ADVERTISEMENT

EV: ವಿದ್ಯುತ್‌ ಚಾಲಿತ ವಾಹನಗಳು ವರವೋ? ಶಾಪವೋ?

ಇ.ಎಸ್.ಸುಧೀಂದ್ರ ಪ್ರಸಾದ್
Published 11 ಸೆಪ್ಟೆಂಬರ್ 2024, 0:04 IST
Last Updated 11 ಸೆಪ್ಟೆಂಬರ್ 2024, 0:04 IST
   

ಜಗತ್ತಿನಲ್ಲಿ ಒಟ್ಟು ಉತ್ಪಾದನೆಯಾಗುತ್ತಿರುವ ಇಂಗಾಲದ ಡೈಆಕ್ಸೈಡ್‌ ಪ್ರಮಾಣದಲ್ಲಿ ಶೇ. 75ರಷ್ಟು ಪ್ರಮಾಣ ಏಷ್ಯಾದ ಆರ್ಥಿಕ ಪ್ರದೇಶಗಳ ರಸ್ತೆ ಸಾರಿಗೆಯ ಕೊಡುಗೆಯಾಗಿದೆ. ಏಷ್ಯಾದಿಂದ ಹೊರಸೂಸುವ ಒಟ್ಟು 79.5 ಕೋಟಿ ಟನ್‌ ಇಂಗಾಲದ ಡೈಆಕ್ಸೈಡ್‌ನಲ್ಲಿ ಭಾರತದ ಪ್ರಮಾಣ 29.1 ಕೋಟಿ ಟನ್. ಇದಕ್ಕೆ ಪೂರಕವಾಗಿ ವಿದ್ಯುತ್ ಚಾಲಿತ ವಾಹನಗಳ ಮಾರುಕಟ್ಟೆಯೂ ವಿಸ್ತರಿಸುತ್ತಿದೆ. ಇದಕ್ಕೆ ನೀಡುತ್ತಿರುವ ಕಾರಣ, ಇಂಧನದ ಬೆಲೆಯಲ್ಲಿ ಭಾರಿ ಏರಿಕೆ ಮತ್ತು ಸಾಂಪ್ರದಾಯಿಕ ದಹನಕಾರಿ ಎಂಜಿನ್‌ಗಳು ಹಸಿರುಮನೆ ಪರಿಣಾಮಕ್ಕೆ ದೊಡ್ಡ ಕೊಡುಗೆ ನೀಡುತ್ತಿವೆ ಎಂಬ ವಾದವೂ ಒಳಗೊಂಡಿದೆ. ಬ್ಯಾಟರಿ ಉತ್ಪಾದನೆಯು ಪರಿಸರದ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತಿರುವುದು ಈಗ ಬಹುಚರ್ಚಿತ ವಿಷಯವಾಗಿದೆ. ಹಾಗಿದ್ದರೆ EVಗಳು ಪರಿಸರಕ್ಕೆ ಪೂರಕವೇ?

ವಿದ್ಯುತ್ ಚಾಲಿತ ವಾಹನಗಳಲ್ಲಿ ಹಲವು ಬಗೆ. ಬ್ಯಾಟರಿ ವಾಹನಗಳು (ಇವಿ) , ಹೈಬ್ರೀಡ್ ಎಲೆಕ್ಟ್ರಿಕ್ ಹಾಗೂ ಇಂಧನಕೋಶ ಎಲೆಕ್ಟ್ರಿಕ್ ವಾಹನ (ಬಿಇವಿ) ಎಂಬುವು ಇವೆ. ಇಂಥ ವಾಹನಗಳಿಗೆ ಇತ್ತೀಚೆಗೆ ಭಾರತದಲ್ಲಿ ಭಾರೀ ಬೇಡಿಕೆ ಉಂಟಾಗಿದೆ.  

ಪರಿಸರ ಮಾಲಿನ್ಯವನ್ನು ಕಡಿಮೆ ಮಾಡಬೇಕು ಎಂಬುದು ನಿರ್ವಿವಾದ. ಆದರೆ ಬ್ಯಾಟರಿ ಬಳಕೆಯು ಸುಸ್ಥಿರ ಎಂಬ ಅಂಶ ಮಾತ್ರ ಚರ್ಚಿತ ವಿಷಯ. ಒಂದು ವಿದ್ಯುತ್ ಚಾಲಿತ ವಾಹನವನ್ನು ಪರಿಗಣಿಸಿದರೆ ಅದರಲ್ಲಿ ಎರಡು ರೀತಿಯ ಪರಿಸರಕ್ಕೆ ಹೊರೆಯಾಗುವ ಪ್ರಮುಖ ಅಂಶಗಳಿವೆ. ಇಂಧನ ದಹಿಸುವ ಎಂಜಿನ್‌ಗೂ ಹಾಗೂ ವಿದ್ಯುತ್ ಚಾಲಿತ ವಾಹನಗಳಿಗೂ ಹೋಲಿಸುವುದೇ ಆದರೆ, ಅದರ ತಯಾರಿಕೆಯನ್ನು ಗಮನಿಸಿ, ಅಂಕಿ–ಅಂಶಗಳನ್ನು ಪರಿಗಣಿಸಬೇಕೇ ಹೊರತು, ಅಂತಿಮ ಉತ್ಪನ್ನವನ್ನಲ್ಲ. ಇದನ್ನು ಇನ್ನೂ ಸರಳವಾಗಿ ಹೇಳಬೇಕೆಂದರೆ, ವಾಹನದ ಚಾಸೀಸ್ ನಿರ್ಮಾಣವಾಗುವುದು ಅಲುಮಿನಿಯಂ ಹಾಗೂ ಸ್ಟೀಲ್‌ ಬಳಕೆಯಿಂದ. ಇದು ಕಂಬಶ್ಚನ್ ಹಾಗೂ ಬ್ಯಾಟರಿ ಚಾಲಿತ ವಾಹನ ಎರಡಕ್ಕೂ ಸಾಮಾನ್ಯ. ಆದರೆ, ಬ್ಯಾಟರಿ ತಯಾರಿಕೆಯಿಂದ ಪರಿಸರದ ಮೇಲಾಗುವ ಬದಲಾವಣೆ ಇವೆಲ್ಲದಕ್ಕೂ ಮೀರಿದ್ದು.

ADVERTISEMENT

ಪರಿಸರದ ಮೇಲೆ ಪರಿಣಾಮಗಳು

ಬ್ಯಾಟರಿಗಳನ್ನು ಲೀಥಿಯಂ, ಕೊಬಾಲ್ಟ್ ಹಾಗೂ ನಿಕ್ಕಲ್‌ನಿಂದ ತಯಾರಿಸಲಾಗುತ್ತದೆ. ಆದರೆ ಭಾರತದಲ್ಲಿ ಲೀಥಿಯಂ ನಿಕ್ಷೇಪಗಳು ವಿರಳಾತಿವಿರಳ. ಹೀಗಾಗಿ ಲೀಥಿಯಂ ಅಯಾನ್ ಅನ್ನು ಚೀನಾದಿಂದ ಆಮದು ಮಾಡಿಕೊಳ್ಳಲಾಗುತ್ತಿದೆ. ಈ ರಾಸಾಯನಿಕ ಗಣಿಗಾರಿಕೆಯೂ ದುಬಾರಿ. ಪರಿಸರಕ್ಕೆ ಮಾರಕವೂ ಹೌದು. ಅಷ್ಟು ಮಾತ್ರವಲ್ಲ, ಇವುಗಳ ಗಣಿಗಾರಿಕೆ ಸಂದರ್ಭದಲ್ಲೂ ಹಾನಿಕಾರಕ ರಾಸಾಯನಿಕಗಳು ವಾತಾವರಣಕ್ಕೆ ಬಿಡುಗಡೆಗೊಳ್ಳುತ್ತವೆ. ಇದಕ್ಕೆ ಉದಾಹರಣೆ ಎಂಬಂತೆ, 2016ರಲ್ಲಿ ಟಿಬೆಟ್‌ನ ಲಿಖ್ವಿ ನದಿಯಲ್ಲಿ ಸಾವಿರಾರು ಮೀನುಗಳು ಸತ್ತು ತೇಲುತ್ತಿದ್ದವು. ಆಗ ಅಲ್ಲಿ ಬೃಹತ್ ಪ್ರತಿಭಟನೆ ನಡೆಯಿತು. ಪ್ರತಿಭಟನಾಕಾರರು ಗಾಂಝಿಝೂ ರೊಂಗಾ ಲೀಥಿಯಂ ಗಣಿಗಾರಿಕಾ ಕಂಪನಿಯ ಅವೈಜ್ಞಾನಿಕ ಗಣಿಗಾರಿಕೆ ವಿರುದ್ಧ ಸಿಡಿದೆದ್ದಿರು. ಈ ಗಣಿಕೆಗಾರಿಕೆಯಿಂದ ಹಾನಿಕಾರಕ ರಾಸಾನಿಕ ಬಿಡುಡಗೆಯಾಗುತ್ತಿದೆ, ಸುತ್ತಲಿನ ಪರಿಸರವೂ ನಾಶವಾಗುತ್ತಿದೆ ಎಂದು ಆರೋಪಿಸಿದ್ದರು. ಈ ಗಣಿಕೆಗಾರಿಕೆಗೆ ಲಿಖ್ವಿ ನದಿ ಮಾತ್ರವಲ್ಲ, ಜಿನ್ ನದಿಯೂ ಮಲಿನಗೊಂಡಿತ್ತು. 

ಬ್ಯಾಟರಿಗಳ ಉತ್ಪಾದನೆಗೂ ಹೆಚ್ಚಿನ ವಿದ್ಯುತ್ ಬೇಕು. ಹೀಗಾಗಿ ವಿದ್ಯುತ್ ಚಾಲಿತ ವಾಹನಗಳಿಂದ ಇಂಗಾಲ ಹೊರಸೂಸುವಿಕೆ ಪ್ರಕ್ರಿಯೆ ಹೆಚ್ಚೇ ಹೊರತು, ಕಡಿಮೆಯಂತೂ ಅಲ್ಲ. ‘ಇವಿ’ ಹಾಗೂ ‘ಕಂಬಶ್ಚನ್ ಎಂಜಿನ್‌’ – ಎರಡನ್ನೂ ಹೋಲಿಸಿದರೆ, ವಾತಾವರಣಕ್ಕೆ ಇಂಗಾಲಯದ ಹೊರಸೂಸುವಿಕೆಯು, ‘ಇವಿ’ ವಾಹನಗಳ ತಯಾರಿಕೆಯಿಂದಲೇ ಹೆಚ್ಚು. ಹಾಗೆಯೇ ಒಂದು ಟನ್‌ ಲೀಥಿಯಂ (100 ಕಾರುಗಳಿಗೆ ಅಗತ್ಯ) ಉತ್ಪಾದಿಸಲು ಎರಡು ದಶಲಕ್ಷ ಟನ್‌ ನೀರು ಬೇಕು. ಹೀಗಾಗಿ ಇವಿ ಕಾರುಗಳ ಬ್ಯಾಟರಿ ತಯಾರಿಕೆ ಪ್ರಕ್ರಿಯೆಗೆ ಅತಿ ಹೆಚ್ಚು ನೀರು ಬೇಕು. ಇದರಿಂದಾಗಿಯೇ ದಕ್ಷಿಣ ಅಮೆರಿಕಾದ ಲೀಥಿಯಂ ತ್ರಿಭುಜ ಎಂದೇ ಕರೆಯಲಾಗುವ ಚಿಲಿ, ಅರ್ಜೆಂಟಿನಾ ಹಾಗೂ ಬೊಲಿವಿಯಾದಲ್ಲಿ ಅತಿ ಹೆಚ್ಚು ಲೀಥಿಯಂ ಸಿಗುತ್ತಿದೆಯಾದರೂ, ಹೆಚ್ಚಿನ ಪ್ರಮಾಣದ ನೀರೂ ಖರ್ಚಾಗುತ್ತಿದೆ. ಇದರಿಂದ ಅಂತರ್ಜಲ ಮಟ್ಟ ಕುಸಿಯುತ್ತಿದ್ದು, ಅಲ್ಲಿನ ಜನ ಈ ಲೀಥಿಯಂ ಗಣಿಗಾರಿಕೆ ವಿರುದ್ಧ ತೀವ್ರವಾಗಿ ಧ್ವನಿ ಎತ್ತಲಾರಂಭಿಸಿದ್ದಾರೆ. ನಿಕ್ಕಲ್ ಹಾಗೂ ಕೊಬಾಲ್ಟ್‌ಗಳನ್ನು ಪಡೆಯಲೂ ಇಷ್ಟೇ ಪ್ರಮಾಣದಲ್ಲಿ ಪರಿಸರ ನಾಶವಾಗುತ್ತದೆ.

ಈ ನಾಶ ಕೇವಲ ‘ಇವಿ’ಗಳಿಂದಲೇ ಎಂದೇನೂ ಇಲ್ಲ, ಈ ರಾಸಾಯನಿಕಗಳನ್ನು ಬಳಸುವ ಯಾವುದೇ ಬ್ಯಾಟರಿ ತಯಾರಿಕೆಯಲ್ಲೂ ಪರಿಸರ ನಾಶ ಇದ್ದೇ ಇದೆ. ಮರಬಳಕೆಯ ಬ್ಯಾಟರಿಗಳು ಒಂದಷ್ಟು ರಿಯಾಯಿತಿ ನೀಡುತ್ತವೆಯಾದರೂ, ಅವುಗಳೂ ಪರಿಸರಕ್ಕೆ ಮಾರಕ ಎಂಬ ಅಂಶವನ್ನು ನಾವು ಪರಿಗಣಿಸಲೇಬೇಕು. ಆದರೆ ಇಡೀ ಜಗತ್ತಿನಲ್ಲಿ ಹೀಗೆ ಮರುಬಳಕೆಯಾಗುತ್ತಿರುವ ಬ್ಯಾಟರಿಗಳ ಪ್ರಮಾಣ ಶೇ. 5 ಮಾತ್ರ. ಇಷ್ಟು ಸಣ್ಣ ಪ್ರಮಾಣಕ್ಕೆ ಕಾರಣ, ಈ ಪ್ರಕ್ರಿಯೆ ದುಬಾರಿ. ಹೀಗಾಗಿ ಬಹಳಷ್ಟು ಬ್ಯಾಟರಿಗಳನ್ನು ಬಿಸಾಡಲಾಗುತ್ತಿದೆ. ಅದು ಪ್ರಕೃತಿಗೆ ಇನ್ನಷ್ಟು ಮಾರಕವಾಗಿ ಪರಿಣಮಿಸಿದೆ.

ಬ್ಯಾಟರಿಗಳ ತಯಾರಿಕೆಯಿಂದಷ್ಟೆ ಅಲ್ಲ, ಬ್ಯಾಟರಿಗಳ ಬಳಕೆಯೂ ಪರಿಸರದ ವಿನಾಶಕ್ಕೆ ಕಾರಣವಾಗುತ್ತದೆ. ಅದರಲ್ಲೂ ಭಾರತದಂತಹ ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳಲ್ಲಿ ಮುಖ್ಯ ಇಂಧನಮೂಲವೇ ವಿದ್ಯುಚ್ಛಕ್ತಿ. ಹೀಗೆ ಬ್ಯಾಟರಿ ಚಾಲಿತ ವಾಹನಗಳನ್ನು ಚಾರ್ಜ್‌ ಮಾಡುವುದೂ ಪರಿಸರಕ್ಕೆ ಪರೋಕ್ಷವಾಗಿ ಮಾರಕವಾಗಿದೆ. 2021ರಲ್ಲಿ ಇಂಧನ ಇಲಾಖೆಯ ಮಾಹಿತಿ ಅನ್ವಯ, ಭಾರತವು ಉಷ್ಣ ವಿದ್ಯುತ್ ಘಟಕಗಳ ಮೂಲಕ ಪಡೆಯುತ್ತಿರುವ ವಿದ್ಯುತ್ ಪ್ರಮಾಣ ಶೇ 61ರಷ್ಟು. ಇಲ್ಲಿ ಮುಖ್ಯವಾಗಿ ದಹನಕ್ರಿಯೆಗೆ ಬಳಸುವುದು ಕಲ್ಲಿದ್ದಲ್ಲು. ಇದರಿಂದ ಆಗುವ ಪರಿಸರ ಮಾಲಿನ್ಯದ ಪ್ರಮಾಣವೂ ಹೆಚ್ಚು. ಇದರೊಂದಿಗೆ ಕಲ್ಲಿದ್ದಲ್ಲು ಸಾಗಾಣಿಕೆಗೆ ಬಳಸುವ ಡೀಸೆಲ್‌ ಕೂಡ ಮಾಲಿನ್ಯಕ್ಕೆ ಮತ್ತೊಂದು ಕೊಡುಗೆ. ಸದ್ಯ ಭಾರತವು ಕಲ್ಲಿದ್ದಲ್ಲು ರಫ್ತು ಮಾಡುವ ಜಗತ್ತಿನ 2ನೇ ಅತಿ ದೊಡ್ಡ ರಾಷ್ಟ್ರ. ಕಲ್ಲಿದ್ದಲ್ಲು ಗಣಿಕಗಾರಿಕೆಯಿಂದ ಹೆಚ್ಚಿನ ಇಂಗಾಲದ ಡೈಆಕ್ಸೈಡ್ ಹೊರಸೂಸುವಿಕೆ, ಅರಣ್ಯನಾಶ, ಜಲಚರಗಳ ನಾಶ ಇಂಥ ಇನ್ನೂ ಅನೇಕ ಪರಿಸರಕ್ಕೆ ಮಾರಕವಾದ ಅಂಶಗಳು ಸೇರಿವೆ.

ಭಾರತದಲ್ಲಿ ‘ಇವಿ’ಗಳ ಉತ್ತೇಜನ ಎರಡು ರೀತಿಯಲ್ಲಿ ನಡೆಯುತ್ತಿದೆ. ಗ್ರಾಹಕರ ಬೇಡಿಕೆಯನ್ನು ಈಡೇರಿಸುವುದು ಹಾಗೂ ತಯಾರಿಕೆಯ ಸಾಮರ್ಥ್ಯವನ್ನು ಹೆಚ್ಚಿಸುವುದು. ಇದಕ್ಕಾಗಿ 2020ರಲ್ಲಿ ಭಾರತ ಸರ್ಕಾರವು ನ್ಯಾಷನಲ್ ಎಲೆಕ್ಟ್ರಿಕ್ ಮೊಬಿಲಿಟಿ ಮಿಷನ್‌ ಯೋಜನೆಯನ್ನು ಜಾರಿಗೆ ತಂದಿತು. ಆ ಮೂಲಕ ಬೆಲೆ ತಗ್ಗಿಸುವ ಮೂಲಕ ಬ್ಯಾಟರಿ ಚಾಲಿತ ವಾಹನಗಳನ್ನು ಹೊಂದುವವರ ಸಂಖ್ಯೆ ಹೆಚ್ಚಿಸುವುದು, ತೆರಿಗೆ ತಗ್ಗಿಸುವುದು ಹಾಗೂ ಚಾರ್ಜಿಂಗ್ ಕೇಂದ್ರಗಳನ್ನು ಗಣನೀಯವಾಗಿ ಹೆಚ್ಚಳ ಮಾಡುವುದು ಸೇರಿತ್ತು. ಇದರೊಂದಿಗೆ ಈ ಕ್ಷೇತ್ರದಲ್ಲಿ ಸಂಶೋಧನೆ ಕೈಗೊಳ್ಳುವ ಹಾಗೂ ಸ್ಥಳೀಯ ತಯಾರಕರನ್ನು ಉತ್ತೇಜಿಸುವ ಉದ್ದೇಶವೂ ಹೊಂದಲಾಗಿತ್ತು. ಇದಕ್ಕಾಗಿ ಸ್ಥಳೀಯ ತಯಾರಕರಿಗೆ ತೆರಿಗೆ ರಿಯಾಯಿತಿಯ ಕೊಡುಗೆಯನ್ನೂ ನೀಡಲಾಗಿತ್ತು. ಆದರೆ ಇವೆಲ್ಲವೂ ಲೀಥಿಯಂ ಲಭ್ಯತೆಯನ್ನು ಅವಲಂಬಿಸಿದೆ ಎಂಬುದು ವಾಸ್ತವ.

ಬ್ಯಾಟರಿ ಚಾಲಿತ ವಾಹನಗಳು ಪರಿಸರ ಸ್ನೇಹಿ ಎಂಬುದು ನಿಜವಾದರೂ ಅವುಗಳ ತಯಾರಿಕೆಯಲ್ಲಿ ಅದಕ್ಕಿಂತಲೂ ಹೆಚ್ಚಿನ ಪರಿಸರ ನಾಶ ಆಗುತ್ತಿದೆ ಎಂಬುದರ ಬಗ್ಗೆಯೂ ಚರ್ಚೆಗಳು ನಡೆಯುತ್ತಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.