‘ನನ್ನ ಬಳಿಯೂ ಒಂದು ಚಂದದ ಸೈಕಲ್ ಇರಬೇಕು’ ಎನ್ನುವುದು ಬಹುತೇಕರ ಬಾಲ್ಯದ ಆಸೆ. ನನಗೂ ಅಂಥ ಒಂದು ಆಸೆ ಇತ್ತು. ಬಡತನದ ಕುಟುಂಬ ನಿರ್ವಹಣೆಯ ನಡುವೆಯೂ ನನ್ನ ತಾಯಿ ಒಂದು ದಿನ ನೀಲಿ ಬಣ್ಣದ ಚೆಂದದ ಸೈಕಲ್ ಕೊಡಿಸಿದ್ದರು.
ಸೈಕಲ್ ಹೊಡ್ಕೊಂಡು ರಸ್ತೆಯಲ್ಲಿ ಹೋಗುವಾಗ ಗೆಳೆಯರು ‘ಅವನ ಸೈಕಲ್ ನೋಡ್ರೋ ಎಷ್ಟು ಚಂದವಾಗಿದೆ’ ಅಂತ ಹೇಳಿದರೆ, ನನ್ನ ಎದೆ ಉಬ್ಬಿ ಹೋಗುತ್ತಿತ್ತು. ಹಾಗಾಗಿ, ನಾನು ಹೊರಗೆ ಹೋಗುವಾಗ ಕಡ್ಡಾಯವಾಗಿ ಸೈಕಲ್‌ನಲ್ಲೇ ಹೋಗುತ್ತಿದ್ದೆ. ಅದೊಂದು ದಿನ ಪೇಟೆಯಲ್ಲಿ ಸೈಕಲ್ ನಿಲ್ಲಿಸಿಬಿಟ್ಟು, ಮರೆತು ಮನೆಗೆ ಬಂದಿದ್ದೆ. ರಾತ್ರಿ ಉಂಡು ಮಲಗಿದ್ದು ಆಗಿತ್ತು. ಮರುದಿನ ಬೆಳಗ್ಗೆ ಅಮ್ಮ ಅಂಗಳಕ್ಕೆ ನೀರು ಹಾಕಲು ಹೊರಗೆ ಹೋದಾಗಲೇ ಗೊತ್ತಾಗಿದ್ದು ‘ನನ್ನ ಸೈಕಲ್ ಇಲ್ಲ’ ಎಂದು.
ಗಾಬರಿ ಬಿದ್ದವನಂತೆ ಪೇಟೆಗೆ ಹೋದೆ. ಎಲ್ಲಿ ನಿಲ್ಲಿಸಿದ್ದೆ ಅಂತ ತಡಕಾಡತೊಡಗಿದೆ. ಸಿಕ್ಕ ಸಿಕ್ಕವರನ್ನು ‘ಅಣ್ಣಾ ನನ್ನ ಸೈಕಲ್‌ನ ರಾತ್ರಿ ಇಲ್ಲಿ ಬಿಟ್ಟು ಹೋಗಿದ್ದೆ, ನೋಡಿದ್ರಾ’ ಅಂತ ಕೇಳಿದೆ. ಆದರೆ ಎಲ್ಲೂ ಸೈಕಲ್ ಸುಳಿವು ಸಿಗಲಿಲ್ಲ. ಸೂರ್ಯ ನೆತ್ತಿಗೇರುತ್ತಿತ್ತು. ಸಪ್ಪೆ ಮೋರೆ ಹಾಕಿಕೊಂಡು ಮನೆಗೆ ಬಂದೆ. ನನ್ನ ಸ್ಥಿತಿ ನೋಡಿ, ಅಮ್ಮ ಬೈಯಲಿಲ್ಲ. ‘ಹೋಗಿ ಸ್ನಾನ ಮಾಡಿ ತಿಂಡಿ ತಿನ್ನು ಬಾ’ ಅಂದರು.
ಪ್ರೀತಿಯ ಸೈಕಲ್ ಕಳೆದುಕೊಂಡಿದ್ದ ನನ್ನ ಮನದಲ್ಲಿ ಸೂತಕ ಮನೆಮಾಡಿತ್ತು. ಅದರ ನಡುವೆಯೂ ಸ್ನಾನ ಮಾಡಿ ಊಟಕ್ಕೆ ಕುಳಿತೆ. ಒಂದು ಕಡೆ ಸೈಕಲ್ ಕಳೆದುಕೊಂಡ ದುಃಖವಾದರೆ, ಇನ್ನೊಂದು ಕಡೆ ಬಡತನದ ನಡುವೆ ಅಮ್ಮ ಕೊಡಿಸಿದ್ದ ಸೈಕಲ್ ಕಳೆಯಿತಲ್ಲ, ಎಂಬುದು ಗಾಯದ ಮೇಲೆ ಬರೆ ಎಳೆದಂತಾಗಿತ್ತು. ಇಂಥ ಸಂದರ್ಭದಲ್ಲಿ ಬೇರೆ ಯಾರದ್ದಾದ್ರೂ ಆಗಿದ್ದರೆ, ‘ಇನ್ಮೇಲೆ ನಿನಗೆ ಏನು ಕೊಡಿಸಲ್ಲ, ಕೊಡಿಸದ್ದನ್ನ ನೆಟ್ಟಗೆ ಇಟ್ಟುಕೊಳ್ಳೊಕೆ ಬರಲ್ವಾ’ ಅಂತ ಹಿಗ್ಗಾಮುಗ್ಗಾ ಉಗಿಯುತ್ತಿದ್ದರು. ಆದರೆ ನನ್ನಮ್ಮ ನಾನು ಊಟ ಮಾಡದಿದ್ದನ್ನು ನೋಡಿ ದಿಢೀರನೆ ಅಟ್ಟ ಏರಿ ಏನೋ ತಡಕಾಡುತ್ತಿದ್ದಳು. ಕೆಲ ಹೊತ್ತಿನ ನಂತರ ₹5500 ರೂಪಾಯಿಗಳನ್ನು ತಂದು ನನ್ನ ಕೈಗಿತ್ತು, ‘ಅಂಥದ್ದೇ ಇನ್ನೊಂದು ಸೈಕಲ್ ತಗೋ ಹೋಗು’ ಅಂತ ಹೇಳಿದಳು!
ಆ ಮಾತಿನಿಂದ ಅಚ್ಚರಿ, ಖುಷಿಯಾಯಿತು. ಒಲ್ಲದ ಮನಸ್ಸಿನಿಂದ ಊಟ ಮಾಡಿ, ಹಣವನ್ನು ಅಲ್ಲೆ ಬಿಟ್ಟು ಪೇಟೆಗೆ ಹೋದೆ. ನೆತ್ತಿ ಸುಡುತ್ತಿದ್ದರು, ತಲೆಯೊಳಗೆ ಪೂರ್ಣ ಸೈಕಲ್‌ದೇ ಚಿಂತೆ. ಈ ನಡುವೆ, ಹೊಸದಾಗಿ ಸ್ಮಾರ್ಟ್ ಫೋನ್ ತಗೊಂಡಿದ್ದೆ. ಅದನ್ನು ನೋಡುತ್ತ ತಕ್ಷಣ ಉಪಾಯವೊಂದು ಹೊಳೆಯಿತು. ಫೇಸ್‌ಬುಕ್‌ನಲ್ಲಿ ‘ನನ್ನ ಸೈಕಲ್ ಕಳೆದುಹೋಗಿದೆ. ದಯಮಾಡಿ ನಿಮಗೆ ಸಿಕ್ಕಿದ್ದಲ್ಲಿ ತಿಳಿಸಿ’ ಅಂತ ಸ್ನೇಹಿತರಿಗೆ ಟ್ಯಾಗ್ ಮಾಡಿ ಪೋಸ್ಟ್ ಹಾಕಿದೆ. ಹಲವರು ಲೈಕ್ ಮಾಡ್ತಿದ್ರು, ಇನ್ನು ಕೆಲವರು ಯಾವಾಗ? ಎಲ್ಲಿ ಕಳ್ಕೊಂಡೆ ? ಅಂತ ಸಾಲು ಸಾಲು ಪ್ರಶ್ನೆ ಕೇಳುತ್ತಿದ್ದರು.
ಕೊನೆಗೂ ನಮ್ಮೂರಿನ ಒಬ್ಬರು ರಾತ್ರಿ ಪೇಟೆಯಲ್ಲಿದ್ದ ಸೈಕಲ್ ನನ್ನದೆ ಎಂದು ಗುರುತಿಸಿ ಮನೆಗೆ ತೆಗೆದುಕೊಂಡು ಹೋಗಿದ್ದರಂತೆ. ಫೇಸ್‌ಬುಕ್ ಪೋಸ್ಟ್‌ಗೆ ಅವರೇ ಕಮೆಂಟ್ ಹಾಕಿ, ಮನೆಗೆ ಬರುವಂತೆ ಹೇಳಿದ್ದರು. ಅದನ್ನು ನೋಡುತ್ತಿದ್ದಂತೆ ಒಂದೇ ಜಿಗಿತಕ್ಕೆ ಅವರ ಮನೆಯ ಬಳಿ ನಿಂತಿದ್ದೆ. ಮನೆಯ ನಡುಮನೆಯಲ್ಲಿ ನನ್ನ ಅಂಬಾರಿ ನಿಂತಿತ್ತು. ಸೈಕಲ್ ಸಿಕ್ಕಾಗ ಕಳೆದು ಹೋದ ಸ್ನೇಹಿತ ಒಮ್ಮಲೆ ಎದುರು ಸಿಕ್ಕಂತಹ ಅನುಭವ ನನ್ನದಾಗಿತ್ತು. ಖುಷಿಯಿಂದ ಸೈಕಲ್ ಏರಿ ಮನೆಗೆ ಬಂದ ನನ್ನ ನೋಡಿ ನಮ್ಮಮ್ಮನೂ ಫುಲ್ ಖುಷ್.
ಇಷ್ಟಾದ ಮೇಲೂ ‘ಮಗನ ಬೇಸರ ನೋಡಲಾಗದೇ, ಕಷ್ಟಕಾಲಕ್ಕೆ ಕೂಡಿಟ್ಟ ಹಣವನ್ನು ಮತ್ತೊಮ್ಮೆ ಸೈಕಲ್ ತೆಗೆದುಕೊಳ್ಳಲು ಹಣ ಕೊಟ್ಟ ತಾಯಿಯ ಪ್ರೀತಿ’ ನನ್ನನ್ನು ಬಹಳ ಕಾಡಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.