾರಿ ಮಾರುಕಟ್ಟೆಯಲ್ಲಿ ಲಭ್ಯವಿತ್ತು. 21 ವರ್ಷಗಳಲ್ಲಿ 4 ತಲೆಮಾರಿನ ಸಫಾರಿಗಳು ಮಾರುಕಟ್ಟೆಗೆ ಬಂದಿದ್ದವು. ಇದಲ್ಲದೇ ಟಾಟಾ ಸಫಾರಿಯ 7 ಫೇಸ್‌ಲಿಫ್ಟ್ ಅವತರಣಿಕೆಗಳೂ ಮಾರುಕಟ್ಟೆಗೆ ಬಂದಿದ್ದವು. ಭಾರತದಲ್ಲಿ ಪೂರ್ಣಪ್ರಮಾಣದ ಎಸ್‌ಯುವಿ ಕ್ರೇಜ್ ಅನ್ನು ಆರಂಭಿಸಿದ ಶ್ರೇಯ ಟಾಟಾ ಸಫಾರಿಗೆ ಸಲ್ಲುತ್ತದೆ. 2019ರಲ್ಲಿ ಈ ಎಸ್‌ಯುವಿಯನ್ನು ಟಾಟಾ ಮೋಟರ್ಸ್ ಮಾರುಕಟ್ಟೆಯಿಂದ ಹಿಂಪಡೆಯಿತು. ಎರಡು ವರ್ಷಗಳ ನಂತರ ಈಗ 5ನೇ ತಲೆಮಾರಿನ ಸಫಾರಿಯನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುತ್ತಿದೆ. ಸಫಾರಿಯ ಬೆಲೆ ಪ್ರಕಟವಾಗಿಲ್ಲವಾದರೂ, ಪ್ರಿ-ಲಾಂಚ್ ಬುಕ್ಕಿಂಗ್ ನಡೆಯುತ್ತಿದೆ. ಕಂಪನಿಆಹ್ವಾನದ ಮೇರೆಗೆ ಪ್ರಜಾವಾಣಿ ನೂತನ ಸಫಾರಿಯ ಟೆಸ್ಟ್‌ಡ್ರೈವ್ ನಡೆಸಿತ್ತು. ಅದರ ವಿವರಗಳು ಇಲ್ಲಿವೆ...
ಎಕ್ಸ್‌ಟೀರಿಯರ್
ಹಳೆಯ ತಲೆಮಾರಿನ ಸಫಾರಿ ಮತ್ತು ನೂತನ ಸಫಾರಿಯ ಎಕ್ಸ್‌ಟೀರಿಯರ್‌ನಲ್ಲಿ ಯಾವುದೇ ಹೋಲಿಕೆ ಇಲ್ಲ. ಹಳೆಯ ತಲೆಮಾರಿನ ಸಫಾರಿಯಲ್ಲಿ ಸ್ಟೆಪ್ಡ್ ರೂಫ್ ಪ್ರಮುಖ ಐಕಾನ್ ಆಗಿತ್ತು. ನೂತನ ಸಫಾರಿಯಲ್ಲಿ ಸ್ಟೆಪ್ಡ್ ರೂಫ್ ಅನ್ನು ಮಾತ್ರ ಉಳಿಸಿಕೊಳ್ಳಲಾಗಿದೆ. ಉಳಿದಂತೆ ಎಲ್ಲವೂ ಬದಲಾಗಿದೆ. ಮುಂಭಾಗದಿಂದ ನೂತನ ಸಫಾರಿಯು, ಟಾಟಾ ಹ್ಯಾರಿಯರ್ ಅನ್ನು ಹೋಲುತ್ತದೆ. ಗ್ರಿಲ್‌ನ ವಿನ್ಯಾಸದಲ್ಲಿ ಮಾತ್ರ ಸ್ವಲ್ಪ ಬದಲಾವಣೆ ಇದೆ. ಹ್ಯಾರಿಯರ್‌ಗೇ ಮೂರನೇ ಸಾಲಿನ ಸೀಟ್‌ಗಳನ್ನು ಅಳವಡಿಸಲು ಹಿಂಭಾಗವನ್ನು ತುಸು ಹಿಗ್ಗಿಸಿದಂತೆ ಕಾಣುತ್ತದೆ. ಆದರೆ ಸ್ಟೆಪ್ಡ್ ರೂಫ್ ಇರುವ ಕಾರಣ, ಹ್ಯಾರಿಯರ್‌ಗಿಂತ ಸಫಾರಿ ಸಂಪೂರ್ಣ ಭಿನ್ನವಾಗಿಯೇ ಕಾಣುತ್ತದೆ. ಹಿಂಬದಿಯಲ್ಲೂ ರೂಫ್‌ನ ಎತ್ತರ ಹೆಚ್ಚಿರುವುದರಿಂದ ಪೂರ್ಣ ಪ್ರಮಾಣದ ಎಸ್‌ಯುವಿಯ ನೋಟ ನೀಡುತ್ತದೆ. 18 ಇಂಚಿನ ಅಲ್ಹಾಯ್ ವ್ಹೀಲ್‌ಗಳು, ನೂತನ ಸಫಾರಿಗೆ ಪ್ರೀಮಿಯಂ ಟಚ್ ನೀಡಿವೆ. ಹಳೆಯ ತಲೆಮಾರಿನ ಸಫಾರಿಯು ಹೆಚ್ಚು ಒರಟು ಮತ್ತು ಗಡಸು ವಿನ್ಯಾಸವನ್ನು ಹೊಂದಿತ್ತು. ನೂತನ ಸಫಾರಿಯಲ್ಲಿ ಆ ಒರಟು ಮತ್ತು ಗಡಸುತನ ಸ್ವಲ್ಪ ಕಡಿಮೆಯಾಗಿದೆ.
ಇಂಟೀರಿಯರ್
1998ರಲ್ಲಿ ಮಾರುಕಟ್ಟೆಗೆ ಬಂದ ಸಫಾರಿ ಮತ್ತು 2019ರಲ್ಲಿ ಮಾರುಕಟ್ಟೆಯಲ್ಲಿ ಇದ್ದ ಸಫಾರಿಯ ಇಂಟೀರಿಯರ್‌ನ ವಿನ್ಯಾಸ ಮತ್ತು ಸವಲತ್ತುಗಳಲ್ಲಿ ಹೆಚ್ಚಿನ ವ್ಯತ್ಯಾಸವೇನೂ ಇರಲಿಲ್ಲ. ಬದಲಿಗೆ 1998ರಲ್ಲಿ ನೀಡಲಾಗಿದ್ದ ಸವಲತ್ತುಗಳನ್ನು 2019ರ ಅವತರಣಿಕೆಯಲ್ಲಿ ತೆಗೆದುಹಾಕಲಾಗಿತ್ತು. 2019ರಲ್ಲಿ 20 ಲಕ್ಷಕ್ಕೂ ಹೆಚ್ಚು ಮೊತ್ತಕ್ಕೆ ಬಿಕರಿಯಾಗುತ್ತಿದ್ದ ಸಫಾರಿಯಲ್ಲಿ ಅತ್ಯಗತ್ಯದ ಸವಲತ್ತುಗಳೂ ಇರಲಿಲ್ಲ. 2021ರ ನೂತನ ಸಫಾರಿಯು ಈ ಕೊರತೆಗಳನ್ನು ನೀಗಿಸಿದೆ. ನೂತನ ಸಫಾರಿಯಲ್ಲಿ ಆಟೊ ಕ್ಲೈಮೆಟ್ ಕಂಟ್ರೋಲ್, ಪವರ್ಡ್ ಅಡ್ಜಸ್ಟಬಲ್ ಡ್ರೈವರ್ ಸೀಟ್, ಎರಡನೇ ಸಾಲಿನಲ್ಲಿ ಕ್ಯಾಪ್ಟನ್ ಸೀಟ್, ಪನರೋಮಿಕ್ ಸನ್‌ರೂಫ್, ಅತ್ಯಾಧುನಿಕ ಇನ್ಫೊಟೈನ್‌ಮೆಂಟ್ ಸಿಸ್ಟಂ, ಆಶ್‌ವುಡ್ ಡ್ಯಾಶ್‌ಬೋರ್ಡ್, ಫಾಕ್ಸ್‌ವುಡ್ ಇನ್ಸರ್ಟ್‌ಗಳನ್ನು ನೀಡಲಾಗಿದೆ.
ಡ್ಯಾಶ್‌ಬೋರ್ಡ್ ಮತ್ತು ಸಂಪೂರ್ಣ ಬಿಳಿಯ ರೂಫ್ ಮತ್ತು ಸೀಟುಗಳು ಸಫಾರಿಯ ಇಂಟೀರಿಯರ್‌ಗೆ ಪ್ರೀಮಿಯಂ ಸ್ಪರ್ಶ ನೀಡಿವೆ. ಎರಡು ಬಣ್ಣದ ಡ್ಯಾಶ್‌ಬೋರ್ಡ್ ಆಕರ್ಷಕವಾಗಿದೆ. ಮಿಡಲ್ ಕನ್ಸೋಲ್‌ನ ಪ್ಲೇಸ್‌ಮೆಂಟ್ ಸರಿಯಾಗಿದ್ದು, ಎಲ್ಲಾ ಸ್ವಿಚ್‌ಗಳು, ಚಾಲಕನಿಗೆ ಸುಲಭವಾಗಿ ಕೈಗೆಟಕುತ್ತವೆ. ಹೀಗಾಗಿ ಚಾಲನೆ ವೇಳೆ ಹವಾನಿಯಂತ್ರಣ ವ್ಯವಸ್ಥೆ, ಮಿರರ್ ಅಡ್ಜಸ್ಟ್, ನ್ಯಾವಿಗೇಷನ್, ಡ್ರೈವ್‌ಮೋಡ್ ಸೆಲೆಕ್ಟರ್, ಟೆರೇನ್ ರೆಸ್ಪಾನ್ಸ್ ಸಿಸ್ಟಂ ಅನ್ನು ನಿಯಂತ್ರಿಸಲು ಕಷ್ಟಪಡಬೇಕಿಲ್ಲ.
ಇಂಟೀರಿಯರ್‌ನ ಆಕರ್ಷಣೆಗಳಲ್ಲಿ ಮತ್ತೊಂದು ಪ್ರಮುಖ ಸ್ಕೈಡೋಂ ಸನ್‌ರೂಫ್. ಸಫಾರಿಯಲ್ಲಿ ಮೊದಲೇ ಹೇಳಿದಂತೆ ಪನರೋಮಿಕ್ ಸನ್‌ರೂಫ್ ಇದೆ. ಈ ವರ್ಗದಲ್ಲೇ ಅತ್ಯಂತ ವಿಶಾಲವಾದ ಸನ್‌ರೂಫ್ ಎಂದು ಟಾಟಾ ಮೋಟರ್ಸ್ ಹೇಳಿಕೊಂಡಿದೆ. ಇದರಿಂದ ಹೆಚ್ಚು ಬೆಳಕು ಬರುವುದರಿಂದ, ಇಂಟೀರಿಯರ್ ಹೆಚ್ಚು ವಿಶಾಲವಾಗಿ ಮತ್ತು ತಾಜಾ ಆಗಿರುವ ಅನುಭವ ನೀಡುತ್ತದೆ. ಮೂರು ಸಾಲಿನ ಸೀಟುಗಳಿಗೂ ಪ್ರತ್ಯೇಕ ಎ.ಸಿ.ವೆಂಟ್‌ಗಳನ್ನು ನೀಡಲಾಗಿದೆ. ಮೂರನೇ ಸಾಲಿನಲ್ಲಿ ಪ್ರತ್ಯೇಕ ಬ್ಲೋವರ್ ಕಂಟ್ರೋಲ್ ನೀಡಲಾಗಿದೆ. 1998ರ ಮೊದಲ ತಲೆಮಾರಿನ ಸಫಾರಿಯಲ್ಲಿ ಇದ್ದ ಈ ಸವಲತ್ತನ್ನು 2021ರ ಸಫಾರಿಯಲ್ಲೂ ಉಳಿಸಿಕೊಳ್ಳಲಾಗಿದೆ.
ಎಂಜಿನ್ ಮತ್ತು ಚಾಲನೆ
2021ರ ಸಫಾರಿಯಲ್ಲಿ ಫಿಯೆಟ್ ಕಂಪನಿಯ 2.0 ಲೀಟರ್ ಮಲ್ಟಿಜೆಟ್ ಡೀಸೆಲ್ ಎಂಜಿನ್ ಅನ್ನು ಬಳಸಲಾಗಿದೆ. ಟಾಟಾ ಮೋಟರ್ಸ್ ಇದಕ್ಕೆ ಕ್ರಯೋಟೆಕ್ 170 ಎಂದು ಹೆಸರಿಟ್ಟಿದೆ. ಈ ಎಂಜಿನ್ ಶಕ್ತಿಯುತವಾಗಿದೆ. ಈ ಎಂಜಿನ್ 3,750 ಆರ್‌ಪಿಎಂನಲ್ಲಿ 170 ಬಿಎಚ್‌ಪಿ ಶಕ್ತಿ ಉತ್ಪಾದಿಸುತ್ತದೆ. 1,750-2,500 ಆರ್‌ಪಿಎಂನಲ್ಲಿ ಗರಿಷ್ಠ 359 ನ್ಯೂಟನ್ ಮೀಟರ್ ಟಾರ್ಕ್ ಉತ್ಪಾದಿಸುತ್ತದೆ. ಮ್ಯಾನುಯಲ್ ಟ್ರಾನ್ಸ್‌ಮಿಷನ್‌ನಲ್ಲಿ ಆರು ಗಿಯರ್‌ಗಳಿದ್ದು, ಎಲ್ಲವೂ ಕ್ಲೋಸ್ಡ್ ರೇಷಿಯೊ ಗಿಯರ್‌ಗಳಾಗಿವೆ. ಅಂದರೆ, ಎಲ್ಲಾ ಗಿಯರ್‌ಗಳ ನಡುವಣ ವ್ಯತ್ಯಾಸ ಅಧಿಕವಾಗಿಲ್ಲ. ಹೀಗಾಗಿ ಗಿಯರ್ ಬದಲಾವಣೆ ವೇಳೆ ಜರ್ಕ್‌ನ ಅನುಭವವಾಗುವುದಿಲ್ಲ. ಹೆಚ್ಚು ಶಕ್ತಿ ಲಭ್ಯವಿರುವ ಕಾರಣ ವೇಗವರ್ಧನೆ ಚೆನ್ನಾಗಿದೆ. ಆರು ಗಿಯರ್‌ಗಳು ಇರುವ ಕಾರಣ ಹೆದ್ದಾರಿಯಲ್ಲಿ ನಿರಾಯಾಸವಾಗಿ ವೇಗದ ಚಾಲನೆ ಸಾಧ್ಯ. ಕ್ರೂಸ್ ಕಂಟ್ರೋಲ್ ಇರುವುದರಿಂದ ದೂರದ ಪ್ರಯಾಣದಲ್ಲಿ ಚಾಲಕನಿಗೆ ಆಯಾಸವಾಗುವುದಿಲ್ಲ.
ಮ್ಯಾನುಯಲ್ ಟ್ರಾನ್ಸ್‌ಮಿಷನ್‌ಗಿಂತ ಆಟೊಮ್ಯಾಟಿಕ್ ಟ್ರಾನ್ಸ್‌ಮಿಷನ್ ಹೆಚ್ಚು ಮುದವಾದ ಅನುಭವ ನೀಡುತ್ತದೆ. ಹುಂಡೈ ಮೋಟರ್ಸ್ ಅಭಿವೃದ್ಧಿಪಡಿಸಿರುವ 6 ಸ್ಪೀಡ್ ಆಟೊಮ್ಯಾಟಿಕ್ ಟ್ರಾನ್ಸ್‌ಮಿಷನ್ ಅನ್ನು ನೂತನ ಸಫಾರಿಯಲ್ಲಿ ಬಳಸಲಾಗಿದೆ. ಈ ಗಿಯರ್ ಬಾಕ್ಸ್‌ನ ಟ್ಯೂನಿಂಗ್ ಫಿಯೆಟ್‌ನ ಎಂಜಿನ್‌ಗೆ ಅತ್ಯುತ್ತಮವಾಗಿ ಹೊಂದಿಕೆಯಾಗಿದೆ. ಆಟೊಮ್ಯಾಟಿಕ್ ಟ್ರಾನ್ಸ್‌ಮಿಷನ್‌ನಲ್ಲಿ ಗಿಯರ್ ಬದಲಾವಣೆ ಅನುಭವಕ್ಕೆ ಬರುವುದೇ ಇಲ್ಲ. ಎಲ್ಲಿಯೂ ಜರ್ಕ್‌ನ ಅನುಭವವಾಗುವುದಿಲ್ಲ. ಚಾಲನೆಯೂ ಆರಾಮದಾಯಕವಾಗಿದೆ.
ಮ್ಯಾನುಯಲ್ ಮತ್ತು ಆಟೊಮ್ಯಾಟಿಕ್ ಟ್ರಾನ್ಸ್‌ಮಿಷನ್ ಎರಡರಲ್ಲೂ ಎಕೊ/ಸಿಟಿ/ಸ್ಫೋರ್ಟ್ಸ್ ಡ್ರೈವ್ ಮೋಡ್‌ಗಳು ಇವೆ. ಎಕೊ ಮೋಡ್‌ನಲ್ಲಿ ಎಂಜಿನ್ ಸಾಧಾರಣಮಟ್ಟದ ಶಕ್ತಿ ಪೂರೈಸಿದರೂ, ಚಾಲನೆ ಆರಾಮದಾಯಕವಾಗಿಯೇ ಇದೆ. ಸಿಟಿ ಮೋಡ್‌ನಲ್ಲಿ ಎಂಜಿನ್ ಹೆಚ್ಚು ಶಕ್ತಿಯನ್ನು ಪೂರೈಸುತ್ತದೆ. ಸಂಚಾರದಟ್ಟಣೆ, ಘಾಟ್, ಹೆದ್ದಾರಿಯಲ್ಲಿ ಬಹುತೇಕ ಈ ಮೋಡ್‌ನಲ್ಲಿಯೇ ಚಾಲನೆ ಮಾಡಬಹುದು. ಸ್ಫೋರ್ಟ್ಸ್ ಮೋಡ್‌ನಲ್ಲಿ ಈ ಎಂಜಿನ್ ಗರಿಷ್ಠ ಮಟ್ಟದ ಶಕ್ತಿ ಪೂರೈಸುತ್ತದೆ. ಇದರಲ್ಲಿ ವೇಗವರ್ಧನೆ ಹೆಚ್ಚು. ಆದರೆ, ಎಂಜಿನ್‌ನ ಶಬ್ದವೂ ಹೆಚ್ಚುತ್ತದೆ. ಆದರೆ ವೇಗವರ್ಧನೆ ವ್ಯಸನವಾಗುವಷ್ಟು ಉತ್ತಮವಾಗಿದೆ.
ಹ್ಯಾಂಡ್ಲಿಂಗ್ ಮತ್ತು ಆರಾಮ
ನೂತನ ಸಫಾರಿಯಲ್ಲಿ ಲ್ಯಾಂಡ್‌ರೋವರ್‌ನ ಡಿ8 ಪ್ಲಾಟ್‌ಫಾರಂ ಅನ್ನು ಬಳಕೆ ಮಾಡಲಾಗಿದೆ. ಇದು ಮೋನೊಕಾಕ್ ಛಾಸಿಸ್ ಆಗಿರುವ ಕಾರಣ ಚಾಲನೆ ಉತ್ತಮವಾಗಿದೆ (ಹಳೆಯ ಸಫಾರಿಯಲ್ಲಿ ಬಾಡಿ ಆನ್ ಫ್ರೇಂ ವಿನ್ಯಾಸವಿತ್ತು. ಅಂದರೆ ಛಾಸಿಸ್ ಮತ್ತು ದೇಹ ಎರಡೂ ಬೇರೆ-ಬೇರೆ). ಹಳೆಯ ಸಫಾರಿಗಿಂತ ನೂತನ ಸಫಾರಿಯ ಎತ್ತರ ಕಡಿಮೆ ಇರುವ ಕಾರಣ ಹೆದ್ದಾರಿಯಲ್ಲಿ ಹೆಚ್ಚು ವೇಗದ ಚಾಲನೆ ಸಾಧ್ಯ. ತಿರುವುಗಳಲ್ಲಿ ವೇಗವಾಗಿ ಚಾಲನೆ ಮಾಡಿದರೆ, ಸಫಾರಿಯ ದೇಹ ಹೆಚ್ಚು ರೋಲ್ ಆಗುವುದಿಲ್ಲ. ಇದು ಚಾಲಕನ ಆತ್ಮವಿಶ್ವಾಸವನ್ನು ವೃದ್ಧಿಸುತ್ತದೆ. ನಾಲ್ಕೂ ಚಕ್ರಗಳಿಗೆ ಡಿಸ್ಕ್ ಬ್ರೇಕ್ ನೀಡಿರುವುದರಿಂದ ಬ್ರೇಕಿಂಗ್ ಉತ್ತಮವಾಗಿದೆ. ಎಲೆಕ್ಟ್ರಿಕಲ್ ಬ್ರೇಕ್ ಡಿಸ್ಟ್ರುಬ್ಯೂಷನ್, ಬ್ರೇಕ್ ಅಸಿಸ್ಟ್, ಎಬಿಎಸ್, ಟ್ರಾಕ್ಷನ್ ಕಂಟ್ರೋಲ್, ಕಾರ್ನರ್ ಸ್ಟೆಬಿಲಿಟಿ ಕಂಟ್ರೋಲ್ ಸವಲತ್ತುಗಳು ಇರುವ ಕಾರಣ ವೇಗದ ಚಾಲನೆಯಲ್ಲಿ ಚಾಲಕ ನಿಯಂತ್ರಣ ಕಳೆದುಕೊಳ್ಳುವ ಸಾಧ್ಯತೆ ಸ್ವಲ್ಪ ಕಡಿಮೆ.
ನೂತನ ಸಫಾರಿ ಫ್ರಂಟ್ ವ್ಹೀಲ್ ಡ್ರೈವ್ ಎಸ್‌ಯುವಿಯಾಗಿದೆ (ಹಳೆಯ ಸಫಾರಿ ರಿಯರ್ ವ್ಹೀಲ್ ಡ್ರೈವ್ ಮತ್ತು 4 ವ್ಹೀಲ್ ಡ್ರೈವ್ ಎಸ್‌ಯುವಿಯಾಗಿತ್ತು). ಹೀಗಿದ್ದೂ ಟೆರೇನ್ ರೆಸ್ಪಾನ್ಸ್ ಸಿಸ್ಟಂ ಇರುವ ಕಾರಣ, ಕಚ್ಚಾರಸ್ತೆಗಳಲ್ಲಿ ಮತ್ತು ಸಾಧಾರಣ ಆಫ್‌ರೋಡಿಂಗ್‌ನಲ್ಲಿ ಚಾಲನೆ ಮಾಡಬಹುದು. ಮುಂಬದಿ ಮತ್ತು ಎರಡನೇ ಸಾಲಿನ ಸೀಟಿನಲ್ಲಿ ಪ್ರಯಾಣ ಆರಾಮದಾಯಕವಾಗಿದೆ. ಲೆಗ್‌ರೂಂ, ಹೆಡ್‌ರೂಂ, ಷೋಲ್ಡರ್‌ರೂಂ ಉತ್ತಮವಾಗಿದೆ. ಎರಡನೇ ಸಾಲಿನ ಬೆಂಚ್ ಸೀಟ್ ಮತ್ತು ಕ್ಯಾಪ್ಟನ್ ಸೀಟ್‌ನಲ್ಲಿ ಪ್ರಯಾಣ ಗರಿಷ್ಠ ಆರಾಮವನ್ನು ನೀಡುತ್ತದೆ. ಮೂರನೇ ಸಾಲಿನಲ್ಲಿ ಹೆಡ್‌ರೂಂ, ಷೋಲ್ಡರ್‌ರೂಂ ಮತ್ತು ಲೆಗ್‌ರೂಂ ಸಹ ಉತ್ತಮವಾಗಿದೆ. ಐದೂವರೆ ಅಡಿ ಉದ್ದದ ಮತ್ತು ಸಾಮಾನ್ಯ ತೂಕದ ವ್ಯಕ್ತಿಗಳು ಆರಾಮವಾಗಿ ಕೂರಬಹುದು. ಆದರೆ ಥಿಗ್ ಸಪೋರ್ಟ್ ಕಡಿಮೆ ಇದೆ. ಆದರೆ ಪ್ರಯಾಣ ಆರಾಮದಾಯಕವಾಗಿದೆ.
ಇದನ್ನೂ ಓದಿ:ಎಂಜಿ ಮೋಟರ್ಸ್‌ನ ಸುಧಾರಿತ ಜೆಡ್ಎಸ್ ಇವಿ ಬಿಡುಗಡೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.