ಭಾರತದಲ್ಲಿ ಈಗ ಮಾರಾಟವಾಗುತ್ತಿರುವ ಔಡಿ ಕ್ಯೂ3 ಎಸ್‌ಯುವಿಯು 2018ರಲ್ಲಿ ಬಿಡುಗಡೆ ಮಾಡಲಾದ ಕ್ಯೂ3ರ ಎರಡನೇ ತಲೆಮಾರಿನ ವಾಹನ. ಈ ಮಾದರಿಯು ‘ಯೂರೋ ಎನ್‌ಸಿಎಪಿ’ಯ ಕ್ರ್ಯಾಶ್ ಟೆಸ್ಟ್‌ನಲ್ಲಿ, 5 ಸ್ಟಾರ್‌ಗಳ ರೇಟಿಂಗ್ ಪಡೆದಿತ್ತು.
ಎಲ್ಲಾ ಸ್ವರೂಪದಅಪಘಾತದ ಸಂದರ್ಭದಲ್ಲಿ ಈ ಎಸ್‌ಯುವಿಯನ್ನು ಚಾಲನೆ ಮಾಡುವವರು ಮತ್ತು ಪ್ರಯಾಣಿಸುತ್ತಿರುವವರು ಹೆಚ್ಚಿನ ಗಾಯಗಳಿಲ್ಲದೆ ಬದುಕುಳಿಯುವ ಸಾಧ್ಯತೆ ಪ್ರಮಾಣ ಶೇ 95ರಷ್ಟು. ಈ ಎಸ್‌ಯುವಿಯಲ್ಲಿ ಪ್ರಯಾಣಿಸುತ್ತಿದ್ದ ಮಕ್ಕಳುಎಂಥಹದ್ದೇ ಅಪಘಾತದಲ್ಲೂ ಗಂಭೀರ ಗಾಯಗಳಿಲ್ಲದೆ ಬದುಕುಳಿಯುವ ಪ್ರಮಾಣ ಶೇ 86ರಷ್ಟು ಎಂದು ಯೂರೋ ಎನ್‌ಸಿಎಪಿ ತನ್ನ ಕ್ರ್ಯಾಶ್‌ಟೆಸ್ಟ್ ವರದಿಯಲ್ಲಿ ಹೇಳಿದೆ.
ಬೆಂಗಳೂರಿನ ಕೋರಮಂಗಲದಲ್ಲಿ ಅಪಘಾತಕ್ಕೆ ಈಡಾದ ಕ್ಯೂ3 ಎಸ್‌ಯುವಿ ಸಹ ಇದೇ ಮಾದರಿಯದ್ದು. ಈ ಮಾದರಿಯಲ್ಲಿ ಒಟ್ಟು 9 ಏರ್‌ಬ್ಯಾಗ್‌ಗಳಿವೆ. ಕೋರಮಂಗಲದಲ್ಲಿ ಅಪಘಾತಕ್ಕೆ ಈಡಾದ ಕ್ಯೂ3ಯಲ್ಲಿನ ಒಂದೂ ಏರ್‌ಬ್ಯಾಗ್, ಅಪಘಾತದ ಸಂದರ್ಭದಲ್ಲಿ ತೆರೆದುಕೊಂಡಿಲ್ಲ.
ಯಾವುದೇ ವಾಹನದಲ್ಲಿ ಸೀಟ್‌ಬೆಲ್ಟ್ ಪ್ರಾಥಮಿಕ ಸುರಕ್ಷಾ ಪರಿಕರವಾಗಿರುತ್ತದೆ. ಏರ್‌ಬ್ಯಾಗ್ ಎರಡನೇ ಹಂತದ ಸುರಕ್ಷಾ ಪರಿಕರ. ಏರ್‌ಬ್ಯಾಗ್‌ಗಳು ಕಿರುಬಾಂಬ್‌ನಂತೆ ಕೆಲಸ ಮಾಡುವ ಕಾರಣ, ಚಾಲಕ ಮತ್ತು ಪ್ರಯಾಣಿಕನ ಮುಖಕ್ಕೆ ಅಪ್ಪಳಿಸಿದರೆ ಮಾರಣಾಂತಿಕ ಗಾಯಗಳಾಗುತ್ತವೆ.ಸೀಟ್ ಬೆಲ್ಟ್ ಧರಿಸಿದ್ದರೆ, ಏರ್‌ಬ್ಯಾಗ್‌ಗೆ ಅಪ್ಪಳಿಸುವುದನ್ನು ತಡೆಯುತ್ತದೆ. ಸೀಟ್‌ಬೆಲ್ಟ್ ಧರಿಸದೇ ಇದ್ದರೆ ಅಪಘಾತದ ಸಂದರ್ಭದಲ್ಲಿ ಚಾಲಕ-ಪ್ರಯಾಣಿಕರು ಏರ್‌ಬ್ಯಾಗ್‌ಗೆ ಅಪ್ಪಳಿಸುವ ಅಪಾಯವಿರುತ್ತದೆ.
ಹೀಗಾಗಿ ಸೀಟ್‌ಬೆಲ್ಟ್ ಧರಿಸದೇ ಇದ್ದರೆ, ಏರ್‌ಬ್ಯಾಗ್ ನಿಷ್ಕ್ರಿಯವಾಗುವ ತಂತ್ರಜ್ಞಾನ ಅಳವಡಿಸಲಾಗುತ್ತದೆ. ಸೀಟ್ ಬೆಲ್ಟ್ ಧರಿಸದೇ ಇದ್ದರೆ ಅಪಘಾತದ ಸಂದರ್ಭದಲ್ಲಿ ಏರ್‌ಬ್ಯಾಗ್ ತೆರೆದುಕೊಳ್ಳುವುದಿಲ್ಲ. ಕೋರಮಂಗಲ ಅಪಘಾತದಲ್ಲೂ ಹೀಗೆಯೇ ಆಗಿದೆ. ಸೀಟ್‌ಬೆಲ್ಟ್ ಧರಿಸದಿರುವ ಕಾರಣ ಒಂದೂ ಏರ್‌ಬ್ಯಾಗ್ ತೆರೆದುಕೊಂಡಿಲ್ಲ.
ಯೂರೋ ಎನ್‌ಸಿಎಪಿ, ಗ್ಲೋಬಲ್ ಎನ್‌ಸಿಎಪಿ ಮತ್ತು ಆಸಿಯಾನ್ ಎನ್‌ಸಿಎಪಿಗಳು ನೀಡುವ ಕ್ರ್ಯಾಶ್‌ಟೆಸ್ಟ್ ವರದಿಗಳು ಮತ್ತು ಸುರಕ್ಷಾ ರೇಟಿಂಗ್ ಗರಿಷ್ಠ 64 ಕಿ.ಮೀ.ನಷ್ಟು ವೇಗಕ್ಕಷ್ಟೇ ಅನ್ವಯವಾಗುತ್ತದೆ. ಅದಕ್ಕಿಂತ ಹೆಚ್ಚಿನ ವೇಗದಲ್ಲಿ ಈ ಸುರಕ್ಷಾ ರೇಟಿಂಗ್‌ಗಳು ಉಪಯೋಗಕ್ಕೆ ಬರುವುದಿಲ್ಲ.
ಕ್ಯೂ3 ಐದು ಸೀಟಿನ ವಾಹನವಾಗಿದ್ದು, ಕೋರಮಂಗಲದ ಪ್ರಕರಣದಲ್ಲಿ ವಾಹನದಲ್ಲಿ ಏಳು ಮಂದಿ ಕೂತಿದ್ದರು. ಸಾಮರ್ಥ್ಯಕ್ಕಿಂತ ಹೆಚ್ಚು ಜನರು ಕೂತಿದ್ದೂ ಸಹ, ಅವರೆಲ್ಲರೂ ಮೃತಪಡಲು ಕಾರಣ ಎಂದು ವಿಶ್ಲೇಷಿಸಲಾಗಿದೆ.
ಆಧಾರ: ಯೂರೋ ಎನ್‌ಸಿಎಪಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.