ಕೊರೊನಾ ಲಾಕ್‌ಡೌನ್‌ನಿಂದಾಗಿ ಎಲ್ಲೆಡೆ ಈಗ ಆನ್‌ಲೈನ್‌ನಲ್ಲಿಯೇ ಮಕ್ಕಳಿಗೆ ಪಾಠ, ಹಿರಿಯರಿಗೆ ಪ್ರವಚನ, ಸಂಗೀತ ಕಛೇರಿ, ನೃತ್ಯ ಕಾರ್ಯಕ್ರಮ, ಪುಸ್ತಕ ಬಿಡುಗಡೆ ನಡೆಯುತ್ತಿವೆ. ಆದರೆ, ಇದುವರೆಗೂ ಆನ್‌ಲೈನ್ ರ‍್ಯಾಲಿಗಳು ನಡೆದಿರಲಿಲ್ಲ.
‘ಎಲ್ಲವೂ‘ ಆನ್‌ಲೈನ್‌ನಲ್ಲಿ ನಡೆಯುತ್ತಿರುವಾಗ ‘ನಾವೂ ಏಕೆ ಆನ್‌ಲೈನ್‌ನಲ್ಲಿ ರ‍್ಯಾಲಿ ನಡೆಸಬಾರದು‘ ಎಂದು ಯೋಚಿಸಿದ್ದು ಜಾಗತಿಕ ಬೈಕ್ ಕಂಪನಿ ಹಾರ್ಲೆ ಡೇವಿಡ್‌ಸನ್ ಇಂಡಿಯಾ. ಯೋಚಿಸಿದ್ದೇ ತಡ, ಮೊದಲ ಬಾರಿಗೆ ಅಂಥದ್ದೊಂದು ವರ್ಚುವಲ್ ಬೈಕ್ ರ್‍ಯಾಲಿ ಆಯೋಜಿಸಿ ಯಶಸ್ವಿಯೂ ಆಯಿತು.
ಅಂದ ಹಾಗೆ, ಈ ಮಾರ್ಚ್‌ನಲ್ಲಿ ಹಾರ್ಲೆ ಡೇವಿಡ್‌ಸನ್ ಬೈಕ್ ಸವಾರರ (ಎಚ್‌ಒಜಿ) ಈಶಾನ್ಯ ವಲಯದ ರ‍್ಯಾಲಿ ನಿಗದಿಯಾಗಿತ್ತು. ಆದರೆ, ಲಾಕ್‌ಡೌನ್‌ನಿಂದಾಗಿ ಕೊನೆಯ ಕ್ಷಣದಲ್ಲಿ ರದ್ದಾಗಿತ್ತು. ಹಾಗಾಗಿ ಅದೇ ಕಾರ್ಯಕ್ರಮವನ್ನು ಈಗ ವರ್ಚುವಲ್ ಬೈಕ್ ರ‍್ಯಾಲಿ ಮೂಲಕ ಕಂಪನಿ ಸಾಕಾರಗೊಳಿಸಿತು.
60 ನಿಮಿಷಗಳ ಕಾಲ ನಡೆದ ಈ ಬೈಕ್ ರ‍್ಯಾಲಿಯನ್ನು ಫೇಸ್‌ಬುಕ್, ಟ್ವಿಟರ್, ಇನ್‌ಸ್ಟಾಗ್ರಾಂ ಮತ್ತು ಯೂಟ್ಯೂಬ್‌ನಲ್ಲಿ ನೇರ ಪ್ರಸಾರ ಮಾಡಲಾಯಿತು. ಅಂದಾಜು 5.7 ಲಕ್ಷ ಜನರು ಈ ವರ್ಚುವಲ್ ರ‍್ಯಾಲಿ ವೀಕ್ಷಿಸಿದ್ದಾರೆ.ಹಾರ್ಲೆ ಡೇವಿಡ್‌ಸನ್ ಹೊಸದಾಗಿ ಮಾರುಕಟ್ಟೆಗೆ ಪರಿಚಯಿಸಿದ ಲೋ ರೈಡರ್ ಎಸ್ ಮಾಡೆಲ್ ಬೈಕ್ ಸವಾರರು ರ‍್ಯಾಲಿಯಲ್ಲಿ ಭಾಗವಹಿಸಿದ್ದರು.
‘ಲಾಕ್‌ಡೌನ್‌ನಂತಹ ಕಠಿಣ ಸಮಯದಲ್ಲೂ ಹಾರ್ಲೆ ಡೇವಿಡ್‌ಸನ್ ಆಯೋಜಿಸಿದ್ದ ಬೈಕ್ ಸವಾರರ ವರ್ಚುವಲ್ ರ‍್ಯಾಲಿ ಹೊಸ ಅನುಭವ ಮತ್ತು ಸಾಧ್ಯತೆಗಳನ್ನು ತೆರೆದಿಟ್ಟಿದೆ‘ ಎಂದು ಸವಾರರು ಅನುಭವ ಹಂಚಿಕೊಂಡರು. ಇದಕ್ಕೂ ಮೊದಲು ಇದೇ ಫೆಬ್ರುವರಿಯಲ್ಲಿ ಗೋವಾದಲ್ಲಿ ನಡೆದಿದ್ದ ರ‍್ಯಾಲಿಯಲ್ಲಿ 2500 ಬೈಕರ್‌ಗಳು ಭಾಗವಹಿಸಿದ್ದರು.
ಹಾರ್ಲೆ ಡೇವಿಡ್‌ಸನ್ ಓನರ್ಸ್ ಗ್ರೂಪ್ (ಎಚ್‌ಒಜಿ)– ಇದು ಹಾರ್ಲೆ ಡೇವಿಡ್‌ಸನ್ ಬೈಕ್ ಮಾಲೀಕರ ಅಧಿಕೃತ ಕ್ಲಬ್. 35 ವರ್ಷಗಳ ಹಿಂದೆ ಸ್ಥಾಪನೆಯಾದ ಈ ಕ್ಲಬ್ 140 ರಾಷ್ಟ್ರಗಳಲ್ಲಿ 1,400ಕ್ಕೂ ಹೆಚ್ಚು ಶಾಖೆಗಳನ್ನು ಹೊಂದಿದೆ. ಹತ್ತು ಲಕ್ಷಕ್ಕೂ ಹೆಚ್ಚು ಸದಸ್ಯರಿರುವ ಎಚ್‌ಒಜಿ ವಿಶ್ವದ ಅತಿ ದೊಡ್ಡ ಬೈಕ್ ರೈಡರ್ಸ್ ಕ್ಲಬ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
ಭಾರತದಲ್ಲಿ 2010ರಲ್ಲಿ ಅಸ್ತಿತ್ವಕ್ಕೆ ಬಂದ ಕ್ಲಬ್ 20 ಸಾವಿರ ಸದಸ್ಯರನ್ನು ಹೊಂದಿದೆ. ಆ ಪೈಕಿ 7,500 ಸದಸ್ಯರು ಕ್ರಿಯಾಶೀಲರಾಗಿದ್ದಾರೆ. ಆಗಾಗ ಕ್ಲಬ್ ಸದಸ್ಯರೆಲ್ಲ ಒಂದೆಡೆ ಸೇರಿಲಾಂಗ್ ಡ್ರೈವ್, ರ‍್ಯಾಲಿ, ಟ್ರೆಕ್ಕಿಂಗ್, ಗುಡ್ಡಗಾಡು ರೇಸಿಂಗ್‌ನಂತಹ ಚಟುವಟಿಕೆಗಳಲ್ಲಿ ತೊಡಗಿರುತ್ತಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.