ತಂತ್ರಜ್ಞಾನದೊಂದಿಗೆ ಸಮ್ಮಿಲನಗೊಂಡು ಜಗತ್ತಿನಾದ್ಯಂತ ಹೊಸ ಹೊಸ ಆಯ್ಕೆಗಳು ಆಟೊಮೊಬೈಲ್ ಕ್ಷೇತ್ರಕ್ಕೆ ಪರಿಚಿತವಾಗುತ್ತಲೇ ಇವೆ. ವಾಹನಗಳು ಹೆಚ್ಚುತ್ತಿರುವಂತೆ ಅಪಘಾತಗಳೂ ಹೆಚ್ಚುತ್ತಿವೆ ಎಂಬುದು ಸದ್ಯದ ಪ್ರಚಲಿತದ ಮಾತು. ಇಂಥ ಅಪಘಾತಗಳನ್ನು ತಡೆಗಟ್ಟಲು ಜಾಗ್ವಾರ್’ ಕಾರು ತಯಾರಿಕಾ ಸಂಸ್ಥೆ ಪಾದಚಾರಿಗಳ ರಕ್ಷಣೆಗಾಗಿ ನವೀನ ತಂತ್ರಜ್ಞಾನ ಪರಿಚಯಿಸಿದೆ.
ಜಾಗ್ವಾರ್ ಲ್ಯಾಂಡ್ ರೋವರ್ ಸಂಸ್ಥೆಯ ಮೊದಲ ಎಲೆಕ್ಟ್ರಿಕ್ ವೆಹಿಕಲ್ ‘ಐ– ಪೇಸ್’ ಕಾರಿನಲ್ಲಿ ಶಬ್ದದೊಂದಿಗೆ ಎಚ್ಚರಿಕೆ ವ್ಯವಸ್ಥೆ (ಎವಿಎಎಸ್– ಆಡಿಯಬಲ್ ವೆಹಿಕಲ್ ಅಲರ್ಟ್ ಸಿಸ್ಟಮ್) ತಂತ್ರಜ್ಞಾನ ಅಳವಡಿಸಿದೆ. ಇದರಲ್ಲಿರುವ ಸೆನ್ಸರ್ (ಸಂವೇದಕ) ಕಾರು 20 ಗಂಟೆಗೆ 20 ಕಿ.ಮೀ ವೇಗದಲ್ಲಿ ಸಾಗುತ್ತಿದ್ದಾಗ, ಸ್ವಯಂಚಾಲಿತವಾಗಿ ಕಾರಿನ ಸುತ್ತ ಇರುವ ಪಾದಚಾರಿಗಳನ್ನು ಗುರುತಿಸಿ, ಅವರನ್ನು ಎಚ್ಚರಿಸಲು ಶಬ್ದ ಮಾಡುತ್ತದೆ. ಈ ಸೌಲಭ್ಯ ಅಂಧರಿಗೆ ಹೆಚ್ಚು ಉಪಯೋಗವಾಗುತ್ತದೆ. ಮಾತ್ರವಲ್ಲ, ರಸ್ತೆಯಲ್ಲಿ ಮೈಮರೆತು ಸಾಗುತ್ತಿರುವವರನ್ನು ಎಚ್ಚರಿಸಿ, ಅಪಾಯದಿಂದ ಪಾರು ಮಾಡುತ್ತದೆ.
ರಸ್ತೆ ದಾಟುವ ವೇಳೆ ಈ ಕಾರು ಹೊಮ್ಮಿಸುವ ಶಬ್ದದಿಂದ ಹತ್ತಿರದಲ್ಲಿಯೇ ವಾಹನವಿರುವುದು ಅಂಧರಿಗೆ ತಿಳಿಯಲಿದೆ. ಪಾರ್ಕಿಂಗ್ ಸ್ಥಳದಲ್ಲಿ ಕಾರು ತೆಗೆಯುವ ವೇಳೆ ಮೈಮರೆತು ಬರುವ ಪಾದಚಾರಿಗಳಿಗೂ ಈ ಶಬ್ದವೂ ತಟ್ಟಿ ಎಚ್ಚರಗೊಳ್ಳುತ್ತಾರೆ.
ಕಾರು ಗಂಟೆಗೆ 50 ಕಿ.ಮೀ ವೇಗದಲ್ಲಿ ಸಾಗುವಾಗಲೂ, ಅಡ್ಡ ಬರುವ ಸೈಕಲ್‌ಗಳು ಮತ್ತು ಇತರೆ ಕಾರುಗಳನ್ನು ಕಾರಿನ ಮುಂದಿರುವ ಕ್ಯಾಮೆರಾ ಗುರುತಿಸುತ್ತದೆ. ಅವರಿಗೂ ಇದೇ ಮಾದರಿಯ ಶಬ್ದವನ್ನು ಹೊರಹೊಮ್ಮಿಸುತ್ತದೆ. ಆಗಲೂ ಅವರು ಎಚ್ಚರಗೊಳ್ಳದೆ ಇದ್ದರೇ ಸ್ವಯಂಚಾಲಿತವಾಗಿ ಬ್ರೇಕ್ ಅಪ್ಲೈ ಆಗಿ ಕಾರು ನಿಲ್ಲುತ್ತದೆ.
ಒಟ್ಟಿನಲ್ಲಿ ಕಾರು ಪ್ರಯಾಣಿಕರ ಸುರಕ್ಷತೆಯೊಂದಿಗೆ ಪಾದಚಾರಿಗಳು ಮತ್ತು ಇತರೆ ವಾಹನ ಸವಾರರ ರಕ್ಷಣೆಗೂ ಮುಂದಾಗಿರುವುದು ಶ್ಲಾಘನೀಯ ವಿಷಯವಾಗಿದ್ದು, ಪ್ರಸ್ತುತ ಈ ವ್ಯವಸ್ಥೆಯೂ ಬ್ರಿಟನ್‌ನಲ್ಲಿ ಓಡಿಸುವ ಕಾರುಗಳಲ್ಲಿ ಲಭ್ಯವಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.