ಜಾಗ್ವಾರ್ ಲ್ಯಾಂಡ್ ರೋವರ್ ಲಿ. ವ್ಯವಸ್ಥಾಪಕ ನಿರ್ದೇಶಕ ರೋಹಿತ್ ಸೂರಿ ಅವರು ಪ್ರಜಾವಾಣಿ ಜತೆ ವಾಹನ ಉದ್ಯಮದ ಸಮಸ್ಯೆಗಳ ಕುರಿತು ಮಾತನಾಡಿದ್ದಾರೆ.
***
‘ಭಾರತದಲ್ಲಿ ಐಷಾರಾಮಿ ಕಾರುಗಳ ಮಾರಾಟ ಹೆಚ್ಚಾಗಲು ಸರ್ಕಾರ ತನ್ನ ತೆರಿಗೆ ನೀತಿ ಪರಿಷ್ಕರಿಸಬೇಕು. ₹ 30 ಲಕ್ಷದ ಐಷಾರಾಮಿ ಕಾರಿನ ಮಾರುಕಟ್ಟೆ ದರ ₹ 45 ಲಕ್ಷ ಆಗಿದೆ. ಅಂದರೆ ತೆರಿಗೆಯೇ ಶೇ 50ರಷ್ಟು ಇದೆ. ಹೀಗಾಗಿ ಗ್ರಾಹಕರಿಗೆ ಕಾರು ಕೊಳ್ಳಲು ತೆರಿಗೆಯ ಭಾರವೇ ಹೆಚ್ಚಾಗಿದೆ’– ಜಾಗ್ವಾರ್ ಲ್ಯಾಂಡ್ ರೋವರ್ ಲಿ. ವ್ಯವಸ್ಥಾಪಕ ನಿರ್ದೇಶಕ ರೋಹಿತ್ ಸೂರಿ ಮಾತುಗಳಿವು. ‘ಪ್ರಜಾವಾಣಿ’ ಜೊತೆ ತಮ್ಮ ಜೆಎಲ್ಆರ್ ಕನಸುಗಳನ್ನು ಹಂಚಿಕೊಂಡ ಅವರು,ತೆರಿಗೆವಿಧಿಸಲೇ ಬೇಡಿ ಎನ್ನುತ್ತಿಲ್ಲ. ಜನರ ಕೊಳ್ಳುವ ಶಕ್ತಿಯನ್ನು ಗಮನದಲ್ಲಿಟ್ಟುಕೊಂಡು ವಿಧಿಸಲಿ. ಸರಕು ಸೇವಾ ತೆರಿಗೆ ಶೇ 28ರಿಂದ 18ಕ್ಕೆ ಇಳಿಸಿದರೆ,ಮಧ್ಯಮ ವರ್ಗ ಕೂಡ ಉನ್ನತ ದರ್ಜೆಯ ಕಾರು ಕೊಳ್ಳಬಲ್ಲದು ಎಂದು ಅಭಿಪ್ರಾಯಪಟ್ಟರು.
ಸರ್ಕಾರದವಿರುದ್ಧ ನಿಮಗೆ ಅಸಮಾಧಾನವಿದೆಯೇ?
ಅದು ಅಸಮಾಧಾನವಲ್ಲ, ಕಳಕಳಿಯಷ್ಟೆ.ನಮ್ಮ ತಯಾರಿಕೆ ವೆಚ್ಚ ಕಳೆದು ಶೇ 5ರಿಂದ 10 ಮಾತ್ರ ಲಾಭ ಇಟ್ಟುಕೊಂಡಿರುತ್ತೇವೆ. ಆದರೆ, ಸರ್ಕಾರ ಜಿಎಸ್‌ಟಿ ಮೂಲಕ ಸಿಂಹ ಪಾಲು ಪಡೆಯುತ್ತಿದೆ. ತಮಾಷೆಯ ವಿಷಯ ಏನೆಂದರೆ ನಮಗಿಂತ ಸರ್ಕಾರವೇ ಲಾಭ ಹೆಚ್ಚು ಮಾಡಿಕೊಳ್ಳುತ್ತಿದೆ.
ಯಾವ ಯಾವ ಕಾರುಗಳಿಗೆ ತೆರಿಗೆ ಪ್ರಮಾಣ ಎಷ್ಟಿದೆ?
ಐಷಾರಾಮಿ ಕಾರುಗಳಿಗೆಶೇ 28 ಜಿಎಸ್‌ಟಿ ವಿಧಿಸಲಾಗು ತ್ತಿದೆ. ಇದರೊಂದಿಗೆ ಎಸ್‌ಯುವಿಗೆ ಶೇ 22 ಸೆಸ್,ಸೆಡಾನ್‌ಗೆ ಶೇ 20 ಸೆಸ್ ಇದೆ. ಗ್ರಾಹಕರು ಎಸ್‌ಯುವಿಗಾಗಿ ಶೇ 50 ತೆರಿಗೆ ಹಣ ನೀಡಿದರೆ, ಶೇ 48 ತೆರಿಗೆ ಸೆಡಾನ್‌ಗೆ ನೀಡಬೇಕು.
ದುಬಾರಿ ತೆರಿಗೆಯಿಂದಾಗಿಯೇ ಮಾರಾಟ ಕಡಿಮೆಯಾಗಿದೆಯೇ?
ಹೌದು. ದುಬಾರಿ ಜಿಎಸ್‌ಟಿ ಕೂಡ ಈ ಹಿನ್ನಡೆಗೆ ಕಾರಣ. ಜನರಲ್ಲಿಹಣ ಹೆಚ್ಚಾಗಿ ಚಲಾವಣೆಯಾಗುತ್ತಿಲ್ಲ. ಹೀಗಾಗಿ ಕಾರು ಕೊಳ್ಳುವವರ ಪ್ರಮಾಣ ಕಳೆದ ವರ್ಷಕ್ಕಿಂತ ಕಡಿಮೆಯಾಗಿದೆ. ಕೊಳ್ಳುವವರ ಶಕ್ತಿ ಹೆಚ್ಚು ಮಾಡಲು ತೆರಿಗೆ ಕಡಿಮೆ ಮಾಡಬೇಕು. ಹಾಗಾದಾಗ ಮಾತ್ರ ಜಡಗೊಳ್ಳುತ್ತಿರುವ ಆರ್ಥಿಕತೆ ಚಲನಶೀಲವಾಗುತ್ತದೆ.
ಸದ್ಯದಲ್ಲೇ ಮಾರಾಟ ಹೆಚ್ಚಾಗುವ ಭರವಸೆ ಇದೆಯೇ?
2010ರಲ್ಲಿ 200 ಕಾರುಗಳನ್ನು ಮಾರಾಟ ಮಾಡಿದ್ದೆವು. ಕಳೆದ ವರ್ಷ4000 ಕಾರುಗಳನ್ನು ಮಾರಾಟ ಮಾಡಿದ್ದೇವೆ. ಬೆಳವಣಿಗೆ ಚೆನ್ನಾಗಿದೆ. ಆದರೆ, ಈ ವರ್ಷದಮೊದಲ ತ್ರೈಮಾಸಿಕದಲ್ಲಿ ಕಾರುಗಳ ಮಾರಾಟ ತೃಪ್ತಿದಾಯಕವಾಗಿಲ್ಲ. ಮುಂಬರುವ ದಿನಗಳು ಖಂಡಿತವಾಗಿಯೂ ಆಶಾದಾಯಕವಾಗಿರುತ್ತವೆ.
ಟೆಸ್ಲಾ ದಂತೆ ಜೆಎಲ್‌ಆರ್ ಇ–ಕಾರುಗಳು ಮಾರುಕಟ್ಟೆಗೆ ಪ್ರವೇಶಿಸಿಲ್ಲ
ವಿದ್ಯುತ್ ಚಾಲಿತಜಾಗ್ವಾರ್ ಐ ಫೇಸ್ ಬಿಡುಗಡೆ ಮಾಡಿದ್ದೇವೆ. ಇದಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಜಗತ್ತಿನ ‘ಟಾಪ್ 10’ ಎಲೆಕ್ಟ್ರಿಕ್ ಕಾರುಗಳಲ್ಲಿ ನಮ್ಮದೂ ಒಂದು. 2020–21ರ ವೇಳೆಗೆ ಜಾಗ್ವಾರ್ ಲ್ಯಾಂಡ್ ರೋವರ್ ಇ–ಕಾರುಗಳು ಭಾರತದ ರಸ್ತೆಗಳಿಗೆ ಇಳಿಯಲಿವೆ ಎಂಬ ಆಶಾವಾದ ಇದೆ. ಇದಕ್ಕೆ ತುಂಬಾ ಜಾಗರೂಕತೆ ವಹಿಸಲಾಗಿದೆ. ಮೂಲಸೌಕರ್ಯಗಳನ್ನು ಹೆಚ್ಚಿಸಬೇಕಾಗಿದೆ. ಚಾರ್ಜಿಂಗ್ ಸ್ಟೇಷನ್‌ಗಳು ಭಾರತದಾದ್ಯಂತ ಆರಂಭಿಸಬೇಕಾಗಿದೆ. ಕೇಂದ್ರ ಸರ್ಕಾರ ಈ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಿದೆ.
ಕೃತಕ ಬುದ್ಧಿಮತ್ತೆ (ಎಐ) ಜೆಎಲ್‌ಆರ್ ಕಾರುಗಳಲ್ಲಿ ಇದೆಯೇ?
‘ಎಐ’ ಇದೆ. ತಯಾರಿಕಾ ಕ್ಷೇತ್ರದಲ್ಲೂ ಇದು ಪ್ರವೇಶಿಸಿದೆ.ಸುಧಾರಿತ ತಂತ್ರಜ್ಞಾನವನ್ನು ಜೆಎಲ್‌ಆರ್ ಕಾರುಗಳಲ್ಲಿ ನೀವು ಕಾಣಬಹುದು.ಗ್ರಾಹಕರನ್ನು ಸೆಳೆಯಲು ಅತ್ಯಾಧುನಿಕ ಷೋರೂಂಗಳನ್ನು ಸ್ಥಾಪಿಸಿದ್ದೇವೆ. ಇಲ್ಲೂ ತಂತ್ರಜ್ಞಾನಗಳನ್ನು ಅಳವಡಿಸಿದ್ದೇವೆ.ಬೆಂಗಳೂರಿನ ಕನ್ನಿಂಗ್ ಹ್ಯಾಮ್ ರಸ್ತೆಯಲ್ಲಿರುವ ಹೊಸ ಮಳಿಗೆ ಇದಕ್ಕೆ ಸಾಕ್ಷಿ.
‘ಕೃತಕ ಬುದ್ಧಿಮತ್ತೆ’ ಸೇರಿದಂತೆ ತಂತ್ರಜ್ಞಾನವು ಉದ್ಯೋಗ ಕಿತ್ತುಕೊಳ್ಳಬಹುದೇ?
ಇಲ್ಲ. ಚಾಲಕರಿಲ್ಲದ ಕಾರುಗಳು ಬಂದಿರಬಹುದು. ತಂತ್ರಜ್ಞಾನ ಸೃಷ್ಟಿಗೆ, ನಿರ್ವಹಣೆಗೆ ಮಾನವ ಸಂಪನ್ಮೂಲ ಬೇಕು. ಮಾರಾಟ ಕ್ಷೇತ್ರಕ್ಕಂತೂ ಬೇಕೆಬೇಕು. ತಯಾರಿಕಾ ವಿಭಾಗದಲ್ಲಿ ಹೆಚ್ಚು ಉದ್ಯೋಗಗಳಿವೆ.
ಗ್ರಾಹಕರ ಪ್ರತಿಕ್ರಿಯೆ ಹೇಗಿದೆ?
ನಿಮಗೆ ಗೊತ್ತಿರುವಂತೆಯೇ ಲ್ಯಾಂಡ್ ರೋವರ್ ಮತ್ತು ಜಾಗ್ವಾರ್ ಎರಡೂ ಕಾರ್ ಕಂಪನಿಗಳು ಸೇರಿ ಜೆಎಲ್ಆರ್ ಆಗಿದೆ. ಗ್ರಾಹಕರ ಅಭಿರುಚಿಯನ್ನು ಗಮನದಲ್ಲಿಟ್ಟುಕೊಂಡೇ ಕಾರುಗಳ ವಿನ್ಯಾಸ ರೂಪಿಸಲಾಗಿದೆ. ಅವರ ಬೆಂಬಲದಿಂದಲೇ ನಾವು ಬೆಳೆಯುತ್ತಿದ್ದೇವೆ. ಗ್ರಾಹಕರೊಂದಿಗೆ ಅನನ್ಯ ಸಂಬಂಧ ಹೊಂದುವ ನಿಟ್ಟಿನಲ್ಲಿ ನಾವು ಸದಾ ಕಾರ್ಯಪ್ರವೃತ್ತರಾಗಿರುತ್ತೇವೆ.
ಉದ್ಯಮ ಬೆಳೆಯುತ್ತಿದೆಯೇ?
‘ಭಾರತದಲ್ಲಿಯೇ ತಯಾರಿಸಿ’ ಮೂಲಕ ಇಲ್ಲೇ ತಯಾರಿಸುವ, ಬಿಡಿಭಾಗಗಳನ್ನು ಜೋಡಿಸುವ ಕೆಲಸವೂ ಆಗುತ್ತಿದೆ. ಅತಿ ಹೆಚ್ಚು ಐಷಾರಾಮಿ ಕಾರುಗಳನ್ನು ಕೊಳ್ಳುವ ದೇಶವಾಗಿ ಭಾರತ ಹೊರಹೊಮ್ಮುವಲ್ಲಿ ಸರ್ಕಾರದ ನೀತಿ ಅವಶ್ಯಕವಾಗಿದೆ. ಖರೀದಿಗಿಂತ ಹೆಚ್ಚು ಕಾರುಗಳು ತಯಾರಾಗಿವೆ. ಮಾಲೀಕರನ್ನು ಹುಡುಕಿಕೊಳ್ಳಲು ಕಾಯುತ್ತಿವೆ. ಸರ್ಕಾರ ತೆರಿಗೆ ಕಡಿಮೆಗೊಳಿಸಿ ರಹದಾರಿ ನಿರ್ಮಿಸಿಕೊಡಬೇಕು. ಉದ್ಯಮ ಉಳಿಯಬೇಕೆಂದರೆ ಮಾರುಕಟ್ಟೆ ವಿಸ್ತರಣೆಯಾಗಬೇಕು.
ನಿಮ್ಮ ಮಳಿಗೆಗಳು ಕಡಿಮೆ ಇವೆಯಲ್ಲ?
ಭಾರತದ 24 ನಗರಗಳಲ್ಲಿ ನಮ್ಮದೇ 27 ಮಳಿಗೆಗಳನ್ನು ಸ್ಥಾಪಿಸಿದ್ದೇವೆ.ಬೆಂಗಳೂರಿನಲ್ಲಿ ಎರಡು ಹೈಟೆಕ್ ಷೋರೂಂಗಳಿವೆ. ಬೆಂಗಳೂರಿನಲ್ಲಿ ಕಾರು ಬಳಕೆ ಸಂಸ್ಕೃತಿ ಬೆಳೆಯುತ್ತಿದೆ.ಎರಡನೇ ಹಂತದ ನಗರಗಳಲ್ಲೂ ಐಷಾರಾಮಿ ಕಾರು ಮಳಿಗೆಗಳನ್ನು ತೆರೆಯುತ್ತಿದ್ದೇವೆ. ಈ ಸಂಖ್ಯೆ ಮುಂದೆಯೂ ಹೆಚ್ಚಾಗಲಿದೆ.
ಐಷಾರಾಮಿ ಕಾರುಗಳು ಶ್ರೀಮಂತರ ಬಳಕೆಗೆ ಮಾತ್ರ ಇವೆಯೇ?
ಮಧ್ಯಮ ವರ್ಗದ ಜನರೂ ಐಷಾರಾಮಿ ಕಾರುಗಳನ್ನು ಕೊಳ್ಳಲು ಸಮರ್ಥರಾಗಿದ್ದಾರೆ.ಅವರಿಗಾಗಿಯೇ ಅನುಕೂಲಕರ ‘ಇಎಂಐ’ ಸೌಲಭ್ಯ ಒದಗಿಸಲಾಗಿದೆ. ಜಾಗ್ವಾರ್ ಮತ್ತು ಲ್ಯಾಂಡ್‌ರೋವರ್ ಕಾರುಗಳ ಬೆಲೆ ₹ 40.6 ಲಕ್ಷದಿಂದ 1 ಕೋಟಿವರೆಗೂ ಇದೆ. ತೆರಿಗೆ ಕಡಿಮೆ ಮಾಡಿದರೆ ₹ 20 ಲಕ್ಷದ ಕಾರು ಕೊಳ್ಳುವವರು ಇನ್ನೂ ತುಸು ಹೆಚ್ಚು ಬೆಲೆಯ ಇಂತಹ ಕಾರು ಕೊಳ್ಳಬಲ್ಲರು.
2018ರಲ್ಲಿ 35 ಲಕ್ಷ ಕಾರುಗಳು ಮಾರಾಟ ಆಗಿವೆ. ಇದರಲ್ಲಿ ವೋಲ್ವೊ, ಲ್ಯಾಂಡ್ ರೋವರ್, ಜಾಗ್ವಾರ್, ಬಿಎಂಡಬ್ಲ್ಯೂ, ಮರ್ಸಿಡಿಸ್, ಔಡಿ ಸೇರಿದಂತೆ ಹಲವು ಐಷಾರಾಮಿ ಕಂಪನಿಗಳ ಕಾರುಗಳು ಮಾರಾಟ ಆಗಿರುವುದು 40 ಸಾವಿರ ಮಾತ್ರ. ಮಾರಾಟ ಪ್ರಮಾಣಶೇ 4ರಿಂದ 5 ರಷ್ಟು ಹೆಚ್ಚಾದರೂ ಕಾರು ಮಾರುಕಟ್ಟೆ ಸುಧಾರಣೆ ಕಾಣುತ್ತದೆ. ಉನ್ನತ ಬೆಲೆಯ ಕಾರುಗಳನ್ನು ಪಾಪದ ಸರಕುಗಳಂತೆ ನೋಡುವುದನ್ನು ಸರ್ಕಾರ ಬಿಡಬೇಕು. ಅಲ್ಲಿಯವರೆಗೂ ಕಾರು ಮಾರುಕಟ್ಟೆ ಬೆಳವಣಿಗೆಯಾಗದು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.