ಪುಣೆ: ಸಿಎನ್‌ಜಿಯ ಮೊದಲ ದ್ವಿಚಕ್ರ ವಾಹನ ಜೂನ್‌ನಲ್ಲಿ ಮಾರುಕಟ್ಟೆಗೆ ಬರಲಿದೆ ಎಂದು ಪ್ರಮುಖ ಬೈಕ್ ತಯಾರಕ ಕಂಪನಿ ಬಜಾಜ್ ಆಟೊ ಶುಕ್ರವಾರ ತಿಳಿಸಿದೆ.
ಸಿಎನ್‌ಜಿಯ ಮೋಟರ್ ಬೈಕ್ ಸರಣಿಯನ್ನು ಬಜಾಜ್ ಆಟೊ ಅಭಿವೃದ್ಧಿಪಡಿಸುತ್ತಿದೆ. ಪೆಟ್ರೋಲ್ ಆಧಾರಿತ ದ್ವಿಚಕ್ರ ವಾಹನಗಳಿಗಿಂತಲೂ ಈ ಬೈಕ್‌ಗಳ ಬೆಲೆ ಹೆಚ್ಚಾಗಿರುತ್ತದೆ. ಗ್ರಾಹಕರಿಗೆ ಅನುಕೂಲವಾಗುವಂತೆ ಪೆಟ್ರೋಲ್ ಮತ್ತು ಸಿಎನ್‌ಜಿ ಇಂಧನ ಟ್ಯಾಂಕ್ ಅಳವಡಿಸಬೇಕಾದ್ದರಿಂದ ಬೆಲೆಯೂ ಹೆಚ್ಚಿರುತ್ತದೆ. ಹೆಚ್ಚು ಇಂಧನ ದಕ್ಷತೆ ಬಯಸುವವರನ್ನು ದೃಷ್ಟಿಯಲ್ಲಿ ಇರಿಸಿಕೊಂಡು ಈ ವಾಹನ ವಿನ್ಯಾಸ ಮಾಡಲಾಗಿದೆ. ಭಿನ್ನ ಬ್ರ್ಯಾಂಡ್ ಅಡಿಯಲ್ಲಿ ವಾಹನವನ್ನು ಬಿಡುಗಡೆ ಮಾಡಲಾಗುವುದು ಎಂದು ಬಜಾಜ್ ಆಟೊ ವ್ಯವಸ್ಥಾಪಕ ನಿರ್ದೇಶಕ ರಾಜೀವ್ ಬಜಾಜ್ ತಿಳಿಸಿದ್ದಾರೆ.
ಬಜಾಜ್ ಸಮೂಹವು ಕಾರ್ಪೊರೇಟ್ ಸಾಮಾಜಿಕ ಹೊಣೆಗಾರಿಕೆ (ಸಿಎಸ್‌ಆರ್) ಅಡಿಯಲ್ಲಿ ಮುಂದಿನ 5 ವರ್ಷದೊಳಗೆ ₹5 ಸಾವಿರ ಕೋಟಿಯನ್ನು ಖರ್ಚು ಮಾಡಲು ನಿರ್ಧರಿಸಿದೆ.
ಸಿಎಸ್‌ಆರ್ ಕಾರ್ಯಕ್ರಮಗಳ ಮೂಲಕ 2 ಕೋಟಿ ಯುವಕರಿಗೆ ಕೌಶಲ ತರಬೇತಿ ನೀಡಲಿದೆ. ಇದರಿಂದ ಅವರು ಉದ್ಯೋಗಿಗಳು ಮತ್ತು ಉದ್ಯಮಿಗಳಾಗಲು ಸಹಾಯ ಮಾಡುತ್ತದೆ ಮತ್ತು ದೇಶದ ಆರ್ಥಿಕತೆ ಕೂಡ ಬೆಳವಣಿಗೆ ಆಗುತ್ತದೆ ಎಂದು ಹೇಳಿದರು. ಈಗಾಗಲೇ ಸಮೂಹವು 10 ವರ್ಷದಲ್ಲಿ ಸಿಎಸ್‌ಆರ್ ಅಡಿ ವಿವಿಧ ಸಾಮಾಜಿಕ ಕಾರ್ಯಕ್ರಮಗಳನ್ನು ಕೈಗೊಂಡಿದ್ದು, ಇದಕ್ಕಾಗಿ ₹4 ಸಾವಿರ ಕೋಟಿ ಖರ್ಚು ಮಾಡಿದೆ ಎಂದು ಅವರು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.