ನವದೆಹಲಿ: ಈ ಬಾರಿಯ ಧನ್‌ತೇರಸ್‌ನಲ್ಲಿ ಕಾರು ಮತ್ತು ದ್ವಿಚಕ್ರ ವಾಹನಗಳು ದಾಖಲೆ ಪ್ರಮಾಣದಲ್ಲಿ ಮಾರಾಟ ಆಗುವ ನಿರೀಕ್ಷೆಯನ್ನು ವಾಹನ ವಿತರಕರು ಹೊಂದಿದ್ದಾರೆ.
ಕಾರು, ದ್ವಿಚಕ್ರ, ಟ್ರ್ಯಾಕ್ಟರ್, ವಾಣಿಜ್ಯ ವಾಹನಗಳನ್ನು ಒಳಗೊಂಡು ಎಲ್ಲಾ ವಿಭಾಗಗಳಲ್ಲಿಯೂ ಖರೀದಿ ಉತ್ತಮವಾಗಿರಲಿದೆ ಎನ್ನುವುದು ವಿತರಕರ ನಿರೀಕ್ಷೆಯಾಗಿದೆ ಎಂದು ವಾಹನ ವಿತರಕರ ಸಂಘಟನೆಗಳ ಒಕ್ಕೂಟ (ಎಫ್‌ಎಡಿಎ) ಹೇಳಿದೆ.
ಈ ಬಾರಿಯ ಹಬ್ಬದ ಋತುವಿಗೆ ಹೆಚ್ಚಿನ ಸಂಖ್ಯೆಯಲ್ಲಿ ವಾಹನಗಳ ಬುಕಿಂಗ್ ಆಗಿದೆ. ಬಹುತೇಕ ಗ್ರಾಹಕರು ಧನ್‌ತೇರಸ್ ದಿನದಂದು ವಾಹನ ನೀಡುವಂತೆ ವಿತರಕರನ್ನು ಕೇಳಿದ್ದಾರೆ ಎಂದು ಒಕ್ಕೂಟದ ಅಧ್ಯಕ್ಷ ಮನಿಶ್ ರಾಜ್ ಸಿಂಘಾನಿಯಾ ತಿಳಿಸಿದ್ದಾರೆ.
ಪ್ರಯಾಣಿಕ ವಾಹನದ ರಿಟೇಲ್ ಮಾರಾಟವು ದಾಖಲೆ ಪ್ರಮಾಣದಲ್ಲಿ ಇರುವ ನಿರೀಕ್ಷೆ ಇದೆ. ದ್ವಿಚಕ್ರ ವಾಹನ ಮಾರಾಟವು ಕೋವಿಡ್‌ಗೂ ಮುಂಚಿನ ಮಟ್ಟವನ್ನು ತಲುಪುವ ಸಾಧ್ಯತೆ ಇದೆ ಎಂದು ಸಿಂಘಾನಿಯಾ ಹೇಳಿದ್ದಾರೆ.
ವಾಣಿಜ್ಯ, ತ್ರಿಚಕ್ರ ಮತ್ತು ಟ್ರ್ಯಾಕ್ಟರ್ ಮಾರಾಟವು ಕಳೆದ ವರ್ಷಕ್ಕಿಂತಲೂ ಉತ್ತಮವಾಗಿರಲಿದೆ.
ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷದ ನವರಾತ್ರಿಯಿಂದ ದೀಪಾವಳಿಯವರೆಗಿನ ಅವಧಿಯಲ್ಲಿ ರಿಟೇಲ್ ಮಾರಾಟವು ಕನಿಷ್ಠ ಶೇ 40ರಷ್ಟು ಹೆಚ್ಚಾಗುವ ನಿರೀಕ್ಷೆಯನ್ನು ವಿತರಕರು ಇಟ್ಟುಕೊಂಡಿದ್ದಾರೆ. ಇದುವರೆಗೆ 7 ಲಕ್ಷದಿಂದ ರಿಂದ 8 ಲಕ್ಷಪ್ರಯಾಣಿಕ ವಾಹನಗಳಿಗೆ ಬುಕಿಂಗ್ ಆಗಿದ್ದು, ಇದರಲ್ಲಿ ಹಬ್ಬದ ಋತುವಿನಲ್ಲಿಯೇ 2 ಲಕ್ಷ ಪ್ರಯಾಣಿಕ ವಾಹನಗಳು ಗ್ರಾಹಕರ ಕೈಸೇರಲಿದೆ ಎಂದು ಸಿಂಘಾನಿಯಾ ಮಾಹಿತಿ ನೀಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.