ADVERTISEMENT

2030ರ ವೇಳೆಗೆ ನಗರಗಳಲ್ಲಿ ಕಾರುಗಳ ಬಳಕೆ ಇಳಿಕೆ; ಪರಿಸರ ಸ್ನೇಹಿ ಸಂಚಾರವೇ ಆಪ್ತ

ರಾಯಿಟರ್ಸ್
Published 11 ಫೆಬ್ರುವರಿ 2020, 11:15 IST
Last Updated 11 ಫೆಬ್ರುವರಿ 2020, 11:15 IST
ಪರಿಸರ ಸ್ನೇಹಿ ವಾಹನ ಸಂಚಾರ– ಸಾಂದರ್ಭಿಕ ಚಿತ್ರ
ಪರಿಸರ ಸ್ನೇಹಿ ವಾಹನ ಸಂಚಾರ– ಸಾಂದರ್ಭಿಕ ಚಿತ್ರ    
""

ಲಂಡನ್‌: ಜಾಗತಿಕ ತಾಪಮಾನ ಇಳಿಕೆಗೆ ಸುಸ್ಥಿರ ಸಾರಿಗೆಯೂ ಒಂದು ಮಾರ್ಗವಾಗಿ ತೋರಿದೆ. ವಾಯು ಮಾಲಿನ್ಯ ಮತ್ತು ತಾಪಮಾನ ಹೆಚ್ಚಳಕ್ಕೆ ಕಾರಣವಾಗುವ ಪೆಟ್ರೋಲ್‌, ಡೀಸೆಲ್‌ ವಾಹನಗಳ ಬದಲು ವಿದ್ಯುತ್‌ ಚಾಲಿತ ವಾಹನ ಅಥವಾ ಹೈಡ್ರೋಜನ್‌ ಚಾಲಿತ ವಾಹನಗಳ ಬಳಕೆ ಮಾಡುವತ್ತ ಜನರು ಆಸಕ್ತಿ ತೋರುತ್ತಿದ್ದಾರೆ. ನಗರ ಭಾಗಗಳಲ್ಲಿ ಖಾಸಗಿ ಕಾರುಗಳ ಓಡಾಟ ಮುಂದಿನ ದಿನಗಳಲ್ಲಿ ತೀವ್ರ ಇಳಿಕೆಯಾಗಲಿದೆ ಎಂದು ಅಧ್ಯಯನವೊಂದು ಹೇಳಿದೆ.

2030ರ ವೇಳೆಗೆ ಜಗತ್ತಿನ ಪ್ರಮುಖ ನಗರಗಳಲ್ಲಿ ಖಾಸಗಿ ಕಾರುಗಳ ಬಳಕೆ ಸರಾಸರಿ ಶೇ 10ರಷ್ಟು ಕಡಿಮೆಯಾಗಲಿದ್ದು, ಸಾರ್ವಜನಿಕ ಸಾರಿಗೆ, ನಡಿಗೆ ಹಾಗೂ ಬೈಸಿಕಲ್‌ ಬಳಕೆ ಜನಪ್ರಿಯಗೊಳ್ಳಲಿದೆ ಎಂದು ಕಾಂಟರ್‌ನ 'ಮೊಬಿಲಿಟಿ ಫ್ಯೂಚರ್ಸ್‌' ಅಧ್ಯಯನದಿಂದ ತಿಳಿದು ಬಂದಿದೆ.

ನ್ಯೂಯಾರ್ಕ್‌ನಿಂದ ನೈರೋಬಿಯಾ ವರೆಗೂ ವಿಶ್ವದ 31 ಪ್ರಮುಖ ನಗರಗಳಲ್ಲಿ ಸಮೀಕ್ಷೆಗಳ ಮೂಲಕ ಅಧ್ಯಯನ ನಡೆಸಲಾಗಿದೆ. ಜಗತ್ತಿನ ಅರ್ಧಕ್ಕಿಂತಲೂ ಅಧಿಕ ಜನಸಂಖ್ಯೆ ನಗರಗಳಲ್ಲಿದೆ. ಈ ಪ್ರಮಾಣ 2050ರ ವೇಳೆಗೆ ಶೇ 70ರಷ್ಟು ಏರಿಕೆಯಾಗಲಿದ್ದು. ಸ್ಥಳಾವಕಾಶದ ಒತ್ತಡ ಸೃಷ್ಟಿಯಾಗಲಿದೆ ಎಂದು ಅಂದಾಜಿಸಲಾಗಿದೆ.

ADVERTISEMENT

ವಾಹನ ಸಂಚಾರ ದಟ್ಟಣೆಯಿಂದಾಗಿ ಮಹಾನಗರಗಳಲ್ಲಿ ಏರುತ್ತಿರುವ ವಾಯು ಮಾಲಿನ್ಯ ತಡೆಗೆ ಸರ್ಕಾರಗಳು ಹಲವು ಕ್ರಮಗಳನ್ನು ಕೈಗೊಳ್ಳುತ್ತಿವೆ. ಬೈಕ್‌ ಶೇರಿಂಗ್‌, ವಿದ್ಯುತ್‌ ಚಾಲಿತ ಪುಟ್ಟ ವಾಹನಗಳ ಬಳಕೆ, ಸಮೂಹ ಸಾರಿಗೆ ಹಾಗೂ ಬೈಸಿಕಲ್‌ ಬಳಕೆ ಮಾರ್ಗೋಪಾಯವಾಗಿ ತೋರುತ್ತಿದೆ. ಜನರು ನಿತ್ಯದ ಓಡಾಟದಲ್ಲಿ ಸ್ವಂತ ಕಾರುಗಳ ಬಳಕೆ ನಿಲ್ಲಿಸುವ ಪ್ರಯತ್ನ ಮಾಡಿದ್ದಾರೆ.

ವಿಶ್ವದ ಪ್ರಮುಖ ನಗರಗಳ 2 ಲಕ್ಷಕ್ಕೂ ಹೆಚ್ಚು ಜನರ ಸಂಚಾರ ಸೂತ್ರ ಮತ್ತು ಅಭಿಪ್ರಾಯಗಳನ್ನು ಅಧ್ಯಯನ ಒಳಗೊಂಡಿದೆ.

ಸುಸ್ಥಿರ ಸಾರಿಗೆಯ ಭಾಗವಾಗಿ ಜನರು ಬೈಸಿಕಲ್‌, ಸಾರ್ವಜನಿಕ ಸಾರಿಗೆ ಹಾಗೂ ನಡಿಗೆಯ ಸಂಚಾರ ನೆಚ್ಚಿಕೊಳ್ಳಲಿದ್ದಾರೆ. ಅದರ ಪ್ರಮಾಣ ಶೇ 49ರಷ್ಟು ಏರಿಕೆಯಾಗಲಿದೆ. ಬಾಡಿಗೆ ವಾಹನಗಳ ಬಳಕೆಯ ರೀತಿಯಲ್ಲೂ ಸಾಕಷ್ಟು ಬದಲಾವಣೆಯಾಗಲಿದೆ. ಹಂಚಿಕೊಂಡು ನಡೆಸುವ ಸಂಚಾರ, ಪರಿಸರ ಸ್ನೇಹಿ ವಾಹನಗಳ ಬಳಕೆ ಹಾಗೂ ಪಾವತಿಗೆ ಡಿಜಿಟಲ್‌ ವ್ಯವಸ್ಥೆ ಅನುಕೂಲಕರ ಎಂದು ಶೇ 40ರಷ್ಟು ಜನರು ಅಭಿಪ್ರಾಯ ಪಟ್ಟಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.