ದೇಶದಲ್ಲಿ ಜಾಗ್ವಾರ್ ಲ್ಯಾಂಡ್ ರೋವರ್ ಕಾರುಗಳ ಮಾರಾಟ ಕಳೆದ ವರ್ಷ ಶೇ 16ರಷ್ಟು ಏರಿಕೆ ಕಂಡಿದೆ. 2017ರಲ್ಲಿ 3,954 ಕಾರುಗಳು ಮಾರಾಟವಾಗಿದ್ದವು. 2018ರಲ್ಲಿ 4,596 ಕಾರುಗಳು ಮಾರಾಟವಾಗಿವೆ. ಹೀಗೆ ಕಂಪನಿ ಕಳೆದ ವರ್ಷ ಗರಿಷ್ಠ ಮಾರಾಟ ದಾಖಲೆ ಕಂಡಿದೆ.
ಪ್ರಮುಖ ಸ್ಪೋರ್ಟ್ಸ್ ಯುಟಿಲಿಟಿ ವಾಹನ ಮಾದರಿಗಳಾದ ಲ್ಯಾಂಡ್ ರೋವರ್ ಡಿಸ್ಕವರಿ ಸ್ಪೋರ್ಟ್, ಇವೋಕ್, ಜಾಗ್ವಾರ್ ಎಫ್–ಪೇಸ್, ಎಕ್ಸ್ ಇ ಮತ್ತು ಎಕ್ಸ್ ಎಫ್ ದೇಶದಲ್ಲಿ ಹೆಚ್ಚು ಮಾರಾಟವಾಗಿವೆ.
‘2018ರಲ್ಲಿ ಭಾರತದ ವಾಹನ ಉದ್ಯಮ ಪ್ರತಿಕೂಲ ವಾತಾವರಣ ಹೊಂದಿತ್ತು. ಪ್ರತಿಕೂಲ ಆರ್ಥಿಕ ಪರಿಸ್ಥಿತಿ, ವಿಮಾ ಕಂತು ದರ ಹೆಚ್ಚಳ, ಸಾಲದ ಮೇಲಿನ ಬಡ್ಡಿದರ ಹೆಚ್ಚಳದಂಥ ಸನ್ನಿವೇಶ ಇತ್ತು. ಈ ಎಲ್ಲ ಅಡೆತಡೆಗಳ ನಡುವೆ ಜಾಗ್ವಾರ್ ಲ್ಯಾಂಡ್ ರೋವರ್‌ಗೆ ಭಾರತದಲ್ಲಿ ಪ್ರೋತ್ಸಾಹದಾಯಕ ಬೆಳವಣಿಗೆ ಸಿಕ್ಕಿದೆ.
ನಾವು ಹೊಸ ಉತ್ಪನ್ನಗಳ ಬಿಡುಗಡೆ, ಗ್ರಾಹಕ ಅನುಭವಗಳ ಸುಧಾರಣೆಯತ್ತ ಗಮನ ಕೇಂದ್ರೀಕರಿಸುತ್ತಿದ್ದೇವೆ. 2018ರಲ್ಲಿ ಕಂಪನಿಯ 10 ಪ್ರಮುಖ ಉತ್ಪನ್ನಗಳನ್ನು ಬಿಡುಗಡೆ ಮಾಡಿದ್ದೇವೆ. ರೇಂಜ್ ರೋವರ್ ವೇಲರ್, ರೇಂಜ್ ರೋವರ್ ಇವೋಕ್ ಕನ್ವರ್ಟಬಲ್ ಅಂದು ಬಿಡುಗಡೆಯಾದ ಮಾದರಿಗಳ ಪೈಕಿ ಪ್ರಮುಖವಾದವು ಎಂದು ಜಾಗ್ವಾರ್ ಲ್ಯಾಂಡ್ ರೋವರ್ ಇಂಡಿಯಾ ಲಿಮಿಟೆಡ್‌ನ ಆಡಳಿತ ನಿರ್ದೇಶಕ ರೋಹಿತ್ ಸೂರಿ ಹೇಳಿದರು.
ಕಳೆದವರ್ಷ ವಾಹನಗಳಲ್ಲಿ ಅತ್ಯಾಧುನಿಕ ಸೌಲಭ್ಯಗಳನ್ನು ಅಳವಡಿಸಿದ್ದೂ ಗ್ರಾಹಕರ ಮೆಚ್ಚುಗೆಗೆ ಪಾತ್ರವಾಗಿತ್ತು. ಆ್ಯಪ್ ಆಧರಿತ ನಿಯಂತ್ರಣ ವ್ಯವಸ್ಥೆ (ಪ್ರೊಟೆಕ್ಟ್), ರಿಮೋಟ್ ಪ್ರೀಮಿಯಂ ಮತ್ತು ಸೆಕ್ಯೂರ್ಡ್ ಟ್ರ್ಯಾಕರ್‌ನ್ನು ಪ್ರಮುಖ ಮಾದರಿಗಳಲ್ಲಿ ಅಳವಡಿಸಲಾಗಿತ್ತು.
ಗ್ರಾಹಕರು ಮತ್ತು ಮಾರಾಟಗಾರರಿಗೆ ಹಲವು ಲಾಭದಾಯಕ ಯೋಜನೆಗಳನ್ನು ಕಂಪನಿ ಘೋಷಿಸಿದೆ. ಈ ಬ್ರಾಂಡ್ ಹಲವು ಗಮನಾರ್ಹ ಮೈಲಿಗಲ್ಲುಗಳನ್ನು ದಾಟಿ 70 ವರ್ಷ ಪೂರೈಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.