ಮುಂಬೈ: ಬ್ಯಾಟರಿ ಚಾಲಿತ ಹಾಗೂ ಹೈಬ್ರಿಡ್ ವಾಹನಗಳ ತಯಾರಿಕೆಯ ಉದ್ದೇಶದೊಂದಿಗೆ ಟೊಯೊಟಾ ಕಿರ್ಲೋಸ್ಕರ್ ಮೋಟಾರ್ (ಟಿಕೆಎಂ) ಕಂಪನಿಯು ಮಹಾರಾಷ್ಟ್ರ ಸರ್ಕಾರದೊಂದಿಗೆ ಬುಧವಾರ ಒಡಂಬಡಿಕೆಗೆ ಸಹಿ ಹಾಕಿವೆ.
ಮುಂಬೈನ ಸಹ್ಯಾದ್ರಿ ಅತಿಥಿ ಗೃಹದಲ್ಲಿ ಒಡಂಬಡಿಕೆಗೆ ಸಹಿ ಹಾಕಿದ ನಂತರ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ ಏಕನಾಥ ಶಿಂದೆ, ‘ಆಟೋಮೊಬೈಲ್ ಕ್ಷೇತ್ರದಲ್ಲಿ ಈ ಒಡಂಬಡಿಕೆ ಕ್ರಾಂತಿ ಮಾಡಲಿದೆ’ ಎಂದಿದ್ದಾರೆ.
‘ಈ ಯೋಜನೆಯಡಿ ನಿರ್ಮಾಣವಾಗಲಿರುವ ನೂತನ ಘಟಕಕ್ಕೆ ಕಂಪನಿಯು ₹20 ಸಾವಿರ ಕೋಟಿ ಹೂಡಿಕೆ ಮಾಡಲಿದೆ. ಪ್ರತಿ ವರ್ಷ 4 ಲಕ್ಷ ಎಲೆಕ್ಟ್ರಿಕ್ ಹಾಗೂ ಹೈಬ್ರಿಡ್ ಕಾರುಗಳ ಉತ್ಪಾದನೆಯಾಗಲಿದೆ. ಆ ಮೂಲಕ 8 ಸಾವಿರ ನೇರ ಉದ್ಯೋಗ ಹಾಗೂ 8 ಸಾವಿರ ಪರೋಕ್ಷ ಉದ್ಯೋಗವನ್ನು ಸೃಷ್ಟಿಸುವ ಗುರಿ ಹೊಂದಲಾಗಿದೆ’ ಎಂದು ಅವರು ಹೇಳಿದ್ದಾರೆ.
ಉಪಮುಖ್ಯಮಂತ್ರಿ ದೇವೇಂದ್ರ ಫಡಣವೀಸ್ ಪ್ರತಿಕ್ರಿಯಿಸಿ, ‘ಪರಿವರ್ತನೆ ಹೊಂದುತ್ತಿರುವ ಮಹಾರಾಷ್ಟ್ರ, ಅಭಿವೃದ್ಧಿ ಹೊಂದಿದ ಮರಾಠವಾಡದ ಮೂಲಕ ರಾಜ್ಯವು ಭಾರತದ ಅಭಿವೃದ್ಧಿಗೆ ತನ್ನ ಬದ್ಧತೆಯನ್ನು ಪ್ರದರ್ಶಿಸಿದೆ. ಮಹಾರಾಷ್ಟ್ರದಲ್ಲಿ ಗ್ರೀನ್ ಫೀಲ್ಡ್ ತಯಾರಿಕಾ ಘಟಕವನ್ನು ಟೊಯೊಟಾ ಕಿರ್ಲೋಸ್ಕರ್ ಮೋಟಾರ್ಸ್ ಸ್ಥಾಪಿಸಲಿದೆ. ಇದಕ್ಕಾಗಿ 850 ಎಕರೆ ಜಾಗವನ್ನು ಛತ್ರಪತಿ ಸಾಂಭಾಜಿನಗರದಲ್ಲಿರುವ ಔರಂಗಾಬಾದ್ ಕೈಗಾರಿಕಾ ನಗರದಲ್ಲಿ ಮಂಜೂರು ಮಾಡಲಾಗಿದೆ’ ಎಂದು ಶಿಂದೆ ಮಾಹಿತಿ ನೀಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.