ನವದೆಹಲಿ: ಕೇಂದ್ರ ಸರ್ಕಾರವು ಹೊಸ ಎಲೆಕ್ಟ್ರಿಕ್ ವಾಹನ ನೀತಿಗೆ ಅನುಮೋದನೆ ನೀಡಿದೆ.
ದೇಶದಲ್ಲಿ ಕನಿಷ್ಠ ₹4,150 ಕೋಟಿ (500 ಮಿಲಿಯನ್ ಡಾಲರ್) ಬಂಡವಾಳ ಹೂಡಿಕೆ ಮಾಡಿ ಇ.ವಿ ತಯಾರಿಕಾ ಘಟಕ ಸ್ಥಾಪಿಸುವ ಕಂಪನಿಗಳಿಗೆ ಆಮದು ಸುಂಕದಲ್ಲಿ ರಿಯಾಯಿತಿ ಪ್ರಕಟಿಸಿದೆ. ಇದರಿಂದ ಭಾರತದ ಮಾರುಕಟ್ಟೆ ಪ್ರವೇಶಿಸಲು ಮುಂದಾಗಿರುವ ಉದ್ಯಮಿ ಇಲಾನ್ ಮಸ್ಕ್ ಒಡೆತನದ ಟೆಸ್ಲಾ ಕಂಪನಿಯ ಹಾದಿ ಸುಗಮವಾಗಿದೆ ಎಂದು ಮಾರುಕಟ್ಟೆ ತಜ್ಞರು ವಿಶ್ಲೇಷಿಸಿದ್ದಾರೆ.
ಹೊಸ ನೀತಿ ಅನ್ವಯ ₹29 ಲಕ್ಷ ಹಾಗೂ ಅದಕ್ಕಿಂತ ಹೆಚ್ಚಿನ ಮೌಲ್ಯದ ಕಾರುಗಳ ಆಮದಿಗೆ ಶೇ 15ರಷ್ಟು ಆಮದು ಸುಂಕ ನಿಗದಿಪಡಿಸಲಾಗಿದೆ. ಈ ನಿಯಮವು ಸರ್ಕಾರ ಅನುಮತಿ ನೀಡಿದ ದಿನದಿಂದ ಐದು ವರ್ಷಗಳ ಅವಧಿಗೆ ಒಳಪಟ್ಟಿದೆ. ಪ್ರತಿ ವರ್ಷಕ್ಕೆ 8 ಸಾವಿರ ಕಾರುಗಳ ಆಮದಿಗೆ ಮಾತ್ರ ಸೀಮಿತಗೊಳಿಸಲಾಗಿದೆ.
ಪ್ರಸ್ತುತ ಆಮದು ಮಾಡಿಕೊಳ್ಳುವ ಕಾರುಗಳ ಮೇಲೆ ಕೇಂದ್ರ ಸರ್ಕಾರವು ಶೇ 70ರಿಂದ ಶೇ 100ರಷ್ಟು ಆಮದು ಸುಂಕ ವಿಧಿಸುತ್ತಿದೆ. ₹33 ಲಕ್ಷ ಹಾಗೂ ಅದಕ್ಕಿಂತ ಹೆಚ್ಚಿನ ಮೌಲ್ಯದ ಕಾರುಗಳ ಎಂಜಿನ್ ಗಾತ್ರ, ವಿಮೆ ಹಾಗೂ ಸಾಗಣೆ ಮೇಲೆ ಈ ಸುಂಕ ವಿಧಿಸಲಾಗುತ್ತದೆ.
ಎಲೆಕ್ಟ್ರಿಕ್ ವಾಹನಗಳ ಮಾರುಕಟ್ಟೆಯಲ್ಲಿ ಭಾರತವನ್ನು ಮುಂಚೂಣಿ ಸ್ಥಾನಕ್ಕೇರಿಸಲು ಹಾಗೂ ಜಾಗತಿಕ ಮಟ್ಟದಲ್ಲಿ ಹೆಚ್ಚಿನ ಬಂಡವಾಳ ಆಕರ್ಷಿಸಲು ಹೊಸ ನೀತಿ ಉತ್ತೇಜನ ನೀಡಲಿದೆ ಎಂದು ಕೇಂದ್ರ ಹೇಳಿದೆ.
ಕೇಂದ್ರ ಭಾರೀ ಕೈಗಾರಿಕೆಗಳ ಸಚಿವಾಲಯದಿಂದ ಅನುಮತಿ ಪಡೆದ ಮೂರು ವರ್ಷದೊಳಗೆ ಕಂಪನಿಗಳು ತಯಾರಿಕಾ ಘಟಕ ಸ್ಥಾಪಿಸಬೇಕು. ಮೇಕ್ ಇನ್ ಇಂಡಿಯಾ ನೀತಿಗೆ ಕೇಂದ್ರ ಒತ್ತು ನೀಡುತ್ತಿರುವುದರಿಂದ ಈ ಅವಧಿಯಲ್ಲಿ ದೇಶೀಯ ಮೌಲ್ಯ ವೃದ್ಧಿಗೆ ಒತ್ತು ನೀಡಬೇಕಿದೆ ಎಂದು ಹೇಳಿದೆ.
‘ಆಸಕ್ತ ಕಂಪನಿಗಳು ಸಚಿವಾಲಯದ ಪೋರ್ಟಲ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ’ ಎಂದು ಕೈಗಾರಿಕೆ ಮತ್ತು ಆಂತರಿಕ ವ್ಯಾಪಾರ ಉತ್ತೇಜನ ಇಲಾಖೆಯು (ಡಿಪಿಐಐಟಿ) ಕಾರ್ಯದರ್ಶಿ ರಾಜೇಶ್ ಕುಮಾರ್ ಸಿಂಗ್ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.