ADVERTISEMENT

ವರ್ಷಾಂತ್ಯದಲ್ಲಿ ರಿಯಾಯತಿ ಹವಾ

ಸುಧೀಂದ್ರ ಪ್ರಸಾದ್
Published 20 ಡಿಸೆಂಬರ್ 2018, 5:06 IST
Last Updated 20 ಡಿಸೆಂಬರ್ 2018, 5:06 IST

2018ಅಂತ್ಯಗೊಳ್ಳುತ್ತಲೇ ತಯಾರಾದ ಕಾರುಗಳ ಮಾರಾಟಕ್ಕೆ ತಯಾರಿಕಾ ಕಂಪನಿಗಳು ಪೈಪೋಟಿಗೆ ಬಿದ್ದಿವೆ. ವರ್ಷಾಂತ್ಯದೊಳಗೆ ಖರೀದಿಸಿದರೆ ಭರಪೂರ ರಿಯಾಯಿತಿ ನೀಡುವ ಘೋಷಣೆ ಮಾಡಿದ್ದಾರೆ.ಜತೆಗೆ2019ರಲ್ಲಿ ಬೆಲೆ ಏರಿಕೆಯಾಗಲಿದೆ ಎಂಬ ಎಚ್ಚರಿಕೆಯ ಗಂಟೆಯನ್ನೂ ಕಟ್ಟಿ, ರಿಯಾಯಿತಿಯ ಬ್ಯಾಂಡ್‌ ಬಾರಿಸಲಾಗುತ್ತಿದೆ.

ಮಾರುತಿ ಸುಜುಕಿಯ ಸಣ್ಣ ಕಾರುಗಳಿಂದ ಹಿಡಿದು ಜಾಗ್ವಾರ್ ಲ್ಯಾಂಡ್‌ರೋವರ್‌,ಆಡಿಯಂಥ ವಿಲಾಸಿ ಕಾರುಗಳವರೆಗೂ ಡಿಸೆಂಬರ್‌ ಕಾರ್ನಿವಲ್‌ನ ರಿಯಾಯಿತಿ ಘೋಷಣೆಯಾಗಿದೆ.ಕಳೆದ ವರ್ಷಕ್ಕೆ ಹೋಲಿಸಿದಲ್ಲಿ ಈ ವರ್ಷ ರಿಯಾಯಿತಿ ಮೊತ್ತ ತುಸು ಹೆಚ್ಚಿದೆ.

ಆಟೊಮ್ಯಾಟಿಕ್ ಸೆಡಾನ್‌ ಎಸ್‌ಯುವಿ ವಿಭಾಗದಲ್ಲಿ ಗರಿಷ್ಠ ₹1ಲಕ್ಷವರೆಗೂ ರಿಯಾಯಿತಿ ಸಿಗುತ್ತಿದೆ. ಹೀಗಾಗಿ ತೆರಿಗೆ ಮತ್ತು ವಿಮಾ ಮೊತ್ತ ಕಡಿಮೆ. ಜತೆಗೆ ರಿಯಾಯಿತಿಯೂ ಸಿಗುತ್ತಿರುವುದು ಗ್ರಾಹಕರಲ್ಲಿ ಹರ್ಷ ಮೂಡಿಸಿದೆ.

ADVERTISEMENT

ಹ್ಯುಂಡೈ ಎಕ್ಸೆಂಟ್‌ ಕಾರಿಗೆ ₹40ಸಾವಿರದವರೆಗೂ ನಗದು ರಿಯಾಯಿತಿ, ₹45ಸಾವಿರವರೆಗೂ ಎಕ್ಸ್‌ಚೇಂಜ್‌, ₹5ಸಾವಿರದಷ್ಟು ಕಾರ್ಪೋರೇಟ್‌ ರಿಯಾಯಿತಿ,ಡೀಲರ್ ಕಡೆಯಿಂದಲೂ ಸಾಕಷ್ಟು ರಿಬೆಟ್ ಸಿಗುತ್ತಿದೆ.

ಫೋಕ್ಸ್‌ವ್ಯಾಗನ್ ಅಮಿಯೊ ಡಿಎಸ್‌ಜಿ ಆಟೊಮ್ಯಾಟಿಕ್ ಕಾರಿಗೆ ಇದೇ ಮಾದರಿಯಲ್ಲಿ ಸುಮಾರು ₹1.25ರಷ್ಟು ರಿಯಾಯಿತಿ ಲಭ್ಯವಿದೆ ಎಂದು ಡೀಲರ್‌ಗಳು ಹೇಳುತ್ತಾರೆ. ಹೊಂಡಾ ಬಿಆರ್‌ವಿ ಸಿವಿಟಿ,ಟೊಯೊಟಾ ಯೆರಿಸ್‌ ಸಿವಿಟಿ ಆಟೊಮ್ಯಾಟಿಕ್‌,ಸ್ಕೊಡಾ ರ‍್ಯಾಪಿಡ್‌ ಆಟೊಮ್ಯಾಟಿಕ್‌ ಕಾರುಗಳ ಮೇಲೆ ಸುಮಾರು ₹1ಲಕ್ಷವರೆಗೂ ರಿಯಾಯಿತಿ ಲಭ್ಯ ವಿದೆ.ಫೋಕ್ಸ್‌ವ್ಯಾಗನ್‌ ವೆಂಟೊ ಡಿಎಸ್‌ಜಿ ಆಟೊಮ್ಯಾಟಿಕ್ ಕಾರುಗಳ ಮೇಲೆ ₹1.5ಲಕ್ಷದಷ್ಟು ರಿಯಾಯಿತಿ ಸಿಗುತ್ತಿದೆ.

ಸಣ್ಣಕಾರುಗಳು : ದೇಶದಲ್ಲಿ ಸಣ್ಣ ಕಾರುಗಳ ಮಾರಾಟ ಸಂಖ್ಯೆ ದೊಡ್ಡದಿದೆ.ದೊಡ್ಡ ಕಾರುಗಳ ದಾಂಗುಡಿ ಇಡುತ್ತಿದ್ದರೂ,ಕಾರು ಖರೀದಿಯ ಆರಂಭಿಕ ಹಂತದವರಿಗೆ ಈಗಲೂ ಸಣ್ಣ ಕಾರುಗಳೇ ಅಚ್ಚುಮೆಚ್ಚು.ಹೀಗಾಗಿ ಸಣ್ಣ ಕಾರುಗಳಲ್ಲಿ ಈ ವರ್ಷಾಂತ್ಯದ ರಿಯಾಯಿತಿಯಲ್ಲಿ ಸುಮಾರು ₹70ಸಾವಿರದಷ್ಟು ರಿಯಾಯಿತಿ ಸಿಗುತ್ತಿದೆ. ಆ್ಯಟೊಮ್ಯಾಟಿಕ್ ವಿಭಾಗದಲ್ಲಿ ಮಾರುತಿ ಆಲ್ಟೊಕೆ10, ಮಾರುತಿ ಸೆಲೆರಿಯೊ, ಮಾರುತಿ ವ್ಯಾಗನ್ ಆರ್‌, ಇಗ್ನಿಸ್, ಹ್ಯುಂಡೈ ಐ10, ನಿಸ್ಸಾನ್ ಮೈಕ್ರಾ ಸಿವಿಟಿ, ಹೊಂಡಾ ಜಾಝ್‌ ವಿ ಸಿವಿಟಿ ಕಾರುಗಳು ರಿಯಾಯಿತಿ ಪಟ್ಟಿಯಲ್ಲಿವೆ.

ವಾರಂಟಿ ಅವಧಿ ಹೆಚ್ಚಳ : ಕೇವಲ ಹಣ ರಿಯಾಯಿತಿ ಮಾತ್ರವಲ್ಲ,ಕೆಲ ಕಂಪೆನಿಗಳು ವಾರೆಂಟಿ ಅವಧಿ ಹೆಚ್ಚಿಸುವ ಕೊಡುಗೆ ನೀಡುತ್ತಿವೆ.

ಫೋರ್ಟ್‌ ಆ್ಯಸ್ಪೈರ್‌ 5ವರ್ಷ ವಾರೆಂಟಿ ನೀಡುತ್ತಿದೆ. ಇದು ಡೀಲರ್‌ ಕಡೆಯಿಂದ ಸಿಗು ತ್ತಿದೆ.ಟಾಟಾ ಟಿಗೋರ್ ಹೊಸ ಮಾದರಿ ಕಾರಿಗೆ ₹45ಸಾವಿರ ರಿಯಾಯಿತಿ ಸಿಗುತ್ತಿದೆ.ಇದರಲ್ಲಿ ಒಂದು ವರ್ಷದ ವಿಮಾ ಕಂತಿನ ರಿಯಾಯಿತಿ ಜತೆ ನಗದು ರಿಯಾಯಿತಿಯೂ ಸೇರಿದೆ.

ಹೊಂಡಾ ಅಮೇಜ್‌ ವಾರೆಂಟಿ ವಿಸ್ತರಣೆ, ಮಾರುತಿ ಡಿಸೈರ್‌ ಪೆಟ್ರೊಲ್ ಮೇಲೆ ₹65ಸಾವಿರ, ಡೀಸೆಲ್ ಕಾರಿನ ಮೇಲೆ ₹75 ಸಾವಿರ,ಫೋಕ್ಸ್‌ವ್ಯಾಗನ್‌ ಅಮಿಯೊ,ಹ್ಯುಂಡೈ ಎಕ್ಸೆಂಟ್‌ ಮೇಲೆ ₹90ಸಾವಿರ.ಫೋಕ್ಸ್‌ವ್ಯಾಗನ್ ಅಮಿಯೊ ಆಟೊಮ್ಯಾಟಿಕ್‌ ಮೇಲೆ ₹1.17ಲಕ್ಷ ರಿಯಾಯಿತಿ ಲಭ್ಯವಿರುವ ಕುರಿತು ಮಳಿಗೆಗಳ ಮೂಲಗಳು ತಿಳಿಸಿವೆ.

ಮೇಲ್ವರ್ಗದ ಹ್ಯಾಚ್‌ಬ್ಯಾಕ್ : ಈ ವರ್ಗದಲ್ಲಿ ಮಾರುತಿ ಬೊಲೆನೊ, ಹ್ಯುಂಡೈ ಎಲೈಟ್‌ ಐ20, ಫೋಕ್ಸ್‌ವ್ಯಾಗನ್‌ ಪೊಲೊ ಟ್ರೆಂಡ್‌ಲೈನ್‌, ಕಂಫರ್ಟ್‌ಲೈನ್‌,ಹೈಲೈನ್‌ ಸೇರಿದಂತೆ ಎಲ್ಲಾ ವೇರಿಯಂಟ್‌ ಮೇಲೂ ರಿಯಾಯಿತಿ ಘೋಷಿಸಿವೆ.ಹೊಂಡಾ ಜಾಝ್‌ನ ಎಸ್‌ವಿ ಮತ್ತು ವಿಎಕ್ಸ್ ಮೇಲೂ ರಿಯಾಯಿತಿ ಸಿಗುತ್ತಿದೆ. ಈ ರಿಯಾಯಿತಿ ಮೊತ್ತ ₹35ರಿಂದ ಗರಿಷ್ಠ ₹75ಸಾವಿರದವರೆಗೂ ಲಭ್ಯ.ಅದರಲ್ಲೂ ಹಳೆಯ ಕಾರು ನೀಡಿ ಹೊಸತನ್ನು ಖರೀದಿಸುವವರಿಗೆ ಇದು ಸುಗ್ಗಿ.‌

ಎಸ್‌ಯುವಿಗಳಿಗೆ ಭಾರಿ ಸೋಡಿ : ಸಣ್ಣ ಕಾರುಗಳ ಮಾರುಕಟ್ಟೆಯಾಗಿದ್ದ ಭಾರತ ಈಗ ನಿಧಾನವಾಗಿ ಎಸ್‌ಯುವಿ ಕಾರುಗಳತ್ತ ಹೊರಳುತ್ತಿದೆ. ಶುದ್ಧ ಎಸ್‌ಯುವಿಗಿಂತ ₹10ರಿಂದ ₹15ಲಕ್ಷ ಬೆಲೆಯ ಎತ್ತರಿಸಿದ ಕಾರುಗಳು ಸದ್ಯ ಹೆಚ್ಚು ಸದ್ದು ಮಾಡುತ್ತಿವೆ. ಇವುಗಳಲ್ಲಿ ಮಾರುತಿ ವಿಟಾರಾ ಬ್ರೀಜಾ, ಟಾಟಾ ನೆಕ್ಸಾನ್‌, ಮಹೀಂದ್ರ ಟಿಯುವಿ 300. ರಿನೊ ಡಸ್ಟರ್‌, ಹೊಂಡಾ ಬಿಆರ್‌ವಿ,ಹ್ಯುಂಡೈ ಕ್ರೇಟಾ, ಮಹೀಂದ್ರಾ ಸ್ಕಾರ್ಪಿಯೊ, ಮಹೀಂದ್ರ ಎಕ್ಸ್‌ಯುವಿ 500, ಹ್ಯುಂಡೈ ಟುಕ್ಸಾನ್‌ ಕಾರುಗಳ ಮೇಲೆ ₹25ರಿಂದ 1.5ಲಕ್ಷವರೆಗೂ ರಿಯಾಯಿತಿ ಲಭ್ಯ.ಇವುಗಳು ಆಯಾ ಕಾರುಗಳ ಸದ್ಯದ ಮಾರುಕಟ್ಟೆ ಮೇಲೆ ಅವಲಂಬಿಸಿದೆ. ಒಂದೆಡೆ ಕ್ರೇಟಾಗೆ ₹15ಸಾವಿರ, ಹೊಂಡಾ ಕಾರಿಗೆ ₹1ಲಕ್ಷವರೆಗೂ ರಿಯಾಯಿತಿ ಸಿಗುತ್ತಿದೆ. ಜೀಪ್‌ ಕಂಪಸ್‌, ಟೊಯೊಟಾ ಫಾರ್ಚೂನರ್‌ ಹಾಗೂ ಫೋರ್ಡ್ ಎಂಡವರ್‌ ಕಾರುಗಳ ಮೇಲೆ ಸುಮಾರು ₹50ಸಾವಿರದಷ್ಟು ರಿಯಾಯಿತಿ ಸಿಗುತ್ತಿದೆ.

ವಿಲಾಸಿ ಕಾರುಗಳಲ್ಲಿ ಜೆಎಲ್‌ಆರ್‌ ಮತ್ತು ಆಡಿ ಕಾರುಗಳ ಕೆಲ ಮಾದರಿ ಮೇಲೆ ₹7.5ಲಕ್ಷದಷ್ಟು ರಿಯಾಯಿತಿ ಲಭ್ಯ. ಆಡಿ ₹5.5ರಿಂದ ₹7.4ಲಕ್ಷದಷ್ಟು ರಿಯಾಯಿತಿ ಕ್ಯೂ3, ಎ3, ಎ4 ಮೇಲೆ ಘೋಷಿಸಲಾಗಿದೆ. ಜಾಗ್ವಾರ್, ಲ್ಯಾಂಡ್‌ರೋವರ್‌ ಕೂಡಾ ರಿಯಾಯಿತಿ ಘೋಷಿಸಿದೆ. ತನ್ನ ಡಿಸ್ಕವರಿ ಸ್ಪೋರ್ಟ್‌ 2ಲೀ. ಡೀಸೆಲ್‌ ಎಸ್‌ಇ ಮತ್ತು ರೇಂಜ್‌ ರೋವರ್‌ನ ಎವಾಕ್‌ 2ಲೀ ಪೆಟ್ರೋಲ್ ಎಸ್‌ಇ ಕಾರುಗಳ ಮೇಲು ರಿಯಾಯಿತಿ ಲಭ್ಯ.

ಬ್ಯಾಂಕ್‌ಗಳೂ ಪೈಪೋಟಿಯಲ್ಲಿ: ಕಾರು ಕಂಪನಿಗಳು ರಿಯಾಯಿತಿ ಘೋಷಿಸುತ್ತಿದ್ದಂತೆ ಬ್ಯಾಂಕ್‌ಗಳೂ ಬಡ್ಡಿ ದರದಲ್ಲಿನ ಏರಿಳಿತಗಳ ಮೂಲಕ ಗ್ರಾಹಕರನ್ನು ಆಕರ್ಷಿಸುತ್ತಿವೆ. ಕೆಲವು ಬ್ಯಾಂಕ್‌ಗಳು ಕಾರು ಸಾಲದ ಬಡ್ಡಿ ದರ ಶೇ 9 ರಿಂದ 9.25 ರಷ್ಟಿದೆ. ಮಹಿಳಾ ಗ್ರಾಹಕರನ್ನು ಹೆಚ್ಚು ಉತ್ತೇಜಿಸುವ ಸಲುವಾಗಿ ಅವರಿಗೆ ಹೆಚ್ಚಿನ ರಿಯಾಯಿತಿ ನೀಡುತ್ತಿವೆ. ಹೀಗಾಗಿ 2018ರ ವರ್ಷಾಂತ್ಯದಲ್ಲಿ ಕಾರುಗಳ ಮಾರಾಟ ಭರಾಟೆ ಜೋರಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.