ಬೆಂಗಳೂರು: ಪ್ರತಿಷ್ಠಿತ ವಾಹನ ತಯಾರಿಕಾ ಕಂಪನಿ ಹೀರೋ ಮೋಟೋಕಾರ್ಪ್ ದೇಶದಲ್ಲೇ ತನ್ನ ಮೊದಲ ಎಲೆಕ್ಟ್ರಿಕ್ ದ್ವಿಚಕ್ರ ವಾಹನ 'ವಿಡಾ ವಿ1' ಅನ್ನು ಬೆಂಗಳೂರಿನಲ್ಲಿ ಗ್ರಾಹಕರಿಗೆ ಡೆಲಿವರಿ ಮಾಡಿದೆ.
ಬೆಂಗಳೂರಿನ ವಿಠ್ಠಲ್ ಮಲ್ಯ ರಸ್ತೆಯಲ್ಲಿರುವ ಶಾಖೆಯಲ್ಲಿ ಕಂಪನಿಯ ಸಿಇಒ ಡಾ. ಪವನ್ ಮುಂಜಾಲ್ ವಾಹನವನ್ನು ಗ್ರಾಹಕರಿಗೆ ಹಸ್ತಾಂತರಿಸಿದ್ದಾರೆ.
ಈ ವೇಳೆ ಮಾತನಾಡಿದ ಅವರು, ದೇಶದಲ್ಲೇ ಮೊದಲ 'ವಿಡಾ ವಿ1' ಎಲೆಕ್ಟ್ರಿಕ್ ವಾಹನವನ್ನು ಬೆಂಗಳೂರಿನಲ್ಲಿ ಡೆಲಿವರಿ ಪ್ರಾರಂಭಿಸಿದ್ದು ಹೆಮ್ಮೆ ಎನಿಸುತ್ತಿದೆ. ಈ ಮೂಲಕ ಹೀರೋ ತನ್ನ ಎಲೆಕ್ಟ್ರಿಕ್ ಸಂಚಾರವನ್ನು ಅಧಿಕೃತವಾಗಿ ಪ್ರಾರಂಭಿಸಿದಂತಾಗಿದೆ. ದೇಶದಲ್ಲಿ ಎಲೆಕ್ಟ್ರಿಕ್ ವಾಹನಗಳ ಬೇಡಿಕೆ ಹೆಚ್ಚುತ್ತಿದ್ದು, ಗ್ರಾಹಕರ ನಿರೀಕ್ಷೆಯಂತೆಯೇ ಈ ವಾಹನ ತಯಾರಿಸಿದ್ದೇವೆ. ಆಕರ್ಷಕ ಹಾಗೂ ಜನಸ್ನೇಹಿ ವಾಹನ ಇದಾಗಿದೆ ಎಂದಿದ್ದಾರೆ.
'ವಿಡಾ ವಿ1' ವಾಹನವು ಕಸ್ಟಮೈಸ್ ಮಾಡಬಹುದಾದ, ದೀರ್ಘಾವಧಿವರೆಗೂ ಬಾಳಿಕೆ ಬರುವ ಹಾಗೂ ತೆಗೆದು ಹಾಕಬಹುದಾದ ಬ್ಯಾಟರಿ ವ್ಯವಸ್ಥೆಯನ್ನು ಹೊಂದಿದೆ. ಇದರಲ್ಲಿ ಮೂರು ವಿಧದ ಚಾರ್ಜಿಂಗ್ ಆಯ್ಕೆಯನ್ನೂ ನೀಡಲಾಗಿದೆ.ಪೋರ್ಟಬಲ್ ಚಾರ್ಜರ್ ವ್ಯವಸ್ತೆಯೂ ಇದೆ ಎಂದು ತಿಳಿಸಿದ್ದಾರೆ.
ಪ್ರಸ್ತುತ ಎರಡು (ವಿಡಾ ವಿ1 ಪ್ಲಸ್ ಹಾಗೂವಿಡಾ ವಿ1 ಪ್ರೋ) ಶ್ರೇಣಿಯ ದ್ವಿಚಕ್ರವಾಹನಗಳು ರಸ್ತೆಗಿಳಿದಿವೆ. ವಿಡಾ ವಿ1 ಉತ್ತಮ ಕಾರ್ಯಕ್ಷಮತೆ ಹೊಂದಿದ್ದು, ಪ್ರತಿ ಗಂಟೆಗೆ ಗರಿಷ್ಠ 80 ಕಿ.ಮೀ ವೇಗದಲ್ಲಿ ಚಲಿಸಬಲ್ಲದು ಎಂದು ವಿವರಿಸಿದ್ದಾರೆ.
ಮುಂದುವರಿದು,ಸದ್ಯಬೆಂಗಳೂರು ಹಾಗೂ ಜೈಪುರದಲ್ಲಿ ವಿಡಾ ಎಕ್ಸ್‌ಪೀರಿಯನ್ಸ್ ಸೆಂಟರ್ ತೆರೆಯಲಾಗಿದೆ. ದೆಹಲಿಯಲ್ಲಿ ಪಾಪ್ ಸ್ಟೋರ್ ಇದೆ. ಇದೀಗ ಬೆಂಗಳೂರಿನಲ್ಲಿ ಮೊದಲ ವಾಹನ ಗ್ರಾಹಕರಿಗೆ ಡೆಲಿವರಿ ನೀಡಲಾಗಿದ್ದು, ಶೀಘ್ರದಲ್ಲೇ ಜೈಪುರ ಹಾಗೂ ದೆಹಲಿಯಲ್ಲಿಯೂ ವಾಹನ ಡೆಲಿವರಿ ಪ್ರಾರಂಭಿಸಲಾಗುವುದು ಎಂದು ಹೇಳಿದ್ದಾರೆ..
ಹೀರೋ ಮೋಟೋಕಾರ್ಪ್‌ನ ಎಮರ್ಜಿಂಗ್ ಮೊಬಿಲಿಟಿ ಬ್ಯುಸಿನೆಸ್ ಯುನಿಟ್ ಮುಖ್ಯಸ್ಥ ಡಾ. ಸ್ವದೇಶ್ ಶ್ರೀವಾಸ್ತವ ಮಾತನಾಡಿ, ವಿಡಾ ಎಲೆಕ್ಟ್ರಿಕ್ ವಾಹನದಲ್ಲಿ ಕಸ್ಟಮ್ ಮೋಡ್, ಕ್ರೂಸ್ ಕಂಟ್ರೋಲ್, ಬೂಸ್ಟ್ ಮೋಡ್, ಟೂವೇ ಥ್ರೋಟಲ್, ಕೀ ಲೆಸ್ ಆಕ್ಸಸ್, 7 ಇಂಚಿನ ಟಚ್ ಸ್ಕ್ರೀನ್ ಸೇರಿದಂತೆ ಹಲವು ಫೀಚರ್‌ಗಳಿವೆ ಎಂದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.