ADVERTISEMENT

ಕಾಲೇಜು ಬಸ್ಸಿಗೆ ಬಯೋ ಡೀಸೆಲ್‌

ಜಿ.ಬಿ.ನಾಗರಾಜ್
Published 4 ನವೆಂಬರ್ 2020, 5:18 IST
Last Updated 4 ನವೆಂಬರ್ 2020, 5:18 IST
ಬೀಜಗಳಿಂದ ಇಂಧನ ತಯಾರಿಸುತ್ತಿರುವ ವಿದ್ಯಾರ್ಥಿಗಳು -ಚಿತ್ರಗಳು: ಭವಾನಿ ಮಂಜು
ಬೀಜಗಳಿಂದ ಇಂಧನ ತಯಾರಿಸುತ್ತಿರುವ ವಿದ್ಯಾರ್ಥಿಗಳು -ಚಿತ್ರಗಳು: ಭವಾನಿ ಮಂಜು    

‘ನಮ್ ಕಾಲೇಜಿನ ಒಂಬತ್ತೂ ಬಸ್‌ಗಳಿಗೆ ಆರು ವರ್ಷಗಳಿಂದ ಬಯೋ ಡೀಸೆಲ್ ಹಾಕಿ, ಓಡಿಸುತ್ತಿದ್ದೇವೆ. ಡೀಸೆಲ್‌ಗೆ ಹತ್ತು ಪರ್ಸೆಂಟ್‌ನಷ್ಟು ಬಯೋಡೀಸೆಲ್ ಹಾಕ್ತೀವಿ. ಆಗಿನಿಂದಲೂ ಬಸ್‌ಗಳ ಎಂಜಿನ್‌ ಪರ್ಫಾಮೆನ್ಸ್‌ ಚೆನ್ನಾಗಿದೆ. ಡೀಸೆಲ್ ಮೇಲಿನ ಖರ್ಚೂ ತುಸು ಉಳಿದಿದೆ’

ಪ್ರೊಫೆಸರ್ ಶ್ರೀಧರ್, ಕಾಲೇಜು ಬಸ್ಸಿನ ಇಂಧನ ಟ್ಯಾಂಕ್‌ಗೆ ಆಲಿಕೆ ಇಟ್ಟು, ಹೊಂಗೆ ಎಣ್ಣೆ ಸುರಿಯುತ್ತಿದ್ದನ್ನು ತೋರಿಸುತ್ತಲೇ, ‘ಜೈವಿಕ ಇಂಧನ’ ತಯಾರಿಕೆ ಮತ್ತು ಬಳಕೆ ಕುರಿತ ಕಥೆಯ ಸುರುಳಿಯನ್ನು ಉರುಳಿಬಿಟ್ಟರು.

‘ನೋಡಿ, ಈ‌ ಬಯೋ ಡೀಸೆಲ್ ಅನ್ನು ನಮ್ ಕಾಲೇಜಿನಲ್ಲೇ ತಯಾರಿಸ್ತೇವೆ. ನಮ್ಮ ಮೆಕ್ಯಾನಿಕಲ್ ಎಂಜಿನಿಯರಿಂಗ್ ವಿಭಾಗದ ಹುಡುಗರೇ ಅದನ್ನು ತಯಾರಿಸುತ್ತಾರೆ. ಅಕ್ಕಪಕ್ಕದ ರೈತರು, ಟ್ರೇಡರ್ಸ್ ಗಳಿಂದ ಹೊಂಗೆ, ಬೇವಿನ ಬೀಜ ಕೊಂಡ್ಕೋತ್ತೀವಿ’ ಎಂದು ಉರುಳಿಬಿಟ್ಟ ಕಥೆಯ ಸುರುಳಿಯನ್ನು ಇನ್ನಷ್ಟು ಮುಂದುವರಿಸಿದರು.

ADVERTISEMENT

ಬಯೋ ಡೀಸೆಲ್ ಮಾತು ಮುಂದುವರಿಯುತ್ತಿರುವಾಗ ಪಕ್ಕದ ವರ್ಕ್‌ಶಾಪ್‌ನಲ್ಲಿ ಯಂತ್ರಗಳು, ಜರಡಿಗಳು ಗುಡು ಗುಡು ಸದ್ದು ಮಾಡುತ್ತಿದ್ದವು. ವಿದ್ಯಾರ್ಥಿಗಳು ಬೇವು, ಹೊಂಗೆ, ಸೀಮರುಬ, ಹಿಪ್ಪೆ ಬೀಜಗಳನ್ನು ಸ್ವಚ್ಛಗೊಳಿಸಿ, ಅವುಗಳಿಂದ ತಿರುಳು ಬೇರ್ಪಡಿಸಿ, ಯಂತ್ರಗಳಿಗೆ ತುಂಬುತ್ತಿದ್ದರು‌. ಕೆಲವರು, ಯಂತ್ರಗಳಿಂದ ಹೊರಬರುತ್ತಿದ್ದ ಎಣ್ಣೆಯನ್ನು ಸಂಗ್ರಹಿಸುತ್ತಿದ್ದರು.

‘ಈ ಯಂತ್ರಗಳನ್ನು ನಮ್ಮ ವಿದ್ಯಾರ್ಥಿಗಳೇ ತಯಾರಿಸಿದ್ದು. ಈಗ ಅವರೇ ನಿರ್ವಹಿಸುತ್ತಿದ್ದಾರೆ. ನಾವು ತಾಂತ್ರಿಕ ಮಾರ್ಗದರ್ಶನ ನೀಡಿದ್ದೇವೆ‌. ಪ್ರತಿ ವರ್ಷ ನಮ್ಮ ಕಾಲೇಜು ಬಸ್ಸುಗಳಿಗೆ ಬೇಕಾಗುವಷ್ಟು ಜೈವಿಕ ಇಂಧನ ಇಲ್ಲೇ ತಯಾರಾಗುತ್ತದೆ’ ಎಂದು ಶ್ರೀಧರ್ ‌ಬಯೋ ಡೀಸೆಲ್ ವಿಭಾಗದ ಕಾರ್ಯಗಳನ್ನು ಉಮೇದಿನಿಂದ ವಿವರಿಸಿದರು.

ಚಿತ್ರದುರ್ಗದ ಶ್ರೀಜಗದ್ಗುರು ಮುರುಘರಾಜೇಂದ್ರ ತಾಂತ್ರಿಕ ಮಹಾವಿದ್ಯಾಲಯ (ಎಸ್‌ಜೆಎಂಐಟಿ) ಒಂದು ದಶಕದಿಂದ ಜೈವಿಕ ಇಂಧನ ತಯಾರಿಕೆಯ ಪ್ರಯತ್ನ ನಡೆಸುತ್ತಿತ್ತು. 6 ವರ್ಷಗಳಿಂದ ಆ ಪ್ರಯತ್ನ ಚುರುಕು ಪಡೆದುಕೊಂಡಿತು. ಈಗ ಕರ್ನಾಟಕ ರಾಜ್ಯ ಜೈವಿಕ ಇಂಧನ ಅಭಿವೃದ್ದಿ ಮಂಡಳಿ ಸಹಯೋಗದೊಂದಿಗೆ ಕಾಲೇಜಿನ ಮೆಕ್ಯಾನಿಕಲ್ ಎಂಜಿನಿಯರಿಂಗ್ ವಿಭಾಗದಲ್ಲಿ ‘ಜೈವಿಕ ಇಂಧನ ಘಟಕ’ ಆರಂಭಿಸಿದೆ. ಈಗ ಅಧ್ಯಾಪಕರ ಮಾರ್ಗದರ್ಶನದಲ್ಲಿ ಮೆಕ್ಯಾನಿಕಲ್ ಎಂಜಿನಿಯರಿಂಗ್ ವಿದ್ಯಾರ್ಥಿಗಳು, ಇಂಧನ ತಯಾರಿಕೆಗೆ ಬೇಕಾದ ಯಂತ್ರಗಳನ್ನು ಸಿದ್ಧಪಡಿಸಿದ್ದಾರೆ. ಅದೇ ವಿದ್ಯಾರ್ಥಿಗಳೇ ಇಂಧನವನ್ನು ತಯಾರಿಸುತ್ತಿದ್ದಾರೆ. ವಿಭಾಗದ ಮುಖ್ಯಸ್ಥ ಪ್ರೊ.ಶ್ರೀಧರ್ ಅವರ ನೇತೃತ್ವದಲ್ಲಿ ಈ ಬಯೋ ಡೀಸೆಲ್ ವಿಭಾಗ ಮುನ್ನಡೆಯುತ್ತಿದೆ. ಉತ್ಪತ್ತಿಯಾದ ಇಂಧನವನ್ನು ತಮ್ಮ ಕಾಲೇಜು ಬಸ್‌ಗಳಿಗೆ ಬಳಸುತ್ತಿದ್ದಾರೆ.

ಕಾಲೇಜಿನಲ್ಲಿ ವಿದ್ಯಾರ್ಥಿಗಳು ನಿತ್ಯ 50 ಲೀಟರ್‌ ಜೈವಿಕ ಇಂಧನ ಉತ್ಪಾದಿಸುತ್ತಾರೆ. ಮಂಡಳಿ, ವಾರ್ಷಿಕ 500 ಲೀಟರ್ ಜೈವಿಕ ಇಂಧನ ತಯಾರಿಕೆ ಗುರಿ ನೀಡಿತ್ತು. ಈ ಕಾಲೇಜು, ಗುರಿ ಮೀರಿದ ಸಾಧನೆ ಮಾಡಿದೆ. ‘2017ರಲ್ಲಿ 1,500 ಲೀಟರ್, ಈ ವರ್ಷದ ಡಿಸೆಂಬರ್ ಅಂತ್ಯಕ್ಕೆ 2 ಸಾವಿರ ಲೀಟರ್‌ ಬಯೋ ಡೀಸೆಲ್‌ ಉತ್ಪಾದನೆ ಮಾಡಲಿದೆ’ ಎಂದು ವಿಶ್ವಾಸ ವ್ಯಕ್ತಪಡಿಸುತ್ತಾರೆ ಶ್ರೀಧರ್.

ಬೇವು, ಜತ್ರೋಪ, ಸಿಮರುಬಾ, ಹೊಂಗೆ ಬೀಜಗಳಿಂದ ಜೈವಿಕ ಇಂಧನ ತಯಾರಿಸಲಾಗುತ್ತಿದೆ. ಒಂದು ಲೀಟರ್ ಇಂಧನ ಉತ್ಪಾದನೆಗೆ ₹ 45ರಿಂದ ₹ 50 ಖರ್ಚಾಗುತ್ತದೆ. 3ರಿಂದ 4 ಕೆ.ಜಿ. ಬೀಜಕ್ಕೆ ಒಂದು ಲೀಟರ್ ಇಂಧನ ಉತ್ಪಾದನೆ ಮಾಡಬಹುದು.

ಬೀಜವನ್ನು ಪುಡಿ ಮಾಡಿ ಹಿಂಡಿಯನ್ನು ಬೇರ್ಪಡಿಸಲಾಗುತ್ತದೆ. ಸೋಡಿಯಂ ಹೈಡ್ರಾಕ್ಸೈಡ್‌, ಮಿಥೆನಾಲ್‌ ಹಾಗೂ ಆ್ಯಸಿಡ್‌ ಬಳಸಿ ರಾಸಾಯನಿಕ ಪ್ರಕ್ರಿಯೆಗೆ ಒಳಪಡಿಸಲಾಗುತ್ತದೆ. 64 ಡಿಗ್ರಿ ಸೆ. ಉಷ್ಣತೆಯಲ್ಲಿ ಒಂದೂವರೆ ಗಂಟೆ ಕಾಯಿಸಿದಾಗ ಕಚ್ಚಾತೈಲ ಸಿದ್ಧವಾಗುತ್ತದೆ. ಇದನ್ನು ಮತ್ತೊಂದು ಯಂತ್ರಕ್ಕೆ ವರ್ಗಾಯಿಸಿ ರಾಸಾಯನಿಕಗಳನ್ನು ಬೇರ್ಪಡಿಸಲಾಗುತ್ತದೆ.

ಸ್ಥಳೀಯವಾಗಿ ಬೀಜ ಖರೀದಿ: ಚಿತ್ರದುರ್ಗ, ಬಳ್ಳಾರಿ ಸೇರಿದಂತೆ ಆಸುಪಾಸಿನ ಬಯಲು ಸೀಮೆಯ ಜಿಲ್ಲೆಗಳಲ್ಲಿ ಹೆಚ್ಚು ಬೇವು ಬೆಳೆಯುತ್ತಾರೆ. ಅಷ್ಟೇ ಪ್ರಮಾಣದಲ್ಲಿ ಬೇವಿನ ಬೀಜವನ್ನೂ ಸಂಗ್ರಹಿಸುತ್ತಾರೆ. ಅಂಥವರಿಂದ ತಿರುಳು ತೆಗೆದ ಬೀಜವನ್ನು ವ್ಯಾಪಾರಸ್ಥರು ಕೆ.ಜಿಗೆ ₹ 25 ಬೆಲೆ ನೀಡಿ ಖರೀದಿಸುತ್ತಾರೆ. ಆದರೆ, ರಾಜ್ಯ ಜೈವಿಕ ಅಭಿವೃದ್ಧಿ ಮಂಡಳಿ, ಅದಕ್ಕಿಂತ ಹೆಚ್ಚು ಬೆಲೆಗೆ ಬೀಜಗಳನ್ನು ಕೊಂಡು, ಎಣ್ಣೆ ತಯಾರಿಕೆಗೆ ಅನುಕೂಲ ಕಲ್ಪಿಸುತ್ತಿದೆ.

ಬಯೋಡೀಸೆಲ್‌ ಬಗ್ಗೆ ಹಲವರಿಗೆ ಅಪನಂಬಿಕೆಗಳಿವೆ. ಈ ಇಂಧನ ಬಳಸಬೇಕಾದರೆ, ಎಂಜಿನ್ ಬದಲಾಯಿಸಬೇಕು ಎಂಬ ತಪ್ಪು ಮಾಹಿತಿ ಇದೆ. ‘ಬಯೋಡೀಸೆಲ್ ಬಳಸುವ ವಾಹನಳಿಗೆ ಎಂಜಿನ್‌ ಬದಲಾಯಿಸುವ ಅಗತ್ಯವಿಲ್ಲ’ ಎನ್ನುತ್ತಾರೆ ಶ್ರೀಧರ್. ‘ಕಾಲೇಜಿನ ಬಸ್‌ಗಳಿಗೆ ಜೈವಿಕ ಇಂಧನ ಬಳಸಿದ್ದರಿಂದ, ಅವುಗಳ ಎಂಜಿನ್‌ ಕಾರ್ಯಕ್ಷಮತೆ ಹೆಚ್ಚಿ, ವಾಹನದ ಬಾಳಿಕೆಯೂ ವೃದ್ಧಿಸುತ್ತಿದೆ. ಹೊರಸೂಸುವ ಹೊಗೆಯಲ್ಲಿ ಹಾನಿಕಾರಕ ಕಣಗಳು ಕಾಣಿಸುತ್ತಿಲ್ಲ. ಗಂಧಕದ ಪ್ರಮಾಣವೂ ಕಡಿಮೆ ಇದೆ’ ಎಂದು ಜೈವಿಕ ಇಂಧನದ ಪರಿಣಾಮದ ಬಗ್ಗೆ ಅವರು ವಿವರಣೆ ನೀಡುತ್ತಾರೆ.

ಯಂತ್ರಗಳ ತಯಾರಿಕೆ: ಬೀಜಗಳಿಂದ ಬಂದ ಗಸಿಯಿಂದ ಇಂಧನವನ್ನು ಪ್ರತ್ಯೇಕಿಸಲು ‘ಎಣ್ಣೆ ಶುದ್ಧೀಕರಣ’ ಯಂತ್ರ, ಬೇವಿನ ಬೀಜದ ತಿರುಳು ತೆಗೆಯುವ ಯಂತ್ರ, ಹೊಂಗೆ ಬೀಜದಿಂದ ತೆಗೆಯುವ ಇಂಧನದ ಪ್ರಮಾಣವನ್ನು ಹೆಚ್ಚಿಸಲು ‘ಕ್ರಷರ್‌ ಎಕ್ಸ್‌ಪೆಲ್ಲರ್‌’ ಹಾಗೂ ‘ಬೀಜ ಶುಚಿಗೊಳಿಸುವ ಯಂತ್ರ’ವನ್ನು ಕಾಲೇಜಿನಲ್ಲಿ ಆವಿಷ್ಕರಿಸಲಾಗಿದೆ. ವಿದ್ಯಾರ್ಥಿಗಳಿಗೆ ತರಬೇತಿ ನೀಡುತ್ತಲೇ, ಯಂತ್ರಗಳು ಸಿದ್ಧವಾಗಿವೆ. ಈ ಪರ್ಯಾಯ ಇಂಧನ ಸಂಶೋಧನೆಯಲ್ಲಿ ಹೊಸ ಮೈಲಿಗಲ್ಲುಗಳನ್ನು ಸೃಷ್ಟಿಸುತ್ತಿವೆ. ಭವಿಷ್ಯದಲ್ಲಿ ಡೀಸೆಲ್‌ಗೆ ಪರ್ಯಾಯವಾಗಿ ಜೈವಿಕ ಇಂಧನ ಬಳಕೆ ಹೆಚ್ಚಾಗಲಿದೆ ಎಂದು ಶ್ರೀಧರ್ ವಿಶ್ವಾಸ ವ್ಯಕ್ತಡಿಸುತ್ತಾರೆ.

ಅಡುಗೆ ಎಣ್ಣೆಯೂ ಇಂಧನ
‘ಬಳಸಿದ ಅಡುಗೆ ಎಣ್ಣೆಯನ್ನು ಜೈವಿಕ ಇಂಧನವಾಗಿ ಪರಿವರ್ತಿಸಲು ಸಾಧ್ಯವಿದೆ’ ಎಂಬುದನ್ನು ಪ್ರೊ.ಶ್ರೀಧರ್‌ ತೋರಿಸಿಕೊಟ್ಟಿದ್ದಾರೆ. ಚಿತ್ರದುರ್ಗದ ಕೆಲ ಹೋಟೆಲ್‌ಗಳು ಈ ಪ್ರಯೋಗಕ್ಕೆ ಕೈ ಜೋಡಿಸಿವೆ. ಕರಿದ ಅಡುಗೆ ಎಣ್ಣೆಯನ್ನು ಮರುಬಳಕೆ ಮಾಡದೇ ಸಂಶೋಧನಾ ಕೇಂದ್ರಕ್ಕೆ ನೀಡಲಾಗುತ್ತಿದೆ. ಈ ಎಣ್ಣೆಯನ್ನು ಶುಚಿಗೊಳಿಸಿ ರಾಸಾಯನಿಕ ಪ್ರಕ್ರಿಯೆಗೆ ಒಳಪಡಿಸಿ ಬಯೊ ಡೀಸೆಲ್‌ ತಯಾರಿಸಲಾಗುತ್ತದೆ. ಆದರೆ, ಅಡುಗೆಗೆ ಬಳಸುವ ಕಾಳುಗಳಿಂದ ಜೈವಿಕ ಇಂಧನ ತಯಾರಿಸಲು ಸರ್ಕಾರ ಅನುಮತಿ ನೀಡಿಲ್ಲ. ಹಂದಿ ಕೊಬ್ಬು, ಮೀನು ಎಣ್ಣೆಯಿಂದಲೂ ಜೈವಿಕ ಇಂಧನ ತಯಾರಿಸಿದ ಮಾದರಿ ಈ ಕೇಂದ್ರದಲ್ಲಿ ಲಭ್ಯ.

ಇಂಧನ ತಯಾರಿಕೆಯ ಯಂತ್ರಗಳೊಂದಿಗೆ ಪ್ರೊ.ಶ್ರೀಧರ್‌

ಉಪ ಉತ್ಪನ್ನಗಳಿಗೂ ಬೇಡಿಕೆ
ಜೈವಿಕ ಇಂಧನ ತಯಾರಿಕೆಯಲ್ಲಿ ಲಭ್ಯವಾಗುವ ಉಪ ಉತ್ಪನ್ನಗಳಿಗೂ ಬೇಡಿಕೆ ಬರುತ್ತಿದೆ. ಬೀಜಗಳ ತಿರುಳಿನಿಂದ ಲಭ್ಯವಾಗುವ ಹಿಂಡಿ ವಿಜಯಪುರ ಜಿಲ್ಲೆಗೆ ಪೂರೈಕೆಯಾಗುತ್ತಿದೆ. ಜೈವಿಕ ಸೋಪು, ಗ್ಲಿಜರಿನ್‌ಗೂ ಬೇಡಿಕೆ ಹೆಚ್ಚಾಗಿದೆ.

ಜೈವಿಕ ಇಂಧನಕ್ಕೆ ಬಳಸುವ ಕಾಯಿಗಳ ಸಿಪ್ಪೆಯನ್ನು ಹೊರತೆಗೆದಾಗ ಹಿಂಡಿ ತಯಾರಾಗುತ್ತದೆ. ಕರಂಜಿನ್‌ ಎಂಬ ರಾಸಾಯನಿಕ ವಸ್ತು ಸೇರಿಸುವುದರಿಂದ ಇದನ್ನು ಜಾನುವಾರುಗಳಿಗೆ ನೀಡಲು ಸಾಧ್ಯವಿಲ್ಲ. ಆದರೆ, ಜಮೀನುಗಳಿಗೆ ಗೊಬ್ಬರವಾಗಿ ಉಪಯೋಗಿಸಲಾಗುತ್ತಿದೆ.

ರಾಸಾಯನಿಕ ಗೊಬ್ಬರಕ್ಕೆ ಪರ್ಯಾಯವಾಗಿ ಈ ಹಿಂಡಿ ಬಳಕೆಯಾಗುತ್ತಿದೆ. ಬೆಳೆಗಳಿಗೆ ಇದನ್ನು ಬಳಸುವುದರಿಂದ ಕಾಂಡಕೊರಕ ಸಮಸ್ಯೆ ಇರುವುದಿಲ್ಲ. ಕಚ್ಚಾ ಇಂಧನ ಸಿದ್ಧವಾದಾಗ ಸಿಗುವ ಗಸಿಯಿಂದ ಸೋಪು ತಯಾರಿಸಲು ಅವಕಾಶವಿದೆ. ಜೈವಿಕ ಸೋಪನ್ನು ಜಾನುವಾರುಗಳ ಸ್ನಾನಕ್ಕೆ ಬಳಸಬಹುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.