ADVERTISEMENT

ವಿದ್ಯುತ್‌ ಚಾಲಿತ ಸ್ಕೂಟರ್‌ ಕಾಲ

ಇ.ಎಸ್.ಸುಧೀಂದ್ರ ಪ್ರಸಾದ್
Published 20 ಜೂನ್ 2019, 10:38 IST
Last Updated 20 ಜೂನ್ 2019, 10:38 IST
ಮಹೀಂದ್ರಾ ಗಸ್ಟೊ
ಮಹೀಂದ್ರಾ ಗಸ್ಟೊ   

ಇಡೀ ಜಗತ್ತಿನಲ್ಲಿ ದ್ವಿಚಕ್ರ ವಾಹನಗಳಿಗೆ ಭಾರತ ಅತಿ ದೊಡ್ಡ ಮಾರುಕಟ್ಟೆಯಾಗಿದೆ. ಅದರಲ್ಲೂ 150 ಸಿಸಿ ಬೈಕ್ ಮತ್ತು ಸ್ಕೂಟರ್‌ಗಳಿಗೆ ಇಲ್ಲಿ ಬೇಡಿಕೆ ಹೆಚ್ಚು. ವಾರ್ಷಿಕ ಒಟ್ಟು ಮಾರಾಟವಾಗುವ 2.10 ಕೋಟಿ ದ್ವಿಚಕ್ರ ವಾಹನಗಳಲ್ಲಿ 1.30 ಕೋಟಿ ದ್ವಿಚಕ್ರ ವಾಹನಗಳು 150 ಸಿಸಿಗಿಂತ ಕಡಿಮೆ ಸಾಮರ್ಥ್ಯ ಹೊಂದಿವೆ ಎಂದರೆ ಇದರ ಗಾತ್ರವನ್ನು ಊಹಿಸಬಹುದು. ಹೀಗಾಗಿ ಈ ದೊಡ್ಡ ಸಂಖ್ಯೆಯನ್ನು ಬ್ಯಾಟರಿ ಚಾಲಿತ ವಾಹನಗಳತ್ತ ವರ್ಗಾಯಿಸುವತ್ತ ಯೋಜನೆ ರೂಪುಗೊಳ್ಳುತ್ತಿದೆ. ಇದರ ಲಾಭವನ್ನು ಬಳಸಿಕೊಳ್ಳಲು ಹಲವು ಕಂಪನಿಗಳು ಈಗಾಗಲೇ ಸಿದ್ಧತೆ ನಡೆಸಿವೆ.

ಸದ್ಯಕ್ಕೆ ಬ್ಯಾಟರಿ ಚಾಲಿತ ದ್ವಿಚಕ್ರ ವಾಹನಗಳ ಬಹಳಷ್ಟು ತಯಾರಕರು ಭಾರತದಲ್ಲಿ ಮಾರುಕಟ್ಟೆ ಕಂಡುಕೊಳ್ಳುವ ಉತ್ಸುಕತೆಯಲ್ಲಿದ್ದಾರೆ. ಅದರಲ್ಲಿ ದೊಡ್ಡ ಹೆಸರುಗಳಾದ ಒಕಿನೊವಾ, ಹೀರೊ ಎಲೆಕ್ಟ್ರಿಕಲ್‌, ಏಥರ್‌ ಎನರ್ಜಿ, ಅವನ್‌, ಟಾರ್ಕ್ ಮೋಟರ್ಸ್‌, ರಿವೊಲ್ಟ್‌ ಇಂಟೆಲಿಕಾರ್ಪ್‌, 22 ಮೋಟರ್ಸ್ ಇತ್ಯಾದಿ ಕಂಪನಿಗಳು ಈಗಾಗಲೇ ತಮ್ಮ ವಾಹನಗಳನ್ನು ಪರಿಚಯಿಸಿವೆ. ಆದರೆ, ಎಂಜಿನ್ ಚಾಲಿತ ಬೈಕ್‌ ಮತ್ತು ಸ್ಕೂಟರ್‌ ತಯಾರಿಕೆಯಲ್ಲಿ ಸಾಕಷ್ಟು ಪ್ರಸಿದ್ಧಿ ಪಡೆದಿರುವ ಕಂಪನಿಗಳೊಂದಿಗೆ ಇವು ಪೈಪೋಟಿ ನಡೆಸಬೇಕಾಗಿದೆ. ಇಂಥ ಸಂದರ್ಭದಲ್ಲಿ ಬ್ಯಾಟರಿ ಚಾಲಿತ ವಾಹನಗಳಿಗೊಂದು ಸರ್ಕಾರದ ಸ್ಪಷ್ಟ ನೀತಿ ಇದ್ದಲ್ಲಿ ಪ್ರತಿಯೊಬ್ಬ ಪ್ರತಿಸ್ಪರ್ಧಿಗೂ ಸಮಾನ ಅವಕಾಶ ಸಿಗುವಂತಾ ಗಲಿದೆ ಎಂದು ಮಾರುಕಟ್ಟೆ ಪಂಡಿತರು ವಿಶ್ಲೇಷಿಸುತ್ತಾರೆ.

ಮತ್ತೊಂದೆಡೆ ದ್ವಿಚಕ್ರ ವಾಹನ ತಯಾರಿಕೆ ಮತ್ತು ಮಾರುಕಟ್ಟೆ ವಿಸ್ತರಣೆಯಲ್ಲಿ ಸಾಕಷ್ಟು ಪರಿಣತಿ ಹೊಂದಿರುವ ಹೀರೊ, ಹೋಂಡಾ ಮೋಟರ್ಸ್‌, ಬಜಾಜ್‌ ಕಂಪನಿಗಳೂ ಬ್ಯಾಟರಿ ಚಾಲಿತ ವಾಹನಗಳ ಅಭಿವೃದ್ಧಿಗೆ ಉತ್ಸುಕತೆ ಹೊಂದಿದ್ದು, ತಮ್ಮ ವಾಹನಗಳನ್ನು ಅಭಿವೃದ್ಧಿ ಪಡಿಸುತ್ತಿವೆ. ಆದರೆ, ಇಲ್ಲಿ ತಂತ್ರಜ್ಞಾನ, ಮಾರುಕಟ್ಟೆ ಜ್ಞಾನ ಮತ್ತು ಎಲ್ಲರ ಕೈಗೆಟುಕುವ ಬೆಲೆಗೆ ವಾಹನಗಳ ಅಭಿವೃದ್ಧಿಯ ಸವಾಲು ಇರುವುದರಿಂದಲೂ ಇದು ಈವರೆಗೂ ಯೋಜನೆ ಹಂತದಲ್ಲೇ ಇದೆ. ಈ ನಡುವೆ ಬಜಾಜ್‌ ತನ್ನ ಸದ್ಯದ ಪಾಲುದಾರ ಕಂಪನಿ ಆಸ್ಟ್ರಿಯಾದ ಕೆಟಿಎಂ ಜತೆಗೂಡಿ ಬ್ಯಾಟರಿ ಚಾಲಿತ ದ್ವಿಚಕ್ರ ವಾಹನಗಳ ಅಭಿವೃದ್ಧಿಗೆ ಕೈಹಾಕಿದೆ. 2022ರ ಹೊತ್ತಿಗೆ ಬ್ಯಾಟರಿ ಚಾಲಿತ ಬೈಕ್‌ ಹೊರತರುವ ಗುರಿ ಹೊಂದಿದೆ. 48 ವೋಲ್ಟ್‌ ಸಾಮರ್ಥ್ಯದ ದ್ವಿಚಕ್ರ ವಾಹನ ಅಭಿವೃದ್ಧಿಪಡಿಸುವ ಕುರಿತು ಎರಡೂ ಕಂಪನಿಗಳು ಇಂಗಿತ ವ್ಯಕ್ತಪಡಿಸಿವೆ.

ADVERTISEMENT

ಇವುಗಳಲ್ಲಿ 3ರಿಂದ 10 ಕಿಲೋ ವಾಟ್ ಸಾಮರ್ಥ್ಯದ ದ್ವಿಚಕ್ರ ವಾಹನಗಳೂ ಇರುವ ಅಂದಾಜಿದೆ. ಈಗಾಗಲೇ ಬಜಾಜ್‌ ಕಂಪನಿ ಅರ್ಬನೈಟ್ ಎಂಬ ಬ್ಯಾಟರಿ ಚಾಲಿತ ಸ್ಕೂಟರ್‌ ಅಭಿವೃದ್ಧಿಪಡಿಸಿದ್ದು, ಮಹಾರಾಷ್ಟ್ರದ ಕೆಲ ನಗರಗಳಲ್ಲಿ ಇದು ಪ್ರಾಯೋಗಿಕವಾಗಿ ಸಂಚರಿಸುತ್ತಿದೆ. ಈ ಸ್ಕೂಟರ್ ಅಲ್ಲಲ್ಲಿ ಕಂಡಿರುವ ಕುರಿತು ಕೆಲ ಮಾಧ್ಯಮಗಳು ವರದಿ ಮಾಡಿವೆ.

ಹೀಗೆ ಒಂದೊಂದೇ ದ್ವಿಚಕ್ರ ವಾಹನ ಕಂಪನಿಗಳು ತಮ್ಮ ಗಮನವನ್ನು ಬ್ಯಾಟರಿ ಚಾಲಿತ ವಾಹನಗಳತ್ತ ಮುಖ ಮಾಡುತ್ತಿವೆ. ಈಗಾಗಲೇ ಏಥರ್‌ನಂತೆ ಹಲವು ಕಂಪನಿಗಳು ತಮ್ಮ ಮಳಿಗೆಗಳನ್ನು ಬೆಂಗಳೂರಿನಲ್ಲಿ ಸ್ಥಾಪಿಸಿ, ವಾಹನ ಪ್ರದರ್ಶನದ ಜತೆಗೆ ಚಾರ್ಜಿಂಗ್ ಕೇಂದ್ರಗಳನ್ನೂ ತೆರೆದಿವೆ. ಇವುಗಳತ್ತ ಯುವ ಸಮುದಾಯದ ಆಕರ್ಷಣೆಯೂ ಹೆಚ್ಚು ಎನ್ನುತ್ತಾರೆ ಇಲ್ಲಿನ ಸಿಬ್ಬಂದಿ. ಹೀಗಾಗಿ ನಿತ್ಯ ವಾಹನಗಳ ಕುರಿತ ಮಾಹಿತಿ, ಟೆಸ್ಟ್‌ ಡ್ರೈವ್ ಇತ್ಯಾದಿಗಾಗಿ ಬ್ಯಾಟರಿ ಚಾಲಿತ ದ್ವಿಚಕ್ರ ವಾಹನಗಳ ಮಳಿಗೆಗೆ ಬರುವವರ ಸಂಖ್ಯೆ ದೊಡ್ಡದಿದೆ. ಅದು ದಿನೇ ದಿನೇ ಬೆಳೆಯುತ್ತಿದೆ ಕೂಡಾ.

ಸದ್ಯದ ಪರಿಸ್ಥಿತಿಯಲ್ಲಿ, ಬ್ಯಾಟರಿ ಚಾಲಿತ ದ್ವಿಚಕ್ರ ವಾಹನಗಳಲ್ಲಿ ಒಟ್ಟು ನಿರ್ಮಾಣ ವೆಚ್ಚದ ಶೇ 40ರಷ್ಟು ಬ್ಯಾಟರಿಗೆ ಖರ್ಚಾಗುತ್ತಿದೆ. ಬ್ಯಾಟರಿ ತಂತ್ರಜ್ಞಾನವೂ ಗಣನೀಯವಾಗಿ ಅಭಿವೃದ್ಧಿಯಾಗುತ್ತಿದೆ. ಇದರಿಂದ ಮುಂದಿನ ದಿನಗಳಲ್ಲಿ ಈ ವೆಚ್ಚ ಕಡಿಮೆಯಾಗುವ ಸಾಧ್ಯತೆಗಳೂ ಇವೆ. ಹೀಗಾದಲ್ಲಿ ಇಂತಹ ವಾಹನಗಳತ್ತ ಆಕರ್ಷಿತರಾಗುವವರ ಸಂಖ್ಯೆಯೂ ಗಮನಾರ್ಹವಾಗಿ ಹೆಚ್ಚಾಗಲಿದೆ ಎಂದು ಅಂದಾಜಿಸಲಾಗುತ್ತಿದೆ.

ಇರುವ ಸವಾಲುಗಳು

ಚಾರ್ಜಿಂಗ್ ತಾಣ: ಬ್ಯಾಟರಿ ಚಾಲಿತ ವಾಹನಗಳನ್ನು ರಸ್ತೆಗಿಳಿಸುವ ಮುನ್ನ ಅದರ ಇಂಧನ ಪೂರೈಕೆ ಅತಿ ದೊಡ್ಡ ಸವಾಲು. ಆದರೆ ಈ ನಿಟ್ಟಿನಲ್ಲಿ ಭಾರತದ ಸಾಧನೆ ಶೂನ್ಯ. ಆದರೆ ಈ ನಿಟ್ಟಿನಲ್ಲಿ ಕೆಲವೇ ಕೆಲವು ಕಂಪನಿಗಳು ಚಾರ್ಜಿಂಗ್ ಕೇಂದ್ರಗಳನ್ನು ಸ್ಥಾಪಿಸಲು ಸಣ್ಣ ಪ್ರಯತ್ನ ನಡೆಸಿವೆಯಾದರೂ ಅವುಗಳು ಇನ್ನೂ ಯೋಜನೆ ಹಂತದಲ್ಲಿವೆ. ನೀತಿ ರೂಪಿಸುವ ಹಂತದಲ್ಲಿರುವ ಸರ್ಕಾರ ಒಟ್ಟು 2700 ಚಾರ್ಜಿಂಗ್ ಕೇಂದ್ರಗಳನ್ನು ದೇಶದ ಉದ್ದಗಲಕ್ಕೂ ಸ್ಥಾಪಿಸಲು ಸಿದ್ಧತೆ ನಡೆಸಿದೆ. ಅಂದರೆ ಪ್ರತಿ 3 ಚದರ ಕಿಲೋಮೀಟರ್ ವ್ಯಾಪ್ತಿಯಲ್ಲಿ ಒಂದು ಚಾರ್ಜಿಂಗ್ ಕೇಂದ್ರ ಇರಬೇಕೆನ್ನುವುದು ಇದರ ಮೂಲ ಉದ್ದೇಶ.

ಸ್ಥಳೀಯವಾಗಿ ತಯಾರಿಕೆ

ಬಹಳಷ್ಟು ಬ್ಯಾಟರಿ ಚಾಲಿತ ದ್ವಿಚಕ್ರ ವಾಹನಗಳು ತಯಾರಾಗುತ್ತಿದ್ದರೂ ಅವುಗಳ ತಯಾರಿಕಾ ಗಾತ್ರ ತೀರಾ ಸಣ್ಣದು. ಜತೆಗೆ ಸ್ಥಳೀಯವಾಗಿ ತಯಾರಾಗುತ್ತಿರುವ ಪ್ರಮಾಣ ಶೇ 50ಕ್ಕಿಂತಲೂ ಕಡಿಮೆ. ಒಂದೊಮ್ಮೆ ಈ ಪ್ರಮಾಣದಲ್ಲಿ ಸ್ಥಳೀಯವಾಗಿ ನಿರ್ಮಾಣ ಮಾಡಿದ್ದೇ ಆದಲ್ಲಿ ಸರ್ಕಾರದಿಂದ ಸಿಗುವ ಸಬ್ಸಿಡಿ ಹಾಗೂ ಮತ್ತಿತರ ಸೌಲಭ್ಯಗಳೂ ಹೆಚ್ಚು. ಜತೆಗೆ ಇದರಿಂದ ತಯಾರಿಕಾ ವೆಚ್ಚವೂ ತಗ್ಗಲಿದೆ. ಅದು ಪರೋಕ್ಷವಾಗಿ ವಾಹನ ಸವಾರರನ್ನು ಉತ್ತೇಜಿಸಿದಂತಾಗಲಿದೆ. ಇದರ ಜತೆಯಲ್ಲೇ ಬ್ಯಾಟರಿ ತಯಾರಿಕರನ್ನೂ ಉತ್ತೇಜಿಸುವ ಅಗತ್ಯವೂ ಇದೆ.

ಬ್ಯಾಟರಿ ಚಾಲಿತ ವಾಹನಕ್ಕೆ ಸ್ಪಷ್ಟ ನೀತಿ

ಜಗತ್ತಿನ ಬಹುತೇಕ ರಾಷ್ಟ್ರಗಳು ಈಗಾಗಲೇ ಬ್ಯಾಟರಿ ಚಾಲಿತ ವಾಹನಗಳಿಗಾಗಿಯೇ ಪ್ರತ್ಯೇಕ ನೀತಿಯನ್ನು ರೂಪಿಸಿವೆ. ಭಾರತ ಇನ್ನೂ ಅಂಥದ್ದೊಂದು ನೀತಿಯನ್ನು ಹೊಂದುವ ಅಗತ್ಯವಿದೆ. 2018ರಲ್ಲಿ ದೆಹಲಿಯಲ್ಲಿ ನಡೆದ ಸಮಾವೇಶದಲ್ಲಿ ಬ್ಯಾಟರಿ ಚಾಲಿತ ವಾಹನಕ್ಕೊಂದು ನೀತಿ ರೂಪಿಸುವ ಉದ್ದೇಶವಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದರು. ಆದರೆ ಯಾವಾಗ ಇಂಥದ್ದೊಂದು ನೀತಿ ರೂಪಿತವಾಗಲಿದೆ ಎಂದು ಹೇಳಿರಲಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.