ಚೆನ್ನೈ: ಪದೇ ಪದೇ ದೋಷ ಕಂಡು ಬರುತ್ತಿದ್ದ ತಮ್ಮ ಆಡಿ ಕಾರಿನ ವಿರುದ್ಧ ಗ್ರಾಹಕರೊಬ್ಬರು ಸಲ್ಲಿಸಿರುವ ದೂರನ್ನು ಪರಿಗಣಿಸಿರುವ ಗ್ರಾಹಕ ನ್ಯಾಯಾಲಯ, ಸಂಪೂರ್ಣ ₹60 ಲಕ್ಷ ಅನ್ನು ಕಾರಿನ ಮಾಲೀಕನಿಗೆ ಮರಳಿಸಲು ಕಂಪನಿಗೆ ಆದೇಶಿಸಿದೆ.
ತಮಿಳುನಾಡಿನ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗದ ಕೋರ್ಟ್ ಇತ್ತೀಚೆಗೆ ಈ ಆದೇಶವನ್ನು ಮಾಡಿದೆ ಎಂದು ಲೈವ್ ಲಾ ಸುದ್ದಿ ಪೋರ್ಟಲ್ ವರದಿ ಮಾಡಿದೆ.
ಸರವಣನ್ ಎನ್ನುವರು ತಮಿಳುನಾಡಿನ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗದ ಕೋರ್ಟ್‌ಗೆ ತಮ್ಮ ಸಮಸ್ಯೆ ಕುರಿತು ದೂರು ಸಲ್ಲಿಸಿದ್ದರು. ದೂರು ಪರಿಗಣಿಸಿರುವ ನ್ಯಾಯಾಲಯ ಈ ಆದೇಶ ಮಾಡಿದೆ.
2014ರಲ್ಲಿ ಸರವಣನ್ ಎನ್ನುವರು ಆಡಿ ಕ್ಯೂ –7 ಕಾರನ್ನು ₹60 ಲಕ್ಷ ಕೊಟ್ಟು ಖರೀದಿಸಿದ್ದರು. ಆ ಕಾರಿನಲ್ಲಿ ಪದೇ ಪದೇ ಬ್ರೇಕ್ ದೋಷವನ್ನು ಸರವಣನ್ ಅನುಭವಿಸಿದ್ದರು. ಒಂದು ಬಾರಿಯಂತೂ ಬ್ರೇಕ್ ವಿಫಲತೆಯಿಂದ ಪ್ರಾಣಾಪಾಯಕ್ಕೆ ಒಳಗಾಗಿದ್ದರು.
ಇದರಿಂದ ಸಿಟ್ಟಿಗೆದ್ದಿದ್ದ ಸರವಣನ್ ಅವರು ಆಡಿ ಇಂಡಿಯಾ ಕಂಪನಿಗೆ ದೂರು ನೀಡಿದ್ದರು. ಆದರೆ, ಅವರು ಸರಿಯಾಗಿ ಸ್ಪಂದಿಸಿರಲಿಲ್ಲ. ಹೀಗಾಗಿ ಸರವಣನ್ ಅವರು ನ್ಯಾಯಾಲಯದ ಮೆಟ್ಟಿಲು ಏರಿದ್ದರು ಎಂದು ವರದಿ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.