ಮುಂಬೈ: ದೇಶದ ವಾಹನ ಬಿಡಿ ಭಾಗ ಉದ್ಯಮದ ಮುನ್ನೋಟವು ಸ್ಥಿರವಾಗಿರಲಿದೆ ಎಂದು ರೇಟಿಂಗ್ಸ್ ಸಂಸ್ಥೆ ಇಕ್ರಾ ಹೇಳಿದೆ. ನಕಾರಾತ್ಮಕವಾಗಿರಲಿದೆ ಎಂದು ಈ ಹಿಂದೆ ತಿಳಿಸಿತ್ತು.
ಒರಿಜಿನಲ್ ಇಕ್ವಿಪ್‌ಮೆಂಟ್ ಮ್ಯಾನುಫ್ಯಾಕ್ಚರರ್ಸ್ (ಒಇಎಂ) ಮತ್ತು ರಫ್ತು ಬೇಡಿಕೆಯು ಚೇತರಿಕೆ ಕಂಡಿದೆ. ಹೀಗಾಗಿ ಮುನ್ನೋಟವನ್ನು ನಕಾರಾತ್ಮಕ ಮಟ್ಟದಿಂದ ಸ್ಥಿರ ಮಟ್ಟಕ್ಕೆ ಪರಿಷ್ಕರಣೆ ಮಾಡಲಾಗಿದೆ ಎಂದು ಅದು ಹೇಳಿದೆ.
2020–21ನೇ ಹಣಕಾಸು ವರ್ಷದಲ್ಲಿ ದೇಶಿ ವಾಹನ ಬಿಡಿಭಾಗ ಉದ್ಯಮದ ವರಮಾನವು ಶೇ 16 ರಿಂದ ಶೇ 18ರಷ್ಟು ಬೆಳವಣಿಗೆ ಕಾಣಲಿದೆ. ಸ್ಥಳೀಯ ಪೂರೈಕೆ ವ್ಯವಸ್ಥೆಗೆ ಗಮನ ನೀಡುತ್ತಿರುವುದರಿಂದ ದೀರ್ಘಾವಧಿಯಲ್ಲಿ ಉದ್ಯಮ ಬೆಳವಣಿಗೆಗೆ ನೆರವಾಗಲಿದೆ ಎಂದು ತಿಳಿಸಿದೆ.
ವಾಹನ ಬಿಡಿಭಾಗಗಳ ಬೇಡಿಕೆಯಲ್ಲಿ ಶೇ 56ಕ್ಕೂ ಹೆಚ್ಚಿನ ಪಾಲು ಹೊಂದಿರುವ ಒಇಎಂ ಬೇಡಿಕೆಯು (ಮಧ್ಯಮ ಮತ್ತು ಭಾರಿ ಗಾತ್ರದ ವಾಣಿಜ್ಯ ವಾಹನ ಉದ್ದಿಮೆಯನ್ನು ಹೊರತುಪಡಿಸಿ) ಸೆಪ್ಟೆಂಬರ್‌ನಿಂದ ಏರಿಕೆ ಕಾಣುತ್ತಿದೆ. ಉದ್ಯಮದ ವರಮಾನದಲ್ಲಿ ಶೇ 26 ರಿಂದ ಶೇ 27ರಷ್ಟು ಕೊಡುಗೆ ನೀಡುವ ರಫ್ತು ವಲಯವೂ ಚೇತರಿಸಿಕೊಳ್ಳುತ್ತಿದೆ ಎಂದು ತಿಳಿಸಿದೆ.
ಕೋವಿಡ್–19ಗೂ ಮುನ್ನ ಇದ್ದ ಬೆಳವಣಿಗೆಯನ್ನು ಕಾಣಲು ವಾಹನೋದ್ಯಮಕ್ಕೆ ಎರಡರಿಂದ ಮೂರು ವರ್ಷಗಳೇ ಬೇಕಾಗಲಿವೆ. ಉತ್ಪನ್ನ ಸಂರ್ಪಕಿತ ಉತ್ತೇಜನಯಂತಹ ಯೋಜನೆಗಳು ಒಇಎಂಗೆ ಪ್ರೋತ್ಸಾಹ ನೀಡಲಿದೆ. ರಫ್ತು ಮಾಡುವ ಗುರಿಯನ್ನು ಇಟ್ಟುಕೊಂಡು ಹೂಡಿಕೆ ಯೋಜನೆಗಳನ್ನು ರೂಪಿಸಬೇಕಿದೆ ಎಂದು ಹೇಳಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.