ನವದೆಹಲಿ: ‘2030ರ ವೇಳೆಗೆ ದೇಶದ ವಿದ್ಯುತ್‌ಚಾಲಿತ ವಾಹನಗಳ ಮಾರುಕಟ್ಟೆಯಲ್ಲಿ 5 ಕೋಟಿ ಉದ್ಯೋಗಗಳು ಸೃಷ್ಟಿಯಾಗಲಿವೆ. ವಾರ್ಷಿಕವಾಗಿ ಇ.ವಿ ವಾಹನಗಳ ಮಾರಾಟವು ಒಂದು ಕೋಟಿಗೆ ತಲುಪಲಿದೆ’ ಎಂದು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ.
ಮಂಗಳವಾರ ನಡೆದ ಭಾರತೀಯ ವಾಹನ ತಯಾರಕರ ಒಕ್ಕೂಟದ (ಎಸ್‌ಐಎಎಂ) ವಾರ್ಷಿಕ ಸಮಾವೇಶದಲ್ಲಿ ಮಾತನಾಡಿದ ಅವರು, ‘ಇದೇ ವೇಳೆಗೆ ಇ.ವಿ ವಾಹನಗಳ ತಯಾರಿಕೆಯಲ್ಲಿ ಭಾರತವು ಜಾಗತಿಕ ಮಟ್ಟದಲ್ಲಿ ಅಗ್ರಸ್ಥಾನಕ್ಕೇರಲಿದೆ’ ಎಂದರು.
ಮುಂದಿನ ಆರು ವರ್ಷದಲ್ಲಿ ವಿದ್ಯುತ್‌ಚಾಲಿತ ವಾಹನಗಳ ಮಾರುಕಟ್ಟೆ ಮೌಲ್ಯವು ₹20 ಲಕ್ಷ ಕೋಟಿಗೆ ಮುಟ್ಟಲಿದೆ. ಇ.ವಿ ಫೈನಾನ್ಸ್ ಮಾರುಕಟ್ಟೆಯ ಮೌಲ್ಯವು ₹4 ಲಕ್ಷ ಕೋಟಿ ತಲುಪಿದೆ ಎಂದು ಹೇಳಿದರು.
ಲಿಥಿಯಂ–ಐಯಾನ್ ಬ್ಯಾಟರಿಗಳ ವೆಚ್ಚವು ಕಡಿಮೆಯಾಗಲಿದೆ. ಇದು ವಿದ್ಯುತ್ ಚಾಲಿತ ವಾಹನಗಳ ಮಾರುಕಟ್ಟೆಯ ವಿಸ್ತರಣೆಗೆ ನೆರವಾಗಲಿದೆ ಎಂದರು.
ಪ್ರಸ್ತುತ ದೇಶದಲ್ಲಿ 30 ಲಕ್ಷಕ್ಕೂ ಹೆಚ್ಚು ವಿದ್ಯುತ್‌ಚಾಲಿತ ವಾಹನಗಳು ನೋಂದಣಿಯಾಗಿವೆ. ಇ.ವಿ ವಾಹನಗಳ ಮಾರಾಟದಲ್ಲಿ ದ್ವಿಚಕ್ರ ವಾಹನಗಳ ಪಾಲು ಶೇ 56ರಷ್ಟಿದೆ ಎಂದು ತಿಳಿಸಿದರು.
2023–24ನೇ ಸಾಲಿನಲ್ಲಿ ಇ.ವಿ ವಾಹನಗಳ ಮಾರಾಟದಲ್ಲಿ ಶೇ 45ರಷ್ಟು ಏರಿಕೆಯಾಗಿದೆ. ದೇಶದಲ್ಲಿ 400 ನವೋದ್ಯಮಗಳು ವಿದ್ಯುತ್‌ಚಾಲಿತ ದ್ವಿಚಕ್ರ ವಾಹನಗಳ ತಯಾರಿಕೆಯಲ್ಲಿ ತೊಡಗಿವೆ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.