ADVERTISEMENT

ವಾಣಿಜ್ಯ ವಾಹನ ತಯಾರಕರಿಗೆ ₹ 6 ಸಾವಿರ ಕೋಟಿ ನಷ್ಟ ಸಂಭವ: ಕ್ರಿಸಿಲ್

ಪಿಟಿಐ
Published 20 ಆಗಸ್ಟ್ 2020, 16:28 IST
Last Updated 20 ಆಗಸ್ಟ್ 2020, 16:28 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಮುಂಬೈ: ಲಾಕ್‌ಡೌನ್‌ನಿಂದಾಗಿ ಪ್ರಸಕ್ತ ಹಣಕಾಸು ವರ್ಷದಲ್ಲಿ ವಾಣಿಜ್ಯ ವಾಹನ ತಯಾರಕರಿಗೆ ₹ 6 ಸಾವಿರ ಕೋಟಿಗಳಷ್ಟು ನಿವ್ವಳ ನಷ್ಟವಾಗುವ ಅಂದಾಜು ಮಾಡಲಾಗಿದೆ ಎಂದು ರೇಟಿಂಗ್ಸ್‌ ಸಂಸ್ಥೆ ಕ್ರಿಸಿಲ್‌ ಹೇಳಿದೆ.

ಪ್ರಸಕ್ತ ಹಣಕಾಸು ವರ್ಷದ ಏಪ್ರಿಲ್‌–ಜೂನ್‌ ಅವಧಿಯಲ್ಲಿ 31,636 ವಾಣಿಜ್ಯ ವಾಹನಗಳ ಮಾರಾಟವಾಗಿದ್ದು, ಹಿಂದಿನ ಹಣಕಾಸು ವರ್ಷದ ಇದೇ ಅವಧಿಗೆ ಹೋಲಿಸಿದರೆ ಮಾರಾಟದಲ್ಲಿ ಶೇ 85ರಷ್ಟು ಇಳಿಕೆಯಾಗಿದೆ ಎಂದು ತಿಳಿಸಿದೆ.

ವಾಹನಗಳಲ್ಲಿ ಸರಕುಗಳ ಪ್ರಮಾಣದ ಬಗ್ಗೆ ಹೊಸ ನಿಯಮ ಹಾಗೂ ಮಂದಗತಿಯ ಆರ್ಥಿಕ ಬೆಳವಣಿಗೆಯಿಂದಾಗಿ 2019–20ರಲ್ಲಿ ಮಾರಾಟ ಪ್ರಮಾಣ ಶೇ 29ರಷ್ಟು ಇಳಿಕೆಯಾಗಿದೆ.

ADVERTISEMENT

ಲಾಕ್‌ಡೌನ್‌ನಿಂದಾಗಿ ವಾಣಿಜ್ಯ ವಹಿವಾಟುಗಳು ಸ್ಥಿಗಿತಗೊಂಡಿದ್ದರಿಂದ ಮಧ್ಯಮ ಮತ್ತು ಭಾರಿ ಗಾತ್ರದ ವಾಣಿಜ್ಯ ವಾಹನಗಳ ಮಾರಾಟ ಕಡಿಮೆಯಾಗಿದೆ. ಉದ್ಯಮದ ಒಟ್ಟಾರೆ ವರಮಾನದಲ್ಲಿ ಇವುಗಳ ಕೊಡುಗೆಯೇ ಹೆಚ್ಚಿನ ಪ್ರಮಾಣದಲ್ಲಿದೆ. ಗ್ರಾಮೀಣ ಭಾಗದಲ್ಲಿ ಮತ್ತು ಖಾಸಗಿ ಬಳಕೆಗೆ ಬೇಡಿಕೆ ಇರುವುದರಿಂದ ಲಘು ವಾಣಿಜ್ಯ ವಾಹನಗಳ ಮಾರಾಟ ತುಸು ಉತ್ತಮವಾಗಿದೆ.

ಸದ್ಯದ ಮಟ್ಟಿಗೆ ಕಂಪನಿಗಳ ಆರ್ಥಿಕ ಸ್ಥಿತಿಯ ಮೇಲೆ ಪರಿಣಾಮ ಬೀರಲಾರದು. ಏಕೆಂದರೆ ತಯಾರಕರ ಹಣಕಾಸು ಸ್ಥಿತಿ ಉತ್ತಮವಾಗಿದೆ. ತಯಾರಕರು ವಿತರಕರು ಮತ್ತು ಪೂರೈಕೆದಾರರ ನೆರವಿಗೆ ನಿಲ್ಲುವುದರಿಂದ ತಾತ್ಕಾಲಿಕವಾಗಿ ದುಡಿಯುವ ಬಂಡವಾಳದ ಅಗತ್ಯವು ಹೆಚ್ಚಾಗಲಿದೆ. ಇದು ಉದ್ಯಮದ ಸಾಲವನ್ನೂ ಹೆಚ್ಚಿಸಬಹುದು. ಆದರೆ ಕಂಪನಿಗಳ ಆರ್ಥಿಕ ಪರಿಸ್ಥಿತಿಯನ್ನು ಗಮನಿಸಿದರೆ ಮುಂದಿನ ಹಣಕಾಸು ವರ್ಷದಲ್ಲಿ ಮತ್ತೆ ಪುಟಿದೇಳುವ ನಿರೀಕ್ಷೆ ಇದೆ ಎಂದೂ ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.