ಜೋಧ್‌ಪುರ್: ಸೋಲಾರ್ ವಿದ್ಯುತ್ ಬಳಸಿ ವಾಹನಗಳ ಬ್ಯಾಟರಿ ಚಾರ್ಜ್ ಮಾಡಲು ವಿಶೇಷ ಅಡಾಪ್ಟರ್ ಅನ್ನು ಐಐಟಿ–ಜೋಧಪುರ ಅಭಿವೃದ್ಧಿಪಡಿಸಿದೆ. ಅಡಾಪ್ಟರ್ ದರ ₹1,000ಕ್ಕಿಂತ ಕಡಿಮೆ ಇರುವ ಸಾಧ್ಯತೆಗಳಿವೆ.
‘ಸೋಲಾರ್ ಪ್ಯಾನೆಲ್ ಆಧರಿಸಿ ಚಾರ್ಜ್ ಮಾಡು ಕ್ರಮ ಯಶಸ್ವಿಯಾದಲ್ಲಿ ಈ ಅಡಾಪ್ಟರ್ ಹೆಚ್ಚು ಪರಿಣಾಮಕಾರಿಯಾಗಲಿದೆ’ ಎಂದು ಐಐಟಿ ಜೋಧಪುರದ ಎಲೆಕ್ಟ್ರಿಕಲ್ ಎಂಜಿನಿಯರಿಂಗ್ ವಿಭಾಗದ ಸಹಾಯಕ ಪ್ರೊಫೆಸರ್ ನಿಶಾಂತ್ ಕುಮಾರ್ ಹೇಳಿದರು.
ಈ ಅಡಾಪ್ಟರ್ ಎಲ್ಲ ಮಾದರಿ ವಿದ್ಯುತ್ ಚಾಲಿತ ವಾಹನಗಳ ಬ್ಯಾಟರಿಗಳಿಗೂ ಹೊಂದಲಿದೆ. ಮಾದರಿ ಅಡಾಪ್ಟರ್ ತಯಾರಿಸಿ ಪರೀಕ್ಷಿಸಲಾಗಿದ್ದು, ಅದು ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿದೆ ಎಂದರು.
ಪ್ರಸ್ತುತ ವಿದ್ಯುತ್ ಚಾಲಿತ ವಾಹನಗಳನ್ನು ಖರೀದಿಸುವವರ ಸಂಖ್ಯೆ ಹೆಚ್ಚುತ್ತಿದೆ. ಸರ್ಕಾರ ಸಬ್ಸಿಡಿ ನೀಡುತ್ತಿದೆ. ಅಡಾಪ್ಟರ್ ಒಂದೆಡೆ ಸೋಲಾರ್ ಪ್ಯಾನೆಲ್‌ಗೆ, ಮತ್ತೊಂದೆಡೆ ವಾಹನಗಳ ಉತ್ಪಾದನಾ ಕಂಪನಿ ಒದಗಿಸಿರುವ ಚಾರ್ಜರ್‌ಗೆ ಸಂಪರ್ಕ ಕಲ್ಪಿಸಿರುತ್ತದೆ’ ಎಂದು ಕುಮಾರ್ ವಿವರಿಸಿದರು.
‘ಈಗ, ವಿದ್ಯುತ್ ಪರಿವರ್ತಕಗಳಿಲ್ಲದೆ ಸೋಲಾರ್ ಪ್ಯಾನೆಲ್‌ನಿಂದ ವಿದ್ಯುಚ್ಛಕ್ತಿ ಪಡೆಯುವುದು ಸವಾಲಿನ ಕೆಲಸ. ಇದಕ್ಕಾಗಿ ಅಡಾಪ್ಟರ್ ಅಗತ್ಯವಿದೆ. ಕಂಪನಿಗಳು ಪ್ರಸ್ತುತ ಒದಗಿಸುವ ಚಾರ್ಜರ್, ಸೋಲಾರ್ ಪ್ಯಾನೆಲ್‌ನಿಂದ ವಿದ್ಯುತ್ ಸ್ವೀಕರಿಸುವಷ್ಟು ಶಕ್ತವಾಗಿರುವುದಿಲ್ಲ’ ಎಂದು ಹೇಳಿದರು.
‘ಚಾರ್ಜಿಂಗ್‌ಗೆ ಪೂರಕ ಸೌಲಭ್ಯಗಳನ್ನು ಐದು ವರ್ಷಗಳಲ್ಲಿ ಅಭಿವೃದ್ಧಿ ಪಡಿಸುವುದೂ ಸವಾಲಿನದ್ದಾಗಿದೆ. ಇದೇ ಕಾರಣದಿಂದ ಭಾರತ, ಅಮೆರಿಕ, ಚೀನಾ, ರಷ್ಯಾ ಸೇರಿ ವಿವಿಧ ದೇಶಗಳಲ್ಲಿ ಚಾವಣಿಯಲ್ಲಿ ಸೋಲಾರ್ ಪ್ಯಾನೆಲ್ ಅಳವಡಿಸಲು ಚಿಂತನೆ ನಡೆದಿದೆ ಎಂದೂ ಅವರು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.