ನವದೆಹಲಿ (ಪಿಟಿಐ): ದೇಶದಲ್ಲಿ ಪ್ರಯಾಣಿಕ ವಾಹನ ಮಾರಾಟವು 2022ರಲ್ಲಿ ದಾಖಲೆಯ 37.93 ಲಕ್ಷಕ್ಕೆ ತಲುಪಿದೆ. 2021ರಲ್ಲಿ 30.82 ಲಕ್ಷ ವಾಹನಗಳ ಮಾರಾಟ ಆಗಿತ್ತು. ಇದಕ್ಕೆ ಹೋಲಿಸಿದರೆ 2022ರಲ್ಲಿ ಮಾರಾಟವು ಶೇಕಡ 23ರಷ್ಟು ಹೆಚ್ಚಾಗಿದೆ ಎಂದು ಮಾರುತಿ ಸುಜುಕಿ ಇಂಡಿಯಾದ ಹಿರಿಯ ಕಾರ್ಯನಿರ್ವಾಹಕ ಅಧಿಕಾರಿ ಶಶಾಂಕ್ ಶ್ರೀವಾಸ್ತವ ತಿಳಿಸಿದ್ದಾರೆ.
2018ರಲ್ಲಿ ಪ್ರಯಾಣಿಕ ವಾಹನಗಳ ಮಾರಾಟವು ದಾಖಲೆಯ 33.3 ಲಕ್ಷಕ್ಕೆ ತಲುಪಿತ್ತು ಎಂದು ತಿಳಿಸಿದ್ದಾರೆ.
ಎಸ್‌ಯುವಿಗೆ ಬೇಡಿಕೆ: ಎಸ್‌ಯುವಿಗಳಿಗೆ ಬೇಡಿಕೆ ಹೆಚ್ಚಾಗಲಿದೆ. ಪ್ರಯಾಣಿಕ ವಾಹನಗಳಲ್ಲಿ ಎಸ್‌ಯುವಿ ಪಾಲು ಸದ್ಯ ಶೇ 42.3ರಷ್ಟು ಇದೆ. ಬೆಲೆಯ ದೃಷ್ಟಿಯಿಂದ ನೋಡುವುದಾದರೆ ಮಾರಾಟ ಆಗಿರುವ ಶೇ 40ರಷ್ಟು ವಾಹನಗಳು ₹ 10 ಲಕ್ಷ ಅಥವಾ ಅದಕ್ಕಿಂತ ಹೆಚ್ಚಿನ ಬೆಲೆಯವು ಎಂದು ಅವರು ಹೇಳಿದ್ದಾರೆ.
ಮಾರುತಿ ಸುಜುಕಿ ಇಂಡಿಯಾ 2022ನೇ ಕ್ಯಾಲೆಂಡರ್ ವರ್ಷದಲ್ಲಿ 15.76 ಲಕ್ಷ ವಾಹನಗಳನ್ನು ಮಾರಾಟ ಮಾಡಿದೆ. 2021ರಲ್ಲಿ 13.64 ಲಕ್ಷ ವಾಹನಗಳನ್ನು ಮಾರಾಟ ಮಾಡಿತ್ತು. ಇದಕ್ಕೆ ಹೋಲಿಸಿದರೆ ಶೇ 16ರಷ್ಟು ಹೆಚ್ಚಾಗಿದೆ.
ಹುಂಡೈ ಮೋಟರ್‌ನ ಮಾರಾಟ 5.05 ಲಕ್ಷದಿಂದ 5.52 ಲಕ್ಷಕ್ಕೆ (ಶೇ 9.4) ಏರಿಕೆ ಆಗಿದೆ. ಈವರೆಗಿನ ಅತಿ ಹೆಚ್ಚಿನ ಮಾರಾಟ ಇದಾಗಿದೆ ಎಂದು ಕಂಪನಿ ತಿಳಿಸಿದೆ. ಟಾಟಾ ಮೋಟರ್ಸ್ 5.26 ಲಕ್ಷ ವಾಹನ ಮಾರಾಟ ಮಾಡಿದೆ. ಟೊಯೋಟ ಕಿರ್ಲೋಸ್ಕರ್ ಮಾರಾಟ 1.30 ಲಕ್ಷದಿಂದ 1.60 ಲಕ್ಷಕ್ಕೆ ಏರಿಕೆ ಕಂಡಿದೆ. ಕಳೆದ 10 ವರ್ಷಗಳ ಅತಿ ಹೆಚ್ಚಿನ ಮಾರಾಟ ಇದಾಗಿದೆ ಎಂದು ಕಂಪನಿ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.