ADVERTISEMENT

ಬಿಎಚ್‌ ಸಿರೀಸ್ ನೋಂದಣಿಗೆ ಅಧಿಸೂಚನೆ

​ಪ್ರಜಾವಾಣಿ ವಾರ್ತೆ
Published 1 ಡಿಸೆಂಬರ್ 2021, 19:30 IST
Last Updated 1 ಡಿಸೆಂಬರ್ 2021, 19:30 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು:ಹೊಸ ವಾಹನಗಳಿಗೆ ಬಿಎಚ್‌ (ಭಾರತ್‌) ಸರಣಿಯ ನೋಂದಣಿ ಆರಂಭಿಸಲು ಸಾರಿಗೆ ಇಲಾಖೆ ಮಂಗಳವಾರ ಅಧಿಸೂಚನೆ ಹೊರಡಿಸಿದೆ.

ಮೋಟಾರು ವಾಹನಗಳ ನಿಯಮಗಳನ್ನು ತಿದ್ದುಪಡಿ ಮಾಡಿ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯ ಆಗಸ್ಟ್ 26 ರಂದು ಅಧಿಸೂಚನೆ ಹೊರಡಿಸಿತ್ತು. ಸೆ.15ರಿಂದ ಅದು ಜಾರಿಗೆ ಬಂದಿತ್ತು. ಆದರೆ, ರಾಜ್ಯದಲ್ಲಿ ಬಿಎಚ್‌ ಸರಣಿಯ ನೋಂದಣಿ ಆರಂಭಿಸಲು ಸಾರಿಗೆ ಇಲಾಖೆ ವಿಳಂಬ ಮಾಡಿತ್ತು.

‘ಕೇಂದ್ರದ ಅಧಿಸೂಚನೆಯಂತೆ ಸಾರಿಗೇತರ ವಾಹನಗಳ ನೋಂದಣಿಯನ್ನು ಬಿಎಚ್‌ ಸರಣಿಯಲ್ಲಿ ನಡೆಸಲು ಅನುಮತಿ ನೀಡಿ ಅಧಿಸೂಚನೆ ಹೊರಡಿಸಲಾಗಿದ್ದು, ಸಾರಿಗೆ ಇಲಾಖೆ ಆಯುಕ್ತರು ಮಾರ್ಗಸೂಚಿ ರೂಪಿಸಲಿದ್ದಾರೆ’ ಎಂದು ಇಲಾಖೆಯ ಪ್ರಧಾನ ಕಾರ್ಯದರ್ಶಿ ರಾಜೇಂದರ್ ಕುಮಾರ್ ಕಟಾರಿಯಾ ಹೇಳಿದರು.

ADVERTISEMENT

ಒಂದು ರಾಜ್ಯದಿಂದ ಮತ್ತೊಂದು ರಾಜ್ಯಕ್ಕೆ ವಾಹನಗಳನ್ನು ತಡೆರಹಿತವಾಗಿ ವರ್ಗಾವಣೆ ಮಾಡಿಕೊಳ್ಳಲು ಬಿಎಚ್‌ ಸರಣಿಯ ನೋಂದಣಿ ಅನುಕೂಲವಾಗುತ್ತದೆ. ಸದ್ಯ ಇರುವ ವಾಹನ ನೋಂದಣಿ ಪದ್ಧತಿಯಲ್ಲಿ ಹೊರ ರಾಜ್ಯದ ವಾಹನಗಳು ಬೇರೆ ರಾಜ್ಯಗಳಲ್ಲಿ 11 ತಿಂಗಳ ತನಕ ಓಡಿಸಲು ಅನುಮತಿ ಇದೆ. ಬಳಿಕ ಆಯಾ ರಾಜ್ಯದಲ್ಲಿ ಹೊಸದಾಗಿ ಮರು ನೋಂದಣಿ ಮಾಡಿಸಬೇಕಾಗಿದೆ.

ಬಿಎಚ್‌ ಸರಣಿಯಲ್ಲಿ ನೋಂದಣಿಯಾಗುವ ವಾಹನಗಳನ್ನು ಯಾವ ರಾಜ್ಯದಲ್ಲಿ ಬೇಕಿದ್ದರೂ ಚಾಲನೆ ಮಾಡಬಹುದು. ಮರು ನೋಂದಣಿ ಅಗತ್ಯ ಇರುವುದಿಲ್ಲ. ನೋಂದಣಿ ಸಂಖ್ಯೆ ‘ಬಿ.ಎಚ್‌’ ಎಂದೇ ಆರಂಭವಾಗುತ್ತದೆ.

ರಾಜ್ಯದಿಂದ ರಾಜ್ಯಕ್ಕೆ ವರ್ಗಾವಣೆಯಾಗುವ ಕೇಂದ್ರ ಮತ್ತು ರಾಜ್ಯ ಸರ್ಕಾರದ ಉದ್ಯೋಗಿಗಳು, ರಕ್ಷಣಾ ಸಿಬ್ಬಂದಿ, ಕೇಂದ್ರ ಸರ್ಕಾರದ ಅಧೀನದಲ್ಲಿರುವ ಸಾರ್ವಜನಿಕ ಉದ್ದಿಮೆಗಳ ನೌಕರರು, ನಾಲ್ಕು ಅಥವಾ ಅದಕ್ಕೂ ಹೆಚ್ಚಿನ ರಾಜ್ಯಗಳಲ್ಲಿ ಶಾಖೆ ಹೊಂದಿರುವ ಖಾಸಗಿ ಕಂಪನಿಯ ಉದ್ಯೋಗಿಗಳು ಗುರುತಿನ ಚೀಟಿ ಸಲ್ಲಿಸಿ ಬಿಎಚ್‌ ಸರಣಿಯಲ್ಲಿ ವಾಹನ ನೋಂದಣಿ ಮಾಡಿಸಿಕೊಳ್ಳಬಹುದು. ಒಡಿಶಾ, ಮಹಾರಾಷ್ಟ್ರ ಮತ್ತು ಚಂಡೀಘಡ ಸೇರಿ 15 ರಾಜ್ಯಗಳಲ್ಲಿ ಈಗಾಗಲೇ ಈ ಪದ್ಧತಿ ಜಾರಿಯಲ್ಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.