ADVERTISEMENT

ಟೆಸ್ಟ್‌ ಡ್ರೈವ್: ಟಿಗೋರ್ ಇ.ವಿ– ವಿಶ್ವಾಸ ಮೂಡಿಸುವ ವಿದ್ಯುತ್ ಚಾಲಿತ ವಾಹನ

ವಿಜಯ್ ಜೋಷಿ
Published 8 ಸೆಪ್ಟೆಂಬರ್ 2021, 11:56 IST
Last Updated 8 ಸೆಪ್ಟೆಂಬರ್ 2021, 11:56 IST
Tigor EV
Tigor EV   

ವಿದ್ಯುತ್ ಚಾಲಿತ ವಾಹನಗಳನ್ನು (ಇ.ವಿ.) ಮಾರುಕಟ್ಟೆಗೆ ಬಿಡುವುದರಲ್ಲಿ ಭಾರತದಲ್ಲಿ ಮುಂಚೂಣಿಯಲ್ಲಿ ಇರುವ ಟಾಟಾ ಮೋಟರ್ಸ್‌, ಟಿಗೋರ್‌ನ ಹೊಸ ಇ.ವಿ. ಆವೃತ್ತಿಯನ್ನು ಮಾರುಕಟ್ಟೆಗೆ ಪರಿಚಯಿಸಿದೆ. ಟಿಗೋರ್ ಇ.ವಿ. ಈಗಾಗಲೇ ಭಾರತದ ಮಾರುಕಟ್ಟೆಯಲ್ಲಿ ಇತ್ತು. ಆದರೆ, ಈಗ ಕಂಪನಿಯು ಈ ಕಾರಿನಲ್ಲಿ ಜಿಪ್‌ಟ್ರಾನ್‌ ತಂತ್ರಜ್ಞಾನವನ್ನು ಅಳವಡಿಸಿ, ಮಾರುಕಟ್ಟೆಗೆ ಬಿಡುಗಡೆ ಮಾಡಿದೆ.

ಈ ಕಾರಿನ ಟೆಸ್ಟ್‌ ಡ್ರೈವ್‌ ಅವಕಾಶವು ಪ್ರಜಾವಾಣಿಗೆ ಲಭಿಸಿತ್ತು. ಬೆಂಗಳೂರಿನಿಂದ ಕೋಲಾರ, ಅಲ್ಲಿಂದ ಕೋಟಿಲಿಂಗೇಶ್ವರಕ್ಕೆ ಹಾಗೂ ಅಲ್ಲಿಂದ ಮತ್ತೆ ಬೆಂಗಳೂರಿಗೆ ವಾಹನವನ್ನು ಚಾಲನೆ ಮಾಡಿ ನೋಡಿದ ಅನುಭವದ ವಿವರಣೆ ಇಲ್ಲಿದೆ. ಟಾಟಾ ಕಂಪನಿಯ ನೆಕ್ಸಾನ್‌ ಇ.ವಿ.ಯಲ್ಲಿ ಕೂಡ ಜಿಪ್‌ಟ್ರಾನ್‌ ತಂತ್ರಜ್ಞಾನವನ್ನು ಬಳಸಿಕೊಳ್ಳಲಾಗಿದೆ. ಎಆರ್‌ಎಐ ಸಂಸ್ಥೆಯು (Automotive Research Association of India) ನಿಗದಿ ಮಾಡಿರುವ ಮಾನದಂಡಗಳ ಅನುಸಾರ ಈ ಕಾರನ್ನು ಒಮ್ಮೆ ಪೂರ್ತಿಯಾಗಿ ಚಾರ್ಜ್‌ ಮಾಡಿಕೊಂಡರೆ, 306 ಕಿ.ಮೀ. ದೂರ ಕ್ರಮಿಸಬಹುದು.

ಟಾಟಾ ಮೋಟರ್ಸ್ ವೆಬ್‌ಸೈಟ್‌ನಲ್ಲಿ ಇರುವ ಮಾಹಿತಿ ಅನ್ವಯ, ಈ ಕಾರಿನ ಬ್ಯಾಟರಿಯನ್ನು ಶೇಕಡ 80ರಷ್ಟು ಚಾರ್ಜ್‌ ಮಾಡಿಕೊಳ್ಳಲು ಎಂಟೂವರೆ ತಾಸು ಬೇಕು. ಫಾಸ್ಟ್‌ ಚಾರ್ಜಿಂಗ್ ಸೌಲಭ್ಯ ಬಳಸಿಕೊಂಡರೆ 60ರಿಂದ 65 ನಿಮಿಷಗಳಲ್ಲಿ ಕಾರಿನ ಬ್ಯಾಟರಿಯನ್ನು ಶೇ 80ರಷ್ಟು ಚಾರ್ಜ್ ಮಾಡಿಕೊಳ್ಳಬಹುದು.

ADVERTISEMENT

ಚಾಲನಾ ಅನುಭವ: ಈ ಕಾರನ್ನು ಎರಡು ಮೋಡ್‌ಗಳಲ್ಲಿ ಚಲಾಯಿಸಬಹುದು – ಸ್ಪೋರ್ಟ್ಸ್‌ ಹಾಗೂ ಡ್ರೈವ್ ಮೋಡ್. ಸ್ಪೋರ್ಟ್ಸ್‌ ಮೋಡ್‌ನಲ್ಲಿ ಕಾರು ಚಲಾಯಿಸುವಾಗ ಬ್ಯಾಟರಿ ಬಳಕೆ ಬಹಳ ಹೆಚ್ಚಾಗಿರುತ್ತದೆ. ಹಾಗಾಗಿ ಈ ಮೋಡ್‌ನಲ್ಲಿ ಹೆಚ್ಚು ದೂರ ವಾಹನ ಚಲಾಯಿಸುವ ಗೋಜಿಗೆ ಹೋಗಲಿಲ್ಲ.

ಕಾರನ್ನು ನಗರ ಪ್ರದೇಶದ ರಸ್ತೆಗಳಲ್ಲಿ, ರಾಷ್ಟ್ರೀಯ ಹೆದ್ದಾರಿಯಲ್ಲಿ, ಗ್ರಾಮಾಂತರ ಪ್ರದೇಶಗಳ ಕಚ್ಚಾ ರಸ್ತೆಗಳಲ್ಲಿ ಚಲಾಯಿಸುವ ಅವಕಾಶ ಸಿಕ್ಕಿತ್ತು.ನಗರ ಪ್ರದೇಶದ ರಸ್ತೆಗಳಲ್ಲಿ ಕಾರು ಚಲಾಯಿಸುವಾಗ 1 ಲೀಟರ್‌ ಅಥವಾ 1.2 ಲೀಟರ್‌ನ ಪೆಟ್ರೋಲ್ ಎಂಜಿನ್ ಕಾರಿಗೂ ಟಿಗೋರ್ ಇ.ವಿ.ಗೂ ವ್ಯತ್ಯಾಸ ಹೆಚ್ಚಾಗಿ ಗೊತ್ತಾಗಲಿಲ್ಲ. ಅಂದರೆ, ನಗರದ ಸಂಚಾರ ದಟ್ಟಣೆಯಲ್ಲಿ ಯಾವುದೇ ಪೆಟ್ರೋಲ್ ಎಂಜಿನ್ ಹ್ಯಾಚ್‌ಬ್ಯಾಕ್ ಅಥವಾ ಕಾಂಪ್ಯಾಕ್ಟ್ ಸೆಡಾನ್ ಕಾರಿನಷ್ಟೇ ಚೆನ್ನಾಗಿ ಟಿಗಾರ್ ಇ.ವಿ. ಚಾಲನೆ ಸಾಧ್ಯವಾಯಿತು.

ಟಿಗಾರ್ ಇ.ವಿ. ಹಾಗೂ ಪೆಟ್ರೋಲ್ ಅಥವಾ ಡೀಸೆಲ್ ಎಂಜಿನ್ ಕಾರಿನ ನಡುವೆ ಇರುವ ವ್ಯತ್ಯಾಸಗಳು ಹೆಚ್ಚು ಸ್ಪಷ್ಟವಾಗಿ ಅರಿವಿಗೆ ಬಂದಿದ್ದು ಹೆದ್ದಾರಿಯಲ್ಲಿ ಪಯಣ ಆರಂಭವಾದ ನಂತರದಲ್ಲಿ. ಆರಂಭದಲ್ಲಿ, ಕಾರನ್ನು ಡ್ರೈವ್ ಮೋಡ್‌ನಲ್ಲಿ ಇರಿಸಿಕೊಂಡು ಚಾಲನೆ ಮಾಡಲಾಯಿತು. ಈ ಕಾರಿನ ವೇಗೋತ್ಕರ್ಷವು (acceleration) ಪೆಟ್ರೋಲ್ ಅಥವಾ ಡೀಸೆಲ್ ಎಂಜಿನ್ ಕಾರಿನಷ್ಟು ಇರಲಿಲ್ಲ ಎಂಬುದು ನಿಜ. ಆದರೆ, ವೇಗೋತ್ಕರ್ಷವು ಕಡಿಮೆಯೇನೂ ಆಗಿರಲಿಲ್ಲ. ಬ್ಯಾಟರಿಯಲ್ಲಿ ಹೆಚ್ಚು ಬಳಸಿಕೊಳ್ಳದ ಡ್ರೈವ್ ಮೋಡ್‌ನಲ್ಲಿ, ಕಾರಿನಲ್ಲಿ ಚಾಲಕ ಸೇರಿದಂತೆ ಇಬ್ಬರು ಇದ್ದಾಗ ಶೂನ್ಯದಿಂದ, ಪ್ರತಿ ಗಂಟೆಗೆ 100 ಕಿ.ಮೀ. ವೇಗವನ್ನು ತಲುಪಲು ಸರಿಸುಮಾರು 22 ಸೆಕೆಂಡ್ ಬೇಕಾಯಿತು. ಹೆದ್ದಾರಿಯು ಸಂಪೂರ್ಣವಾಗಿ ಖಾಲಿ ಇರಲಿಲ್ಲ, ರಸ್ತೆಯಲ್ಲಿ ಉಬ್ಬು–ತಗ್ಗುಗಳು ತುಸು ಪ್ರಮಾಣದಲ್ಲಿ ಇದ್ದವು, ರಸ್ತೆಯು ಸಮತಟ್ಟಾಗಿ ಇರಲಿಲ್ಲ.

ಟಿಗೋರ್ ಇ.ವಿ. ಚಾಲನೆಯ ಖುಷಿಯು ಇನ್ನಷ್ಟು ಹೆಚ್ಚು ಸಿಗುವುದು ಸ್ಪೋರ್ಟ್‌ ಮೋಡ್‌ನಲ್ಲಿ. ಈ ಮೋಡ್‌ನಲ್ಲಿ ಇರಿಸಿ ಕಾರು ಚಾಲನೆ ಮಾಡಿದರೆ, ಪೆಟ್ರೋಲ್ ಅಥವಾ ಡೀಸೆಲ್ ಎಂಜಿನ್ ಇರುವ ಯಾವ ಕಾರಿಗೂ ಕಡಿಮೆ ಇಲ್ಲದಂತೆ ಈ ಇ.ವಿ. ಓಟ ಶುರುಮಾಡುತ್ತದೆ. ಆದರೆ, ಸ್ಪೋರ್ಟ್‌ ಮೋಡ್‌ನಲ್ಲಿ ಬ್ಯಾಟರಿ ಬಳಕೆ ಹೆಚ್ಚಾಗಿರುತ್ತದೆ ಎಂಬುದನ್ನು ಗಮನದಲ್ಲಿ ಇರಿಸಿಕೊಳ್ಳಬೇಕು. ಈ ಮೋಡ್‌ನಲ್ಲಿ ಇರಿಸಿಕೊಂಡು ಕಾರನ್ನು ಪ್ರತಿ ಗಂಟೆಗೆ ಶೂನ್ಯದಿಂದ 100 ಕಿ.ಮೀ. ವೇಗಕ್ಕೆ ಒಯ್ಯಲು ನಮಗೆ ಸರಿಸುಮಾರು 12 ಸೆಕೆಂಡುಗಳು ಸಾಕಾದವು. ಈ ಮೋಡ್‌ನಲ್ಲಿ ಕೂಡ ಕಾರಿನಲ್ಲಿ ಚಾಲಕ ಸೇರಿದಂತೆ ಇಬ್ಬರು ಇದ್ದರು, ರಸ್ತೆಯು ಸಮತಟ್ಟಾಗಿ ಇರಲಿಲ್ಲ.

ಕಾರನ್ನು ಪ್ರತಿ ಗಂಟೆಗೆ ನೂರು ಕಿ.ಮೀ. ಅಥವಾ ಅದಕ್ಕಿಂತ ಹೆಚ್ಚಿನ ವೇಗದಲ್ಲಿ ಚಲಾಯಿಸಿದಾಗ ಹೆಚ್ಚು ಬ್ಯಾಟರಿ ಬಳಸುತ್ತಿತ್ತು. ಪ್ರತಿ ಗಂಟೆಗೆ 60 ಕಿ.ಮೀ.ಯಿಂದ 80 ಕಿ.ಮೀ. ನಡುವಿನ ವೇಗದಲ್ಲಿ ಚಾಲನೆ ಮಾಡಿದಾಗ ಬ್ಯಾಟರಿ ಬಳಕೆ ಬಹಳ ಚೆನ್ನಾಗಿ ಇರುತ್ತಿತ್ತು ಎಂದು ಅನಿಸಿತು.

ಸರಿಸುಮಾರು 50 ಕಿ.ಮೀ. ದೂರವನ್ನು ಹೆದ್ದಾರಿಯಲ್ಲಿ ಸಾಗಿದ ನಂತರದಲ್ಲಿ ಕಾರನ್ನು ತುಸು ದೂರದವರೆಗೆ ಹಳ್ಳಿಯ ರಸ್ತೆಗಳಲ್ಲಿ ಓಡಿಸುವ ಮನಸ್ಸಾಯಿತು. ಹೆದ್ದಾರಿಯಿಂದ ಪಕ್ಕಕ್ಕೆ ಹೊರಳಿಕೊಳ್ಳಲಾಯಿತು. ಹೊಂಡ–ಗುಂಡಿಗಳು ಇದ್ದ ರಸ್ತೆಯಲ್ಲಿಯೂ ಕಾರಿನ ಚಾಲನಾ ಅನುಭವ ಹಿತಕರವಾಗಿ ಇತ್ತು. ಕೆಸರು ತುಂಬಿದ್ದ ರಸ್ತೆಯಲ್ಲಿ ಕೂಡ ಈ ಕಾರಿನ ಚಾಲನೆ ಸಮಸ್ಯೆ ಸೃಷ್ಟಿಸಲಿಲ್ಲ.

ಇವು ಚಾಲನಾ ಅನುಭವಕ್ಕೆ ಸಂಬಂಧಿಸಿದ ಮಾತುಗಳು. ಕಾರಿನ ಒಳಾಂಗಣದ ಬಗ್ಗೆ ಒಂದೆರಡು ಮಾತುಗಳನ್ನು ಹೇಳಬೇಕು. ಇ.ವಿ. ಕಾರಿನ ಒಳಾಂಗಣವು ಯಾವ ವಿಷಯದಲ್ಲಿಯೂ ರಾಜಿ ಆಗಿಲ್ಲ. ಸ್ಥಳಾವಕಾಶ, ಇತರ ಫೀಚರ್‌ಗಳ ವಿಚಾರದಲ್ಲಿ ಯಾವ ಕೊರತೆಯೂ ಇಲ್ಲಿಲ್ಲ. ಹೆಚ್ಚಿನ ವೇಗದಲ್ಲಿ ಚಾಲನೆ ಮಾಡುವಾಗ, ನಗರದ ರಸ್ತೆಗಳಲ್ಲಿ ನಿಧಾನವಾಗಿ ಸಾಗುವಾಗ ಕಾರಿನ ಸ್ಟಿಯರಿಂಗ್ ಸ್ಪಂದಿಸುವ ಬಗೆಯು ಚಾಲಕನಲ್ಲಿ ಸುರಕ್ಷಿತ ಭಾವ ಮೂಡಿಸುವಂತೆ ಇದೆ.

ಬ್ಯಾಟರಿ ಮಟ್ಟವು ಶೇಕಡ 10 ಅಥವಾ ಅದಕ್ಕಿಂತ ಕಡಿಮೆ ಆದಾಗ ಕಾರು ತನ್ನನ್ನು ಮತ್ತೆ ಚಾರ್ಜ್ ಮಾಡುವಂತೆ ಚಾಲಕನಿಗೆ ಸೂಚನೆ ನೀಡುತ್ತದೆ. ಈ ಮಟ್ಟಕ್ಕೆ ಬ್ಯಾಟರಿ ಇಳಿದಾಗ ಕಾರಿನ ವೇಗ ತಾನಾಗಿಯೇ ಕಡಿಮೆ ಆಗಿದ್ದು ಅನುಭವಕ್ಕೆ ಬಂತು. ಬಹುಶಃ, ಬ್ಯಾಟರಿ ಉಳಿತಾಯ ಮಾಡುವ ಉದ್ದೇಶದಿಂದ, ಕಾರು ಪ್ರತಿ ಗಂಟೆಗೆ 60 ಕಿ.ಮೀ.ಗಿಂತ ಹೆಚ್ಚು ವೇಗದಲ್ಲಿ ಸಾಗುತ್ತಿರಲಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.