ADVERTISEMENT

ಪ್ರಯಾಣಿಕ ವಾಹನ ಸಗಟು ಮಾರಾಟ ಅಲ್ಪ ಏರಿಕೆ

ಪಿಟಿಐ
Published 14 ಮೇ 2024, 14:08 IST
Last Updated 14 ಮೇ 2024, 14:08 IST
   

ನವದೆಹಲಿ: ಕಳೆದ ವರ್ಷದ ಏಪ್ರಿಲ್‌ಗೆ ಹೋಲಿಸಿದರೆ ಪ್ರಸಕ್ತ ವರ್ಷದ ಏಪ್ರಿಲ್‌ನಲ್ಲಿ ಪ್ರಯಾಣಿಕ ವಾಹನಗಳ ಸಗಟು ಮಾರಾಟದಲ್ಲಿ ಶೇ 1.3ರಷ್ಟು ಅಲ್ಪ ಪ್ರಮಾಣದಲ್ಲಿ ಏರಿಕೆಯಾಗಿದೆ ಎಂದು ಭಾರತೀಯ ವಾಹನ ತಯಾರಕರ ಒಕ್ಕೂಟ (ಎಸ್‌ಐಎಎಂ) ತಿಳಿಸಿದೆ.

ಹಿಂದಿನ ವರ್ಷದ ಏಪ್ರಿಲ್‌ನಲ್ಲಿ 3.31 ಲಕ್ಷ ವಾಹನಗಳು ಮಾರಾಟವಾಗಿದ್ದರೆ, ಈ ಏಪ್ರಿಲ್‌ನಲ್ಲಿ 3.35 ಲಕ್ಷ ವಾಹನಗಳು ಮಾರಾಟವಾಗಿವೆ. ಯುಟಿಲಿಟಿ ವಾಹನಗಳಿಗೆ ಬೇಡಿಕೆ ಹೆಚ್ಚಾಗಿರುವುದರಿಂದ ಸಗಟು ಮಾರಾಟದಲ್ಲಿ ಏರಿಕೆಯಾಗಿದೆ ಎಂದು ತಿಳಿಸಿದೆ.

ಯುಟಿಲಿಟಿ ವಾಹನಗಳ ಮಾರಾಟದಲ್ಲಿ ಶೇ 21ರಷ್ಟು ಹೆಚ್ಚಳವಾಗಿದ್ದು, 1.79 ಲಕ್ಷ  ಮಾರಾಟವಾಗಿವೆ. ಆದರೆ, ಪ್ರಯಾಣಿಕ ಕಾರುಗಳ ಮಾರಾಟದಲ್ಲಿ ಶೇ 23.38ರಷ್ಟು ಕುಸಿತವಾಗಿದೆ. ಹಿಂದಿನ ವರ್ಷದ ಇದೇ ಅವಧಿಯಲ್ಲಿ 1.25 ಲಕ್ಷ ಮಾರಾಟವಾಗಿದ್ದರೆ, ಪ್ರಸಕ್ತ ಅವಧಿಯಲ್ಲಿ 96,357 ಕಾರುಗಳಷ್ಟೇ ಮಾರಾಟವಾಗಿವೆ ಎಂದು ವಿವರಿಸಿದೆ.

ADVERTISEMENT

ವ್ಯಾನ್‌ಗಳ ಮಾರಾಟದಲ್ಲಿ ಶೇ 15ರಷ್ಟು ಹೆಚ್ಚಳವಾಗಿದ್ದು, 12,060ಕ್ಕೆ ತಲುಪಿದೆ.

ದ್ವಿಚಕ್ರ ವಾಹನ ಮಾರಾಟ ಏರಿಕೆ:

ದ್ವಿಚಕ್ರ ವಾಹನಗಳ ಮಾರಾಟದಲ್ಲಿ ಶೇ 31ರಷ್ಟು ಏರಿಕೆಯಾಗಿದ್ದು, 17.51 ಲಕ್ಷ ಮಾರಾಟವಾಗಿವೆ. 

ಮೋಟರ್‌ಸೈಕಲ್‌ ಮಾರಾಟದಲ್ಲಿ ಶೇ 34ರಷ್ಟು ಹೆಚ್ಚಳವಾಗಿದ್ದು, 11.28 ಮಾರಾಟವಾಗಿವೆ. ಸ್ಕೂಟರ್‌ಗಳ ಮಾರಾಟದಲ್ಲಿ ಶೇ 25ರಷ್ಟು ಏರಿಕೆಯಾಗಿದ್ದು, 5.81 ಲಕ್ಷಕ್ಕೆ ಮುಟ್ಟಿದೆ. ತ್ರಿಚಕ್ರ ವಾಹನಗಳ ಮಾರಾಟದಲ್ಲಿ ಶೇ 14.53ರಷ್ಟು ಹೆಚ್ಚಳವಾಗಿದ್ದು, ಒಟ್ಟು 49,116 ಮಾರಾಟವಾಗಿವೆ.

‘ಮುಂಗಾರು ಹಂಗಾಮು ಉತ್ತಮ ಆರಂಭದ ನಿರೀಕ್ಷೆಯಿದೆ. ಲೋಕಸಭಾ ಚುನಾವಣೆಯ ಫಲಿತಾಂಶದ ಬಳಿಕ ಅಧಿಕಾರಕ್ಕೆ ಬರುವ ಸರ್ಕಾರವು ಆಟೊ ವಲಯಕ್ಕೆ ಸಂಬಂಧಿಸಿದಂತೆ ಹಾಲಿ ಇರುವ ನೀತಿಗಳನ್ನು ಮುಂದುವರಿಸಬೇಕಿದೆ. ತಯಾರಿಕಾ ಮತ್ತು ಮೂಲ ಸೌಕರ್ಯಕ್ಕೆ ಒತ್ತು ನೀಡಿದರೆ ಈ ವಲಯದ ಬೆಳವಣಿಗೆಗೆ ಸಹಕಾರಿಯಾಗಲಿದೆ’ ಎಂದು ಎಸ್‌ಐಎಎಂ ಅಧ್ಯಕ್ಷ ವಿನೋದ್ ಅಗರ್ವಾಲ್‌ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.