ADVERTISEMENT

ಭಾರತದ ಮೇಲೆ ಚೀನಾ ಕಂಪನಿಗಳಕಣ್ಣು

​ಕೇಶವ ಜಿ.ಝಿಂಗಾಡೆ
Published 19 ಫೆಬ್ರುವರಿ 2020, 19:30 IST
Last Updated 19 ಫೆಬ್ರುವರಿ 2020, 19:30 IST
ಗ್ರೇಟ್‌ ವಾಲ್‌ ಮೋಟರ್ಸ್‌ನ ಎಸ್‌ಯುವಿ ಹವಲ್‌ ಎಚ್‌.
ಗ್ರೇಟ್‌ ವಾಲ್‌ ಮೋಟರ್ಸ್‌ನ ಎಸ್‌ಯುವಿ ಹವಲ್‌ ಎಚ್‌.   

ವಾಹನ ತಯಾರಿಕೆಯ ವಿಶ್ವದ ಅತಿದೊಡ್ಡ ಮಾರುಕಟ್ಟೆಯಾಗಿರುವ ಚೀನಾ, ಈ ವಾಹನ ಮೇಳದಲ್ಲಿ ದೊಡ್ಡ ಪ್ರಮಾಣದಲ್ಲಿ ಭಾಗಿಯಾಗಿ ಗಮನ ಸೆಳೆಯಿತು. ಚೀನಾದಲ್ಲಿ ಕೋವಿಡ್‌–19 ವೈರಸ್ ಸೃಷ್ಟಿಸಿದ ಆತಂಕದ ಕಾರಣಕ್ಕೆ ಕಂಪನಿಗಳ ಪ್ರಮುಖರು ಮೇಳದಿಂದ ದೂರ ಉಳಿದಿದ್ದರು. ಆದರೆ, ಹೊಸ ವಾಹನಗಳನ್ನು ಪರಿಚಯಿಸುವಲ್ಲಿ ಅಲ್ಲಿನ ಪ್ರಮುಖ ಕಂಪನಿಗಳು ಪ್ರಾಬಲ್ಯ ಮೆರೆದವು.

ಚೀನಾದ ಬಹುತೇಕ ಕಂಪನಿಗಳು ಭಾರತದಲ್ಲಿ ತಮ್ಮ ವಾಹನಗಳ ಮಾರಾಟದ ಅಂಗಡಿ ತೆರೆಯಲು ಉತ್ಸುಕತೆ ತೋರಿಸಿರುವುದು ಮೇಳದಲ್ಲಿ ಅನುಭವಕ್ಕೆ ಬಂದಿತು. ಭಾರತದ ಮಾರುಕಟ್ಟೆಯನ್ನು ದೊಡ್ಡ ಪ್ರಮಾಣದಲ್ಲಿ ಪ್ರವೇಶಿಸಲು ಚೀನಾದ ಕಂಪನಿಗಳು ಮುಂದಾಗಿದ್ದು, ರಷ್ಯಾದ ಮಾರುಕಟ್ಟೆಗೆ ಲಗ್ಗೆ ಹಾಕಿದ ನಂತರದ ಎರಡನೇ ಅತಿದೊಡ್ಡ ಪ್ರಯತ್ನ ಇದಾಗಿದೆ. ಎಂಜಿ ಮೋಟರ್ಸ್‌ಗೆ ಉತ್ತಮ ಪ್ರತಿಕ್ರಿಯೆ ಸಿಕ್ಕಿರುವುದು ಇತರ ಕಂಪನಿಗಳೂ ತಮ್ಮ ಅದೃಷ್ಟ ಪರೀಕ್ಷಿಸುವುದಕ್ಕೆ ವಿಶ್ವಾಸ ಮೂಡಿಸಿದೆ.

ಚೀನಾದ ಪ್ರಮುಖ ಕಂಪನಿಗಳಲ್ಲಿ ಒಂದಾಗಿರುವ ಮತ್ತು ಎಸ್‌ಯುವಿ ತಯಾರಿಕೆಯ ಅತಿದೊಡ್ಡ ಕಂಪನಿಯಾಗಿರುವ ಗ್ರೇಟ್‌ ವಾಲ್‌ ಮೋಟರ್‌ (ಜಿಡಬ್ಲ್ಯುಎಂ) ಭಾರತದಲ್ಲಿ ಕಾಲೂರಲು ಮುಂದಾಗಿದೆ. ಈ ಉದ್ದೇಶಕ್ಕೆ ಪುಣೆ ಬಳಿಯ ತಲೆಗಾಂವ್‌ನಲ್ಲಿ ಇರುವ ಜನರಲ್‌ ಮೋಟರ್ಸ್‌ನ ತಯಾರಿಕಾ ಘಟಕ ಸ್ವಾಧೀನಪಡಿಸಿಕೊಳ್ಳಲು ಒಪ್ಪಂದಕ್ಕೆ ಸಹಿ ಹಾಕಿದೆ. ದೇಶಿ ಮಾರುಕಟ್ಟೆಯಲ್ಲಿ ₹ 7,100 ಕೋಟಿ ಬಂಡವಾಳ ಹೂಡಿಕೆ ಮಾಡುವುದಾಗಿಯೂ ಪ್ರಕಟಿಸಿದೆ.

ADVERTISEMENT

ತನ್ನ ಎರಡು ಜನಪ್ರಿಯ ಬ್ರ್ಯಾಂಡ್‌ಗಳಾದ ಎಸ್‌ಯುವಿ ಹವಲ್‌ ಮತ್ತು ಎಸ್‌ಯುವಿ ಅಲ್ಲದ ವಿದ್ಯುತ್‌ ಚಾಲಿತ ವಾಹನ ಜಿಡಬ್ಲ್ಯುಎಂಯನ್ನು ಭಾರತದಲ್ಲಿ ಪರಿಚಯಿಸಲಿದೆ.ಹವಲ್‌ ಎಸ್‌ಯುವಿ, ಚೀನಾದಲ್ಲಿ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಮಾರಾಟವಾಗುತ್ತಿದೆ. ಹವಲ್‌, ಗ್ರೇಟ್‌ ವಾಲ್‌ ಇವಿ ಮತ್ತು ಗ್ರೇಟ್‌ ವಾಲ್‌ ಪಿಕ್‌ಅಪ್‌ ಬ್ರ್ಯಾಂಡ್‌ಗಳು ಅದರ ಬಳಿ ಇವೆ. ಮುಂಬರುವ ವರ್ಷಗಳಲ್ಲಿ ಇಲ್ಲಿ ಹೊಸ ವಾಹನಗಳನ್ನು ಸರಣಿಯೋಪಾದಿಯಲ್ಲಿ ಪರಿಚಯಿಸಲು ಉದ್ದೇಶಿಸಿದೆ. ಇದೇ ಕಾರಣಕ್ಕೆ ಸ್ಥಳೀಯ ವಾಹನ ಖರೀದಿದಾರರ ಮನದಿಂಗಿತ ಅರಿಯಲೂ ಕ್ರಮ ಕೈಗೊಂಡಿದೆ. ತಮ್ಮ ವಾಹನಗಳ ಮಾರುಕಟ್ಟೆ ವಿಸ್ತರಣೆಗೆ ಭಾರತ ಪ್ರಶಸ್ತ್ಯ ದೇಶವಾಗಿದೆ ಎನ್ನುವುದು ಚೀನಾದ ಇತರ ಕಂಪನಿಗಳಿಗೆ ಮನವರಿಕೆಯಾಗಿದೆ.

ಎಂಜಿ ಮೋಟಾರ್ಸ್‌ನ ಎಲೆಕ್ಟ್ರಿಕ್‌ ಎಸ್‌ಯುವಿ ಮಾರ್ವೆಲ್‌ ಎಕ್ಸ್‌

ಇದೇ ಕಾರಣಕ್ಕೆ ಭಾರತದಲ್ಲಿ ಭಾರಿ ಪ್ರಮಾಣದಲ್ಲಿ ಬಂಡವಾಳ ಹೂಡಿಕೆ ಮಾಡಲು, ಭವಿಷ್ಯದ ಮತ್ತು ಹೊಸ ಕಾರ್‌ಗಳನ್ನು ಪರಿಚಯಿಸಲು ಪೈಪೋಟಿ ನಡೆಸಿದವು. ವಿದ್ಯುತ್‌ ಚಾಲಿತ ವಾಹನಗಳು ಮತ್ತು ಚಾರ್ಜಿಂಗ್‌ ಮೂಲ ಸೌಕರ್ಯಗಳನ್ನು ಅಭಿವೃದ್ಧಿಪಡಿಸುವ ಬಗ್ಗೆ ಮೇಳದ ಸಂದರ್ಭದಲ್ಲಿ ತಮ್ಮ ಕನಸುಗಳನ್ನು ಹಂಚಿಕೊಂಡವು.

ಪ್ರಮುಖ ವಾಹನ ತಯಾರಿಕಾ ಕಂಪನಿ ‘ಎಸ್‌ಎಐಸಿ’ ಸೇರಿದಂತೆ ಇತರ ಕಂಪನಿಗಳು ಭಾರತದ ಮಾರುಕಟ್ಟೆಗೆ ಲಗ್ಗೆ ಹಾಕುವ ಬಗ್ಗೆ ಆಕ್ರಮಣಕಾರಿ ಧೋರಣೆ ಪ್ರದರ್ಶಿಸಿದವು. ಸ್ಥಳೀಯವಾಗಿ ತಯಾರಿಸುವ ಮತ್ತು ವಾಹನ ಜೋಡಣೆ ಮಾಡುವ ಯೋಜನೆಗಳನ್ನೂ ಪ್ರಕಟಿಸಿದವು. ಭಾರತದ ಮಾರುಕಟ್ಟೆಯಲ್ಲಿ ಇನ್ನೂ ಸಕ್ರೀಯವಾಗಿರದ ಕಂಪನಿಗಳ ಪ್ರತಿನಿಧಿಗಳು ಕೂಡ ವಾಹನ ಖರೀದಿದಾರರ ಮನದಿಂಗಿತ ತಿಳಿಯುವ ಯತ್ನ ಮಾಡಿದರು. ಬಿವೈಡಿ ಕಂಪನಿಯು ಹೈಮಾ ಬ್ರ್ಯಾಂಡ್‌ನಡಿ ತನ್ನ ವಿದ್ಯುತ್‌ಚಾಲಿತ ಬಸ್‌ ಎಫ್‌ಎಡಬ್ಲ್ಯು ಮತ್ತು ಇತರ ಹೊಸ ಕಾರ್‌ಗಳನ್ನು ಪರಿಚಯಿಸಿತು. ಸರ್ಕಾರ ವೀಸಾ ನಿರ್ಬಂಧಿಸಿದ್ದಕ್ಕೆ ಪ್ರದರ್ಶನದಿಂದ ಚೀನಾ ಕಂಪನಿಗಳ ಪ್ರತಿನಿಧಿಗಳು ಮೇಳದಲ್ಲಿ ಭಾಗಿಯಾಗಿರಲಿಲ್ಲ. ಹೀಗಾಗಿ ಚೀನಾದ ಮಳಿಗೆಗಳನ್ನು ಭಾರತೀಯರೇ ನಿರ್ವಹಿಸಿದರು.

ಎಂಜಿ ಮೋಟರ್ಸ್‌, ಗ್ರೇಟ್‌ ವಾಲ್ ಮತ್ತು ಹೈಮಾ ಕಂಪನಿಗಳು ಎಸ್‌ಯುವಿ, ಭವಿಷ್ಯದ ವಾಹನ, ಸೆಡಾನ್‌ ಮತ್ತು ಹ್ಯಾಚ್‌ಬ್ಯಾಕ್ಸ್‌ಗಳನ್ನು ಪೈಪೋಟಿ ಮೇಲೆ ಪರಿಚಯಿಸಿದವು. ಭಾರತದಲ್ಲಿ ತಮ್ಮ ಹೆಜ್ಜೆ ಗುರುತು ಮೂಡಿಸಲು ಕೃತಕ ಬುದ್ಧಿಮತ್ತೆಯ ಸುರಕ್ಷತೆ, ಸಂವಹನ ಮತ್ತು ಅತ್ಯಾಧುನಿಕ ಸೌಲಭ್ಯಗಳನ್ನು ಒಳಗೊಂಡಿರುವ ವಾಹನಗಳನ್ನು ಪ್ರದರ್ಶಿಸಿ ಗಮನ ಸೆಳೆದವು.

‘ಎಸ್‌ಎಐಸಿ’ ಅಂಗ ಸಂಸ್ಥೆಯಾದ ಎಂಜಿ ಮೋಟರ್ಸ್‌ ತಮ್ಮೆಲ್ಲ ಮಾದರಿಯ ಕಾರ್‌ಗಳನ್ನು ಭಾರತಕ್ಕೆ ಪರಿಚಯಿಸಲು ಉತ್ಸುಕತೆ ತೋರಿಸುತ್ತಿರುವುದೂ ಮೇಳದಲ್ಲಿ ಗಮನ ಸೆಳೆಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.