ADVERTISEMENT

ಯುರೋಪ್‌ಗೆ ಇ.ವಿ ಬೈಕ್‌ಗಳ ರಫ್ತು

​ಪ್ರಜಾವಾಣಿ ವಾರ್ತೆ
Published 20 ಸೆಪ್ಟೆಂಬರ್ 2024, 15:31 IST
Last Updated 20 ಸೆಪ್ಟೆಂಬರ್ 2024, 15:31 IST
ವಿದ್ಯುತ್ ಚಾಲಿತ ಬೈಕ್‌ನೊಂದಿಗೆ ಸಚಿವ ಎಂ.ಬಿ. ಪಾಟೀಲ
ವಿದ್ಯುತ್ ಚಾಲಿತ ಬೈಕ್‌ನೊಂದಿಗೆ ಸಚಿವ ಎಂ.ಬಿ. ಪಾಟೀಲ   

ಬೆಂಗಳೂರು: ಕನ್ನಡಿಗ ಉದ್ಯಮಿಗಳೇ ಸೇರಿಕೊಂಡು ಸ್ಥಾಪಿಸಿರುವ ಅಲ್ಟ್ರಾವಯೋಲೆಟ್‌ ಕಂಪನಿ ತಯಾರಿಸಿರುವ ವಿದ್ಯುತ್‌ ಚಾಲಿತ ಬೈಕ್‌ಗಳನ್ನು ಯುರೋಪಿನ ಹಲವು ರಾಷ್ಟ್ರಗಳಿಗೆ ರಫ್ತು ಮಾಡುವ ಕಾರ್ಯಕ್ರಮಕ್ಕೆ ಇದೇ 24ರಂದು ಚಾಲನೆ ನೀಡಲಾಗುವುದು ಎಂದು ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ ಹೇಳಿದರು.

ಈ ಕುರಿತು ಮಾಹಿತಿ ನೀಡಿರುವ ಅವರು, ‘ನಮ್ಮವರ ಈ ಸಾಹಸವನ್ನು ಉತ್ತೇಜಿಸುವುದು ನಮ್ಮ ಕರ್ತವ್ಯವಾಗಿದೆ’ ಎಂದರು.

ಜರ್ಮನಿ, ಇಟಲಿ, ಟರ್ಕಿ ಮತ್ತು ಸ್ಪೇನ್‌ಗೆ ಭಾರತದಿಂದ ಇದೇ ಮೊದಲ ಬಾರಿಗೆ ಎಫ್‌77–ಸ್ಪೋರ್ಟ್ಸ್‌ ಸ್ತರದ ಇ.ವಿ ಬೈಕ್‌ಗಳನ್ನು ರಫ್ತು ಮಾಡಲಾಗುತ್ತಿದೆ. ಈ ವಾಹನಗಳನ್ನು ಜಿಗಣಿಯಲ್ಲಿರುವ ಉತ್ಪಾದನಾ ಘಟಕದಲ್ಲಿ ತಯಾರಿಸಲಾಗಿದೆ ಎಂದು ಹೇಳಿದರು.

ADVERTISEMENT

ಈ ಬೈಕ್‌ಗಳ ಬೆಲೆ ₹2.99 ಲಕ್ಷವಾಗಿದ್ದು, ಈಗಾಗಲೇ ಸ್ಥಳೀಯವಾಗಿಯೂ ಲಭ್ಯವಿವೆ. ಒಂದು ಸಲ ಚಾರ್ಜ್‌ ಮಾಡಿದರೆ 323 ಕಿ.ಮೀ ಚಲಾಯಿಸಬಹುದು. ಜತೆಗೆ, ಯುಎನ್‌ 38.3 ದರ್ಜೆಯ ಉತ್ಕೃಷ್ಟ ಬ್ಯಾಟರಿ ಅಳವಡಿಸಲಾಗಿದೆ. ಇದು ಎ1 ಕ್ಯಾಟಗರಿಗೆ ಸೇರಿದೆ. ಈ ಬೈಕ್‌ಗಳ ರಫ್ತು ವಹಿವಾಟಿನಿಂದ ರಾಜ್ಯ ಮತ್ತು ದೇಶದ ಆರ್ಥಿಕತೆ ಬಲ ಬರಲಿದೆ ಎಂದು ವಿವರಿಸಿದರು.

ಅಲ್ಟ್ರಾವಯೊಲೆಟ್‌ ಕಂಪನಿಯ ಪರವಾಗಿ ಕಂಪನಿಯ ಸಹ ಸಂಸ್ಥಾಪಕ ಮತ್ತು ನಿರ್ದೇಶಕ ನೀರಜ್ ರಾಜಮೋಹನ್‌, ಸಹಾಯಕ ಉಪಾಧ್ಯಕ್ಷ ಧೀರಜ್‌ ಶೆಟ್ಟಿ ಅವರು ಸಚಿವರಿಗೆ ಇ.ವಿ ಮೋಟಾರ್‌ ಸೈಕಲ್‌ ವಿಶೇಷತೆ ಕುರಿತು ವಿವರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.