ADVERTISEMENT

ಸುರಕ್ಷೆ, ದಕ್ಷತೆಯ ಕೆಯುವಿ 100

ಗಣೇಶ ವೈದ್ಯ
Published 20 ಜನವರಿ 2016, 19:42 IST
Last Updated 20 ಜನವರಿ 2016, 19:42 IST
ಸುರಕ್ಷೆ, ದಕ್ಷತೆಯ ಕೆಯುವಿ 100
ಸುರಕ್ಷೆ, ದಕ್ಷತೆಯ ಕೆಯುವಿ 100   

ದೇಸಿ ಎಸ್‌ಯುವಿ ಮಾರುಕಟ್ಟೆಯಲ್ಲಿ ದೊಡ್ಡ ಪ್ರಮಾಣದಲ್ಲಿ ಗುರ್ತಿಸಿಕೊಂಡಿರುವ ಮಹೀಂದ್ರಾ ಆಟೋಮೊಬೈಲ್ಸ್, ಸಂಕ್ರಾಂತಿ ಹಬ್ಬದಂದು ಮತ್ತೊಂದು ಹೊಸ ಉತ್ಪನ್ನವನ್ನು ಮಾರುಕಟ್ಟೆಗೆ ಪರಿಚಯಿಸಿದೆ. ಬಿಡುಗಡೆಗೂ ಮುನ್ನವೇ ಸಾಕಷ್ಟು ಪ್ರಚಾರ ಪಡೆದುಕೊಂಡಿದ್ದ ‘ಕೆಯುವಿ 100’ ಮಾದರಿಯನ್ನು ಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಶಕ ಪವನ್ ಗೊಯೆಂಕಾ ಅವರು ಪುಣೆಯ ಚಾಕನ್‌ನಲ್ಲಿರುವ ತಮ್ಮ ಉತ್ಪಾದನಾ ಘಟಕದಲ್ಲಿ ಲೋಕಾರ್ಪಣೆ ಮಾಡಿದರು.

‘ಯುವಜನರ ಚಿಂತನೆಗೆ ಪೂರಕವಾಗುವಂತೆ ಕೆಯುವಿ 100 ಸಿದ್ಧವಾಗಿದೆ. ಹಾಗಾಗಿಯೇ ಇದು ಯಂಗ್ ಎಸ್‌ಯುವಿ’ ಎಂದು ಪರಿಚಯಿಸಿದರು ಗೋಯೆಂಕಾ. ‘ಕೆಯುವಿ 100’ ಮೇಲೆ ಮಹೀಂದ್ರಾ ನಿರೀಕ್ಷೆಯ ಭಾರವನ್ನೇ ಹೊರಿಸಿದೆ. ಅದಕ್ಕಾಗಿಯೇ ಬಿಡುಗಡೆ ಕೂಡ ಅಷ್ಟೇ ಭರ್ಜರಿಯಾಗೇ ನಡೆದಿದೆ. 350ಕ್ಕೂ ಹೆಚ್ಚು ತಂತ್ರಜ್ಞರ ಸತತ ನಾಲ್ಕು ವರ್ಷಗಳ ಶ್ರಮದ ಫಲವಾಗಿ ‘ಕೆಯುವಿ 100’ ಮಾರುಕಟ್ಟೆಗೆ ಬಂದಿದೆ.

ಎಸ್‌ಯುವಿ ಮಾರುಕಟ್ಟೆಯಲ್ಲಿ ‘ಬೊಲೆರೊ’, ‘ಸ್ಕಾರ್ಪಿಯೊ’ ತಂದುಕೊಟ್ಟ ದೊಡ್ಡ ಯಶಸ್ಸನ್ನು ‘ಕೆಯುವಿ100’ ಕೂಡ ತರುವ ಭರವಸೆ ಅದರದ್ದು. ‘ಇದೊಂದು ಗೇಮ್ ಚೇಂಜರ್ ಎಸ್‌ಯುವಿ. ಅತ್ಯಾಧುನಿಕ ಸೌಲಭ್ಯ ಹೊಂದಿದ, ಆಹ್ಲಾದಕರ ಅನುಭವ ನೀಡುವ ಕಾಂಪ್ಯಾಕ್ಟ್ ಎಸ್‌ಯುವಿಗಳ ಹೊಸ ಶ್ರೇಣಿಯ ಶಕೆಯೊಂದು ನಮ್ಮಿಂದಲೇ ಆರಂಭವಾಗುತ್ತಿದೆ’ಎಂಬ ಹೆಮ್ಮೆ ಸಂಸ್ಥೆಯ ಚೇರ್‌ಮನ್ ಆನಂದ ಮಹೀಂದ್ರಾ ಅವರದ್ದು.

ವಿನ್ಯಾಸ ವಿಶೇಷ
‘ಕೆಯುವಿ 100’ನ ಬಾಹ್ಯ ವಿನ್ಯಾಸ ಗಮನ ಸೆಳೆಯುತ್ತದೆ. ಈ ಮಾದರಿಯಲ್ಲಿ ಕೆ2, ಕೆ2+, ಕೆ4, ಕೆ4+, ಕೆ6, ಕೆ6+ ಮತ್ತು ಕೆ8 ಶ್ರೇಣಿಗಳನ್ನು ಪರಿಚಯಿಸಲಾಗಿದೆ. ಇವು ಬಿಳಿ, ಸಮುದ್ರ ನೀಲಿ, ಮಿರುಗು ಬೆಳ್ಳಿ, ಕಡುಗೆಂಪು, ಕಿತ್ತಳೆ, ಕಪ್ಪು ಮತ್ತು ಬೂದು ಬಣ್ಣಗಳಲ್ಲಿ ಲಭ್ಯ. ಹಿಂಬದಿಯ ಬಾಗಿಲು ತೆರೆಯುವ ಹಿಡಿಕೆಯನ್ನು ಕಿಟಕಿಯ ಪಕ್ಕದಲ್ಲಿ ನೀಡಲಾಗಿರುವುದು ವಿಶೇಷ.

ಸನ್ ಗ್ಲಾಸ್‌ನಿಂದ ಪ್ರೇರಿತವಾದ ಹೆಡ್‌ಲ್ಯಾಂಪ್‌ ವಿನ್ಯಾಸ ಚೆನ್ನಾಗಿದೆ. ಅಡ್ವೆಂಚರ್ ಬಯಸುವವರಿಗೆ ರಗಡ್ ಲುಕ್ ನೀಡುವ ಲಕ್ಷಣಗಳೆಲ್ಲ ‘ಕೆಯುವಿ100’ನಲ್ಲಿದೆ. ಹದಗೆಟ್ಟ ರಸ್ತೆಯಲ್ಲೂ ಸಂಚಾರಕ್ಕೆ ಅನುಕೂಲವಾಗುವುದು ಎಸ್‌ಯುವಿಗಳ ಮುಖ್ಯ ಲಕ್ಷಣ. ಅದರಂತೆ ಈ ವಾಹನ 17 ಸೆಂ.ಮೀ ಗ್ರೌಂಡ್ ಕ್ಲಿಯರೆನ್ಸ್ ಹೊಂದಿದೆ.

ಒಳಾಂಗಣ ವಿನ್ಯಾಸವನ್ನು ಗಮನಿಸುವುದಾದರೆ ಕೆಲ ಮಹತ್ವದ ಸಂಗತಿಗಳಿವೆ. ಮುಖ್ಯವಾದದ್ದು ಚಾಲಕನ ಪಕ್ಕದಲ್ಲಿ ಎರಡು ಸೀಟುಗಳನ್ನು ಅಳವಡಿಸಿರುವುದು. ಅಂದರೆ ಮುಂಭಾಗದಲ್ಲಿ ಚಾಲಕ ಸೇರಿದಂತೆ ಮೂವರು ಕೂರಲು ಅನುವಾಗುವಂತಿದೆ. ಅದಕ್ಕೆ ಪೂರಕವಾಗುವಂತೆ ಗೇರ್‌ಶಿಫ್ಟ್‌ ಅನ್ನು ಡ್ಯಾಶ್ ಬೋರ್ಡ್‌ನಲ್ಲಿ ಅಳವಡಿಸಲಾಗಿದೆ. ಹಾಗಾಗಿ ಮಧ್ಯದಲ್ಲಿ ಕುಳಿತುಕೊಳ್ಳುವವರು ಕೂಡ ಯಾವ ಅಡಚಣೆ ಇಲ್ಲದಂತೆ ಆರಾಮವಾಗಿ ಕಾಲುಚಾಚಬಹುದು.

ಈ ಹೆಚ್ಚುವರಿ ಆಸನದ ಅವಶ್ಯವಿಲ್ಲದಾಗ ಮಡಚಿಡುವ ಅವಕಾಶವಿದೆ. ಡ್ಯಾಶ್ ಬೋರ್ಡ್ ಕೆಳಗೆ ಹೆಚ್ಚಿನ ಸ್ಥಳಾವಕಾಶವಿದ್ದು ದೂರದ ಪ್ರಯಾಣದಲ್ಲಿ ಕಾಲು ನೀಡಿಕೊಳ್ಳಲು ಆರಾಮ. ನೀರಿನ ಬಾಟಲಿಗಳು, ಚಿಲ್ಲರೆ ಇತರೆ ಚಿಕ್ಕಪುಟ್ಟ ಸಾಮಗ್ರಿಗಳನ್ನು ಇಡಲು ಸಾಕಷ್ಟು ಸ್ಥಳಾವಕಾಶವಿದೆ. ಕಾಂಪ್ಯಾಕ್ಟ್‌ ವೆಹಿಕಲ್ ಆಗಿದ್ದರೂ ಡಿಕ್ಕಿಯ ಗಾತ್ರವೇನೂ ಚಿಕ್ಕದಲ್ಲ. 243 ಲೀಟರ್ ಸಾಮರ್ಥ್ಯದ ಡಿಕ್ಕಿ ಇದ್ದು, ಸೀಟುಗಳನ್ನು ಮುಂದೆ ಬಾಗಿಸಿ 473 ಲೀಟರ್‌ವರೆಗೂ ಸಾಮರ್ಥ್ಯ ಹೆಚ್ಚಿಸಬಹುದು (ಕೆ2, ಕೆ2+ ಶ್ರೇಣಿಯಲ್ಲಿ ಈ ಸೌಲಭ್ಯ ಇಲ್ಲ).

ಸುರಕ್ಷೆಗೆ ಲಕ್ಷ್ಯ: ‘ಕೆಯುವಿ 100’ನ ಎಲ್ಲಾ ಶ್ರೇಣಿಗಳಲ್ಲೂ ಎಬಿಎಸ್ ಮತ್ತು ಇಬಿಡಿ ಸೌಲಭ್ಯ ನೀಡಿರುವುದು ಗಮನಿಸುವ ಅಂಶ. ಎರಡು ಏರ್ ಬ್ಯಾಗ್ ಇವೆ. ಚಿಕ್ಕ ಮಕ್ಕಳನ್ನು ಮಲಗಿಸಲು ಐಎಸ್‌ಒಫಿಕ್ಸ್‌ ಸೀಟ್ ಅಳವಡಿಸಲಾಗಿದೆ. 2017ರಲ್ಲಿ ಜಾರಿಯಾಗಲಿರುವ ಸುರಕ್ಷಾ ನಿಯಮಗಳನ್ನೂ ಮುಂಚಿತವಾಗಿಯೇ ಪಾಲಿಸಲಾಗಿದೆ. ಕಾಯಿಲ್ ಸ್ಪ್ರಿಂಗ್ ಮತ್ತು ಹೈಡ್ರಾಲಿಕ್ ಗ್ಯಾಸ್ ಚಾರ್ಜ್‌ನಿಂದ ತಯಾರಿಸಲಾದ ಶಾಕ್ ಅಬ್ಸರ್ಬ್‌ಗಳನ್ನು ಬಳಸಲಾಗಿದೆ. ಆದರೆ ಹಿಂಬದಿಯಲ್ಲಿ ಪಾರ್ಕಿಂಗ್ ಅಸಿಸ್ಟನ್ಸ್ ಇಲ್ಲದಿರುವುದನ್ನು ಕೊರತೆ ಎಂದೇ ಹೇಳಬೇಕು.

ಎಂಜಿನ್ ಮತ್ತು ದಕ್ಷತೆ: ಈವರೆಗೆ ಡೀಸೆಲ್ ಮಾದರಿಯ ಎಸ್‌ಯುವಿಗಳನ್ನಷ್ಟೇ ಉತ್ಪಾದಿಸುತ್ತಿದ್ದ ಮಹೀಂದ್ರಾ ‘ಕೆಯುವಿ 100’ ಮೂಲಕ ಪೆಟ್ರೋಲ್ ಶ್ರೇಣಿಗೂ ಪದಾರ್ಪಣೆ ಮಾಡಿದೆ. ಪೆಟ್ರೋಲ್ ಮಾದರಿಯನ್ನು ಜಿ80 ಮತ್ತು ಡೀಸೆಲ್ ಮಾದರಿಯನ್ನು ಡಿ75 ಎಂದು ಹೆಸರಿಸಲಾಗಿದೆ. ಇವೆರಡೂ ಮಾದರಿಗಳಲ್ಲಿ 1.2 ಲೀಟರ್ ಎಂಜಿನ್ ಇದ್ದು 1198 ಸಿಸಿಗಳ ಎಂ–ಫಾಲ್ಕನ್ ಎಂಜಿನ್ ಬಳಸಲಾಗಿದೆ. ಅಲ್ಯೂಮಿನಿಯಂನಿಂದ ನಿರ್ಮಿಸಲಾದ ಪೆಟ್ರೋಲ್ ಎಂಜಿನ್, 5500 ಆರ್‌ಪಿಎಂನಲ್ಲಿ ಗರಿಷ್ಠ 82 ಬಿಎಚ್‌ಪಿ ಹಾಗೂ 3600 ಆರ್‌ಪಿಎಂನಲ್ಲಿ 115 ಎನ್‌ಎಂ ಟಾರ್ಕ್ ಉತ್ಪಾದಿಸಬಲ್ಲದು. ಡೀಸೆಲ್ ಎಂಜಿನ್ 3750 ಆರ್‌ಪಿಎಂನಲ್ಲಿ 77 ಬಿಎಚ್‌ಪಿ ಮತ್ತು 1750–2250 ಆರ್‌ಪಿಎಂನಲ್ಲಿ ಗರಿಷ್ಠ 190 ಎನ್‌ಎಂ ಟಾರ್ಕ್ ಉತ್ಪಾದನಾ ಸಾಮರ್ಥ್ಯ ಹೊಂದಿದ್ದು, ಐದು ಗೇರ್‌ಗಳಿವೆ.

ಇಂಧನ ಟ್ಯಾಂಕ್ ಸಾಮರ್ಥ್ಯ 35 ಲೀಟರ್. ಪ್ರತಿ ಲೀಟರ್‌ಗೆ ಪೆಟ್ರೋಲ್ ಎಂಜಿನ್ 18.15 ಕಿ.ಮೀ ಹಾಗೂ ಡೀಸೆಲ್ ಎಂಜಿನ್ 25.32 ಕಿ.ಮೀ ಮೈಲೇಜ್ ನೀಡುವ ಭರವಸೆ ಇತ್ತಿದೆ ಕಂಪೆನಿ. ಸದ್ಯ ಲಭ್ಯವಿರುವ ಡೀಸೆಲ್ ಎಂಜಿನ್‌ನಲ್ಲಿ ಇದು ಅತ್ಯಧಿಕ ಮೈಲೇಜ್. ಈ ಸೌಲಭ್ಯಗಳನ್ನು ಹೊಂದಿರುವ ಇತರ ಕಂಪೆನಿಗಳ ಕಾರುಗಳಿಗೆ ಹೋಲಿಸಿದರೆ ‘ಕೆಯುವಿ 100’ ಮಾದರಿ ಬೆಲೆ ಗಮನೀಯ ಪ್ರಮಾಣದಲ್ಲಿ ಕಡಿಮೆ.

ಬೆಂಗಳೂರು ಎಕ್ಸ್ ಷೋ ರೂಂನಲ್ಲಿ ‘ಕೆಯುವಿ 100’ ಪೆಟ್ರೋಲ್ ಸರಣಿಯ ಆರಂಭಿಕ ಬೆಲೆ ₹ 4.42 ಲಕ್ಷ ಮತ್ತು ಡೀಸೆಲ್ ಸರಣಿಯ ಆರಂಭಿಕ ಬೆಲೆ ₹ 5.22 ಲಕ್ಷ. ಬುಕ್ಕಿಂಗ್‌ ಆರಂಭವಾಗಿದ್ದು, ಫ್ಲಿಪ್‌ಕಾರ್ಟ್‌ನಲ್ಲಿ ಕೂಡ ಬುಕ್ ಮಾಡಬಹುದು. ‘ಯೇ ದಿಲ್ ಮಾಂಗೆ ಮೋರ್ ಎನ್ನುವ ಮನಸುಗಳನ್ನು ತೃಪ್ತಿಪಡಿಸುವ ಮತ್ತು ಸವಾರಿ ಸಂತಸವನ್ನು ಮೇಲ್ದರ್ಜೆಗೇರಿಸುವ ಯಾವ ಅವಕಾಶಗಳನ್ನೂ ಬಿಟ್ಟುಕೊಟ್ಟಿಲ್ಲ’ ಎನ್ನುತ್ತಾರೆ ಮಹೀಂದ್ರಾದ ಮುಖ್ಯ ಕಾರ್ಯನಿರ್ವಾಹಕ ಅಧ್ಯಕ್ಷ ಪ್ರವೀಣ್ ಷಾ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.